ಫೇಸ್‌ಬುಕ್‌ನಿಂದ | ಕುಲಾಂತರಿ ಸಾಸಿವೆ ಕುರಿತು ಪ್ರೀತಿ ಬೆಳೆಸಿಕೊಳ್ಳುವ ಮುನ್ನ ಈ ವಿಷಯಗಳು ನಿಮಗೆ ಗೊತ್ತಿರಲಿ

ಎಲ್ ಸಿ ನಾಗರಾಜ್ ಬರಹ | ಜೈವಿಕ ಮಾರ್ಪಾಡು ಅನುಮೋದನ ಸಮಿತಿಯು ಬಿ.ಟಿ ಹತ್ತಿ ಬಿಡುಗಡೆ ಮಾಡಲು ಮಹಿಕೊ ಬೀಜ ಕಂಪನಿಗೆ ಅನುಮತಿ ಕೊಡಲಿರುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದಾಗ, ರೈತ ನಾಯಕ ಎಂ ಡಿ ನಂಜುಂಡಸ್ವಾಮಿಯವರು ಅದನ್ನು ಬೆಳೆಯದಂತೆ ರೈತರಿಗೆ ಕರೆ ಕೊಟ್ಟಿದ್ದರು. ಆದರೆ, ಈಗ ಹತ್ತಿ ಜಾಗದಲ್ಲಿ ಸಾಸಿವೆ ಬಂದು ಕುಂತಿದೆ. ಮುಂದೇನು?

ರಜನಿ ಸಾರು ದ್ವಿಪಾತ್ರದಲ್ಲಿ, ಐಶ್ವರ್ಯ ರೈ ಅವರು ನಾಯಕಿಯಾಗಿ ನಟಿಸಿರುವ ಚಲನಚಿತ್ರವೊಂದಿದೆ. ಬಿಡುಗೆಟ್ಟು ಕುಂತಿದ್ದಾಗ ಅದರ ಕೆಲವು ಮುಖ್ಯದೃಶ್ಯಗಳನ್ನಷ್ಟೇ ನೋಡಿದ್ದ ನನಗೆ ಆ ಚಿತ್ರದ ಹೆಸರು ತಿಳಿಯದು. ಆ ಚಿತ್ರದಲ್ಲಿ ವಿಜ್ಞಾನಿಯಾಗಿರುವ ನಾಯಕ, ತನ್ನ ಬದುಕಿನ ನಾಯಕಿಯಾಗಬೇಕಿರುವ ಹೆಣ್ಣಿನ ಮನಮೆಚ್ಚಿಸಲು ತನ್ನಂಥದೇ ತದ್ರೂಪಿ ರೊಬೊಟ್ ಕಂಡುಹಿಡಿದು ವಿನ್ಯಾಸ ಮಾಡಿ, ಅದು ಕಾರ್ಯನಿರ್ವಹಿಸುತ್ತಿದ್ದಂತೆ, ನಾಯಕಿಯು ಸ್ಲೋ ಮೋಷನ್ನಿನಲ್ಲಿ ಓಡೋಡಿ ಬಂದು, ತನ್ನ ನೀಳತೋಳುಗಳನ್ನು ಚಾಚಿ ಬಿಗಿದಪ್ಪಿ ಕೆನ್ನೆಗೆ ಮುತ್ತಿಕ್ಕುವಳೆಂದು ಕಾಯುತ್ತಿರುತ್ತಾನೆ. ಇದೇ ತೆರನಾಗಿ ಕಥಾನಾಯಕಿಯಾದ ಚೆಲುವೆಯು ಕಥಾನಾಯಕನ ಬಳಿಗೆ ಓಡೋಡಿ ಬರುತ್ತ ನೀಳ ತೋಳುಗಳನ್ನು ಕಥಾನಾಯಕನ ಕಡೆಗೆ ಚಾಚಿ ಅರಳಿಸುತ್ತಾಳಾದರೂ, ಕಥಾನಾಯಕನನ್ನು ಅಪ್ಪಿ ಮುತ್ತಿಕ್ಕುವ ಬದಲಿಗೆ ಕಥಾನಾಯಕನು ವಿನ್ಯಾಸ ಮಾಡಿದ ತದ್ರೂಪಿ ರೊಬೋಟನ್ನು ಅಪ್ಪಿಕೊಂಡು ಮುತ್ತಿನ ಮಳೆಗೈಯುತ್ತಾಳೆ. ಆಗ ಚಿಂತಾಕ್ರಾಂತನಾದ ಕಥಾನಾಯಕನು ಹೊರಗಿನ ಗಾರ್ಡನ್ನಿಗೆ ನಡೆದು, ವಿಶಿಷ್ಟ ಟಿಪಿಕಲ್ ಶೈಲಿಯಲ್ಲಿ ಸಿಗರೇಟನ್ನು ವ್ಯೋಮಕ್ಕೆ ಚಿಮ್ಮುತ್ತಿದ್ದಂತೆ ಹಾರಿ ಬಂದು ಕಥಾನಾಯಕನ ತುಟಿ ಸಂದಿಗೆ ತಗಲ ಹಾಕಿಕೊಳ್ಳುತ್ತದೆ.

Eedina App

ಈ ಚಿತ್ರದ ಈ ನಿರ್ದಿಷ್ಟ ದೃಶ್ಯವನ್ನು ನೋಡುತ್ತಿದ್ದ ಬಿಡುಗೆಟ್ಟವನಾದ ನಾನು, ಕಿಚನ್ನಿಗೆ ನಿಧಾನವಾಗಿಯೇ ನಡೆದು ಟೀಗೆ ಎಸರಿಟ್ಟು ಚಿಂತಾಕ್ರಾಂತನಾಗಿ, "ಅರೇ... ಇದು ಇಂಗ್ಲಿಷಿನ ರಮ್ಯ ಕಾದಂಬರಿಕಾರ್ತಿ ಮೇರಿ ಶೆಲ್ಲಿಯ 'ಫ್ರಾಂಕೆನ್‌ಸ್ಟೀನ್' ಕಾದಂಬರಿಯ ಮೂಲ ಆಶಯ ಮತ್ತು ಧ್ವನಿ ಕಳೆದುಕೊಂಡಂತೆ ಚಿತ್ರಿತವಾಗಿರುವ ಕಥಾನಕವಲ್ಲವೇ...?" ಅಂತ ಟೀ ಕುಡಿಯುತ್ತ ಕುಂತೆ. ಫ್ರಾಂಕೆನ್‌ಸ್ಟೀನ್ ಕಥಾನಕದಲ್ಲಿ ವಿಜ್ಞಾನಿ ಫ್ರಾಂಕೆನ್‌ಸ್ಟೀನ್ ಎಂಬವನು ಸೃಷ್ಟಿಸುವ ರೊಬೋಟ್ ಯಂತ್ರವು ತನ್ನನ್ನು ಸೃಷ್ಟಿಸಿದವನಿಗಿಂತ ಅಸಾಧಾರಣ ಬುದ್ಧಿವಂತಿಕೆ ಉಳ್ಳದ್ದಾಗಿದ್ದು, ತನ್ನನ್ನು ಚಂದಗಾಣುವಂತೆ ಸೃಷ್ಟಿಸಲಾಗಿಲ್ಲವೆಂದು ಸೃಷ್ಟಿಕರ್ತನ ವಿರುದ್ಧವೇ ರೊಚ್ಚಿಗೇಳುತ್ತದೆ.

ಫ್ರಾಂಕೆನ್‌ಸ್ಟೀನ್

ಈ ಮುನ್ನುಡಿಯ ನಂತರ ಈಗ ಹೋಗಬೇಕಾಗಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ. ಭಾರತ ಒಕ್ಕೂಟ ಸರ್ಕಾರದ ಪರ್ಯಾವರಣ ಇಲಾಖೆಯ ಸುಪರ್ದಿನಲ್ಲಿ ಇರುವ 'ಜೈವಿಕ ಮಾರ್ಪಾಡು ಬೆಳೆ ಅನುಮೋದನ ಸಮಿತಿಯು (Genetic Engineering Approval Committee/GEAC) ಜೈವಿಕವಾಗಿ ಮಾರ್ಪಾಡು ಮಾಡಲಾಗಿರುವ ಮಹಿಕೊ ಕಂಪನಿಯ ಸಂಕರ ತಳಿ ಸಾಸಿವೆ ಬೀಜವನ್ನು ಕರ್ನಾಟಕದಲ್ಲಿ ಬಿತ್ತನೆ ಮಾಡಲು ಬಿಡುಗಡೆ ಮಾಡುವಂತೆ ಗುಟ್ಟಾಗಿ ಅನುಮತಿ ಕೊಟ್ಟಿದೆಯೆಂದು ಹೇಳಲಾಗುತ್ತಿದೆ.

AV Eye Hospital ad

ದಕ್ಷಿಣ ಭಾರತದ ಅಡುಗೆಮನೆಗಳಲ್ಲಿ ಬೇಯಿಸಿದ ತರಕಾರಿಗಳನ್ನು ಅಗ್ಗರಿಸಲು ಬಾಣಲೆಯ ಎಣ್ಣೆಗೆ ಕರಿಬೇವಿನ ಎಲೆಗಳ ಜೊತೆಗೆ ಉದುರಿಸಲಾಗುವ, ಉತ್ತರ ಭಾರತದಲ್ಲಿ ಹಿಂಡಿ ತೆಗೆದ ಕಾಳುಗಳ ಎಣ್ಣೆಯನ್ನೇ ಒಗ್ಗರಣೆಗೆ ಬಳಸುವ ಸಾಸಿವೆಕಾಳನ್ನು ಜೈವಿಕವಾಗಿ ಮಾರ್ಪಡಿಸಿ ಸಂಕರ ತಳಿ (Transgenic variety) ರೂಪಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ. ಮಣ್ಣಿನಲ್ಲಿ ಸಹಜವಾಗಿ ಸಿಗುವ ಬೇಸಿಲಸ್ ಅಮಿಲೊ ಲಿಕ್ವಿಫೇಸಿಯನ್ಸ್ ಎಂಬ ಬ್ಯಾಕ್ಟೀರಿಯಾದ ಅಂಗಾಂಶ (DNA)  ತಂತುಗಳನ್ನು, ದೇಸಿ ಸಾಸಿವೆ ತಳಿಯ ಅಂಗಾಂಶ ತಂತುಗಳ ಜೊತೆಗೆ ಕಸಿ ಮಾಡಿ ಅಥವಾ ಬೆಸೆದು ರೂಪಿಸಲಾಗಿರುವ ಸಾಸಿವೆಯ ಈ ಸಂಕರ ತಳಿಯು, ಸಾಸಿವೆ ಬೆಳೆಯ ನಡುವೆ ಬೆಳೆಯಲಾಗುವ ಕಳೆಗಳನ್ನು ಸುಟ್ಟು ಹಾಕಲು ಸಿಂಪಡಿಸಲಾಗುವ ಕಳೆನಾಶಕಕ್ಕೆ ಪ್ರತಿರೋಧ ಗುಣ ಹೊಂದಿದೆಯೆಂದೂ, ಕಳೆನಾಶಕ ಸಿಂಪಡಿಸಿದಾಗ ಕಳೆ ಮಾತ್ರ ಸುಟ್ಟು ಹೋಗಿ, ಕಳೆಗಳ ನಡುವೆ ಬೆಳೆದು ನಿಂತ ಸಾಸಿವೆ ಸಸ್ಯಗಳು ಸುಟ್ಟುಹೋಗದೆ ಹಾಗೆಯೇ ಉಳಿದುಕೊಳ್ಳುವವು ಎಂದೂ ಈ ಸಂಕರ ತಳಿಯನ್ನು ವಿವರಿಸಲಾಗಿದೆ - ಸಮಸ್ಯೆ ಇರುವುದು ಇಲ್ಲೇ.

ಮೂಲವಾಗಿ ಸಾಸಿವೆ ಸಸ್ಯವು ತನ್ನ ಸುತ್ತಲೂ ಕಳೆಗಳು ಬೆಳೆಯದಂತೆ ಕೆಲವು ರಾಸಾಯನಿಕಗಳನ್ನು (Allelopathic impact) ಬಿಡುಗಡೆ ಮಾಡುತ್ತದೆಂದು ರಾಜಸ್ಥಾನದ ಬೇಸಾಯಗಾರರ ಸಂಘಟನೆಯಾಗಿರುವ 'ಖೇತಿ ವರ್ಸಾತ್ ಮಿಷನ್'ನ ಉಮೇಂದ್ರು ದತ್ ಅವರು ತಿಳಿಯಪಡಿಸಿದ್ದಾರೆ. ಈ ಹಿಂದೆ ಮಣ್ಣಿನಲ್ಲಿ ಸಹಜವಾಗಿ ಸಿಗುವ ಬೇಸಿಲಸ್ ತುರೆಂಜೀನ್ಸಿಸ್ ಎಂಬ ವಿಷೋತ್ಪಾದಕ ಬ್ಯಾಕ್ಟೀರಿಯಾದ ಅಂಗಾಂಶ ತಂತುಗಳನ್ನು ಭಾರತದ ದೇಸಿ ಹತ್ತಿ ತಳಿಯ ಅಂಗಾಂಶ ತಂತುಗಳೊಂದಿಗೆ ಕಸಿ ಮಾಡಿ ಮಹಿಕೊ ಬೀಜ ಕಂಪನಿಯು ರೂಪಿಸಿದ್ದ ಬಿ.ಟಿ ಹತ್ತಿಯನ್ನು ದೆಹಲಿಯ ಬಯೊಟೆಕ್ನಾಲಜಿ ವೇದಿಕೆಯ (Forum for Biotechnology) ಸಂಚಾಲಕರೂ, ಪತ್ರಕರ್ತರೂ ಆದ ದೇವಿಂದರ್ ಶರ್ಮ ಅವರು ಹೀಗೆ ವಿವರಿಸಿದ್ದರು: "ಮನುಷ್ಯರ ಶರೀರಕ್ಕೆ ಪೆನ್ಸಿಲಿನ್ ಚುಚ್ಚುಮದ್ದು ಕೊಡಬೇಕೆಂದು ವೈದ್ಯರು ಸೂಚಿಸಿದರೆ, ಪೆನ್ಸಿಲಿನ್‌ನ ಅಂಗಾಂಶ ತಂತುಗಳನ್ನೇ ಮನುಷನ ಅಂಗಾಂಶ ತಂತುಗಳ ಜೊತೆಗೆ ಕಸಿ ಮಾಡುವಂಥ ಕೃತ್ಯ ವಿಜ್ಞಾನಕ್ಕೆ ತರವಾದುದೇ?"

ಇದು ಹ್ಯಾಗೆ ಎಂದರೆ, ಗ್ರೀಕ್ ಪುರಾಣಗಳ ಪೈಕಿ 'ಚಿಮೇರ' ಎಂಬ ಪುರಾಣದ ಕಾಲ್ಪನಿಕ ಪ್ರಾಣಿಯೊಂದಿದೆ. ಆ ಪ್ರಾಣಿಗೆ ಹಾವಿನ ಬಾಲವೂ, ಮೇಕೆಯ ಮೈಯೂ, ಸಿಂಹದ ಮುಖವೂ ಇದ್ದು, ಅದು ಬೆಂಕಿಯನ್ನು ಉಗುಳುತ್ತಿರುವ ಹಾಗೆ!

ಜೈವಿಕ ಮಾರ್ಪಾಡು ಅನುಮೋದನ ಸಮಿತಿಯು ಬಿ.ಟಿ ಹತ್ತಿಯನ್ನು ರೈತರಿಗಾಗಿ ಬಿಡುಗಡೆ ಮಾಡಲು ಮಹಿಕೊ ಬೀಜ ಕಂಪನಿಗೆ ಅನುಮತಿ ಕೊಡಲಿರುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದಾಗ, ಕರ್ನಾಟಕದ ರೈತ ನಾಯಕ ಪ್ರೊ.ಎಂ ಡಿ ನಂಜುಂಡಸ್ವಾಮಿಯವರು ಅದನ್ನು 'ವಿಚ್ ಕ್ರಾಫ್ಟ್ ಟೆಕ್ನಾಲಜಿ' ಎಂದು ವಿವರಿಸಿ, ಬೆಳೆಯದಂತೆ ರೈತರಿಗೆ ಕರೆ ಕೊಟ್ಟಿದ್ದರು.

ಪ್ರೊ.ಎಂ ಡಿ ನಂಜುಂಡಸ್ವಾಮಿ | ಚಿತ್ರ ಕೃಪೆ: 'ದಿ ಎಕಾಲಜಿಸ್ಟ್' ಜಾಲತಾಣ

ದಕ್ಷಿಣ ಭಾರತದಲ್ಲಿ ಸಾಸಿವೆಯನ್ನು ಯಾವ ರೈತರೂ ಪ್ರಧಾನ ಏಕರೂಪಿ ಬೆಳೆಯಾಗಿ (Principle monoculture) ಬೆಳೆಯದಿದ್ದರೂ, ಮಳೆ ಆಶ್ರಿತ ಬೆಳೆಗಳಾದ ರಾಗಿ, ಬಿಳಿ ಜೋಳಗಳ ಜೊತೆಯಲ್ಲಿ ಉರುಲು ಬೆಳೆಯಾಗಿ (Trap crop) ಬೆಳೆಯಲಾಗುತ್ತಿದೆ.

ಉರುಲು ಬೆಳೆ ಎಂದರೆ... ರಾಗಿಯ ಜೊತೆಗೆ ಅಕ್ಕಡಿ ಸಾಲುಗಳಾಗಿ ಬೆಳೆಯುವ ತೊಗರಿ, ಅವರೆ, ಉದ್ದು ಮುಂತಾದ ಕಾಳು ಫಸಲುಗಳು ಬೆಳವಣಿಗೆಯ ಹಂತದಲ್ಲಿ ಇರುವಾಗ ಅವುಗಳಿಗೆ ಹಾವಳಿಯಿಕ್ಕುವ ನುಸಿ, ಎಲೆಕೊರಕ ಹುಳಗಳನ್ನು ಸಿಹಿಯಾಗಿರುವ ಸಾಸಿವೆ ಎಲೆಗಳ ಕಡೆಗೆ ಹೋಗುವಂತೆ ಮಾಡಿ, ಪ್ರಧಾನ ಫಸಲುಗಳಾದ ಕಾಳಿನ ಬೆಳೆಗಳನ್ನು ಹಾವಳಿಯಿಂದ ರಕ್ಷಿಸಿಕೊಳ್ಳುವ ವಿಧಾನ. ನುಸಿ ಮತ್ತು ಎಲೆಕೊರಕ ಹುಳಗಳು ಸಾಸಿವೆ ಗಿಡದ ಎಲೆಗಳನ್ನು ಮೇಯ್ದರೂ ಅಷ್ಟೋ ಇಷ್ಟೋ ಸಾಸಿವೆ ಅಡುಗೆಯ ಅಗ್ಗರಿಕೆ ಅಥವಾ ಒಗ್ಗರಣೆಗೆ ಸಾಕಾಗುವಷ್ಟು ಕಾಳಿಕ್ಕುತ್ತಿತ್ತು.

ಈಗ ಈ ಸಂಕರ ತಳಿಯ ಸಾಸಿವೆ ಬೀಜ ಅಕ್ಕಡಿ ಬೇಸಾಯ ಪ್ರದೇಶಗಳಲ್ಲಿ ಬಿತ್ತನೆಯಾದರೆ ಅದು ಎಂತಹ ಕೆಟ್ಟ ಪರಿಣಾಮ ಉಂಟುಮಾಡಲಿದೆ ಎಂದರೆ... ಅಕ್ಕಡಿ ಪದ್ಧತಿ ಬೇಸಾಯಗಾರನೊಬ್ಬ ತನ್ನ ಐದು ಎಕರೆ ಬೇಸಾಯ ತಾಕಿನಲ್ಲಿ ರಾಗಿಯ ಜೊತೆಗೆ ಈ ಸಂಕರ ತಳಿಯ ಸಾಸಿವೆ ಬೀಜವನ್ನು ಬಿತ್ತಿದ ಎಂದಿಟ್ಟುಕೊಳ್ಳಿ; ನೆರೆಯ ಒಂದು ಎಕರೆ ಬೇಸಾಯ ತಾಕಿನ ಬಡ ಬೇಸಾಯಗಾರ ಸಂಕರ ತಳಿಯ ಸಾಸಿವೆ ಬೀಜ ತರಲು ಕಾಸಿಲ್ಲದೆ ದೇಸಿ ತಳಿಯ ಸಾಸಿವೆಯನ್ನೇ ಬಿತ್ತುತ್ತಾನೆ ಅಂತಾನೂ ಇಟ್ಟುಕೊಳ್ಳಿ...

ಐದು ಎಕರೆ ತಾಕಿನಲ್ಲಿ ಬಿತ್ತಿದ ಸಂಕರ ತಳಿಯ ಸಾಸಿವೆ ಹೂವಿಗೆ ಮಕರಂದ ಕುಡಿಯಲು ಬಂದ ಜೇನಿನ ಕಾಲಿಗೆ ಅದರ ಪರಾಗಗಳು ಮೆತ್ತಿಕೊಳ್ಳುತ್ತವೆ. ಆ ಜೇನುಹುಳು ದೇಸಿ ತಳಿಯ ಸಾಸಿವೆ ಹೂವಿಗೆ ಮಕರಂದ ಕುಡಿಯಲು ಬಂದಾಗ ಅಲ್ಲಿ ಮೆತ್ತಿಕೊಂಡಿದ್ದ ಸಾಸಿವೆ ಹೂವಿನ ಪರಾಗಗಳು ದೇಸಿ ಸಾಸಿವೆ ಹೂವಿನ ಶಲಾಕಾಗ್ರಕ್ಕೆ ತಾಕಿ ಮಿಲಾಕತ್ತಾಗುತ್ತವೆ...

ಇದರಿಂದ ತಲೆದೋರುವ ಸಮಸ್ಯೆ ಏನೆಂದರೆ...

ತಾನು ರೂಪಿಸಿದ ಸಂಕರ ತಳಿಯ ಸಾಸಿವೆ ಬೀಜಕ್ಕೆ ಸಂಪೂರ್ಣ ಹಕ್ಕುಸ್ವಾಮ್ಯ (Patenting) ಪಡೆದಿರುವ ಮಹಿಕೊ ಬೀಜ ಕಂಪನಿಯು, ದೇಸಿ ಸಾಸಿವೆ ಬೇಸಾಯಗಾರನ ಮೇಲೆ 'ಸಂಕರ ತಳಿ ಸಾಸಿವೆಯ ಪರಾಗ ಕಳವು' ಆಪಾದನೆ ಹೊರಿಸಿ ನ್ಯಾಯಾಲಯಕ್ಕೆ ಎಳೆಯುತ್ತದೆ ಅಥವಾ ನ್ಯಾಯಾಲಯದಲ್ಲಿ ಕಟ್ಟಳೆ ಹೂಡುವಂತೆ ತನ್ನಿಂದ ಸಂಕರ ಸಾಸಿವೆ ಬೀಜ ಕೊಂಡಿದ್ದ ಐದು ಎಕರೆ ಬೇಸಾಯಗಾರನನ್ನು ಚಿಮ್ಮಿಕ್ಕಿ ಕೊಡುತ್ತದೆ. ಆಗ, ಸಂಕರ ತಳಿಯ ಸಾಸಿವೆ ಬಗ್ಗೆ ಯಾವುದೇ ಅರಿವಿರದ ಒಂದು ಎಕರೆ ಹಿಡುವಳಿಯ ಅಮಾಯಕ ಬೇಸಾಯಗಾರ ಏನು ಮಾಡಬೇಕು?
ದೇಸಿ ತಳಿಯ ಸಾಸಿವೆಯನ್ನೇ ಇಬ್ಬರೂ ಬೆಳೆದು ಒಂದು ಅಣ್ಣತಮ್ಮಿಕೆಯಲ್ಲಿ ಬಾಳುವೆ ಮಾಡುತ್ತಿದ್ದ, ನೆರೆಹೊರೆಯಲ್ಲೇ ಇರುವಷ್ಟು ರೊಟ್ಟಿಯನ್ನು ಹಂಚಿ ಉಣುತ್ತಿದ್ದವರಿಬ್ಬರೂ ನ್ಯಾಯಾಲಯದ ಮೆಟ್ಟಿಲು ಕಾಯುತ್ತ ಕುಂತುಕೊಳ್ಳಬೇಕಾಗುತ್ತದೆ, ಅಷ್ಟೇ.

ಈ ಲೇಖನ ಓದಿದ್ದೀರಾ?: ಫೇಸ್‌ಬುಕ್‌ನಿಂದ | ಎಷ್ಟೇ ಟ್ರಾಗುಟ್ರಿ, ಬುಲ್ಡೋಜರು, ಪವರ್ ಟಿಲ್ಲರು ಬಂದ್ರೂ ನೀವಿನ್ನೂ ಈ ಲೋಕಕ್ಕೆ ಬೇಕು ಕಾಳಪ್ಪಣ್ಣ

ಈ ಹಿಂದೆ 'ಲೇಸ್' ಎಂಬ ಹೆಸರಿನ ಆಲೂಗೆಡ್ಡೆ ಚಿಪ್ಸ್‌ಗಾಗಿ ಎಂದೇ ಕಂಪನಿಯೊಂದು ಗುತ್ತಿಗೆ ಆಧಾರದಲ್ಲಿ ಬೆಳೆಸಿಕೊಳ್ಳುತ್ತಿದ್ದ ಸಂಕರ ತಳಿಯ ಆಲೂಗೆಡ್ಡೆ ವಿಚಾರದಲ್ಲಿ ಅನೇಕ ಅಮಾಯಕ ಆಲೂ ಬೆಳೆಗಾರರನ್ನು ಹಕ್ಕುಸ್ವಾಮ್ಯ ಕಾಯಿದೆಯ ಉಲ್ಲಂಘನೆ ಮಾಡಿದ್ದಾರೆ ಎಂಬ ಆಪಾದನೆ ಹೊರಿಸಿ ನ್ಯಾಯಾಲಯಕ್ಕೆ ಎಳೆದಿರುವ ಪ್ರಕರಣ ಗುಜರಾತ್ ರಾಜ್ಯದಲ್ಲೇ ನಡೆದಿದೆ.

ಇನ್ನೂ ಒಂದು ಮುಖ್ಯವಾದ ವಿಷಯ ಎಂದರೆ, ಸಾಸಿವೆಯನ್ನು ಪ್ರಧಾನ ಏಕಬೆಳೆಯಾಗಿ ಬೆಳೆಯುತ್ತಿರುವ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಏನೇನು ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನು ಮುಂದೆ ನೋಡೋಣ

* * *

ಆಕರಗಳು:

  1. Frankenstein or The modern Prometheus - Mary Wollstonecraft Shelley, Green History, Edited by Derek wall, Routledge
  2. Hand book of Bt Cotton - Devinder Sharma, Forum for biotechnology, New Delhi
  3. Matrix on Mustard - Umendru dutt, Kheti Varsat mission
ಈ ಬರಹವನ್ನು ಲೇಖಕರ ಪೂರ್ವಾನುಮತಿಯೊಂದಿಗೆ ಯಥಾವತ್ತಾಗಿ ಪ್ರಕಟಿಸಲಾಗಿದೆ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app