ರಾಷ್ಟ್ರೀಯ ಸಂಭ್ರಮವಾಗಬೇಕಿದ್ದ ಚೀತಾಗಳ ಆಗಮನ ವ್ಯಕ್ತಿ ಆರಾಧನೆಗೆ ಬಲಿಯಾದ “ಹಿಂದುತ್ವ” – “ಮುಂದುತ್ವ”ಗಳ ಒಂದು ನೋಟ

"ದುರಂತ ಎಂದರೆ, ಲೆಪರ್ಡ್ ಮತ್ತು ಚೀತಾ ನಡುವೆ ವ್ಯತ್ಯಾಸ ತಿಳಿಯದ ಬೃಹಸ್ಪತಿಗಳು, ನಮ್ಮದೇ ದೇಶದಲ್ಲಿ ಅಪಾಯದ ಅಂಚಿನಲ್ಲಿರುವ ಸಿಂಹಗಳನ್ನು ಹಂಚಿಕೊಳ್ಳಲಾಗದ ಸ್ವಾರ್ಥಿಗಳು ನಮೀಬಿಯಾದ ಚೀತಾಗಳ ಬಗ್ಗೆ ಉಗ್ಗುತ್ತಿದ್ದಾರೆ. ಆದರೆ ಇದರ ಹಿಂದೆ ಅನೇಕ ರಹಸ್ಯಗಳಿವೆ. “ಚೀತಾಗಳನ್ನು” ಭಾರತಕ್ಕೆ ಪರಿಚಯಿಸಿ, ಅವುಗಳ ಸಂತಾನವನ್ನು ಉಳಿಸಿ ಬೆಳೆಸುವುದು ಖಂಡಿತ ಇದರ ಹಿಂದಿನ ಉದ್ದೇಶ ಮತ್ತು ಗುರಿ ಅಲ್ಲ! ವಿನಾಶಕಾರಿ ತಪ್ಪುಗಳ ನಡುವೆಯೂ ಮುಪ್ಪನ್ನು ವಿಜೃಂಭಿಸುವುದು, “ಗಣರಾಜ್ಯ” ನೀತಿಯಡಿ ಒಂದು ರಾಜ್ಯದ “ಮನಾಪಲಿ” ಮೆರೆಯುವ ಕ್ಷುಲ್ಲಕ ಬರ್ತ್ ಡೇ “ಬಾಯ್” ಚಿಂತನೆಗಳಿವೆ! ಇದೇ ಬಿರುಕಾಗುತ್ತಿರುವ ಮಹಾನಾವೆಯ ದುರಂತ ಮತ್ತು ಅಚ್ಚರಿ."
Gujarat Lions v/s African Cheetas

ಭಾರತದಲ್ಲಿ ಚಿರತೆಗಳ ಸಂತತಿಗೇನೂ ಕೊರತೆ ಇರಲಿಲ್ಲ. 19 ನೇ ಶತಮಾನದಿಂದ ಮೊದಲ್ಗೊಂಡು ಹೊರಬಂದಿರುವ ಬಹುತೇಕ ಕಾಡು, ಕಾಡುಪ್ರಾಣಿಗಳು, ಶಿಕಾರಿ ಸಂಬಂಧಿತ ಬರಹಗಳಲ್ಲಿ ಈ ಚಿರತೆಗಳ ಪ್ರಸ್ತಾಪವಿದೆ. ಭಾರತದ ಇಬ್ಬರು ಪ್ರಸಿದ್ಧ ನರಭಕ್ಷಕ ಹುಲಿ/ಚಿರತೆಗಳ ಶಿಕಾರಿದಾರರು ಮತ್ತು ಆ ಕತೆಗಳ ಬರಹಗಾರರಾದ ಕುಮ್ಮಾಂವಿನ ಜಿಮ್ ಕಾರ್ಬೆಟ್ ಮತ್ತು ಕರ್ನಾಟಕದ ಕೆನೆತ್ ಅಂಡರ್ಸನ್ ಬರಹಗಳಲ್ಲಿ ಈ ಚಿರತೆಗಳ ಪ್ರಸ್ತಾಪ ಹೇರಳವಾಗಿ ಬರುತ್ತದೆ. ಅಂಡರ್ಸನ್ ಮಾಮೂಲು ಚಿರತೆಗಳ ಬಗ್ಗೆ ಬಿಡಿ, ಅಪರೂಪದ ಕಪ್ಪು ಚಿರತೆಯ ಮೇಲೂ ಒಂದು ಅನುಭವ ಬರೆದಿದ್ದಾರೆ. ಅದು “ಶಿವನಪಳ್ಳಿಯ ಕಪ್ಪು ಚಿರತೆ” ಎಂದೇ ಪ್ರಸಿದ್ದವಾಗಿದೆ. ಅಂಡರ್ಸನ್ ಸಹ ಇದನ್ನು  “ಬ್ಲಾಕ್ ಪ್ಯಾಂಥರ್ ಆಫ್ ಶಿವನಪಳ್ಳಿ” ಎನ್ನುತ್ತಾರೆ. ಜೈವಿಕ ವಾಸ್ತವದಲ್ಲಿ ಈ “ಪ್ಯಾಂಥರ್”ಗಳು ಭಾರತದಲ್ಲಿ ಇಲ್ಲ. ಉಳಿದಂತೆ ಅವರ ಬಹುತೇಕ ಹುಲಿ ಶಿಕಾರಿಯ ಬರಹಗಳಲ್ಲಿ ಅನೇಕ ಚಿರತೆಗಳು ನಡುವೆ ಹಾಯ್ದು ಹೋಗುತ್ತವೆ. ಕೆಲವು ಬರಹಗಳಲ್ಲಿ ಅವೇ ನಾಯಕ/ನಾಯಕಿಯರಾಗಿವೆ.

ಇನ್ನು ಕಾರ್ಬೆಟ್ ಅವರ ಕತೆಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ ದೀರ್ಘ ಕಾದಂಬರಿ ರೂಪದ “ರುದ್ರಪ್ರಯಾಗದ ನರಭಕ್ಷಕ” ಒಂದು ಅಸಾಧಾರಣ ಚಿರತೆಯ ಕತೆ. 1918 ರಿಂದ 1926 ರವರೆಗೆ 125 ಜನರನ್ನು ಕೊಂದು ತಿಂದ ಇದರ ಇತಿಹಾಸ ಭಯಾನಕ. ಇದನ್ನು ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡಕ್ಕೆ ತಂದಿದ್ದಾರೆ. ಹಾಗೆಯೇ ನಾನು ಕನ್ನಡೀಕರಿಸಿರುವ ಕಾರ್ಬೆಟ್ ಅವರ “ಮ್ಯಾನ್ ಈಟರ್ಸ್ ಆಫ್ ಕುಮ್ಮಾಂವ್” ಮತ್ತು “ಮೋರ್ ಮ್ಯಾನ್ ಈಟರ್ಸ್ ಆಫ್ ಕುಮ್ಮಾಂವ್” ಕೃತಿಗಳಲ್ಲಿ ಬರುವ  “ಚೂಕ”, "ತಲ್ಲಾ ದೇಶದ”, “ಚಂಪಾವತ”, “ಥಾಕ್” ನರಭಕ್ಷಕ ಮುಂತಾದ 12-13 ಪ್ರಮುಖ ಕತೆಗಳಲ್ಲಿ ಈ ಚಿರತೆಗಳ ವಿಷಯ “ವಿಧಿ” ಎಂಬಂತೆ ಪ್ರಸ್ತಾಪವಾಗುತ್ತದೆ. ಒಂದು ಕಡೆಯಂತೂ ಕಾರ್ಬೆಟ್ ಇವುಗಳನ್ನು “ಕಾಡಿನ ಆಭರಣಗಳು” ಎನ್ನುತ್ತಾರೆ. ಅವುಗಳ ಹೊಳೆಯುವ ಮೈಬಣ್ಣ ಮತ್ತು ಅದರ ಮೇಲೆ ನಕ್ಷತ್ರಗಳಂತೆ ಮಿಂಚುವ ಕಪ್ಪು ಚುಕ್ಕೆಗಳನ್ನು ದೈವಿಕವೆಂಬಂತೆ ವರ್ಣಿಸುತ್ತಾರೆ. ಅನೇಕ ಚಿರತೆಗಳನ್ನು ಇವರು ಕೊಂದ ಉದಾಹರಣೆಗಳೂ ಇಲ್ಲಿವೆ. ಆದರೆ ಇವು ನಮೀಬಿಯಾದಿಂದ ಈಗ  ರಫ್ತು ಮಾಡಿಕೊಂಡಿರುವ “ಚೀತಾ”ಗಳಲ್ಲ! “ಚಿರತೆ”ಗಳು! ನಮ್ಮವು ಏಷಿಯಾ ಖಂಡದ ಚಿರತೆಗಳು. ಇವುಗಳನ್ನು ಇಂಗ್ಲಿಷ್‌ನಲ್ಲಿ “ಲೆಪರ್ಡ್” ಎನ್ನುತ್ತಾರೆ. 


"ಫೆಲಿಡೆ" ಎಂದೆನ್ನುವ ಒಂದೇ ಕುಟುಂಬದಿಂದ ಬಂದ ಇವುಗಳ ನಡುವಿನ ಪ್ರಧಾನ ವ್ಯತ್ಯಾಸಗಳು ಹೀಗಿವೆ:


        ಚೀತಾಗಳು                                                                      ಚಿರತೆಗಳು

 • ಕಣ್ಣುಗಳ ಕೆಳಗೆ ಕಪ್ಪನೆಯ “ಕಣ್ಣೀರು ಗೆರೆ” ಇರುತ್ತದೆ         “ಕಣ್ಣೀರು ಗೆರೆ” ಇರುವುದಿಲ್ಲ
 • ಉದ್ದನೆಯ ಮತ್ತು ತೆಳ್ಳನೆಯ ದೇಹ                            ಮಾಂಸಭರಿತ ದಪ್ಪ ದೇಹ
 • ಬೆಕ್ಕುಗಳ ಆಕಾರಕ್ಕಿಂತ ಭಿನ್ನ                                     ತದ್ವತ್ ಬೆಕ್ಕುಗಳ ಆಕಾರ
 • ಹಗಲು ಶಿಕಾರಿ ಮಾಡುತ್ತದೆ                                     ನಿಶಾಚರಿಗಳು
 • ಹುಲ್ಲುಗಾವಲು/ಬಯಲು ಶಿಕಾರಿ                               ದಟ್ಟ ಕಾಡುಗಳ ನಡುವೆ ಸಹ ಶಿಕಾರಿ
 • ಅತಿವೇಗ/ಕಡಿಮೆ ದೂರ                                         ಶಕ್ತಿಯುತ ದಾಳಿ/ಹೆಚ್ಚು ದೂರ
 • ಹಲ್ಲುಗಳು/ದವಡೆಗಳು ಸಣ್ಣವು                                  ಹಲ್ಲುಗಳು/ದವಡೆಗಳು ದೊಡ್ಡವು
 • ಗಟ್ಟಿ ಮೂಳೆಯಲ್ಲಿ ಹಲ್ಲು ತೂರಿಸಲಾರವು                    ತೂರಿಸಬಲ್ಲವು/ಪುಡಿ ಮಾಡಬಲ್ಲವು
 • ಸಂಘಜೀವಿ                                                         ಏಕಾಂಗಿ
 • ಹೆಜ್ಜೆ ಊರಿದಲ್ಲಿ ಉಗುರು ಗುರುತು ಇರುತ್ತದೆ                 ಉಗುರು ಗುರುತು ಇರುವುದಿಲ್ಲ
 • ಗಂಟೆಗೆ 113 ಕಿ.ಮೀ. ವೇಗ                                        ಗಂಟೆಗೆ 60 ಕಿ.ಮೀ. ವೇಗ
  Image
  ಮೊದಲನೆಯದು: “ಚೀತಾ” ಚರ್ಮದ ಮೇಲೆ ಚುಕ್ಕೆಗಳನ್ನು ಇಟ್ಟಂತಿದೆ. ಎರಡನೆಯದು: “ಚಿರತೆ” ಗುಚ್ಚ ಮಾದರಿಯ ಕಪ್ಪು ಗುರುತುಗಳೊಂದಿಗೆ ಮಿಳಿತವಾಗಿ ಚರ್ಮ ಹರಡಿದಂತಿದೆ.
  ಮೊದಲನೆಯದು: “ಚೀತಾ” ಚರ್ಮದ ಮೇಲೆ ಚುಕ್ಕೆಗಳನ್ನು ಇಟ್ಟಂತಿದೆ. ಎರಡನೆಯದು: “ಚಿರತೆ” ಗುಚ್ಚ ಮಾದರಿಯ ಕಪ್ಪು ಗುರುತುಗಳೊಂದಿಗೆ ಮಿಳಿತವಾಗಿ ಚರ್ಮ ಹರಡಿದಂತಿದೆ.
   

 

Image
ಮೊದಲನೆಯದು: “ಚೀತಾ” ಕಣ್ಣಿರು ಗೆರೆಗಳ ವಿಭಾಜಿತ ಸೀಳು ಸೀಳು ಚಿತ್ರ . ಎರಡನೆಯದು: “ಚಿರತೆ” ಚಿತ್ರ ಭರಿತ, ಸಂಕಲಿತ ಸಮಗ್ರ ಮುಖ
ಮೊದಲನೆಯದು: “ಚೀತಾ” ಕಣ್ಣೀರು ಗೆರೆಗಳ ವಿಭಜಿತ  ಸೀಳು ಚಿತ್ರ. ಎರಡನೆಯದು: “ಚಿರತೆ” ಚಿತ್ರ ಭರಿತ, ಸಂಕಲಿತ ಸಮಗ್ರ ಮುಖ

ತಕರಾರುಗಳೇನು ಮತ್ತು ಏಕೆ? 
ಕೆಲವು ತಜ್ಞರು ನಮ್ಮ ನೆಲಕ್ಕೆ ಪರಕೀಯವಾದ ಈ ಚೀತಾ ಪ್ರಭೇದವನ್ನು ಸರಿಯಾದ ಲೆಕ್ಕಾಚಾರ ಮತ್ತು ಅಧ್ಯಯನವಿಲ್ಲದೆ ದೇಶದ ಮಧ್ಯಭಾಗದಲ್ಲಿ ತಂದು ಸುರಿಯುತ್ತಿರುವುದು ಅಪಕ್ವ ನಿರ್ಧಾರ. ಭಾರತದಂತಹ ಅಪಾರ ಜೀವವೈವಿಧ್ಯ ಹೊಂದಿದ ದೇಶ ಇಂಥದ್ದೊಂದನ್ನು ಮಾಡಬಾರದಿತ್ತು ಎಂದಿದ್ದಾರೆ. 

ಈ ನಿರ್ಧಾರಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಹುಲಿ ವಿಜ್ಞಾನಿ ಎಂದು ಹೇಳಲಾಗುವ ಉಲ್ಲಾಸ ಕಾರಂತ ಎಂಬುವವರು, “ನಾನು ಈ ಯೋಜನೆಯ ವಿರೋಧಿಯಲ್ಲ. ಆದರೆ ದೂರದೃಷ್ಟಿ ಕೊರತೆಯ ಬಗ್ಗೆ ನನಗೆ ವಿರೋಧವಿದೆ. ಚದರ ಮೈಲಿಗೆ 360 ಜನಸಂಖ್ಯೆಯನ್ನು ಹೊಂದಿರುವ ಪ್ರದೇಶದಲ್ಲಿ ಈ ಪರಕೀಯ ಪ್ರಾಣಿಗಳನ್ನು ಇಳಿಸುವುದು ಸರಿ ಅಲ್ಲ. 2009 ರಲ್ಲಿಯೇ ಇಂಥದ್ದೊಂದು ಪ್ರಯತ್ನ ನಡೆದಿತ್ತು. ಆದರೆ, ಜೀವಿ ಪರಿಸ್ಥಿತಿ ಸೂತ್ರಗಳ ಪ್ರಕಾರ ಸರಿ ಅಲ್ಲ ಎಂದು ಅನೇಕರು ವಿರೋಧಿಸಿದ್ದರು” ಎಂದು ಹೇಳಿದ್ದನ್ನು ನ್ಯಾಷನಲ್ ಜಿಯಾಗ್ರಫಿ ವರದಿ ಮಾಡಿದೆ.

ಹಾಗೆಯೇ ಭಾರತ  ಮತ್ತು ಆಫ್ರಿಕಗಳಲ್ಲಿ ಈ ಬೆಕ್ಕಿನ ಜಾತಿಯ ಪ್ರಾಣಿಗಳ ಮೇಲೆ ಸಂಶೋಧನೆ ಮಾಡಿದ ಹಿನ್ನೆಲೆ ಇರುವ ಸ್ವತಂತ್ರ ಸಂರಕ್ಷಣಾ ವಿಜ್ಞಾನಿ ಅರ್ಜುನ್ ಗೋಪಾಲಸ್ವಾಮಿ “ಈಗ ಪರಿಸರದಲ್ಲಿ ಮುಕ್ತವಾಗಿ ಜೀವಿಸಬಲ್ಲ ಚಿರತೆಗಳಿಲ್ಲ. ಭಾರತದಲ್ಲಿ ಇಲ್ಲಿಗೆ 70 ವರ್ಷಗಳ ಹಿಂದೆ ಅವು ಕಣ್ಮರೆಯಾಗುವುದಕ್ಕೆ ಅನೇಕ ಕಾರಣಗಳಿವೆ. ಜನಸಂಖ್ಯೆಯ ಹೆಚ್ಚಳ ಅದರಲ್ಲಿ ಮುಖ್ಯವಾದದ್ದು. ಈ ನಡುವಿನ ಅವಧಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ” ಎಂದು ಹೇಳಿದ್ದನ್ನು ಇದೇ ಪತ್ರಿಕೆ ದಾಖಲಿಸಿದೆ.

ಈ ಚೀತಾಗಳನ್ನು ಭಾರತದಲ್ಲಿ ಬೆಳೆಸಬೇಕೆನ್ನುವ ಕನಸು ಹೊಸದೂ ಅಲ್ಲ, ಮೋದಿ ಇದರ ರೂವಾರಿಯೂ ಅಲ್ಲ. 1952 ರಲ್ಲಿಯೇ ಕೆಲವು ರಾಜಕಾರಣಿಗಳು ಮತ್ತು ವಿಜ್ಞಾನಿಗಳು ಇಂಥದ್ದೊಂದು ಕ್ರಾಂತಿಕಾರಿ ನಿರ್ಧಾರವನ್ನು ತಗೆದುಕೊಂಡಿದ್ದರು. ಅಂತಿಮವಾಗಿ ಭಾರತದಿಂದ ಕಣ್ಮರೆಯಾದ ಏಷಿಯಾ ಖಂಡದ ಚಿರತೆಗಳ ಪ್ರಭೇದಕ್ಕೆ ತೀರಾ ಹತ್ತಿರದ ಸಂಬಂಧಿಗಳಾದ ಇನ್ನೂ ಜೀವಂತವಿರುವ ಇರಾನ್ ದೇಶದಿಂದ ಇವನ್ನು ತರಿಸುವುದು ಎಂದು ತಿರ್ಮಾನವಾಯಿತು. 1970ರಲ್ಲಿ ಚಿರತೆಗಳಿಗೆ ಪ್ರತಿಯಾಗಿ ಭಾರತದ ಸಿಂಹಗಳನ್ನು ವಿನಿಮಯ ಮಾಡಿಕೊಳ್ಳುವುದು ಎಂದು ಒಪ್ಪಂದವಾಯಿತು. ಆದರೆ ಇರಾನಿನಲ್ಲಾದ ರಾಜಕೀಯ ಕ್ರಾಂತಿ ಮತ್ತು ಗುಜರಾತಿನ ತಿರಸ್ಕಾರ ಈ ಪ್ರಯತ್ನಕ್ಕೆ ತಡೆಗೋಡೆ ಆಯಿತು.

ಈ ಪ್ರಯತ್ನಕ್ಕೆ ಮತ್ತೆ 2012 ರಲ್ಲಿ ಮರು ಚಾಲನೆ ನೀಡಲಾಯಿತು. ಈ ಬಾರಿ ಇರಾನನ್ನು ತ್ಯಜಿಸಿ ಈ ನೆಲಕ್ಕೆ ಪರಕೀಯವಾದ ನಮೀಬಿಯಾದಿಂದ ಚೀತಾಗಳನ್ನು ತರುವುದೆಂದು ಮಾತುಕತೆಗಳು ಮೊದಲಾದವು. ಆದರೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ಸರ್ವೋಚ್ಛ ನ್ಯಾಯಾಲಯ ಇದಕ್ಕೆ ತಡೆಹಾಕಿತು. “ಕುನೋ – ಪಾಲ್ಪುರ್ ಅರಣ್ಯದಲ್ಲಿ ಸಾಕುವಂತಿದ್ದರೆ ನಮ್ಮದೇ ದೇಶದಲ್ಲಿರುವ ಸಿಂಹಗಳನ್ನು ಸಾಕಬಹುದು. ಅವು ಪ್ರವರ್ಧಮಾನಕ್ಕೆ ಬಂದ ನಂತರ, ತರುವುದಿದ್ದರೆ ಇರಾನಿನ ಚಿರತೆಗಳನ್ನು ತರಬೇಕು. ನಮೀಬಿಯಾದ ಚಿರತೆಗಳನ್ನು ಅಲ್ಲ” ಎಂದು ಹೇಳಿತು. 

ಸರ್ಕಾರದ ಈ ತೀರ್ಪನ್ನು ಪಾಲಿಸದಿರುವುದರ ವಿರುದ್ಧ  ಸರ್ವೋಚ್ಛ ನ್ಯಾಯಾಲಯ ಕದ ತಟ್ಟಿದ್ದು ಪಾಲ್ಪುರ್ ಪ್ರಾಂತ್ಯದ ಒಂದು ರಾಜ ಮನೆತನ. ಈ ಮನೆತನದವರು ಸಿಂಹಗಳನ್ನು ಮಾತ್ರ ಸಾಕುವ ಷರತ್ತಿನೊಂದಿಗೆ ಸರ್ಕಾರಕ್ಕೆ ತಮ್ಮ 220 ಬಿಘೆ ಜಮೀನನ್ನು ನೀಡಿದ್ದರು. ವಚನ ಭ್ರಷ್ಟವಾದ ಸರ್ಕಾರ ಇಲ್ಲಿ ಮತ್ತೆ ಚಿರತೆಗಳನ್ನು ಬಿಡುವುದರ ವಿರುದ್ಧ ಅವರ ತಕರಾರಿತ್ತು.

ಆ ಹೊತ್ತಿನಲ್ಲಿ ಭಾರತದಲ್ಲಿ ಸುಮಾರು 600 ಏಷ್ಯಾ ಮೂಲದ ಸಿಂಹಗಳಿದ್ದವು. ಅವೆಲ್ಲವೂ ದೇಶದ ಒಂದೇ ರಾಜ್ಯದಲ್ಲಿದ್ದವು. ಆ ರಾಜ್ಯ ಗುಜರಾತು. ಅಷ್ಟು ಹೊತ್ತಿಗಾಗಲೇ ಆಂತರಿಕ ಸಂತಾನೋತ್ಪತ್ತಿ ಮತ್ತು ಸಾಂಕ್ರಾಮಿಕ ರೋಗಗಳ ಕಾರಣ ಅವು ವಿನಾಶವಾಗಬಹುದು ಎಂದು ಜೀವ ವಿಜ್ಞಾನಿಗಳು ಆತಂಕಗೊಂಡಿದ್ದರು. ಅಲ್ಲದೆ ಒಂದು ಸೀಮಿತ ವಲಯದಲ್ಲಿ ಅಷ್ಟೊಂದು ಸಿಂಹಗಳ ಬದುಕು ಅವುಗಳ ಬದುಕನ್ನು ದುಸ್ತರಗೊಳಿಸಿತ್ತು ಮತ್ತು ಸುತ್ತಮುತ್ತಲ ಜನರ ಪಾಲಿಗೆ ನರಕವಾಗಿತ್ತು. ಅವುಗಳಲ್ಲಿ ಸ್ವಲ್ಪ ಭಾಗವನ್ನಾದರೂ ಬೇರೆ ಭೌಗೋಳಿಕ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬುದು ವಿಜ್ಞಾನಿಗಳ ಆಭಿಮತವಾಗಿತ್ತು. ಆದರೆ, ಜುಲೈ 17, 2019 ಗುಜರಾತಿನ ಪತ್ರಿಕೆಗಳು ಮಾಡಿದ ವರದಿಯ ಪ್ರಕಾರ ಎರಡು ವರ್ಷಗಳ ಅವಧಿಯಲ್ಲಿ ಅಲ್ಲಿ 200 ಸಿಂಹಗಳು ಮರಣ ಹೊಂದಿದ್ದವು. ಈ ಮೂಲಕ ವಿಜ್ಞಾನಿಗಳ ಮಾತನ್ನು ಸತ್ಯವೆಂದು ನಿರೂಪಿಸಿದಂತಾಗಿತ್ತು.

ಮೋದಿಯ ಮನಾಪಲಿ ತಂತ್ರ

ಈ ಎಲ್ಲ ಆಗುಹೋಗುಗಳ ಹಿನ್ನೆಲೆಯಲ್ಲಿ, ಸಂರಕ್ಷಣೆಯ ದೃಷ್ಟಿಯಿಂದ ಸಿಂಹಗಳನ್ನು “ಕುನೋ – ಪಾಲ್ಪುರ್” ಅರಣ್ಯಕ್ಕೆ ತರುವ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು. ಆದರೆ 2001ರಿಂದ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸರ್ಕಾರ ಈ ಮನವಿಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಅಲ್ಲಿನ ಅರಣ್ಯ ಇಲಾಖೆ ದಿವ್ಯಮೌನ ವಹಿಸಿತು.  ಈ ಮೌನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉಲ್ಲಾಸ ಕಾರಂತರು “ ಇದು ಸಿಂಹಗಳ ಮೇಲಿನ ತಮ್ಮ ರಾಜ್ಯದ ಮನಾಪಲಿಯನ್ನು ಕಾದಿಟ್ಟುಕೊಳ್ಳುವ ರಾಜಕಾರಣಿಗಳ ತಂತ್ರವಾಗಿತ್ತು” ಎಂದು ಆಪಾದಿಸಿದ್ದಾರೆ.

ಇಲ್ಲಿಗೆ ಭಾರತದ ಸಿಂಹಗಳನ್ನು ಭಾರತದ್ದೇ ಆದ ನೆರೆಯ ರಾಜ್ಯದ ಕುನೋ – ಪಾಲ್ಪುರ್ ಅರಣ್ಯದಲ್ಲಿ ಪೋಷಿಸುವ ಕನಸಿಗೆ ತೆರೆಬಿದ್ದಂತಾಯಿತು. ಈ ನಡುವೆ ತೀರಾ ದುಃಸ್ಥಿತಿಯಲ್ಲಿ ಬದುಕಿದ್ದ ಇರಾನಿನ ಚಿರತೆಗಳ ಸಂಖ್ಯೆ 30ಕ್ಕೆ ಇಳಿದು, ಅವಸಾನದ ಅಂಚನ್ನು ತಲುಪಿದ್ದವು. ಕಾರಣ: ಅವುಗಳ ಉಸ್ತುವಾರಿ ವಹಿಸಿದ್ದ ಆರು ಮಂದಿ ಜೀವ ವಿಜ್ಞಾನಿಗಳನ್ನು ಗೂಢಚಾರಿಕೆಯ ಆಪಾದನೆಯಲ್ಲಿ ಇರಾನ್ ಸರ್ಕಾರ ಜೈಲಿಗೆ ಹಾಕಿತ್ತು.

ಅಂತಿಮವಾಗಿ ಕುನೋ – ಪಾಲ್ಪುರ್ ಅರಣ್ಯದಲ್ಲಿ ಇರಾನ್ ಚಿರತೆಗಳನ್ನು ಸಾಕುವ ಯೋಜನೆಗೂ ಕಲ್ಲು ಬಿದ್ದಿತ್ತು. ಆಗ ಇಲ್ಲಿ ಚೀತಾಗಳನ್ನು ಸಾಕುವ ಕನಸು ಕಂಡಿದ್ದು “ವೈಲ್ಡ್ ಲೈಫ್ ಇಸ್ಟಿಟ್ಯೂಟ್ ಆಫ್ ಇಂಡಿಯಾ” ಸಂಸ್ಥೆಯ ಡೀನ್ ಆಗಿರುವ ಯೋಗೇಂದ್ರದೇವ್ ಝಾಲ ಎಂಬುವವರು. ಮತ್ತೆ “ನ್ಯಾಷನಲ್ ಟೈಗರ್ ಕನ್ಸರ್ವೇಶನ್ ಅಥಾರಿಟಿ” ಮತ್ತೆ ಸರ್ವೋಚ್ಛ ನ್ಯಾಯಾಲಯದ ಬಾಗಿಲು ತಟ್ಟಿ 28 ದಶಲಕ್ಷ ಡಾಲರ್ ಮೊತ್ತದ ವೆಚ್ಚದಲ್ಲಿ ಆಫ್ರಿಕಾದ ಚಿರತೆಗಳನ್ನು ತರಲು ಅನುಮತಿ ಕೇಳಿತು. ಇದಕ್ಕೆ ನ್ಯಾಯಾಲಯ ಮೌನ ಸಮ್ಮತಿ ಸೂಚಿಸಿತು.

ನಿಜಕ್ಕೂ ಆಗಿದ್ದೇನೆ?

ಕೊಡುವ ಮತ್ತು ಕೊಳ್ಳುವ ಎರಡೂ ರಾಜ್ಯಗಳಲ್ಲಿ ತಮ್ಮದೇ ಸರ್ಕಾರವಿದ್ದು, ಅವುಗಳ ನಿರ್ಧಾರಕ್ಕೆ ಸಮ್ಮತಿಯ ಮುದ್ರೆ ಒತ್ತುವ ಕೇಂದ್ರದಲ್ಲೂ ತಮ್ಮದೇ ಸರ್ಕಾರವಿದ್ದು, ಮೌನ ಸಮ್ಮತಿ ಸೂಚಿಸುವ “ನ್ಯಾಯ” ಸಹ ಮೌನ ವಹಿಸುವಂತಾದರೆ ಏನೆಲ್ಲಾ ಆಗಬಹುದೋ ಅದೆಲ್ಲವೂ ಇಲ್ಲಿ ನಡೆದವು. ಆದರೆ ಇದೆಲ್ಲವೂ ಆಗಿದ್ದಾದರೂ ಹೇಗೆ? ಕಾರಣವೇನು?

ಇಕ್ಕಟ್ಟಿನ ಪ್ರದೇಶವೊಂದರಲ್ಲಿ 400ಕ್ಕೂ ಸಿಂಹಗಳನ್ನು ಗುಜರಾತಿನ ಘಿರ್ ಅರಣ್ಯ ಹೊಂದಿದೆ. ಆಕಸ್ಮಿಕ ಯಾವುದಾರೊಂದು ಸಾಂಕ್ರಾಮಿಕ ರೋಗ ಆ ಪ್ರದೇಶವನ್ನು ಆವರಿಸಿದಲ್ಲಿ, ಅಲ್ಲಿನ ಸಿಂಹಗಳನ್ನು ದೇವರಿಂದಲೂ ರಕ್ಷಿಸಲಾಗದು. ಆದ್ದರಿಂದ ಅವುಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಪಾಲಿಸುವುದು ಯೋಗ್ಯ ಎಂದು ಇಡೀ ದೇಶದ ತಜ್ಞರು ಹೇಳುತ್ತಿದ್ದರೂ ಸಿಂಹಗಳನ್ನು ಬೇರೆ ರಾಜ್ಯಗಳಿಗೆ ಕೊಡದೆ ಗುಜರಾತ್ ಆಟ ಆಡುತ್ತಲೇ ಇತ್ತು.

ಆದರೆ ಅವುಗಳ ರಕ್ಷಣೆಗೆ ಕಟಿಬದ್ಧವಾಗಿದ್ದ ಅಂದಿನ ಮಧ್ಯಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕುನೋ ಅರಣ್ಯ ಪ್ರದೇಶದಲ್ಲಿದ್ದ 24 ಹಳ್ಳಿಗಳನ್ನು ಸ್ಥಳಾಂತರಿಸಿದವು. 2004ರಲ್ಲಿ ಕೇಂದ್ರ ಮತ್ತೊಮ್ಮೆ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿತು. ಆದರೆ ಗುಜರಾತ್ 2013ವರೆಗೂ ಕೊಡಲಿಲ್ಲ. ಆಗ ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಗುಜರಾತ್ ಸರ್ಕಾರದ ನಡೆಯನ್ನು ಪ್ರಶ್ನಿಸಿ ದಾವೆ ಹೂಡಿತು. ಕೂಡಲೇ ನ್ಯಾಯಾಲಯ “ಆರು ತಿಂಗಳುಗಳ ಒಳಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಸಿಂಹಗಳನ್ನು ಕುನೋ ಸಂರಕ್ಷಿತಾರಣ್ಯಕ್ಕೆ ನೀಡಬೇಕು” ಎಂದು ಆದೇಶಿಸಿತು. 

ಆದರೆ, ಐದು ತಿಂಗಳು ಇಲ್ಲದ ನಾಟಕವಾಡುತ್ತಾ ಕಳೆದ ಗುಜರಾತ್ ಅಕ್ಟೋಬರ್ 2013ರಲ್ಲಿ ಅದೇ ಸರ್ವೋಚ್ಛ ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತು. ನ್ಯಾಯಾಲಯ ತಿರಸ್ಕರಿಸಿತು. ಮತ್ತೆ ಆಗಸ್ಟ್ 2014ರಲ್ಲಿ ಅರ್ಜಿಸಲ್ಲಿಸಿತು, ನ್ಯಾಯಾಲಯ ತಿರಸ್ಕರಿಸಿತು. ಸಿಂಹಗಳ ದುರಾದೃಷ್ಟವೆಂದರೆ ಮೇ 2014ರಲ್ಲಿಯೇ ಅದೇ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮತ್ತು ಇಷ್ಟೆಲ್ಲಾ ನಾಟಕಗಳ ಸೂತ್ರಧಾರರಾಗಿದ್ದ ಮೋದಿಯವರೇ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದರು. ಅಲ್ಲಿಗೆ ಸಿಂಹಗಳನ್ನು ಅವುಗಳ ಹಿತದೃಷ್ಟಿಯಿಂದ ಸ್ಥಳಾಂತರಿಸಬೇಕು ಎಂದಿದ್ದ ಎಲ್ಲ ಪ್ರಜ್ಞಾವಂತರ ಆಶಯಗಳಿಗೂ ಬೆಂಕಿ ಬಿದ್ದಾಗಿತ್ತು. 

ತನ್ನ ಹಠವನ್ನು ಸಾಧಿಸುವ ಛಲದಲ್ಲಿ ಮೋದಿಯವರ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಮೊದಲಿಗೆ ಸಿಂಹಗಳ ಪುನರ್ವಸತಿಗೆ 10 ವರ್ಷಗಳ ಯೋಜನೆ ರೂಪಿಸಿತು. ನಂತರ 2020ರ ವಿಶ್ವ ಸಿಂಹ ದಿನದಂದು ಅದನ್ನು 2000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 25 ವರ್ಷಗಳಿಗೆ ವಿಸ್ತರಿಸಿತು. ಅಂತಿಮವಾಗಿ ಸಿಂಹಗಳಿಗೆ ಗುಜರಾತಿನ ಒಳಗೇ ಬೇರೆ ವಸತಿಗಳನ್ನು ಕಲ್ಪಿಸುತ್ತೇವೆ ಎಂದು ಹೇಳಿತು.

ಆದರೆ, ಆಗಲೂ ಮತ್ತು ಈಗಲೂ ಸರ್ವೋಚ್ಛ ನ್ಯಾಯಾಲಯದ ತೀರ್ಪು ಮಾತ್ರ ಹಾಗೆಯೇ ಇದೆ. ವಿವಿಧ ಕಾರಣಗಳನ್ನು ನೀಡುತ್ತಾ ಕೇಂದ್ರ ಸರ್ಕಾರವೇ ಮುಂದೆ ನಿಂತು ಅದು ಕುತ್ತಿಗೆಗೆ ಬಾರದಂತೆ ಒಳಗೊಳಗೇ ಮುಂದೆ ತಳ್ಳುತ್ತಿದೆ. ಆದರೆ ಒಂದಿಲ್ಲೊಂದು ಕ್ಷಣ ಅದು ಇಂದಲ್ಲ ನಾಳೆ ಕುತ್ತಿಗೆಗೆ ಜೋತು ಬೀಳುವುದು ಗ್ಯಾರಂಟಿ. ಹಾಗಾಗಿ, ಬಡ ಅಕ್ಕನ ಮಗನಿಗೆ ಶ್ರೀಮಂತ ತಮ್ಮನ ಮಗಳನ್ನು ಕೊಡಲೊಪ್ಪದ ತಮ್ಮನ ಪಕ್ಷಪಾತಿ ಗುಂಪು ಅಕ್ಕನ ಮಗಳಿಗೆ ಯಾವನೋ ಒಬ್ಬ ತಿರುಬೋಕಿಯನ್ನು ತಂದು, ತಾವೇ ನಿಂತು ಮದುವೆ ಮಾಡಿಸಿದರು. ಅದನ್ನು ಅಹಂಕಾರಿ ತಮ್ಮನ ಹುಟ್ಟು ಹಬ್ಬದಂದೇ ಮಾಡಿದರು. ಚಪ್ಪಾಳೆ ಗಿಟ್ಟಿಸಿಕೊಂಡರು. ಎಂಥ ಅದ್ಭುತ!! ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳು, ಢಂ… ಢಂ… ಢಮಾರ್….!!

ಇದು ನಿಜವಾದ ಕತೆ! ಆದರೂ ಪರವಾಗಿಲ್ಲ ಯಾರ್ಯಾರಿಗೆ ಏನೇನು ಹಿತವಾಗುತ್ತದೋ, ಯಾವ ಯಾವ ಭ್ರಮೆಗಳು, ಗುಪ್ತ ಜಾತಿ/ಧರ್ಮ/ಪಕ್ಷ ಪ್ರೇಮಗಳು ಅವರವರ ಬತ್ತಳಿಕೆಯಲ್ಲಿವೆಯೋ ಅವನ್ನು ಚಲಾಯಿಸುತ್ತಾ ಹೋಗಲಿ. ಅದನ್ನೂ ಜನರೂ ಅನಂದಿಸಲಿ. ನಮ್ಮಗಳ ವಿಜ್ಞಾನ ಪ್ರಜ್ಞೆಗೆ ಜನ ಮಾರು ಹೋಗಲಿ. ಅಂತಿಮವಾಗಿ, ಸಿಂಹಗಳು ನಾಶವಾದರೂ ಸರಿ, ಪರಕೀಯ ಚೀತಾಗಳು ಪಿಡುಗಾಗಿ ಕಾಡಲಿ, ಅದರೆ ನಮ್ಮ ಮೋದಿ ಗೆಲ್ಲಲಿ!

ನಿಮಗೆ ಏನು ಅನ್ನಿಸ್ತು?
1 ವೋಟ್