ವಾರಾಂತ್ಯದ ಓದು | ಫೆಡರರ್ ಇನ್ಮುಂದೆ ಆಡುವುದಿಲ್ಲ ಎಂಬುದೇ ಅರಗಿಸಿಕೊಳ್ಳಲಾಗದ ವಿಷಯ

ಈ ಹೊತ್ತಿನಲ್ಲಿ ಎಲ್ಲರೂ ಫೆಡರರ್ ಗೆದ್ದ 20 ಗ್ರಾಂಡ್‌ಸ್ಲಾಮ್‌ಗಳನ್ನು ನೆನಪಿಸಿಕೊಂಡರೆ, ನನಗೆ ಪದೇಪದೆ ನೆನಪಾಗೋದು ಫೆಡರರ್ ಸೋತ 2008ರ ವಿಂಬಲ್ಡನ್ ಫೈನಲ್ ಪಂದ್ಯ. ಅದು ಟೆನ್ನಿಸ್ ಕ್ರೀಡೆಯ ಶ್ರೇಷ್ಠ ಪಂದ್ಯವೆಂದರೂ ತಪ್ಪಿಲ್ಲ. ಸುಮಾರು ಐದು ಗಂಟೆಗಳ ಕಾಲ ನಡೆದ ಆ ಪಂದ್ಯದಲ್ಲಿ ನಡಾಲ್ ಗೆದ್ದರೂ ಫೆಡರರ್ ಸೋಲಲಿಲ್ಲ! ಇಬ್ಬರ ಆಟದಿಂದ ಟೆನ್ನಿಸ್ ಗೆದ್ದ ದಿನವದು

2001ರ ವಿಂಬಲ್ಡನ್ ಪಂದ್ಯಾವಳಿಯ ಐದನೇ ಸುತ್ತು (ಜುಲೈ 2). ಅಂದು ಹತ್ತೊಂಬತ್ತು ವರ್ಷದ ಫೆಡರರ್‌ಗೆ ಏಕಕಾಲಕ್ಕೆ ಎಲ್ಲಿಲ್ಲದ ಸಂತಸ ಮತ್ತು ದಿಗಿಲು. ತನ್ನ ಬಾಲ್ಯದ ದಿನಗಳಿಂದ ಆರಾಧನೆ ಮಾಡಿಕೊಂಡ ಬಂದ ಮತ್ತೊಬ್ಬ ಟೆನ್ನಿಸ್ ಮಾಂತ್ರಿಕ ಪೀಟ್ ಸಾಂಪ್ರಸ್ ಎದುರು ಆಡುತ್ತಿರುವ ಸಂತಸ ಮತ್ತು ಜನರಿಂದ ಕಿಕ್ಕಿರಿದಿದ್ದ ಸೆಂಟರ್ ಕೋರ್ಟ್‌ನಲ್ಲಿ ಅಂತಹ ದಿಗ್ಗಜನ ಜೊತೆಗಿನ ಸೆಣೆಸಾಟದ ದಿಗಿಲು.

Eedina App

ಸಾಂಪ್ರಸ್ ಆಗಿನ ಕಾಲಕ್ಕೆ ಎಂತಹ ದೈತ್ಯ ಅನ್ನೋದರ ಒಂದು ಸುಳಿವು ನಿಮಗೆ ನೀಡುವೆ. ಹುಲ್ಲುಹಾಸಿನ ಕೋರ್ಟ್‌ಗಳ ಮೇಲೆ ಸಾಂಪ್ರಸ್ ಸೋಲೇ ಕಾಣದ ಅಜೇಯ ಆಟಗಾರ ಅಂತ ಜನರು ಕೊಂಡಾಡುತ್ತಿದ್ದರು. ಪ್ರಶಂಸೆಗೆ ಅನುಗುಣವಾಗಿ, ವಿಂಬಲ್ಡನ್‌ನಲ್ಲಿ ಆಡಿದ 57 ಪಂದ್ಯಗಳಲ್ಲಿ ಆತ 56 ಗೆದ್ದಿದ್ದ! 2001ರ ಹೊತ್ತಿಗೆ ಆತ ಏಳು ವಿಂಬಲ್ಡನ್ ಮತ್ತು ಒಟ್ಟು 13 ಗ್ರಾಂಡ್‌ಸ್ಲಾಮ್‌ ಆತನ ಹೆಸರಲ್ಲಿತ್ತು. ಆತನ ಆ ದಾಖಲೆಯನ್ನು ಬಹುಶಃ ಯಾರೂ ಹಿಂದಿಕ್ಕಲಾರರು ಎಂದು ಜಗತ್ತೇ ಮಾತನಾಡಿಕೊಳ್ಳುತ್ತಿತ್ತು. ಸಾಂಪ್ರಸ್‌ನ ಆಕ್ರಮಣಕಾರಿ ಸರ್ವ್ ಮತ್ತು ವಾಲಿ ಆಟ ಮತ್ತವನ ನಿರ್ಭಾವುಕ ಏಕಾಗ್ರತೆ ಎದುರಾಳಿಯನ್ನು ವಿಚಲಿತನನ್ನಾಗಿ ಮಾಡುತಿತ್ತು. ಆದರೆ, ಆ ದಿನ ಹತ್ತೊಂಬತ್ತರ ಹರೆಯದ ಫೆಡರರ್‌ಗೆ ಇದಾವುದೂ ತಲೆಯಲ್ಲಿ ಇರಲಿಲ್ಲ - ಗೆಲುವು ಆತನ ಏಕೈಕ ಗುರಿಯಾಗಿತ್ತು.

ಪೀಟ್ ಸಾಂಪ್ರಸ್‌

ತನ್ನ ಆರಾಧ್ಯ ದೈವ ಸಾಂಪ್ರಸ್‌ನನ್ನು ಫೆಡರರ್ ಎಷ್ಟರಮಟ್ಟಿಗೆ ಮೈಗೂಡಿಸಿಕೊಂಡಿದ್ದನೆಂದರೆ, ಆತನ ಆಟ, ಉಡುಗೆ ತೊಡುಗೆ, ಹಾವ-ಭಾವ, ಬಳಸುತ್ತಿದ್ದ ರಾಕೆಟ್ ಎಲ್ಲವನ್ನೂ ಅನುಕರಣೆ ಮಾಡುತ್ತಿದ್ದ. ಫೆಡರರ್ ಸಾಂಪ್ರಸ್‌ನ ತದ್ರೂಪಿಯೇ ಆಗಿಹೋಗಿದ್ದ. ಎಲ್ಲರೂ ಫೆಡರರ್‌ನನ್ನು 'ಪುಟ್ಟ ಸಾಂಪ್ರಸ್' ಎಂದೇ ಕರೆಯಲು ಶುರುಮಾಡಿಕೊಂಡಿದ್ದರು. ಅಂದು ಪುಟ್ಟ ಸಾಂಪ್ರಸ್ ಯಾವುದೇ ಆತಂಕ, ಅಳುಕಿಲ್ಲದೆ ದೈತ್ಯ ಸಾಂಪ್ರಸ್‌ನಿಗೆ ಹುಲ್ಲುಹಾಸಿನ ಕೋರ್ಟ್ ಮೇಲೆ ಸೋಲಿನ ರುಚಿ ತೋರಿಸಿದ್ದ! ಹತ್ತೊಂಬತ್ತು ವರ್ಷದ ಫೆಡರರ್ ಆಟ ನೋಡಿ ಸಾಂಪ್ರಸ್‌ಗೂ ಅನ್ನಿಸಿರಬೇಕು - ನಾನು ಕ್ರೀಡೆಗೆ ವಿದಾಯ ಹೇಳುವ ಸಮಯ ಹತ್ತಿರವಿದೆ ಎಂದು.

AV Eye Hospital ad
ಪೀಟ್ ಸಾಂಪ್ರಸ್‌ ಮತ್ತು ಫೆಡರರ್

ಹದಿನಾರು ವರ್ಷದ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ಕರಾಚಿ ಕ್ರೀಡಾಂಗಣದಲ್ಲಿ ಇಮ್ರಾನ್ ಖಾನ್, ವಾಸಿಂ ಅಕ್ರಂ, ವಾಕರ್ ಯೂನಿಸ್‌ರಂತಹ ವೇಗಿಗಳನ್ನು ಎದೆಗುಂದದೆ ಎದುರಿಸಿದ್ದು ಹೇಗೆ ನಮ್ಮ ಕ್ರೀಡಾ ಜನಪದದಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆಯೋ ಅದೇ ರೀತಿ, ಫೆಡರರ್ ಅಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ಗಳಿಗೆ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಇದೆ. ಮ್ಯಾಚ್ ಗೆದ್ದ ಫೆಡರರ್, "This match will give me as much confidence as I can get, This is the biggest win of my life," ಎಂದು ಹೇಳಿದ್ದ. ಅನಿರೀಕ್ಷಿತ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾದರೂ ಸಭ್ಯ ಸಾಂಪ್ರಸ್ ಅಂದು, "There are a lot of young guys coming up but Roger is a bit extra special," ಎಂದಿದ್ದು ನನಗೆ ನೆನಪಿದೆ. ಹೌದು... ಫೆಡರರ್ 'extra special' ಆಟಗಾರನೇ ಆಗಿದ್ದ. ಅಂದು ಫೆಡರರ್ ಗಳಿಸಿದ ಆತ್ಮವಿಶ್ವಾಸ ಇಪ್ಪತ್ತೊಂದು ವರ್ಷಗಳ ಬಳಿಕ ಆತನನ್ನು 20 ಗ್ರಾಂಡ್‌ಸ್ಲಾಮ್‌ಗಳ ಒಡೆಯನನ್ನಾಗಿ ಮಾಡಿತು. ಸಾಂಪ್ರಸ್‌ನ ಸರಿಗಟ್ಟಲಾಗದ ಸಾಧನೆಯನ್ನು ಮೊದಲು ಮುರಿದ ಸಾಧನೆ ಫೆಡರರ್‌ನದು. ಜೊತೆಗೆ, ಸುದೀರ್ಘ ಕಾಲ ವಿಶ್ವ ನಂಬರ್ ಒನ್ ಪಟ್ಟ ಮತ್ತು ಒಲಂಪಿಕ್ ಬೆಳ್ಳಿ ಪದಕಗಳ ಸಾಧನೆ ಬೇರೆ.

ಈ ಫೋಟೊ ಆಲ್ಬಮ್ ನೋಡಿದ್ದೀರಾ?: ಮೌಂಟ್ ಎವರೆಸ್ಟ್‌ನ ಎತ್ತರ 9232 ಮೀಟರ್?; ಇಲ್ಲಿವೆ ಅತ್ಯಪರೂಪದ 22 ಚಿತ್ರ ಪುರಾವೆ

ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ನಗರದಲ್ಲಿ ಹುಟ್ಟಿದ ಫೆಡರರ್‌ನ ತಂದೆ ಸ್ವಿಸ್, ತಾಯಿ ದಕ್ಷಿಣ ಆಫ್ರಿಕಾದವರು. ಫೆಡರರ್ ಹುಟ್ಟು ಕ್ರೀಡಾಪಟು. ಸ್ವಿಸ್ ಮತ್ತು ಆಫ್ರಿಕಾ ಪ್ರಜೆ. ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್‌ಪ್ರಿಯನಾದ ಫೆಡರರ್‌ಗೆ ಉತ್ತಮ ಕೈ ಮತ್ತು ಕಣ್ಣುಗಳ ಸಮನ್ವಯವಿತ್ತು. ಹಾಗಾಗಿ, ಟೆನಿಸ್ ಆತನ ಸಹಜ ಆಯ್ಕೆಯಾಗಿತ್ತು. ಆತನ ಕೈ ಮತ್ತು ಕಣ್ಣುಗಳ ಸಮನ್ವಯ, ಕೋರ್ಟ್‌ನಲ್ಲಿ ತೀರಾ ಹಗುರವಾಗಿ ಚಲಿಸುವ ಪರಿಯನ್ನು ಕಂಡವರು, "ಟೆನ್ನಿಸ್ ಇಷ್ಟು ಸುಲಭವಾ?" ಎಂಬ ಗೊಂದಲಕ್ಕೆ ಬೀಳುತ್ತಿದ್ದರು. ಇಂಡಿಯಾ ಕಂಡ ಅತ್ಯುತ್ತಮ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರಾದ ನಿರ್ಮಲ್ ಶೇಖರ್, "Tennis is much less demanding physically – especially if you can play with the graceful, unmatched effortlessness of a Federer,” ಎಂದಿದ್ದುಂಟು. ವಿಮರ್ಶಕ ಲಾ ಅವರ, "He walks the Earth very lightly and loves everything about what he is," ಎಂಬ ಮಾತನ್ನು ಅಲ್ಲಗಳೆಯುವವರು ಯಾರೂ ಇಲ್ಲ.

ಫೆಡರರ್

ಫೆಡರರ್ ಟೆನ್ನಿಸ್ ಮಾಂತ್ರಿಕ. ಅವನ 'ಸೋಮಾರಿ' ಸೊಬಗಿನ ಆಟ ಕಣ್ಣಿಗೆ ಹಬ್ಬ. ಕೋರ್ಟ್‌ನಲ್ಲಿನ ಅವನ ಓಡಾಟವೊಂದು ಸುಲಲಿತ ಕಾವ್ಯ - ಚೆಲುವಿನ ಹೂದೋಟದಲ್ಲಿ ಚಿಟ್ಟೆಯ ಹಾರಾಟ, ಅವನ ಆಟವೊಂದು ಬ್ಯಾಲೆ ನೃತ್ಯ. ನದಿಯ ಜುಳುಜುಳು ಹರಿವು. ತೀರದ ಗೆಲುವಿನ ಹಸಿವನ್ನು ಬಚ್ಚಿಡುವ ಭಾವನಾಶೂನ್ಯ ಯೋಗಿಯ ಮುಖಛಾಯೆ... ಎಲ್ಲವೂ ಅನನ್ಯ. "Nobody in the history of tennis ever played like Federer: his effortless mastery of his craft saw him match a ballet dancer-genius’ graceful, innovative, and passionate performance – it was all pure melody," ಎಂಬ ನಿರ್ಮಲ್ ಶೇಖರ್ ಅವರ ಮಾತುಗಳ ಪ್ರಸ್ತಾಪ ಇಲ್ಲಿ ಮಾಡದಿದ್ದರೆ ತಪ್ಪಾದೀತು. ಸ್ಟೀಫನ್ ಎಡ್ಬೆರ್ಗ್, ಬೋರಿಸ್ ಬೇಕರ್‌, ಸಾಂಪ್ರಸ್‌ರ ಒಟ್ಟು ಮೊತ್ತ ನಿಮಗೆ ಫೆಡರರ್‌ನಲ್ಲಿ ಕಾಣಸಿಗುತ್ತದೆ.

ನಾನು ಹುಟ್ಟಿದ ವರುಷ ಬಿಯಾನ್ ಬೋರ್ಗ್ ಟೆನಿಸ್‌ಗೆ ವಿದಾಯ ಹೇಳಿದ್ದ. ತದನಂತರ ರೆಕಾರ್ಡ್ ಆಗಿದ್ದ ಆತನ ಆಟವನ್ನು ನೋಡಿ ಮೆಚ್ಚಿದ್ದೆ. ಬೋರಿಸ್ ಬೇಕರ್, ಮಾಕೆನ್‌ರೊ ಆಟ ನನ್ನನ್ನು ಟೆನ್ನಿಸ್ ಅಭಿಮಾನಿಯನ್ನಾಗಿ ಮಾಡಿತ್ತು. ಅಗಾಸಿ, ಸಾಂಪ್ರಸ್, ಹೆನ್ಮೆನ್ ಯುಗ ಟೆನ್ನಿಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಬಹುಶಃ ಟೆನ್ನಿಸ್ ಕ್ರೀಡೆಯನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿದ್ದು ಫೆಡರರ್, ನಡಾಲ್ ಮತ್ತು ಜೊಕೊವಿಕ್ ತ್ರಿವಳಿಗಳು. ಈ ಮೂವರು ಗೆದ್ದಿರುವ ಗ್ರಾಂಡ್‌ಸ್ಲಾಮ್‌ಗಳ ಸಂಖ್ಯೆ ಬರೋಬ್ಬರಿ 63. ಈ ಅಂಕಿ ಖಂಡಿತವಾಗಿಯೂ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಕೂಡ. ಇವರ ನಡುವಿನ ಆರೋಗ್ಯಕರ ಪೈಪೋಟಿ ಟೆನ್ನಿಸ್‌ನ ಸುವರ್ಣ ಯುಗವೆಂದರೆ ತಪ್ಪಾಗಲಾರದು. ಇಂತಹ ಯುಗವೊಂದಕ್ಕೆ ನಾಂದಿ ಹಾಡಿದ ಶ್ರೇಯಸ್ಸು ಫೆಡರರ್‌ಗೆ ಸೇರುತ್ತದೆ.

ನಡಾಲ್ ಮತ್ತು ಫೆಡರರ್

ಈ ಹೊತ್ತಿನಲ್ಲಿ ಎಲ್ಲರೂ ಫೆಡರರ್ ಗೆದ್ದ 20 ಗ್ರಾಂಡ್‌ಸ್ಲಾಮ್‌ಗಳನ್ನು ನೆನಪಿಸಿಕೊಂಡರೆ, ನನಗೆ ಪದೇಪದೆ ನೆನಪಾಗೋದು ಫೆಡರರ್ ಸೋತ 2008ರ ವಿಂಬಲ್ಡನ್ ಫೈನಲ್. ಅದು ಟೆನ್ನಿಸ್ ಕ್ರೀಡೆಯ ಶ್ರೇಷ್ಠ ಪಂದ್ಯವೆಂದರೂ ತಪ್ಪಿಲ್ಲ. ಸುಮಾರು ಐದು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ ಗೆದ್ದರೂ ಫೆಡರರ್ ಸೋಲಲಿಲ್ಲ! ಟೆನಿಸ್ ಕ್ರೀಡೆ ಗೆದ್ದ ದಿನವದು.

ನಡಾಲ್‌ನ ಬಿರುಸಿನ ಆಟ, ಫೆಡರರ್‌ನ ಸುಲಲಿತ ಆಟ ಮತ್ತು ಹಗುರಾದ ಚಲನೆ; ಇವರಿಬ್ಬರ ದೈತ್ಯ ಪ್ರತಿಭೆಗಳ ನಡುವೆ ದಿಟದ ಹೋರಾಟ ನಡೆಸಿ ಹೆಸರು, ಅಸ್ಮಿತೆ ಸೃಷ್ಟಿಸಿಕೊಳ್ಳುವ ಜೊಕೊವಿಕ್‌ನ ಹಠ, ಛಲಕ್ಕೆ ಬಹುಶಃ ಮುಂದಿನ ಪೀಳಿಗೆಯವರು ಸಾಕ್ಷಿಯಾಗಲಾರರು. ಮೂವರನ್ನೂ ಏಕಕಾಲಕ್ಕೆ ನೋಡಿದ ಸೌಭಾಗ್ಯ ನಮ್ಮ ಪೀಳಿಗೆಯದು.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಮದುವೆಯ ದಿನ ಮದುಮಗಳ ಕೈರುಚಿ; ನಂತರದ ಮೂರು ವರ್ಷ ಮದುಮಗನದೇ ಅಡುಗೆ

ನನ್ನ ತಂದೆ ಬಹುದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದರು. ಆವರಿಗೆ ಕ್ರಿಕೆಟ್ ಎಂದರೆ ವೆಸ್ಟ್ ಇಂಡೀಸ್ - ವೆಸ್ಟ್ ಇಂಡೀಸ್ ಎಂದರೆ ಕ್ರಿಕೆಟ್. ಕಾಳಿಚರನ್, ಲಾಯ್ಡ್, ಸೋಬರ್ಸ್, ಮಾರ್ಷಲ್, ರಿಚರ್ಡ್ಸ್, ಹೋಲ್ಡಿಂಗ್ ಇಲ್ಲದ ಕ್ರಿಕೆಟ್ ಅನ್ನು ಊಹಿಸಿಕೊಳ್ಳಲೂ ಅವರಿಗೆ ಸಾಧ್ಯವಿರಲಿಲ್ಲ. ಕ್ರಿಕೆಟ್ ಪ್ರಪಂಚದಲ್ಲಿ ವೆಸ್ಟ್ ಇಂಡೀಸ್ ತಂಡ ಪತನದೆಡೆಗೆ ದಾಪುಗಾಲು ಹಾಕುತ್ತ ಸಾಗಿದ ನಂತರ ಅವರು ಕ್ರಿಕೆಟ್ ನೋಡುವುದನ್ನೇ ಬಿಟ್ಟುಬಿಟ್ಟರು. ನಾವು ಸಚಿನ್, ಸೌರವ್, ದ್ರಾವಿಡ್ ಅಂತ ಮಾತನಾಡುತ್ತಿದ್ದರೆ, ಅವರು ಇನ್ನೂ ಕಾಳಿಚರಣರ ಕಾಲದಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಪ್ರತಿಭೆಯೇ ಹಾಗಲ್ಲವೇ - ನಮ್ಮನ್ನು ಆ ನಿರ್ದಿಷ್ಟ ಕಾಲದ ಚೌಕಟ್ಟಿನಲ್ಲಿ ಕಟ್ಟಿಹಾಕುತ್ತದೆ.

ಜೊಕೊವಿಕ್, ನಡಾಲ್, ಫೆಡರರ್

ನಮ್ಮ ಪೀಳಿಗೆಯ ಟೆನ್ನಿಸ್ ಅಭಿಮಾನಿಗಳಿಗೂ ಫೆಡರರ್, ನಡಾಲ್ ಮತ್ತು ಜೊಕೊವಿಕ್ ಸರ್ವಶಕ್ತ ತ್ರಿಮೂರ್ತಿಗಳಾಗಿ ಕಾಣಬಹುದು. ಇವರನ್ನು ಮೀರಿ ಯೋಚಿಸುವ ಕ್ಷಮತೆ ನಮ್ಮಲ್ಲಿ ಇರಲಾರದು. ಫೆಡರರ್ ವಿದಾಯದಿಂದ ಟೆನ್ನಿಸ್ ಚರಿತ್ರೆಯ ಬಹುಮುಖ್ಯ ಅಧ್ಯಾಯವೊಂದು ಮುಗಿದಿದೆ. ನಡಾಲ್ ವಯೋಸಹಜ ಗಾಯಗಳಿಗೆ ಹೆಚ್ಚೆಚ್ಚು ತುತ್ತಾಗುತ್ತಿದ್ದಾರೆ. ಜೊಕೊವಿಕ್‌ಗೆ ಕೂಡ ಆಲ್ಕರಾಝ್ ಎಂಬ ಪ್ರಬಲ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದಾನೆ. ಎರಡು ದಶಕಗಳ ಕಾಲ ನಮಗೆ ಟೆನಿಸ್ ರಸದೌತಣ ಉಣಬಡಿಸಿದ ಫೆಡರರ್ ಇನ್ಮುಂದೆ ಆಡುವುದಿಲ್ಲ ಎಂಬುದೇ ಅರಗಿಸಿಕೊಳ್ಳಲಾಗದ ವಿಷಯ.

ಮೊನ್ನೆ-ಮೊನ್ನೆ ಹತ್ತೊಂಬತ್ತು ವರ್ಷದ ಕಾರ್ಲೋಸ್ ಆಲ್ಕರಾಝ್ ಯು.ಎಸ್ ಓಪನ್ ಗೆದ್ದಾಗ ಫೆಡರರ್‌ಗೆ ಅನ್ನಿಸಿರಬೇಕು - ತಾನು ಈ ಕ್ರೀಡೆಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು. ಟೆನ್ನಿಸ್ ಕೋರ್ಟ್‌ಗೆ ಕಾಲಿಟ್ಟು, ಅದರ ವಿಸ್ತಾರ, ಒಂದು ಸರ್ವ್ ಮಾಡಲು ಬೇಕಾಗಿರುವ ತೋಳ್ಬಲ, ಚೀತಾದಂತೆ ಮೈ ತಳೆದು ಓಡಿ ಚೆಂಡನ್ನು ಎದುರಾಳಿಯ ಅಂಗಳಕ್ಕೆ ಕಳಿಸಲು ಹರಿಸಬೇಕಾಗಿರುವ ಬೆವರು, ವಾಲಿಗಳನ್ನ ಸರಿಯಾದ ಜಾಗದಲ್ಲಿ ಪ್ಲೇಸ್ ಮಾಡಲು ಬೇಕಾಗಿರುವ ಚತುರತೆ, ಫೋರ್ ಹ್ಯಾಂಡ್, ಬ್ಯಾಕ್ ಹ್ಯಾಂಡ್ ಆಡಲು ಬೇಕಾಗಿರುವ ಕೌಶಲ್ಯ ನೋಡಿದವರಿಗೆ ಟೆನ್ನಿಸ್ ಎಂಬ ಕ್ರೀಡೆ ಎಷ್ಟು ತ್ರಾಸದಾಯಕ ಎಂಬುದು ಅರಿವಾಗದೆ ಇರದು. ಇಂತಹ ತ್ರಾಸದಾಯಕ ಕ್ರೀಡೆಯನ್ನು ಸುಮಾರು ಎರಡು ದಶಕ ಆವರಿಸಿದ್ದ ಫೆಡರರ್ ಸಾಧನೆ ಸಾಮಾನ್ಯವಾದುದೇನಲ್ಲ.

ಫೆಡರರ್ ಮತ್ತು ನಡಾಲ್

ಫೆಡರರ್ ಟೆನ್ನಿಸ್‌ಗೆ ವಿದಾಯ ಹೇಳಿದ ಸುದ್ದಿ ಕೇಳಿ ನಡಾಲ್ ಮಾಡಿದ ಟ್ವೀಟ್ ತುಂಬಾ ಅಚ್ಚುಕಟ್ಟಾಗಿ ಕ್ರೀಡಾಭಿಮಾನಿಗಳ ವೇದನೆ, ತಳಮಳಗಳನ್ನು ಪ್ರತಿನಿಧಿಸುವಂತಿದೆ:

"Dear Roger, my friend and rival. I wish this day would have never come. It's a sad day for me personally and for sports around the world (ಪ್ರಿಯ ರೋಜರ್, ನನ್ನ ಗೆಳೆಯ ಮತ್ತು ಪ್ರಬಲ ಪ್ರತಿಸ್ಪರ್ಧಿ. ಈ ದಿನ ಬರಲೇಬಾರದಿತ್ತು. ವೈಯಕ್ತಿಕವಾಗಿ ಮತ್ತು ಜಾಗತಿಕ ಕ್ರೀಡೆಗೆ ಈ ದಿನ ಅತ್ಯಂತ ದುಃಖಭರಿತ ದಿನ).

WE Love FEDEX...

ನಿಮಗೆ ಏನು ಅನ್ನಿಸ್ತು?
13 ವೋಟ್
eedina app