ಅಭಿಜಿತ್ ಸೇನ್ ನೆನಪು | ಜೀವನದುದ್ದಕ್ಕೂ ಜನಪರ ಆರ್ಥಿಕ ನೀತಿ ಪ್ರತಿಪಾದಿಸಿದ ಅಪರೂಪದ ಅರ್ಥಶಾಸ್ತ್ರಜ್ಞ

ನಿಷ್ಠೂರವಾಗಿ ಅಭಿಪ್ರಾಯಗಳನ್ನು ಹೇಳುತ್ತಿದ್ದ ಸೇನ್, ಎಂದೂ ಅಧಿಕಾರಕ್ಕೆ ಹಾತೊರೆದವರಲ್ಲ. ಜನಪರ ನಿಲುವು ಇವರನ್ನು ಹಲವು ಚಳವಳಿ, ಆಂದೋಲನಗಳ ಸನಿಹಕ್ಕೆ ತಂದಿತ್ತು. ಆಹಾರದ ಹಕ್ಕಿಗಾಗಿನ ಚಳವಳಿಯಲ್ಲೂ ಭಾಗವಹಿಸಿದ್ದರು. ಜನರ ಪರವಾಗಿ ಸಮರ್ಥವಾಗಿ ಮಾತನಾಡಬಲ್ಲವರಾಗಿದ್ದ ಪ್ರೊಫೆಸರ್ ಸೇನ್ ಇಂದು ನಮ್ಮೊಂದಿಗಿಲ್ಲದ್ದು ನಿಜಕ್ಕೂ ದೊಡ್ಡ ನಷ್ಟ

"ಕೃಷಿ ಉತ್ಪನ್ನಗಳು, ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವಾಗ ಕೇವಲ ರೈತರು ನೇರವಾಗಿ ಮಾಡುವ ಖರ್ಚನ್ನಷ್ಟೇ ಅಲ್ಲ, ಅವರ ಕುಟುಂಬದ ಶ್ರಮವನ್ನು, ಬರಬಹುದಾಗಿದ್ದ ಬಾಡಿಗೆ, ಬಡ್ಡಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು," ಎಂಬುದು, ಪ್ರಖ್ಯಾತ ಗ್ರಾಮೀಣ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ಅವರ ಅತ್ಯಂತ ತರ್ಕಬದ್ಧ ಪ್ರತಿಪಾದನೆಯಾಗಿತ್ತು. ಇದು ಸ್ವಾಮಿನಾಥನ್ ವರದಿಯ ಶಿಫಾರಸಿನಲ್ಲಿ ಸ್ವಲ್ಪ ಮಾರ್ಪಾಡಿನೊಂದಿಗೆ ಸೇರ್ಪಡೆಯಾಯಿತು 'ಸಿ2 ವಿಧಾನ' ಎಂದು ಕರೆಯುವ ಈ ಕ್ರಮ, ಮುಂದೆ ಕೃಷಿಕರ ಪ್ರಮುಖ ಬೇಡಿಕೆಯಾಯಿತು.

ಸಾರ್ವತ್ರಿಕ ಪಡಿತರ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸಿದರು. ದೇಶಾದ್ಯಂತ ಅವಶ್ಯಕತೆ ಇರುವ ಎಲ್ಲರಿಗೂ ಗೋಧಿ, ಅಕ್ಕಿ ದೊರೆಯುವಂತಾಗಬೇಕು ಎಂದು ಸೇನ್ ಪ್ರಬಲವಾಗಿ ವಾದಿಸಿದ್ದರು. ಅದರಿಂದ ದೇಶದ ಆರ್ಥಿಕತೆಗೆ ತೊಂದರೆಯಾಗುತ್ತದೆ ಎನ್ನುವುದನ್ನು ಸಾಂಖ್ಯಿಕ ಹಾಗೂ ಸೈದ್ಧಾಂತಿಕ ಪುರಾವೆಗಳ ಸಮೇತ ಬಲವಾಗಿ ಅಲ್ಲಗೆಳೆದರು. ಅದು ಉತ್ಪ್ರೇಕ್ಷೆ ಎಂದು ವಾದಿಸಿದರು. ಸಾರ್ವಜನಿಕ ಪಡಿತರ ಪದ್ಧತಿಗೆ ಮತ್ತು ರೈತರಿಗೆ - ಅವರ ಉತ್ಪನ್ನಕ್ಕೆ ಸೂಕ್ತ ಬೆಲೆ ಕೊಡಲು ನಮ್ಮಲ್ಲಿರುವ ಹಣ ಸಾಕು ಎಂದು ವಾದಿಸಿದರು.

ಹೀಗೆ, ಜೀವನದುದ್ದಕ್ಕೂ ಜನಪರ ಆರ್ಥಿಕ ನೀತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಅಭಿಜಿತ್ ಸೇನ್ ಇಂದು ನಮ್ಮೊಂದಿಗಿಲ್ಲ. ಇವರದು ಅಪರೂಪದ ಅರ್ಥಶಾಸ್ತ್ರಜ್ಞರ ಕುಟುಂಬ. ತಂದೆ ಸಮರ್ ಸೇನ್, ಸೋದರ ಪ್ರೊಣಾಬ್ ಸೇನ್, ಮಾವ ಅರುಣ್ ಘೋಷ್, ಪತ್ನಿ ಜಯತಿ ಘೋಷ್ ಎಲ್ಲರೂ ಆರ್ಥಿಕ ಕ್ಷೇತ್ರದಲ್ಲಿ ಪ್ರಸಿದ್ಧರು. ಅವರ ಮಗಳು ಜಾಹ್ನವಿ ಸೇನ್, ಪತ್ರಕರ್ತೆ, ದಿ ವೈರ್ ಪತ್ರಿಕೆಯ ಉಪ ಸಂಪಾದಕಿ.

Image

ಭೌತಶಾಸ್ತ್ರದ ಅಧ್ಯಯನವನ್ನು ಗುರಿಯಾಗಿಟ್ಟುಕೊಂಡು ಓದು ಪ್ರಾರಂಭಿಸಿದ ಸೇನ್ ಅವರ ಆಸಕ್ತಿ ಅರ್ಥಶಾಸ್ತ್ರದ ಕಡೆಗೆ ತಿರುಗಿ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ, 'ಆರ್ಥಿಕ ಬೆಳವಣೆಗೆಗೆ ಕೃಷಿ ಅಡಚಣೆಗಳು' ಎಂಬ ವಿಷಯದ ಬಗ್ಗೆ ಭಾರತೀಯ ಅನುಭವದ ಹಿನ್ನೆಲೆಯಲ್ಲಿ ಸುಜಿ ಪೈನ್ ಮಾರ್ಗದರ್ಶನದಲ್ಲಿ ಪೌಢ ಪ್ರಬಂಧ ಮಂಡಿಸಿದರು. ನಂತರ ಸಸ್ಸೆಕ್ಸ್, ಆಕ್ಸಫರ್ಡ್, ಕೇಂಬ್ರಿಡ್ಜ್ ಮತ್ತು ಎಸ್ಸೆಕ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡಿ, ಅನಂತರ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಅಧ್ಯಯನ ಮತ್ತು ಯೋಜನೆಯ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಅಲ್ಲಿ ಕೃಷ್ಣ ಭರದ್ವಾಜ್, ಪ್ರಭಾತ್ ಪಟ್ನಾಯಕ್, ಸಿ ಪಿ ಚಂದ್ರಶೇಖರ್, ಅಮಿತ್ ಬಾಧುರಿ ಹಾಗೂ ಪತ್ನಿ ಜಯತಿ ಘೋಷ್ ಜೊತೆ ಸೇರಿಕೊಂಡು ಅಭಿವೃದ್ಧಿ ಅರ್ಥಶಾಸ್ತ್ರ ಮತ್ತು ಭಾರತದ ಆರ್ಥಿಕತೆಯ ವಿಭಾಗವನ್ನು ಉನ್ನತ ಮಟ್ಟದ ಕೇಂದ್ರವಾಗಿ ಬೆಳೆಸುವಲ್ಲಿ ಶ್ರಮಿಸಿದರು.
ನಾಲ್ಕು ದಶಕಗಳ ಕಾಲ ಅರ್ಥಶಾಸ್ತ್ರದ ಹಲವು ವಿಷಯಗಳನ್ನು ಬೋಧಿಸಿ, ಸಂಶೋಧನೆ ನಡೆಸಿ, ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ಸಂಶೋಧನಾ ವಿದ್ಯಾರ್ಥಿಗಳು ನಡೆಸಿರುವ ಅಧ್ಯಯನ ಭಾರತೀಯ ಅರ್ಥಶಾಸ್ತ್ರವನ್ನು ಕುರಿತಂತೆ ನಮ್ಮ ಅರಿವನ್ನು ಹೆಚ್ಚಿಸಿದೆ.

ಜೊತೆಗೆ, ಸರ್ಕಾರ ಮತ್ತು ಇತರ ರಾಷ್ಟ್ರೀಯ-ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅಭಿಜಿತ್ ಭಾರತದ ಯೋಜನಾ ಆಯೋಗದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 1997ರಲ್ಲಿ ಸರ್ಕಾರ ಇವರನ್ನು ಕೃಷಿ ಖರ್ಚು ಮತ್ತು ಬೆಲೆ ನಿಗದಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಹಲವಾರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆಯನ್ನು ಸೂಚಿಸಲು ಈ ಸಮಿತಿಯನ್ನು ಕೇಳಿಕೊಳ್ಳಲಾಗಿತ್ತು. ಇವರು ನಾಲ್ಕನೇ ಹಣಕಾಸು ಸಮಿತಿಯ ಸದಸ್ಯರಾಗಿ ಮತ್ತು ಪಶ್ವಿಮ ಬಂಗಾಳ, ತ್ರಿಪುರ ಸರ್ಕಾರದ ರಾಜ್ಯ ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ನಂತರ ಇವರನ್ನು ಆಹಾರ ಧಾನ್ಯಗಳ ದೀರ್ಘಕಾಲೀನ ನೀತಿಯನ್ನು ಕುರಿತ ಉನ್ನತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ರೈತರಿಗೆ ಸೂಕ್ತ ಬೆಲೆ ಸಿಗಬೇಕೆಂಬುದು ಅವರ ಶಿಫಾರಸಾಗಿತ್ತು.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಉಚಿತ ಜನಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾತನಾಡುವ ಮೊದಲು...

ನರೇಂದ್ರ ಮೋದಿ ಸರ್ಕಾರ ಯೋಜನಾ ಆಯೋಗದ ಸ್ಥಾನದಲ್ಲಿ ನೀತಿ ಆಯೋಗವನ್ನು ಸ್ಥಾಪಿಸುವವರೆಗೆ ಇವರ ಸೇವೆ ಮುಂದುವರಿದಿತ್ತು. ಇವರು ಸೇವೆ ಸಲ್ಲಿಸಿದ ಸಮಿತಿಗಳಲ್ಲಿ ಕೇವಲ ಹೆಸರಿಗಷ್ಟೇ ಸದಸ್ಯರಾಗಿರಲಿಲ್ಲ. ಪ್ರತಿಯೊಂದು ಸಮಿತಿಯಲ್ಲೂ ಅತ್ಯಂತ ವಿಶಿಷ್ಟವಾದ ಹೊಳಹುಗಳನ್ನು ನೀಡುತ್ತಿದ್ದರು. ಪ್ರತಿಯೊಂದು ಚರ್ಚೆಯಲ್ಲೂ ಅದು ಅರ್ಥಶಾಸ್ತ್ರಜ್ಞರೊಂದಿಗಾಗಲೀ, ಅಕ್ಟಿವಿಸ್ಟ್‌ಗಳ ಜೊತೆಗಾಗಲೀ, ರಾಜಕೀಯ ನೇತಾರರೊಂದಿಗಾಗಲೀ, ಅಂಕಿ-ಅಂಶಗಳು ಮತ್ತು ಅರ್ಥಶಾಸ್ತ್ರದ ಸಿದ್ಧಾಂತಗಳ ಮೂಲಕವೇ ಮನವರಿಕೆ ಮಾಡಿಕೊಡುತ್ತಿದ್ದರು. ಜೊತೆಗೆ, ಚಾರಿತ್ರಿಕ ಆಯಾಮವೂ ಇವರ ಚಿಂತನೆಯಲ್ಲಿರುತ್ತಿತ್ತು. ಹಾಗಾಗಿಯೇ ಎಷ್ಟೋ ಜನರ ಗಮನಕ್ಕೆ ಬರದೇ ಹೋಗುತ್ತಿದ್ದ ಅಂಶಗಳು ಇವರಿಗೆ ಗೋಚರಿಸುತ್ತಿತ್ತು.

ಭಿನ್ನವಾದ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಿದ್ದ, ಕೇಳಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡುತ್ತಿದ್ದ ಅಪರೂಪದ ಆರ್ಥಿಕ ಚಿಂತಕ ಸೇನ್. ತಮ್ಮ ವಿರೋಧವನ್ನು ಅರ್ಥಶಾಸ್ತ್ರ ಮತ್ತು ಅಂಕಿ-ಅಂಶಗಳ ನೆರವಿನಿಂದ ಪ್ರತಿಪಾದಿಸುತ್ತಿದ್ದರು. ಹಾಗಾಗಿ, ಇವರಿಗೆ ವೈಯಕ್ತಿಕ ನೆಲೆಯಲ್ಲಿ ವಿರೋಧಿಗಳು ಕಡಿಮೆ.

ಇವರು ಕೃಷಿ ಆರ್ಥಶಾಸ್ತ್ರದ ಭಾರತೀಯ ಸೊಸೈಟಿ ಮತ್ತು ಕಾರ್ಮಿಕ ಅರ್ಥಶಾಸ್ತ್ರದ ಭಾರತೀಯ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ 2010ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಕೊಡಲಾಗಿತ್ತು.

Image

ಇವರ ಎಲ್ಲ ಅಧ್ಯಯನ, ಸಲಹೆಗಳು ಜನರ ಬದುಕನ್ನು ಸುಧಾರಿಸುವ ಕಡೆಗೇ ಇತ್ತು. ನಿಷ್ಠೂರವಾಗಿ ಅಭಿಪ್ರಾಯವನ್ನು ಹೇಳುತ್ತಿದ್ದ ಸೇನ್, ಎಂದೂ ಅಧಿಕಾರಕ್ಕೆ ಹಾತೊರೆದವರಲ್ಲ ಎಂದು ಅವರ ಒಡನಾಡಿಗಳು ಹೇಳುತ್ತಾರೆ. ಇವರ ಜನಪರ ನಿಲುವು ಇವರನ್ನು ಹಲವು ಚಳವಳಿಗಳ ಮತ್ತು ಆಂದೋಲನಗಳ ಸನಿಹಕ್ಕೆ ತಂದಿತು. ಆಹಾರದ ಹಕ್ಕಿಗಾಗಿನ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಹಸಿವು, ಬಡತನ, ಶಿಕ್ಷಣ ಇವೆಲ್ಲ ಇವರ ಕಾಳಜಿಯ ವಿಷಯಗಳು.

ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸಿಕೊಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದೇ ಅವರು ಭಾವಿಸಿದ್ದರು. ಚಾರಿತ್ರಿಕವಾಗಿ ಸರ್ಕಾರಗಳು ಈ ಕೆಲಸವನ್ನು ಮಾಡುತ್ತ ಬಂದಿವೆ ಎಂದು ವಾದಿಸುತ್ತಿದ್ದರು. ಹಾಗಾಗಿಯೇ, ಇತ್ತೀಚಿನ ಉಚಿತ ಕೊಡುಗೆಗಳ ಚರ್ಚೆ ವಿಚಿತ್ರವಾಗಿ ತೋರುತ್ತದೆ. ಏಕೆಂದರೆ, ಕಾರ್ಪೋರೇಟ್ ಜಗತ್ತಿಗೆ ಪುಕ್ಕಟೆಯಲ್ಲಿ ಹಲವು ಸೌಲಭ್ಯವನ್ನು ಬೆಂಬಲಿಸುವ ಹಲವರು, ಸಾಮಾನ್ಯರಿಗೆ ನೆರವು ನೀಡುವಾಗ ವಿರೋಧಿಸುವುದು ಅಚ್ಚರಿಯ ವಿಷಯ ಎನ್ನುತ್ತಿದ್ದರು.

ಹಾಗೆಯೇ, ಸರ್ಕಾರ ಜನರಿಗೆ ಒಂದಿಷ್ಟು ಹಣ ವರ್ಗಾಯಿಸಿ, ಎಲ್ಲರಿಗೂ ನೀರು, ಆರೋಗ್ಯ, ಶಿಕ್ಷಣ, ನೈರ್ಮಲ್ಯ ಹಾಗೂ ಪೌಷ್ಟಿಕಾಂಶ ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದರು.

ಇವರ ಎಷ್ಟೋ ಸಲಹೆಗಳು ಇನ್ನೂ ಅನುಷ್ಠಾನವಾಗಬೇಕಿರುವ ಈ ಸಂದರ್ಭದಲ್ಲಿ, ಅವುಗಳ ಪರವಾಗಿ ಸಮರ್ಥವಾಗಿ ಮಾತನಾಡಬಲ್ಲವರಾಗಿದ್ದ ಪ್ರೊಫೆಸರ್ ಸೇನ್ ಇಂದು ನಮ್ಮೊಂದಿಗಿಲ್ಲದ್ದು ನಿಜಕ್ಕೂ ದೊಡ್ಡ ನಷ್ಟ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180