ಬದುಕು | ಬೆಟ್ಟ ಹತ್ತಕ್ ಆಗಿಲ್ಲಾಂದ್ರು ಪರ್ವಾಗಿಲ್ಲ, ಅಟ್ಟ ಹತ್ತುತೀವಿ ಅನ್ನೋ ಧೈರ್ಯ ಐತೆ

Shashirekha Tiptur 2

ಕೊರೊನಾ ಬರೋಕು ಮುಂಚೆ ಲೈಫ್ ಚೆನ್ನಾಗಿತ್ತು ತುಂಬಾ. ಗೌರ್ಮೆಂಟ್ ಸಂಬಳಕ್ಕಿನಾ ಜಾಸ್ತಿನೇ ಇತ್ತು ದುಡ್ಮೆ. ಕೊರೊನಾ ಬಂದ್ಮೇಲೆ ತುಂಬಾ ಏಟು ಬಿತ್ತು - ಬದುಕಿರ್ಲೇಬಾರ್ದು ಅನ್ಸೋವಷ್ಟು. ಅದೇ ಟೈಮ್ನಲ್ಲಿ ನಾನೊಂದು ಮನೇನೂ ತಗೊಂಡ್ಬಿಟ್ಟಿದ್ದೆ. ಹೆಂಗಾಯ್ತು ಪರಿಸ್ಥಿತಿ ಅಂದ್ರೆ... ಊಟಕ್ಕೂ ಕಷ್ಟ ಆಗೋಯ್ತು. ಮನೆ ಮಾರೋಕಾಗಲ್ಲ, ಈ ಕಡೆ ಕೆಲ್ಸಾನೂ ಇಲ್ಲ!

ನನ್ ಹೆಸ್ರು ಶಶಿರೇಖಾ. ಹುಟ್ಟಿದ್ದು ಬೆಂಗಳೂರು. ಓದಿದ್ದು ಎಸಲ್ಸಿ ಅಷ್ಟೇ. ಮುಂದುಕ್ಕೆ ಓದಿಸೋಕೆ ಮನೆ ಪರಿಸ್ಥಿತಿ ಚನ್ನಾಗಿರ್ಲಿಲ್ಲ. ಒಂದ್ ಐದ್ ವರ್ಷ ಕೆಲ್ಸಕ್ ಹೋದೆ. ಆಮೇಲೆ ಮದ್ವೆ ಮಾಡಿದ್ರು. ಅಮ್ಮನ ತೌರುಮನೆಗೇ ಕೊಟ್ರು - ತಿಪ್ಟೂರಿಗೆ. ಬಂದು ಹದಿನೈದ್ ವರ್ಷ ಆಯ್ತು.

Eedina App

ನಾ ಬಂದ ಏರಿಯಾ ಪೂರಾ ಮಗ್ಗ. ಅಣ್ಣಪುರ, ಹಳೇಪಾಳ್ಯ ಇಲ್ಲೆಲ್ಲ ಸುಮಾರು ಮೂರ್ ಸಾವಿರದ ಮೇಲೆ ಮಗ್ಗಗಳಿವೆ. ಶೈಲಿ ಬೇರ್ ಬೇರೆ - ರೇಷ್ಮೆ ಸೀರೆ, ಕಾಟನ್ ಸೀರೆ ಹಿಂಗೆ. ನಾವು ನೇಯೋದು ರೇಷ್ಮೆ ಸೀರೆ. ಎಲ್ಲ ಇಲ್ಲಿಗ್ ಬಂದ್ಮೇಲೆ ಕಲ್ತಿದ್ದು.

ಬೆಂಗಳೂರಲ್ಲಿ ನಾನು 20 ವರ್ಷ ಇದ್ದೆ. ಮನೇಲಿ ಕಷ್ಟದ ಪರಿಸ್ಥಿತಿ. ಅಮ್ಮಾ ಒಬ್ರೇ ದುಡೀಬೇಕಿತ್ತು. ಅಪ್ಪಂಗೆ ಆಕ್ಸಿಡೆಂಟ್ ಆಗಿ ತಲೆಗೆ ಏಟು ಬಿದ್ದಿತ್ತು. ಎಲ್ಲೂ ಹೋಗಿ ಕೆಲಸ ಮಾಡೋ ಸ್ಥಿತೀಲಿ ಇರ್ಲಿಲ್ಲ. ಅಪ್ಪನನ್ನೂ ಸೇರ್ಸಿ ಅಮ್ಮನಿಗೆ ನಾಲಕ್ಕು ಮಕ್ಕಳ ಲೆಕ್ಕ. ಆ ಕಷ್ಟದ ಪರಿಸ್ಥಿತೀಲಿ ಎಸಲ್ಸಿ ಓದ್ಸಿದ್ದೇ ಹೆಚ್ಚು ನಮ್ಮಮ್ಮ. ಅದೇ ಗ್ರೇಟು.

AV Eye Hospital ad

ಈ ಲೇಖನ ಓದಿದ್ದೀರಾ?: ಬದುಕು | ಬೀಡಿ-ಬೆಂಕಿ ಪಟ್ಣ ಮಾರದು, ಹೊಡ್ದಾಡದು, ಮತ್ ಒಂದ್ ತಿಂಗ್ಳಿಗೆ ವೈನಾಗದು... ಇದೇ ಕೆಲ್ಸ ನಂದು!

ಏನೋ ಪಾಸ್ ಆದ್ರೆ ಸಾಕು ಅಂದ್ಕಂಡು ಪಾಸ್ ಆಗಿದ್ದು. ಆಮೇಲೆ, ಕಷ್ಟಕ್ಕೆ ಕೆಲ್ಸಾನೇ ದಾರಿ ಅಂದ್ಬಿಟ್ಟು, ನಮ್ಮ ಅಣ್ಣಾನೂ ಕೆಲ್ಸಕ್ ಹೋದ್ರು. ನಾನೂ ಕೆಲ್ಸಕ್ ಹೋದೆ. ನನ್ನ ತಂಗೀನಾದ್ರೂ ಓದ್ಸಣ ಅಂದ್ಕೊಂಡ್ವಿ. ಆದ್ರೆ ಅವ್ರೂ ಓದ್ಲಿಲ್ಲ. ಕೆಲಸಕ್ಕ ಹೋದ್ರು. ಅಂದ್ರೆ, ಪರಿಸ್ಥಿತಿ ಹಂಗಿತ್ತು.

ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಎಂ.ಜಿ ಕಲೆಕ್ಷನ್ಸ್ ಅಂತ ಮನೆ ಹತ್ರಾನೇ ಇತ್ತು, ಗಿಫ್ಟ್ ಸೆಂಟರ್. ಫ್ಲವರ್ ವಾಸಿಂದಾ ಹಿಡ್ದು ಫೋಟೊ ಫ್ರೇಮ್ವರೆಗೂ ತಯಾರಾಗ್ತಿತ್ತು. ನಾವು ಐದ್ ವರ್ಷ ಅಲ್ಲೇ ಕೆಲ್ಸ ಮಾಡಿದ್ದು. ಹೆಚ್ಚು ಓದಿಲ್ದೇ ಇರೋ ಕಾರಣಕ್ಕೆ ಅಮ್ಮ ನಮಗೆ ದುಡಿದು ತಿನ್ನೋಕಷ್ಟೆ ಹೇಳಿಕೊಟ್ರು. ಬೇರೆ ದಾರಿ ಗೊತ್ತಿಲ್ಲ ನಮ್ಗೂನು.

ಇಲ್ಲಿಗ್ ಬಂದ್ಮೇಲೆ ನಮ್ಮದು ಜಾಯಿಂಟ್ ಫ್ಯಾಮಿಲಿ ಇತ್ತು. ದುಡ್ಡು-ಕಾಸಿಗೆಲ್ಲ ಅಜ್ಜೀನೇ ಕೇಳ್ಬೇಕಿತ್ತು. ಯಜಮಾನ್ರಿಗೆ ಕೊಡ್ತಾನೇ ಇರ್ಲಿಲ್ಲಲ. ನಾನು ಬೆಂಗಳೂರಲ್ಲಿ ಬೆಳ್ದಿರೋದ್ರಿಂದ ಸುಮ್ಮನೆ ಕೂತ್ಕೊಳ್ಳಕ್ ಆಗ್ತಾ ಇರ್ಲಿಲ್ಲ. ಮನೇಲೆ ಏನಾದ್ರು ಕೆಲ್ಸ ಮಾಡಣ ಅಂತ ಅಂದ್ಕೊಂಡೆ. ಇದ್ದಿದ್ದು ಮಗ್ಗ ಮಾತ್ರ. ಆವಾಗ ಮಗ್ಗ ಇಂಟ್ರೆಸ್ಟ್ ಇರ್ಲಿಲ್ಲ - ಆ ಸೌಂಡ್‌ಗೆಲ್ಲ ಯಾರಪ್ಪ ಹೋಗೋದು ಅಂತ!

Shashirekha Tiptur 1

ಅಳ್ಳೆ ಬತ್ತಿ ಹೊಸೇಯೋರ್ ಸಿಕ್ಕಿದ್ರು ಕೂಲಿ ಕೊಡೋಕೆ. ನಾವ್ ಮೂರ್ ಜನ ಸೊಸೇರ್ ಇದ್ವಲ್ಲ, ಬತ್ತಿ ಹೊಸೆಯೋ ಕೆಲ್ಸ ಮಾಡಿದ್ವಿ. ಆಮೇಲೆ, ಏನಾದ್ರೂ ಕಲಿಬೇಕು ಅಂತ ಕಂಪ್ಯೂಟರ್ ಬೇಸಿಕ್ಸ್ ತಗಂಡೆ. ಸೆಕೆಂಡ್ ಪಿಯುಸಿ ಕಟ್ಟಿ ಪಾಸ್ ಮಾಡ್ಕೊಂಡೆ - ಸ್ಕೂಲ್ ಬಿಟ್ಟು ಹದಿನೈದ್ ವರ್ಷ ಆದ್ಮೇಲೆ! ಆಮೇಲೆ ಫೋಟೊ ಸ್ಟುಡಿಯೋದಲ್ ಕೆಲ್ಸ ಮಾಡ್ದೆ ಒಂದ್ ಮೂರ್ ವರ್ಷ.

ಆಮೇಲೆ ಮಗ್ಗದಲ್ಲಿ ರೇಷ್ಮಾ ಬಾರ್ಡರ್ ಕೆಲ್ಸ ಶುರು ಮಾಡ್ಕೊಂಡೆ. ದುಡ್ಮೆ ಸಾಕಾಗ್ತಿಲ್ಲ ಅನ್ಸಿ, ಯಜಮಾನ್ರ ಜೊತೆ ಮಗ್ಗ ಕಲ್ತ್‌ಕೊಂಡೆ. ಒಂದೇ ತಿಂಗ್ಳಲ್ಲಿ, ನಾವೇ ಬಂಡವಾಳ ಹಾಕಿ ಇನ್ನೊಂದು ಮಗ್ಗ ಹಾಕ್ಕೊಂಡ್ವಿ. ನಮ್ಮ ಅಣ್ಣಾನೇ ಬಂಡವಾಳ ಹಾಕಿದ ಅದಕ್ಕೆ. ಒಂದು ಸೀರೆಗೆ ನಮಗೆ 600-650 ರೂಪಾಯಿ ಕೊಡ್ತಾರೆ. ಅದೂ ಡಿಸೈನ್ ಮೇಲೆ ಹೋಗುತ್ತೆ. ನಾನು ಡೈಲಿ ಒಂದು ಸೀರೆ ನೇಯ್ತಿನಿ.

ಈ ಲೇಖನ ಓದಿದ್ದೀರಾ?: ಬದುಕು | ಬಂಬು ನಂಬ್ಕಂಡಿರನು ನಾನು... ಬಂಬು ಬಿಟ್ರೆ ನಾನಿರಲ್ಲ, ನನ್ನನ್ ಬಿಟ್ಟು ಬಂಬಿರಲ್ಲ

ಕೊರೊನಾ ಬರೋಕು ಮುಂಚೆ ಲೈಫ್ ಚೆನ್ನಾಗಿತ್ತು ತುಂಬಾ. ಮೂರ್ ವರ್ಷ ಮಗ್ಗಾನೇ ಮಾಡ್ಕೊಂಡ ಮೇಲೆ ಗೌರ್ಮೆಂಟ್ ಸಂಬಳಕ್ಕಿನಾ ಜಾಸ್ತಿನೇ ಬರ್ತಿತ್ತು ನಮಗೆ. ಕೊರೊನಾ ಬಂದ್ಮೇಲೆ ತುಂಬಾ ಏಟು ಬಿತ್ತು - ಬದುಕಿರ್ಲೇಬಾರ್ದು ಅನ್ಸೋವಷ್ಟು! ಅದೇ ಟೈಮ್ನಲ್ಲಿ ನಾನೊಂದು ಮನೇನೂ ತಗೊಂಡ್ಬಿಟ್ಟಿದ್ದೆ. ಹೆಂಗಾಯ್ತು ಪರಿಸ್ಥಿತಿ ಅಂದ್ರೆ, ಊಟಕ್ಕೂ ಕಷ್ಟ ಆಗೋಯ್ತು. ಮನೆ ಮಾರೋಕಾಗಲ್ಲ, ಈ ಕಡೆ ಕೆಲ್ಸಾನೂ ಇಲ್ಲ!

ಧೈರ್ಯ ಮಾಡಿ, ಟೈಲರಿಂಗ್ ಕ್ಲಾಸ್ ತಗಂಡೆ. ಅದರಲ್ಲೇ ಫ್ಯಾಷನ್ ಮೇಕಿಂಗೂ ಆಯ್ತು. ಆಮೇಲೆ ಹೆಂಗೊ ಸ್ವಲ್ಪ-ಸ್ವಲ್ಪ ಮಗ್ಗಾನೂ ಶುರು ಆಯ್ತು. ಜೊತೀಗ್ ಇವಾಗ ಮೇಕಪ್ ಆರ್ಟಿಸ್ಟ್ ಕೋರ್ಸ್ನೂ ತಗಂಡಿದಿನಿ, ಇನ್ನೇನು ಅದೂನೂ ಮುಗೀತು. ಭಂಡ ಧೈರ್ಯ ಮಾಡಿ, ಲೋನ್ ತಗೊಂಡು ಬ್ಯೂಟಿಷನ್ ಕೋರ್ಸ್ ಮಾಡ್ತಿರೋದು.

ನಾ ಕಲಿತ ಕೋರ್ಸಿಂದ ಅನ್ನ ಸಿಕ್ತಿಲ್ವಾ... ಬೇಡ; ಸ್ವಂತ ಮಗ್ಗ ಇದೆ ಎರಡು. ಸಾಕು ನಮ್ಮ ಜೀವನಕ್ಕೆ. ಬೆಟ್ಟ ಹತ್ತಕ್ ಆಗಿಲ್ಲಾಂದ್ರು ಪರ್ವಾಗಿಲ್ಲ, ಅಟ್ಟ ಹತ್ತುತೀವಿ ಅನ್ನೋ ಧೈರ್ಯ ಐತೆ. ಆ ಭಾವನೆಯಲ್ಲೇ ಬದುಕ್ತೀನಿ.

ನಿಮಗೆ ಏನು ಅನ್ನಿಸ್ತು?
10 ವೋಟ್
eedina app