ವಾರದ ವಿಶೇಷ | ಲೋಕಲ್ನವರ ಉದ್ಧರಿಸೋ ಕೊಟ್ರೇಶಾsss ..!

ಕೊಟ್ಟೂರಿನ ಭಾಗಶಃ ಜನ್ರ ಮನೆದೇವ್ರು ಬೇರೆ-ಬೇರೆ ಇದ್ರೂ, ಜಾತಿ-ಮತ-ಧರ್ಮ ಯಾವುದೇ ಇದ್ರೂ, ಎಲ್ರ ಮನೆ-ಮನಗಳಲಿ ಕೊಟ್ರಯ್ಯಂಗೆ ಕಂಪಲ್ಸರಿ ಸ್ಥಾನ. ಕೊಟ್ರಯ್ಯ, ಕೊಟ್ರಜ್ಜ, ಕೊಟ್ರೇಶ, ಹುಚ್ಚು ಕೊಟ್ರಪ್ಪ, ಗುರುಬಸ್ವ... ಹೀಗೆ ತನ್ನಿಷ್ಟದ ಶರಣ, ಪವಾಡ ಪುರುಷ ಶ್ರೀಗುರು ಕೊಟ್ರೇಶನಿಗೆ ಹಲವು ಹೆಸ್ರುಗಳಿಂದ ಪ್ರೀತಿಲಿ ಕರಿತಾರೆ. ಜೊತೆಗೆ ಬೈಗುಳವೂ ಇರ್ತೈತೆ!

ನನ್ನೂರು ಕೊಟ್ಟೂರು. ನಮ್ಮೂರ್ನ ಆರಾಧ್ಯ ದೇವ್ರು ಶ್ರೀಗುರು ಕೊಟ್ಟೂರೇಶ್ವರ. ಈತನಿಗೆ ನಮ್ಮೂರ್ನಗಷ್ಟೇ ಅಲ್ಲ ಬಿಡಿ, ಇಡೀ ರಾಜ್ಯ, ಹೊರರಾಜ್ಯದಲ್ಲೂ ಬೇಜ್ಜಾನ್ ಭಕ್ತರಿದ್ದಾರೆ. ಒಟ್ಟನಲಿ ಲೆಕ್ಕಿಕ್ಕಿಲ್ಲದಷ್ಟು ಭಕ್ತಗಣ ನಿತ್ಯ ಈತನ ನಾಮ ಜಪಿಸ್ತದೆ. ಇಂತಹ ಮಹಾನ್ ಪವಾಡ ಪುರುಷ ನೆಲೆ ನಿಂತು, ಜೀವಂತ ಸಮಾಧಿ ಆಗಿರುವ ನೆಲ್ದಲ್ಲಿ ಹುಟ್ಟಿದ್ದೇವೆ, ಓಡಾಡ್ತಿದ್ದೇವೆ ಎನ್ನುವ ಗರ್ವ, ಪುನೀತ ಭಾವ ನಮ್ಮೂರಿಗರದ್ದು; ಅದ್ರಲ್ಲೂ ಲೋಕಲ್ನವರದ್ದು.

Eedina App

ಕೊಟ್ಟೂರಿನ ಭಾಗಶಃ ಜನ್ರ ಮನೆದೇವ್ರು ಬೇರೆ-ಬೇರೆ ಇದ್ರೂ, ಜಾತಿ-ಮತ-ಧರ್ಮ ಯಾವುದೇ ಇದ್ರೂ, ಎಲ್ರ ಮನೆ-ಮನಗಳಲಿ ಈತನಿಗೆ ಕಂಪಲ್ಸರಿ ಸ್ಥಾನ ಕೊಟ್ಟು, ಕಾಯಾ-ವಾಚಾ-ಮನಸಾ ಪೂಜೆಗೈದು, ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ತಾರೆ. ಕೊಟ್ರಯ್ಯ, ಕೊಟ್ರಜ್ಜ, ಕೊಟ್ರೇಶ, ಹುಚ್ಚು ಕೊಟ್ರಪ್ಪ, ಗುರುಬಸ್ವ... ಹೀಗೆ ತನ್ನಿಷ್ಟದ ಶರಣ, ಪವಾಡ ಪುರುಷ ಶ್ರೀಗುರು ಕೊಟ್ರೇಶನಿಗೆ ಹಲವು ಹೆಸ್ರುಗಳಿಂದ ಪ್ರೀತಿಲಿ ಕರಿತಾರೆ.

ಇಂತಿಪ್ಪ ಕೊಟ್ರಯ್ಯನ್ಮೇಲೆ ನಮ್ಮೂರಿನ ಮಂದಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಭಯ-ಭಕ್ತಿ. ಹೆಚ್ಚೂಕಮ್ಮಿ ಪ್ರತೀ ಮನೆಯಲಿ ಕನಿಷ್ಠಪಕ್ಷ ಒಬ್ಬರಿಗಾದ್ರೂ ಈತನ ಹೆಸರಿಡುವ ರೂಢಿ ಇದೆ. ಅಲ್ಲದೆ, ಕೊಟ್ರಯ್ಯಂಗೆ ನಿತ್ಯ ಎಡೆ, ಹೂ, ಬಿಲ್ವ, ಲಕ್ಕಿ ಪತ್ರೆ, ಹಣ್ಣು-ಕಾಯಿ ಅರ್ಪಿಸಿ, ದರ್ಶನ ಪಡೆದು, ಮುಂದಿನ ಕೆಲಸ ಶುರು ಮಾಡ್ತಾರೆ. ಒಪ್ಪತ್ತು, ಹಗಲೆಲ್ಲ ಉಪ್ವಾಸ, ವ್ರತ, ದೀಡ್ ನಮಸ್ಕಾರ, ಪ್ರಸಾದ ಸೇವೆ, ಹೂ, ಹಣ್ಣಿನ ಅಲಂಕಾರ, ದವಸ-ಧಾನ್ಯ, ಹಣ, ಬೆಳ್ಳಿ, ಬಂಗಾರ ಒಪ್ಸಿ ಭಕ್ತಿ ಸಮರ್ಪಿಸ್ತಾರೆ. ಇನ್ನು, ಶ್ರಾವಣ, ಕಾರ್ತಿಕ ಮಾಸ, ದಸರಾ ಸೇರ್ದಂತೆ ಹಬ್ಬ-ಹರಿದಿನ, ವಿಶೇಸ ದಿನಗಳಲಿ ಕೊಟ್ರಯ್ಯನ ಸೇವೆಗೆ ನಾಮುಂದು ತಾಮುಂದು ಅಂತಾ ಸ್ವಯಂಪ್ರೇರಣೆಯಿಂದ ನೂರಾರು ಜನ ಈತನ ಸೇವೆಗೆ ನಿಲ್ತಾರೆ.

AV Eye Hospital ad

ಜೊತೆಗೆ, ಎಲ್ಲೆಲ್ಲಿಂದಲೋ ಈತನ ದರ್ಶನಕೆ ಬರುವ ಭಕ್ತರು ಸೇವೆ ಮಾಡಿ, "ಭಕ್ತರ ಸೇವೆಯೇ ಸಾಕ್ಷಾತ್ ಕೊಟ್ರಯ್ಯನ ಸೇವೆ," ಎನ್ನುತಾ ಭಕ್ತರ ಸೇವೆಯಲಿ ಕೊಟ್ರಯ್ಯನ ಕಾಣ್ತಾರೆ. ವಿಶೇಸವಾಗಿ ಕೊಟ್ರಯ್ಯನ ರಥೋತ್ಸವಕ್ಕೆ ಬರ್ವ ಸಾವಿರಾರು ಪಾದಯಾತ್ರಿಗಳಿಗೆ ಔಷಧೋಪಾಚಾರ, ಎಳನೀರು, ಮಜ್ಜಿಗೆ, ಊಟ, ತಿಂಡಿ, ವಸತಿ ಇತ್ಯಾದಿ-ಇತ್ಯಾದಿ ಸೇವೆ, ಸೌಕರ್ಯಗಳ ನೀಡಿ ಕೃತಾರ್ಥರಾಗ್ತಾರೆ.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಮೈಸೂರು ದಸರೆಯ ಹೊತ್ತಿಗೆ ಪದೇಪದೆ ಕೇಳಿಬರುವ 'ಮಹಿಷ' ನಿಜಕ್ಕೂ ಯಾರು?

ಹಾಗೆಯೇ ಇನ್ನೊಂದು ವಿಷ್ಯ... "ಈಗಿನ ಕಾಲ್ದವರಿಗೆ ದೇವ್ರು-ದಿಂಡ್ರು ಅನ್ನೋ ಭಯ-ಭಕ್ತಿ ಕಿಂಚಿತ್ತೂ ಇಲ್ಲ," ಎಂದು ಗೊಣಗೋರು ಕೊಟ್ಟೂರಿಗೊಮ್ಮೆ ಬರ್ಬೇಕು. ಅದರಲ್ಲೂ ಕೊಟ್ರಯ್ಯನ ಜಾತ್ರೆ, ಉತ್ಸವಗಳಿಗೆ ಸಾಕ್ಷಿ ಆಗ್ಬೇಕು. ಬಹುಮುಖ್ಯವಾಗಿ ಚಿಕ್ಕ-ಚಿಕ್ಕ ಮಕ್ಳು, ಹರೆಯದ್ವರು, ಹೆಂಗಳೆಯರು ಸ್ವಾಮಿ ಜಾತ್ರೆ, ಉತ್ಸವಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುವುದ ಕಣ್ಣಾರೆ ನೋಡ್ಬೇಕು. ಸಮಾಳ, ನಂದಿಕೋಲು ಕುಣಿತ, ಪಲ್ಲಕ್ಕಿ ಹೊರುವುದು, ಒಡುಪು ಹೇಳವುದು, ಚಾಮರ ಬೀಸುವುದು, ಮನೆ ಅಂಗಳ, ಹಾದಿ-ಬೀದಿಗಳನ್ನು ಒಪ್ಪ ಓರಣವಾಗಿಸಿ, ವಿಶೇಸವಾಗಿ ಕೊಟ್ರಯ್ಯನ ಪಲ್ಲಕ್ಕಿ ಸಾಗುವ ದಾರಿಗೆ ನೀರು ಎರಚಿ, ಕಲರ್-ಕಲರ್ ರಂಗೋಲಿ ಹಾಕಿ ಅಲಂಕರಿಸುವುದು... ಇತ್ಯಾದಿಗಳನ್ನು  ಕಿಂಚಿತ್ತೂ ಬೇಸರಿಸದೆ, ಸುಸ್ತು ಎನ್ನದೆ ಹಸಿವು, ನಿದ್ದೆ, ನೀರಡಿಕೆ ಇದ್ಯಾವುದನ್ನೂ ಲೆಕ್ಕಿಸದೆ ಹಗ್ಲಿರುಳು ಧ್ಯಾನಸ್ಥರಂತೆ ಮಾಡುವುದನ್ನ ಕುದ್ದು ಕಂಡರೆ, "ಭಕ್ತಿ ಇದ್ದರೆ, ನೆಲೆಸಿದ್ರೆ ಅದು ಕೊಟ್ಟೂರಲ್ಲಿ ಮಾತ್ರ," ಎನ್ನುವ ಮಾತು ತನ್ನಿಂತಾನೇ ನಿಮ್ಮ ಬಾಯಿಂದ ಬರ್ತೈದೆ. ಕಾರ್ತಿಕ ಮಾಸ್ದಲ್ಲಿ ಕೊಟ್ರಯ್ಯನ ಪಲ್ಲಕ್ಕಿ ಉತ್ಸವ, ಮಾಲಾಧಾರಣೆ, ರಥೋತ್ಸವ ಸಂಭ್ರಮದಲ್ಲಿ ಭಕ್ತಿಯ ಪರಾಕಾಷ್ಠೆ ಕಾಣ್ತೇವೆ. "ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲು ಮುರಿಯೇ... ಬೌಪರಾಗ್..." "ಕೊಟ್ಟೂರೇಶ್ವರ ಮಹಾರಾಜ್ ಕು ಜೈ..’."ಹೀಗೆ ಜೈಕಾರ ಮೊಳಗಿಸ್ತಾ, ನೆಲದ ಮೇಲಷ್ಟೇ ಅಲ್ಲದೆ ಪ್ರತೀ ಭಕ್ತರ ನಾಲಿಗೆ ಮೇಲೆ ಕೊಟ್ರೇಶ ಮೆರೆಯುವುದನ್ನು ಕಣ್ಣುತುಂಬಿಕೊಳ್ಳೋದೇ ಒಂದು ವಿಶೇಸ ಅನುಭೂತಿ.

ಅಂದ್ಹಾಗೆ ಈತನ ಭಕ್ತರ ದಿನದ ಆರಂಭ ಮತ್ತು ಆ ದಿನದ ಅಂತ್ಯ ಕೊಟ್ರಯ್ಯನ ನೆನೆವ ಮೂಲಕವೇ ಆಗೋದು. ಹುಚ್ಚು ಕೊಟ್ರಯ್ಯಂಗೆ ಹೀಗೆ ವಿಪರೀತ ಹಚ್ಚಿಕೊಂಡ ಇಲ್ಲಿಯವ್ರು, ಅವ್ನ ಗುಡಿಗೆ - ವಿಶೇಸವಾಗಿ ದರ್ಬಾರ್ ಮಠಕ್ಕೆ ಮಡಿಉಡಿಯಿಂದ ಬಂದು ದರ್ಶನ ಪಡೆದ ನಂತರವೇ ಮುಂದಿನ ಕೆಲ್ಸ ಮಾಡ್ತಾರೆ. ಯಾವುದೇ ಕೆಲ್ಸಗಳನ್ನು ವಿಶೇಸವಾಗಿ ಶುಭಕಾರ್ಯಗಳನ್ನು ಹಮ್ಮಿಕೊಳ್ಳುವ ಮುನ್ನ ಈತನ ಮೇಲೆ ಭಾರ ಹಾಕ್ತಾರೆ. ಒಟ್ಟನಲ್ಲಿ ಕೊಟ್ರಯ್ಯಂಗೆ "ಎಲ್ಲ ನಿನ್ನದಪ್ಪ..." ಎಂದು ಶರಣಾಗ್ತಾರೆ.

ದರ್ಬಾರ್ ಮಠ, ಮೂರ್ಕಲ್ಲು ಮಠ, ಗಚ್ಚಿನ ಮಠ, ತೊಟ್ಟಿಲು ಮಠ ಹಾಗೂ ಮರಿ ಕೊಟ್ಟೂರೇಶ್ವರ ಮಠ... ಹೀಗೆ ಈತನ ಒಟ್ಟು ಐದು ಮಠಗಳಿವೆ. ಭಕ್ತರು ತಮ್ಮ ಟೈಂ ಮತ್ತು ಅನುಕೂಲಕ್ಕೆ ತಕ್ಕಂತೆ ದಿನಂಪ್ರತಿ ಈ ಮಠಗಳಿಗೆ ಹೋಗಿ ಸ್ವಾಮಿ ದರ್ಶನ ಮಾಡ್ತಾರೆ. ಹೀಗೆ, ಕೊಟ್ರಯ್ಯ ಇಲ್ಲಿನ ಜನ್ರ ಅಣುರೇಣು ಕಣದಲ್ಲಿ ಬೆರ್ತಾನೆ. ಕೊಟ್ರಯ್ಯಂಗೆ ನಮ್ಮೂರಿಗರು, ಅದರಲ್ಲೂ ಮುಖ್ಯವಾಗಿ  ಲೋಕಲ್ನವರು (ಮೂಲ ನಿವಾಸಿಗಳು) ಸ್ವಾಮಿನಿಷ್ಠರಾಗಿ, ಸದಾ ಈತನಿಗೆ ಹೊತ್ತು ಮೆರೆಸ್ತಾರೆನ್ನುವುದರಲ್ಲಿ ಎರ್ಡು ಮಾತಿಲ್ಲ. ಭಕ್ತಿ-ಭಾವದಲಿ ಅವ್ನ ಉತ್ಸವ, ಜಾತ್ರೆಗಳನ್ನು ಮಾಡ್ತಾರೆ. ಒಟ್ಟನಲ್ಲಿ ಅವ್ನ ಬಗೆಗಿನ ಭಕ್ತಿ-ಶ್ರದ್ಧೆ ವಿಷ್ಯಕ್ಕೆ ಬಂದಾಗ, ಅದು ಕಿಂಚಿತ್ತೂ ಮುಕ್ಕಾಗಿಲ್ಲ ಎಂಬುದಂತೂ ಸತ್ಯ.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | 'ಕಾಂತಾರ' ಸಿನಿಮಾವನ್ನು ಇನ್ನೂ ನೋಡಿಲ್ಲವಾದರೆ ಈ ವಿಷಯಗಳು ನಿಮಗೆ ಗೊತ್ತಿರಲಿ

ಇದಿಷ್ಟು ಇಲ್ನವರು ಶ್ರೀಗುರು ಕೊಟ್ಟೂರೇಶನ ಮೇಲೆ ಇಟ್ಟಿರುವ ಭಕ್ತಿಯ ಮಾತಾಯಿತು. ಈಗ ಮುಖ್ಯ ವಿಷ್ಯಕ್ಕೆ ಬರೋಣ. ಈ ಕೊಟ್ರಯ್ಯ ಭಕ್ತರ ಮಧ್ಯೆ ತಾರತಮ್ಯ ಮಾಡ್ತಾನೆನ್ನುವ ಅಪಾದನೆಯನ್ನ ನಮ್ಮೂರಿನ ಅನೇಕ್ರು ಸುಮಾರು ವರುಷಗಳಿಂದ ಮಾಡ್ತಲೇ ಬಂದ್ವಾರೆ! ದೇವ್ರು ಬೇಧ-ಭಾವ ಮಾಡ್ತಾನಾ ಎಂಬ ಪ್ರಶ್ನೆ ಬರ್ತೈದೆ. ನಾ ಸಣ್ಣವನಿದ್ದಾಗ್ಲಿಂದ ಈ ಪ್ರಶ್ನೆ ನಂಗೂ ಕಾಡ್ತಲೇ ಬಂದಿದ್ದು ಇಂದಿಗೂ ಯಕ್ಷಪ್ರಶ್ನೆಯಾಗೇ ಉಳಿದೈತೆ. ಅದಿರ್ಲಿ, ನಮ್ಮೂರಿನ ಅನೇಕ್ರು ಇಂದುಮುಂದು ನೋಡದೆ ಕೊಟ್ರಯ್ಯನ ಮ್ಯಾಲೆ ಈ ತರಹದ ಕಂಪ್ಲೈಂಟ್ ಮಾಡ್ತಾರೆ. "ಕೊಟ್ರಯ್ಯ ಹೊರಗಿನವರ್ರಿಗೆ ಎತ್ತಿ ಕೊಟ್ಟಂಗೆ ಲೋಕಲ್ನವರ ಕೋರಿಕೆಗಳನ್ನ, ಕಷ್ಟಸುಖಗಳನ್ನ ಅಷ್ಟಾಗಿ ಆಲಿಸ್ತಿಲ್ಲ; ನಮ್ಮನ್ನು ಉದ್ಧರಿಸುವಲ್ಲ... ನಮ್ಮೇಲೆ ಒಳ್ಳೆ ದೃಷ್ಟಿ ಹಾಯಿಸುವಲ್ಲ..." ಹೀಗೆ ಕೆಲವೊಂದಿಷ್ಟು ನೇರಾನೇರ ಆರೋಪ್ಗಳು ಈತನ್ಮೇಲೆ ಸದಾ ಕೇಳಿಬರ್ತವೆ. ಕೊಟ್ರಯ್ಯಂಗೆ, "ನಮ್ಮನು ಕೈ ಹಿಡಿದು ಮೇಲೆಕೆತ್ತು. ಒಳ್ಳೆ ಸ್ಥಾನ ತೋರ್ಸು..." ಅಂತಾ ವಿನಮ್ರವಾಗಿ ಸದಾ ಬೇಡಿಕೊಳ್ತಾರೆ. ಒಂದು ಪಕ್ಷ ಆತ ಅದಕ್ಕೆ ಸೊಪ್ಪು ಹಾಕದಿದ್ದಾಗ, ಗುರುಬಸ್ವ ನಮ್ಮೂರಿವನೆನ್ನುವ ಸಲುಗೆಯಿಂದ್ಲೋ ಅಥವಾ ಆತನ ಆರಾಧಕರೆನ್ನುವ  ಅಧಿಕಾರದಿಂದ್ಲೋ ಏನೋ ಒಟ್ಟನಲ್ಲಿ ಆತನ್ಮೇಲೆ ಸಿಟ್ಟಾಗಿ ವಾಚಾಮಗೋಚರವಾಗಿ ಬೈವುದೂ ಇದೆ! ಹೀಂಗಾದ್ರೂ ಕೆರಳಿ ಕೊಟ್ರಯ್ಯ ನಮ್ ಕೊರಗು ಮತ್ತು ಕೋರಿಕೆಗೆ ಕಿವಿಯಾಗ್ತಾನೆನ್ನುವ ತಂತ್ರ ಇದರಿಂದೆ ಇದ್ರೂ ಇರಬಹುದೇನೋ. ಆದ್ದಾಗ್ಯೂ ಇಂತಹ ಪ್ರಯತ್ನಗಳು ಫಲ ಕೊಡುವುದಕ್ಕಿಂತ ಅನೇಕ ಸಾರಿ ಕೈ ಕೊಡ್ತಾವೆ. ಈ ಕಾರಣಕ್ಕೇ, "ಇದ್ದೂರಿನವ್ರಿಗೆ ಕೊಟ್ರಯ್ಯ ಒಲಿಯಲ್ಲ..." ಎನ್ನುವ ಮಾತು ಪರಂಪರಾಗತವಾಗಿ ಬಂದೈತೆ. ಈ ಅರೋಪಗಳಿಗೆ ನಮ್ಮವ್ರು ನೀಡುವ ಸಮರ್ಥನೆಯೂ ಸ್ವಾರಸ್ಯಕರವಾಗಿಯೇ ಇವೆ.

ಇಂದು ಕೊಟ್ಟೂರು ಯದ್ವಾತದ್ವಾ ಬೆಳೆದೈತೆ. ನೋಡನೋಡ್ತಿದ್ದಂತೆ ಕೊಟ್ಟೂರಿನ ಮೂಲ ಚಹರೆನೇ ಬದಲಾಗಿಬಿಟ್ಟೈತೆ. ಎಲ್ಲೆಲ್ಲಿಂದಲೋ ಬರಿಗೈಯಲ್ಲಿ ಇಲ್ಲಿಗೆ ಬಂದ್ವರು ಇಂದು ಕುಬೇರರಾಗ್ಯಾರೆ. ಆದರೆ, ಸ್ಥಳೀಯರು ಮಾತ್ರ ತಾತ-ಮುತ್ತಾತನ ಕಾಲದಿಂದ ಹಾಗೇ ಇದ್ದಾರೆ, ಏರಿಲ್ಲ ಇಳಿವು ಇಲ್ಲ. ಹೌದು... ಖಾಲಿ ಕೈಲಿ ಕೊಟ್ರಿಗೆ ಬಂದ್ವರು ಇಂದು ಇಲ್ಲೇ ಜಾಗ ಕೊಂಡು, ಒಳ್ಳೆ-ಒಳ್ಳೆ ಮನೆ ಕಟ್ಸಕೊಂಡು, ಎಲ್ಲ ದೃಷ್ಟಿಯಿಂದ ಆಯಾಗ್ವಾರೆ. ಕೊಟ್ಟೂರಿನ ಜನಸಂಖ್ಯೆಯಲ್ಲಿ ಮುಕ್ಕಾಲು ಪೈಸೆ ಭಾಗ ಸುತ್ತಮುತ್ತಲ ಹಳ್ಳಿ, ತಾಲೂಕು-ಜಿಲ್ಲೆಗಳಿಂದ, ಅಷ್ಟೇಕೆ ಹೊರರಾಜ್ಯದಿಂದ ಬಂದವರೇ ಇದಾರೆ. ಹೀಗೆ, ವಲಸೆ ಬಂದ್ವರಿಂದ ಇಂದು ಕೊಟ್ಟೂರು ತುಂಬಿತುಳುಕ್ತಿದೆ. ಅವರೆಲ್ಲ ಜೀವನ ಚೆಂದ ಐತೆ. ಆದರೆ, ಲೋಕಲ್ನವರ ಬದುಕಿನ ಚಿತ್ರಣ ಒಂಚೂರೂ ಬದಲಾಗಿಲ್ಲ.

ಅಸಲಿಗೆ, ಹೊರಗಿನವರು ಬಂದು ಉದ್ಧಾರ ಆಗ್ತಿರುವುದಕ್ಕೆ ಕೊಟ್ಟೂರು ಧಾರ್ಮಿಕ ಕ್ಷೇತ್ರವಾಗಷ್ಟೇ ಅಲ್ಲದೆ ಶೈಕ್ಷಣಿಕ, ವ್ಯವಹಾರಿಕ, ಸಾಂಸ್ಕೃತಿಕವಾಗಿ ಬೆಳೆದಿದ್ದು ಕಾರಣ. ವಿಜಯನಗರ ಜಿಲ್ಲೆಯಲ್ಲೇ ಕೊಟ್ಟೂರು ನಂಬರ್ ಒನ್ ಊರಾಗಿ ಬೆಳೆಯುತ್ತಿದೆ. ಇದ್ರಿಂದ ಕೊಟ್ಟೂರು ಮೂಲ ಊರಿಗಿಂತ ಮೂರ್ನಾಲ್ಕು ಪಟ್ಟು ಬೆಳೆದು ಅಷ್ಟ ದಿಕ್ಕುಗಳಿಗೆ ಚಾಚಿದೆ; ದಿನದಿನಕ್ಕೆ ಬೆಳೆಯುತ್ಲೇ ಇದೆ. ಆದ್ರೆ, ಹಳೇ ಕೊಟ್ಟೂರು ಏರಿಯಾ ಮಾತ್ರ ಅಂತಹ ಏಳಿಗೆ ಕಾಣದೆ ಮೊದ್ಲಿನಂತೆ ಹಾಗೇ ಇದೆ. ಊರ್ನ ಕರಗಲ್ಲು/ಬುಡ್ಡೆಕಲ್ಲು - ಅಂದ್ರೆ, ಕೊಟ್ರೇಶನ ಮುಖ್ಯದ್ವಾರದಿಂದಿಡಿದು ಕೋಟೆ ಏರಿಯಾ, ಮೇಗಳಗೇರಿ, ಕೆಳಗೇರಿ, ಮಡ್ಡೇರ್, ಸಾಳೇರ್, ನೇವಾರ್ ಓಣಿಗಳು.. ಇದೆಲ್ಲಾ ಹಳೆ ಊರಂತ ಕರೆಯಿಸಿಕೊಳ್ತದೆ. ಈ ಹಳೆ ಊರ್ನ ಬಹುತೇಕ ಕುಟುಂಬಗಳ ಪರಿಸ್ಥಿತಿ, ಅದ್ರಲ್ಲೂ ಆರ್ಥಿಕ ಸ್ಥಿತಿಗತಿ ಹೇಳಿಕೊಳ್ಳುವಷ್ಟು ಸುಧಾರಿಸದೆ, ಇಂದಿಗೂ ಕರುಣಾಜನಕ ಸ್ಥಿತಿಯಲೈತೆ. ಇವ್ರ ಬದುಕು 'ಕೂಳಿಗೆ ಕೂಳು-ನೀರಿಗೆ ನೀರು' ಅನ್ನುವಂತಿದ್ದು, ಅತ್ತ ಆರೇಕ್ಕೇರದೆ ಇತ್ತ ಮೂರಕ್ಕೆ ಇಳಿಯದೆ ತ್ರಿಶಂಕು ಸ್ಥಿತಿಯಲೈತೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದ್ರೆ ಕೊಟ್ರೇಶನ ಭಕ್ತರು ಫೈನಲಿ  ಕೊಟ್ರೇಶನ ಕಡೆಗೇ ಬೊಟ್ಟು ಮಾಡಿ ತೋರಿಸ್ತಾರೆ. "ಕೊಟ್ಟ್ರಯ್ಯ ಮನ್ಸು ಮಾಡಿದ್ರೆ ಎಂದೋ ನಾವೂ ಬೇರೆಯವರಂತೆ ಮನುಷ್ಯರಾಗ್ತಿದ್ದೆವು..." ಎನ್ನುವವರೇ ಅನೇಕರಿದ್ದಾರೆ. "ನಮ್ಮೇಲೆ ಕೊಟ್ರಯ್ಯ ಕಣ್ಣು ಬಿಡುವಲ್ಲ..." "ಕೊಟ್ರಯ್ಯಂಗೆ ನಮ್ಮನ್ನು ಉದ್ಧರಿಸುವಾಸೆ ಇಲ್ಲ..." ಎನ್ನುವ ಸಣ್ಣ ಅಸಮಾಧಾನ, ತಣ್ಣನೆ ಆಕ್ರೋಶ ಈ ಹಳೆ ಊರ್ನ ಜನರಲ್ಲಿ ಸದಾ ಐತೆ.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಮದುವೆಯ ದಿನ ಮದುಮಗಳ ಕೈರುಚಿ; ನಂತರದ ಮೂರು ವರ್ಷ ಮದುಮಗನದೇ ಅಡುಗೆ

ಅಂತಿಮವಾಗಿ ಕೊಟ್ರಯ್ಯನ್ಮೇಲೆ ಲೋಕಲ್ನವರ ಅದೇನೇ ದೂರು, ಅದೆಷ್ಟೇ ಅಸಮಾಧಾನವಿದ್ದರೂ ಆ ಮುನಿಸು ಅರೆಗಳಿಗೆ ಮಾತ್ರ ಅನ್ನುವುದೇ ವಿಶೇಸ ಮತ್ತು ಸೋಜಿಗ. ಕೊಟ್ರಯ್ಯ ವರ ಕೊಟ್ರೂ ಅಷ್ಟೇ, ಬಿಟ್ರೂ ಅಷ್ಟೇ. ಉದ್ಧರಿಸಿದ್ರೂ ಅಷ್ಟೇ, ಬಿಟ್ರೂ ಅಷ್ಟೇ ಎನ್ನುವ ಇವ್ರು, ಎಂದಿನಂತೆ ಕೊಟ್ರಯ್ಯನ ಸೇವೆಗೆ ಟೊಂಕಕಟ್ಟಿ ನಿಲ್ತಾರೆ. ಪ್ರತಿನಿತ್ಯ ಈತನ ನಾಮಸ್ಮರಣೆ ಮಾಡ್ತಾ, ಈತನಿಗೆ ಜೈಕಾರ ಹಾಕ್ತಾ, ಉತ್ಸವ, ಜಾತ್ರೆಗಳ ಮಾಡ್ತಾ ಯಶಸ್ವಿಗೊಳಿಸ್ತಾರೆ. "ಎಲ್ಲಾ ನಿನ್ನಿಚ್ಛೆ..." ಎನ್ನುವುದ್ರ ಜೊತೆಜೊತೆಗೆ, "ಮರಳಿ ಯತ್ನವ ಮಾಡು; ಮರಳಿ ಯತ್ನವ ಮಾಡು," ಎಂಬಂತೆ ಮತ್ತೆ-ಮತ್ತೆ ತಮ್ಮ ಕಷ್ಟಸುಖ, ಇಚ್ಛೆಗಳನ್ನ ಅವ್ನಲ್ಲಿ ಹೇಳಿಕೊಳ್ತಾ, ಇಂದಲ್ಲಾ ನಾಳೆ ನಮ್ಮಪ್ಪ ಒಳ್ಳೆ ದಿನಗಳನ್ನು ಕರುಣಿಸ್ತಾನೆನ್ನುವ ವಿಶ್ವಾಸದಲ್ಲಿ ಮುಂದೆ ಸಾಗ್ತಿದ್ದಾರೆ.

ಚಿತ್ರಗಳು: ಪ್ರವರ ಕೊಟ್ಟೂರು
ನಿಮಗೆ ಏನು ಅನ್ನಿಸ್ತು?
11 ವೋಟ್
eedina app