ಫೇಸ್‌ಬುಕ್‌ನಿಂದ | ವಿಲ್ಸನ್ ಕಟೀಲ್ ಬರೆದ 'ಮಾಡರ್ನ್ ಗಡ್ಡದ ಮಹಾರಾಜನ ನಾಲ್ಕು ಪ್ರಸಂಗ'

ಮಹಾರಾಜ ಮಂತ್ರಿಯನ್ನು ಕೇಳಿದ, "ನನ್ನ ಗಡ್ದ ಎಳೆದವನ ಬಗ್ಗೆ ನಿನ್ನ ಅಭಿಪ್ರಾಯ ಏನು?" ಮಂತ್ರಿ ನಗುತ್ತ ಉತ್ತರಿಸಿದ: "ಅಷ್ಟು ಸಲುಗೆಯಿಂದ ನಿಮ್ಮ ಮುಂದೆ ನಿಂತು ನಿಮ್ಮ ಗಡ್ಡ ಎಳೆಯುವ ಧೈರ್ಯ ನೀವೇ ಸಾಕಿ ಸಲಹಿ ಬೆಳೆಸಿದ ಯಾರೋ ಮೀಡಿಯಾದವನಿಗಲ್ಲದೆ ಇನ್ಯಾರಿಗಿದೆ ಪ್ರಭುವೇ? ನಿಮ್ಮ ಗಡ್ಡ ಎಳೆದವನಿಗೆ ಒಂದೆರಡು ಬಿಸ್ಕೀಟು ಕೊಡಿ..."

ಪ್ರಸಂಗ 1: ಗಡ್ಡ ಎಳೆದವನಿಗೆ...

ಗಾಂಭೀರ್ಯದಿಂದ ಸಿಂಹಾಸನದಲ್ಲಿ ಕುಳಿತ ಮಹಾರಾಜ, ತನ್ನ ಗಡ್ದವನ್ನು ನೇವರಿಸಿ ಒಂದು ಪ್ರಶ್ನೆಯನ್ನು ಸಭೆಯ ಮುಂದಿಟ್ಟ - "ನನ್ನ ಗಡ್ಡ ಎಳೆದವನಿಗೆ ಏನು ಮಾಡಬೇಕು?"

ಆಸ್ಥಾನದ ಮಂತ್ರಿಗಳು ಒಬ್ಬೊಬ್ಬರಾಗಿ ಸಲಹೆ ಕೊಟ್ಟರು:

"ಆತನನ್ನು ರಾಜ್ಯದ್ರೋಹಿಗಳ ಗುಂಪಿಗೆ ಸೇರಿಸಿ..."

"ಆತನ ಮೇಲೆ ತೆರಿಗೆ ಅಧಿಕಾರಿಗಳಿಂದ ದಾಳಿ ಮಾಡಿಸಿ..."

"ನಮ್ಮ ಟ್ರೋಲ್ ಸೈನ್ಯವನ್ನು ಬಳಸಿ ಆತನ ಮಾನ ಹರಾಜು ಹಾಕಿಸಿ..."

"ಆತನು ಉಸಿರಾಡುವ ಗಾಳಿಯ ಮೇಲೂ ತೆರಿಗೆ ಹಾಕಿ..."

ಎಲ್ಲರ ಸಲಹೆ-ಸೂಚನೆಗಳನ್ನು ಶಾಂತಚಿತ್ತದಿಂದ ಆಲಿಸಿದ ಮಹಾರಾಜ, ಕೊನೆಗೆ ತನ್ನ ಬುದ್ಧಿವಂತ ಮಂತ್ರಿಯನ್ನು ಕೇಳಿದ, "ನನ್ನ ಗಡ್ದ ಎಳೆದವನ ಬಗ್ಗೆ ನಿನ್ನ ಅಭಿಪ್ರಾಯ ಏನು?"

ಬುದ್ಧಿವಂತ ಮಂತ್ರಿ ನಗುತ್ತ ಉತ್ತರಿಸಿದ: "ಅಷ್ಟು ಸಲುಗೆಯಿಂದ ನಿಮ್ಮ ಮುಂದೆ ನಿಂತು ನಿಮ್ಮ ಗಡ್ಡ ಎಳೆಯುವ ಧೈರ್ಯ ನೀವೇ ಸಾಕಿ ಸಲಹಿ ಬೆಳೆಸಿದ ಯಾರೋ ಮೀಡಿಯಾದವನಿಗಲ್ಲದೆ ಇನ್ಯಾರಿಗಿದೆ ಪ್ರಭುವೇ? ನಿಮ್ಮ ಗಡ್ಡ ಎಳೆದವನಿಗೆ ಒಂದೆರಡು ಬಿಸ್ಕೀಟು ಕೊಡಿ..."

* * * *

ಪ್ರಸಂಗ 2: ಮಾರುವೇಷ

ಒಂದು ದಿನ ಮಹಾರಾಜನಿಗೆ ತನ್ನ ಜನಪ್ರಿಯತೆ ಕುಸಿಯುತ್ತಿದೆಯೇ ಎಂಬ ಅನುಮಾನ ಶುರುವಾಯಿತು. ತನ್ನ ಬಗ್ಗೆ ರಾಜ್ಯದ ಜನರು ಏನು ಅಭಿಪ್ರಾಯ ಹೇಳುತ್ತಾರೆ ಎಂದು ತಿಳಿದುಕೊಳ್ಳುವುದಕ್ಕಾಗಿ ಮಾರುವೇಷದಲ್ಲಿ ಊರು ಸುತ್ತುವುದಕ್ಕೆ ಮುಂದಾದ.

ಸಾವಿರಾರು ವೇಷಭೂಷಣ, ಮುಖವಾಡಗಳ ನಡುವೆ ನಿಂತ ರಾಜನಿಗೆ, ಯಾವ ವೇಷ ತೊಡುವುದು ಎಂಬುವುದೇ ತಲೆನೋವಾಯಿತು. ಕೊನೆಗೆ ತನ್ನ ಆಸ್ಥಾನದ ಬುದ್ಧಿವಂತ ಮಂತ್ರಿಯನ್ನು ಬರಹೇಳಿ, ತನಗೊಂದು ವೇಷಭೂಷಣ ಆರಿಸಿ ಕೊಡಲು ಹೇಳಿದ.

ಕೊಂಚ ಹೊತ್ತಿನ ಬಳಿಕ ಕೈಯಲ್ಲಿ ಒಂದು ಮಡಿಕೆ ಹಿಡಿದುಕೊಂಡು ಬಂದ ಬುದ್ಧಿವಂತ ಮಂತ್ರಿ ಹೇಳಿದ: "ಮಹಾಪ್ರಭು... ನೀವು ತಲೆಗೆ ಈ ಮಡಿಕೆ ಸಿಗಿಸಿಕೊಂಡರೆ ಯಾರಿಗೂ ಅನುಮಾನ ಬಾರದು..."

"ಅದು ಸರಿ ಮಂತ್ರಿಗಳೇ... ತಲೆಯ ಮೇಲೇನೋ ಈ ಮಡಿಕೆಯನ್ನು ಹಾಕಿಕೊಳ್ಳಬಹುದು. ಆದರೆ, ಉಡಲು ಒಂದು ವೇಷ ಬೇಕಲ್ಲವೇ?"

ಬುದ್ಧಿವಂತ ಮಂತ್ರಿ ಉತ್ತರಿಸಿದ: "ಕ್ಷಮಿಸಿ ಮಹಾಪ್ರಭುವೇ... ಆಸ್ಥಾನದಲ್ಲಿರುವ ಸ್ವಂತ ಮತ್ತು ಪರರಾಜ್ಯದ ರಾಜರಿಂದ ಬಾಡಿಗೆಗೆ ತಂದ ಎಲ್ಲ ವೇಷಗಳನ್ನು ನೀವು ಈಗಾಗಲೇ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಟ್ಟಿದ್ದೀರಿ. ಈಗ ಯಾವ ವೇಷದಲ್ಲಿ ಹೋದರೂ ಜನರು ಗುರುತು ಹಿಡಿಯುವ ಅಪಾಯವಿದೆ. ಆದ್ದರಿಂದ ಈ ಮಡಿಕೆಯನ್ನು ಮಾತ್ರವೇ ತೊಡುವುದು ಉತ್ತಮ ಮಹಾಪ್ರಭು..."

* * * *

ಪ್ರಸಂಗ 3: ವಿಚಿತ್ರ ರೋಗ

ರಾಜ್ಯದಲ್ಲಿ ಭಯಂಕರ ರೋಗ ಕಾಣಿಸಿಕೊಂಡಿತು. ದಿನೇ-ದಿನೇ ಸಾಯುವವರ ಸಂಖ್ಯೆ ಮಿತಿ ಮೀರತೊಡಗಿತು. ಈ ಮಾರಣಾಂತಿಕ ಕಾಯಿಲೆ ತರುವ ರೋಗಾಣುವಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಜೆಗಳನ್ನು ಉದ್ದೇಶಿಸಿ ಮಹಾರಾಜ ಭಾಷಣ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಭಾಷಣ ಬರೆದು ಮುಗಿಸಿದ ರಾಜ, ಹಾಳೆಯನ್ನು ಬುದ್ಧಿವಂತ ಮಂತ್ರಿಯ ಕೈಗಿತ್ತು, ಸರಿಯಿದೆಯೇ ಎಂದು ಪರೀಕ್ಷಿಸಲು ತಿಳಿಸಿದ. ಬುದ್ಧಿವಂತ ಮಂತ್ರಿ ಪರರಾಜ್ಯದಿಂದ ತರಿಸಿದ ವಿಚಿತ್ರ ಯಂತ್ರದೊಳಗೆ ಕಾಗದವನ್ನು ತುರುಕಿದ.

ಇದನ್ನು ಗಮನಿಸಿದ ರಾಜ ಅಚ್ಚರಿಯಿಂದ ಕೇಳಿದ, "ಇದೇನು ಮಾಡುತ್ತಿರುವಿರಿ ಮಂತ್ರಿಗಳೇ? ಭಾಷಣದ ಹಾಳೆಯನ್ನು ಯಾಕೆ ಈ ಯಂತ್ರದೊಳಗೆ ತುರುಕುತ್ತಿದ್ದೀರಿ?"

ಬುದ್ಧಿವಂತ ಮಂತ್ರಿ ಉತ್ತರಿಸಿದ: "ಮಹಾಪ್ರಭುವೇ... ಇದು ಹೊರರಾಜ್ಯದಿಂದ ತರಿಸಿದ ಯಂತ್ರ. ಇದು ರೋಗ ಹರಡುವ ರೋಗಾಣುಗಳನ್ನು ಕಂಡುಹಿಡಿದು ಕೊಲ್ಲುತ್ತದೆ..."

"ಆದರೆ ಇದು ಈಗಷ್ಟೇ ನಾನು ಬರೆದ ಭಾಷಣದ ಕಾಗದ. ಇದನ್ನು ನಾನಲ್ಲದೆ ಇದುವರೆಗೆ ಯಾರೂ ಮುಟ್ಟಿಲ್ಲ. ಎಂಜಲು ತಾಗುವುದಂತೂ ದೂರದ ಮಾತು... ಇದರಲ್ಲಿ ರೋಗಾಣುಗಳಿರಲು ಸಾಧ್ಯವೇ?" ರಾಜ ಅರ್ಥವಾಗದೆ ಕೇಳಿದ.

ಬುದ್ಧಿವಂತ ಮಂತ್ರಿ ತಣ್ಣಗೆ ಉತ್ತರಿಸಿದ: "ಕ್ಷಮಿಸಿ ಮಹಾಪ್ರಭುವೇ... ರೋಗಾಣುಗಳು ಎಂಜಲಿನ ಮೂಲಕ ಮಾತ್ರವಲ್ಲ, ಮಾತಿನ ಮೂಲಕವೂ ಹರಡಬಹುದು..."

* * * *

ಪ್ರಸಂಗ 4: ವಿದೂಷಕರಿಗೆ ಸ್ಪರ್ಧೆ

ರಾಜ ಇದ್ದಕ್ಕಿದ್ದಂತೆ ಖಿನ್ನತೆಗೆ ಒಳಗಾದ. ನಗು ಎಂಬುದೇ ಆತನಿಂದ ಮಾಯವಾಯಿತು. ಹೇಗಾದರೂ ರಾಜನನ್ನು ಮತ್ತೆ ಮೊದಲ ಸ್ಥಿತಿಗೆ ತರಬೇಕೆಂದು ಆಸ್ಥಾನ ಪಂಡಿತರು ತೀರ್ಮಾನಿಸಿದರು. ಈ ಸಲುವಾಗಿ ರಾಜನನ್ನು ನಗಿಸುವ ಪ್ರಯತ್ನಗಳು ನಡೆದವು.

ಆಸ್ಥಾನದಲ್ಲಿ ಗಂಭೀರ ಹುದ್ದೆಯಲ್ಲಿರುವ ಕೆಲ ಮಂತ್ರಿಗಳು ಮೂಲತಃ ವಿದೂಷಕರಾದ್ದರಿಂದ ಅವರೂ ರಾಜನನ್ನು ನಗಿಸಲು ಪ್ರಯತ್ನಪಟ್ಟರು. ಅವರ ಮಾತುಗಳಿಗೆ ಜನರು ನಗುತ್ತಿದ್ದರೇ ಹೊರತು ರಾಜ ನಗಲಿಲ್ಲ. ಆಸ್ಥಾನ ವಿದೂಷಕರಿಂದಲೂ ರಾಜನನ್ನು ನಗಿಸಲು ಸಾಧ್ಯವಾಗಲಿಲ್ಲ. ನಗಿಸುವುದಕ್ಕಾಗಿಯೇ ಉನ್ನತ ವ್ಯಾಸಂಗಕ್ಕಾಗಿ ಪರರಾಜ್ಯಕ್ಕೆ ತೆರಳಿದ ಪ್ರಮುಖ ಆಸ್ಥಾನ ವಿದೂಷಕನ ಸೋದರಿ ಅರ್ಥಾತ್ ಕಸಿನ್ ಸಿಸ್ಟರನ್ನು ಕರೆಸಿದರೂ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ, ಸಾಮಾಜಿಕ ಮಾಧ್ಯಮದ ಮುಖಾಂತರ ರಾಜ್ಯವಿಡೀ ಡಂಗುರ ಸಾರಲಾಯಿತು: "ಕೇಳ್ರಪ್ಪೋ ಕೇಳಿ... ನಮ್ಮ ರಾಜ್ಯದ ವಿದೂಷಕರಿಗೆ ಒಂದು ಅದ್ಭುತ ಅವಕಾಶ! ಯಾರು ಹೊಗಳಿ-ಹೊಗಳಿ ರಾಜನನ್ನು ನಗಿಸುತ್ತೀರೋ ಅವರಿಗೆ ವಜ್ರ-ವೈಢೂರ್ಯಗಳ ಮಹಾಸನ್ಮಾನ ನಡೆಯಲಿದೆ. ಬನ್ನಿ, ರಾಜನನ್ನು ನಕ್ಕುನಗಿಸುವ ಮೂಲಕ ನಿಮ್ಮ ರಾಜ್ಯಪ್ರೇಮವನ್ನು ಸಾಬೀತು ಮಾಡಿ..."

ಈ ಲೇಖನ ಓದಿದ್ದೀರಾ?: ಫೇಸ್‌ಬುಕ್‌ನಿಂದ | ಕಾಡಿನ ಬೆಳದಿಂಗಳಲ್ಲಿ ಏಕಾಂಗಿಯಾಗಿ ಕಂಡ ಚುಕ್ಕೆ ಚಿರತೆಯ ಸೌಂದರ್ಯ

ರಾಜ್ಯದ ಹೆಸರುವಾಸಿ ವಿದೂಷಕರು ಆಸ್ಥಾನದಲ್ಲಿ ಜಮಾಯಿಸತೊಡಗಿದರು. ಇದರಲ್ಲಿ ಕವಿಗಳು ಸಾಹಿತಿಗಳು, ಕ್ರೀಡಾಪಟುಗಳು, ಚಿತ್ರನಟರೂ ಸೇರಿಕೊಂಡಿದ್ದರು. ತಮ್ಮ ಅಷ್ಟೂ ಪ್ರತಿಭೆಯನ್ನು ಧಾರೆ ಎರೆದು, ಚಿತ್ರವಿಚಿತ್ರವಾಗಿ ಹೊಗಳಿದರೂ ರಾಜನನ್ನು ನಗಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಎಲ್ಲರೂ ಬುದ್ಧಿವಂತ ಮಂತ್ರಿಯ ಮೊರೆಹೋದರು.

ಬುದ್ಧಿವಂತ ಮಂತ್ರಿ ರಾಜನ ಅಪ್ಪಣೆ ಪಡೆದು ಒಂದು ವೀಡಿಯೋ ಪ್ಲೇ ಮಾಡಿದ. ಅದರಲ್ಲಿ ಮುಖ ಕಾಣದ ವ್ಯಕ್ತಿಯೊಬ್ಬ ಜನರ ಗುಂಪನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ: "ಈಗಿನ ರಾಜ ಜನರ ರಾಜನಲ್ಲ. ಆತ ಕಾಡುಪ್ರಾಣಿಗಳ ರಾಜ. ಆತನಿಗೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ. ರಾಜ್ಯದಲ್ಲಿ ಜನರಿಗೆ ಹೆಣ ಸುಡುವುದಕ್ಕೂ ಜಾಗವಿಲ್ಲ. ನನ್ನನ್ನು ರಾಜನಾಗಿ ಆರಿಸಿ; ಆಮೇಲೆ ನೋಡಿ, ಪ್ರತೀ ಊರಲ್ಲಿ ಭವ್ಯ ಸ್ಮಶಾನಗಳನ್ನು ನಿರ್ಮಿಸುತ್ತೇನೆ..."

ಈ ಲೇಖನ ಓದಿದ್ದೀರಾ?: ಫೇಸ್‌ಬುಕ್‌ನಿಂದ | ರಾಜ್‌ಕುಮಾರ್ ನಟನೆಯ 'ಗಂಧದ ಗುಡಿ' ಮತ್ತು ಪುನೀತ್ ಕಟ್ಟಿಕೊಟ್ಟ 'ಗಂಧದ ಗುಡಿ'

ಇದನ್ನು ಕೇಳುತ್ತಿದ್ದಂತೆಯೇ ರಾಜನಿಗೆ ನಗು ತಡೆಯಲಾಗಲಿಲ್ಲ. "ತನ್ನ ಜೀವನವನ್ನೇ ಅಪಾಯಕ್ಕೆ ಒಡ್ಡಿ ರಾಜನಿಗೇ ಬಹಿರಂಗವಾಗಿ ಸವಾಲೆಸೆಯುವ ಬಾಯಿಬಡುಕ ಮೂರ್ಖ ಯಾರೀತ?" ಎಂದು ಹೊಟ್ಟೆ ಹುಣ್ಣಾಗುವಂತೆ ನಗುತ್ತ ರಾಜ ಕೇಳಿದ.

ಬುದ್ಧಿವಂತ ಮಂತ್ರಿ ಉತ್ತರಿಸಿದ: "ಕ್ಷಮಿಸಿ ಮಹಾಪ್ರಭು... ಇದು ಹಿಂದಿನ ರಾಜನ ಆಡಳಿತವಿರುವಾಗ ಸಾಮಾನ್ಯ ಪ್ರಜೆಯಾಗಿದ್ದ ನೀವೇ ಮಾಡಿದ ಭಾಷಣದ ತುಣುಕು. ನಿಮ್ಮನ್ನು ನಗಿಸಲು ನಿಮಗಲ್ಲದೆ ಬೇರೆ ಯಾರಿಂದಲೂ ಸಾಧ್ಯವಾಗಿಲ್ಲ ಮಹಾಪ್ರಭುವೇ... ನಿಮಗಿಂತ ಮಿಗಿಲಾದ ವಿದೂಷಕನಿಲ್ಲ ದೊರೆಯೇ... ನಿಮ್ಮ ಪ್ರತಿಭೆಗೆ ನೀವೇ ಸಾಟಿ!"

ಚಪ್ಪಾಳೆಯ ಸದ್ದು ಸುತ್ತಮುತ್ತಲ ರಾಜ್ಯಗಳಿಗೂ ಕೇಳುವಂತೆ ಭೋರ್ಗರೆಯತೊಡಗಿತು.

ಚಿತ್ರಗಳು - ಸಾಂದರ್ಭಿಕ | ಕೃಪೆ: Unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app