ನಾನು ನೋಡಿದ ನಾಟಕ | 'ಈ ಕರಿಯ ಬೆನ್ನಲ್ಲಿ' ಕಂಡ ಹೊಸ ಪ್ರಪಂಚ

ಅಸ್ಪೃಶ್ಯರನ್ನು ಮಾಂಸ ತಿಂದರೆಂದು, ಕೈಗೆ ಗಡಿಯಾರ ಕಟ್ಟಿದರೆಂದು, ಕುದುರೆ ಸವಾರಿ ಮಾಡಿದರೆಂದು, ದೇವಸ್ಥಾನಕ್ಕೆ ಪ್ರವೇಶ ಮಾಡಿದರೆಂದು ಹಾಗೂ ಶಾಲೆಯಲ್ಲಿ ನೀರಡಿಸಿದ ಮಗು ನೀರು ಕುಡಿಯಲು ಕೊಡ ಮುಟ್ಟಿತ್ತೆಂದು ಕೊಲೆ ಮಾಡುತ್ತಿರುವ ಈ ಸಂದರ್ಭದಲ್ಲಿ ಎನ್ಕೆ ಹನುಮಂತಯ್ಯನವರ ಕವಿತೆಗಳನ್ನು ಆಧರಿಸಿದ ಈ ನಾಟಕ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ

ನೀವು ಕೊಟ್ಟ ಮೇವು ತಿಂದು
ನಿಮ್ಮಂತಹ ಮನುಷ್ಯನಾಗಲಾರೆ
ಮನುಷ್ಯನನ್ನೇ ತಿನ್ನಲಾರೆ...

- ಹಿಂದೊಮ್ಮೆ ಬಹಳ ಸದ್ದು ಮಾಡಿದ, ಎನ್ಕೆ ಹನುಮಂತಯ್ಯನವರ 'ಗೋವು ತಿಂದು ಗೋವಿನಂತಾದವನು' ಕವಿತೆಯ ಸಾಲುಗಳಿವು. ಪ್ರತಿಯೊಂದು ಸಾಲೂ ಕವಿತೆಯ ಜೀವಾಳ. ಎಂತಹ ವ್ಯಕ್ತಿಯೇ ಆಗಲಿ, ಸಿಡಿದೇಳುವಂತೆ ಮಾಡುತ್ತದೆ. ಕೊನೆಯ ಸಾಲು ಮನುಷತ್ವ ಪ್ರೀತಿ‌ಯ ಸಾರುವ ಮಹತ್ವದ ಕಾವ್ಯವಾಗಿ ಎಲ್ಲರ ಎದೆಯ ಕದ ತಟ್ಟುತ್ತದೆ.

ಅಸ್ಪೃಶ್ಯರನ್ನು ಮಾಂಸ ತಿಂದರೆಂದು, ಕೈಗೆ ಗಡಿಯಾರ ಕಟ್ಟಿದರೆಂದು, ಕುದುರೆ ಸವಾರಿ ಮಾಡಿದರೆಂದು, ದೇವಸ್ಥಾನಕ್ಕೆ ಪ್ರವೇಶ ಮಾಡಿದರೆಂದು ಹಾಗೂ ಶಾಲೆಯಲ್ಲಿ ನೀರಡಿಸಿದ ಮಗು ನೀರು ಕುಡಿಯಲು ಕೊಡ ಮುಟ್ಟಿತ್ತೆಂದು ಕೊಲೆ ಮಾಡುತ್ತಿರುವ ಈ ಸಂದರ್ಭದಲ್ಲಿ ಎನ್ಕೆ ಹನುಮಂತಯ್ಯನವರ ಕವಿತೆಗಳು ವಾಸ್ತವಕ್ಕೆ ಕನ್ನಡಿ ಹಿಡಿದಂತಿವೆ.

Image

'ಗೋವು ತಿಂದು ಗೋವಿನಂತಾದವನು' ಎಂಬ ಕವಿತೆಯನ್ನು ನಾ ಮೊದಲ ಬಾರಿ ಕೇಳಿದ್ದು 2016-17ರಲ್ಲಿ ಅನ್ನಿಸುತ್ತೆ. ಆಗ ಈ ಕವಿತೆ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿ ಕುತೂಹಲ ಮೂಡಿಸಿತು. 'ಗೋವು ತಿಂದು ಗೋವಿನಂತಾದವನು' ಕವಿತೆ ಬಿಟ್ಟು ಅವರ ಯಾವ ಕವಿತೆಯನ್ನೂ ನಾನು ಇಲ್ಲಿಯವರೆಗೆ ಓದಿದವಳಲ್ಲ. ಆದರೆ, ಕಲಬುರಗಿ ರಂಗಾಯಣದಲ್ಲಿ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ನಡೆದ ರಂಗೋತ್ಸವದಲ್ಲಿ ಅವರ ಕವಿತೆಗಳನ್ನಾಧರಿಸಿದ 'ಈ ಕರಿಯ ಬೆನ್ನಲ್ಲಿ' ನಾಟಕ ನೋಡಿದ ಮೇಲೆ ಕುತೂಹಲ ಹೆಚ್ಚಿತು. ಸ್ನೇಹಿತರೊಬ್ಬರನ್ನು ಕೇಳಿ, 'ಮಾಂಸದಂಗಡಿಯ ನವಿಲು' ಕವನ ಸಂಕಲನ ತರಿಸಿಕೊಂಡು ಓದಿದೆ.

ನಂತರ ಎನ್ಕೆ ಕುರಿತು ಓದೋಕೆ ಶುರು ಮಾಡಿದೆ. ಇವರ ಸಾವಿನ ನಂತರ ರಹಮತ್ ತರೀಕೆರೆ ಬರೆದ ಬರಹ ಓದಿದೆ, ಬೇಸರವಾಯಿತು. ಇವರು ಹೀಗೆ ಬಿಟ್ಟು ಹೋಗಬಾರದಿತ್ತು, ಇವರಿಂದ ಕಲಿಯಬೇಕಾದದ್ದು ಬಹಳಷ್ಟಿತ್ತು ಎಂದೆನಿಸಿತು.

ಈ ಫೋಟೊ ಆಲ್ಬಮ್ ನೋಡಿದ್ದೀರಾ?: ಭಾರತೀಯ ಸಂವಿಧಾನ ಕುರಿತ 'ವಿ ದ ಪೀಪಲ್ ಆಫ್ ಇಂಡಿಯಾ' ನಾಟಕದ ದೃಶ್ಯಗಳು

'ಸಮುದಾಯ‌ ರಾಯಚೂರು' ತಂಡದ ಯುವ ಪ್ರತಿಭೆ ಸಾಗರ್ ಇಟೇಕರ್ ಅವರ ಅಭಿನಯದಲ್ಲಿ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವ ಶಕ್ತಿ ಅಡಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಯಾರೂ ಅಲುಗಾಡದಂತೆ ಕಟ್ಟಿ ಹಾಕಿದ ಪ್ರತಿಭಾವಂತ ಕಲಾವಿದ. ಪ್ರತಿಯೊಂದು ಕವಿತೆಯ ಸಾಲಿಗೂ ಜೀವ ತುಂಬುತ್ತ, ಒಂದೊಂದು ಕವಿತೆಗೂ ಹೆಜ್ಜೆ ಗುರುತು ಬಿಟ್ಟು ಹೋದವರಂತೆ ಕಂಡರು. 'ದಿಕ್ಕಿಕಲ್ಲ ತೊಡೆ ಕಕ್ಕಿದ ಕೂಸು ಕಂಗೆಟ್ಟು ಕೂಗುತ್ತಿದೆ ದೇವರೇ... ತೂತು ಕಾಸಿದ್ದರೆ ತೇದು ಕೊಡಿಸು ಓ... ದೇವರೆ...' ಎಂಬ ಆರ್ತನಾದ‌ಕ್ಕೆ ಇಡೀ ವೇದಿಕೆ ಸ್ತಬ್ಧವಾಗಿತ್ತು. ಹೆಣ್ಣೊಬ್ಬಳ ಅಂತರಂಗದ ಮಾತುಗಳು ದನಿಯಾಗುವ ಪರಿಗೆ ಮಾತು ಕೂಡ ಮೌನವಾದವು. ಬುದ್ಧ, ಬಸವಣ್ಣ, ಅಂಬೇಡ್ಕರ್‌ರಂತಹ ಮಹಾನ್ ವ್ಯಕ್ತಿಗಳು ತೆರೆಯ ಮೇಲೆ ಬಂದು ಹೋದಾಗ, ಹೊಸ ಜಗತ್ತಿನ ದರ್ಶನ. ಅಕ್ಕಮಹಾದೇವಿ ಹೊಸ ರೂಪದಲ್ಲಿ ಕಂಡಳು.

Image

ಎನ್ಕೆ ಹನುಮಂತಯ್ಯನವರನ್ನು ಇನ್ನಷ್ಟು ಅರಿಯಲು ಸಾಗರ ಇಟೇಕರ್ ಅಭಿನಯ ಸಹಕರಿಸಿತು. "ಈ ಸಂತೆಯಲ್ಲಿ ನನಗೊಂದು ಅಂಗಡಿ ಹಾಕಿ ಕಣ್ಣೀರು ಮಾರುವ ಕೆಲಸ ಕೊಟ್ಟಿದ್ದೀರಿ, ನಿಮಗೆ ಚಿರಋಣಿ," ಎಂಬ ಸಾಲು ಬಹುಶಃ ಜೀವನವಿಡೀ ಕಾಡೀತು.

ಈ ನಾಟಕವನ್ನು ನಮ್ಮೂರಿಗೆ ಕರೆತಂದ ನಿರ್ದೇಶಕ ಪ್ರವೀಣ ರೆಡ್ಡಿ, ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿದ ಲಕ್ಷ್ಮಣ ಮಂಡಲಗೇರಾ, ರಾಗ ಸಂಯೋಜಿಸಿದ ವಿ ದೇವರಾಜ್, ಕಲಬುರಗಿ ರಂಗಾಯಣ ಮತ್ತು ಕಲಬುರಗಿ ಸಮುದಾಯದಕ್ಕೂ ಧನ್ಯವಾದ.

ನಿಮಗೆ ಏನು ಅನ್ನಿಸ್ತು?
0 ವೋಟ್