ಸುದ್ದಿಯಾದವರು | ಬಿಜೆಪಿಯ ಧೃತರಾಷ್ಟ್ರಾಲಿಂಗನಕ್ಕೆ ಸಿಕ್ಕದ ಚಾಣಾಕ್ಷ ಜಿಗ್ನೇಶ್ ಮೆವಾನಿ

JIGNESH MEVANI 3

ಮೋದಿಯ ತವರು ರಾಜ್ಯದವರೇ ಆದ ಜಿಗ್ನೇಶ್ ಮೆವಾನಿ, 2016ರಲ್ಲಿ ಒಬ್ಬ ಸಾಮಾನ್ಯ ಸಾಮಾಜಿಕ ಕಾರ್ಯಕರ್ತ. ಅದೇ ವರ್ಷದ ಸ್ವಾತಂತ್ರ್ಯ ದಿನದಂದು ನಡೆಸಿದ ರ‍್ಯಾಲಿ, ಆಡಿದ ಮಾತು ಅವರನ್ನು ದಲಿತ ನಾಯಕನನ್ನಾಗಿಸಿದವು. ಶಾಸಕರೂ ಆದರು. ಅಂದಿನಿಂದಲೂ ಬಿಜೆಪಿ ಅವರನ್ನು ಹಣಿಯಲು ಹವಣಿಸುತ್ತಲೇ ಇದೆ; ಆಗೆಲ್ಲ ಜಿಗ್ನೇಶ್‌ಗೆ ಲಾಭವೇ ಆಗಿದೆ

ಅಂದು 2016ರ ಜುಲೈ 11, ಸೋಮವಾರ. ಗುಜರಾತ್‌ನ ಮೋಟಾ ಸಮಧಿಯಾಲ ಎಂಬ ಹಳ್ಳಿ. ಸತ್ತ ದನದ ಚರ್ಮ ಸುಲಿಯುವಲ್ಲಿ ಏಳು ಮಂದಿ ದಲಿತರು ತಲ್ಲೀನರಾಗಿದ್ದರು. ಆ ದನ ಪಕ್ಕದ ಬದಿಯಾ ಎಂಬ ಹಳ್ಳಿಯಿಂದ ತಂದದ್ದು. ಮಾಮೂಲಿ ಮಾತುಕತೆ, ಹರಟೆ, ಕುಶಾಲು.

ಇದ್ದಕ್ಕಿದ್ದಂತೆ ಎರಡು ಕಾರುಗಳು ಧೂಳೆಬ್ಬಿಸುತ್ತ ಬಂದು ನಿಂತವು. ಅದರಿಂದ ಇಳಿದ ಮಂದಿ ನುಗ್ಗಿಬಂದವರೇ, ಚರ್ಮ ಸುಲಿಯುತ್ತಿದ್ದವರ ಮೇಲೆ ಎರಗಿದರು. ತಾವು ಗೋರಕ್ಷಕರೆಂದು ಹೇಳಿಕೊಂಡ ಈ ಮಂದಿಯದು ಒಂದೇ ಕೇಳ್ವಿ, “ಗೋವನ್ನು ಯಾಕೆ ಕೊಂದದ್ದು?” ದಲಿತರು ಗಾಬರಿ. ಏಕೆಂದರೆ, ಅವರು ಚರ್ಮ ಸುಲಿಯುತ್ತಿದ್ದದ್ದು ಪಕ್ಕದೂರಿನ ಸತ್ತ ದನದ್ದು! ಕೊಲ್ಲುವುದೆಲ್ಲಿ ಬಂತು? ಇದನ್ನು ಪರಿಪರಿಯಾಗಿ ಹೇಳಿದರೂ, ಬೇಡಿಕೊಂಡರೂ ಬಡಿಯಲೆಂದೇ ಬಂದವರು ಕೇಳಿಸಿಕೊಳ್ಳಲೇ ಇಲ್ಲ. ಕೊರಳಪಟ್ಟಿ ಹಿಡಿದು ಎಳೆದೊಯ್ದು, ಕಾರಿಗೆ ಕಟ್ಟಿದರು. ಬಡಿಗೆಗಳಿಂದ ಬಡಿದರು. ಕಬ್ಬಿಣದ ಕೊಳವೆಗಳಿಂದ ನರಕದೇಟು ಕೊಟ್ಟರು. ಚಾಕುವಿನಿಂದ ಹಲ್ಲೆ ಮಾಡಿದರು.

ಏಳು ಮಂದಿಯ ಪೈಕಿ ನಾಲ್ವರನ್ನು ಕಾರಿಗೆ ತುಂಬಿಕೊಂಡು, ಹತ್ತಿರದ ಊನಾ ಪಟ್ಟಣಕ್ಕೆ ತಂದು ಸುರಿದರು. ಅವರ ಬಟ್ಟೆ ಹರಿದು ಬೆತ್ತಲು ಮಾಡಿ ಮತ್ತೆ ಮುಂದುವರಿಯಿತು ಹಲ್ಲೆ. ಸುತ್ತಲಿದ್ದ ಜನ ಕಣ್ತುಂಬಿಕೊಂಡರೇ ವಿನಾ ತುಟಿ ಬಿಚ್ಚಲಿಲ್ಲ. ಪೊಲೀಸರು ಕಾಣಿಸಿಕೊಳ್ಳುತ್ತಲೇ ಗೋರಕ್ಷಕರು ಕಾರು ಏರಿ ಪರಾರಿ.

Image
JIGNESH MEVANI 6
ಊನಾ ಪ್ರಕರಣದಲ್ಲಿ ಅರೆಜೀವವಾಗಿದ್ದ ನಾಲ್ವರು ಸಂತ್ರಸ್ತರು

ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಅರೆಜೀವವಾಗಿದ್ದ ನಾಲ್ಕೂ ಮಂದಿ ಊನಾ ಆಸ್ಪತ್ರೆ ಸೇರಿದರು. ನಂತರ, ಜುಲೈ 14ರಂದು, ಹೆಚ್ಚಿನ ಚಿಕಿತ್ಸೆಗಾಗಿ ರಾಜಕೋಟ್‌ನ ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಯಿತು. ಅಷ್ಟೊತ್ತಿಗೆ ಸುದ್ದಿ ಕಾಡ್ಗಿಚ್ಚು.

ಜುಲೈ 12ರ ಮಂಗಳವಾರ ಗುಜರಾತ್‌ನಾದ್ಯಂತ ಆಕ್ರೋಶ ಸ್ಫೋಟಗೊಂಡಿತು. ರಾಜಧಾನಿ ಅಹಮದಾಬಾದ್‌ನ ಚಾಂದ್ಕೇವಾಡ ಎಂಬಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ದಲಿತರು ಸೇರಿದರು. ಹೆದ್ದಾರಿ ತಡೆ ನಡೆಯಿತು. ಮರುದಿನ, ಇನ್ನೂರಕ್ಕೂ ಹೆಚ್ಚು ಮಂದಿ ದಲಿತರಿಂದ ಪ್ರತಿಭಟನಾ ಮೆರವಣಿಗೆ; ಊನಾ ಪಟ್ಟಣದ ಹೃದಯಭಾಗ ತ್ರಿಕೋನ್ ಬಾಗ್‌ನಲ್ಲಿ ಗಂಟೆಗೂ ಹೆಚ್ಚು ಕಾಲ ಠಿಕಾಣಿ. ಪ್ರಕರಣ ರಾಜ್ಯಸಭೆಯಲ್ಲಿ ಚರ್ಚೆಯಾಯಿತು. ಪ್ರತಿಭಟನೆ ಸೌರಾಷ್ಟ್ರಕ್ಕೂ ವ್ಯಾಪಿಸಿ, 12 ಮಂದಿ ದಲಿತ ಯುವಕರು ಆತ್ಮಾಹುತಿಗೆ ಪ್ರಯತ್ನಿಸಿದರು. ಅದರಲ್ಲಿ ಒಬ್ಬ ಜೀವ ಕಳೆದುಕೊಂಡ.

ಆಗಸ್ಟ್ 15ರ ಸ್ವಾತಂತ್ರ್ಯ ದಿನ. ಅಹಮದಾಬಾದ್‌ನಿಂದ ಊನಾ ಪಟ್ಟಣದವರೆಗೆ ‘ದಲಿತರ ಅಸ್ಮಿತೆ ಯಾತ್ರೆ’ ಹೆಸರಿನ ಪ್ರತಿಭಟನಾ ರ‍್ಯಾಲಿ ನಡೆಯಿತು. ಈ ಸಂದರ್ಭದಲ್ಲಿ, ಸತ್ತ ದನಗಳನ್ನು ದಲಿತರು ವಿಲೇವಾರಿ ಮಾಡುವ ಸಂಪ್ರದಾಯಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಪ್ರತಿಜ್ಞೆ ಮಾಡಲಾಯಿತು. ಮಹಿಳೆಯರೂ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಮಂದಿ ದಲಿತರು ಭಾಗವಹಿಸಿದ್ದ ಈ ರ‍್ಯಾಲಿಯ ನೇತೃತ್ವ ವಹಿಸಿದ್ದು 35 ವರ್ಷ ವಯಸ್ಸಿನ ಬಿಸಿರಕುತದ ಸಾಮಾಜಿಕ ಕಾರ್ಯಕರ್ತ. ಅವರ ಹೆಸರು ಜಿಗ್ನೇಶ್ ಮೆವಾನಿ.

Image
JIGNESH MEVANI 5
2016ರ ಸೆಪ್ಟೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ, ಮೆವಾನಿ ಅವರನ್ನು ಹೊತ್ತೊಯ್ದ ಪೊಲೀಸರು

ಕೇವಲ ಪ್ರತಿಭಟನಾ ರ‍್ಯಾಲಿಯ ನೇತೃತ್ವ ವಹಿಸಿ ಮುಗಿಸಿದ್ದರೆ ಬಹುಶಃ ಎಲ್ಲರೂ ಮೆವಾನಿಯನ್ನು ಮರೆತಿರುತ್ತಿದ್ದರು. ಆದರೆ, ಅಂದು ಗುಜರಾತ್ ಸರ್ಕಾರದ ಮುಂದೆ ಮಂಡಿಸಿದ ಬೇಡಿಕೆ ಮತ್ತು ಆ ಮಾತುಗಳಲ್ಲಿ ಇದ್ದ ಕಾಳಜಿ, ಗಟ್ಟಿತನ, ಸಿಟ್ಟು ಅವರನ್ನು ದಲಿತ ನಾಯಕನನ್ನಾಗಿ ಮಾಡಿದವು. “ಸತ್ತ ದನವನ್ನು ವಿಲೇವಾರಿ ಮಾಡುತ್ತಿರುವುದರಿಂದ, ತಿನ್ನುತ್ತಿರುವುದರಿಂದ ತಾನೇ ಇಷ್ಟೆಲ್ಲ ಅವಹೇಳನ? ಇನ್ಮುಂದೆ ದಲಿತರೆಲ್ಲ ಅದನ್ನು ಬಿಡಲಿದ್ದೇವೆ. ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ; ಭೂರಹಿತ ದಲಿತರಿಗೆ ತಲಾ ಐದು ಎಕರೆ ಜಮೀನು ಮಂಜೂರು ಮಾಡಿಬಿಡಿ,” ಎಂಬ ಮಾತುಗಳು ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿದವು. ಗುಜರಾತ್‌ನ ಬಿಜೆಪಿ ಸರ್ಕಾರಕ್ಕೆ ತಲೆ ಬೆಚ್ಚಗಾಯಿತು.

ಆಗ ದೇಶಾದ್ಯಂತ ಸುದ್ದಿಯಾಗಿದ್ದ ಜಿಗ್ನೇಶ್, ಈಗ ಮತ್ತೊಮ್ಮೆ ಸುದ್ದಿಯ ಮುಂಬೆಳಕಿಗೆ ಬಂದಿದ್ದಾರೆ. ಇದಕ್ಕೆ ಪರೋಕ್ಷವಾಗಿ ಕಾರಣವಾಗಿದ್ದು, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ.

ಇದೇ ಏಪ್ರಿಲ್ 18ರಂದು ಪ್ರಧಾನಿ ಮೋದಿ ಮತ್ತು ನಾಥುರಾಮ್ ಗೋಡ್ಸೆ ಕುರಿತ ಮೆವಾನಿ ಟ್ವೀಟ್ ವೈರಲ್ ಆಗಿತ್ತು. ಅದರಲ್ಲಿನ 'ಗೋಡ್ಸೆ ಭಕ್ತʼ ಪದ ಬಳಕೆ ಬಗ್ಗೆ ತಾರಾಮಾರಿ ಚರ್ಚೆಗಳು ಹುಟ್ಟಿಕೊಂಡವು. ಈ ಸಂಬಂಧ ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಬಿಜೆಪಿ ನಾಯಕರೊಬ್ಬರು ಮೆವಾನಿ ವಿರುದ್ಧ ದೂರು ಕೊಡುತ್ತಾರೆ. ಇದನ್ನು 'ತಲೆ ಹೋಗುವಷ್ಟು ತುರ್ತು' ಎಂದು ಪರಿಗಣಿಸಿ, ಚೂರೂ ತಡ ಮಾಡದೆ ಹೊರಟು ಗುಜರಾತ್‌ನ ಪಾಲನ್‌ಪುರ ತಲುಪಿ, ಮೆವಾನಿ ಅವರನ್ನು ಬಂಧಿಸಿ, ಬಂದಷ್ಟೇ ವೇಗದಲ್ಲಿ ಅಸ್ಸಾಂ ತಲುಪುತ್ತಾರೆ ಆ ರಾಜ್ಯದ ಪೊಲೀಸರು. ಏಪ್ರಿಲ್ 21ರಂದು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತದೆ ಕೊಕ್ರಝಾರ್‌ ನ್ಯಾಯಾಲಯ.

Image
JIGNESH MEVANI 7
ಗುಜರಾತ್‌ನ ಪಾಲನ್‌ಪುರದಲ್ಲಿ ಮೆವಾನಿ ಅವರನ್ನು ಬಂಧಿಸಿದ ಅಸ್ಸಾಂ ಪೊಲೀಸರು

ಮೂರು ದಿನದ ನಂತರ, ಟ್ವೀಟ್ ಪ್ರಕರಣದಲ್ಲೇನೋ ನ್ಯಾಯಾಲಯ ಮೆವಾನಿಗೆ ಜಾಮೀನು ಮಂಜೂರು ಮಾಡಿತು. ಆದರೆ, ಅಸ್ಸಾಂ ಪೊಲೀಸರು ಅಷ್ಟಕ್ಕೇ ಸುಮ್ಮನಿರಲು ತಯಾರಿರಲಿಲ್ಲ. ತಕ್ಷಣವೇ, ಮೆವಾನಿ ಅವರನ್ನು ಮತ್ತೆ ಬಂಧಿಸಿದರು. ಈ ಬಾರಿ, ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮಾಡಲಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ಬಾರ್ಪೆಟ್ಟಾ ನ್ಯಾಯಾಲಯ, ಸುಳ್ಳು ಎಫ್‌ಐಆರ್ ದಾಖಲಿಸಿದ ಕಾರಣಕ್ಕೆ ಅಸ್ಸಾಂ ಪೊಲೀಸರ ಮೈ ಚಳಿ ಬಿಡಿಸಿತು. ಅಲ್ಲದೆ, "ಅಸ್ಸಾಂ ಅನ್ನು 'ಪೊಲೀಸ್ ಸ್ಟೇಟ್' ಮಾಡಲು ಹೊರಟಿದ್ದೀರಾ?" ಎಂದು ಕಿಡಿಕಾರಿತು. ಪೊಲೀಸರ ಬಳಿ ಯಾವುದೇ ಉತ್ತರ ಇರಲಿಲ್ಲ.

ಅಸ್ಸಾಂ ಅಧ್ಯಾಯ ಮುಗಿದು, ಮೇ 2ರಂದು ದಿಲ್ಲಿಗೆ ತೆರಳಿದ ತಕ್ಷಣ ಮೆವಾನಿ ಮಾಡಿದ ಕೆಲಸ ಸುದ್ದಿಗೋಷ್ಠಿ. ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಅವರು ಆಡಿದ ಒಂದೊಂದು ಮಾತೂ, ಗುಜರಾತ್‌ನ ಬಿಜೆಪಿ ಸರ್ಕಾರದ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದವು. ಜೊತೆಗೆ, ಬಿಜೆಪಿ ನಾಯಕ ನರೇಂದ್ರ ಮೋದಿ ಸೇರಿದಂತೆ ಆ ಪಕ್ಷದ 'ಧೃತರಾಷ್ಟ್ರಾಲಿಂಗನ ರಾಜಕಾರಣ'ದ ಮುಖಗಳನ್ನು ಅನಾವರಣ ಮಾಡಿದವು.

ತಮ್ಮ ವಿರುದ್ಧದ ಬಂಧನ ಪ್ರಹಸನದ ಯೋಜನೆ ತಯಾರಾಗಿರುವುದು ಪ್ರಧಾನಮಂತ್ರಿ ಕಚೇರಿಯಲ್ಲಿ ಎಂದು ಮೆವಾನಿ ನೇರ ಆರೋಪ ಮಾಡಿದರು. "ಈ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಕರೆಕೊಡಿ ಎಂದು ಪ್ರಧಾನಿಯವರಿಗೆ ಮನವಿ ಮಾಡುವುದು ಯಾವ ಕಾನೂನಿನಡಿ ಅಪರಾಧ?" ಎಂಬುದು ಅವರ ಮುಖ್ಯ ಪ್ರಶ್ನೆಯಾಗಿತ್ತು.

Image
JIGNESH MEVANI 2
ದಿಲ್ಲಿಯ ಪತ್ರಿಕಾಗೋಷ್ಠಿಯ ವೇಳೆ, 'ಪುಷ್ಪ' ತೆಲುಗು ಸಿನಿಮಾದ  'ಮೈ ಫ್ಲವರ್ ನಹ್ಞೀಂ, ಫೈಯರ್‌ ಹ್ಞೂಂ, ಝುಕೇಗಾ ನಹ್ಞೀಂ...' (ನಾನು ಹೂವಲ್ಲ, ಬೆಂಕಿ, ತಲೆಬಾಗುವ ಪ್ರಶ್ನೆಯೇ ಇಲ್ಲ),” ಸಂಭಾಷಣೆಯ ದೃಶ್ಯ ಕಾಣಿಸಿದ ಜಿಗ್ನೇಶ್

"ನನ್ನ ಟ್ವೀಟ್‌ನಿಂದ ಅವರಿಗೆ ಉರಿ ಹತ್ತಿಕೊಂಡಿದ್ದು ಯಾಕೆಂದರೆ, ನಾನು ಬಳಸಿದ್ದ 'ಗೋಡ್ಸೆ ಭಕ್ತʼ ಎಂಬ ಪದ. ಈ ಪತ್ರಿಕಾಗೋಷ್ಠಿಯ ಮೂಲಕ ನಾನು ಪ್ರಧಾನಿಯವರಿಗೆ ಸವಾಲು ಹಾಕುತ್ತಿದ್ದೇನೆ. ಅಣ್ಣಯ್ಯಾ… ಕೆಂಪುಕೋಟೆಯ ವೇದಿಕೆಯ ಮೇಲಿಂದ ಒಮ್ಮೆ 'ಗೋಡ್ಸೆಗೆ ಧಿಕ್ಕಾರ' ಅಂತ ಘೋಷಣೆ ಹಾಕಿಬಿಡಿ. ಸತ್ಯಾಸತ್ಯಗಳು ಜನರೆದುರು ಬಯಲಾಗಲಿ," ಎಂದರು.

"ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಗುಜರಾತಿನಲ್ಲಿ 22 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಇದುವರೆಗೂ ಯಾವುದೇ ತನಿಖೆ ಇಲ್ಲ, ಯಾರನ್ನೂ ಬಂಧಿಸಿಲ್ಲ. ಕೆಲವು ತಿಂಗಳ ಹಿಂದೆ ಗುಜರಾತಿನ ಮುಂದ್ರಾ ಬಂದರಿನಲ್ಲಿ, ಒಂದು ಲಕ್ಷದ ಎಪ್ಪತ್ತೈದು ಸಾವಿರ ಕೋಟಿ ರುಪಾಯಿ ಮೌಲ್ಯದ ಮಾದಕವಸ್ತುಗಳ ದಾಸ್ತಾನು ಸಿಕ್ಕಿಬಿದ್ದಿತ್ತು. ಬಂದರಿನ ಮಾಲಿಕ ಗೌತಮ್‌ ಅದಾನಿ ಸಾಹೇಬರು. ಇವರ ಮೇಲೆ ಇದುವರೆಗೆ ಯಾವುದೇ ಎಫ್‌ಐಆರ್‌ ಆಗಿಲ್ಲ, ಯಾವುದೇ ಕೇಸೂ ಇಲ್ಲ, ತನಿಖೆಯೂ ಇಲ್ಲ, ಕನಿಷ್ಠಪಕ್ಷ ವಿಚಾರಣೆಗೂ ಕರೆಸಲಾಗಿಲ್ಲ. ಗುಜರಾತ್‌ ಬಿಜೆಪಿ ಪಕ್ಷದ ದಲಿತ ಸಮುದಾಯದ ಕಾರ್ಯಕರ್ತೆಯೊಬ್ಬರು, ಬಿಜೆಪಿ ಮಂತ್ರಿಯೊಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಬಗ್ಗೆ ಗುಜರಾತಿನ ವಿಧಾನಸಭೆಯಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಈ ಪ್ರಕರಣದಲ್ಲೂ ಯಾವುದೇ ಎಫ್‌ಐಆರ್‌ ಇಲ್ಲ, ತನಿಖೆಯಿಲ್ಲ, ಬಂಧನವೂ ಇಲ್ಲ..." ಎನ್ನುತ್ತ, ಗುಜರಾತ್ ಬಿಜೆಪಿ ಸರ್ಕಾರದ ಒಂದೊಂದೇ ಮುಖವಾಡ ಅನಾವರಣ ಮಾಡಿದರು. ಈ ಎಲ್ಲ ಪ್ರಕರಣಗಳಲ್ಲಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದರು.

ಬಿಜೆಪಿ ವಿರುದ್ಧ ಬೆಂಕಿಯ ಮಳೆ ಸುರಿಸಿದ ಸುದ್ದಿಗೋಷ್ಠಿ ನಂತರದ ಮೂರು ದಿನದಲ್ಲಿ (ಮೇ 5), ಗುಜರಾತ್‌ನ ಮೆಹ್ಸಾನಾ ನ್ಯಾಯಾಲಯದಿಂದ ತೀರ್ಪೊಂದು ಹೊರಬೀಳುತ್ತದೆ. 2017ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಮೆವಾನಿ ಸೇರಿದಂತೆ ಒಂಬತ್ತು ಮಂದಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 1,000 ರುಪಾಯಿ ದಂಡ ವಿಧಿಸಲಾಗುತ್ತದೆ. ಗುಜರಾತ್‌ನ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ ಪೊಲೀಸರ ಅನುಮತಿ ಇಲ್ಲದೆ ‘ಆಜಾದಿ ಮೆರವಣಿಗೆ’ ಮಾಡಿದ ಕಾರಣಕ್ಕೆ ಆಗ ದಾಖಲಾಗಿದ್ದ ಪ್ರಕರಣವಿದು.

Image
JIGNESH MEVANI 4

ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದು, ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿ, ‘ಅಭಿಯಾನ್’ ಎಂಬ ಗುಜರಾತಿ ನಿಯತಕಾಲಿಕೆಯಲ್ಲಿ ಮೂರು ವರ್ಷ ವರದಿಗಾರರಾಗಿ ಸೇವೆ ಸಲ್ಲಿಸಿ, ಊನಾದಲ್ಲಿ ಕ್ರಾಂತಿಕಾರಿ ಹೋರಾಟ (2017) ಸಂಘಟಿಸಿ, ಮರುವರ್ಷ ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಅಂಬೇಡ್ಕರ್‌ವಾದಿ ಜಿಗ್ನೇಶ್‌ ಮೆವಾನಿಯನ್ನು, ತನ್ನ ಧೃತರಾಷ್ಟ್ರಾಲಿಂಗನಕ್ಕೆ ಸುಲಭವಾಗಿ ಸಿಕ್ಕಿಸಬಹುದು ಎಂದು ಬಿಜೆಪಿ ಭಾವಿಸಿರುವಂತಿದೆ. ಆದರೆ, ದ್ವೇಷ ರಾಜಕಾರಣದ ಸಂಚುಗಳನ್ನು ಬಗ್ಗುಬಡಿಯಲು ಬೇಕಾದ ಎಲ್ಲ ಹತಾರಗಳೂ ಜಿಗ್ನೇಶ್ ಬಳಿ ಈಗಾಗಲೇ ಇವೆ ಎಂಬುದನ್ನು ಅವರ ದಿಲ್ಲಿ ಪತ್ರಿಕಾಗೋಷ್ಠಿ ಸಾರಿ-ಸಾರಿ ಹೇಳಿದೆ.

"ನೀವು ನನ್ನ ಮೇಲೆ ಏನೇ ಕ್ರಮ ತೆಗೆದುಕೊಳ್ಳಿ, ನಾನು ಜಗ್ಗುವುದಿಲ್ಲ. ನನ್ನ ಕೇಸಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೇಸನ್ನು ವಾಪಸ್‌ ಪಡೆಯಿರಿ ಅಂತ ಕೇಳೋದಿಲ್ಲ. ಬದಲಿಗೆ ನಾನು ಜೈಲಿಗೆ ಹೋಗಲು ತಯಾರಿದ್ದೇನೆ... ನಮ್ಮ ಗೆಳೆಯರು ಹೇಳುವಂತೆ, 'ಮೈ ಫ್ಲವರ್ ನಹ್ಞೀಂ, ಫೈಯರ್‌ ಹ್ಞೂಂ, ಝುಕೇಗಾ ನಹ್ಞೀಂ...' (ನಾನು ಹೂವಲ್ಲ, ಬೆಂಕಿ, ತಲೆಬಾಗುವ ಪ್ರಶ್ನೆಯೇ ಇಲ್ಲ),” ಎಂಬುದು ಜಿಗ್ನೇಶ್ ಸ್ಪಷ್ಟ ನುಡಿ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೇಳಿ, ಈ ಕತೆಯಲ್ಲಿ ಹೆಣ್ಣು ಕಪ್ಪೆ ಯಾವುದು ಮತ್ತು ಗಂಡು ಕಪ್ಪೆ ಯಾವುದು?

ಒಬ್ಬ ಹುಟ್ಟು ಹೋರಾಟಗಾರನಿಗೆ ಇರಬೇಕಾದ ಎಲ್ಲ ಬಗೆಯ ಸ್ಪಷ್ಟತೆ ಜಿಗ್ನೇಶ್ ಮೆವಾನಿ ಅವರಿಗಿದೆ. ಮುಂಬರಲಿರುವ ಗುಜರಾತ್ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಬಿಜೆಪಿ ತೆರೆಮರೆಯಲ್ಲಿ ನಿಂತು ಶುರು ಮಾಡಿಸಿರುವ ಈ ಪಗಡೆಯಾಟದಲ್ಲಿ, ಹಳೆಯ ಪ್ರಕರಣಗಳೆಂಬ ದಾಳಗಳು ಎಷ್ಟು ಗಟ್ಟಿಯಾಗಿ ಉಳಿಯಬಲ್ಲವು ಎಂಬ ಅನುಮಾನವಂತೂ ಇದ್ದೇ ಇದೆ; ಜೊತೆಗೆ, ಹಾಗೆ ದಾಳ ಉರುಳಿಸಿದಾಗೆಲ್ಲ ಜಿಗ್ನೇಶ್ ಬಿಜೆಪಿಗೆ ವಾಪಸು ಕೊಡಬಹುದಾದ ಪೆಟ್ಟುಗಳು ಕೂಡ ಕುತೂಹಲಕರ.

ನಿಮಗೆ ಏನು ಅನ್ನಿಸ್ತು?
2 ವೋಟ್