ವಾರದ ವಿಶೇಷ | 'ಕಾಂತಾರ' ಸಿನಿಮಾವನ್ನು ಇನ್ನೂ ನೋಡಿಲ್ಲವಾದರೆ ಈ ವಿಷಯಗಳು ನಿಮಗೆ ಗೊತ್ತಿರಲಿ

ರಿಷಬ್ ಶೆಟ್ಟಿ ಅವರ 'ಕಾಂತಾರ' ಚಿತ್ರ ಹಲವು ಬಗೆಯ ಚರ್ಚೆ ಹುಟ್ಟುಹಾಕಿದೆ; ಈ ಚಿತ್ರದಲ್ಲಿ ದೈವಗಳ ಕುರಿತು ಹೇಳಿರುವುದೆಲ್ಲ ನಿಜವೇ? ಇದನ್ನು ಸಿನಿಮಾವನ್ನಾಗಿ ಮಾತ್ರವೇ ನೋಡಬೇಕೇಕೆ? ಉ.ಕರ್ನಾಟಕದ ನೆಲಮೂಲ ಸಂಸ್ಕೃತಿ ಕುರಿತೂ ಇಂಥ ಸಿನಿಮಾ ಏಕೆ ಬರುತ್ತಿಲ್ಲ? ಈ ಕೇಳ್ವಿಗಳನ್ನು ಆಧರಿಸಿದ ಆರೋಗ್ಯಕರ ಚರ್ಚೆಯ ಆಯ್ದ ಭಾಗ ಇಲ್ಲುಂಟು

'ಸಿನಿಮಾ ಗೆಲ್ಲಲೇಬಾರದು ಅನ್ನುವ ಮಟ್ಟಿಗಿನ ಟೀಕೆ ಸರಿಯಲ್ಲ'

Eedina App

ಉಪೇಂದ್ರ, ಕಾಶೀನಾಥ್ ಮುಂತಾದವರು ಕರಾವಳಿ ಭಾಗದ ಕನ್ನಡವನ್ನು ಹಾಸ್ಯಾಸ್ಪದ ಮಾಡಿರುವ ಸಿನಿಮಾಗಳನ್ನು ನೋಡಿ ಬೇಜಾರಾದಾಗ, ರಕ್ಷಿತ್, ರಿಷಭ್, ರಾಜ್ ಶೆಟ್ಟಿಯವರ ಸಿನಿಮಾಗಳು ತುಂಬಾ ಸಂತೋಷ ತಂದುಕೊಟ್ಟವು. ಬರೀ, 'ಎಂತ ಮಾರಾಯ,' 'ಮಂಡೆ ಸರಿ ಇಲ್ವಾ?' ಅನ್ನೋದನ್ನು ಮೀರಿ, ದಕ್ಷಿಣ ಕನ್ನಡದ ಸೊಗಡನ್ನು ತೋರಿಸಿದ್ದು 'ಉಳಿದವರು ಕಂಡಂತೆ,' 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಮುಂತಾದ ಚಿತ್ರಗಳು.

ಊರು ಬಿಟ್ಟು ಹೊರಗೆಲ್ಲೋ ಬದುಕು ಕಟ್ಟಿಕೊಳ್ಳುತ್ತಿರುವ ನಮಗೆ ಬಾಲ್ಯದ ಅತ್ಯಂತ ಸುಂದರ ನೆನಪುಗಳಲ್ಲಿ ಒಂದಾದ ದೈವಾರಾಧನೆಯ ಕುರಿತು, ಅಲ್ಲಿಯ ನೆಲದ ಒಂದು ಚಿತ್ರ ಬಿಡುಗಡೆಯಾಗುವುದು ಸಂತೋಷದ ವಿಷಯ. ವಾರದಿಂದ ಫೇಸ್‌ಬುಕ್ ತುಂಬೆಲ್ಲ 'ಕಾಂತಾರ'ದ ವಿಮರ್ಶೆಗಳೇ. ಒಂದಿಷ್ಟು ವಿಮರ್ಶೆಗಳನ್ನು ನೋಡಿದ ಮೇಲೆ ಅನಿಸಿದ್ದು ಇಷ್ಟೇ; ನಾವು ಸಿನಿಮಾವನ್ನು ರಾಜಕೀಯದ ಕನ್ನಡಕ ಇಲ್ಲದೆ ನೋಡುವುದನ್ನು ಬಿಟ್ಟಿಲ್ಲ!

AV Eye Hospital ad

ನಮ್ಮ ಪರಿಚಿತರು, ಸ್ನೇಹಿತರು ಸಿನಿಮಾ ಮಾಡಿದರೆ ಒಳ್ಳೆಯ ಅಭಿರುಚಿ, ನಿರ್ಮಾಪಕರ ಕಷ್ಟ-ಸುಖ, ಪರಿಶ್ರಮ ಅಂತೆಲ್ಲ ಮಾತಾಡುತ್ತೇವೆ. ಇಲ್ಲವಾದರೆ, ಒಂದೂ ಒಳ್ಳೆಯ ಮಾತಾಡದೆ ಬೈದು ಬಿಸಾಕಬೇಕು ಅಂದುಕೊಂಡಿದ್ದೇವೆ. ಎಲ್ಲದಕ್ಕೂ ರಾಜಕೀಯದ ಬಣ್ಣ ಬಳಿಯೋ ಕಲೆ ಚೆನ್ನಾಗಿಯೇ ಸಿದ್ಧಿಸಿದೆ. ಆ ಎಲ್ಲ ಅಂಶಗಳನ್ನು ಇಟ್ಟುಕೊಂಡರೆ ಸಿನಿಮಾ ಕಮರ್ಷಿಯಲ್ ಯಶಸ್ಸು ಕಾಣೋದಿಲ್ಲ, ಪ್ರಶಸ್ತಿ ಗೆಲ್ಲಬಹುದಷ್ಟೆ.

ನನಗೆ 'ಕಾಂತಾರ' ಇಷ್ಟ ಆಯ್ತು. ತಾನು ಹುಟ್ಟಿ ಬೆಳೆದ ನೆಲ, ತನ್ನ ಸಂಸ್ಕೃತಿ, ಅಲ್ಲಿನ ಹಾಡು-ಪಾಡು ಇವುಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ರಿಷಭ್. ಸಣ್ಣ ಕಥಾ ಹಂದರ. ನಡುವೆ ಒಂದು ಪುಟ್ಟ, ಚಂದದ ಪ್ರೇಮಕಥೆ. ಕಣ್ಣಿಗೆ ಕಟ್ಟುವ ವಿವರ ಮತ್ತು ಅದ್ಭುತ ನಿರ್ಮಾಣ (Visual Detailing & Beautiful Making) ಅನ್ನಿಸಿತು. ಇಡೀ ಚಿತ್ರವೇ ಒಂದು ಗತಿಯಲ್ಲಿ ಸಾಗಿದರೆ, ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಬೇರೆಯೇ ಅನುಭವ. ರಿಷಭ್ ನಟನೆ ಅದ್ಭುತ. ಅವರ ಪರಿಶ್ರಮ ಎದ್ದುಕಾಣುತ್ತದೆ. ದೈವವಾಗಿ ಮಾತಿಲ್ಲದ ಅಭಿನಯ, ಎಲ್ಲರೂ ಒಂದಾಗಬೇಕೆನ್ನುವ ದೈವದ ಆಶಯ, ಮಂದಹಾಸ ಇಷ್ಟವಾಯಿತು.

ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಕೆಲವೊಂದು ಅಂಶಗಳನ್ನು ಇಟ್ಟಿದ್ದಾರೆ. ಕೆಲವು ಸಂಗತಿಗಳು ನಿಜವಲ್ಲ (Unrealistic) ಅನ್ನಿಸಿದರೂ, ಸಿನಿಮಾ ದೃಷ್ಟಿಯಿಂದ ಅಗತ್ಯವಾದದ್ದು.

ಸುಮ್ಮನೆ ಒಂದು ಆಚರಣೆಯಾಗಿ ನೋಡಿದ ನನ್ನಂತಹ ಸುಮಾರು ಜನ ಈಗ ಗೂಗಲ್ ಮಾಡಿ, ಯುಟ್ಯೂಬ್ ನೋಡಿ ದೈವಾರಾಧನೆಯ ಬಗ್ಗೆ ಹಾಗೆಯೇ ಓದತೊಡಗಿದ್ದಾರೆ. ರಿಷಬ್ ತಂಡ ಒಳ್ಳೆಯ ಸಿನೆಮಾ ಮಾಡಿ ಗೆಲ್ಲಬೇಕು ಅಂದುಕೊಂಡಿದ್ದಾರೆ, ಗೆದ್ದಿದ್ದಾರೆ.

ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನ ಸಹ ಹರಿಸಿರೋದಿಲ್ಲ. ಕೆಲವು ಸಿನಿಮಾಗಳು ನಾವು ಮಾತಾಡುವ ಹಾಗೆ ಮಾಡುತ್ತವೆ. ಈಗ ತಕರಾರುಗಳನ್ನು ತೆಗೆದಿರುವ ಅನೇಕರ ಹಾಗೆ ನಮಗೆ ವಿವರವಾಗಿ ಗೊತ್ತಿರೋದಿಲ್ಲ. ಹಾಗಂತ, ಸಿನಿಮಾದಲ್ಲಿ ಇರೋದೇ ಪೂರ್ತಿ ಸರಿಯಾದ್ದು ಅಂತ ಕುರುಡಾಗಿ ನಂಬುವುದೂ ಇಲ್ಲ. ಆದರೆ, ಅದರ ಕುರಿತು ತಿಳಿಯೋ ಪ್ರಯತ್ನ ಅಂತೂ ಮಾಡುತ್ತೇವೆ. ಅದು ಈ ಸಿನಿಮಾದ ಒಂದು ಯಶಸ್ಸೂ ಇರಬಹುದು.

ಅವರು ಮಾಂಸಾಹಾರ ತ್ಯಜಿಸಿದ ಕುರಿತು ಸಂದರ್ಶನದಲ್ಲಿ ಹೇಳಿರುವುದರ ಕುರಿತು ಭಯಾನಕ ಚರ್ಚೆಗಳು ಆಗುತ್ತಿವೆ. ರಾಜ್ ಕುಮಾರ್ ಸೇರಿದಂತೆ ಹಲವು ನಟರು ಕೂಡ ಇದೇ ರೀತಿ ಮಾಡಿರೋದಿದೆ. ಅದು ಅವರ ನಂಬಿಕೆಯೋ, ಸಿನಿಮಾದ ಕುರಿತ ಭಯ-ಭಕ್ತಿಯೋ, ಜನರ ನಂಬಿಕೆಗೆ ಕೊಟ್ಟ ಗೌರವವೋ ಏನೋ. ಒಂದು ವೇಳೆ, ಈ ಸಿನಿಮಾಗೋಸ್ಕರ ಸೆಟ್‌ನಲ್ಲಿ ಇರುವ ಯಾರೂ ಮಾಂಸಾಹಾರ ತಿನ್ನಬಾರದು ಅಂತ ರಿಷಬ್ ಹೇಳಿದ್ದಿದ್ದರೆ ಖಂಡಿತ ತಪ್ಪು. ಅವರ ವೈಯಕ್ತಿಕ ನಿರ್ಧಾರ-ನಡೆಗಳನ್ನು ಕುರಿತು ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದು; ಅದನ್ನು ಬಿಟ್ಟು, ಸಿನಿಮಾ ಗೆಲ್ಲಲೇಬಾರದು ಅನ್ನುವ ಮಟ್ಟಿಗಿನ ಚರ್ಚೆ ಅಗತ್ಯವಿಲ್ಲದ್ದು.

ಇನ್ನು, ನಂಬಿಕೆಗಳ ಕುರಿತು ಮಾತಾಡೋದಾದರೆ, ಇನ್ನೂ ನಮ್ಮ-ನಮ್ಮ ಮನೆಗಳಲ್ಲಿ ಮುಟ್ಟಾದಾಗ ದೇವರ ಮನೆಗೆ ಪ್ರವೇಶ ಇರುವುದಿಲ್ಲ. ನಾವು ಅದನ್ನು ಪಾಲಿಸದಿದ್ದರೆ, "ನಿನ್ನ ಮನೇಲಿ ನಿಂಗೆ ಬೇಕಾದ ಹಾಗಿರು, ನಮ್ಮನೇಲಿ ಸ್ವಲ್ಪನಾದ್ರೂ ಮಡಿ-ಮೈಲಿಗೆ ಇಟ್ಕೋ," ಎನ್ನುವ ಹಿರಿಯರಿದ್ದಾರೆ. ಹಬ್ಬದ ದಿನಗಳಲ್ಲಿ ಉಪವಾಸ ಮಾಡುತ್ತೇವೆ. ಶ್ರಾವಣದಲ್ಲಿ, ಶನಿವಾರ-ಸೋಮವಾರ ಮಾಂಸಾಹಾರ ತಿನ್ನುವುದಿಲ್ಲ ಅನ್ನುವವರಿದ್ದಾರೆ. ಸಸ್ಯಾಹಾರದಲ್ಲೂ ಬೇಯಿಸಿದ್ದು ತಿನ್ನದೆ, ಬರೀ ಫಲಾಹಾರ ಮಾಡೋರಿದ್ದಾರೆ. 'ಮಾಂಸಾಹಾರ ತಿನ್ನಬಾರದು' ಎಂಬುದನ್ನು ವಿರೋಧಿಸೋದು ಸರಿ. ಆದರೆ, ಒಂದು ಸಿನಿಮಾ ಗೆಲ್ಲಬಾರದು ಅನ್ನೋ ಉದ್ದೇಶದಲ್ಲಿ ಅಷ್ಟೊಂದು ಟೀಕೆ ಮಾಡುವುದು ಸರಿ ಅನ್ನಿಸಲಿಲ್ಲ.

-ಸಮುದ್ಯತಾ


'ಯಕ್ಷಗಾನದ ಭಾಷೆಯಲ್ಲಿ ಹೇಳುವುದಾದರೆ - ಇದೊಂದು ಅಜ್ಜಿ ಕತೆ'

ನಾನು ದೈವ ಆಚರಣೆಯ ಭಾಗವಾಗಿ ಇರುವುದರಿಂದ ನನಗೆ ಚಿತ್ರ ನೋಡುತ್ತ, ಅನೇಕರು ಹೇಳುವಂತಹ ರೋಮಾಂಚನವೇನೂ ಆಗಲಿಲ್ಲ. ಆದರೆ, ಭೂತದ ನರ್ತನದಲ್ಲಿ ಪಳಗುವುದು ಮತ್ತು ಕೋಣಗಳ ಬಾಲ ಹಿಡಿದು ಚಿಮ್ಮು ಹಲಗೆಯ ಮೇಲೆ ನಿಂತು ಕೆಸರುಗದ್ದೆಯಲ್ಲಿ ಸಾಗುವುದು ಎರಡೂ ಸುಲಭದ ಮಾತಲ್ಲ. ಅದು ಅನೇಕರಿಗೆ ಬಾಲ್ಯದಿಂದಲೇ ನಿರಂತರ ಅಭ್ಯಾಸದಿಂದ ಒಲಿಯುವುದು. ರಿಷಬ್ ಒಬ್ಬ ನಟನಾಗಿ ಅವೆರಡರಲ್ಲೂ ಪಕ್ವತೆ ತೋರಿದ್ದಾರೆ. ಭೂತ ಕುಣಿತದಲ್ಲಿ ಸಿರಿ ಎತ್ತಿ ದೇಹ ಬಳುಕಿಸಿರುವುದು ಯಾವುದೇ ಪಳಗಿದ ದೈವ ನರ್ತಕನಷ್ಟೇ ನೋಡಲು ಸೊಗಸು. ಈ ಆರಾಧನಾ ಸಂಸ್ಕೃತಿ ಅರಿವಿರುವರಿಗಂತೂ ಅವರ ಭೂತ ನಾಟ್ಯದಲ್ಲಿನ ಸಹಜತೆ ಖಂಡಿತವಾಗಿಯೂ ಖುಷಿ ಕೊಡುತ್ತದೆ.

ಅಂಚಿನ ಸಮುದಾಯಗಳು (Marginalised communities) ಇರುವಲ್ಲಿಗೆ ಪ್ರಭುತ್ವ (ಸ್ಟೇಟ್) ತಲುಪುವುದು, ಸರ್ಕಾರಿ ನ್ಯಾಯ ವ್ಯವಸ್ಥೆ ಹಾಗೂ ಗ್ರಾಮ ಮಟ್ಟದ ಆಂತರಿಕ ನ್ಯಾಯ ವ್ಯವಸ್ಥೆಯ ಸಂಘರ್ಷವನ್ನು ಚಿತ್ರ ನಮ್ಮ ಮುಂದಿಡುತ್ತದೆ.

ಚಿತ್ರದಲ್ಲಿ ನನಗೆ ಅತ್ಯಂತ ಸಮಾಧಾನ ತಂದ ಭಾಗವೆಂದರೆ, ಕೊನೆಯಲ್ಲಿ ದೈವ ಎಲ್ಲರನ್ನೂ ತನ್ನ ಮಕ್ಕಳಂತೆ ಸಲಹುತ್ತೇನೆ ಎಂದು ಆಂಗಿಕವಾಗಿ ತೋರಿಸಿ, ಎಲ್ಲರನ್ನೂ ಜೀಟಿಗೆಯೊಂದಿಗೆ (ದೊಂದಿ) ಒಟ್ಟಾಗಿ ಹಿಡಿಯುವುದು. ರಿಷಬ್ ಅಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇಲ್ಲಿ ಎಲ್ಲರೂ ಎಂದರೆ ಊರ ಎಲ್ಲರೂ ಮತ್ತು ಸರ್ಕಾರದ ಪ್ರತಿನಿಧಿಯನ್ನೂ ಸೇರಿ. ಆದರೆ, ವಾಸ್ತವ ಅಷ್ಟು ಸಲೀಸಿನದ್ದಲ್ಲ.   ಕಾಡಂಚಿಗೆ ಪ್ರಭುತ್ವ ತಲುಪಿದಾಗ, ಪ್ರಭುತ್ವವು ಕಾಡಂಚಿನ ಜನರನ್ನು ನಿರಂತರವಾಗಿ ಹಿಂಸಿಸಿದೆ. ಭೂಸ್ವಾಧೀನ ಪ್ರಕ್ರಿಯೆಗಳಲ್ಲೂ ಯಾವ ದೈವದ ನುಡಿಗೂ ಬೆಲೆ ಕೊಡದೆ ಪ್ರಭುತ್ವ ಮುಂದಡಿ ಇಟ್ಟ ಉದಾಹರಣೆಗಳೇ ನಮಗೆ ಸಿಗುವುದು. ಆದರೆ, ಈ ಚಿತ್ರದಲ್ಲಿ ಎಲ್ಲವನ್ನೂ ಕೊನೆಗೆ ಸರಿದೂಗಿಸಲು ಪ್ರಯತ್ನಿಸಲಾಗಿದೆ.

ಅನೇಕರ ಉತ್ತಮ ಅಭಿನಯಗಳಿದ್ದರೂ 'ಕಾಂತಾರ'ದಲ್ಲಿ ನ್ಯೂನತೆ ಇರುವುದು ಅದರ  ನಿರೀಕ್ಷಿತವೇ (predictable) ಆದ ಕತೆಯ ಬೆಳವಣಿಗೆಯಲ್ಲಿ. ಕಥಾನಾಯಕಿಯ ದ್ವಂದ್ವ ಮತ್ತು ಮಾನಸಿಕ ತೊಳಲಾಟವನ್ನು ಕತೆ ಪರೀಕ್ಷಿಸಲು ಹೋಗುವುದಿಲ್ಲ. ಗೊರವ ಸತ್ತಾಗ ಜೈಲಿನಲ್ಲಿದ್ದ ಶಿವ ತೀವ್ರವಾಗಿ ಮರುಗುತ್ತಾನೆ. ಅವರಿಬ್ಬರ ಅನ್ಯೋನ್ಯತೆಯನ್ನು ಕೂಡ ಕತೆಯ ಬೆಳವಣಿಗೆಯಲ್ಲಿ ನಾವು ಅಷ್ಟಾಗಿ ನೋಡುವುದಿಲ್ಲ. ಮೊದಲಾರ್ಧದಲ್ಲಿ ಬರುವ ಅನೇಕ ಉದ್ದೇಶಪೂರ್ವಕ (forced) ಹಾಸ್ಯ ದೃಶ್ಯಗಳಿಗಿಂತ ಮೇಲಿನ ಎರಡು ವಿಷಯಗಳ ಕುರಿತು ಮಾತನಾಡಲು (explore) ಕತೆಯಲ್ಲೇ ಜಾಗವಿತ್ತು. ಸಿನಿಮಾದ ಕಮರ್ಷಿಯಲ್ ಸಕ್ಸಸ್‌ಗೆ ಏನು ಬೇಕೋ ಅದೆಲ್ಲವನ್ನೂ ನೀಟಾಗಿ ಪೋಣಿಸಿರುವುದರಿಂದ ಹೀಗಾಗಿದೆ.

ಚಿತ್ರದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಭೂತದ ನರ್ತನ ಮತ್ತು ಆಂಗಿಕ ಅಭಿನಯಕ್ಕೆ ಹಿನ್ನೆಲೆ ಸಂಗೀತವಾಗಿ 'ವರಾಹ ರೂಪಮ್...' ಫ್ಯೂಶನ್ ಹಾಡು ಬರುತ್ತದೆ. ನಿಜವಾಗಿ ಇಲ್ಲಿ ಇರಬೇಕಾದದ್ದು ಭೂತದ ಪಾಡ್ದನ. ಭೂತಾರಾಧನೆಯಲ್ಲಿ ದೈವದ ಹುಟ್ಟು, ವಿಕಾಸ, ಪ್ರಸರಣದ ಕತೆ ಹೇಳುವುದು ಪಾಡ್ದನಗಳೇ. ಇಲ್ಲಿ ಮಂತ್ರಗಳ ಸಾಲಿನಂತಹ ಹಾಡಿನ ಬಳಕೆ ಆ ಸಾಧ್ಯತೆಯನ್ನು ಬದಿಗಿಟ್ಟಿದೆ. ಹಾಗೆ ನೋಡಿದರೆ, ದೈವ ಪ್ರಧಾನವಾದ ಚಿತ್ರದಲ್ಲಿ ದೈವದ ಪಾಡ್ದನಕ್ಕೆ ಮಹತ್ವದ ಸ್ಥಾನವೇ ಇಲ್ಲ. 'ಲೇ ಲೇ...' ಅಂತ ಬರುವ ಒಂದು ಕಬಿತೆ ಜನಸಾಮಾನ್ಯರ ದಿನ ಬಳಕೆಯ ಜನಪದ ಕತೆ (ಫೋಕ್ ಟೇಲ್).  ಅದರ ಸಬ್‌ಟೈಟಲ್‌ನಲ್ಲಿ - ಹಾಡಲ್ಲೇ ಇಲ್ಲದ 'Varaha, fourth (or 3rd) incarnation of Lord Vishnu' ಎಂದು ಬರೆಯಲಾಗಿದೆ. ಇದು ಸಮಂಜಸವಲ್ಲ. ಹಾಡಿನ ಸಾಹಿತ್ಯದಲ್ಲಿ ಮತ್ತು ಇಡೀ ಚಿತ್ರದ ಕಥಾ ಸಂವಿಧಾನದಲ್ಲಿ ಈ ಉಲ್ಲೇಖ (appropriation) ಇಲ್ಲದೆ ಇರುವುದರಿಂದ, ಇದು ಕಣ್ತಪ್ಪಿನಿಂದಲೋ ಅಥವಾ ಸಾಂಸ್ಕತಿಕ ಎಚ್ಚರ ಇರದಿರುವುದರಿಂದಲೋ ಆಗಿರಬಹುದೆಂದು ಭಾವಿಸುವೆ.

'ಪಂಜುರ್ಲಿ'ಯನ್ನು 'ವಿಷ್ಣು'ವಿಗೆ ಜೋಡಿಸಲು ಆಚರಣೆಯಲ್ಲಾಗಲೀ, ಪಾಡ್ದನಗಳಲ್ಲಾಗಲೀ ನಮಗೆ ಯಾವುದೇ ಸಮರ್ಥನೆ ಇಲ್ಲ. ಪಂಜುರ್ಲಿಯ ಪಾಡ್ದನದ ಹತ್ತಾರು ರೂಪಗಳಲ್ಲಿ ನಮಗೆ ಮುಖ್ಯವಾಗಿ ಇರುವ ಕತೆ ಇದು: ಪಂಜುರ್ಲಿ ಎಂದರೆ ಪಂಜಿದ ಕುರ್ಲೆ, ಅಂದರೆ ಹಂದಿಯ ಮರಿ. ಅಣ್ಣ-ತಂಗಿ ಹಂದಿಗಳೆರಡು ಘಟ್ಟ ಇಳಿದು ಬರುವುದು. ಘಟ್ಟದ ಕೆಳಗೆ ಅದರ ಸಂತಾನ ಇರದೆ ಇರುವುದರಿಂದ ಕುಕ್ಕೆಯ 'ಸುಬ್ರಾಯ' ದೇವರ ಬಳಿ ತಮ್ಮನ್ನು ಗಂಡ-ಹೆಂಡತಿ ಮಾಡುವಂತೆ ಕೇಳಿಕೊಳ್ಳುತ್ತಾರೆ. ದೇವರು ಒಪ್ಪಿ, ಮುಂದೆ ಇವರಿಗೆ ಹುಟ್ಟುವ ಹಂದಿ ಮರಿ ಈಸ್ವರನ ತೋಟಕ್ಕೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತದೆ. ಈಸ್ವರ ಬಿಲ್ಲು-ಬಾಣ, ಕೋವಿ ಬಳಸಿ ಹಂದಿ ಮರಿಯನ್ನು ಕೊಲ್ಲುತ್ತಾನೆ. ಪಾರ್ವತಿಯ ಆಸೆಯಂತೆ ಈ ಹಂದಿ ಮರಿ ಮುಂದೆ ಪಂಜುರ್ಲಿಯಾಗಿ ಜನರಿಂದ ಆರಾಧಿಸಲ್ಪಡುತ್ತದೆ.

ಹಲವು ಪಾಡ್ದನಗಳ ಕತೆಯಲ್ಲಿ, ಸಹಜವಾಗಿ ಎಲ್ಲ ಜನಪದ ಕಾವ್ಯಗಳಲ್ಲಿ ಆಗುವಂತೆ ಈ ಕತೆಯಲ್ಲೂ ಸಾಕಷ್ಟು ರೂಪಗಳಿವೆ. ಎಲ್ಲವನ್ನೂ ಬರೆಯಲು ಹೋಗುವುದಿಲ್ಲ. ಆದರೆ, ಎರಡು ಸಂಗತಿ ಉಂಟು. ಒಂದು - ಕುಕ್ಕೆಯ ದೇವರು ಸುಬ್ರಾಯ ಎನ್ನುವುದು. ಕುಕ್ಕೆಯ ದೇವರು ಮೂಲತಃ ಮಲೆ ಕುಡಿಯರಿಗೆ ಸೇರಿದ್ದು. ಈ ಕುರಿತು ಪೂವಪ್ಪ ಕಾಣಿಯೂರು ಅವರ 'ಕುಕ್ಕೆಯಲ್ಲಿ ನಾಗರ ಮಡಿಕೆ' ಎನ್ನುವ ಒಳ್ಳೆಯ ಸಂಶೋಧನಾ ಗ್ರಂಥವಿದೆ. ಆಸಕ್ತರು ಓದಬಹುದು. (ಕುಕ್ಕೆಯಲ್ಲಿ ಪ್ರಚಲಿತ ಇರುವ ಲಿಖಿತ ಪರಂಪರೆಯ ವೈದಿಕ ಪುರಾಣಗಳು - ಕುಕ್ಕೆಯ ಅವೈದಿಕ ಶೈವ ಮೂಲದ ಇತರ ಆರಾಧನಾ ಪರಂಪರೆಗಳನ್ನು ಗೌಣವಾಗಿಸಿವೆ. ಆದರೆ, ಜನಪದ ನಿರೂಪಣೆಗಳು ಮತ್ತು ಸಿದ್ದ ಪರಂಪರೆಗಳಲ್ಲಿ ಅನುಷ್ಠಾನದಲ್ಲಿದ್ದ ಆರಾಧನಾ ಮೂಲದ ಪಳೆಯುಳಿಕೆಗಳು ಕುಕ್ಕೆಯ ಕುರಿತಾಗಿ ಭಿನ್ನವಾದ ಚರಿತ್ರೆಯನ್ನು ಹೇಳುವಷ್ಟು ಸಶಕ್ತವಾಗಿವೆ.)

ಇಲ್ಲಿ ಈಸ್ವರ ದೇವರೇ ಜಮೀನಿನ ಒಡೆಯನೇ ಎಂದು ಅಷ್ಟೇನೂ ಸ್ಪಷ್ಟತೆ ದೊರಕುವುದಿಲ್ಲ. ಇಲ್ಲಿ ಎಲ್ಲೂ ಈಸ್ವರ ತ್ರಿಶೂಲ ಬಳಸುವುದಿಲ್ಲ. ಕೆಲವಲ್ಲಿ ಬಿಲ್ಲು ಬಾಣ, ಕೆಲವಲ್ಲಿ ಕೋವಿಯನ್ನು ಬಳಸಿ ಹಂದಿಯನ್ನು ಕೊಲ್ಲುತ್ತಾನೆ. ಈಸ್ವರನನ್ನು ಬೇಸಾಯಗಾರನನ್ನಾಗಿ ಚಿತ್ರಿಸಿದ ಸಂದರ್ಭಗಳು ತುಳು ಜನಪದ ಸಾಹಿತ್ಯದಲ್ಲಿ ಸಾಕಷ್ಟಿವೆ. 'ಟ್ರೆವೆಲೆ ಬಾಲೆ ಬಾಲೆ ಪೋಲಿಯೇ' ಎಂಬ ತುಳು ಕಬಿತದಲ್ಲಿ ಈಸ್ವರ ಒಬ್ಬ ದೊಡ್ಡ ಬೇಸಾಯಗಾರನ ಹಾಗೆ ಕಾಣಿಸಿಕೊಂಡಿದ್ದಾನೆ ('ತುಳು ಜನಪದ ಸಾಹಿತ್ಯ' - ವಿವೇಕ್ ರೈ).

ಇನ್ನು, ಅಣ್ಣ-ತಂಗಿಯರ ಲೈಂಗಿಕ ಸಂಬಂಧದ ನಿಷೇಧದ ಕುರಿತಾಗಿಯೂ ತುಳು ಜಾನಪದದಲ್ಲಿಯೇ ಕತೆಗಳಿವೆ. ಅಣ್ಣ ತಂಗಿಯನ್ನು ಮದುವೆಯಾಗಲು ಬಯಸುವುದು, ತಂಗಿ ಒಪ್ಪದೆ ಹೊಳೆಗೆ ಹಾರುವುದು, ಅಲ್ಲಿ ಅವಳು ಬಾಳೆ ಮೀನಾಗುವುದು, ಅಣ್ಣನೂ ಹಾರಿ ಮುಗುಡು ಮೀನಾಗುವುದು. ಹಾಗಾಗಿ, ಇವೆರಡನ್ನೂ ಒಟ್ಟಿಗೆ ಬೇಯಿಸಬಾರದು, ಬಳಸಬಾರದು ಎಂಬ ನಂಬಿಕೆ ತುಳು ಜಾನಪದದಲ್ಲಿದೆ. ಇವೆಲ್ಲ ಕಲ್ಪನೆಗಳೇ ಇನ್ನೊಂದು ರೀತಿಯಲ್ಲಿ ಪಂಜುರ್ಲಿಯ ಪಾಡ್ದನದಲ್ಲಿ ಕೂಡ ವ್ಯಕ್ತವಾಗಿವೆ.

ತೀರಾ ಅಪರೂಪಕ್ಕೆ ಸಿಗುವ ಪಂಜುರ್ಲಿಯ ಒಂದೆರಡು ಪಾಡ್ದನಗಳಲ್ಲಿ ವೈದಿಕ ಪುರಾಣಕ್ಕೆ ಹೋಲುವ, 'ಭೂಮಿಗೆ ಬಿದ್ದ ನಾರಾಯಣ ದೇವರ ಹೊಕ್ಕಳಿನ ಭಾಗದ ಬೆವರಿನ ಹನಿಯಿಂದ ಹಂದಿಯ ಸೃಷ್ಟಿ ಆಗಿದೆ' ಎನ್ನುವ ಉಲ್ಲೇಖವನ್ನು ನೋಡಬಹುದು. ನಾರಾಯಣನ ಉಲ್ಲೇಖವಿರುವ, ವೈಷ್ಣವ ಪರಂಪರೆಯ ಪ್ರಭಾವ ಇರುವ ಪಾಡ್ದನಗಳು ಉಳಿದವಕ್ಕಿಂತ ನಂತರದ್ದು ಎನ್ನುವುದು ಸ್ಪಷ್ಟ. ತುಳುನಾಡಿನಲ್ಲಿ ವೈಷ್ಣವ ಆರಾಧನೆ ಸುಮಾರು ಕ್ರಿ.ಶ 11ನೇ ಶತಮಾನಕ್ಕೆ ಶುರುವಾಯಿತು. 13ನೇ ಶತಮಾನದ ಕೊನೆಯಲ್ಲಿ ಮಧ್ವರು ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿದ್ದು. ತುಳುನಾಡಿನಲ್ಲಿ ಶೈವ ಧರ್ಮವೇ ಪ್ರಾಚೀನ. ಕ್ರಿ.ಶ 5ನೇ ಶತಮಾನದಿಂದಲೇ ತುಳುನಾಡಿನಲ್ಲಿ ಶೈವ ಧರ್ಮದ ಅಸ್ತಿತ್ವಕ್ಕೆ ಶಾಸನಗಳ ಸಮರ್ಥನೆ ಇದೆ. ಪಾಡ್ದನಗಳಲ್ಲೂ ಈಸ್ವರನಿಗೆ ದೇವರಿಗಿಂತ ಹೆಚ್ಚಾಗಿ ಗ್ರಾಮೀಣ ರೈತನ ಸ್ಥಾನ ನೀಡಲಾಗಿದೆ. ಇವೆಲ್ಲ ಗಮನದಲ್ಲಿಟ್ಟಿಕೊಂಡು ನೋಡಿದರೆ, ಭೂದೇವಿಯನ್ನು ಅಡಗಿಸಿಟ್ಟ ಹಿರಣ್ಯಾಕ್ಷನನ್ನು ಕೊಲ್ಲಲು ಬಂದ ವಿಷ್ಣುವಿನ ಅವತಾರಕ್ಕೆ ಪಂಜುರ್ಲಿಯನ್ನು ಆರೋಪಿಸುವುದು ಸಮಂಜಸವಲ್ಲ.

ಕಾಲಾನಂತರದಲ್ಲಿ ಬ್ರಾಹ್ಮಣರ ಮನೆಗಳಲ್ಲೂ ದೈವವನ್ನು ನಂಬುವ ಕ್ರಮ ಹುಟ್ಟಿತು. ಇಲ್ಲಿಯೂ ಗಮನಿಸಬೇಕಾದದ್ದು - ವೈದಿಕರು ಹೆಚ್ಚಾಗಿ ಪುರಾಣ ಮತ್ತು ಪೃಕೃತಿ ಮೂಲದ ದೈವಗಳನ್ನು ನಂಬುತ್ತಾರೆಯೇ ವಿನಾ ಅಸ್ಪ್ರಶ್ಯ ಮನುಷ್ಯರೇ ದೈವಗಳಾದ ಪ್ರಮೇಯವನ್ನು ನಂಬುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಕರಾವಳಿಯಲ್ಲಿ ಮಾಧ್ವರ ಪ್ರವರ್ಧಮಾನದ ನಂತರ ಈಸ್ವರನನ್ನು ಉಲ್ಲೇಖಿಸುವ ಪಾಡ್ದನಕ್ಕೆ ಪ್ರತಿಯಾಗಿ ನಾರಾಯಣನ ಉಲ್ಲೇಖವಿರುವ ಪಾಡ್ದನ ಹುಟ್ಟಿರಬೇಕು. ಕೆಲವು ಸಂಧಿಗಳಲ್ಲಿ ಉಲ್ಲೇಖವಾಗುವ ಮನೆತನವೂ ಸ್ಥಾನಿಕರಿಗೆ ಸೇರಿದ್ದು. ಸ್ಥಾನಿಕರಿಗೆ ವೈದಿಕ ಪರಂಪರೆಯಲ್ಲಿ ಯಾವ ಸ್ಥಾನವಿದೆ ಎನ್ನುವುದು ಬೇರೆಯೇ ಚರ್ಚೆ. ಈ ಸಿನಿಮಾದಲ್ಲಿ ಪ್ರಮುಖವಾಗಿ ಪುನರಾವರ್ತನೆ ಆಗುವ ಪದ್ಯದಲ್ಲಿ ಬಳಸಲಾದ ಸಾಂಸ್ಕೃತಿಕ ಪದಗಳು ಹೊರಜಗತ್ತಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಬೇರೆಯೇ ಅರ್ಥ ಕೊಡುವುದರಿಂದ ಇಷ್ಟು ಬರೆಯಬೇಕಾಯಿತು.

"ನಾವು ಬಂದದ್ದು ಎಲ್ಲಿಂದ ಎಂದು ಮರೆತುಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ," ಎನ್ನುವ ಸಂಭಾಷಣೆ ಚಿತ್ರದ ಆರಂಭದಲ್ಲೇ ಬರುತ್ತದೆ. ಇದನ್ನು ತಂದೆ ಮಗನಿಗೆ ಹೇಳುತ್ತಾನೆ.  ಈ 'ಮರೆತುಬಿಡುವುದು' ಎಂದರೆ ಏನು? ಗತದ ಹಳಹಳಿಕೆ ರಾಜಕೀಯವಾಗಿ ಯಾವ ಪ್ರತಿಪಾದನೆಗೆ (ನರೇಟಿವ್) ನೆರವು ನೀಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ವಾಸ್ತವದಲ್ಲಿ ಮಾನವನ ವಲಸೆಯನ್ನು ಗಮನಿಸಿದರೆ, ಎಲ್ಲರೂ ಒಂದು ಕಡೆಯಿಂದ ಒಂದು ಕಡೆಗೆ ಹೋದವರೇ. ತುಳುನಾಡಿನ ಆದಿವಾಸಿಗಳು ಯಾರು ಎಂಬುದನ್ನು ಈವರೆಗೆ ಸ್ಪಷ್ಟವಾಗಿ ಯಾರೂ ಗುರುತಿಸಿಲ್ಲ. ಕಾಡುಗಳಲ್ಲಿ ವಾಸ ಮಾಡುತ್ತಿರುವ ಕೆಲವು ವರ್ಗದವರಲ್ಲಿ ಪ್ರಾಚೀನ ಸಂಸ್ಕೃತಿಯ ಪಳೆಯುಳಿಕೆಯನ್ನು ನೋಡಬಹುದು. ತುಳುನಾಡಿನ ಅರಣ್ಯಗಳಲ್ಲಿ ವಾಸಿಸುತ್ತಿದ್ದ 'ಕೋಶರ್' ಜನಾಂಗದವರ ಬಗ್ಗೆ ತಮಿಳು ಸಂಘಮ್ ಪದ್ಯಗಳಲ್ಲಿ ಉಲ್ಲೇಖವಿದೆ. ತುಳುನಾಡಿನ ಶುರುವಾತಿನ ಅರಸ ಮನೆತನ ಅಳುಪರ ಸೈನ್ಯದಲ್ಲೂ ಹೊಲೆಯರು ಸೈನಿಕರಾಗಿ ಕೆಲಸ ಮಾಡಿದ ದಾಖಲೆ ಸಿಗುತ್ತದೆ. ಹೊಲೆಯರನ್ನು ತುಳುನಾಡಿನಲ್ಲಿ ರೂಢಿಯಲ್ಲಿ ಕೆಲವೆಡೆ 'ಮೂಲೋಡಕುಳು' (ಮೂಲದವರು) ಎಂದೂ ಕರೆಯುವುದುಂಟು.

ಇಷ್ಟನ್ನು ಬಿಟ್ಟು, ಚಿತ್ರದ ಪ್ರಚಾರ ನಿಮಿತ್ತ ರಿಷಬ್ ಕೊಟ್ಟ ಸಂದರ್ಶನಗಳಲ್ಲಿ ನನಗೆ ಕಂಡ ಅನೇಕ ಸಾಂಸ್ಕೃತಿಕ ಬಂಧಗಳು (Cultural Appropriation) ನನಗೆ ಚಿತ್ರದ ಒಳನಿಂತು ನೋಡಿದಾಗ ಕಂಡಿಲ್ಲ.

ಪಂಜುರ್ಲಿಯ ಪಾಡ್ದನದಲ್ಲಿ ತುಳುನಾಡಿನ ಹುಟ್ಟಿನ ಉಲ್ಲೇಖವಿದೆ. ಭೂತಾರಾಧನೆಯಲ್ಲಿ ಹಲವು ಪ್ರಕಾರಗಳಿವೆ. ಪ್ರಾಕೃತಿಕ ಶಕ್ತಿಗಳ ಆರಾಧನೆ ಒಂದು ಪ್ರಕಾರ. ಇಲ್ಲಿ ಬೆಳೆದ ಬೆಳೆಯನ್ನು ನಾಶ ಮಾಡುತ್ತಿದ್ದ ಹಂದಿಗಳಿಂದ ಕಾಪಾಡುವ ಶಕ್ತಿಯಾಗಿ ಪಂಜುರ್ಲಿ ಆರಾಧನೆ ಆಚರಣೆಗೆ ಬಂತು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ತುಳುನಾಡಿನಲ್ಲಿ ಪಂಜುರ್ಲಿಯಂತಹ ದೈವಗಳು ಬಹುಸಂಖ್ಯಾತರ ಆಚರಣೆಯಲ್ಲಿ ಮಾಂಸಾಹಾರಿ. ಜೈನರು ಮತ್ತು ವೈದಿಕ ಆಚರಣೆಗಳ ಜಾಸ್ತಿ ಪ್ರಭಾವ ಇರುವ ಮೇಲ್ವರ್ಗದ ಜಮೀನ್ದಾರಿ ಮನೆತನಗಳಲ್ಲಿ ಸಸ್ಯಾಹಾರಿ. ಚಿತ್ರದಲ್ಲಿ ತೋರಿಸುವ ಮತ್ತು ನಿರ್ದೇಶಕರು ಸಂದರ್ಶನಗಳಲ್ಲಿ ಒತ್ತಿ-ಒತ್ತಿ ಹೇಳುವ - ಒಂದು ತಿಂಗಳು ಮಧು, ಮಾಂಸ ಬಿಟ್ಟು ಆಚರಿಸುವ ಕ್ರಮ ಸಾರ್ವತ್ರಿಕವಾದದ್ದಲ್ಲ.

ದೈವಗಳು 'ಜೋಗ' ಮತ್ತು 'ಮಾಯ'ದ ನಡುವಿನ ಮಧ್ಯಂತರ ಜಗತ್ತಿನಲ್ಲಿ ವೇಷಧಾರಿ ವ್ಯಕ್ತಿಯಲ್ಲಿ ಬಂದು ನೆಲೆ ನಿಲ್ಲುತ್ತವೆ ಎಂಬುದು ಜನಪದರ ನಂಬಿಕೆ. ಅದಕ್ಕಾಗಿಯೇ ಭೂತ ಕಟ್ಟುವ ವ್ಯಕ್ತಿ ಪೂರ್ವಸಿದ್ಧತೆಯಾಗಿಯೇ ನಾಲ್ಕೈದು ಗಂಟೆಗಳ ಮುಂಚೆ ಕೋಲ ನಡೆಯುವ ಸ್ಥಳಕ್ಕೆ ಬಂದು ಪರಿಸರದೊಡನೆ ಬೆರೆಯುತ್ತಾನೆ. ಚಿತ್ರದ ಕೊನೆಯಲ್ಲಿ ಶಿವನ ಮೈಮೇಲೆ ಒಮ್ಮಿಂದೊಮ್ಮೆಯೇ ದೈವ ಬರುವಲ್ಲಿ ಬಳಕೆಯಾಗಿರುವುದು ಸೃಜನಶೀಲ ಸ್ವಾತಂತ್ರ್ಯ (Creative Freedom) ಅಷ್ಟೇ.

'ಮಾಯ' ಮತ್ತು 'ಜೋಗ' ತುಳು ಜಾನಪದದಲ್ಲಿ ಸಾಂಸ್ಕೃತಿಕವಾಗಿ ಬಹುಮುಖ್ಯ ಪದಗಳು. ಶಿವನ ತಂದೆ ಮಾಯ ಆಗುತ್ತಾನೆ, ಅದನ್ನು ಸಂಪೂರ್ಣವಾಗಿ ದೈವೀಕರಿಸಲಾಗಿದೆ. ಮಾಯ ತನ್ನಷ್ಟಕ್ಕೇ ಅಗೋದಿಲ್ಲ ಅನ್ನುವುದು ವೈಚಾರಿಕವಾಗಿ ಒಪ್ಪಿತ ಸತ್ಯ. ಅದಕ್ಕಾಗಿಯೇ ಎನ್ನುವಂತೆ ಶಿವನ ತಾಯಿಗೆ ಧಣಿಯ ಮಗನ ಮೇಲೆ ಅನುಮಾನ ಇದ್ದೇ ಇರುವಂತೆ ತೋರಿಸಲಾಗಿದೆ.

ದೈವ ಮೈಮೇಲೆ ಬಂದರೂ, ಆಚರಣೆಯಲ್ಲಿ ದೈವವೇ ನೇರವಾಗಿ ದುಷ್ಟನನ್ನು ಕೊಲ್ಲುತ್ತದೆ ಎನ್ನುವುದಕ್ಕೂ ಉದಾಹರಣೆಗಳಿಲ್ಲ. ಹಾಗಾಗಿಯೇ, ಕೊನೆಯಲ್ಲಿ ದೈವದ ಆವೇಶ ಕತ್ತಿ ಎತ್ತುವಲ್ಲಿಗೆ ಸೀಮಿತವಾಗುತ್ತದೆ. ಆ ದೃಶ್ಯವನ್ನು ಅಲ್ಲಿಗೆ ಕತ್ತರಿಸಿ, ನೇರವಾಗಿ ಕೋಲದ ದೃಶ್ಯ ಕಾಣಿಸಲಾಗಿದೆ.

ಇಷ್ಟೆಲ್ಲ ಹೇಳಿಯೂ ಒಂದು ಮಾತಂತೂ ಸತ್ಯ; ನಿರ್ಲಕ್ಷಿತ ಸಮುದಾಯವನ್ನು ಕಥಾನಾಯಕನನ್ನಾಗಿ ಮಾಡಿ, ಇಡೀ ಸಮುದಾಯವನ್ನು ಗೌರವಾಯುತವಾಗಿಯೇ ಚಿತ್ರದಲ್ಲಿ ನಡೆಸಿಕೊಂಡು ಅವರ ಕತೆ ಹೇಳಲಾಗಿದೆ. ಆದರೆ, ಈ ಒಟ್ಟು ಕತೆ ಒಂದು ಕಟ್ಟುಕತೆಯಂತೆ. ಯಕ್ಷಗಾನದ ಭಾಷೆಯಲ್ಲಿ ಹೇಳುವಂತೆ ಅಜ್ಜಿ ಕತೆಯಂತಿದೆ. ಕಾಂತಾರ - ಒಂದು ದಂತಕತೆ.

ಚಿತ್ರವು ನಿಮಗೆ ದೈವದ ಪ್ರಸ್ತುತಿಯನ್ನು ದೈವೀಕ ಶಕ್ತಿ ಸ್ವರೂಪದಲ್ಲಿಯೇ ನಂಬುವಂತೆ ಪ್ರಚೋದಿಸುತ್ತದೆ. ಹಾಗೆ ಮಾಡುವುದರಿಂದ ಭೂತಾರಾಧನೆಯಲ್ಲಿ ಅಡಕವಾಗಿರುವ ಅನೇಕ ಸಾಮಾಜಿಕ ಸಂಘರ್ಷದ ನಿರೂಪಣೆಗಳನ್ನು (ನರೇಟಿವ್ಸ್) ಅದು ಅಳಿಸದಿರಲಿ.

-ಕುಂಟಾಡಿ ನಿತೇಶ್


ಉತ್ತರ ಕರ್ನಾಟಕದ್ದೂ ಇಂಥದ್ದೇ ಸಿನಿಮಾ ಬರಬೇಕೆಂದರೆ ಏನು ಮಾಡಬೇಕು?

'ಕಾಂತಾರ' ಸಿನಿಮಾದ ನಂತರ ಹುಟ್ಟಿಕೊಂಡ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು, ಕನ್ನಡ ಸಿನಿಮಾಗಳಲ್ಲಿನ ಪ್ರಾದೇಶಿಕತೆ ಮತ್ತು ಸೊಗಡಿನ ಚರ್ಚೆ ಕೈಗೆತ್ತಿಕೊಳ್ಳುವ. ಏಕೆಂದರೆ, ಮೊದಲನೆಯದಕ್ಕಿಂತ ಇದು ಮಹತ್ವದ ಚರ್ಚೆ.

ಕನ್ನಡ ಸಿನಿಮಾಗಳಲ್ಲಿ ಇದುವರೆಗೆ ಬರೀ ಬೆಂಗಳೂರು, ಮಂಡ್ಯ, ಮೈಸೂರು, ಮಲೆನಾಡಿನ ಪ್ರಾದೇಶಿಕತೆ ಅಥವಾ ಪರಿಸರ ಅಥವಾ ಸೊಗಡು ಮಾತ್ರ ಇರುತ್ತಿತ್ತು. ಈಗ ಕರಾವಳಿಯ ಪ್ರಾದೇಶಿಕತೆ ಮತ್ತು ಸೊಗಡು ಹೆಚ್ಚೆಚ್ಚು ಪ್ರಸಿದ್ಧವಾಗುತ್ತಿದೆ. ಆದರೆ, "ಎಂದಿನಂತೆ ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡನ್ನು ಕನ್ನಡ ಚಿತ್ರರಂಗ ಕಡೆಗಣಿಸುತ್ತದೆ. ಉತ್ತರ ಕರ್ನಾಟಕದ ಸೊಗಡನ್ನು ಹಾಸ್ಯಾಸ್ಪದವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ," ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಿದೆ, ಈಗಲೂ ಇದೆ. "ಉತ್ತರ ಕರ್ನಾಟಕದಲ್ಲಿ ಒಂದು ಫಿಲ್ಮ್ ಚೇಂಬರ್ ಮಾಡಿದರೆ ಈ ಸಮಸ್ಯೆ ಸರಿಹೋಗುತ್ತದೆ. ಎಲ್ಲದಕ್ಕೂ ಬೆಂಗಳೂರಿನ ಮೇಲೆ ಅವಲಂಬಿತವಾಗುವುದರಿಂದಲೇ ಹೀಗಾಗಿದೆ. ಉತ್ತರ ಕರ್ನಾಟಕ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟಿದೆ, ಈಗ ಸಾಂಸ್ಕೃತಿಕವಾಗಿಯೂ ಕಡೆಗಣಿಸಲ್ಪಡುತ್ತಿದೆ," ಎಂಬುದು ಸಾಮಾಜಿಕ ತಾಣಗಳಲ್ಲಿ ವ್ಯಕ್ಯವಾಗುತ್ತಿರುವ ಅಭಿಪ್ರಾಯಗಳು.

ವಾಸ್ತವದಲ್ಲಿ 'ಫಿಲ್ಮ್ ಚೇಂಬರ್'ಗೂ 'ಪ್ರಾದೇಶಿಕತೆ'ಗೂ ಸಂಬಂಧವೇ ಇಲ್ಲ. ಸದ್ಯಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹೆಚ್ಚಾಗಿ ಸಕ್ರಿಯವಾಗಿರುವುದು ಸಿನಿಮಾದ ಹೆಸರುಗಳನ್ನು ನೋಂದಾಯಿಸಿಕೊಳ್ಳುವ ಕೆಲಸದಲ್ಲಿ ಮತ್ತು ಯಾವುದಾದರೂ ಸಮಸ್ಯೆ ಅಥವಾ ವಿವಾದ ಹುಟ್ಟಿಕೊಂಡಾಗ ಅದನ್ನು ಬಗೆಹರಿಸುವ ಪ್ರಯತ್ನದಲ್ಲಿ. ಸಿನಿಮಾದ ಹೆಸರು ನೋಂದಾಯಿಸಲು ಮತ್ತು ಸಿನಿಮಾದ ಸೆನ್ಸಾರ್ ಮಾಡಿಸಲು ಬೆಂಗಳೂರಿನ ಮೇಲೆ ಅವಲಂಬಿತವಾಗಬೇಕೇ ಹೊರತು, ಒಟ್ಟು ಸಿನಿಮಾ ಮಾಡಲು ಬೆಂಗಳೂರನ್ನು ಅವಲಂಬಿಸುವ ಅಗತ್ಯವೇ ಇಲ್ಲ. ಸೆನ್ಸಾರ್ ಮಂಡಳಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ; ಅದು ರಾಜ್ಯ ರಾಜಧಾನಿಯಲ್ಲದೆ ಬೇರೆಲ್ಲೂ ಬ್ರಾಂಚ್ ಆಫೀಸ್ ತೆರೆಯುವುದಿಲ್ಲ. ಸಿನಿಮಾ ಹೆಸರಿನ ದೃಢೀಕರಣ ಪತ್ರವಷ್ಟೇ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯ ನಡುವೆ ಇರುವ ನಂಟು. ಉಳಿದಂತೆ ಸಿನಿಮಾದ ಬೇರೆ ಎಲ್ಲ ಕೆಲಸಗಳನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಕುಳಿತು ಮಾಡಿಕೊಳ್ಳಬಹುದು. ತಂತ್ರಜ್ಞರು, ನಟರು ಮತ್ತು ಚಿತ್ರೀಕರಣಕ್ಕೆ ಅಗತ್ಯ ಉಪಕರಣಗಳನ್ನು ಸರಬರಾಜು ಮಾಡುವವರನ್ನು ಫೋನ್ ಮೂಲಕ ಸಂಪರ್ಕಿಸಿ, ವಿಡಿಯೊ ಕಾಲ್ ಮೂಲಕ ಭೇಟಿ ಮಾಡಿ ಮಾತನಾಡಿಕೊಂಡು, ಆನ್‌ಲೈನ್ ಪೇಮೆಂಟ್ ಮಾಡಿ, ಒಪ್ಪಂದ ಖಚಿತಪಡಿಸಿಕೊಂಡು (Contract Mail Confirmation) ದಾಖಲೆಗಳನ್ನು (Physical Documentation) ಕೊರಿಯರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ವಿನಿಮಯ ಮಾಡಿಕೊಳ್ಳಬಹುದು.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಮೈಸೂರು ದಸರೆಯ ಹೊತ್ತಿಗೆ ಪದೇಪದೆ ಕೇಳಿಬರುವ 'ಮಹಿಷ' ನಿಜಕ್ಕೂ ಯಾರು?

ಮಂಗಳೂರು ಸಹ ಬೆಂಗಳೂರಿನಿಂದ ಬಲುದೂರವೇ ಇದ್ದರೂ, ಕನ್ನಡ ಸಿನಿಮಾದಲ್ಲಿ ಕರಾವಳಿಯ ಪ್ರಾದೇಶಿಕತೆ ಮತ್ತು ಸೊಗಡು ಪಸರಿಸಲು ಸಾಧ್ಯವಾಗುತ್ತದೆಂದರೆ, ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡು ಸಿನಿಮಾದಲ್ಲಿ ಬಳಕೆಯಾಗಲು ಬೆಂಗಳೂರು ದೂರವೆಂಬುದು ಕಾರಣ ಹೇಗಾಗುತ್ತದೆ? ಜಿಲ್ಲೆಗೊಂದರಂತೆ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತೆರೆದರೂ ಅದು ಸಾಧ್ಯವಾಗುವುದಿಲ್ಲ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಎಲ್ಲ ಭಾಷೆಗಳ ಸಿನಿಮಾ ರಂಗಗಳಲ್ಲೂ ತಲಾ ಒಂದೊಂದೇ ಚಲನಚಿತ್ರ ವಾಣಿಜ್ಯ ಮಂಡಳಿಗಳಿದೆ. ಆದರೂ ಆಯಾ ಭಾಷೆಗಳ ಸಿನಿಮಾಗಳಲ್ಲಿ ಆಯಾ ಭಾಗದ ಎಲ್ಲ ಪ್ರಾದೇಶಿಕ ಸೊಗಡನ್ನು ಸಿನಿಮಾಗಳ ಮೂಲಕ ಜನರಿಗೆ ಪರಿಚಯ ಮಾಡಲಾಗಿದೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ಆಪ್ತವಾಗಿಸಲಾಗಿದೆ. ಅಲ್ಲಿ ಸಾಧ್ಯವಾದದ್ದು ಕನ್ನಡದಲ್ಲಿ ಯಾಕೆ ಸಾಧ್ಯವಾಗಿಲ್ಲ?

ಬೆಂಗಳೂರು, ಮೈಸೂರು, ಮಲೆನಾಡು, ಕರಾವಳಿ ಭಾಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ನಟರು, ರಂಗಭೂಮಿಯ ಹಿನ್ನೆಲೆ, ಇತಿಹಾಸ ಉತ್ತರ ಕರ್ನಾಟಕ ಭಾಗದಲ್ಲಿದೆ. ಸಾಹಿತ್ಯಾಸಕ್ತರು, ಓದುಗರು ಮತ್ತು ಸಾಹಿತಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದೂ ಉತ್ತರ ಕರ್ನಾಟಕ ಎಂದರೇನೇ 'ಸೂಳಿಮಗನ,' 'ಅವನೌನ,' 'ಬೋಸುಡಿಮಗನಾ,' 'ಬಾಡ್ಕೋ,' 'ಹಡ್ಶಿಮಗನಾ,' 'ಹಡಾ' ಎಂಬಂತೆ ಪದ ಬಳಸುತ್ತ, "ಬೈಗುಳಗಳೇ ನಮಗೆ ಭೂಷಣ, ಅವು ಬೈಗುಳಗಳಲ್ಲ ಬಹುಮಾನ," ಎಂದು ಬಿಂಬಿಸುತ್ತ, ಉತ್ತರ ಕರ್ನಾಟಕ ಎಂದರೆ ಬೈಗುಳದ ಪದಗಳ ತವರು ಎಂಬ ತಪ್ಪು ಕಲ್ಪನೆಯನ್ನು ಮೊದಲಿನಿಂದಲೂ ಮೂಡಿಸಲಾಗಿದೆ.

ಇಂದಿನ 5ಜಿ ಕಾಲದ ಉತ್ತರ ಕರ್ನಾಟಕದ ಇನ್ಸ್ಟಾಗ್ರಾಮ್, ಫೇಸ್‌ಬುಕ್, ಯುಟ್ಯೂಬ್ ರೀಲ್ಸ್ ಸ್ಟಾರ್‌ಗಳು, ಡಬಲ್ ಮೀನಿಂಗ್ ಶಾರ್ಟ್ ಫಿಲ್ಮ್ ಶೂರರು ಉತ್ತರ ಕರ್ನಾಟಕದ ಪ್ರಾದೇಶಿಕತೆ, ಪರಿಸರ, ಸೊಗಡನ್ನು ಅದೇ ರೀತಿಯಾಗಿ ಕಟ್ಟಿಕೊಡುತ್ತಿದ್ದಾರೆ. ಅದನ್ನು ಮೀರಿದ ಉತ್ತರ ಕರ್ನಾಟಕವನ್ನು ಯಾಕೆ ಕಟ್ಟಿಕೊಡುತ್ತಿಲ್ಲ?

ಆ ಭಾಗದಲ್ಲಿ ಬರೆಯುವವರು ಕಡಿಮೆ ಇಲ್ಲ, ನಟಿಸುವವರು ಕಡಿಮೆ ಇಲ್ಲ, ಭೌಗೋಳಿಕವಾಗಿ ಸಾಕಷ್ಟು ವೈವಿದ್ಯತೆ ಇರುವ ಭಾಗ ಕೂಡ. ಉತ್ತರ ಕರ್ನಾಟಕ ಭಾಗದಿಂದ ಬಂದ ನಿರ್ಮಾಪಕರು, ನಟರು, ಬರಹಗಾರರು, ನಿರ್ದೇಶಕರುಗಳು ಸಹ ಸಿನಿಮಾದಲ್ಲಿ ಆ ಭಾಗದ ಪ್ರಾದೇಶಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೆ ಇರುವುದು ಬೇಸರದ ವಿಚಾರವೇ.

"ಕರ್ನಾಟಕದ ಒಂದು ಪ್ರಾದೇಶಿಕ ಸೊಗಡು ಕರ್ನಾಟಕದ ಇತರೆ ಭಾಗದ ಜನರಿಗೆ ಅರ್ಥವಾಗುವುದಿಲ್ಲ, ಆ ಕಾರಣಕ್ಕೆ ಸಿನಿಮಾಗಳಲ್ಲಿ ಬಳಕೆ ಆಗುತ್ತಿಲ್ಲ," ಎಂಬುದೆಲ್ಲ ಸುಳ್ಳು. ಕನ್ನಡದ ಮಕ್ಕಳ ಕರುಳ ಬಳ್ಳಿ ಒಂದೇ; ಕನ್ನಡದವರಿಗೆ ಕನ್ನಡವೇ ಅರ್ಥವಾಗುವುದಿಲ್ಲ ಅನ್ನುವ ನೆಪವನ್ನು ಒಪ್ಪಲಾಗದು. ಕೋಲಾರ-ಮುಳಬಾಗಿಲು ಭಾಗದ ಕನ್ನಡ ಮಿಶ್ರಿತ ತೆಲುಗು ಸೊಗಡನ್ನು ಬಳಸಿಕೊಂಡು ನಿರ್ಮಿಸಿದ 'ಸಿನಿಮಾ ಬಂಡಿ' ಎಂಬ ಹೆಸರಿನ ಸಿನಿಮಾವನ್ನು ಆ ಭಾಷೆ ಅರ್ಥವಾಗದ, ಸಬ್‌ಟೈಟಲ್ ಓದಲು ಬಾರದ ಹಲವಾರು ಕನ್ನಡಿಗರೂ ನೋಡಿ ಮೆಚ್ಚಿದ್ದಾರೆ. 'ಅಪರೇಷನ್ ಜಾವಾ' ಎಂಬ, ಸಬ್‌ಟೈಟಲ್ಸ್ ಇಲ್ಲದ ಅಪ್ಪಟ ಮಲಯಾಳಂ ಸಿನಿಮಾ ಬಗ್ಗೆ ಕನ್ನಡದ ಪ್ರೇಕ್ಷಕರು ಹೊಗಳಿ ಬರೆದಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ 'ಕಮರ್ಷಿಯಲ್,' 'ಮಾಸ್,' 'ಆಕ್ಷನ್' ಎನ್ನಿಸಿಕೊಳ್ಳುವ ಮಾದರಿಯ ಸಿನಿಮಾಗಳಿಗೆ ಸಿಕ್ಕುವ ಬೆಂಬಲ ಪ್ರಯೋಗಾತ್ಮಕ ಸಿನಿಮಾಗಳಿಗೆ ಸಿಕ್ಕಿದ್ದು ಕಡಿಮೆಯೇ. ಅಲ್ಲಿನ ಪ್ರಾದೇಶಿಕತೆ ಮತ್ತು ಸೊಗಡನ್ನು ಗಂಭೀರವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಸಣ್ಣ ಮಟ್ಟದ ಪ್ರಯೋಗಗಳನ್ನು ಮಾಡುತ್ತ, ನಿಜವಾದ ಉತ್ತರ ಕರ್ನಾಟಕವನ್ನು ಕಟ್ಟಿಕೊಡುವ ಪ್ರಯತ್ನ ಇನ್ನು ಮುಂದಾದರೂ ಆಗಬೇಕಿದೆ.

ಸಿನಿಮಾ ಕೆಲಸಗಳಿಗೆ ಬೆಂಗಳೂರನ್ನು ಅವಲಂಬಿಸುವುದು ಬೇಕಾಗಿಲ್ಲ. ರಾಯಚೂರಿಗೆ ಹೈದರಾಬಾದ್ ಸಮೀಪದಲ್ಲಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿಗೆ ಪುಣೆ ಹತ್ತಿರದಲ್ಲಿದೆ. ಕ್ಯಾಮೆರಾ, ಲೆನ್ಸ್ ಇತ್ಯಾದಿ ಅಗತ್ಯ ಉಪಕರಣಗಳನ್ನು ಬೆಂಗಳೂರಿನಿಂದ ಕೊಳ್ಳುವ ಬದಲು ಪುಣೆ, ಮುಂಬೈ ಅಥವಾ ಹೈದರಾಬಾದಿನಿಂದ ಪಡೆದುಕೊಳ್ಳಬಹುದು. ಸಿನಿಮಾ ಚಿತ್ರೀಕರಣೋತ್ತರ ಕೆಲಸಗಳಿಗೆ ಹೆಚ್ಚಿನ ಸೌಲಭ್ಯಗಳು ಪುಣೆ, ಮುಂಬೈ ಮತ್ತು ಹೈದರಾಬಾದಿನಲ್ಲಿಯೇ ಸಿಗುತ್ತದೆ. ಬಂಡವಾಳ ಹೂಡಿಕೆ ಸಾಧ್ಯವಾದರೆ, ಉತ್ತರ ಕರ್ನಾಟಕದಲ್ಲೇ ಎಡಿಟ್, ಡಬ್ಬಿಂಗ್, ಸೌಂಡ್ ಡಿಸೈನ್ ಸೂಟ್ ಕೂಡ ಹಾಕಿಕೊಳ್ಳುವುದು ಸಾಧ್ಯ. Foley ಕೆಲಸಗಳನ್ನು ಮುಂಬೈ, ಹೈದರಾಬಾದ್ ಅಥವಾ ಪುಣೆ ಸ್ಟುಡಿಯೋಗಳಿಂದ ಮಾಡಿಸಿಕೊಳ್ಳಬಹುದು. ಕಲರ್ ಗ್ರೇಡಿಂಗ್ ಮಾಡಲು DaVinci Resolve software ಉಚಿತವಾಗಿ ಸಿಗುತ್ತದೆ, freelancing colorists ಸಿಗುತ್ತಾರೆ.

ಇನ್ನು ಬೇಕಿರುವುದು ಇಚ್ಛಾಶಕ್ತಿ ಮತ್ತು ಸಿನಿಮಾ ಪ್ರೇಮಿಗಳ ಬೆಂಬಲ. ಸಾಂಸ್ಕೃತಿಕವಾಗಿ ದೃಶ್ಯಮಾಧ್ಯಮದ ಮೂಲಕ ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡನ್ನು ಪಸರಿಸುವ ಕೆಲಸ.

-ವೀರೇಂದ್ರ ಮಲ್ಲಣ್ಣ

ನಿಮಗೆ ಏನು ಅನ್ನಿಸ್ತು?
8 ವೋಟ್
eedina app