ಬದುಕು | ಸಾಯಲು ಹೊರಟವರನ್ನು ಬದುಕಿಸುವ ನನ್ನ ಸಾಹಸದ ಬಗ್ಗೆ ಹೆಂಡತಿ-ಮಕ್ಕಳಿಗೂ ಗೊತ್ತಿರಲಿಲ್ಲ

Mumbai

ಗರ್ಭಿಣಿಯರು, ವಿದ್ಯಾರ್ಥಿಗಳು, ಪ್ರೀತಿಯಲ್ಲಿ ಸೋತವರು ಸಾಯಲೆಂದು ಈ ಬ್ರಿಡ್ಜ್‌ನಿಂದ ಬೀಳುವುದನ್ನು ನೋಡಿದ್ದೇನೆ. ಒಮ್ಮೆ ಗರ್ಭಿಣಿಯನ್ನು ರಕ್ಷಿಸಲು ನಾನು ತಡಮಾಡದೆ ನೀರಿಗೆ ಇಳಿದಿದ್ದೆ. ಆಕೆಯನ್ನು ನನ್ನ ಭುಜದ ಮೇಲೆ ಹೊತ್ತು ದಡಕ್ಕೆ ತಂದಿದ್ದೆ. ಆಮೇಲೆ ತಿಳಿಯಿತು; ಆಕೆ ಅತ್ತೆಯ ಮನೆಯಲ್ಲಿನ ಹಿಂಸೆ ತಾಳಲಾರದೆ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಳು

ಮೊದಲ ಬಾರಿ ಸಮುದ್ರದಿಂದ ಮೃತದೇಹ ಹೊರತೆಗೆದಾಗ ನಾನು ಬರಿ 13 ವರ್ಷದವನಿದ್ದೆ. ಆ ದೇಹ ಸಂಪೂರ್ಣ ಕೊಳೆತು ಹೋಗಿತ್ತು, ಅಂದು ಇಡೀ ದಿನ ನಾನು ವಾಂತಿ ಮಾಡಿಕೊಂಡಿದ್ದೆ. ಆ ಮುಖವನ್ನ ನನ್ನಿಂದ ಮರೆಯುವುದು ಕಷ್ಟವಾಗಿತ್ತು.  

ನಾನು ಏಳು ವರ್ಷದವನಿದ್ದಾಗ ಕೆರೆಯಲ್ಲಿ ಮುಳುಗುತ್ತಿದ್ದ ನನ್ನ ಗೆಳೆಯನನ್ನು ಬಚಾವ್‌ ಮಾಡಿದ್ದನ್ನು ಈ ಘಟನೆ ನೆನಪು ಮಾಡಿತು. ಅವನಿಗೆ ಎರಡನೇ ಅವಕಾಶವೆಂಬಂತೆ ಬದುಕಿ ಬಂದಿದ್ದ. ಆದರೆ, ಈಗ ಈ ವ್ಯಕ್ತಿ ಜೀವಂತವಾಗಿರಲಿಲ್ಲ. ನನ್ನೊಳಗೆ ಏನೋ ಕಸಿವಿಸಿಯ ಭಾವನೆ. ಈ ಸ್ಥಿತಿಯಲ್ಲಿ ಮತ್ತೆ ಯಾರನ್ನೂ ನೋಡಲು ನನಗೆ ಇಷ್ಟವಿರಲಿಲ್ಲ.  

ನನ್ನನ್ನು ಓದಿಸುವಷ್ಟು ನನ್ನ ತಂದೆ-ತಾಯಿಗೆ ಅನುಕೂಲವಿರಲಿಲ್ಲ. ಮನೆಯ ಸಂಪೂರ್ಣ ಜವಾವ್ದಾರಿ ನನ್ನ ಮೇಲೆ ಬಿತ್ತು. 16 ವರ್ಷದವನಿದ್ದಾಗ ಜೀವನೋಪಾಯಕ್ಕಾಗಿ ಸಮುದ್ರದಲ್ಲಿ ಮೀನು ಹಿಡಿಯುವ ಕೆಲಸಕ್ಕೆ ನಿಂತೆ. ಮುಂದೆ ಅನುಭವಸ್ಥ ಮೀನುಗಾರನಾದೆ. ಎರಡು ವರ್ಷಗಳ ನಂತರ ಮತ್ತೆ ಇದೇ ರೀತಿಯ ಘಟನೆಯೊಂದು ಎದುರಾಯಿತು.

ಈ ಲೇಖನ ಓದಿದ್ದೀರಾ?: ಬದುಕು | ಅದೊಂದಿನ ಗಂಡನ ಮನೆ ತೊರೆದು ಮಗುವಿನೊಟ್ಟಿಗೆ ಸೀದಾ ತವರಿಗೆ ಹೊರಟುಬಿಟ್ಟೆ...

ಒಂದು ದಿನ ರಾತ್ರಿ ಪೊಲೀಸರ ಅಲಾರ್ಮ್ ಹೊಡೆದುಕೊಳ್ಳುತ್ತಿತ್ತು. ಯಾರಾದರೂ ಅಲ್ಲಿನ ಈಜುಗಾರರು ನೀರಿಗೆ ಧುಮುಕಿ, ನೀರಿನಲ್ಲಿ ಮುಳುಗುತ್ತಿದ್ದ ಗರ್ಭಿಣಿಯನ್ನು ರಕ್ಷಿಸಲು ಬರುತ್ತಾರಾ ಎಂದು ಪೊಲೀಸರು ಕಾಯುತ್ತಿದ್ದರು. ಮಹಿಳೆ ಮುಂಬೈನ ವಾಶಿ ಕ್ರಿಕ್‌ ಬ್ರಿಡ್ಜ್‌ನಿಂದ ನೀರಿಗೆ ಹಾರಿದ್ದರು. ನಾನು ತಡಮಾಡದೆ ನೀರಿಗೆ ಧುಮುಕಿ, ಆಕೆಯನ್ನು ನನ್ನ ಭುಜದ ಮೇಲೆ ಹೊತ್ತು ದಡಕ್ಕೆ ತಂದಿದ್ದೆ. ಆಮೇಲೆ ತಿಳಿಯಿತು; ಆಕೆಯ ಅತ್ತೆಯ ಮನೆಯಲ್ಲಿ ಆಗುತ್ತಿದ್ದ ಚಿತ್ರಹಿಂಸೆ ತಾಳಲಾರೆ ಇಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳಲು ಬಂದಿದ್ದಳು ಎಂದು.

ಮುಂದಿನ ದಿನಗಳಲ್ಲಿ ಈ ತರಹದ ನೂರಾರು ಘಟನೆಗಳಿಗೆ ನಾನು ಸಾಕ್ಷಿಯಾಗುತ್ತ ಹೋದೆ. ಗರ್ಭಿಣಿಯರು, ವಿದ್ಯಾರ್ಥಿಗಳು, ಪ್ರೀತಿಯಲ್ಲಿ ಸೋತ ಯುವಕ/ಯುವತಿಯರು ಸಾಯಲೆಂದು ಈ ಬ್ರಿಡ್ಜ್‌ನಿಂದ ಬೀಳುವುದನ್ನು ನೋಡಿದ್ದೇನೆ. 

ಯಾರಾದರೂ ಆತ್ಮ ಹತ್ಯೆಗೆ ಪ್ರಯತ್ನಿಸುತ್ತಿದ್ದರೆ ಅವರನ್ನು ರಕ್ಷಿಸಲು ಪೊಲೀಸ್ ಕಂಟ್ರೋಲ್‌ ರೂಮ್‌ನಿಂದ ನನ್ನನ್ನು ಕರೆಯುತ್ತಾರೆ. ರಾತ್ರಿ-ಹಗಲೆನ್ನದೆ, ಸಮುದ್ರದಲ್ಲಿ ಉಬ್ಬರವಿಳಿತ ಇದ್ದರೂ, ಅವರು ಯಾವಾಗ ಕರೆದರೂ ನಾನು ಸ್ಥಳಕ್ಕೆ ಧಾವಿಸುತ್ತೇನೆ. ಇದರಿಂದಾಗಿ ನನ್ನ ಒಂದು ದಿನದ ಮೀನುಗಾರಿಕೆ ಹೋದರೂ, ಮೀನು ಹಿಡಿಯುವ ಬಲೆ ಹಾಳಾದರೂ ಅಗ್ನಿಶಾಮಕ ವಾಹನ ತಲುಪುವ ಮೊದಲೇ ನಾನು ಸ್ಥಳದಲ್ಲಿರುತ್ತೇನೆ.

ಕಳೆದ ಹತ್ತು ವರ್ಷದಿಂದ ನಾನು ಮಾಡುತ್ತಿದ್ದ ಈ ಕೆಲಸದ ಬಗ್ಗೆ ನನ್ನ ಹೆಂಡತಿಗಾಗಲೀ ಮಕ್ಕಳಿಗಾಗಲೀ ತಿಳಿದಿರಲಿಲ್ಲ. ನಾನು ಯಾವಾಗೆಂದರೆ ಆವಾಗ ಮನೆಯಿಂದ ಹೊರಗೆ ಹೋಗುತ್ತಿದ್ದುದನ್ನು ನೋಡಿ ಅವರು ನನ್ನ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದರು. ಪತ್ರಿಕೆಯ ಮುಖಪುಟದಲ್ಲಿ ನನ್ನ ಫೋಟೊ ಬರುವವರೆಗೆ ಈ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ನನ್ನ ಹೆಂಡತಿಯ ತಂಗಿ ಅವಳಿಗೆ ಪತ್ರಿಕೆ ತೋರಿಸಿ, "ನಿನ್ನ ಗಂಡ ಏನು ಕೆಲಸ ಮಾಡುತ್ತಿದ್ದಾನೆ ನೋಡು!" ಎಂದಾಗ, "ಅವರು ಮಾಡುತ್ತಿರುವುದು ಒಳ್ಳೆಯ ಕೆಲಸ," ಎಂದು ಹೆಮ್ಮೆಯಿಂದ ಹೇಳಿಕೊಂಡಳು ನನ್ನವಳು.

ಈ ಲೇಖನ ಓದಿದ್ದೀರಾ?: ಬದುಕು | ಬೆಟ್ಟ ಹತ್ತಕ್ ಆಗಿಲ್ಲಾಂದ್ರು ಪರ್ವಾಗಿಲ್ಲ, ಅಟ್ಟ ಹತ್ತುತೀವಿ ಅನ್ನೋ ಧೈರ್ಯ ಐತೆ

ಹೀಗೆ ಇನ್ನೊಬ್ಬರನ್ನು ಕಾಪಾಡುವ ವೇಳೆ ನಾನು ಮೂರು ಬಾರಿ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದೇನೆ. ಒಮ್ಮೆ ಒಬ್ಬ ಮಹಿಳೆ ನನ್ನನ್ನು ಹಿಡಿದು ನೀರಿನ ಅಡಿಗೆ ಎಳೆದಿದ್ದರು. ಒಂದು ವರ್ಷದ ಹಿಂದೆ, ಒಬ್ಬ ಧಡೂತಿ ವ್ಯಕ್ತಿಯನ್ನು ಎಳೆಯಲು ಪ್ರಯತ್ನಿಸಿದಾಗ, ಆತ ನನ್ನ ಕತ್ತನ್ನು ಎಷ್ಟು ಬಿಗಿಯಾಗಿ ಹಿಡಿದುಕೊಂಡಿದ್ದ ಎಂದರೆ, ನನ್ನ ಬೆನ್ನಿನ ಮೂಳೆ ಮುರಿದಿತ್ತು. ಈ ಆಘಾತದಿಂದ ನಾನು ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿ ಹಾಸಿಗೆ ಹಿಡಿದಿದ್ದೆ.  

ನಿಜ ಹೇಳಬೇಕು ಅಂದರೆ, ನನಗೆ ನನ್ನ ಕುಟುಂಬದ ಬಗ್ಗೆ ಚಿಂತೆಯಾಗುತ್ತದೆ. ನನಗೇನಾದರೂ ಆದರೆ, ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಆದರೆ, ಯಾವುದೇ ಕಾರಣಕ್ಕೂ ನಾನು ಈ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂಬುದು ಖಚಿತ. ನನ್ನ ಕಾರ್ಯವನ್ನು ಸರ್ಕಾರ ಅಥವಾ ಯಾವುದೇ ಸಂಸ್ಥೆಗಳು ಗುರುತಿಸಿಲ್ಲ ಎಂಬ ಬಗ್ಗೆ ನನಗೆ ತಕರಾರಿಲ್ಲ. ನಾನು ಯಾವ ಪ್ರತಿಫಲ ಬಯಸದೆ ಈ ಕೆಲಸ ಮಾಡುತ್ತಿದ್ದೇನೆ.

ಈವರೆಗೆ 55 ಮೃತದೇಹಗಳನ್ನು ಹೊರತೆಗೆದಿದ್ದೇನೆ. 49 ಜನರ ಪ್ರಾಣ ಕಾಪಾಡಿದ್ದೇನೆ. ಕೆಲವು ಸಲ ನಾನು ಕಾಪಾಡಿದವರ ಮನೆಯವರು ನನ್ನ ಜೇಬಿಗೆ ಹಣ ಇಡಲು ಬಂದಾಗ ತಿರಸ್ಕರಿಸಿದ್ದೇನೆ. ಏಕೆಂದರೆ, ಈ ಕಾರ್ಯವನ್ನು ಹಣಕ್ಕಾಗಿ ಮಾಡುತ್ತಿಲ್ಲ ನಾನು. 'ನೇಕಿ ಕರ್, ದರಿಯಾ ಮೇ ದಾಲ್' (ಒಳ್ಳೆಯ ಕೆಲಸ ಮಾಡಿ ಮರೆತುಬಿಡಬೇಕು) ಎಂಬುದು ನನ್ನ ಜೀವನದ ಮಂತ್ರ.

ನಿಮಗೆ ಏನು ಅನ್ನಿಸ್ತು?
5 ವೋಟ್