ಸುದ್ದಿ ಸ್ವಾರಸ್ಯ | ಚೆಸ್ ರಾಜಧಾನಿ ಚೆನ್ನೈನಲ್ಲಿ ಇದೀಗ ಈ 'ತಂಬಿ'ಯದೇ ಸುದ್ದಿ

ChessOlympiard

'ಚೆಸ್ ರಾಜಧಾನಿ' ಎಂದು ಕರೆಸಿಕೊಳ್ಳುವ ನಗರಕ್ಕೇ ಚೆಸ್ ಪಂದ್ಯಾವಳಿಯ ಆತಿಥ್ಯ ಸಿಕ್ಕರೆ ಸಂಭ್ರಮ ಹೇಗಿರುತ್ತದೆ ಅನ್ನುವುದಕ್ಕೆ ಚೆನ್ನೈ ನಗರ ತಾಜಾ ಸಾಕ್ಷಿ. ಕೆಲವು ದಿನಗಳ ಹಿಂದಷ್ಟೇ, ಇಡೀ ನೇಪಿಯರ್ ಸೇತುವೆಯನ್ನು ಚೆಸ್ ಅಂಗಳವಾಗಿ ಮಾರ್ಪಾಡು ಮಾಡಲಾಗಿತ್ತು. ನಂತರ ಪಂದ್ಯಾವಳಿಯುದ್ದಕ್ಕೂ ಅತಿ ಹೆಚ್ಚು ಸದ್ದು ಮಾಡುತ್ತಿರುವುದು, ಬಿಳಿ ಅಂಗಿ ಮತ್ತು ಪಂಚೆ ತೊಟ್ಟು ಚೆನ್ನೈಗೆ ಬರುವವರನ್ನು ಸ್ವಾಗತಿಸುತ್ತಿರುವ ಕಂದು ಬಣ್ಣದ ಕುದುರೆ!

ತಮಿಳುನಾಡಿನ ಮಾಮಲ್ಲಪುರಂನಲ್ಲಿ 44ನೇ ಅಂತಾರಾಷ್ಟ್ರೀಯ ಚೆಸ್ ಪಂದ್ಯಾವಳಿ ನಡೆಯುತ್ತಿದ್ದು, ಇನ್ನೆರಡು ದಿನದಲ್ಲಿ (ಆಗಸ್ಟ್ 10) ಮುಕ್ತಾಯವಾಗಲಿದೆ. ಆದರೆ, ಈ ಪಂದ್ಯಾವಳಿಯ ಉದ್ದಕ್ಕೂ ಆಕರ್ಷಣೆಯ ಕೇಂದ್ರಬಿಂದು ಎನಿಸಿದ್ದು 'ತಂಬಿ.' ಪಂದ್ಯಾವಳಿಗಾಗಿ ಆಗಮಿಸುವ ಆಟಗಾರರ ಜೊತೆಗೆ, ಚೆನ್ನೈಗೆ ಬಂದಿಳಿಯುವ ಪ್ರವಾಸಿಗರನ್ನು ಸ್ವಾಗತಿಸಲು ಚೆನ್ನೈ ನಗರದ ಪ್ರಮುಖ ಸ್ಥಳಗಳಲ್ಲಿ 'ತಂಬಿ'ಯನ್ನು ಕೂರಿಸಲಾಗಿದೆ.

ನಗರಾದ್ಯಂತ ಪ್ರಮುಖ ಸ್ಥಳಗಳಲ್ಲಿರುವ ʼತಂಬಿʼಯ ದೈತ್ಯಾಕಾರದ ಪ್ರತಿಮೆಗಳು ಬರೋಬ್ಬರಿ 10.5 ಅಡಿ ಎತ್ತರ ಇವೆ. ಈ ತಂಬಿ ಜೊತೆಗೆ ಚೆನ್‌ನ ಕಾಯಿಗಳ ಆಕೃತಿಗಳನ್ನು ನಿರ್ಮಿಸಲಾಗಿದ್ದು, ಅವುಗಳ ಎತ್ತರ 15 ಅಡಿ. ರಾಜ, ರಾಣಿ ಹಾಗೂ ಕಾಲಾಳುಗಳ ಪ್ರತಿಮೆಗಳು ಸಹ ನಗರದಲ್ಲಿ ಚೆನ್ನೈನಲ್ಲಿ ರಾರಾಜಿಸುತ್ತಿವೆ. ಆದರೆ, ಇದುವರೆಗೆ ಎಲ್ಲಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಮಾತ್ರ 'ತಂಬಿ'ಯೇ.

ಈ ಸುದ್ದಿ ಓದಿದ್ದೀರಾ?: ಸುದ್ದಿ ಸ್ವಾರಸ್ಯ | ಎಮ್ಮೆಗಿಂತ ಕಡಿಮೆ ಬೆಲೆಯಲ್ಲಿ ಸಿಂಹವನ್ನು ಕೊಳ್ಳಬಹುದು!

ʼಸಿರ್ಪಂʼ ಎಂಬ ಕಂಪನಿಯು ಈ ಪ್ರತಿಮೆಗಳನ್ನು ತಯಾರಿಸಿದೆ. ಈ ಕಂಪನಿಯ ಮಾಲೀಕರು ವಿ ತ್ಯಾಗರಾಜನ್‌. ಇವರು ಈ ಹಿಂದೆಯೂ ತಮಿಳುನಾಡು ಸರ್ಕಾರಕ್ಕಾಗಿ ಹೀಗೆ ಸೃಜನಾತ್ಮಕ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು, ಪುರಸ್ಕಾರಕ್ಕೂ ಪಾತ್ರರಾಗಿದ್ದರು. ಈ ಬಾರಿ ತಯಾರಿಸಿರುವ ʼತಂಬಿʼ ಸಹ ಸರ್ಕಾರ ಮತ್ತು ಜನರ ಮನಸ್ಸನ್ನು ಗೆದ್ದಿದೆ.

ʼತಂಬಿʼ ಪ್ರತಿಮೆಗಳನ್ನು ನಿರ್ಮಿಸಲು ಕಲಾವಿದರಿಗೆ ಕೇವಲ 15 ದಿನಗಳ ಗಡವು ನೀಡಲಾಗಿತ್ತು. ಸುಮಾರು 60 ಮಂದಿ ಕಲಾವಿದರು ಪ್ರತಿಮೆಗಳನ್ನು ನಿರ್ಮಾಣ ಮಾಡುಲು ಶ್ರಮಿಸಿದ್ದಾರೆ. ಮೊದಲು ಕಬ್ಬಿಣದ ತುಂಡುಗಳನ್ನು ಬೆಸೆದು ಕುದುರೆಯ ದೇಹರಚನೆ ಮಾಡಲಾಗಿತ್ತು. ನಂತರ ಪೈಪ್‌ನಂತಹ ವಸ್ತುಗಳು, ಫೈಬರ್ ಡೈ, ತೆಂಗಿನ ನಾರು, ಸೆಣಬಿನ ಹಗ್ಗವನ್ನು ಬಳಸಿ ತಂಬಿಯ ದೇಹ ರಚನೆ ಮಾಡಲಾಗಿದೆ.

'ತಂಬಿʼ ಕಲಾಕೃತಿಗಳನ್ನು ಮೂರು ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕೆಲವು ಕೈ ಮುಗಿದು ನಿಂತಿವೆ, ಕೆಲವು ಕೈ ಕಟ್ಟಿ ನಿಂತ ರೀತಿಯಲ್ಲಿದ್ದರೆ, ಮೂರನೆಯ ಬಗೆ - ತಂಬಿಯ ಕುಟುಂಬದ ಪ್ರತಿಮೆಗಳು. ಒಟ್ಟು 28 ತಂಬಿ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಮರೀನಾ ಬೀಚ್‌, ರಿಪ್ಪನ್‌ ಕಟ್ಟಡ ಸೇರಿದಂತೆ ಚೆನ್ನೈನ ಪ್ರಮುಖ ಸ್ಥಳಗಳಲ್ಲಿ ಈ ಆಕೃತಿಗಳನ್ನು ಇಡಲಾಗಿದೆ.

ಅತ್ತ ಮಾಮಲ್ಲಪುರಂನಲ್ಲಿ ಆಟಗಾರರು ತಲೆ ಕೆಡಿಸಿಕೊಂಡು ಚೆಸ್ ಆಡುತ್ತಿದ್ದರೆ, ಇತ್ತ ಚೆನ್ನೈನಲ್ಲಿ 'ತಂಬಿ' ತನ್ನ ಪಾಡಿಗೆ ತಾನು ನಗುತ್ತ ಭರ್ಜರಿ ಪ್ರೀತಿ ಗಳಿಸಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್