
ಮಗನಿಗೆ ನಾಲ್ಕು ತಿಂಗಳು ತುಂಬಿದಾಗ ಕೆಟ್ಟ ಸುದ್ದಿ ಅಪ್ಪಳಿಸಿತು; ಆತ ತೀವ್ರವಾದ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದು, ಇನ್ನು ಎಂದೂ ಸ್ವತಂತ್ರವಾಗಿ ಓಡಾಡದ ಮಗುವಾಗಿರುತ್ತಾನೆ! ಇದೆಲ್ಲದಕ್ಕೂ ನಾನೇ ಕಾರಣ ಎಂದು ನನ್ನ ಗಂಡನ ಮನೆಯವರು ದೂರಿದರು. ಅಚ್ಚರಿಯೆಂದರೆ, ಅವರೆಲ್ಲರ ಮಾತಿಗೆ ಆತನದ್ದೂ ಸಮ್ಮತವಿದೆ ಎಂಬಂತೆ ನನ್ನ ಗಂಡ ಮೌನಿಯಾಗಿದ್ದ!
ನನಗೆ 29ನೇ ವಯಸ್ಸಿನಲ್ಲಿ ಮದುವೆಯಾಯಿತು. ಎರಡು ವರ್ಷದೊಳಗೆ ತಾಯಿಯಾದೆ. ಬ್ಯಾಂಕ್ನಲ್ಲಿ ಮಾಡುತ್ತಿದ್ದ ನೌಕರಿ ಬಿಟ್ಟೆ. ನನ್ನ ಕುಟುಂಬಕ್ಕೆ ನಾನು ಕೆಲಸ ಬಿಟ್ಟು ಮನೆ ನೋಡಿಕೊಳ್ಳಲಿ ಎಂಬ ಇಂಗಿತ ಇತ್ತು. ನಾನೂ ಒಪ್ಪಿದೆ. ಮುಂದಿನ ನನ್ನ ಜೀವನದ ಬಗ್ಗೆ ತುಂಬಾ ನಿರೀಕ್ಷೆಗಳಿದ್ದವು.
ನನ್ನ ಮಗ ಶಿವಾಂಶ್ ಹುಟ್ಟಿದಾಗ, ಅವನನ್ನು ನೋಡಿ ನನಗೆ ಉಕ್ಕಿದ ಪ್ರೀತಿಯ ಭಾವನೆ ಅನುಪಮವಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಮಗುವನ್ನು ಸ್ಥಳಾಂತರಿಸಲಾಯಿತು. ಅದಾದ 48 ಗಂಟೆಗಳ ನಂತರ ವೈದ್ಯರು ಹೇಳಿದ ವಿಷಯ ನನ್ನನ್ನು ಛಿದ್ರ ಮಾಡಿತು. ಮಗುವಿನ ಸೋಂಟದ ಭಾಗ ಸರಿದಿತ್ತು!
ಶಿವಾಂಶ್ ಹಾಲನ್ನು ಕುಡಿಯಲು ಅಥವಾ ಅದನ್ನು ನಂಗಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ. ನಳಿಕೆಯ ಮೂಲಕ ಹಾಲು ನೀಡಲಾಗುತ್ತಿತ್ತು. ಸುಮಾರು 50 ದಿನಗಳ ಕಾಲ ನನ್ನ ಮಗು ತೀವ್ರ ನಿಗಾ ಘಟಕದಲ್ಲಿತ್ತು. ಅವನಿಗೆ ನಾಲ್ಕು ತಿಂಗಳು ತುಂಬಿದಾಗ ಇನ್ನೂ ಕೆಟ್ಟ ಸುದ್ದಿ ಕೇಳಬೇಕಾಗಿ ಬಂತು. ಶಿವಾಂಶ್ ತೀವ್ರವಾದ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದು, ಇನ್ನು ಎಂದೂ ಸ್ವತಂತ್ರವಾಗಿ ಓಡಾಡದ ಮಗುವಾಗಿರುತ್ತಾನೆ!
ಈ ಲೇಖನ ಓದಿದ್ದೀರಾ?: ಬದುಕು | ಬೆಟ್ಟ ಹತ್ತಕ್ ಆಗಿಲ್ಲಾಂದ್ರು ಪರ್ವಾಗಿಲ್ಲ, ಅಟ್ಟ ಹತ್ತುತೀವಿ ಅನ್ನೋ ಧೈರ್ಯ ಐತೆ
ಇದೆಲ್ಲದಕ್ಕೂ ನಾನೇ ಕಾರಣ ಎಂದು ನನ್ನ ಗಂಡನ ಮನೆಯವರು ದೂರಿದರು. ಅವರೆಲ್ಲರ ಮಾತಿಗೆ ಆತನದ್ದೂ ಸಮ್ಮತವಿದೆ ಎಂಬಂತೆ ನನ್ನ ಗಂಡ ಮೌನಿಯಾಗಿದ್ದ. ನನ್ನ ಜೊತೆ ಏನೆಂದರೆ ಏನೂ ಮಾತನಾಡಲಿಲ್ಲ. ಒಂದೇ ಮನೆಯಲ್ಲಿದ್ದರೂ ನಾವಿಬ್ಬರೂ ಮಾತನಾಡದೆ ತಿಂಗಳುಗಳು ಉರುಳಿದವು. ಅವನ ಆ ಮೌನ ಸಾವಿರ ಮಾತುಗಳನ್ನಾಡುತ್ತಿತ್ತು. ಹೀಗಾಗಿ, ಒಂದು ದಿನ ನನ್ನ ಮಗು ಶಿವಾಂಶ್ನೊಂದಿಗೆ ನಾನು ಆ ಮನೆ ಬಿಟ್ಟು ನನ್ನ ತವರು ಸೇರಿದೆ.
ನನ್ನ ತವರು ನನ್ನನ್ನು ಮರಳಿ ಅಪ್ಪಿಕೊಂಡಿತು. ವಿಶೇಷ ಚೇತನ ಮಗುವಿಗೆ ನಾನು ಒಂಟಿ ತಾಯಿಯಾಗಿದ್ದೆ. ಈ ವೇಳೆ ನನ್ನ ತಂದೆ, "ಮಗಳೇ, ನಾನು ನಿನ್ನ ಜೊತೆಗಿದ್ದೇನೆ,” ಎಂದು ನನಗೆ ಧೈರ್ಯ ತುಂಬಿದರು.
ಬೆಳಗಿನ ಮೂರು ಗಂಟೆಗೆ ಮಗನನ್ನು ಎಬ್ಬಿಸುವುದರೊಂದಿಗೆ ನನ್ನ ದಿನ ಆರಂಭವಾಗುತ್ತಿತ್ತು. ಟ್ಯೂಬ್ನಿಂದ ಅವನಿಗೆ ಆಹಾರ ಕೊಡುವುದನ್ನು ನಾನು ಕಲಿಯಬೇಕಿತ್ತು. ಇದು ನನ್ನ ಕರುಳನ್ನು ಹಿಂಡುತ್ತಿತ್ತು. ಈ ವೇಳೆ ಅವನು ನಿರಂತರವಾಗಿ 10 ನಿಮಿಷಗಳ ಕಾಲ ಸೀನುತ್ತಿದ್ದ. ನಾನು ಮಗುವನ್ನು ಕಳೆದುಕೊಂಡುಬಿಟ್ಟೆ ಎನ್ನುವಷ್ಟು ಭಯವಾಗುತ್ತಿತ್ತು. ಮತ್ತೆ ಅವನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನನ್ನ ಮಗ ಹೋರಾಡಿ ಗೆದ್ದು ಬಂದ. ಅವನೊಬ್ಬ ಹೋರಾಟಗಾರ.
ಈ ಲೇಖನ ಓದಿದ್ದೀರಾ?: ಬದುಕು | ಬಟ್ಟೆ ಅಂಗ್ಡಿ ಕಸ ಹೊಡದ್ರೆ ಹೆಣ್ ಕೊಡಲ್ಲ ಅಂತಾನೇಯ ಕೆಲ್ಸ ಬಿಟ್ಟೆ
ಅವನಿಗಾಗಿ ಏನು ಮಾಡಲು ಸಾಧ್ಯವೋ ಅದನ್ನೆಲ್ಲವನ್ನೂ ಮಾಡಲು ನಾನು ಸಿದ್ಧಳಿದ್ದೆ. ಕೊನೆಗೂ ನನಗೆ ಮನೆಯಿಂದಲೇ ಕೆಲಸ ಮಾಡುವಂಥ ಒಂದು ಕೆಲಸ ಸಿಕ್ಕಿತು. ಇವಾಗ ನಾನು ಶಿವಾಂಶ್ ಜೊತೆ ಮೂರು ಗಂಟೆಗೆ ಎದ್ದು, ಅವನಿಗೆ ಊಟ, ಸ್ನಾನ ಮಾಡಿಸಿ, 10 ಗಂಟೆಯಷ್ಟರಲ್ಲಿ ಮಲಗಿಸಿದ ನಂತರ ನಾನು ಪೂರ್ತಿ ದಿನ ಕಚೇರಿ ಕೆಲಸದಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದೆ. ಕಚೇರಿಯ ಕೆಲಸ, ಬರುತ್ತಿದ್ದ ಕರೆಗಳು ಇವುಗಳ ಮಧ್ಯೆ ನನ್ನ ಮಗುವನ್ನೂ ನೋಡಿಕೊಳ್ಳುವುದು ಮಾಡುತ್ತಿದ್ದೆ. ನಮ್ಮಿಬ್ಬರಿಗಾಗಿ ನಾನು ಗಟ್ಟಿಯಾಗಿರಲು ಕಲಿಸಿದ್ದು ಅವನೇ.
ಹೌದು, ಶಿವಾಂಶ್ ಯಾವತ್ತೂ ಎದ್ದು ಓಡಾಡಲಾರ, ಮಾತಾಡಲಾರ ಅಥವಾ ಸ್ನೇಹಿತರನ್ನು ಮಾಡಿಕೊಳ್ಳಲಾರ. ಈ ಯೋಚನೆ ನನ್ನನ್ನು ಕೊಲ್ಲುತ್ತದೆ.
ನನಗಿರುವ ಏಕೈಕ ಆಸೆ ಏನೆಂದರೆ, ಒಂದು ದಿನ ಅವನು ನನ್ನನ್ನು ಅಮ್ಮ ಎಂದು ಕರೆಯುತ್ತಾನೆ ಎಂಬುದು. ಅಲ್ಲಿಯವರೆಗೆ ನಾನು ಅವನ ಇಷ್ಟದ ಶಿಶುಗೀತೆಗಳನ್ನು ಹಾಡುತ್ತಲೇ ಇರುತ್ತೇನೆ. ಈ ಹಾಡುಗಳು ಅವನ ಮುಖದಲ್ಲಿ ಸಂತಸ ಮೂಡಿಸುತ್ತವೆ. ಆ ನಗುವಿನಿಂದ ನನ್ನ ಮನಸ್ಸು ತುಂಬಿಬರುತ್ತದೆ. ನನ್ನ ಜೀವನದಲ್ಲಿ ಘಟಿಸಿದ ಒಂದು ಅದ್ಭುತ ನನ್ನ ಮಗ. ನನ್ನ ಜೀವನದ ಪ್ರತಿದಿನದ ಆಯ್ಕೆಗಳಲ್ಲಿ ನನ್ನ ಮಗ ನನ್ನ ಮೊದಲ ಆದ್ಯತೆಯಾಗಿರುತ್ತಾನೆ.