
ಟಿ20 ವಿಶ್ವಕಪ್ನಲ್ಲಿ ಭಾರೀ ಮಹತ್ವ ಪಡೆದಿದ್ದ ಭಾರತ-ಪಾಕಿಸ್ತಾನ ನಡುವಣ ಪಂದ್ಯ ಮುಗಿದಿದೆ. ಆದರೆ, ಪಂದ್ಯದ ಕುರಿತ ಮಾತುಕತೆ ಇನ್ನಷ್ಟು ಕಾಲ ಚಾಲ್ತಿಯಲ್ಲಿ ಇರಲಿದೆ. ಈ ದೇಶಗಳ ನಡುವೆ ಕ್ರಿಕೆಟ್ ನಡೆದಾಗೆಲ್ಲ ಇಂತಹ ಮೆಲುಕು ಇರುತ್ತದೆ, ನಿಜ. ಆದರೆ, ಈ ಬಾರಿ ಚರ್ಚೆಯನ್ನು ತನ್ನತ್ತ ಸೆಳೆದದ್ದು ಪಂದ್ಯದ ಕೊನೆಯ ಓವರ್ನಲ್ಲಿ ಕಂಡುಬಂದ ನೋ ಬಾಲ್
ಕ್ರೀಡಾಪ್ರೇಮಿಗಳ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಭಾನುವಾರ ಮೆಲ್ಬೋರ್ನ್ನಲ್ಲಿ ಮುಕ್ತಾಯ ಕಂಡಿದೆ. ಎದುರಾಳಿ ತಂಡವನ್ನು ಟೀಮ್ ಇಂಡಿಯಾ ನಾಲ್ಕು ವಿಕೆಟ್ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದ್ದೂ ಆಗಿದೆ. 82 ರನ್ ಗಳಿಸಿ ಅಜೇಯರಾಗುಳಿದ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿ ಮಿಂಚಿ ಹೀರೋ ಎನಿಸಿಕೊಂಡರು. ಆದರೆ, ಪಂದ್ಯ ಮುಗಿದ ನಂತರದ ಚರ್ಚೆಗಳಲ್ಲಿ ಹೀರೋ ಎನಿಸಿಕೊಂಡಿದ್ದು ಮಾತ್ರ ಅದೇ ವಿರಾಟ್ ಕೊಹ್ಲಿ ಎದುರಿಸಿದ ನೋ ಬಾಲ್!
ಹೌದು... ಭಾನುವಾರದ ಪಂದ್ಯದ ಅಂತಿಮ ಓವರ್ನ ʻನೋ ಬಾಲ್ʼ ಕುರಿತ ಚರ್ಚೆಗಳು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಯೇರಿದ ವಾಗ್ವಾದಕ್ಕೆ ವೇದಿಕೆ ಒದಗಿಸಿವೆ. ಸ್ಪಿನ್ನರ್ ಮುಹಮ್ಮದ್ ನವಾಝ್ ಎಸೆದ ಹೈ ಫುಲ್ಟಾಸ್ ಎಸೆತವನ್ನು ಕೊಹ್ಲಿ ಸಿಕ್ಸರ್ಗೆ ಅಟ್ಟಿದ್ದರು. ಕೊಹ್ಲಿಯ ಸೊಂಟದ ಮೇಲ್ಬಾಗದಲ್ಲಿ ಚೆಂಡು ಇದ್ದಿದ್ದರಿಂದ ಅಂಪೈರ್ ಇದನ್ನು ನೋ ಬಾಲ್ ಎಂದು ಘೋಷಿಸಲಾಯಿತು. ಅಸಲಿಗೆ, ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟ ಕ್ಷಣವಿದು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದ ಫಲಿತಾಂಶ ನಿರ್ಧಾರವಾಗಿದ್ದು ಬಹುತೇಕ ಇದೇ ಎಸೆತದಲ್ಲಿ. ಹೀಗಾಗಿಯೇ ಅಂಪೈರ್ ಬಳಿ ತೆರಳಿದ ಪಾಕ್ ನಾಯಕ ಬಾಬರ್ ಅಝಮ್, ನೋ ಬಾಲ್ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
Why was no ball not reviewed, then how can it not be a dead ball when Kohli was bowled on a free hit. #INDvPAK #T20worldcup22 pic.twitter.com/ZCti75oEbd
— Brad Hogg (@Brad_Hogg) October 23, 2022
ಪಂದ್ಯ ಮುಗಿದ ಬಳಿಕವೂ ನೋ ಬಾಲ್ ಚರ್ಚೆ ಅಂಗಳದಿಂದ ಸಾಮಾಜಿಕ ಜಾಲತಾಣಗಳಿಗೆ ವರ್ಗಾವಣೆಯಾಯಿತು. ಟ್ವಿಟರ್ನಲ್ಲಿ ʻನೋ ಬಾಲ್ʼ ಟ್ರೆಂಡಿಂಗ್ ಕೂಡ ಆಯಿತು. ಮಾಜಿ ಕ್ರಿಕೆಟಿಗರಾದ ಬ್ರಾಡ್ ಹಾಡ್ಜ್, ನಾಸಿರ್ ಹುಸೈನ್, "ಅಂಪೈರ್ ತೀರ್ಮಾನ ತಪ್ಪು ಮತ್ತು ಭಾರತಕ್ಕೆ ಸಹಾಯ ಮಾಡಿದೆ," ಎಂಬರ್ಥದಲ್ಲಿ ಟ್ವೀಟ್ ಮಾಡಿದರು. ಕ್ರಿಕೆಟ್ ಪ್ರೇಮಿಗಳು ನೋ ಬಾಲ್ ಪರ-ವಿರೋಧ ಚರ್ಚೆಗೆ ಇದು ನಾಂದಿ ಹಾಡಿತು.
ನಿಯಮ ಹೇಳೋದೇನು?

ಭಾರತ-ಪಾಕ್ ಪಂದ್ಯದ ಬಳಿಕ ತೀವ್ರ ಚರ್ಚೆಯಲ್ಲಿರುವ ನೋ ಬಾಲ್ ಕುರಿತ ನಿಯಮಗಳ ಬಗ್ಗೆ ಕನ್ನಡಿಗ, ಮಾಜಿ ಅಂಪೈರ್ ಮುರಳೀಧರ್, ಮಾಜಿ ಕ್ರಿಕೆಟಿಗ ಸೋಮಶೇಖರ್ ಶಿರಗುಪ್ಪಿ ಸೇರಿದಂತೆ ಕೆಲವು ಕ್ರಿಕೆಟ್ ತಜ್ಞರು ಈ ದಿನ.ಕಾಮ್ ಜೊತೆ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಒಟ್ಟುಸೇರಿಸಿ ಹೇಳುವುದಾದರೆ...
"ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ನ ಸೊಂಟದ ಮೇಲ್ಬಾಗದಲ್ಲಿ ಚೆಂಡು ಎಸೆದರೆ ಸಹಜವಾಗಿ ಅದನ್ನು ನೋ ಬಾಲ್ ಎಂದು ಘೋಷಿಸಲಾಗುತ್ತದೆ. ನೋ ಬಾಲ್ನ ಹಲವು ಪ್ರಕಾರಗಳಲ್ಲಿ ಇದೂ ಒಂದು. ಆದರೆ, ಈ ವೇಳೆ ಬ್ಯಾಟ್ಸ್ಮನ್ನ ಕನಿಷ್ಠ ಒಂದು ಕಾಲಾದರೂ ಕ್ರೀಸ್ನಲ್ಲಿ ಇರಬೇಕಾಗುತ್ತದೆ. ಎರಡೂ ಕಾಲುಗಳು ಕ್ರೀಸ್ನಿಂದ ಹೊರಗಿದ್ದರೆ, ಚೆಂಡು ಸೊಂಟದ ಮೇಲಿದ್ದರೂ ನೋ ಬಾಲ್ ಕರೆ ನೀಡದೆ ಇರಲು ಅಂಪೈರ್ಗೆ ಅವಕಾಶವಿದೆ..."
"...ನೋ ಬಾಲ್ ನಂತರದ ಎಸೆತ ಫ್ರೀ ಹಿಟ್ ಆಗಿರುತ್ತದೆ. ಫ್ರೀ ಹಿಟ್ ವೇಳೆ ರನೌಟ್ ಹೊರತುಪಡಿಸಿ ಬೌಲ್ಡ್, ಕ್ಯಾಚ್, ಸ್ಟಂಪ್ ಸೇರಿದಂತೆ ಇನ್ಯಾವುದೇ ರೀತಿಯಲ್ಲೂ ಔಟ್ ಆದರೂ ಬ್ಯಾಟಿಂಗ್ ಮುಂದುವರಿಸಬಹುದು. ಫ್ರೀ ಹಿಟ್ ಚಾಲ್ತಿಯಲ್ಲಿರುವಾಗ ವೈಡ್ ಎಸೆದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇನ್ನು, ಫ್ರೀ ಹಿಟ್ ಅವಕಾಶ ಇರುವ ಎಸೆತದಲ್ಲಿ ಬ್ಯಾಟ್ಸ್ಮನ್ ಬೌಲ್ಡ್ ಆಗಿ ಚೆಂಡು ನೇರವಾಗಿ ಬೌಂಡರಿ ಗೆರೆ ದಾಟಿದರೆ ಬ್ಯಾಟಿಂಗ್ ತಂಡಕ್ಕೆ 4 ರನ್ಗಳು ದೊರೆಯುತ್ತದೆ..."

"...ಮತ್ತೊಂದೆಡೆ, ಚೆಂಡಿನ ಚಲನೆ ಇರುವವರೆಗೂ ನೋ ಬಾಲ್ ಬಳಿಕದ ಫ್ರೀ ಹಿಟ್ ಎಸೆತವನ್ನು ಡೆಡ್ಬಾಲ್ ಎಂದು ಘೋಷಿಸಲಾಗುವುದಿಲ್ಲ. ಹೀಗಾಗಿ, ಬ್ಯಾಟ್ಸ್ಮನ್ಗಳಿಗೆ ವಿಕೆಟ್ಗಳ ನಡುವಿನ ಓಟದ ಮೂಲಕ ರನ್ ಗಳಿಸಲು ಅವಕಾಶವಿರುತ್ತದೆ...."
"...ಸೊಂಟದ ಮೇಲ್ಭಾಗದಲ್ಲಿ ಚೆಂಡು ಎಸೆದರೆ ಬಾಲ್ ಡೆಡ್ ಆದ ಬಳಿಕ ಸಹ ಅ೦ಪೈರ್ಗೆ ನೋ ಬಾಲ್ ಕರೆಯ ಕಾರಣವನ್ನು ತಿಳಿಸಬೇಕು. ಇದು ಬ್ಯಾಟ್ಸ್ಮನ್ಗಳಿಗೆ ಅಪಾಯಕಾರಿ, ಗಾಯಾಳುವಾಗುವ ಸಂಭವ ಇದೆ ಎಂದು ಅಂಪೈರ್ಗೆ ಅನಿಸಿದರೆ, ಕ್ಷೇತ್ರ ರಕ್ಷಣೆಯ ತಂಡದ ನಾಯಕನಿಗೆ ಸೂಚನೆ ನೀಡಿ ಆ ಬೌಲರ್ ಅನ್ನು ಬೌಲಿಂಗ್ ಜವಾಬ್ದಾರಿಯಿಂದ ದೂರ ಇಡಲಾಗುತ್ತದೆ. ಇದಕ್ಕೂ ಮೊದಲು ಬೌಲರ್ಗೆ ಎಚ್ಚರಿಕೆ ನೀಡಲಾಗುತ್ತದೆ. ಓವರ್ ಮಧ್ಯಭಾಗದಲ್ಲಾದರೆ ಮುಂದಿನ ಎಸೆತಗಳನ್ನು ಬೇರೆ ಬೌಲರ್ ಎಸೆಯಬೇಕಾಗುತ್ತದೆ."
ಈ ಎಲ್ಲ ಮಾತುಗಳ ಸಾರಾಂಶ ಇಷ್ಟೇ - ಯಾವುದೇ ಕ್ರಿಕೆಟ್ ಪಂದ್ಯದಲ್ಲಿ ಯಾವುದೇ ಎಸೆತವನ್ನೂ 'ನೋ ಬಾಲ್' ಎಂದು ತೀರ್ಮಾನಿಸುವುದು ಬಹಳ ಕಷ್ಟದ ಕೆಲಸ.

ಒಂದು ಪಂದ್ಯದ ಕೇವಲ ಒಂದೇ ಒಂದು ನೋ ಬಾಲ್ನ ಕತೆ ಇದು. ಅಸಲಿಗೆ, ಬಹುತೇಕ ಸಂದರ್ಭಗಳಲ್ಲಿ ಆಟಗಾರರು ಮತ್ತು ಅಂಪೈರ್ಗಳಿಗೆ ತಲೆನೋವು ತಂದಿಡುವ ಹತ್ತಕ್ಕೂ ಹೆಚ್ಚು ಬಗೆಯ ನೋ ಬಾಲ್ ಉಂಟು.
ಫ್ರಂಟ್ ಫೂಟ್ ನೋ ಬಾಲ್: ಬೌಲರ್ ಚೆಂಡನ್ನು ಕೈಯಿಂದ ಬಿಡುಗಡೆಗೊಳಿಸುವ ವೇಳೆ ಬೌಲರ್ನ ಪಾದವು ಸಂಪೂರ್ಣವಾಗಿ ಕ್ರೀಸ್ನ ಹೊರಗಿರುವ ಸಂದರ್ಭ.
ಬ್ಯಾಕ್ ಫೂಟ್ ನೋ ಬಾಲ್: ಬೌಲರ್ ತನ್ನ ಬೌಲಿ೦ಗ್ ಶೈಲಿಗೆ ತಕ್ಕಂತೆ ಹಿ೦ದಿನ ಹೆಜ್ಜೆಯ ಪಾದವನ್ನು ಎರಡೂ ಬದಿಗಳ ರಿಟರ್ನ್ ರೇಖೆಯ ಒಳಗಡೆ ಮತ್ತು ಅದಕ್ಕೆ ಪಾದ ತಗುಲದ ರೀತಿಯಲ್ಲಿ ಊರಿದ ಸಂದರ್ಭ.

ಒಂದಕ್ಕಿಂತ ಹೆಚ್ಚು ಬಾರಿ ಚೆಂಡು ಪುಟಿಯುವುದು: ಸ್ಟ್ರೈಕ್ ಬ್ಯಾಟ್ಸ್ಮನ್ ಇರುವ ತುದಿಗೆ ಬೌಲರ್ ಎಸೆದ ಚೆಂಡು ಒಂದಕ್ಕಿಂತ ಹೆಚ್ಚು ಬಾರಿ ಪುಟಿದುಬಂದರೆ ಅಥವಾ ಬ್ಯಾಟರ್ ಅನ್ನು ತಲುಪುವ ಮೊದಲು ಪಿಚ್ ಮೂಲಕ ಚೆಂಡು ಉರುಳಿದರೆ, ಎಂಸಿಸಿ ನಿಯಮ 21.7ರ ಪ್ರಕಾರ ನೋ ಬಾಲ್ ಎಂದು ಘೋಷಿಸಲಾಗುತ್ತದೆ.
ಪಿಚ್ನ ಹೊರಭಾಗಕ್ಕೆ ಚೆಂಡೆಸೆಯುವುದು: ಸ್ಟ್ರೈಕರ್ ಅನ್ನು ತಲುಪುವ ಮೊದಲು ಪಿಚ್ನ ಹೊರಭಾಗಕ್ಕೆ ಬೌಲಿಂಗ್ ಮಾಡಿದರೆ (ವೈಡ್ ಲೈನ್ ಗೆರೆಗಳ ಹೊರಭಾಗಕ್ಕೆ), ಆ ಎಸೆತವನ್ನು ನೋ ಬಾಲ್ ಎಂದು ಘೋಷಿಸಬಹುದು. ಈ ವಿಷಯದಲ್ಲಿ ಅಂಪೈರ್ ವಿವೇಚನೆ ನಿರ್ಣಾಯಕ.
ಈ ಲೇಖನ ಓದಿದ್ದೀರಾ?: ಶತಾವರಿ | ಕತ್ತಲೊಳಗೆ ಆಜಾನುಬಾಹುವೊಬ್ಬ ನನ್ನೆರಡೂ ಕೈ ಕಟ್ಟಿ, ಎತ್ತಿ ಹೆಗಲ ಮೇಲೆ ಹಾಕಿಕೊಂಡು ನಡೆಯತೊಡಗಿದ!
ನಾನ್ ಸ್ಟ್ರೈಕರ್ನಲ್ಲಿನ ವಿಕೆಟ್ ಬಿದ್ದರೆ: ರನೌಟ್ ಮಾಡುವ ಉದ್ದೇಶದ ಹೊರತಾಗಿ ಬೌಲರ್, ನಾನ್ ಸ್ಟ್ರೈಕರ್ ತುದಿಯ ವಿಕೆಟ್ ಬೀಳಿಸಿದರೆ ಅಥವಾ ಯಾವುದೇ ಬಟ್ಟೆ ಅಥವಾ ಬೌಲರ್ ಮೇಲಿನ ದೇಹದ ಯಾವುದೇ ವಸ್ತು ವಿಕೆಟ್ಗೆ ತಾಗಿದರೂ ನೋ ಬಾಲ್ ಘೋಷಿಸಲಾಗುತ್ತದೆ. 2013ರವರೆಗೂ ಈ ರೀತಿಯ ಎಸೆತವನ್ನು 'ಡೆಡ್ ಬಾಲ್' ಎಂದು ಘೋಷಿಸಲಾಗುತ್ತಿತ್ತು. 2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಹೆಡಿಂಗ್ಲೆ ಟೆಸ್ಟ್ನಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಸ್ಟೀವನ್ ಫಿನ್ ಪದೇಪದೆ ವಿಕೆಟ್ ಬೀಳಿಸಿದ ಕಾರಣ ಎಂಸಿಸಿ ನಿಯಮದಲ್ಲಿ ಬದಲಾವಣೆ ತರಲಾಯಿತು.

ಥ್ರೋ ಬಾಲ್ (ಚಕಿಂಗ್): ಬೌಲರ್ಗೆ ಅನುಮತಿಸಲಾಗಿರುವ ಮಿತಿಯನ್ನು ಮೀರಿ ಬೌಲಿಂಗ್ ವೇಳೆ ತೋಳನ್ನು ನೇರಗೊಳಿಸಿದರೆ ಥ್ರೋ ಅಥವಾ ಚಕಿಂಗ್ ಎಂದು ಪರಿಗಣಿಸಲಾಗುತ್ತದೆ. ನಿಯಮಗಳ ಪ್ರಕಾರ, ಬೌಲರ್ಗಳಿಗೆ ಕನಿಷ್ಠ ಮೊಣಕೈ/ಕೈಯನ್ನು ಬಾಗಿಸಲು 15 ಡಿಗ್ರಿವರೆಗೆ ವಿಸ್ತರಿಸಲು ಅವಕಾಶವಿದೆ. ಇದನ್ನು ಅನುಸರಿಸಲು ವಿಫಲವಾದರೆ ನೋ ಬಾಲ್ ಘೋಷಿಸಲಾಗುತ್ತದೆ.
ಅಂಡರ್ ಆರ್ಮ್ ಎಸೆತ: ಅಂಡರ್ ಆರ್ಮ್ ಅಥವಾ ನೆಲದ ಮೇಲೆ ಚೆಂಡನ್ನು ಉರುಳಿಸಲು ಕ್ರಿಕೆಟ್ ನಿಯಮಗಳಲ್ಲಿ ಅವಕಾಶವಿಲ್ಲ. ಕುಖ್ಯಾತ 1981ರ ವಿಶ್ವ ಸರಣಿಯ ಪಂದ್ಯದ ನಂತರ ಅಂಡರ್ ಆರ್ಮ್ ಬೌಲಿಂಗ್ ಅನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿಗೆ ಅಂತಿಮ ಎಸೆತದಲ್ಲಿ ಆರು ರನ್ ಅಗತ್ಯವಿತ್ತು ಈ ವೇಳೆ ಆಸೀಸ್ನ ಟ್ರೆವರ್ ಚಾಪೆಲ್ ಅಂಡರ್ ಆರ್ಮ್ ಬೌಲಿಂಗ್ ಮಾಡಿ ತಂಡವನ್ನು ಗೆಲ್ಲಿಸಿದ್ದರು!

ಬೌಲಿಂಗ್ ಮಾಡುವ ಮೊದಲು ಸ್ಟ್ರೈಕರ್ ಕಡೆಗೆ ಚೆಂಡನ್ನು ಎಸೆಯುವುದು: ಬೌಲಿಂಗ್ ಮಾಡಲು ಸಜ್ಜಾಗಿ ತಕ್ಷಣವೇ ನಿರ್ಧಾರ ಬದಲಿಸಿ ಸ್ಟ್ರೈಕರ್ ಕಡೆಗೆ ಚೆಂಡನ್ನು ಎಸೆದರೆ, ಅಂಪೈರ್ ಆ ಎಸೆತವನ್ನು ನೋ ಬಾಲ್ ಎಂದು ಘೋಷಿಸುತ್ತಾರೆ.
ಬೌಲಿಂಗ್ ವಿಧಾನವನ್ನು ಅಂಪೈರ್ಗೆ ತಿಳಿಸದಿದ್ದರೂ ನೋಬಾಲ್: ಎಂಸಿಸಿ ಕಾನೂನು 21.1.1ರ ಪ್ರಕಾರ, ಬೌಲರ್ ಬೌಲಿಂಗ್ ಮಾಡುವ ಮೊದಲು ಬಲಗೈ ಅಥವಾ ಎಡಗೈ, ಪೇಸ್ ಅಥವಾ ಸ್ಪಿನ್ ಮತ್ತು ಓವರ್ ಅಥವಾ ವಿಕೆಟ್ ಸುತ್ತಿ ಬೌಲ್ ಮಾಡಲು ಉದ್ದೇಶಿಸಿರುವ ಬಗ್ಗೆ ಅಂಪೈರ್ಗೆ ತಿಳಿಸಬೇಕು. ತಪ್ಪಿದ್ದಲ್ಲಿ, ಅಂಪೈರ್ ನೋ ಬಾಲ್ ಎಂದು ಘೋಷಿಸಬಹುದು.
ಚೆಂಡಿಗೆ ಕ್ಷೇತ್ರರಕ್ಷಕ ಅಡ್ಡಿಪಡಿಸಿದರೆ ನೋ ಬಾಲ್: ಸ್ಟ್ರೈಕರ್ ಬ್ಯಾಟ್ಸ್ಮನ್ನತ್ತ ಬೌಲಿಂಗ್ ಮಾಡಿದ ಚೆಂಡು, ಸ್ಟ್ರೈಕರ್, ಅವನ ಬ್ಯಾಟ್ನೊಂದಿಗೆ ಸಂಪರ್ಕ ಸಾಧಿಸುವ ಮೊದಲು, ಯಾವುದೇ ಕ್ಷೇತ್ರರಕ್ಷಕ ಸ್ಪರ್ಶಿಸಿದರೆ, ಅಂಪೈರ್ ಆ ಎಸೆತವನ್ನು ನೋ ಬಾಲ್ ಅಥವಾ ಡೆಡ್ ಬಾಲ್ ಎಂದು ಸೂಚನೆ ನೀಡಬಹುದು.

ಫೀಲ್ಡರ್ಗಳ ಸಂಖ್ಯೆ ಉಲ್ಲಂಘಿಸಿದರೂ ನೋ ಬಾಲ್: ವಿಕೆಟ್ ಕೀಪರ್ ಅನ್ನು ಹೊರತುಪಡಿಸಿ ಸ್ಕ್ವೇರ್ ಲೆಗ್ನ ಹಿಂದಿನ ಸ್ಥಾನದಲ್ಲಿ ಇಬ್ಬರಿಗಿಂತ ಹೆಚ್ಚು ಕ್ಷೇತ್ರರಕ್ಷಕರು ಕಂಡುಬಂದರೆ ನೋ ಬಾಲ್ ಆಗುತ್ತದೆ. ಇದರೊಂದಿಗೆ ಪವರ್ ಪ್ಲೇ ಅವಧಿಯಲ್ಲಿ 30 ಗಜಗಳ ಒಳಗೆ ಮತ್ತು ಹೊರಗಡೆ ಇರಬೇಕಾದ ಕ್ಷೇತ್ರರಕ್ಷಕರ ಸಂಖ್ಯೆಯನ್ನು ಉಲ್ಲಂಘಿಸಿದರೂ ನೋಬಾಲ್ ಆಗುತ್ತದೆ.
ಸ್ಟ್ರೈಕ್ ಬ್ಯಾಟ್ಸ್ಮನ್ನತ್ತ ಚೆಂಡು ತಲುಪದಿದ್ದರೆ: ಬೌಲರ್ ಕೈಯಿಂದ ಬಿಡುಗಡೆಗೊಂಡ ಚೆಂಡು ಪಿಚ್ನ ಮಧ್ಯಭಾಗದಲ್ಲಿ ನಿಂತರೆ ಅಥವಾ ಸ್ಟ್ರೈಕ್ ಬ್ಯಾಟ್ಸ್ಮನ್ನತ್ತ ತಲುಪದೇ ಇದ್ದರೆ ನೋ ಬಾಲ್ ಎಂದು ಘೋಷಿಸಲಾಗುತ್ತದೆ.
ವಿಕೆಟ್ ಕೀಪರ್ ಸ್ಟಂಪ್ ಮುಂಭಾಗದಲ್ಲಿದ್ದರೆ: ಸ್ಟ್ರೈಕರ್ನ ತುದಿಯಲ್ಲಿ ವಿಕೆಟ್ ಕೀಪರ್ ಸದಾ ಸಮಯ ಸ್ಟಂಪ್ಗಳ ಹಿಂದೆ ಇರುತ್ತಾರೆ. ಎಂಸಿಸಿ ನಿಯಮ 27.3.1ರ ಪ್ರಕಾರ, ವಿಕೆಟ್ ಕೀಪರ್ ಸ್ಟಂಪ್ ತಲುಪುವ ಮೊದಲೇ ಅಥವಾ ಸ್ಟ್ರೈಕ್ ಬ್ಯಾಟ್ಸ್ಮನ್ ಅನ್ನು ದಾಟುವ ಮೊದಲೇ ಚೆಂಡನ್ನು ಸಂಗ್ರಹಿಸಿದರೆ ಆ ಎಸೆತವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ನಿಯಮ ಬೌಲಿಂಗ್ ವೇಳೆ ಮಾತ್ರ ಜಾರಿಯಲ್ಲಿರುತ್ತದೆ. ಬ್ಯಾಟ್ಸ್ಮನ್ಗಳನ್ನು ರನೌಟ್ ಮಾಡಲು ಸ್ಟಂಪ್ಗಳ ಮುಂದೆ ಚೆಂಡನ್ನು ಸಂಗ್ರಹಿಸಲು ವಿಕೆಟ್ ಕೀಪರ್ ಸೇರಿದಂತೆ ಕ್ಷೇತ್ರ ರಕ್ಷಕರಿಗೆ ಭರಪೂರ ಅವಕಾಶವಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜಿಸುವ ಪಂದ್ಯಾವಳಿಗಳಿಂದ ಆರಂಭಿಸಿ ನಮ್ಮ ಊರಿನಲ್ಲಿ ನಡೆಯುವ ಕ್ರಿಕೆಟ್ ಕೂಟಗಳವರೆಗೂ ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಸ್ಥಾಪಿಸಿದ ನಿಯಮಗಳೇ ಆಧಾರ. ಎಂಸಿಸಿಯ ಎಲ್ಲ ನಿಯಮಗಳು ಸರಳವಾಗಿಲ್ಲ. ಲಿಖಿತ ರೂಪದ ನಿಯಮಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ವೇಳೆ ಕೆಲ ಸಂದರ್ಭಗಳಲ್ಲಿ ಗೊಂದಲದ ಗೂಡಾಗುತ್ತದೆ. ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಇತ್ತೀಚಿನ ವರ್ಷಗಳಲ್ಲಿ ಅಳವಡಿಸಲಾಗಿರುವ ಡಿಆರ್ಎಸ್ನಲ್ಲೂ (ಮೈದಾನದ ಅಂಪೈರ್ ನೀಡಿದ ತೀರ್ಪನ್ನು ಪುನರ್ ಪರಿಶೀಲಿಸುವ ವ್ಯವಸ್ಥೆ) ಇಂಥದ್ದೇ ಗೊಂದಲ, ಪ್ರಮಾದಗಳು ಪುನರಾವರ್ತಿಸುತ್ತಲೇ ಇವೆ. ಎಷ್ಟೇ ಅನುಭವಿ, ತಜ್ಞ, ಪರಿಣಿತರೆನಿಸಿದರೂ ನೋ ಬಾಲ್ ಕುರಿತ ಕೆಲವು ನಿರ್ದಿಷ್ಟ ನಿಯಮಗಳ ಬಗೆಗೆ ಈಗಲೂ ಅಸ್ಪಷ್ಟತೆ ಇರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣ.
ಇನ್ನು, ನೋ ಬಾಲ್ ಹೌದೋ ಅಲ್ಲವೋ ಎಂಬಲ್ಲಿನ ಗೊಂದಲಗಳಿಂದ ಹುಟ್ಟಿದ ಜಗಳಗಳನ್ನು ಪಟ್ಟಿ ಮಾಡುತ್ತ ಹೋದರೆ, ದೀಪಾವಳಿ ಮುಗಿದು ಸಂಕ್ರಾಂತಿ ಬರಬಹುದು! ನೋ ಬಾಲ್ ವಿವಾದಗಳ ಕುರಿತು ಧೋನಿ ಸೇರಿದಂತೆ 'ಕೂಲ್' ಎನಿಸಿಕೊಂಡ ಕ್ರಿಕೆಟಿಗರು ಹೇಳುವ ಅತ್ಯಂತ ಸುಲಭ ಪರಿಹಾರವೊಂದಿದೆ; ಅದೇನೆಂದರೆ, ಇಂತಹ ವಿವಾದಗಳನ್ನು ಮೈದಾನದೊಳಗೇ ಮುಗಿಸಿಬಿಡುವುದು. ನಿಯಮಗಳೇ ಗೊಂದಲಮಯ ಆಗಿರುವುದರಿಂದ ಆಯಾ ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನ ಮಾಡಿ, ಮೈದಾನದಿಂದ ಆಚೆ ಚರ್ಚೆಗಳು ಹೋಗದಂತೆ ಮಾಡುವುದೇ ಸರಿಯಾದ ಪರಿಹಾರ ಕೂಡ. ಹಾಗಾಗಿ, ಈ 'ನೋ ಬಾಲ್' ಚರ್ಚೆಯನ್ನು ಸದ್ಯಕ್ಕೆ ನಾವೂ ಇಲ್ಲಿಗೇ ಬಿಟ್ಟುಬಿಡುವ. ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯ.