
ಕೋರ್ಟಿಗೆ, ಕಚೇರಿಗೆ, ಹೆಣ್ಣು ತರಲು, ಹೆಣ್ಣು ಕೊಡಲು, ಕೊಟ್ಟೂರಿನಲ್ಲಿ ಪಂಚಾಂಗ ನೋಡಿ ಭವಿಷ್ಯ ಹೇಳುತ್ತಿದ್ದ ಐನಳ್ಳಿ ಶಾಸ್ತ್ರಿಗಳ ಬಳಿ ಹೋಗುವಾಗಲೂ ನಮ್ಮೂರಿನ ಮಂದಿ ಗಲ್ಲಿ ದುರ್ಗವ್ವಳನ್ನು ಗುಡಿಸಲಿನಿಂದ ಹೊರಗೆ ಕರೆದು, ವೀಳ್ಯೆದೆಲೆ, ಅಡಿಕೆ, ನಶ್ಯಪುಡಿ, ಕಡ್ಡಿಪುಡಿಯನ್ನು ಅವಳ ಕೈಯಲ್ಲಿ ಕೊಟ್ಟು, "ಹೋಗಿ ಬರುತ್ತೇವೆ," ಎಂದು ಅವಳಿಗೆ ಹೇಳಿಯೇ ಹೋಗುತ್ತಿದ್ದರು
ತಿಂದ್ಗನ ಗುಡಿಸಲಿನ ಮುಂದೆ ಜೋಳದ ಕೂಡ್ಲಿಗಿ, ಮಂಗನಹಳ್ಳಿ, ನಾಗರಕಟ್ಟಿ ಮುಂತಾದ ಹಳ್ಳಿಗಳಿಂದ ಜನರು ಗುಂಪುಗುಂಪಾಗಿ ಬಂದು ಸೇರಿಕೊಂಡರೆ, ನಮ್ಮ ಹಳ್ಳಿಯ ಯಾರದೋ ಮನೆಯಲ್ಲಿ ಡೊಡ್ಡ ದನ ಸತ್ತುಹೋಗಿದೆಯೆಂದೇ ಅರ್ಥ.
ಊರಲ್ಲಿ ಯಾರ ಮನೆಯಲ್ಲಿ ದನಕರುಗಳು ಸತ್ತರೂ ಅದರ ಒಡೆಯ ಅವನೇ. ದೊಡ್ಡ ದನ ಸತ್ತುಹೋದರೆ ಅವನೊಬ್ಬನಿಂದ ಹೊತ್ತೊಯ್ಯುವುದು, ಕೊಯ್ದು ತಿನ್ನುವುದು ಆಗುತ್ತಿರಲಿಲ್ಲ. ಆದ್ದರಿಂದ ಪಕ್ಕದ ಹಳ್ಳಿಗಳಲ್ಲಿ ವಾಸವಾಗಿದ್ದ ತನ್ನ ಜಾತಿಯ ಜನರನ್ನು ಕರೆದುಕೊಂಡು ಬರುತ್ತಿದ್ದ. ಇಂತಹ ಸಂದರ್ಭದಲ್ಲಿ ಸಮಯವಿದ್ದರೆ ಪರಸ್ಪರರು ತಲೆಗೂದಲನ್ನು ಕತ್ತರಿಸಿಕೊಳ್ಳುತ್ತಿದ್ದರು.
ಎಲ್ಲರೂ ಒಟ್ಟಾಗಿ, ಸತ್ತ ದನದ ನಾಲ್ಕು ಕಾಲುಗಳನ್ನು ಒಟ್ಟುಗೂಡಿಸಿ ಹಗ್ಗದಿಂದ ಬಿಗಿಯಾಗಿ ಕಟ್ಟುತ್ತಿದ್ದರು; ಬೆನ್ನು ಕೆಳಗೆ ಮಾಡಿ ಕಾಲುಗಳ ಸಂದಿಯಲ್ಲಿ ಉದ್ದನೆಯ ನೊಗ ತೂರಿಸಿಕೊಂಡು, ಭಾರವಾದಷ್ಟೂ ಸಂತೋಷಪಡುತ್ತ ಹೊತ್ತುಕೊಂಡು ಹೋಗುತ್ತಿದ್ದರು. ಊರ ಹೊರಗಿನ ಸ್ಮಶಾನ, ಕಣ ಅಥವಾ ಹೊಲದ ಬೇಲಿಯ ಬದಿಯಲ್ಲಿ ಕೆಳಗಿಸಿ ಕೊಯ್ದುಬಿಡುತ್ತಿದ್ದರು. ಇದರ ಮೇಲಿನ ಒಡೆತನ ನಮ್ಮ ಊರಿನ ತಿಂದ್ಗನದೇ ಆಗಿದ್ದರಿಂದ ಚರ್ಮ ಮತ್ತು ಅರ್ಧ ಭಾಗ ಮಾಂಸ ಕೊಡುತ್ತಿದ್ದರು. ಉಳಿದ ಅರ್ಧ ಭಾಗವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು.

ತಮ್ಮ ಪಾಲಿನ ಮಾಂಸವನ್ನು ಹಳೆಯ ಬಟ್ಟೆಯಲ್ಲಿ ಕಟ್ಟಿಕೊಂಡು ಅವರವರ ಊರಿಗೆ ಓಡು ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದರು. ತಲೆಯ ಮೇಲೆ ಹೊತ್ತುಕೊಂಡಿದ್ದ ಹಸಿ-ಹಸಿ ಮಾಂಸದಲ್ಲಿಯ ರಕ್ತ ಮೈಮೇಲೆ ಸುರಿಯುತ್ತಿದ್ದರೂ ಅದರ ಪರಿವೆಯೇ ಇರುತ್ತಿರಲಿಲ್ಲ ಈ ನೆಲದ ಮೂಲ ನಿವಾಸಿಗಳಿಗೆ. ಎರಡು-ಮೂರು ದಿನದ ಆಹಾರ ಭದ್ರತೆ ಸಿಕ್ಕ ಸಂತೃಪ್ತಿ ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು.
ನಮ್ಮ ಊರಿನ ತಿಂದ್ಗ, ತನ್ನ ಪಾಲಿನ ಮಾಂಸ ಮತ್ತು ಚರ್ಮವನ್ನು ಹೆಂಡತಿಯರ ಸಹಾಯದಿಂದ ತನ್ನ ಗುಡಿಸಲಿಗೆ ತರುತ್ತಿದ್ದ. ಆ ದಿನ ತಿನ್ನಲು ಬೇಕಾದಷ್ಟು ಮಾಂಸವನ್ನು ಹೆಂಡತಿಯರ ಕೈಗೆ ಕೊಟ್ಟು, ಹೆಚ್ಚುವರಿ ಮಾಂಸ ಮತ್ತು ಚರ್ಮವನ್ನು ತನ್ನ ಗುಡಿಸಲ ಮುಂದಿನ ಅಂಗಳದಲ್ಲಿ ಒಣಗಿಸುತ್ತಿದ್ದ. ಮಾಂಸ ಸಂಪೂರ್ಣವಾಗಿ ಒಣಗಿದ ನಂತರ ದೊಡ್ಡ ಗುಡಾಣವನ್ನು ಸೇರುತ್ತಿತ್ತು. ಒಣಗಿದ ಮಾಂಸವನ್ನು 'ಮುರುಗಿ' ಎಂದು ಕರೆಯುತ್ತಿದ್ದರು. ಇನ್ನು, ಹಸಿಯಾಗಿರುತಿದ್ದ ಚರ್ಮವನ್ನು ಸಾಧ್ಯವಾದಷ್ಟು ಹಿಗ್ಗಿಸಿ ನೆಲದ ಮೇಲೆ ಹಾಸಿ, ಸುತ್ತಲೂ ಕಟ್ಟಿಗೆಯ ಮೊಳೆ ಬಡಿದು ಬೂದಿ ಸವರುತ್ತಿದ್ದ.
ಚರ್ಮ ಸಂಪೂರ್ಣವಾಗಿ ಒಣಗಿದ ನಂತರ ರೆಂಪೆಯಿಂದ ಕೂದಲನ್ನು ಉಜ್ಜಿ ತೆಗೆಯುತ್ತಿದ್ದ. ನಂತರ, ಮೊದಲೇ ನೀರು ಮತ್ತು ತಂಗಡಿಕೆ ಗಿಡದ ತೊಗಟೆ ಹಾಕಿರುತ್ತಿದ್ದ ಗಲ್ಲಿಯಲ್ಲಿ (ಗಲ್ಲಿಯೆಂದರೆ ಮಣ್ಣಿನಿಂದ ಕಂಬಾರರು ಮಾಡಿರುತ್ತಿದ್ದ ದೊಡ್ಡ ಬಕೇಟು. ಇವುಗಳನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ದೇವರ ಸಮಾನವೆಂದು - ದುರ್ಗಿಯೆಂದು ಪೂಜಿಸುವ ಸಂಪ್ರದಾಯವಿದೆ) ಒಣಗಿದ ಚರ್ಮವನ್ನು ನೆನೆಯಲು ಹಾಕಿ ಸಂಸ್ಕರಿಸುತ್ತಿದ್ದ. ಹೀಗೆ, ಸಂಸ್ಕರಿಸಿ ಚರ್ಮದಿಂದ ಕ್ಯರ, ಬೇಸಾಯದ ಸಾಧನಗಳಾದ ಮಿಣೆ, ನೊಗ ಸುತ್ತು ತಯಾರಿಸಿ ರೈತರಿಗೆ ಕೊಡುವುದು ಅವನ ಉದ್ಯೋಗವಾಗಿತ್ತು.
* * *

ಮನುಷ್ಯರ ಹಲ್ಲಿನಿಂದ ನುರಿಸಲಾಗದ ದನದ ಪಕ್ಕೆಲುಬು, ಮುಂಗಾಲು, ಹಿಂಗಾಲು ಹಾಗೂ ಮುಖದ ಮೂಳೆಯನ್ನು ದನ ಕೊಯ್ದು ಜಾಗದಲ್ಲಿಯೇ ಬಿಟ್ಟು ಹೋಗಿರುತ್ತಿದ್ದರು. ಆ ಪರಿಸರದಲ್ಲಿ ಜೀವಿಸುತ್ತಿದ್ದ ನಾಯಿಗಳಿಗೆ, ರಣಹದ್ದು ಮತ್ತು ಕಾಗೆಗಳಿಗೆ ಆ ದಿನ ಹಬ್ಬವೇ ಹಬ್ಬ. ಎರಡ್ಮೂರು ದಿನಗಳ ಕಾಲ ಮೂಳೆಗಳಿಗಾಗಿ ಪ್ರಾಣಿ ಮತ್ತು ಪಕ್ಷಿಗಳ ನಡುವೆ ಘನಘೋರ ಕಾಳಗವೇ ನಡೆಯುತ್ತಿತ್ತು.
ದನ ಕೊಯ್ದ ಸ್ಥಳಕ್ಕೆ ಆ ದಿನ ರಾತ್ರಿ 'ಕಪ್ಪಲ ನರಿ' ಎಂಬ ಹೆಸರಿನ ಗುಳ್ಳೆನರಿಗಳು ವಾಸನೆ ಹಿಡಿದು ಬಂದು ಎಲುಬು ಕಡಿಯುತ್ತ, ಭಯಾನಕ ರೀತಿಯಲ್ಲಿ ಗೀಳಿಡುತ್ತಿದ್ದವು. ಅವುಗಳ ಕಡೆ ಮುಖ ಮಾಡಿ ಇಡೀ ರಾತ್ರಿ ನಮ್ಮ ಊರಿನ ನಾಯಿಗಳು ಬೊಗಳುತ್ತ ಬೊಬ್ಬೆ ಹೊಡೆಯುತ್ತಿದ್ದವು. ವಿದ್ಯುತ್ ಇಲ್ಲದ ಆ ಕತ್ತಲೆಯ ಕಾಲದಲ್ಲಿ ಕ್ರೂರ ಪ್ರಾಣಿಗಳ ನಡುವೆ ದಟ್ಟಕಾಡು ಎಚ್ಚರವಾಗಿದ್ದು, ಎಲ್ಲವನ್ನೂ ಗಮನಿಸುತ್ತಿರುವಂತೆ ಭಾಸವಾಗುತ್ತಿತ್ತು.
ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಕಳ್ಳತನದ ವೇಳೆ ಬಳಸಲಾಗುತ್ತಿದ್ದ ಗುಪ್ತ ಭಾಷೆ ಮತ್ತು ಗಂಟಿಚೋರ್ ಸಮುದಾಯದ ಕತೆ
ಬೆಳಗ್ಗೆ ಬಾವಿಗೆ ನೀರು ತರಲು ಹೋದ ಹೆಣ್ಣುಮಕ್ಕಳು, "ರಾತ್ರಿ ನಾಯಿ-ನರಿಗಳ ಕೂಗು ಕೇಳಿ ನಮ್ಮತಗ (ಗಂಡನಿಗೆ) ನಿದ್ದೆನೆ ಬರಲಿಲ್ಲವಂತೆ. ಸರುವತ್ತಿನಾಗ ದುಪ್ಪಡಿ ಹೊಚ್ಚಿಗೊಂಡು ಉಚ್ಚೆ ಹೊಯ್ಯಕಂತ ಹೊರಗೆ ಬಂದ್ರೆ ಕರ್ನಕಲ್ಲುಗುಡ್ಡದ ಮೇಲೆ ಕೊಳ್ಳಿ ದೆವ್ವ ಕುಣೀತಿದ್ವಂತೆ..." ಎಂದು ಆಡಿಕೊಂಡ ಮಾತುಗಳು ಊರಿನ ತುಂಬಾ ಹರಡಿ, ಮುಂದಿನ ಅನೇಕ ರಾತ್ರಿಗಳನ್ನು ಭೀತಿಯಲ್ಲಿ ಕಳೆಯುವಂತೆ ಮಾಡುತ್ತಿದ್ದವು. ಪರಿಣಾಮವಾಗಿ, ರಾತ್ರಿ ಹೊರಗಡೆ ಬರಲು ಹೆದರಿ, ಮಹಾನ್ ಪರಾಕ್ರಮಶಾಲಿಗಳೆಂದು ಊರಿನಲ್ಲಿ ಹೆಸರಾಗಿದ್ದ ಗಂಡಸರೇ ಉಚ್ಚೆಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಬೆಳಗಾಗುವುದನ್ನೇ ಕಾಯುತ್ತಿದ್ದರು.
* * *

ತಿಂದ್ಗನಿಗೆ ಇಬ್ಬರು ಹೆಂಡತಿಯರು. ಮೊದಲನೆಯವಳು ಗಲ್ಲಿ ದುರ್ಗವ್ವ. ಮಕ್ಕಳು ಇರಲಿಲ್ಲ. ಎರಡನೆಯವಳು ಕೆಂಚವ್ವ; ಯಾವುದೋ ಮದುವೆಗೆ ಹೋದಾಗ, ವಿಧವೆಯಾಗಿದ್ದ ಇವಳನ್ನು ಕಂಡು ಮನೆಗೆ ಕರೆತಂದಿದ್ದನಂತೆ ಎಂದು ಊರ ಮಾತು. ಇವಳು ಬಂದು 7-8 ತಿಂಗಳಲ್ಲಿ ಮಗ (ನಾಗ) ಹುಟ್ಟಿದ ಕಾರಣ, ಸವತಿ ಮತ್ಸರ ಬಿಟ್ಟು ಗಲ್ಲಿ ದುರ್ಗವ್ವ ಸಂಭ್ರಮಪಟ್ಟಿದ್ದಳು.
ತಿಂದ್ಗನ ಮಗ ನಾಗ ಆ ಕಾಲದಲ್ಲಿ ಏಳನೇ ತರಗತಿಯವರೆಗೆ ಓದಿಕೊಂಡಿದ್ದ. ಪೋಲೀಸರ ನೌಕರಿಗೆ ಸೇರಿಕೊಂಡಿದ್ದರೆ ಇಷ್ಟೊತ್ತಿಗೆ ಇನ್ಸ್ಪೆಕ್ಟರ್ ಆಗಿರಬಹುದಾಗಿತ್ತು ಎಂದು ಜನ ಮಾತನಾಡುತ್ತಿದ್ದರು. ಇವನಿಗೆ ಕನ್ನಡ ಸಾಹಿತ್ಯ ಓದುವ ಹುಕಿ. ಬಸವರಾಜ ಕಟ್ಟೀಮನಿ, ತರಾಸು ಅವರ ಕೃತಿಗಳು ಇವನ ಬಳಿ ಇದ್ದವು. ಆಗಾಗ್ಗೆ ನಮ್ಮ ಮನೆಗೆ ಬಂದು ಅಂಗಳದಲ್ಲಿ ಕೂತು 'ಪ್ರಜಾಮತ,' 'ಲಂಕೇಶ್' ಪತ್ರಿಕೆಯನ್ನು ಓದಿಕೊಂಡು ಹೋಗುತ್ತಿದ್ದ.
ಆಗ ನಮ್ಮ ಊರಿನ ಜನರು ಸುಗ್ಗಿಯ ನಂತರ ದಾವಣಗೆರೆ, ಶಿವಮೊಗ್ಗದ ಭದ್ರಾ ಡ್ಯಾಮ್ ಅಚ್ಚುಕಟ್ಟು ಪ್ರದೇಶದ ಕಡೆಗೆ ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಹೀಗೆ ಒಮ್ಮೆ ಶಿವಮೊಗ್ಗದ ಕಡೆಗೆ ನಾಗ ಸಂಸಾರ ಸಮೇತ ಗುಳೆ ಹೋಗಿದ್ದನಂತೆ. ಅದೊಂದು ಕುಡಿಯುವ ನೀರಿನ ಬಾವಿ ತೋಡುವ ವೇಳೆಯಲ್ಲಿ ನೆಲದೊಳಗೆ ದೊಡ್ಡ ಬಂಡೆ ಬಂದಿತ್ತಂತೆ; ಅದಕ್ಕೆ ಡೈನಮೇಟ್ ಇಟ್ಟು ಸ್ಫೋಟಿಸುವಾಗ ಕಲ್ಲಿನ ಚೂರೊಂದು ಇವನ ಕಣ್ಣಿಗೆ ತಾಗಿ ಒಂದು ಕಣ್ಣು ಕಳೆದುಕೊಂಡು ಒಕ್ಕಣ್ಣನಾಗಿದ್ದ.
ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಮದುವೆಯ ದಿನ ಮದುಮಗಳ ಕೈರುಚಿ; ನಂತರದ ಮೂರು ವರ್ಷ ಮದುಮಗನದೇ ಅಡುಗೆ
ನಾನು ಬಾಲ್ಯವನ್ನು ಆಗಷ್ಟೇ ದಾಟಿದ್ದ ದಿನಗಳವು. ತಿಂದ್ಗನ ಮೊದಲ ಪತ್ನಿ ಗಲ್ಲಿ ದುರ್ಗವ್ವಳಿಗೆ 45-50ರ ಇಳಿಮುಖದ ಪ್ರಾಯ. ನಮ್ಮ ಊರಲ್ಲಿ ಒಬ್ಬಂಟಿ ಜಂಗಮ ಅಥವಾ ಬ್ರಾಹ್ಮಣನ ಮುಖವನ್ನು ಬೆಳಗ್ಗೆ ಎದ್ದ ಕೂಡಲೇ ನೋಡಿದರೆ ಅಪಶಕುನವೆಂದು ಬಹುತೇಕ ಜನ ಭಾವಿಸುತ್ತಿದ್ದರು. ಆದರೆ, ಗಲ್ಲಿ ದುರ್ಗವ್ವಳ ಮುಖದರ್ಶನವಾದರೆ ಸ್ವರ್ಗಲೋಕದಿಂದ ಸಾಕ್ಷಾತ್ ಅದೃಷ್ಟದೇವತೆಯೇ ಧರೆಗಿಳಿದು ಬಂದು ದರ್ಶನ ಕೊಡುತ್ತಿದ್ದಾಳೆಂಬಂತೆ ಭಾವಪರವಶರಾಗುತ್ತಿದ್ದರು. ಕೋರ್ಟಿಗೆ, ಕಚೇರಿಗೆ, ಹೆಣ್ಣು ತರಲು, ಹೆಣ್ಣು ಕೊಡಲು, ಕೊಟ್ಟೂರಿನಲ್ಲಿ ಪಂಚಾಂಗ ನೋಡಿ ಭವಿಷ್ಯ ಹೇಳುತ್ತಿದ್ದ ಐನಳ್ಳಿ ಶಾಸ್ತ್ರಿಗಳ ಬಳಿ ಹೋಗುವಾಗಲೂ ದುರ್ಗವ್ವಳನ್ನು ಗುಡಿಸಲಿನಿಂದ ಹೊರಗೆ ಕರೆದು, ವೀಳ್ಯೆದೆಲೆ, ಅಡಿಕೆ, ನಶ್ಯಪುಡಿ, ಕಡ್ಡಿಪುಡಿಯನ್ನು ಅವಳ ಕೈಯಲ್ಲಿ ಕೊಟ್ಟು, "ಹೋಗಿ ಬರುತ್ತೇವೆ," ಎಂದು ಅವಳಿಗೆ ಹೇಳಿಯೇ ಹೋಗುತ್ತಿದ್ದರು.