ಬದುಕು | ಬಟ್ಟೆ ಅಂಗ್ಡಿ ಕಸ ಹೊಡದ್ರೆ ಹೆಣ್‌ ಕೊಡಲ್ಲ ಅಂತಾನೇಯ ಕೆಲ್ಸ ಬಿಟ್ಟೆ

1997ರಲ್ಲಿ ಮರೆಬ್ಬಿಹಾಳ್ ಎಂಬಳ್ಳಿಗೆ ಹೋಗಿ ಜಿನ್ನು ಕೊಂಡ್ಕೊಂಡು ತಂದೆ. ಕೊಟ್ಟೂರು ಅಷ್ಟೇ ಅಲ್ದೆ, ಕೋಡಿಹಳ್ಳಿ, ಚಪ್ಪರದಹಳ್ಳಿ, ಮರೂರು... ಹೀಗೆ, ಸುತ್ತ ಹತ್ತೂರಲ್ಲಿ ಸುಮಾರು ವರುಸ ಹಗ್ಲು-ರಾತ್ರಿ ಎನ್ನದೆ, ಆಸಿಗ್ಗೂ ಬ್ಯಾಸಿಗ್ಗೂ, ರೋಸಿಗೆ, ನಿದ್ದೆ ನೀರೆಡಿಕೆ ಎಂದಂಗೆ ಉಂಬ ಜೋಳ, ಮೆಕ್ಕೆಜೋಳ ಹೊಡೆದಿದ್ದೇ ಹೊಡೆದಿದ್ದು - ಹಣ ಬಾಚಿದ್ದೇ ಬಾಚಿದ್ದು. ಒಳ್ಳೆ ದುಡ್ಮೆ ಕಾಲ ಆಗ

ನನ್ನೂರು ವಿಜಯನಗರ ಜಿಲ್ಲೆಯ ಕೊಟ್ಟೂರು. ಹೆಸರು ಗೌಡ್ರು ಸುರೇಶ್. ಊರಲ್ಲಿ ಜಿನ್ನು ಸುರೇಶ್ ಅಂತಾಲೇ ಫೇಮಸ್ಸು. ನನ್ ಹೆಸರ್ನೊಟ್ಟಿಗೆ ಜಿನ್ನು ಅಂಟಿದ್ದು ನಾ ಜಿನ್ನು ಹಾಕೋ ಕಾಯಕ ಶುರು ಹಚ್ಚಿಕೊಂಡ ಮ್ಯಾಲೆ. ನನ್‌ಗೆ ವಿದ್ಯೆ ಹತ್ತಲಿಲ್ಲ. ಶಾಲೆಯ ದಡ್ಡ ಶಿಖಾಮಣಿಗಳಲ್ಲಿ ನಾನೂ ಒಬ್ಬವ. ಬೋರ್‍ಡ್‌ಗೆ ಬರೀ ತೊಂಡಿ ತಪ್ಲು, ಶಾಲೆಗೆ ಬರ್ತಿದ್ದ ಬಿಸ್ಕತ್ ಪಾಕೀಟ್ ಹೊತ್ತು ತರೋದು ಮಾಡಿದ್ರೆ ವಿದ್ಯೆ ಎಲ್ಲಿಂದ ಬರ್ಬೇಕು? ಮನೆಗ್ಯಾ ಉಂಬಕ್ಕೆ ಸರಿಯಾಗಿ ಕೂಳು ಇರ್ರಲಿಲ್ಲ. ಶಾಲೆಗ್ಯಾ ಕೊಡ್ತಿದ್ದ ಬಿಸ್ಕತ್ತೇ ಉಪ್ಪು-ಖಾರ ಆಗೆಲ್ಲ.

Eedina App

ಒಮ್ಮೇಟಿಗೆ ಏಳ್ನೆ ತರ್ಗತಿ ಎಕ್ಸಾಮ್ ಬರ್ರದೆ. ಅದ್ಹೇಗೆ ಪಾಸ್ ಆದ್ರಿ ಅಂತಾ ಮಾತ್ರ ಕೇಳ್ಬೇಡಿ. ಹತ್ತನೆ ತರ್ಗತಿ ಪಾಸ್ ಆಗ್ಬೇಕೆಂದು ಮನೆಯವ್ರು ಹನ್ಸಿಗೆ (ಗ್ರಾಮ) ಸೇರ್ಸಿದ್ದು. ಅಲ್ಲಿ ಪರಿಚಯಸ್ಥವನೊಬ್ಬ ಪಾಸ್ ಮಾಡ್ಸಿಕೊಂಡು ಬರ್ತೀನಿ ಅಂತಾ ಐದು ಸಾವ್ರ ಕೇಳಿದಾ. ಏನೋ ಆಸೆ. ಅಂತಾ ಕಷ್ಟ  ಕಾಲ್ದಾಗ ಅವ್ರಿವ್ರ ಕೈ-ಕಾಲು ಹಿಡಿದು, ಸಾಲ-ಶೂಲ ಮಾಡಿ ಕೊಟ್ವಿ. ಅವ ಆವಗೀವಾಗ, ಇಂದು-ನಾಳೆ ಅಂತಾ ದಿನ ದಬ್ಬಿ-ದಬ್ಬಿ, ಕೊನ್ಗೆ ಕೆಲ್ಸ ಆಗ್ಲಿಲ್ಲ ಎಂದು ಎರಡು ಸಾವ್ರ ಗುಳುಂ ಮಾಡಿ ಮೂರು ಸಾವ್ರ ಕೊಟ್ಟು ಕಾಲ್ಕಿತ್ತ. ಶಾಲೆ ನನ್‌ಗೆ ಗಿಟ್ ಪಟ್ ಆಗವಲ್ದು ಅಂತಾ ಬಟ್ಟೆ ಅಂಗ್ಡಿ ಸೇರಿದೆ.

ನಮ್ಮೂರಿನ ಕರ್ನಾಟಕ ಟೆಕ್ಸ್‌ಟೈಲ್ಸ್ ಜೈನ್ರದ್ದು. ಹತ್ತನ್ನೆರೆಡು ವರುಸ ದುಡಿದೆ. ಮೊದ್ಲಿಗೆ ಸೇರದ್ಯಾಗ ತಿಂಗ್ಳಿಗೆ ಬರೀ 50 ರೂಪಯಿ ಸಂಬ್ಳ! ಈಗ್ಗೆ 20 ವರುಸ್ದ ಕೆಳಗಷ್ಟೆ. ಈಗ ನಮ್ ಹೊಲದ ಕೆಲಸಕ್ಕೆ ಬಂದವ್ನಿಗೆ 50 ರುಪಯಿ, ಚಾ, ವಿಮಲ್ ಕರ್ಚಿಗೆ ಕೊಡ್ತೀನಿ - ಕೂಲಿ ಬಿಟ್ಟು. ಅದಿರಲಿ, ಬಟ್ಟೆ ಅಂಗ್ಡಿ ಕೆಲ್ಸ ಯಾಕೆ ಬಿಟ್ಟೆ ಅಂದ್ರೆ, ಬಟ್ಟೆ ಅಂಗ್ಡಿ ಕಸ ಹೊಡದ್ರೆ ಹೆಣ್ಣು ಕೊಡಲ್ಲ ಅಂತಾನೇಯ. ಆಗ ಸ್ವಂತಕ್ಕೆ ಏನಾದ್ರೂ ಮಾಡ್ಬೇಕು ಅಂತಾ ತಲೆಗೆ ಬಂತು. ಕಣ್ಣಿಗೆ ಬಿದ್ದಿದ್ದು ಈ ಮೆಕ್ಕೆಜ್ವಾಳ ಹೊಡೆವ ಮಿಷನ್ (ಒಕ್ಕಣೆ ಯಂತ್ರ).

AV Eye Hospital ad

ಈ ಲೇಖನ ಓದಿದ್ದೀರಾ?: ಬದುಕು | ಬೆಟ್ಟ ಹತ್ತಕ್ ಆಗಿಲ್ಲಾಂದ್ರು ಪರ್ವಾಗಿಲ್ಲ, ಅಟ್ಟ ಹತ್ತುತೀವಿ ಅನ್ನೋ ಧೈರ್ಯ ಐತೆ

ದುಡಿವ ಛಲವಿತ್ತು. 1997ರಲ್ಲಿ ಮರೆಬ್ಬಿಹಾಳ್ ಎಂಬಳ್ಳಿಗೆ ಹೋಗಿ ಜಿನ್ನು ಕೊಂಡ್ಕೊಂಡು ತಂದೆ.  ಕೊಟ್ಟೂರು ಅಷ್ಟೇ ಅಲ್ದೆ, ಕೋಡಿಹಳ್ಳಿ, ಚಪ್ಪರದಹಳ್ಳಿ, ಮರೂರು... ಹೀಗೆ, ಸುತ್ತ ಹತ್ತೂರಲ್ಲಿ ಸುಮಾರು ವರುಸ ಹಗ್ಲು-ರಾತ್ರಿ ಎನ್ನದೆ, ಆಸಿಗ್ಗೂ ಬ್ಯಾಸಿಗ್ಗೂ, ರೋಸಿಗೆ, ನಿದ್ದೆ ನೀರೆಡಿಕೆ ಎಂದಂಗೆ ಉಂಬ ಜೋಳ, ಮೆಕ್ಕೆಜೋಳ ಹೊಡೆದಿದ್ದೇ ಹೊಡೆದಿದ್ದು - ಹಣ ಬಾಚಿದ್ದೇ ಬಾಚಿದ್ದು. ಒಳ್ಳೆ ದುಡ್ಮೆ ಕಾಲ ಆಗ.

ಊರಲ್ಲಿ ನನ್ನದೊಬ್ಬಂದೇ ಜಿನ್ನು ಬೇರೆ. ಆದ್ರೆ ಜ್ವಾಳದ ಸುಂಕು ಮೈಗೆ ಮೆತ್ತಿ ತಿಂಡಿ ಬರ್ತಿತ್ತು. ಮೈಯನ್ನಾ ಪರಪರ ಅಂತಾ ಕೆರಿತಿದ್ದೆ. ಕಣ್ಣು, ಮೂಗಿನ ಒಳ್ಳೆ ತುಂಬಾ ಧೂಳು. ಹೊಲಸು ಬದುಕು. ಈಗ ಅಭ್ಯಾಸ ಆಗಿ, ದಟ್ ಬಿದ್ದೈತಿ. ಮೊದ್ಲು ಸಣ್ಣ್ ಇಂಜಿನ್‌ಗೆ ಒಂದು ಪುಟ್ಟಿ ಪೂರ್ತಿ ತೆನೆ ಒಮ್ಮೇಲೆ ಸುರುಬಿಟ್ರೆ ಮಿಷನ್ ಆಫ್ ಆಗ್ತಿತ್ತು. ಯಮ ಹಿಂಸೆ ಆಗ. ತುಂಬಾ ರೋಸಿಗೆ. ರಾತ್ರಿಯೆಲ್ಲಾ ಮುಲುಕ್ತಾ ಮಲ್ಗೋದು, ಬೆಳಗ್ಗೆ ಎದ್ದು ಸ್ನಾನ ಮಾಡಿ ಡಿಸೇಲ್ ಕ್ಯಾನ್ ಹಿಡಿದ್ಕೊಂಡು ಮತ್ತೆ ಜಿನ್ನು ಹಾಕಲಿಕ್ಕೆ ಓಡೋದು. ಹಸಿವು, ರೊಕ್ಕದ ಅರಕ್ಲಿ ಆಂಗೆಲ್ಲ ಮಾಡ್ಸಿತ್ತಿತ್ತು.

ಮೊದ್ಲ ಐದಾರು ವರ್ಷ ಸಣ್ಣ ಜಿನ್ನು ಇತ್ತು. ನಂತರ ಮೆಕ್ಕೆಜ್ವಾಳ ಸಿಪ್ಪೆ ಸುಲ್ದು ತೆನೆ ಹಾಕುವ ಮಿಷನ್ ಬಂತು. ಅದನ್ನೂ ತಂದೂ ಕಾಮ್ಟೇಷನ್ ತಕ್ಕಂತೆ ಹೆಜ್ಜೆ ಹಾಕ್ದೆ. ಆ ಮಿಷನ್‌ನ್ನ ನರಗುಂದ ಹತ್ರ 15 ದಿನ ಕುಂತಿದ್ದು ಮಾಡ್ಸಿಕೊಂಡು ತಂದು ಫೀಲ್ಡಿಗೆ ಇಳಿದಿದ್ದು. ಈ ಮೊದ್ಲು ಜಿನ್ನಿನ ಹಿಂದೆ ಬರ್ತಿದ್ದ ಸಿಪ್ಪೆಯ ಮುಕ್ಳಗೆ ಹೇಲು ಕಿತ್ತಂಗೆ ಕೀಳ್ಬೇಕಿತ್ತು. ಮೈಮರತ್ರೆ - ಮಿಷನ್ ಆಫ್ ಆಗ್ತಿತ್ತು. ಹೆವಿ ಇಂಜಿನ್ ಬಂದ್ಮೇಲೆ ಈಗ ಆರಾಮ್ ಇದೀನಿ. ತೆನೆಯಲ್ಲ ಚಿನ್ನಾಚಿದ್ರಿ. ಕಾಳು, ರವದಿ, ಬೆಂಡು... ಹೀಗೆ ಮೂರ್ ಭಾಗ ಆಗಿ ಹೊರಗೆ ಬರ್ತೈದೆ.

ಈ ಲೇಖನ ಓದಿದ್ದೀರಾ?: ಬದುಕು | ಬಂಬು ನಂಬ್ಕಂಡಿರನು ನಾನು... ಬಂಬು ಬಿಟ್ರೆ ನಾನಿರಲ್ಲ, ನನ್ನನ್ ಬಿಟ್ಟು ಬಂಬಿರಲ್ಲ

ಗಿರಾಕಿಗಳತ್ತಿರ ಗೆರೆ ಕೊರೆದು ದುಡ್ಡು ವಸ್ಲಿ ಮಾಡಲ್ಲ. ಅಳತೆ ಇಲ್ಲ, ಪ್ರಮಾಣವೂ ಇಲ್ಲ. ಅದಕ್ಕೆ ಜನ ನನ್ನ ಮೇಲೆ ಬಿದ್ದು ಸಾಯ್ತಾರೆ. ನನ್ನ ಭಾಗಕ್ಕೆ ಬಂದ ನಾಲ್ಕೆಕ್ಕರೆ ಅಡವಿ ಹೊಲದ ಜೊತೆಗೆ ಹದ್ನಾರು ಎಕರೆ ಅಣಗುತ್ತಿಗೆ ಮಾಡ್ತಿದಿನಿ. ಅವರಿಗೂ ಅಷ್ಟೇ; ನಾ ಕೊಟ್ಟಷ್ಟು, ಅವರು ಇಸಿದ್ಕೊಂಡಷ್ಟು... ನಮ್ಮ ಮೇಲೆ ಪ್ರೀತಿ, ಅಭಿಮಾನ ಅವರಿಗೆಲ್ಲ. ರೈತ್ರು ಸಹ ಅಷ್ಟೇ. ನನ್ನ ಹೊಲ್ದ ಕೆಲಸವ ಎಷ್ಟೋ ಸಲ ಫ್ರೀ ಮಾಡಿಕೊಟ್ವಾರೆ. ನಮಗೆ ಅವ್ರು, ಅವ್ರಿಗ್ ನಾವು... ಇಷ್ಟೇ, ಅಡ್ಜೆಸ್ಟ್‌ಮೆಂಟ್ ಜೀವ್ನ ಇದು. ನೀವೇ ಹೇಳಿ‍, ಸತ್ತಾಗೇನಾದ್ರು ಹೊತ್ಕೊಂಡು ಹೋಗ್ತಿವಾ ಇಲ್ಲಿಂದ? ಏನೂ ಇಲ್ಲ... ಒಳ್ಳೇದು ಕೆಟ್ಟುದ್ದು ಅಷ್ಟೇ. ದುಡ್ಡಿನಿಂದಲೇ ಎಲ್ಲವನ್ನೂ ಅಳಿಯಲಿಕ್ಕೆ ಆಗುತ್ತಾ?

ನಾ ಮೂರು ವರಸಕ್ಕೊಮ್ಮೆ ಜಿನ್ನು ಬದ್ಲಿಸುವೆ. ಬಂದ ವರುಸದಲ್ಲೇ ಜಿನ್ನು ಫ್ರೀ ಆಗಿಬಿಡ್ತೈತೆ. ಅಷ್ಟೊಂದು ದುಡಿಮೈತೆ. ಸಣ್ಣ ಜಿನ್ನು ಇದ್ವಲ್ವ ಆಗ, ದಿನಕ್ಕೆ 50 ಚೀಲ ಹೊಡೆವ ಹೊತ್ತಿಗೆ ಹೆಣ ಬಿದ್ದು ಹೋಗ್ತಿತ್ತು. ಈಗೆಲ್ಲ ಬಿಡಿ ಹೆವಿ ಇಂಜಿನ್. ಮ‍ಧ್ಯಾಹ್ನಕ್ಕೆಲ್ಲ 150 ಚೀಲ ರೋಸ್ಗಿ ಇಲ್ದಂಗೆ ಹೊಡ್ದೆಕೊಂಡು ಬರ್ತೈನಿ. ಈಗ ಸಿಕ್ಕಾಪಟ್ಟೆ ಕಾಮ್ಟೇಷನ್. ಹಳ್ಳಿಗೊಂದು ಜಿನ್ ಆಗೆವೆ. ಆದರೆ, ನನ್ ಗಿರಾಕಿ ಇದ್ದೇ ಇದಾವೆ.

ಈ ಜಿನ್ನು, ಹೊಲ್ಗಳಿಂದ ನಾ ಮೇಲೆ ಎದ್ವೀನಿ. ಬೀಳಂಗಿದ್ದ ಮನೆ ಕಟ್ಸಿದೆ. ಕಣದ್ಗಳಿನ ಮನೆ ರಿಪೇರಿ ಮಾಡ್ಸಿದೆ. ಹೊಲಕ್ಕೆ ಗೊಬ್ಬರ-ಬೀಜ, ಮನೆ ಬಾಳ್ವೆಗೆ, ಮದುವೆ-ಮುಂಜಿಗೆ ಆತುಕೊಂಡೆ. ಸ್ವಲ್ಪ ವರ್ಷದಲ್ಲಿ ಓಲೆ ಬ್ಯಾರೆ ಆದ್ವು. ಈಗ ಸ್ವಂತಕ್ಕೊಂದು ಮನೆ ಕಟ್ಸಿರುವೆ‌. ಮಕ್ಕಳಿಗೆ ಓದ್ಸಿ ದೊಡ್ಡವರ ಮಾಡಿನಿ. ಈಗ ಚೆಂದ ಇದೀನಿ. ಜಿನ್, ಬೇಸಾಯದಿಂದ ಜೀವ್ನಕ್ಕೆ ಕೊರತೆಯಿಲ್ಲ. ಏನೇ ಹೇಳಿ... ಒಬ್ಬರಿಗೊಬ್ಬರ ನಡುವೆ ಅಡ್ಜೆಸ್ಟ್‌ಮೆಂಟ್ ಇದ್ದರೆ ಬಾಳು ಹೂವಿನಷ್ಟು ಅಗುರ ರ್‍ರೀ...

ನಿಮಗೆ ಏನು ಅನ್ನಿಸ್ತು?
6 ವೋಟ್
eedina app