Technical Issue

ಡಾಕ್ಟರ್‌ ಮಾತು | 'ನಾರ್ಮಲ್ ಬಿಪಿ' ಎಂದರೆ ಎಷ್ಟು, ಏನು? ಅದನ್ನು ಗೊತ್ತುಮಾಡಿಕೊಳ್ಳುವುದು ಹೇಗೆ?

ಜನಸಾಮಾನ್ಯರ ದಿನನಿತ್ಯದ ಆರೋಗ್ಯ ಸಂಗತಿಗಳ ಕುರಿತು ವೈದ್ಯರುಗಳು ಸರಳ ಮಾತಿನಲ್ಲಿ ತಿಳಿವಳಿಕೆ (ಟಿಪ್ಸ್) ನೀಡುವ ವಿಶೇಷ ಸರಣಿ ಇದು. ಈ ಕಂತಿನಲ್ಲಿ, 'ನಾರ್ಮಲ್ ರಕ್ತದೊತ್ತಡ (ಬ್ಲಡ್ ಪ್ರೆಶ್ಶರ್)' ಕುರಿತು ಮಾತನಾಡಿದ್ದಾರೆ ಡಾಕ್ಟರ್ ಎಚ್ ವಿ ವಾಸು. ಇವರು, ಜೀವನಶೈಲಿ ಬದಲಾವಣೆ ಮೂಲಕ ಡಯಾಬಿಟಿಸ್‌ಗೆ ಚಿಕಿತ್ಸೆ ನೀಡುವ ಕೇಂದ್ರವೊಂದರ ಉಸ್ತುವಾರಿ

ಸಕ್ಕರೆ ಕಾಯಿಲೆ (ಡಯಾಬಿಟಿಸ್ ಮೆಲ್ಲೈಟಸ್) ಮತ್ತು ರಕ್ತದೊತ್ತಡ (ಬಿಪಿ, ಹೈಪರ್ ಟೆನ್ಶನ್) ಅತ್ಯಂತ ಸಾಮಾನ್ಯವಾಗಿರುವ ಎರಡು ಆರೋಗ್ಯದ ಸಮಸ್ಯೆಗಳು. ಅದರಲ್ಲೂ, ನಲವತ್ತು ವರ್ಷ ದಾಟಿದವರಲ್ಲಿ ಗಣನೀಯ ಪ್ರಮಾಣದ ಜನರು ಈ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಈ ಸಮಸ್ಯೆಗಳು ಏಕೆ ಉಂಟಾಗುತ್ತವೆ? ಸಮಸ್ಯೆ ಬಾರದಂತೆ ಇರಲು ಏನು ಮಾಡಬೇಕು? ಬಂದರೆ ಅದಕ್ಕೆ ಚಿಕಿತ್ಸೆಯೇನು? ಈ ಸಂಗತಿಗಳನ್ನು ಕೂಲಂಕಷವಾಗಿ ಚರ್ಚಿಸಬೇಕು.

ಆದರೆ, ಒಂದು ದೊಡ್ಡ ಸಮಸ್ಯೆ ಎಂದರೆ, ನಮ್ಮ ರಕ್ತದಲ್ಲಿ ಎಷ್ಟು ಪ್ರಮಾಣದ ಸಕ್ಕರೆ ಇದ್ದರೆ ಅದು ಸಮಸ್ಯೆಯಲ್ಲ, ಎಷ್ಟು ಪ್ರಮಾಣದಲ್ಲಿ ಇದ್ದರೆ ಅದು ಸಕ್ಕರೆ ಕಾಯಿಲೆಯ ಸೂಚನೆ ಎಂಬ ಬಗ್ಗೆ ಹಲವರಿಗೆ ಗೊಂದಲ. ಅದೇ ರೀತಿ, ರಕ್ತದೊತ್ತಡವೂ ಎಷ್ಟಿದ್ದರೆ ಸರಿ, ಎಷ್ಟಿದ್ದರೆ ಚಿಕಿತ್ಸೆಯ ಅಗತ್ಯವಿದೆ ಎಂಬ ಪ್ರಶ್ನೆಯೂ ಬಹಳ ಜನರಿಗೆ ಇದೆ.

ಈ ರೀತಿ ಪ್ರಶ್ನೆ, ಗೊಂದಲ ಹುಟ್ಟಲೂ ಕಾರಣಗಳಿವೆ. ಎಲ್ಲರೂ ತಮ್ಮ ಶಾಲಾ ಪಠ್ಯಪುಸ್ತಕದಿಂದಲೇ ಆರೋಗ್ಯವಂತ ಮನುಷ್ಯರ ಹೃದಯ ನಿಮಿಷಕ್ಕೆ 72 ಬಾರಿ ಬಡಿದುಕೊಳ್ಳುತ್ತದೆ ಮತ್ತು ರಕ್ತದೊತ್ತಡ (ಬಿಪಿ) 120/80 ಇರುತ್ತದೆ ಎಂದು ಓದಿಕೊಂಡಿರುತ್ತೇವೆ. ಆದರೆ, ನಾವು ಮನುಷ್ಯರು ತಾನೇ? ಯಂತ್ರಗಳಂತೆ ನಿರ್ದಿಷ್ಟ ಸಂಖ್ಯೆಯನ್ನು ದೇಹ ಸದಾ ಪಾಲಿಸುವುದು ಸಾಧ್ಯವಿಲ್ಲ. ಹೀಗಾಗಿ, ಇದಕ್ಕೆ ಒಂದು ಸಂಖ್ಯೆಗಿಂತ ಒಂದು ವ್ಯಾಪ್ತಿ – ಇಷ್ಟರಿಂದ ಇಷ್ಟರ ನಡುವೆ ಇದ್ದರೆ ಅದು ಸಹಜ – ನಾರ್ಮಲ್ ಎಂದು ಹೇಳಲಾಗುತ್ತದೆ.

ಆದರೆ, ವೈದ್ಯಕೀಯ ಲೋಕದಲ್ಲಿ ಸಂಶೋಧನೆಗಳು ನಿರಂತರ ನಡೆಯುತ್ತ ಇರುತ್ತವೆ. ಹೊಸ ಸಂಶೋಧನೆಗಳು ನಡೆದಂತೆ ಈ 'ನಾರ್ಮಲ್' ಎಷ್ಟು ಎಂಬುದು ಕೂಡ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಅಧಿಕೃತ ವೈದ್ಯಕೀಯ ಸಂಸ್ಥೆಗಳು ಹೊಸ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡುತ್ತವೆ. ಆಗ ಗೊಂದಲ ಶುರುವಾಗುತ್ತದೆ - ಹಳೆಯದು 'ನಾರ್ಮಲ್ಲೋ' ಅಥವಾ ಹೊಸದೋ ಅಂತ. ಜೊತೆಗೆ, ಬೇರೆ-ಬೇರೆ ವೈದ್ಯಕೀಯ ಸಂಸ್ಥೆಗಳು ಮತ್ತು ಬೇರೆ-ಬೇರೆ ದೇಶಗಳ ವೈದ್ಯಕೀಯ ಸಂಸ್ಥೆಗಳು ಭಿನ್ನ ಸಂಖ್ಯೆಗಳನ್ನು ಸೂಚಿಸಿದಾಗ ಈ ಗೊಂದಲ ಇನ್ನೂ ಹೆಚ್ಚಾಗುತ್ತದೆ. ನಿಮಗೆ ಗೊತ್ತಿರಲಿ, ಅಮೆರಿಕದಂಥ (ಯುಎಸ್ಎ) ಒಂದೇ ದೇಶದ ಬೇರೆ-ಬೇರೆ ವೈದ್ಯಕೀಯ ಸಂಸ್ಥೆಗಳು ಬೇರೆ-ಬೇರೆ 'ನಾರ್ಮಲ್ ರೇಂಜ್'ಗಳನ್ನು ಸೂಚಿಸಿವೆ!

ಈ ಹಿನ್ನೆಲೆಯಲ್ಲಿ ಈ ಲೇಖನ ಬರೆಯುವಾಗ ಕೂಡ ನನಗೆ ಇಕ್ಕಟ್ಟು; ಏಕೆಂದರೆ, ಇಲ್ಲಿ ಏನೇನೋ ಬರೆಯುವ ಹಾಗಿಲ್ಲ. ಏನು ಬರೆಯುತ್ತೇನೋ ಅದು ಅಧಿಕೃತವಾಗಿಯೂ ಇರಬೇಕು, ಸತ್ಯವೂ ಆಗಿರಬೇಕು, ಜನರನ್ನು ದಿಕ್ಕು ತಪ್ಪಿಸುವಂತೆಯೂ ಆಗಬಾರದು. ಜೊತೆಗೆ, ಇನ್ನೂ ಒಂದು ಇಕ್ಕಟ್ಟಿದೆ. ಕೆಲವು ಅಧಿಕೃತವೆಂದು ಕರೆಸಿಕೊಳ್ಳುವ ಸಂಗತಿಗಳ ಹಿಂದೆ ಯಾವುದೋ ಲಾಬಿ ಇದೆಯಾ ಎಂಬ ಪ್ರಶ್ನೆ ಹುಟ್ಟುತ್ತದೆ. ಇದಕ್ಕೂ ಕಾರಣವಿದೆ. ಈ ಹಿಂದೆ ರಕ್ತದೊತ್ತಡ 140ರ ತನಕ ಇರಬಹುದು ಎಂದಿದ್ದದ್ದು, ಈಗ 120ರ ಒಳಗಿದ್ದರೇನೇ ಚೆನ್ನ ಎಂಬುದೊಂದು ಮಾರ್ಗಸೂಚಿ ಬಂದಿತೆಂದು ಇಟ್ಟುಕೊಳ್ಳಿ. ಕೋಟ್ಯಾಂತರ ಜನರಿಗೆ ಆಗ ಚಿಕಿತ್ಸೆ ಬೇಕಾಗುತ್ತದೆ. ಚಿಕಿತ್ಸೆಯಲ್ಲೂ ಸಹ ಆಹಾರದಲ್ಲಿ ಬದಲಾವಣೆ, ಜೀವನಶೈಲಿಯಲ್ಲಿ ಬದಲಾವಣೆ ಎನ್ನುವುದಕ್ಕಿಂತ ಬಹುಮಟ್ಟಿಗೆ ಮಾತ್ರೆ ಕೊಡುವುದೇ ದಾರಿ ಎಂದಾಗುವುದರಿಂದ, ಅಷ್ಟು ಕೋಟಿ ಜನರು ಒಂದು ದಿನವಲ್ಲ, ಒಂದು ತಿಂಗಳಲ್ಲ, ಜೀವನಪರ್ಯಂತ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ, ಯಾವುದೋ ಕಂಪನಿಯ ಲಾಬಿ ಇದರ ಹಿಂದೆ ಇದೆಯಾ ಎಂಬ ಗೊಂದಲವದು. ಇಂತಹ ಲಾಬಿಗಳು ಇಲ್ಲವೇ ಇಲ್ಲ ಎಂದೇನೂ ಅಲ್ಲ. ಎಷ್ಟೋ ಸಂಸ್ಥೆಗಳಿಗೆ ಹಣಕಾಸು ನೀಡುವುದು, ಪ್ರಾಯೋಜಕತ್ವ ನೀಡುವುದು ಅಂತಹ ಕಂಪನಿಗಳೇ. ಆದರೆ, ಆ ಕಾರಣಕ್ಕೆ ಎಲ್ಲವೂ ಕುತಂತ್ರ, ಎಲ್ಲವೂ ಹುನ್ನಾರ ಎಂದು ಇನ್ನೊಂದು ಅತಿಗೆ ಹೋಗಿ ನಿಲ್ಲಬಾರದು. ಇವೆರಡರ ಮಧ್ಯೆ ಸಮತೋಲನ ಸಾಧಿಸಿ, ಅಧಿಕೃತವೂ, ಸತ್ಯವೂ ಆದ ಸಂಗತಿಯನ್ನು ಬರೆಯಬೇಕು, ಅಲ್ಲವೇ?

ಈ ಲೇಖನ ಓದಿದ್ದೀರಾ?: ಡಾಕ್ಟರ್‌ ಮಾತು | ರಕ್ತಹೀನತೆ ಎಂದರೇನು? ಹೆಣ್ಣುಮಕ್ಕಳನ್ನು ಹೆಚ್ಚಾಗಿ ಕಾಡುವ ರಕ್ತಹೀನತೆಗೆ ಪರಿಹಾರವೇನು?

ರಕ್ತದೊತ್ತಡ ಎಂದಾಗ ಅದರಲ್ಲಿ ಒಂದೇ ಸಂಖ್ಯೆ ಇರಲ್ಲ ಎಂದು ನಿಮಗೆ ಗೊತ್ತಿದೆ. 120/80 ಅಂದಾಗ ಇದರಲ್ಲಿ ಎರಡು ಸಂಖ್ಯೆ ಇವೆ. ಮೇಲೆ ಇರುವುದು ಅಥವಾ ಮೊದಲು ಹೇಳುವ ಸಂಖ್ಯೆಯು ಹೃದಯದ ಎಡ ಹೃತ್ಕುಕ್ಷಿ (Left ventricle) ರಕ್ತವನ್ನು ರಕ್ತನಾಳಗಳೊಳಗೆ ನುಗ್ಗಿಸಿದಾಗ (ಇದನ್ನು systole ಎನ್ನುತ್ತಾರೆ. ಕನ್ನಡದ ಪದ ಹುಡುಕಿದೆ, ಅದು ಕನ್ನಡದ ಪದ ಅನ್ನಿಸಲಿಲ್ಲ. ಹಾಗಾಗಿ, ಸಿಸ್ಟೊಲ್ ಎಂದೇ ಕರೆಯೋಣ) ಇರುವ ರಕ್ತದೊತ್ತಡ. ಹಾಗೆಯೇ, ಕೆಳಗಿನ ಅಥವಾ ನಂತರ ಹೇಳುವ ಸಂಖ್ಯೆಯು ಹೃದಯದ ಎಡ ಹೃತ್ಕುಕ್ಷಿಯು (Left ventricle) ರಕ್ತವನ್ನು ತನ್ನೊಳಗೆ ತುಂಬಿಸಿಕೊಳ್ಳುವಾಗ (ಇದನ್ನು diastole ಡಯಾಸ್ಟೊಲ್ ಎನ್ನುತ್ತಾರೆ) ಇರುವ ರಕ್ತದೊತ್ತಡ.

ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಮತ್ತು ಭಾರತದ ಫಿಜಿಶಿಯನ್ನುಗಳ ಸಂಘ ಹೊರತರುವ ಎಪಿಐ ಪುಸ್ತಕವು ಮುಂದಿಟ್ಟಿರುವ ರಕ್ತದೊತ್ತಡದ ನಾರ್ಮಲ್ ಅಂಕಿ-ಸಂಖ್ಯೆಗಳೇ (ಈ ಹೊತ್ತಿಗೆ) ಸರಿಯೆಂದು ನನ್ನ ಖಚಿತ ಅನಿಸಿಕೆ ಆಗಿರುವುದರಿಂದ ಮತ್ತು ವಿವಿಧ ದೇಶಗಳ ವಿವಿಧ ವೈದ್ಯಕೀಯ ಸಂಸ್ಥೆಗಳು ಸೂಚಿಸಿರುವ ಅಂಶಗಳನ್ನೂ ಗಮನಿಸಿ, ಈ ಕೆಳಕಂಡ ಸಂಗತಿಗಳನ್ನು ನಿಮ್ಮ ಮುಂದಿಡಲಾಗುತ್ತಿದೆ.

ಸಿಸ್ಟೊಲಿಕ್ ಬಿಪಿ: 90ರಿಂದ 140 (ಸಾಮಾನ್ಯವಾಗಿ 110ರಿಂದ 130ರ ನಡುವೆ ಇರುತ್ತದೆ. ಆದರೆ, ಕೆಲವರ ನಾರ್ಮಲ್ ಇನ್ನೂ ಕಡಿಮೆ ಅಥವಾ ಹೆಚ್ಚು ಇರುವ ಸಾಧ್ಯತೆ ಇದೆ).

ಡಯಾಸ್ಟೊಲಿಕ್ ಬಿಪಿ: 60ರಿಂದ 90.

ಈ ಲೇಖನ ಓದಿದ್ದೀರಾ?: ಡಾಕ್ಟರ್ ಮಾತು | ಮೊಟ್ಟೆಯ ಹಳದಿ ಭಾಗ ತಿನ್ನುವುದು ಒಳ್ಳೆಯದೋ ಅಲ್ಲವೋ?

ಸಿಸ್ಟೊಲಿಕ್ ಬಿಪಿ 130ಕ್ಕಿಂತ ಹೆಚ್ಚಿದ್ದರೆ ಅದನ್ನು 'ಹೈ ನಾರ್ಮಲ್' ಎಂದು ಕರೆದಿದ್ದಾರೆ, ಅಂಥವರು ಸ್ವಲ್ಪ ಜಾಗ್ರತೆ ವಹಿಸಬೇಕು. ಇನ್ನು, ಡಯಾಸ್ಟೊಲಿಕ್ ಬಿಪಿ 85ಕ್ಕಿಂತ ಹೆಚ್ಚಿದ್ದರೆ ಅದನ್ನು 'ಹೈ ನಾರ್ಮಲ್' ಎಂದು ಕರೆದಿದ್ದಾರೆ, ಅಂಥವರು ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಈ 'ಸ್ವಲ್ಪ ಎಚ್ಚರಿಕೆ' ಎಂದರೆ ಏನು ಅಂದರೆ, ಮಾತ್ರೆಯ ಅಗತ್ಯವಿಲ್ಲ. ಆದರೆ, ಜೀವನಶೈಲಿಯ ಬದಲಾವಣೆಗಳನ್ನು ತಂದುಕೊಂಡು ನಿಯಂತ್ರಣದಲ್ಲಿಟ್ಟುಕೊಳ್ಳುವ ಮುನ್ಸೂಚನೆ ಎಂದು ಭಾವಿಸಬೇಕು.

ಗಮನಿಸಬೇಕಾದ ಇನ್ನೆರಡು ಸಂಗತಿ

ನಾರ್ಮಲ್ ಸಿಸ್ಟೊಲಿಕ್ ರಕ್ತದೊತ್ತಡ 90ರಿಂದ 140ರವರೆಗೆ ಇರಬಹುದು. ಆದರೆ, ಸಾಮಾನ್ಯವಾಗಿ ಅದು 100ಕ್ಕಿಂತ ಮೇಲೆಯೇ ಇರುತ್ತದೆ. ಇದರಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೂ ಇದೆ. ಈ ಹಿಂದೆ ಒಬ್ಬರಿಗೆ 120 ಇದ್ದು, ಈಗ 100 ಇದ್ದರೆ ಅದು ನಾರ್ಮಲ್ ಅಲ್ಲ. ಅವರಿಗೇನೋ ಸಮಸ್ಯೆಯಾಗಿರಬಹುದು. ಕೂತಾಗ, ಎದ್ದು ನಿಂತರೆ ಅಥವಾ ಹಾಗೆಯೇ ತಲೆ ಸುತ್ತುವಂತೆ ಆದರೆ ಆ ಬಿಪಿ ನಾರ್ಮಲ್ ಅಲ್ಲ. ಆಗ ಅವರಿಗೆ ರಕ್ತದೊತ್ತಡ ಇರಬೇಕಾದ್ದಕ್ಕಿಂತ ಕಡಿಮೆ ಇದೆ ಎಂದು ಭಾವಿಸಬೇಕು. ಆದರೆ ಮುಂಚಿನಿಂದಲೂ ಸಿಸ್ಟೊಲಿಕ್ ಬಿಪಿ 100 ಇದ್ದು, ಅವರಿಗೇನೂ ಸಮಸ್ಯೆಯಾಗಿಲ್ಲ ಎಂದರೆ, ಅದೇ ಅವರ 'ನಾರ್ಮಲ್ ಬಿಪಿ' ಎಂದು ಭಾವಿಸಬೇಕು.

ಸಾಂದರ್ಭಿಕ ಚಿತ್ರ

ಇನ್ನೊಂದು ಸಂಗತಿಯೆಂದರೆ, "ವಯಸ್ಸಾಗುತ್ತ ಹೋದ ಹಾಗೆ ಬಿಪಿ ಹೆಚ್ಚಾಗುತ್ತ ಹೋಗುತ್ತದಂತೆ, 100ಕ್ಕೆ ಅವರ ವಯಸ್ಸನ್ನು ಸೇರಿಸಿದರೆ ಎಷ್ಟಾಗುತ್ತೋ ಅದೇ ಅವರ ನಾರ್ಮಲ್ ಸಿಸ್ಟೊಲಿಕ್ ಬಿಪಿ ಅಂತೆ, ಹೌದಾ?" ಎಂದು ಹಲವರು ಕೇಳುತ್ತಾರೆ. ವಯಸ್ಸಾಗುತ್ತ ಹೋದಂತೆ, ರಕ್ತನಾಳಗಳು ಗಟ್ಟಿಯಾಗುತ್ತ ಹೋಗುತ್ತವೆ ಮತ್ತು ತಮ್ಮ ಸ್ಥಿತಿಸ್ಥಾಪಕ ಗುಣವನ್ನೂ ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತವೆ. ಹೀಗಾಗಿ, ಹಲವರಲ್ಲಿ ಬೇರೇನೂ ಸಮಸ್ಯೆ ಇರದಿದ್ದರೂ ಬಿಪಿ (ಅದರಲ್ಲೂ ಸಿಸ್ಟೊಲಿಕ್ ಬಿಪಿ) ಹೆಚ್ಚಾಗುವುದು ನಿಜ. ಆದರೆ, 70 ವರ್ಷ ಆಗಿರುವ ಒಬ್ಬರು ತನಗೆ ಸಿಸ್ಟೊಲಿಕ್ ಬಿಪಿ 170 ಇರುವುದು ನಾರ್ಮಲ್ ಎಂದು ತಾವೇ ನಿರ್ಧಾರಕ್ಕೆ ಬರಬಾರದು. ಒಮ್ಮೆ ವೈದ್ಯರಲ್ಲಿಗೆ ಹೋಗಿ ತೋರಿಸಬೇಕು. ಅವರ ಈ ಹಿಂದಿನ ರಕ್ತದೊತ್ತಡ ಎಷ್ಟಿತ್ತು, ಹೃದಯ ಸಂಬಂಧಿತ ಮತ್ತು ಇನ್ನಿತರ ಸಮಸ್ಯೆಗಳು ಏನಿವೆ, ಏನಿಲ್ಲ ಎಂಬುದನ್ನು ಆಧರಿಸಿ ವೈದ್ಯರ ಸಲಹೆಯಂತೆ ಮುಂದುವರಿಯಬೇಕು.

ಎಲ್ಲ ಓದಿದ ಮೇಲೆ ಗೊಂದಲ ಹೆಚ್ಚಾಯಿತಾ, ಕಡಿಮೆಯಾಯಿತಾ? ಬರೆದು ತಿಳಿಸಿ. ಸದ್ಯಕ್ಕೆ ನಿಮಗೆ ಬೇರೇನೂ ಸಮಸ್ಯೆ ಇರದಿದ್ದರೆ, ಸಿಸ್ಟೊಲಿಕ್ 110ರಿಂದ 140ರ ನಡುವೆ, ಡಯಾಸ್ಟೊಲಿಕ್ 60ರಿಂದ 90 ಇದ್ದರೆ ನಾರ್ಮಲ್ ಅಂದುಕೊಳ್ಳಿ. ಸಿಸ್ಟೊಲಿಕ್ 130ಕ್ಕಿಂತ ಹೆಚ್ಚು, ಡಯಾಸ್ಟೊಲಿಕ್ 85ಕ್ಕಿಂತ ಹೆಚ್ಚಿದ್ದರೆ ಎಚ್ಚರ ವಹಿಸಿ.

ಮುಖ್ಯ ಚಿತ್ರ - ಸಾಂದರ್ಭಿಕ | ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
12 ವೋಟ್