ವಾರಾಂತ್ಯದ ಓದು | 'ಏನಮ್ಮಾ... ಮಗ ಮುಖ್ಯಮಂತ್ರಿ ಆದ್ಮೇಲೆ ನಿನ್ನ ಖರ್ಚು-ವೆಚ್ಚ ಜಾಸ್ತಿಯಾದಂತೆ ಕಾಣುತ್ತೆ!'

ತಮಿಳುನಾಡಿನ ಸುಧಾರಣಾ ಚರಿತೆಯ ಬಹುಮುಖ್ಯ ಹೆಸರು ಕೆ ಕಾಮರಾಜ್. ಆ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಮಾಡಿದ ಕೆಲಸಗಳು ಇಡೀ ದಕ್ಷಿಣ ಭಾರತ ಅನುಸರಿಸುವಷ್ಟು ಪರಿಣಾಮಕಾರಿ ಆಗಿದ್ದವು. ಸಂಕಥನ ಪ್ರಕಾಶನ ಪ್ರಕಟಿಸಿರುವ, ಎನ್ ಜಗದೀಶ್ ಕೊಪ್ಪ ಅವರ 'ದಕ್ಷಿಣದ ಗಾಂಧಿ ಕೆ ಕಾಮರಾಜ್' ಪುಸ್ತಕದಿಂದ ಆಯ್ದ ಸ್ವಾರಸ್ಯಕರ ಭಾಗ ಇಲ್ಲುಂಟು

ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿ 1954ರಿಂದ 1963ರವರೆಗೆ ತಮಿಳುನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಕೆ ಕಾಮರಾಜರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಸದಸ್ಯರಾಗಿದ್ದ ಕಾರಣ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳುವುದು ಅನಿವಾರ್ಯವಾಯಿತು. ಗಾಂಧೀಜಿ ಮತ್ತು ಸರ್ದಾರ್ ವಲ್ಲಬಾಯ್ ಪಟೇಲ್ ನಿಧನಾ ನಂತರ ನೆಹರೂ ಅವರ ಜೊತೆ ಸಮಾನರಾಗಿ ನಿಲ್ಲಬಲ್ಲ ರಾಜಕೀಯ ಜಾಣ್ಮೆ ಮತ್ತು ಯಾವುದೇ ರೀತಿಯ ವೈಯಕ್ತಿಕ ಹಿತಾಸಕ್ತಿಯಿಲ್ಲದೆ ವಹಿಸಿದ ಹುದ್ದೆಗಳನ್ನು ಪ್ರಾಮಾಣಿಕವಾಗಿ ಅವರು ನಿರ್ವಹಿಸುತ್ತಿದ್ದ ಪರಿಯನ್ನು ನೋಡಿ, ನೆಹರೂ ಮಾತ್ರವಲ್ಲದೆ ಇತರೆ ಕಾಂಗ್ರೆಸ್ ನಾಯಕರೂ ಅವರನ್ನು ಮೆಚ್ಚಿಕೊಂಡಿದ್ದರು.

Eedina App

ಒಮ್ಮೆ ಮದ್ರಾಸ್ ನಗರದ ಅವಡಿ ಮೈದಾನದಲ್ಲಿ ನಡೆಯುತ್ತಿದ್ದ ಪ್ರಧಾನಿಯವರ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿಯಾಗಿದ್ದ ಕಾಮರಾಜರನ್ನು ಉದ್ದೇಶಿಸಿ ನೆಹರೂ ಅವರು, "ನಿಮ್ಮ ತಾಯಿಯವರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಕೇಳಿದೆ. ಎಲ್ಲಿದ್ದಾರೆ?" ಎಂದು ಕೇಳಿದಾಗ, "ಹೌದು," ಎಂದು ಹೇಳಿದ ಕಾಮರಾಜರು, ವೇದಿಕೆಯ ಮುಂಭಾಗದಲ್ಲಿ ಸಾವಿರಾರು ಜನರ ನಡುವೆ ಮಣ್ಣಿನ ನೆಲದಲ್ಲಿ ಕುಳಿತಿದ್ದ ತಮ್ಮ ತಾಯಿಯವರನ್ನು ತೋರಿಸುತ್ತ, "ಆಕೆ ನನ್ನ ಅಮ್ಮ," ಎಂದು ಉತ್ತರಿಸಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನೆಹರೂ ಅವರು ಕಾಮರಾಜರ ತಾಯಿಯವರಾದ ಶಿವಗಾಮಿ ಅಮ್ಮಾಳ್ ಅವರನ್ನು ಹತ್ತಿರಕ್ಕೆ  ಕರೆಸಿಕೊಂಡು ಅವರನ್ನು ನೋಡಿ ಅಚ್ಚರಿಪಟ್ಟರು. ಒಬ್ಬ ರಾಷ್ಟ್ರೀಯ ನಾಯಕ ಮತ್ತು ನಾಡಿನ ಮುಖ್ಯಮಂತ್ರಿಯ ತಾಯಿ ಇಷ್ಟು ಸರಳವಾಗಿ ಇರಲು ಸಾಧ್ಯವೇ ಎಂಬುದನ್ನು ನೋಡಿ ಆಶ್ಚರ್ಯಪಟ್ಟ ನೆಹರೂ, ಭಾವುಕರಾಗಿ ಆ ತಾಯಿಗೆ ಕೈ ಮುಗಿಯುತ್ತ ನಮಿಸಿ, ತಲೆ ಬಾಗಿ ಆಶೀರ್ವಾದ ಪಡೆದರು.

ಇಂದಿಗೂ ಕೂಡ ತಮಿಳುನಾಡಿನಲ್ಲಿ ಹಿರಿಯ ಜೀವಗಳು ಕಾಮರಾಜರ ಕುರಿತಾಗಿ ಅನೇಕ ಘಟನೆಗಳನ್ನು ಎದೆತುಂಬಿ ಸ್ಮರಿಸುತ್ತಾರೆ. ಇವುಗಳಲ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದ ಸಂಗತಿಗಳು ಅಪಾರವಾಗಿವೆ. ಒಮ್ಮೆ ಅವರ ತಾಯಿಯವರು ಕಾಮರಾಜರ ಗೆಳೆಯರ ಮೂಲಕ, "ಅವನು ನನಗೆ ಪ್ರತೀ ತಿಂಗಳು ಕಳಿಸುತ್ತಿರುವ ತೊಂಬತ್ತು ರೂಪಾಯಿ ಹಣ ಸಾಕಾಗುವುದಿಲ್ಲ," ಎಂದು ಹೇಳಿ ಕಳುಹಿಸಿದಾಗ, ಕೂಡಲೇ ಮದ್ರಾಸ್ ನಗರದಿಂದ ವಿರುಧು ನಗರದ ಮನೆಯಲ್ಲಿದ್ದ ದೂರವಾಣಿಗೆ ಕರೆ ಮಾಡಿ ಅಮ್ಮನೊಂದಿಗೆ ಮಾತನಾಡಿದ ಕಾಮರಾಜರು, "ಏನಮ್ಮಾ... ನಿನ್ನ ಮಗ ಮುಖ್ಯಮಂತ್ರಿಯಾದ ಮೇಲೆ ನಿನ್ನ ಖರ್ಚು-ವೆಚ್ಚಗಳು ಜಾಸ್ತಿಯಾದಂತೆ ಕಾಣುತ್ತವೆ..." ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಶಿವಗಾಮಿ ಅಮ್ಮಾಳ್, "ಇಲ್ಲ ಮಗನೇ, ನೀನು ಮುಖ್ಯಮಂತ್ರಿಯಾದ ನಂತರ ಮನೆಗೆ ಬಂದುಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಮಧುರೈ ಮೀನಾಕ್ಷಿ ಅಮ್ಮನನ್ನು ನೋಡಲು ಬಂದವರು ಇಲ್ಲಿಗೂ ಬರುತ್ತಿದ್ದಾರೆ. ಅವರಿಗೆ ನಿಂಬೆಹಣ್ಣಿನ ಪಾನಕ, ಮಜ್ಜಿಗೆ ನೀಡದೆ ಹೇಗೆ ಕಳಿಸಲಿ?" ಎಂದಾಗ, ಅಮ್ಮನ ಬೇಡಿಕೆಯಾದ ನೂರೈವತ್ತು ರೂಪಾಯಿಗಳಿಗೆ ಬದಲಾಗಿ ತಿಂಗಳಿಗೆ ನೂರಾ ಇಪ್ಪತ್ತು ರೂಪಾಯಿಗಳನ್ನು ಕಳಿಸಿಕೊಡಲು ಒಪ್ಪುತ್ತಾರೆ.

AV Eye Hospital ad

ತಾಯಿ ಶಿವಗಾಮಿ ಅಮ್ಮಾಳ್ ಜೊತೆ ಕಾಮರಾಜರು

ಒಮ್ಮೆ ಮಧುರೈ ಜಿಲ್ಲೆಗೆ ಪ್ರವಾಸ ಬಂದಾಗ ಕಾಮರಾಜರು ತಾಯಿಯನ್ನು ನೋಡಲು ತಮ್ಮ ಮನೆಗೆ ಆಗಮಿಸಿದರು. ಮನೆಯ ಮುಂಭಾಗ ನೀರಿನ ನಳದ ಸಂಪರ್ಕ ಇರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಒಳಗೆ ಹೋಗಿ, "ಮನೆಗೆ ನೀರಿನ ಸಂಪರ್ಕ ಹೇಗೆ ಬಂತು?" ಎಂದು ತಾಯಿಯನ್ನು ವಿಚಾರಿಸಿದರು. ಏಕೆಂದರೆ, ಅವರ ಮನೆಯ ಬಲ ಭಾಗದಲ್ಲಿ ಬಾವಿ ಇದ್ದುದರಿಂದ ಮನೆಗೆ ಯಾವಾಗಲೂ ಬಾವಿಯ ನೀರು ಬಳಸುತ್ತಿದ್ದುದು ವಾಡಿಕೆಯಾಗಿತ್ತು. ಇದಕ್ಕೆ ಉತ್ತರಿಸಿದ ಶಿವಗಾಮಿ ಅಮ್ಮಾಳ್, "ಗೊತ್ತಿಲ್ಲ ಮಗನೇ... ಮುನ್ಸಿಪಾಲಿಟಿಯವರು ಬಂದು ಹಾಕಿ ಹೋದರು," ಎಂದು ನುಡಿದಾಕ್ಷಣ ಕಾಮರಾಜರು, ಪುರಸಭೆಯ ಅಧಿಕಾರಿಗಳನ್ನು ಮನೆಗೆ ಕರೆಸಿ, "ಹೀಗೆ ಉಚಿತವಾಗಿ ನಳ ಸಂಪರ್ಕ ಕಲ್ಪಿಸುವುದು ತಪ್ಪಲ್ಲವೇ? ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ?" ಎಂದು ಕೇಳಿದರು. "ಅಮ್ಮನವರಿಗೆ ವಯಸ್ಸಾಗಿದೆ, ಅದಕ್ಕಾಗಿ ಸಂಪರ್ಕ ಕಲ್ಪಿಸಿದೆವು," ಎಂದು ಸ್ಥಳಿಯ ಪ್ರತಿನಿಧಿಗಳು ಕಾಮರಾಜರನ್ನು ಸಮಾಧಾನಪಡಿಸಲು ಯತ್ನಿಸುತ್ತಾರೆ. ಇದಕ್ಕೆ ಒಪ್ಪದ ಅವರು, "ನನ್ನ ಅಮ್ಮ ಎಲ್ಲ ಸಾರ್ವಜನಿಕರ ಹಾಗೆ ನೀರು ಪಡೆಯಲಿ. ಇಂತಹ ಪುಕ್ಕಟೆ ಸೌಲಭ್ಯಗಳು ಬೇಡ," ಎಂದು ನೀರಿನ ಸಂಪರ್ಕವನ್ನು ಕಡಿತಗೊಳಿಸಿದರು.

ಕಾಮರಾಜರ ತಾಯಿಯವರಿಗೆ ತನ್ನ ಮಗ ಮನೆಗೆ ಯಜಮಾನನಾಗದಿದ್ದರೂ ನಾಡಿಗೆ ಯಜಮಾನನಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವುದರ ಬಗ್ಗೆ ತುಂಬಾ ಹೆಮ್ಮೆ ಇತ್ತು. ಕಾಮರಾಜರು ದಕ್ಷಿಣ ತಮಿಳುನಾಡಿನ ಮಧುರೈ, ತಿರುನಲ್ವೇಲಿ, ನಾಗರಕೋಯಿಲ್, ರಾಮನಾಥಪುರಂ, ತೂತ್ತುಕುಡಿ ಜಿಲ್ಲೆಗಳಿಗೆ ಬರುವ ಕಾರ್ಯಕ್ರಮವಿದ್ದರೆ, ಅವರ ಹಿಂಬಾಲಕರು ಅಮ್ಮನಿಗೆ ಮುನ್ಸೂಚನೆ ನೀಡುತ್ತಿದ್ದರು. ಇತ್ತ ಕಡೆ ಬಂದರೆ ಮಗ ಮನೆಗೆ ಬರುತ್ತಾನೆ ಎಂದು ಶಿವಗಾಮಿ ಅಮ್ಮಾಳ್ ಸ್ವತಃ ಅಕ್ಕಿ ಹಿಟ್ಟು ರುಬ್ಬಿಕೊಂಡು ಪುತ್ರನಿಗೆ ಕಾಯುತ್ತಿದ್ದರು. ಕಾಮರಾಜರು ಬಂದ ಕೂಡಲೇ, ದೋಸೆ ಅಥವಾ ಇಡ್ಲಿ ಮಾಡಿ ಹೊಟ್ಟೆ ತುಂಬಾ ಬಡಿಸಿದರೆ ಹೆತ್ತ ಹೃದಯಕ್ಕೆ ಸಂಪೂರ್ಣ ತೃಪ್ತಿಯಾಗುತ್ತಿತ್ತು. ಕಿರಿದಾದ, ಆರು ಅಡಿ ಅಗಲದ ರಸ್ತೆಯಲ್ಲಿ ಸಣ್ಣ ಹೆಂಚಿನ ಮನೆ ಮತ್ತು ಮನೆಯೊಳಗಿನ ಹಲಗೆಯಿಂದ ಮಾಡಿದ ಅಟ್ಟದ ಮೇಲೆ ಕಾಮರಾಜರಿಗಾಗಿ ಒಂದು ಕೋಣೆ ಮತ್ತು ಪುಟ್ಟ ಹಾಲ್ ಇದ್ದ ಮನೆಯನ್ನು ಈಗ ತಮಿಳುನಾಡು ಸರ್ಕಾರ ಅಭಿವೃದ್ಧಿಪಡಿಸಿ ಯಥಾಪ್ರಕಾರ ನಿರ್ಮಿಸಿದೆ. ಕಾಮರಾಜ್ ಬಳಸುತ್ತಿದ್ದ ಎಲ್ಲ ವಸ್ತುಗಳು, ಅವರ ಉಡುಪುಗಳು, ಪುಸ್ತಕಗಳು, ಮಲಗುತ್ತಿದ್ದ ಸಾಧಾರಣ ಮಂಚ, ಮರದ ಕುರ್ಚಿ, ಟೇಬಲ್ ಇವುಗಳನ್ನು ಮೊದಲ ಮಹಡಿಯಲ್ಲಿ ಇರಿಸಲಾಗಿದ್ದು, ನೆಲಮಹಡಿಯಲ್ಲಿ ಅವರ ಬದುಕಿನ ಪ್ರಮುಖ ಘಟನೆಗಳ ಛಾಯಾಚಿತ್ರಗಳನ್ನು ಜೋಡಿಸಲಾಗಿದೆ. ನಿವಾಸವನ್ನು ಆರ್‌ಸಿಸಿ ಕಟ್ಟಡವನ್ನಾಗಿ ಪರಿವರ್ತಿಸಿ ಸ್ಮಾರಕವನ್ನಾಗಿ ಮಾಡಲಾಗಿದೆ. ತಮಿಳುನಾಡಿನ ಈರೋಡ್ ನಗರದಲ್ಲಿ ಪೆರಿಯಾರ್ ರಾಮಸ್ವಾಮಿಯವರ ನಿವಾಸ ಮತ್ತು ಕಾಂಚಿಪುರಂ ಪಟ್ಟಣದಲ್ಲಿ ಸಿ ಎನ್ ಅಣ್ಣಾದೊರೈ ನಿವಾಸಗಳನ್ನು ಸಹ ಅಲ್ಲಿನ ಸರ್ಕಾರ ಸ್ಮಾರಕವನ್ನಾಗಿ ಮಾಡಿದೆ.

1963ರ ಅಕ್ಟೋಬರ್ ಎರಡರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಮುಗಿಸಿದ ಕಾಮರಾಜರು, ಮೂರರಂದು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ತಮ್ಮ ಸಚಿವ ಸಂಪುಟದಲ್ಲಿ ಎರಡನೆಯ ಮುಖ್ಯ ವ್ಯಕ್ತಿಯಾಗಿದ್ದ ಎಂ ಭಕ್ತವತ್ಸಲಂ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಕೂರಿಸಿ, ದೆಹಲಿಯತ್ತ ಮುಖ ಮಾಡಿದರು. 1947ರ ಆಗಸ್ಟ್ ಹದಿನೈದರಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಹಜವಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿಯಿತು. ಜನತೆಯ ಬೆಂಬಲ ಕೂಡ ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದ ಕಾರಣ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನೆಹರೂ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹದಿನೇಳು ವರ್ಷಗಳಲ್ಲಿ ಮೊದಲ ಹದಿನೈದು ವರ್ಷಗಳ ಕಾಲ ಯಾವುದೇ ಪ್ರತಿರೋಧವಿಲ್ಲದೆ ಆಡಳಿತ ನಡೆಸಿದರು. ಕೊನೆಯ ಎರಡು ವರ್ಷಗಳು ಅವರ ಪಾಲಿಗೆ ಕಗ್ಗಂಟಾದವು. 1962ರಲ್ಲಿ ನಡೆದ ಭಾರತ-ಚೀನಾ ನಡುವಿನ ಯುದ್ಧದಲ್ಲಿ ಭಾರತಕ್ಕೆ ಅಪಜಯವಾದ ನಂತರ ವಿದೇಶಾಂಗ ನೀತಿಯನ್ನು ನಿರ್ವಹಿಸುವಲ್ಲಿ ಜವಹರಲಾಲ್ ನೆಹರೂ ವಿಫಲರಾದರೆಂದು ಲೋಹಿಯಾ ಸೇರಿದಂತೆ ಅನೇಕ ನಾಯಕರು ಮತ್ತು ವಿರೋಧ ಪಕ್ಷಗಳಿಂದ ಕಟುಟೀಕೆಗೆ ತುತ್ತಾದರು. ಇದರ ಜೊತೆಗೆ ದೇಶದ ಹಲವಾರು ರಾಜ್ಯಗಳಲ್ಲಿ ರಾಜಕೀಯ ನಾಯಕರ ವೈಯಕ್ತಿಕ ಕಿತ್ತಾಟದಿಂದ ಕಾಂಗ್ರೆಸ್ ಪಕ್ಷ ತನ್ನ ಘನತೆ ಮತ್ತು ಜನರ ನಂಬಿಕೆಯನ್ನು ಕಳೆದುಕೊಳ್ಳಲು ಆರಂಭಿಸಿತು.

ಈ ಸಂದರ್ಭದಲ್ಲಿ ನೆಹರೂ ಅವರಿಗೆ ಕೂಡಲೇ ಕೆ ಕಾಮರಾಜ್ ನೆನಪಾದರು. ಅವರು ರಾಷ್ಟ್ರೀಯ ಅಧ್ಯಕ್ಷರಾದರೆ ಮಾತ್ರ ಪಕ್ಷದ ಅಸ್ತಿತ್ವ ಉಳಿಯಲು ಸಾಧ್ಯ ಎಂಬುದು ನೆಹರೂ ಅವರ ಬಲವಾದ ನಂಬಿಕೆಯಾಗಿತ್ತು. ಅವರ ಕಣ್ಣ ಮುಂದೆ ತಮಿಳುನಾಡಿನಲ್ಲಿ ಕಾಮರಾಜರು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ ಇತಿಹಾಸವಿತ್ತು ಜೊತೆಗೆ, ತಾವೇ ಸಾಕ್ಷಿಯಾಗಿದ್ದರು. 1951 ಮತ್ತು 1957ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ (1951ರ ಅಕ್ಟೋಬರ್‌ನಿಂದ 1952ರ ಫೆಬ್ರವರಿವರೆಗೆ ಪ್ರಥಮ ಸಂಸತ್ ಚುನಾವಣೆ ನಡೆದಿತ್ತು.) ಕಾಂಗ್ರೆಸ್ ಪಕ್ಷವು ಅತ್ಯಧಿಕ ಮತಗಳಿಂದ ಜಯ ಗಳಿಸಿತ್ತು. ಆ ಸಂದರ್ಭಧಲ್ಲಿ ದೇಶದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಹೊರತುಪಡಿಸಿದರೆ ಇತರೆ ಪ್ರಬಲ ವಿರೋಧ ಪಕ್ಷಗಳು ಇರಲಿಲ್ಲ. ಆದರೆ, 1962ರ ಮೂರನೆಯ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೊದಲ ಜನಪ್ರಿಯತೆಯನ್ನು ಕಳೆದುಕೊಂಡಿತ್ತು. ಪಕ್ಷಕ್ಕೆ ಬಹುಮತ ಬಂದರೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಕುಸಿಯುತ್ತಿರುವ ಅಂಶವು ಚುನಾವಣೆಯಿಂದ ಗೋಚರವಾಯಿತು.

ಈ ಕಾರಣಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಪಕ್ಷವನ್ನು ಸಂಘಟಿಸಬಲ್ಲ ಶಕ್ತಿ ಇರುವುದು ಕಾಮರಾಜರಿಗೆ ಮಾತ್ರ ಎಂಬುದು ನೆಹರೂರವರಿಗೆ ಮನವರಿಕೆಯಾಗಿತ್ತು. ಜೊತೆಗೆ, ಪಕ್ಷದಲ್ಲಿ ವಯಸ್ಸಾದ ನಾಯಕರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದರೇ ಹೊರತು, ದ್ವಿತೀಯ ಮಟ್ಟದ ನಾಯಕರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಲ್ಲಿ ಅಥವಾ ಬೆಳೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ಕಾಂಗ್ರೆಸ್ ಪಕ್ಷದ ಈ ದೌರ್ಬಲ್ಯವು ಅದರ ಶಾಶ್ವತ ಗುಣ ಎಂಬಂತೆ ಕಾಣುತ್ತಿದೆ. ಸ್ವಾತಂತ್ರ್ಯಾ ನಂತರ ಎಪ್ಪತ್ತೈದು ವರ್ಷಗಳ ನಂತರವೂ ಕಾಂಗ್ರೆಸ್ ಪಕ್ಷ ಇದೇ ದೌರ್ಬಲ್ಯದಿಂದ ಈಗಲೂ ಬಳಲುತ್ತಿದೆ. ಐವತ್ತು ತುಂಬಿದ ನಿಷ್ಠಾವಂತ ಶಾಸಕರು ಪಕ್ಷದ ದೃಷ್ಟಿಕೋನದಲ್ಲಿ ಇಂದಿಗೂ ಯುವ ಕಾರ್ಯಕರ್ತರಂತೆ ಕಾಣಿಸುತ್ತಿದ್ದಾರೆ. ಅಂತಹವರು ಸಚಿವರಾಗಲು ಅರವತ್ತು ತುಂಬಿರಬೇಕು ಮತ್ತು ನಾಯಕರಾಗಲು ಎಪ್ಪತ್ತೈದು ವರ್ಷ ಕಡ್ಡಾಯ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಹಾಗಾಗಿ, ಇಂದಿನ ಯುವಜನತೆಗೆ ಕಾಂಗ್ರೆಸ್ ಪಕ್ಷ ಸೇರುವುದೆಂದರೆ ಮುಳುಗುವ ಹಡಗಿನಲ್ಲಿ ಸಮುದ್ರ ಪ್ರಯಾಣ ಎಂಬಂತಾಗಿದೆ.

1962ರ ಭಾರತ-ಚೀನಾ ಯುದ್ಧದ ಅಪಜಯದ ನಂತರ ಪ್ರಧಾನಿ ನೆಹರೂ ಅವರ ಜನಪ್ರಿಯತೆ ಕುಸಿದದ್ದು ಮಾತ್ರವಲ್ಲದೆ, ನೆಹರೂ ನಂತರ ಪ್ರಧಾನಿ ಆಗಬಹುದಾದ ಪ್ರಭಾವಿ ನಾಯಕ ಎಂದು ಪರಿಗಣಿಸ್ಪಟ್ಟಿದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್ ಅವರು ಸಹ ಸಾಕಷ್ಟು ಟೀಕೆಗೆ ಒಳಗಾದರು. 1950ರ ದಶಕದಲ್ಲಿ ಜನಪ್ರಿಯವಾಗಿದ್ದ 'ಹಿಂದಿ-ಚೀನಿ ಭಾಯಿ-ಭಾಯಿ' ಎಂಬ ಘೋಷಣೆ ಸಾಕಷ್ಟು ಗೇಲಿಗೆ ಒಳಗಾಯಿತು. ಇದರ ಜೊತೆಗೆ 1962ರಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಬಲಪಂಥೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಮುರಾರ್ಜಿ ದೇಸಾಯಿಯವರ ಬಣ ಸೃಷ್ಟಿಯಾಗಿ, ಆಂತರಿಕ ಭಿನ್ನಾಭಿಪ್ರಾಯ ಬಹಿರಂಗವಾಗತೊಡಗಿತು. ಇದರ ಪರಿಣಾಮವೆಂಬಂತೆ, 1963ರಲ್ಲಿ ನಡೆದ ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸೋಲನ್ನಪ್ಪಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ನೆಹರೂ ಅವರ ರಾಜಿನಾಮೆಗೆ ಒತ್ತಾಯಿಸತೊಡಗಿದವು. ನೆಹರೂ ಅವರ ವಿಚಾರಧಾರೆಗಳನ್ನು ಲೋಕಸಭೆಯಲ್ಲಿ ರಾಮಮನೋಹರ ಲೋಹಿಯಾ ಮತ್ತು ಆಚಾರ್ಯ ಕೃಪಲಾನಿ ತೀವ್ರವಾಗಿ ವಿರೋಧಿಸುತ್ತ ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ನೆಹರೂ ಅವರಿಗೆ ಕಾಮರಾಜ್ ಒಳ್ಳೆಯ ಮಿತ್ರರು ಮಾತ್ರವಲ್ಲದೆ, ಮಾರ್ಗದರ್ಶಿಯಂತೆ ಕಂಡುಬಂದರು. ಹಾಗಾಗಿ, ಅವರ ಸಹಕಾರವನ್ನು ಬಯಸಿದರು.

ಕಾಂಗ್ರೆಸ್ ಪಕ್ಷವು ತಳಮಟ್ಟದಲ್ಲಿ ಕುಸಿಯುತ್ತಿದೆ ಎಂಬ ಅನುಭವ ಕಾಮರಾಜ್ ಅವರಿಗೂ ಮದ್ರಾಸ್ ರಾಜ್ಯದಲ್ಲಿ ಆಗಿತ್ತು. ಸಿ ಎನ್ ಅಣ್ಣಾದೊರೈ ನೇತೃತ್ವದ ಡಿಎಂಕೆ ಪಕ್ಷದತ್ತ ಯುವಕರು ಸೇರಿದಂತೆ ಗ್ರಾಮೀಣ ಭಾಗದ ಜನತೆ ಒಲವು ತೋರುತ್ತಿರುವುದನ್ನು ಅವರು ಹತ್ತಿರದಿಂದ ಗಮನಿಸಿದ್ದರು. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶಕ್ಕಾಗಿ ಯಾವುದೇ ಅಧಿಕಾರದ ಹಂಬಲವಿಲ್ಲದ ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕು ಎಂದು ಅವರು ನಿರ್ಧರಿಸಿದರು. ಅತ್ತ ರಾಷ್ಟ್ರ ಮಟ್ಟದಲ್ಲಿಯೂ ನೆಹರೂ ಇದೇ ರೀತಿಯಲ್ಲಿ ಯೋಚಿಸುತ್ತಿದ್ದರು. 1963ರ ಆಗಸ್ಟ್ ತಿಂಗಳಿನಲ್ಲಿ ಕಾರ್ಯಕ್ರಮದ ನಿಮಿತ್ತ ಹೈದರಾಬಾದಿಗೆ ಬಂದಿದ್ದ ನೆಹರೂ ಅವರನ್ನು ಭೇಟಿ ಮಾಡಿದ ಕಾಮರಾಜರು, "ನಾನು ಮುಖ್ಯ ಮಂತ್ರಿ ಪದವಿಗೆ ರಾಜಿನಾಮೆ ನೀಡಿ, ಮದ್ರಾಸ್ ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ಸ್ವೀಕರಿಸಲು ನಿರ್ಧರಿಸಿದ್ದೀನಿ," ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ನೆಹರೂ ಅವರಿಗೆ ಕಾಮರಾಜ್ ಅವರ ನಿರ್ಧಾರ ಸರಿ ಎನಿಸಿತು. ಇದನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲು ಏನಾದರೂ ಸಲಹೆ ನೀಡಿ ಎಂದು ನೆಹರೂ ಕೇಳಿದಾಗ ಕಾಮರಾಜ್ ಅವರಿಗೆ ತಕ್ಷಣ ಒಂದು ಆಲೋಚನೆ ಮೂಡಿತು. ದೇಶದ ಪ್ರತಿಯೊಬ್ಬ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ನೆಹರೂ ಸಚಿವ ಸಂಪುಟದ ಸಚಿವರು ಸ್ವಯಂ ನಿರ್ಧಾರದ ಮೂಲಕ ರಾಜಿನಾಮೆ ನೀಡುವುದು. ನಂತರ ಪ್ರಧಾನಿ ನೆಹರೂ ಸೇರಿದಂತೆ ಉಳಿದ ಹಿರಿಯ ನಾಯಕರು ರಾಜಿನಾಮೆ ನೀಡಿದವರಲ್ಲಿ ಯಾರನ್ನು ಪಕ್ಷದ ಸಂಘಟನೆಗೆ ನೇಮಿಸುವುದು ಮತ್ತು ಯಾವ ವ್ಯಕ್ತಿಯನ್ನು ಸಚಿವರನ್ನಾಗಿ ಪುನರ್  ನೇಮಕ ಮಾಡುವುದು ಎಂಬುದನ್ನು ನಿರ್ಧರಿಸುವುದು ಎಂಬ ಆಲೋಚನೆಯನ್ನು ಕಾಮರಾಜ್ ಮುಂದಿಟ್ಟಾಗ ಅದಕ್ಕೆ ನೆಹರೂ ಒಪ್ಪಿಗೆ ಸೂಚಿಸಿದರು.

'ಕಾಮರಾಜ್ ಪ್ಲಾನ್' ಅಥವಾ 'ಕಾಮರಾಜ್ ಯೋಜನೆ' ಎಂದು ಪ್ರಸಿದ್ಧವಾದ ಈ ಆಲೋಚನೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ವತಿಯಿಂದ ಆಗಸ್ಟ್ 24ರಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಯೋಜನೆಯ ಅಂಗವಾಗಿ ಪ್ರಥಮವಾಗಿ ಕಾಮರಾಜರು ಅಕ್ಟೋಬರ್ 3ರಂದು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ಅವರನ್ನು ಹಿಂಬಾಲಿಸಲು ದೇಶದ ಆರು ರಾಜ್ಯಗಳ ಮುಖ್ಯಮಂತ್ರಿಗಳು ಸಹ ರಾಜಿನಾಮೆ ನೀಡಲು ನಿರ್ಧರಿಸಿದರು. ಇದನ್ನು ಗಮನಿಸಿದ, ಲೋಕಸಭೆಯಲ್ಲಿ ವಿರೋಧ ಪಕ್ಷದ ಬಣದಲ್ಲಿದ್ದ ಆಚಾರ್ಯ ಕೃಪಲಾನಿಯವರು ನೆಹರೂ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧರಾದರು. ಇದು ದೇಶದ ಮೊದಲ ಅವಿಶ್ವಾಸ ನಿರ್ಣಯವಾಗಿತ್ತು. ಆದರೆ, ನೆಹರೂ ಮತ್ತು ಕಾಮರಾಜರ ಬುದ್ಧಿವಂತಿಕೆ ಮತ್ತು ಲೋಕಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜಾಣ್ಮೆಯ ನಡೆಯಿಂದಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಯಿತು.

ಲೋಕಸಭೆಯಲ್ಲಿ ನೆಹರೂ ವಿಶ್ವಾಸಮತ ಯಾಚಿಸಿದಾಗ

ಕಾಮರಾಜ್ ಜಾರಿಗೆ ತಂದ ಯೋಜನೆಯ ಫಲವಾಗಿ ನೆಹರೂ ಮಂತ್ರಿಮಂಡಲದ ಲಾಲ್ ಬಹದ್ದೂರ್ ಶಾಸ್ತ್ರಿ, ಮುರಾರ್ಜಿ ದೇಸಾಯಿ, ಜಗಜೀವನರಾಂ, ಬೆಜವಾಡ ಗೋಪಾಲ ರೆಡ್ಡಿ, ಎಸ್ ಕೆ ಪಾಟೀಲ್ ಹಾಗೂ ಕೆ ಎಲ್ ಶ್ರೀಮಾಲಿ ಇವರುಗಳು ಕೇಂದ್ರ ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಿದರು. ರಾಜ್ಯ ಮಟ್ಟದಲ್ಲಿ ಮದ್ರಾಸ್ ರಾಜ್ಯದಿಂದ ಕೆ ಕಾಮರಾಜ್, ಒಡಿಶಾ ರಾಜ್ಯದ ಬಿಜು ಪಟ್ನಾಯಕ್, ಜಮ್ಮು-ಕಾಶ್ಮೀರದಿಂದ ಭಕ್ಷಿ ಗುಲಾಮ್ ಮಹಮ್ಮದ್, ಬಿಹಾರ್ ರಾಜ್ಯದಿಂದ ಬಿನೋದಾನಂದ್ ಜಾ, ಉತ್ತರ ಪ್ರದೇಶದ ಸಿ ಬಿ ಗುಪ್ತಾ ಹಾಗೂ ಮಧ್ಯಪ್ರದೇಶ ರಾಜ್ಯದಿಂದ ಬಿ ಎ\ ಮಂಡೋಲಿ ಇವರುಗಳು ರಾಜಿನಾಮೆ ನೀಡಿದರು. ಕಾಮರಾಜರ ಈ ಯೋಜನೆ ಪಕ್ಷದ ಹಲವು ನಾಯಕರ ನಡುವೆ ವಿವಾದಕ್ಕೆ ಒಳಗಾಯಿತು. ನೆಹರೂ ಸಹ ರಾಜಿನಾಮೆ ನೀಡಬೇಕಿತ್ತು ಎಂಬುದು ಹಲವು ಹಿರಿಯ ನಾಯಕರ ಅಭಿಪ್ರಾಯವಾಗಿತ್ತು. ನೆಹರೂ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಲು ಮುಂದೆ ಬಂದಾಗ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಮಂಡಳಿಯಲ್ಲಿ ಅವರನ್ನು ತಡೆಯಲಾಯಿತು. "ಪಕ್ಷವು ಅಭದ್ರತೆಯ ಸ್ಥಿತಿಯಲ್ಲಿರುವಾಗ ನೀವು ಮುಂದೆ ನಿಂತು ಮುನ್ನಡೆಸಬೇಕು," ಎಂಬ ಮಾತುಗಳು ಕೇಳಿಬಂದ ಹಿನ್ನಲೆಯಲ್ಲಿ ನೆಹರೂರವರು ತಮ್ಮ ತೀರ್ಮಾನವನ್ನು ಬದಲಾಯಿಸಿದರು.

ಕಾಮರಾಜರ ಈ ಯೋಜನೆಯನ್ನು ವಿರೋಧ ಪಕ್ಷದ ನಾಯಕರು, ಅದರಲ್ಲೂ ವಿಶೇಷವಾಗಿ ರಾಮಮನೋಹರ ಲೋಹಿಯಾ ಮತ್ತು ಆಚಾರ್ಯ ಕೃಪಲಾನಿ ಮುಂತಾದವರು, "ನೆಹರೂ ಅವರಿಗೆ ಸರ್ವಾಧಿಕಾರಿಯ ಪಟ್ಟವನ್ನು ಕಟ್ಟುವ ಪ್ರಯತ್ನ," ಎಂದು ದೂಷಿಸಿದರು. ಜೊತೆಗೆ, ಕಾಂಗ್ರೆಸ್ ಪಕ್ಷದ ಅತೃಪ್ತ ಬಣದ ಮುರಾರ್ಜಿ ದೇಸಾಯಿ ಮತ್ತಿತರರಿಗೆ ಈ ಯೋಜನೆ ತೃಪ್ತಿದಾಯಕವಾಗಿರಲಿಲ್ಲ. ಏಕೆಂದರೆ, ಅವರಿಗೆ ಪಕ್ಷದ ಸಂಘಟನೆಗಿಂತ ಹೆಚ್ಚಾಗಿ ಅಧಿಕಾರದ ಗದ್ದುಗೆಯಲ್ಲಿ ಇರುವುದು ಮುಖ್ಯವಾಗಿತ್ತು. ತಮ್ಮ ವಯಸ್ಸು ಮತ್ತು ಹಿರಿಯತನವನ್ನು ಅವರು ಅಧಿಕಾರಕ್ಕಾಗಿ ಪ್ರಬಲ ಅಸ್ತ್ರವನ್ನಾಗಿ ಬಳಸುತ್ತಿದ್ದರು. ಗಾಂಧಿ ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲ್ ನಂತರ ನೆಹರೂ ಹಿರಿಯ ನಾಯಕರಾಗಿದ್ದರು. ವಾಸ್ತವವಾಗಿ ನೆಹರೂ ಗಾಂಧೀಜಿಯ ನಂತರದ ಸ್ಥಾನದಲ್ಲಿದ್ದರು. ರಾಜಕೀಯ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಪಟೇಲ್ ಅವರಿಗಿಂತ ಹಿರಿಯರಾಗಿದ್ದರು. 1929ರಲ್ಲಿ ತಂದೆ ಮೋತಿಲಾಲ್ ನೆಹರೂ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಿರಿಯನ್ನು ನಿಭಾಯಿಸಿದ ಅನುಭವವಿತ್ತು.

ಮುರಾರ್ಜಿ ದೇಸಾಯಿ

ಆ ಕಾಲಘಟ್ಟದ ರಾಜಕೀಯ ವಿಶ್ಲೇಷಕರ ಪ್ರಕಾರ, ಕಾಮರಾಜ್ ಯೋಜನೆಯು ಪಕ್ಷದ ಒಳಗಿದ್ದ ಬಲಪಂಥೀಯ ನಾಯಕರ ಶಕ್ತಿಯನ್ನು ಅಡಗಿಸುವ ಒಂದು ಕ್ರಿಯೆಯಾಗಿತ್ತು. ಚೀನಾ ಯುದ್ಧದ ನಂತರ ಸೋಲಿನ ಹೊಣೆಯನ್ನು ಸಚಿವರಾಗಿದ್ದ ಕೃಷ್ಣ ಮೆನನ್ ಮತ್ತು ಕೇಶವ್‍ ದೇವ್ ಮಾಳವೀಯ ಅವರ ತಲೆಗೆ ಕಟ್ಟಿದ್ದ ಕಾಂಗ್ರೆಸ್‍ನ ಬಲಪಂಥೀಯರು, ಈ ನೆಪದಲ್ಲಿ ಪ್ರಧಾನಿ ನೆಹರೂ ಅವರನ್ನು ಬಲಿ ತೆಗೆದುಕೊಳ್ಳಲು ಕಾಯುತ್ತಿದ್ದರು. ಈ ವಿಷಯದಲ್ಲಿ ಮುರಾರ್ಜಿ ದೇಸಾಯಿ ಅತ್ಯಂತ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದರು. ಆದರೆ, ಕಾಮರಾಜ್ ಅವರು ರೂಪಿಸಿದ ರಾಜಿನಾಮೆಯ ಈ ಯೋಜನೆ ಭಿನ್ನ ನಾಯಕರ ರಕ್ಕೆಪುಕ್ಕಗಳನ್ನು ಕತ್ತರಿಸಿಹಾಕುವಲ್ಲಿ ಯಶಸ್ವಿಯಾಯಿತು.

ತಮ್ಮ ಈ ಯೋಜನೆಯು ಅನೇಕ ವಿವಾದಗಳಿಗೆ ಕಾರಣವಾದ ಹಿನ್ನಲೆಯಲ್ಲಿ ಕಾಮರಾಜರು ಪ್ರತಿಕ್ರಿಯೆ ನೀಡಿ, "ಈ ಕ್ರಿಯೆಯಲ್ಲಿ ಯಾವ ಸ್ವಾರ್ಥವೂ ಅಡಗಿಲ್ಲ. ಇದು ಪಕ್ಷದ ಆಂತರಿಕ ಕ್ರಿಯೆಗಳಲ್ಲಿ ಒಂದಾಗಿದ್ದು, ಪಕ್ಷವನ್ನು ಸಂಘಟಿಸುವ ದೃಷ್ಟಿಕೋನದಿಂದ ಸಾಮೂಹಿಕವಾಗಿ ಎಲ್ಲರೂ ತೆಗೆದುಕೊಂಡ ತೀರ್ಮಾನವಾಗಿದೆ," ಎಂದು ಸೃಷ್ಟೀಕರಣ ನೀಡಿದರು. ಕೆಲವರು ಇದನ್ನು ಇಂದಿರಾ ಗಾಂಧಿಯವರನ್ನು ಮುಂದೆ ತರಲು ನೆಹರೂ ಅವರ ಪ್ರಧಾನಿ ಪಟ್ಟವನ್ನು ಮುಂದುವರಿಸುವ ಹುನ್ನಾರ ಎಂದು ಆರೋಪಿಸಿದರು. ಇಂದಿರಾ ಗಾಂಧಿಯವರು 1959ರಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತ, ತಂದೆಯವರ ಆಪ್ತ ಸಹಾಯಕರಂತೆ ನೆಹರೂ ಅವರ ಆಡಳಿತದಲ್ಲಿ ಪಾಲ್ಗೊಳ್ಳುತ್ತ, ವಿದೇಶ ಪ್ರವಾಸ ಮಾಡುತ್ತ ರಾಜಕೀಯ ಅನುಭವವನ್ನು ಪಡೆಯುತ್ತಿದ್ದರು. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ವಾಸ್ತವವಾಗಿ ಕೇವಲ ಅಧಿಕಾರದ ಗದ್ದುಗೆಯಲ್ಲಿ ಉಳಿಯಬಯಸಿದ್ದ ಅನೇಕರು ಈ ಯೋಜನೆಯಿಂದಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗದೆ ನೇಪಥ್ಯಕ್ಕೆ ಸರಿದರು. ಇದು ಪರೋಕ್ಷವಾಗಿ ಆಗ ತಾನೇ ರಾಜಕೀಯದಲ್ಲಿ ಅರಳತೊಡಗಿದ್ದ ಇಂದಿರಾ ಗಾಂಧಿಯವರಿಗೆ ಆಡಳಿತದ ಅನುಭವ ದಕ್ಕಿಸಿಕೊಳ್ಳಲು ಸಾಧ್ಯವಾಯಿತು. ನೆಹರೂ ಅವರು ಪ್ರಧಾನಿಯಾಗಿ ಮುಂದುವರಿಯುವುದರ ಜೊತೆಗೆ ಕಾಮರಾಜರಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಿ, ಪಕ್ಷದ ಸಂಘಟನೆಗಾಗಿ ದೆಹಲಿಯಲ್ಲಿ ಉಳಿಸಿಕೊಂಡರು. ಅವರಿಗೆ ಜನಪಥ್ ರಸ್ತೆಯಲ್ಲಿ ನಾಲ್ಕನೆಯ ನಂಬರಿನ ಬಂಗಲೆಯನ್ನೂ ನೀಡಿದರು. ಈ ಬೆಳವಣಿಗೆಗಳಿಂದ ಕಾಮರಾಜರು ನೆಹರೂ ನಂತರದ ಅತ್ಯಂತ ಪ್ರಭಾವಶಾಲಿ ನಾಯಕರಾದರು. ದಶಕದ ಹಿಂದೆ ಮದ್ರಾಸ್ ರಾಜ್ಯದಲ್ಲಿ ನಾಯಕರುಗಳನ್ನು ರೂಪಿಸುತ್ತಿದ್ದ ಕಾಮರಾಜ್ ಅವರು, 1963ರ ಅಂತ್ಯದ ವೇಳೆಗೆ ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಕಿಂಗ್ ಮೇಕರ್ ಎಂದು ಪ್ರಸಿದ್ಧಿಯಾದರು.

ಅಂದಿನ ಕಾಲಘಟ್ಟದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷಗಿರಿ ಎಂದರೆ, ಪ್ರಧಾನಿ ಹುದ್ದೆಯ ನಂತರ ಎರಡನೆಯ ಅತ್ಯಂತ ಗೌರವಾನ್ವಿತ ಹುದ್ದೆಯಾಗಿತ್ತು. ಈ ಹುದ್ದೆಯನ್ನು ಅಲಂಕರಿಸಿದ ತಮಿಳುನಾಡಿನ ಮೂರನೆಯ ವ್ಯಕ್ತಿ ಕಾಮರಾಜ್. ಇದಕ್ಕೂ ಮುನ್ನ 1920ರಲ್ಲಿ, ಸೇಲಂನ ವಿಜಯರಾಘವಾಚಾರಿಯರ್ ಮತ್ತು 1926ರಲ್ಲಿ ಎಸ್ ಶ್ರೀನಿವಾಸ ಅಯ್ಯಂಗಾರ್ ಎಂಬ ಕಾಮರಾಜರ ಮಾಗದರ್ಶಕರಾಗಿದ್ದ ಎಸ್ ಸತ್ಯಮೂರ್ತಿಯವರ ರಾಜಕೀಯ ಗುರು ಈ ಹುದ್ದೆಯನ್ನು ಅಲಂಕರಿಸಿದ್ದರು. ಕಾಮರಾಜರು ಇದಕ್ಕಾಗಿ ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ತೊರೆದು ಬಂದಿದ್ದರು. ಅವರಿಗೆ ಅಧಿಕಾರಕ್ಕಿಂತ ತಮ್ಮ ಪಾಲಿಗೆ ಶಾಲೆ, ಕುಟುಂಬ ಎಲ್ಲವೂ ಆಗಿದ್ದ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದು ಮುಖ್ಯವಾಗಿತ್ತು. 1963ರ ಅಕ್ಟೋಬರ್ 3ರಂದು ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿದ ತಕ್ಷಣ, ನವಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಕಾಮರಾಜರ ಹೆಸರನ್ನು ನೆಹರೂ ಅವರು ಸೂಚಿಸಿದರು. ಅವರ ಮನಸ್ಸಿನಲ್ಲಿ ಕಾಮರಾಜ್, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಪಶ್ಚಿಮ ಬಂಗಾಳದ ಅತುಲ್ಯ ಘೋಷ್ ಮೂರು ಹೆಸರುಗಳಿದ್ದವು. ನೆಹರೂ ಬಣದ ಆಪ್ತರಾದ ಮತ್ತು ನೆಹರೂ ಸಿಂಡಿಕೇಟ್ ಎಂದು ಗುರುತಿಸಿಕೊಂಡಿದ್ದ ನೀಲಂ ಸಂಜೀವ ರೆಡ್ಡಿ, ಎಸ್ ನಿಜಲಿಂಗಪ್ಪ, ಅತುಲ್ಯ ಘೋಷ್, ಎಸ್ ಕೆ ಪಾಟೀಲ್ ಮುಂತಾದವರು ಕಾಮರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಜನಸಾಮಾನ್ಯರ ಜೊತೆ ಕಾಮರಾಜ್

ಕಾಮರಾಜರು ದೆಹಲಿಗೆ ಬಂದು ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದು ಪ್ರಧಾನಿ ನೆಹರೂ ಅವರಿಗೆ ನೈತಿಕ ಬಲ ಬಂದಂತಾಯಿತು. ಕೂಡಲೇ ಒಡಿಶಾದ ಭುವನೇಶ್ವರದಲ್ಲಿ ಕಾಮರಾಜ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು. ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ನಾಯಕರ ಮುಂದಿರುವ ಸವಾಲುಗಳು ಮತ್ತು ಬದಲಾಗುತ್ತಿರುವ ದೇಶದ ಸಾಮಾಜಿಕ ಮತ್ತು ರಾಜಕೀಯ ನಂಬಿಕೆಗಳ ಕುರಿತು ವಿವರವಾಗಿ ಮಾತನಾಡಿದ ಕಾಮರಾಜರು, "ತಳಮಟ್ಟದಲ್ಲಿ ನಾವು ಕಾರ್ಯಕರ್ತರನ್ನು ಗುರುತಿಸಿ ಅವರ ಮನವೊಲಿಸುವುದರ ಮೂಲಕ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು," ಎಂದು ಕಾರ್ಯಕಾರಿಣಿ ಮಂಡಳಿಯ ಸದಸ್ಯರಿಗೆ ಸಲಹೆ ನೀಡಿದರು. ಜೊತೆಗೆ, ದೆಹಲಿಯಲ್ಲಿ ಕೂರದೆ, ಅಂದಿನ ಮೈಸೂರು ರಾಜ್ಯ, ಮದ್ರಾಸ್ ರಾಜ್ಯ, ಆಂಧ್ರ, ಒಡಿಶಾ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರವಾಸ ಮಾಡಿ, ಸ್ಥಳೀಯ ಕಾಂಗ್ರೆಸ್ ಪದಾಧಿಕಾರಿಗಳಿಗೆ ನೈತಿಕ ಬೆಂಬಲ ತುಂಬಿದರು. ತಾವು ಮುಖ್ಯಮಂತ್ರಿ ಪದವಿ ತ್ಯಜಿಸಿ, ಎಂ ಭಕ್ತವತ್ಸಲ ಅವರಿಗೆ ಅಧಿಕಾರ ವಹಿಸಿ ಬಂದ ನಂತರ, ಮದ್ರಾಸ್ ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಅಣ್ಣಾ ದೊರೈ ನೇತೃತ್ವದ ಡಿಎಂಕೆ ಪಕ್ಷ ಮುನ್ನಲೆಗೆ ಬರುತ್ತಿರುವುದನ್ನು ಅವರು ಗಮನಿಸಿದ್ದರು.

ಕಾಮರಾಜ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ, ನೆಹರೂ ಅವರ ಆಡಳಿತದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಸರ್ಕಾರ ಸುಗಮವಾಗಿ ಸಾಗುತ್ತಿತ್ತು. ಆದರೆ, ನೆಹರೂ ಪಾಲಿಗೆ  ಈ ಸಂತೃಪ್ತಿ ಬಹಳ ದಿನ ಉಳಿಯಲಿಲ್ಲ. 1964ರ ಮೇ27ರಂದು ನೆಹರೂ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ನೆಹರೂ ನಿಧನರಾದ ಕೂಡಲೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹೊಣೆ ಕಾಮರಾಜ್ ಅವರ ಹೆಗಲಿಗೆ ಬಿತ್ತು. ವಾಸ್ತವವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಪ್ರಧಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಅವರು ನೆಹರೂ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಗುಲ್ಜಾರಿ ಲಾಲ್ ನಂದಾ ಅವರನ್ನು ಉಸ್ತುವಾರಿ ಪ್ರಧಾನಿಯನ್ನಾಗಿ ನೇಮಕ ಮಾಡಿ, ಪ್ರಧಾನಿ ಹುದ್ದೆಗೆ ನಾಯಕರನ್ನು ಹುಡುಕತೊಡಗಿದರು. ಗುಲ್ಜಾರಿ ಲಾಲ್ ನಂದಾ, ಲಾಲ್ ಬಹುದ್ದೂರ್ ಶಾಸ್ತ್ರಿ, ಮುರಾರ್ಜಿ ದೇಸಾಯಿ ಹಾಗೂ ಇಂದಿರಾ ಗಾಂಧಿ ಹೆಸರುಗಳು ಅವರ ಮುಂದೆ ಇದ್ದವು. ಅತುಲ್ಯ ಘೋಷ್, "ನೀವೇ ಪ್ರಧಾನಿಯಾಗಿ," ಎಂದು ಕಾಮರಾಜರಿಗೆ ಆಹ್ವಾನ ನೀಡಿದಾಗ, "ನನಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬರುವುದಿಲ್ಲ. ಕೇವಲ ಸಂವಹನ ಭಾಷೆಯಾಗಿ ಮಾತ್ರ ಬಳಸಬಲ್ಲೆ. ಮೇಲಾಗಿ ನಾನೊಬ್ಬ ಅವಿದ್ಯಾವಂತ. ಭಾರತದ ಪ್ರಧಾನಿಯಾಗುವ ವ್ಯಕ್ತಿ ಇಲ್ಲಿನ ರಾಜ್ಯಗಳಷ್ಟೇ ಅಲ್ಲ, ಜಗತ್ತಿನ ಇತರೆ ದೇಶಗಳ ಜೊತೆಗೆ ಸಮರ್ಥವಾಗಿ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರಬೇಕು," ಎಂದು ಹೇಳುವುದರ ಮೂಲಕ, ಭಾರತದ ರಾಜಕಾರಣ ಮತ್ತು ನಾಯಕ ಹೇಗಿರಬೇಕು ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನು ಬರೆದರು.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | 'ತಲೈವ' ರಜನೀಕಾಂತ್ ಕುರಿತು ನಟ ಅಶೋಕ್ ಬರೆದ 'ಗೆಳೆಯ ಶಿವಾಜಿ' ಪುಸ್ತಕದ ಆಯ್ದ ಭಾಗ

ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯ ಸದಸ್ಯರು ಮತ್ತು ಸಂಸದೀಯ ಮಂಡಳಿಯ ಎಲ್ಲ ಸದಸ್ಯರನ್ನು ಪ್ರತ್ಯೇಕವಾಗಿ ರಾಜಪಥ್ ರಸ್ತೆಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ಅವರ ಅಭಿಪ್ರಾಯ ಸಂಗ್ರಹಿಸತೊಡಗಿದರು. ಈ ನಡುವೆ, ಮುರಾರ್ಜಿ ದೇಸಾಯಿ ಬಲಪಂಥೀಯರ ತಂಡವನ್ನು ಕಟ್ಟಿಕೊಂಡು ಪ್ರಧಾನಿಯಾಗಲು ಕಾಮರಾಜರ ಮೇಲೆ ಒತ್ತಡ ಹೇರತೊಡಗಿದರು. ಜೊತೆಗೆ ಪ್ರಧಾನಿಯಾಗುವ ವ್ಯಕ್ತಿಯನ್ನು ಸಂಸತ್ ಸದಸ್ಯರು ಮಾತ್ರ ಆಯ್ಕೆ ಮಾಡಬೇಕು ಎಂಬ ವಾದವನ್ನು ಮಂಡಿಸಿದರು. ಅಷ್ಟರಲ್ಲಿ ಬಹುತೇಕ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದ ಕಾಮರಾಜರು, "ಸಂಸದೀಯ ಮಂಡಳಿಯ ನಾಯಕ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ," ಎಂದು ಹೇಳುವುದರ ಮೂಲಕ, ಮುರಾರ್ಜಿಯವರ ಮಾತುಗಳನ್ನು ತಿರಸ್ಕರಿಸಿದರು. ಅಂತಿಮವಾಗಿ, ಹಿರಿಯ ನಾಯಕರೊಂದಿಗೆ ಸಮಾಲೋಚಿಸಿ, ಪ್ರಾಮಾಣಿಕತೆ, ಸರಳತೆ, ಮಿತಭಾಷಿ ಹಾಗೂ ಪಾರದರ್ಶಕತೆಯ ಜೀವನದಲ್ಲಿ ಗಾಂಧಿಯವರ ಉತ್ತರಾಧಿಕಾರಿ ಎಂಬಂತೆ ಇದ್ದ ಲಾಲ್ ಬಹುದ್ದೂರ್ ಶಾಸ್ತ್ರಿಯವರನ್ನು ನೆಹರೂ ಉತ್ತರಾಧಿಕಾರಿ ಮತ್ತು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಿದರು. ಕಾಮರಾಜರ ಈ ಪ್ರಾಮಾಣಿಕ ನಡೆ ಇಡೀ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಜೊತೆಗೆ, ಪಕ್ಷಭೇದ ಮರೆತು ಅವರನ್ನು ಇತರೆ ರಾಷ್ಟ್ರೀಯ ನಾಯಕರು ಗೌರವಿಸತೊಡಗಿದರು.

ಪುಸ್ತಕ: ದಕ್ಷಿಣದ ಗಾಂಧಿ ಕೆ ಕಾಮರಾಜ್ | ಲೇಖಕರು: ಎನ್ ಜಗದೀಶ್ ಕೊಪ್ಪ | ಪ್ರಕಟಣೆ: ಸಂಕಥನ ಪ್ರಕಾಶನ, ಮಂಡ್ಯ | ಬೆಲೆ: ₹180 | ಸಂಪರ್ಕ ಸಂಖ್ಯೆ: ರಾಜೇಂದ್ರ ಪ್ರಸಾದ್ (ವಾಟ್ಸಾಪ್ ಮಾತ್ರ) - 98861 33949

ನಿಮಗೆ ಏನು ಅನ್ನಿಸ್ತು?
3 ವೋಟ್
eedina app