ಸುದ್ದಿ ಸ್ವಾರಸ್ಯ | ತನ್ನನ್ನು ತಾನೇ ಬಾಡಿಗೆಗೆ ಕೊಡುವ ಹುಡುಗ!

"ಅಯ್ಯೋ... ಒಬ್ಬರೇ ಯಾರ್ ಸುತ್ತುತ್ತಾರೆ...!" "ಒಬ್ರೇ ಇದ್ದಾಗ ಊಟ ಮಾಡೋಕೆ ಬೋರು..." ಇತ್ಯಾದಿ ಅನ್ನಿಸಿ ಬಲೇ ಬೇಜಾರು ಮಾಡಿಕೊಳ್ಳುವವರಿಗೆ ಇಲ್ಲೊಂದು ಜಬರ್ದಸ್ತ್ ಸುದ್ದಿ ಉಂಟು.

ಒಬ್ಬರೇ ಇರುವಾಗ ನಿಮಗೆ ಬೇಸರ ಅನ್ನಿಸಿದರೆ, ನಿಮ್ಮ ಜೊತೆ ಕಾಲ ಕಳೆಯಲೆಂದೇ ವ್ಯಕ್ತಿಯೊಬ್ಬರನ್ನು ನೀವು ಬಾಡಿಗೆಗೆ ಗುರುತು ಮಾಡಿಕೊಳ್ಳಬಹುದು. "ಇದೆಂತ ಡಬ್ಬಾ ಐಡಿಯಾ! ಇದೆಲ್ಲ ಸಾಧ್ಯವಾ?" ಅಂತ ನೀವು ಬೈದುಕೊಳ್ಳುವ ಮೊದಲು, ಇಂಥದ್ದೇ ಕೆಲಸ ಮಾಡಿ ಕೈ ತುಂಬಾ ಸಂಪಾದಿಸುತ್ತಿರುವ ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡುಬಿಡುವ.

ಈತನ ಹೆಸರು ಶೋಜಿ ಮೊರಿಮೊಟೊ. ಜಪಾನಿನ ಟೋಕಿಯೊ ನಗರದವ. ಒಂಟಿಯಾಗಿರಲು ಬಯಸದವರಿಗೆ ತನ್ನನ್ನು ತಾನು ಬಾಡಿಗೆಗೆ ಕೊಟ್ಟುಕೊಳ್ಳುತ್ತಾನೆ. ಒಂದು ಭೇಟಿಗೆ ಈತನ ಸಂಪಾದನೆ ಬರೋಬ್ಬರಿ 6,768 ರೂಪಾಯಿ (85 ಡಾಲರ್‌). ಜೊತೆಗೆ, ಓಡಾಡಿದ ವಾಹನ ಪ್ರತ್ಯೇಕವಾಗಿದ್ದರೆ ಅದರ ಖರ್ಚನ್ನೂ ಮೆತ್ತಗೆ ವಸೂಲಿ ಮಾಡುತ್ತಾನೆ.

ಈ ಸುದ್ದಿ ಓದಿದ್ದೀರಾ?: ಬದುಕು | ಬಟ್ಟೆ ಅಂಗ್ಡಿ ಕಸ ಹೊಡದ್ರೆ ಹೆಣ್‌ ಕೊಡಲ್ಲ ಅಂತಾನೇಯ ಕೆಲ್ಸ ಬಿಟ್ಟೆ

ಒಂಟಿಯಾಗಿರಲು ಇಷ್ಟಪಡದ ಜನ ಈಗ ಈ ಯುವಕನನ್ನು ಹುಡುಕಿ ಬರುತ್ತಿದ್ದಾರೆ. ಈತ ಬಾಡಿಗೆಗೆ ತನ್ನನ್ನು ಆಯ್ಕೆ ಮಾಡಿಕೊಂಡವರು ಇರುವ ಸ್ಥಳಕ್ಕೆ ಹೋಗುತ್ತಾನೆ. ಅವರ ಜೊತೆ ಸಮಯ ಕಳೆಯುತ್ತಾನೆ. ಏನೂ ಕೆಲಸ ಮಾಡುವುದಿಲ್ಲ. ಇನ್ನೂ ತಮಾಷೆ ಎಂದರೆ, ಆತನಾಗಿಯೇ ಮಾತು ಕೂಡ ಆಡುವುದಿಲ್ಲ! ತನ್ನ ಗ್ರಾಹಕರು ಮಾತನಾಡಿಸಿದರೆ ಮಾತ್ರ ಉತ್ತರ, ಅದೂ ಅಪರೂಪ. ಸದ್ಯ ಶೋಜಿಗೆ ಹೆಚ್ಚಿನ ಬೇಡಿಕೆ ಇದ್ದು, ದಿನವೊಂದರಲ್ಲಿ ಹೀಗೆ ಮೂವರ ಒಂಟಿತನಕ್ಕೆ ಜೊತೆಯಾಗಬಹುದು ಎಂಬುದು ಈಗಾಗಲೇ ಸಾಬೀತಾಗಿದೆ.

ಯಾವಾಗಲೂ ಏನನ್ನಾದರೂ ಮಾಡುತ್ತಲೇ ಇರಬೇಕು ಅಥವಾ ದುಡಿಯುತ್ತಲೇ ಇರಬೇಕೆಂಬುದು ಈಗಿನ ಜನರ ಮನಸ್ಸಿನ ಬಹುದೊಡ್ಡ ಒತ್ತಡ. ಅದಕ್ಕೆ ಪೂರಕವಾಗಿ ಕೆಲವರು ಒಂಟಿತನದಿಂದ ನರಳುವುದುಂಟು. ಆದರೆ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಶೋಜಿ ಹೇಳುವುದಿಷ್ಟು: "ಬೇರೆನನ್ನೂ ಮಾಡದೆ ಕೇವಲ ಜನರಿಗಾಗಿ ಇರುವುದರಿಂದ ನನಗೀಗ ನನ್ನದೇಯಾದ ಗೌರವ, ಮೌಲ್ಯ ಸಿಕ್ಕಿದಂತಾಗಿದೆ. ಈ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದೇನೆ."

ನಿಮಗೆ ಏನು ಅನ್ನಿಸ್ತು?
0 ವೋಟ್