ವಾರದ ವಿಶೇಷ | ಊರೇ ಸೇರಿ ಹೊಸ ತೇರು ಕಟ್ಟುವ ಸಂಭ್ರಮದ ಕತಿ

ಸುತ್ಮುತ್ತ್ ಹತ್ತಾರು ಹಳ್ಳಿ ಜನರು ಹುಂಚಿಕಟ್ಟಿ ಮ್ಯಾಗ ಕುಂತ ತೇರಿನ ಬಗ್ಗೆ ಮಾತಾಡ್ತಾರಂದ್ರ ಅದು ನಮ್ಮೂರು ತೇರ ಸುದ್ದಿನ. ತೇರು ಮಾಡಿಸಿದ್ರ ಹಂಗ ಮಾಡಿಸ್ಬೇಕು ಅನ್ನುವಂಗ ನಮ್ಮೂರ್ ತೇರು ಹೆಸರ್ವಾಸಿ. ಅವರ ಊರಿನ ಜಾತ್ರಿ ಹ್ಯಾಂಡ್ ಬಿಲ್ ಒಳಗ ಅವರೂರಿನ ತೇರಿನ ಚಿತ್ರ ಹಾಕೋದು ಬಿಟ್ಟು, ನಮ್ಮೂರು ತೇರಿನ ಚಿತ್ರಾನ ಹಾಕ್ತಿದ್ರಂದ್ರ ನೀವ ಲೆಕ್ಕ ಹಾಕಿ

ಉತ್ತರ ಕರ್ನಾಟಕದ ಹಳ್ಳಿ ಜಾತ್ರಿಗಳು ನಡಿತಾವಂದ್ರ ಅಲ್ಲಿ ತೇರು ಇರ್ಲೇಬೇಕು. ಜಾತ್ರ್ಯಾಗ ತೇರಿನ ಸುತ್ತಾ ಸಾವಿರಾರು ಜನ ಸುತ್ತ್ ಹೊಡ್ದ್, ಕಳಸಕ್ಕ ಗುರಿ ಇಟ್ಟು ಒಗಿಯೋದ, ತೂರಿ ಬಂದ ಉತ್ತಿತ್ತಿಗಳನ್ನ ಹಿಡ್ಕಳ್ಳದು, ಜನರ ಗದ್ದಲ್ದಾಗ ಉತ್ತಿತ್ತಿಗಳನ್ನ ಆರಿಸ್ಗಂಡು, ಕಿಸೆ ತುಂಬಾ ತುಂಬ್ಕಂಡು, ತಿನ್ಕಂಡು, "ಹರಹರ ಮಹಾದೇವ..." ಅಂತ ಹುರಿಗಟ್ಟಿದ ಹಗ್ಗ ಹಿಡ್ದು ತೇರ ಎಳೆಯೋ ಸಂಭ್ರಮ ಮಾತಿನ್ಯಾಗ ಹೇಳಿಕ್ಕೆ ಆಗಲ್ಲ, ನೋಡಿಯೇ ಅದರ ಚಂದ ಕಣ್ತುಂಬಿಕೊಳ್ಬೇಕು.

ಸುತ್ಮುತ್ತ್ ಹತ್ತಾರು ಹಳ್ಳಿ ಜನರು ಹುಂಚಿಕಟ್ಟಿ ಮ್ಯಾಗ ಕುಂತ ತೇರಿನ ಬಗ್ಗೆ ಮಾತಾಡ್ತಾರಂದ್ರ ಅದು ನಮ್ಮೂರು ತೇರ ಸುದ್ದಿನ. ಅಂದಾಗ ಗದಗ ಜಿಲ್ಲಾ ರೋಣ ತಾಲೂಕಿನ ಸವಡಿ ನಮ್ಮೂರು. ತೇರು ಮಾಡಿಸಿದ್ರ ಹಂಗ ಮಾಡಿಸ್ಬೇಕು ಅನ್ನುವಂಗ ನಮ್ಮೂರ್ ತೇರು ಹೆಸರ್ವಾಸಿ ಆಗೈತಿ. ತಮ್ಮ-ತಮ್ಮ ಊರಿನ ಜಾತ್ರಿ ಹ್ಯಾಂಡ್ ಬಿಲ್ ಒಳಗ ಅವರವರ ಊರಿನ ತೇರಿನ ಚಿತ್ರ ಹಾಕೋದು ಬಿಟ್ಟು, ನಮ್ಮೂರು ತೇರಿನ ಚಿತ್ರಾನ ಹಾಕ್ತಿದ್ರು; ಅಷ್ಟು ಎತ್ರ, ಅಷ್ಟು ಗಂಬೀರ, ಅಷ್ಟ್ ಚಂದ್, ತೇರ್ ನೋಡಿದ್ರ ಗೋಣು ಮ್ಯಾಕ್ ಎತ್ತರ್ಸಿ ನೋಡ್ಬೇಕು, ಆನಮನಿ ಚಂದ.

Image

ನಾವಿನ್ನೂ ಸಣ್ಣಾವರಿದ್ವಿ. ಪ್ರತೀ ವರ್ಷ ಏಪ್ರಿಲ್ ಕೊನೇ ವಾರ್ದಾಗ ಸಂಗಮೇಶ್ವರ ಜಾತ್ರಿ ನಡಿತೈತಿ. ಈ ಜಾತ್ರ್ಯಾಗ ವರ್ಷಪೂರ್ತಿ ತೇರಿನ ಗಡ್ಡಿ (ತೇರಿನ ಮನಿ) ತಗಡಿನ ಪಡಕ ತಗದು, ತೇರನ್ನ ಹೊರಗ ಹಾಕಿ, ಮ್ಯಾಗಲ್ಮಠದ ಮುಂದ ನಿಂದ್ರಿಸಿ, ಸ್ವಚ್ಚಗ ಒರಿಸಿ, ಪಳಪಳ ಅನ್ನುವಂಗ ಕೊಬ್ಬರಿ ಎಣ್ಣಿ ಬಳದು, ತೇರಿನ ಮ್ಯಾಗ ಖಾತಿ ಬಿರಿಯುವಂಗ ಬಿಗ್ದು ನೇಲಿ ಕಟ್ಟಿ, ಬಿಳಿ ಕೆಂಪು ಪಟಾಕ್ಷಿನ ಒಂದರ ಮ್ಯಾಗ ಒಂದು ಸುತ್ತಾರ್ದ ಕಟ್ತಿದ್ರು. ಮ್ಯಾಗ ಕಳಸ ಕುಂದಿರ್ಸಿ, ಹೂವುದ ಅಲಂಕಾರ ಮಾಡಿ, ತೇರಿನ ನಾಲ್ಕು ಕಲ್ಲಿನ ಗಾಲಿಗೆ ಎಣ್ಣಿ ಮಿಸ್ರಿತ ಕೆಂಬಣ್ಣ ಬಳಿದು ತಯಾರು ಮಾಡ್ತಿದ್ರು. ಓಣ್ಯಾನ ಹುಡುಗುರೆಲ್ಲ ತೇರ ಕಟ್ಟುದನ್ನ ನೋಡಾಕಂತ ಹೋಗ್ತಿದ್ವಿ. ಮ್ಯಾಗ ಕಟ್ಟುದು ನೋಡಿ, ತೇರಿನ ಮ್ಯಾಗ ಹತ್ಬೇಕನಿಸ್ತಿತ್ತು. ಆದ್ರ ನಮ್ಮನ್ನ ಬಿಡ್ತಿರ್ಲಿಲ್ಲ. ತೇರಿನ ಮುಂದ ನಿಂತು ನೋಡಿ-ನೋಡಿ ಗೋಣು ನೋಯಾಕತ್ತಿದ್ಮ್ಯಾಗ ಮನಿ ಕಡೆ ಬರ್ತಿದ್ವಿ.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಮದುವೆಯ ದಿನ ಮದುಮಗಳ ಕೈರುಚಿ; ನಂತರದ ಮೂರು ವರ್ಷ ಮದುಮಗನದೇ ಅಡುಗೆ

"ಪವಾಡಪುರುಷ ಎಂದೇ ಪ್ರಸಿದ್ದರಾದ ಕುಂಟಜ್ಜನವರು ಆಳ್ಳಾವರದಿಂದ (ಧಾರವಾಡ ಜಿಲ್ಲೆಯ ಅಳ್ನಾವರ) ಕಟಗಿನ ಹಳಿ ಬಂಡಿಮ್ಯಾಗ ಊರಿಗೆ ತಂದಿದ್ರಂತ. ಈ ತೇರ ಮಾಡಾಕ ಬದಾಮಿ ತಾಲೂಕು ಖ್ಯಾಡದ ಮಲ್ಲಣ್ಣ ಶಿಲ್ಪಿ. ಇವ್ರು ಆರು ತಿಂಗಳ್ದಾಗ ತೇರ ತಯಾರಿ ಮಾಡಿ ಮುಗಿಸಿದ್ರಂತ. ಈ ತೇರಿಗೆ ಯಾಡ್ನೂರು ವರ್ಷದ ಇತಿಹಾಸ ಐತ್ರಿ. ಒಟ್ಟ ಜಪ್ಪ ಅಂದಿರ್ಲಿಲ್ಲರೀ. ಹ್ವಾದ ವರ್ಷ ಜಾತ್ರ್ಯಾಗ ಕಟಗಿ ಸಡಿಲಾಗಿ ಚೀರ್ ಚೀರ್ ಸಪ್ಪಳ ಕೇಳಾಕಿಂತೈತ್ರಿ. ಅದಕ್ಕ ಊರಾನ ದೈವ ಸೇರಿ, ಹೊಸ ತೇರ ಮಾಡ್ಬೇಕು ಅಂತ ತೀರ್ಮಾನ ಮಾಡಿ, ಕಟಿಗಿ ತರ್ಸಾಕಿಂತಿವಿ," ಅಂತಾರ ಗ್ರಾಮದ ಹಿರಿಯರಾದ ಸಂಗಣ್ಣ ದಂಡಿನ.

Image

ಮೊನ್ನೆ ಹೊಸ ತೇರಿಗೆ ಅಳ್ನಾವರದಿಂದ ಕಟಗಿ ಹೊತ್ತು ತಂದ ಲಾರಿಗೆ ಅದ್ಧೂರಿ ಮರೆವಣಿಗೆ. ಚಿಕ್ಕಮಣ್ಣೂರಿನಿಂದ ನಮ್ಮೂರಿನವರೆಗೂ ಅದ್ಧೂರಿ ಮೆರವಣಿಗೆಯ ಸಂಭ್ರಮಮ ಮನೆ ಮಾಡಿತ್ತು. ಆವತ್ತು ಬೆಳ್‌ಬೆಳಿಗ್ಗೆ ಊರಾಗಿನ ಜನ ಜಾತಿ, ಮೇಲು-ಕೀಳು ಇಲ್ಲದೆ ಭಾವೈಕ್ಯತೆಯಿಂದ ಹೊಸ ತೇರಿನ ಕಟಿಗೆ ಮೆರವಣಿಗೆಯಲ್ಲಿ ಸೇರಿದ್ದರು. ತಮ್ಮ-ತಮ್ಮ ಎತ್ತುಗಳನ್ನ ಸಿಂಗರಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಚಕ್ಕಡಿ ಕೊಳ್ ಕಟ್ಗೊಂಡು, ಟ್ಯಾಕ್ಟರ್ಗಳನ್ನ ಹೊಡ್ಕಂಡು ಮೆರವಣಿಗೆಯಲ್ಲಿ ಸಂಭ್ರಮದಿಂದ, ಉತ್ಸಾಹದಿಂದ ಪಾಲ್ಗೊಂಡಿದ್ರು. ಊರಾಗಿನ ಭಜನಿ ಮೇಳದವರು, ಭಜನಿ ಪದಗಳ ಜೊತೆಗೆ ಅಲ್ಲಮ, ಬಸವಣ್ಣನವರ ವಚನಗಳು, ಕಡಕೊಳ ಮಡಿವಾಳಪ್ಪ, ಶಿಶುನಾಳ ಶರೀಫರ ತತ್ವಪದಗಳ ಹಾಡುಗಳ ಹಾಡುತ್ತ ಮೈಮರೆತಿದ್ದರೆ; ಕರಡಿ ಮಜಲಿನವರ ಕುಣಿತ, ಡೊಳ್ಳು ನಾದ ನೋಡುಗರ ಕಣ್ಮನ ಸೆಳೆದಿತ್ತು. ಭಜಂತ್ರಿಯವರ ಕೊಳಲಿನ ಸ್ವರ ಅದ್ಭುತ.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಕಳ್ಳತನದ ವೇಳೆ ಬಳಸಲಾಗುತ್ತಿದ್ದ ಗುಪ್ತ ಭಾಷೆ ಮತ್ತು ಗಂಟಿಚೋರ್ ಸಮುದಾಯದ ಕತೆ

ಊರಾಗಿನ ಹೆಣ್ಮಕ್ಕಳು ಹುಬ್ಬಳ್ಳಿ ಸೀರಿ, ಇಲ್ಕಲ್ ಸೀರಿ ಉಟ್ಕಂಡು, ತಲಿಮ್ಯಾಗ ತುಂಬಿದ ಕೊಡ ಹೊತ್ಗಂಡು, ಕೈಯಾಗ ಆರ್ತಿ ಹಿಡಿದು, ಸೋಭಾನ ಪದ ಹಾಡ್ತಾ ಮೆರವಣಿಗೆ ಹೋಗುವುದನ್ನ ಬಾಕಿ ಹೆಣ್ಮಕ್ಕಳು ಕಟ್ಟಿಮ್ಯಾಗ ನಿಂತು ಖುಷಿಯಿಂದ ನೋಡ್ತಿದ್ರು. ಚಿಕ್ಕಮಣ್ಣೂರಿನಿಂದ ನಮ್ಮೂರಿಗೆ ಮೂರು ಕಿಲೋಮೀಟರ್ ದಾರಿಯುದ್ದಕ್ಕೂ ಜನಸಾಗರವೇ ಕಾಣುತ್ತಿತ್ತು. ಅಲ್ಲಲ್ಲಿ ನೀರಡಿಕೆಯಾದವರಿಗೆ ತಂಪಾದ ನೀರು, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಹೀಗೆ, ಮೆರವಣಿಗೆ ಊರೊಳಗೆ ಸಾಗಿ ಸಂಗಮೇಶ್ವರ ಮಠ ತಲುಪಿದಾಗ ಮಟಮಟ ಮದ್ಯಾನ. ಮರೆವಣಿಗೆಯಲ್ಲಿ ಬಂದ ಜನರಿಗೆ ಗೋದಿ ಹುಗ್ಗಿ, ಅನ್ನ-ಸಾರಿನ ಸವಿಯೂಟ.

Image

ಕೊಪ್ಪಳ ಜಿಲ್ಲಾ ಕುಕನೂರು ತಾಲೂಕಿನ ರಾಷ್ಟ್ರ ಪ್ರಶಸ್ತಿ ವಿಜೇತ ಅರುಣಕೂಮಾರ ಬಡಿಗೇರ ಅವರು ಹೊಸ ತೇರನ್ನ ಮಾಡ್ತಾರ. ಮೊದಲಿದ್ದ ತೇರಿಗಿಂತ ವಿಶೇಷ ಏನಂದ್ರ, ಈ ಹೊಸ ತೇರಿನಲ್ಲಿ ಶರಣರಾದ ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ ಚಿತ್ರ ಇರ್ತೈತಿ.

ಹೊಸ ತೇರಿನ ಕೆಲಸದ ಬಗ್ಗೆ ಶಿಲ್ಪಿ ಅರುಣಕೂಮಾರ ಬಡಿಗೇರ ಹೀಂಗ್ ಹೇಳ್ತಾರ: "ಹೊಸ ತೇರಿಗೆ ತಂದ ಕಟಗಿ 35 ಟನ್ ಐತಿ. ಈ ತೇರಿನ ಕೆಲ್ಸ ಚಾಲು ಆಗ್ಬೇಕಂದ್ರ ಇನ್ನೂ ಆರ್ ತಿಂಗ್ಳ ಹಿಡಿತೈತಿ ನೋಡ್ರಿ. ಯಾಕಂದ್ರ, ತೇಗು, ಹೊನ್ನಿ, ಕರಮತ್ತಿ ಕಟಗಿ ಹಸಿ-ಹಸಿ ಐತಿ. ಆರು ತಿಂಗ್ಳು ಬಿಸ್ಲಾಗ ಒಣಗಿ ಕಣ-ಕಣ ಅಂತ ಸೌಂಡ್ ಬರ್ಬೇಕು. ಆಗ ಕಟಗಿ ಗಟ್ಟಿ ಆಗಿರ್ತೈತಿ. ಆಗ ನಾವ್ ಹ್ಯಾಂಗ್ಬೇಕು ಹಂಗ, ಕಟಿಗ್ಯಾಗ ಚಿತ್ರ, ಗೊಂಬಿ, ಆಕಾರ ಮಾಡಾಕ ಬರ್ತತ್ರಿ. ತೇರ ಚಾಲು ಮಾಡಿದ್ವಂದ್ರ ದಿಡು ವರ್ಷದಾಗ ಹೊಸ ತೇರ ಮಾಡಿ ಮುಗಿಸ್ತಿನ್ರಿ."

ನಿಮಗೆ ಏನು ಅನ್ನಿಸ್ತು?
3 ವೋಟ್