ಫೇಸ್‌ಬುಕ್‌ನಿಂದ | ನಿಸರ್ಗದ ಸದ್ದುಗದ್ದಲವಿಲ್ಲದ ಕುಶಲಿಗ 'ಮುಟ್ಟಿದರೆ ಮುರವ'

ಎಲ್ ಸಿ ನಾಗರಾಜ್ ಬರಹ | ಅದೊಂದಿನ, ಇದೇ ಈಗ ಮುಟ್ಟಿದರೆ ಮುರವ ಬಳ್ಳಿ ಕಿತ್ತು ಗುಡ್ಡೆ ಹಾಕಿದ ಹಾದಿಯಲ್ಲೇ ಟೀ ಕುಡಿಯುತ್ತ ಕುಂತಿರುವಾಗ, ಅಜ್ಜಿಯೊಬ್ಬರು ಕೋಲೂರಿಕೊಂಡು ಬಂದು ನನ್ನತ್ತ ನೋಡಿ, "ಯಾರು ನೀನು?" ಎಂದರು. "ನಾನ್ಯಾರಂಥ ನನಗೂ ಗೊತಿಲ್ಲ ಅಮ್ಮ... ಟೀ ಕುಡೀತೀರ?" ಎಂದೆ. ಆಮೇಲೊಂದು ಅಚ್ಚರಿಯ ಪ್ರಸಂಗ ನಡೆಯಿತು. ಅದೇನಂದ್ರೆ...

ನಡೆಯುವ ಹಾದಿಗೆ ಅಡ್ಡವಾಗಿ ಬೆಳೆದಿದ್ದ ಈ ಮುಟ್ಟಿದರೆ ಮುನಿ (ಮುಟ್ಟಿದರೆ ಮುರವ) ಬಳ್ಳಿಗಳನ್ನೇನೊ ಸವರಿ, ಬುಡ ಕಿತ್ತು ಗುಡ್ಡೆ ಹಾಕಿಬಿಟ್ಟೆ, ಆದರೆ, "ನಾನು ಮಾಡುತ್ತಿರುವುದಾದರೂ ಎಂಥದು?" ಅಂತ ಸವರುವ ಕುಡುಗೋಲನ್ನೂ, ಬುಡ ಮೀಟುವ ಗುದ್ದಲಿಯನ್ನೂ ಯುದ್ದಭೂಮಿಯಲ್ಲಿ ಬಿಲ್ಲು-ಬಾಣಗಳನ್ನು ಬಿಸಾಕುವ ಅರ್ಜುನನಂತೆ ಬಿಸಾಕಿ, ಮುಟ್ಟಿದರೆ ಮುರವ ಬಳ್ಳಿಯ ಬೇರುಗಳನ್ನು ನೋಡ್ತಾ ಕುಂತುಬಿಟ್ಟೆ.

ಈ ಮುಟ್ಟಿದರೆ ಮುರವ ಬಳ್ಳಿಯ ಬೇರುಗಳಲ್ಲಿರುವ ಚಿಟ್ಟೆ ಅಥವಾ ಪತಂಗದ ಮೊಟ್ಟೆಗಳಂಥ ಸರವನ್ನು ನೋಡಿ; ಈ ಮೊಟ್ಟೆಸರಕ್ಕೆ ರೈಜೋಬಿಯಂ ಮೊಟ್ಟೆಸರ ಅಥವಾ ರೈಜೋಬಿಯಂ ಗಂಟುಗಳು ಅಂತ ಕರೆಯಲಾಗುತ್ತದೆ. ಇದರಲ್ಲಿ ಇರುವ ಅಜಟೋಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾಗಳು ವಾಯುಮಂಡಲ ಮತ್ತು ಮಣ್ಣಿನ ನಡುವಿನ ಸಾರಜನಕ ವರ್ತುಲದಲ್ಲಿ (Nitrogen Cycle) ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹವಾಮಾನ ವೈಪರೀತ್ಯ ಕುರಿತ IPCC ಸಂಸ್ಥೆಯ ವರದಿ ಹೇಳುವಂತೆ ಮಣ್ಣಿನ ಫಲವಂತಿಕೆಗೆ ಜಾಗತಿಕ ಮಟ್ಟದಲ್ಲಿ ಬೇಕಾಗುವ ಸಾರಜನಕದ ಪೈಕಿ ವಾರ್ಷಿಕ 160 ಮಿಲಿಯನ್ ಟನ್ ಸಾರಜನಕವನ್ನು  ಇಂಥ ಅಜಟೊಬ್ಯಾಕ್ಟರುಗಳೇ ಉತ್ಪಾದಿಸುತ್ತಿವೆ.

Image
ಚಿತ್ರ ಕೃಪೆ: 'ಹೌಸ್ ಬ್ಯೂಟಿಫುಲ್' ಜಾಲತಾಣ

ಹೊರಸಿಪ್ಪೆಯನ್ನು ತೆಗೆದು ಗುದ್ದಿದರೆ ಯಾವ ಕಾಳುಗಳು ಎರಡು ಭಾಗವಾಗಿ ವಿದಳನಗೊಳ್ಳುವವೋ ಅಂಥ ಎಲ್ಲ ಸಸ್ಯದ ಬೇರುಗಳಲ್ಲೂ, ಈ ಮುಟ್ಟಿದರೆ ಮುರವ ಬಳ್ಳಿಯ ಬೇರುಗಳಲ್ಲಿ ಇರುವಂತೆಯೇ ಮೊಟ್ಟೆ ಸರಗಳಿರುವುದು ಬರಿಗಣ್ಣಿಗೇ ಕಾಣಿಸುತ್ತವೆ. ರಾಗಿ ಮತ್ತು ಬಿಳಿಜೋಳದ ಜೊತೆಗೆ ಅಕ್ಕಡಿಗಳಾಗಿ ಬೆಳೆಯುವ ತೊಗರಿ, ಅವರೆ, ಉದ್ದು, ಅಲಸಂದೆಗಳು, ಏಕಪ್ರಾಕಾರದಲ್ಲಿ ಬಿತ್ತನೆಯಾಗುವ ಹುರುಳಿ, ಮಡಕಿ, ಹೆಸರು ಹಾಗೂ ಕಡಲೆಕಾಳು ಬೆಳೆಗಳೆಲ್ಲವೂ ತಮ್ಮ ಬೇರುಗಳಲ್ಲಿ  ಈ ಮೊಟ್ಟೆಸರ ಅಥವಾ ಅಜಟೋಬ್ಯಾಕ್ಟರ್ ಗಂಟುಗಳನ್ನು ಹೊಂದಿದ್ದು, ವಾಯುಮಂಡಲದಿಂದ ಅಮೋನಿಯಂ ಅನಿಲವನ್ನು ಹೀರಿ ಅಜಟೊಬ್ಯಾಕ್ಟರ್‌ಗಳ ನೆರವಿನಿಂದ ಸಾರಜನಕವನ್ನಾಗಿ ಪರಿವರ್ತಿಸಿ ಮಣ್ಣಿನ ಬಹುಪೋಷಕಾಂಶ ಮಡುಗಳಿಗೆ ವರ್ಗಾಯಿಸುತ್ತವೆ.

ಅಂತೆಯೇ, ಹಿತ್ತಲಿನಲ್ಲಿ ಆಹಾರಕ್ಕಾಗಿ ಬೆಳೆದುಕೊಳ್ಳುವ ಮೆಂತ್ಯ, ಜಾನುವಾರುಗಳ ಮೇವಿಗಾಗಿ ಬೆಳೆದುಕೊಳ್ಳುವ - ಮೆಂತ್ಯ ಸೊಪ್ಪಿನಂತೆಯೇ ಕಾಣುವ ಕುದುರೆ ಮಸಾಲ (Lucern), ಹಳ್ಳದ ದಂಡೆಯಲ್ಲಿ ಬೆಳೆಯುವ ಹುಣಸೆ, ಹೊಂಗೆ ಇವೆಲ್ಲವೂ ಇದೇ ದ್ವಿದಳ ಸಸ್ಯಕುಟುಂಬಕ್ಕೆ ಸೇರಿದ್ದು. ಇವುಗಳಂತೆಯೇ ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಇರುವ ಕಂಡು-ಕೇಳರಿಯದ ಅನೇಕ ದ್ವಿದಳ ಸಸ್ಯ ಬಳ್ಳಿಗಳು ಅಪಾರ ಪ್ರಮಾಣದ ಅಮೋನಿಯಂ ಹೀರಿ ಸಾರಜನಕವಾಗಿ ಪರಿವರ್ತಿಸಿ ಮಣ್ಣಿಗೆ ಸ್ಥಿರೀಕರಿಸುತ್ತಿರುತ್ತವೆ.

ಈ ಲೇಖನ ಓದಿದ್ದೀರಾ?: ಫೇಸ್‌ಬುಕ್‌ನಿಂದ | ದಡ್ಡರಿಗೆ 'ಕತ್ತೆ' ಅನ್ನೋರೂ ಅವರೇ, ಬುದ್ಧಿ ಚುರುಕಾಗುತ್ತೆ ಅಂತ ಕತ್ತೆಹಾಲು ಕುಡಿಸೋರೂ ಅವರೇ!

ಈ ಭೂಮಂಡಲದ ಮೇಲೆ ಮನುಷ್ಯರ ಆಹಾರ ಉತ್ಪಾದನೆಯೆಂದರೆ ಅದು ಮೊದಲ ಹಂತದಲ್ಲಿ ನಿಸರ್ಗದ ಆಹಾರ ಉತ್ಪಾದನೆಯ ಅನುಕರಣೆಯೇ ಆಗಿತ್ತು. ಹೆತ್ತ ಮಗುವನ್ನು ನಾರಿನಿಂದ ಹೆಣೆದ ತೊಟ್ಟಿಲಿಗೆ ಹಾಕಿ ಮರದ ರೆಂಬೆಗಳಿಗೆ ಇಳಿಬಿಟ್ಟ ತಾಯಿ, ಗಂಡಸರು ಬೇಟೆಯಾಡಿ ಹಿಂತಿರುಗುವ ಹೊತ್ತಿಗೆ ಮಣ್ಣಿನಲ್ಲಿ ಯಾವ ಸಸ್ಯವು ಬೇರಾವ ಸಸ್ಯದ ಸಂಗಾತದಲ್ಲಿ ಸೊಂಪಾಗಿ ಬೆಳೆಯುತ್ತದೆ ಎಂಬುದನ್ನು ಗಮನಿಸಿ, ಅದನ್ನೇ ಅನುಕರಿಸಿ ಬೆಳೆಯಲು ಮುಂದಾಗುತ್ತಿದ್ದರು. ಯಾಕೆಂದರೆ, ಗೆಡ್ಡೆ-ಗೆಣಸಿಗೆ, ಬೇಟೆಗೆ ಅಂತ ಹೊರಟ ಗಂಡಸರ ದಾರಿಗಳು ಅನಿಶ್ಚಿತವಾಗಿದ್ದವು.

ನಿಸರ್ಗದ ಈ ಜೈವಿಕ ಸಂಗಾತ ನೂರಾರು, ಸಾವಿರಾರು ವರ್ಷಗಳ ಮನುಷ್ಯರ ನೋಡುವ ನೋಟ  ಮತ್ತು ಕಂಡ ಕಾಣ್ಕೆಗಳಾಗಿದ್ದವು. ಅಕ್ಕಡಿ ಬೇಸಾಯದಲ್ಲಿ ಸೊಂಪಾದ ಬೆಳವಣಿಗೆಗೆ  ಸಾರಜನಕವನ್ನು ಬಯಸುವ ರಾಗಿ ಮತ್ತು ಬಿಳಿ ಜೋಳದ ಸಂಗಾತಿಯಾಗಿ ಸಾರಜನಕವನ್ನು ಸಹಜವಾಗಿ ಉತ್ಪಾದಿಸುವ ತೊಗರಿ, ಅವರೆ, ಅಲಸಂದೆ ಬೆಳೆಸುವುದು - ಹೀಗೆ ಕಾಲಾನುಕ್ರಮದ ಅರಿವನ್ನು ಕಟ್ಟಿಕೊಳ್ಳುವ ಹಾದಿಯೇ ಆಗಿತ್ತು.

Image
ಚಿತ್ರ ಕೃಪೆ: 'ಪಿಕ್ಸ್‌ಬೇ' ಜಾಲತಾಣ

ಒಂದಾನೊಂದು ದಿನ, ಇದೇ ಈಗ ಮುಟ್ಟಿದರೆ ಮುರವ ಬಳ್ಳಿ ಕಿತ್ತು ಗುಡ್ಡೆ ಹಾಕಿದ ಹಾದಿಯಲ್ಲೇ ಟೀ ಕುಡಿಯುತ್ತ ಕುಂತಿರುವಾಗ ಹಣ್ಣು ವಯಸ್ಸಿನ ಅಜ್ಜಿಯೊಬ್ಬರು ಕೋಲೂರಿಕೊಂಡು ಬಂದು ನನ್ನತ್ತ ನೋಡಿ, "ಯಾರು ನೀನು?" ಎಂದರು.

"ನಾನ್ಯಾರಂಥ ನನಗೂ ಗೊತಿಲ್ಲ ಅಮ್ಮ... ಟೀ ಕುಡೀತೀರ?" ಎಂದೆ.

"ಬ್ಯಾಡ ಕಣ್ಲಾ ಮಗ..." ಎಂದು ಗರಿಕೆ ಹಸಲೆಯ ಮೇಲೆ ಕುಂತವರು, ಸಂಚಿ ಬಿಚ್ಚಿ ಕುಟ್ಟಾಣಿಗೆ ನಾಕು ಒಪ್ಪು ಅಡಕೆ ಹಾಕಿ ಕುಟ್ಟುತ್ತ, "ನಂಗೊಂದು ಸಹಾಯ ಮಾಡು ಮತ್ತೆ..." ಎಂದರು.

"ಆಯ್ತು ಹೇಳಿ..."

"ಏನಿಲ್ಲ... ಈ ಮುಟ್ಟಿದರೆ ಮುರುವನ ಬಳ್ಳಿ ಅದಲ್ಲ, ಅದರ ಬೇರನ್ನ ಮೊಟಕಿಸದ ಹಂಗೆ ಒಮ್ಮಕ್ಕಾಗಿ ಮಣ್ಣಿಂದ ಬಿಡಿಸಿಕೊಡು ಮತ್ತೆ..."

"ಓ ಅಷ್ಟೇನಾ! ಬಿಡಿಸಿಕೊಡ್ತೀನಿ ಬಿಡಿ. ಅದ್ಸರಿ, ಇದು ಈ ಮುರವನ ಬೇರು ನಿಮಗ್ಯಾಕೆ ಬೇಕಾಗಿತ್ತು?"

"ಅದೆಲ್ಲ ನಿಂಗೆ ಹೇಳೋ ಮಾತಲ್ಲ..."

ಈ ಲೇಖನ ಓದಿದ್ದೀರಾ?: ಫೇಸ್‌ಬುಕ್‌ನಿಂದ | ನಮೀಬಿಯಾದ ಸಿವಂಗಿಗಳು 'ನಮೋʼಬಿಯಾಕ್ಕೆ

ಎಲೆ-ಅಡಿಕೆ ಲೊಳವುತ್ತ ಕುಂತಿದ್ದ ಅಜ್ಜಿ, ಒಮ್ಮಕ್ಕೂ ಬೇರು ಇರುವ ಮುಟ್ಟಿದರೆ ಮುರುವನ ಬಳ್ಳಿಯನ್ನು, ಅದರ ಬೇರುಗಳಿಗೆ ಆತುಕೊಂಡಿದ್ದ ಮೊಟ್ಟೆಸರಗಳನ್ನು ಕಂಡವರೇ ಮುಖ ಅರಳಿಸಿ ನನ್ನತ್ತ ನೋಡಿ, "ಏನಿಲ್ಲ... ನನ್ನ ಮೊಮ್ಮಗಳು ಯಾಕೋ ಹೊಟ್ಟೆ ನೋವು ಅಂತಿದ್ದಳು. ಅದಕ್ಕೆ ಅವುಷ್ದಿ ಮಾಡಿ ಕುಡಿಸಕ್ಕೆ ಕಣ ಮಗ..." ಎಂದವರು ಕೋಲೂರಿ ನಡೆಯುತ್ತ ಹೊರಟುಹೋದರು.

ಆದರೆ ನಾನು, ಕಿತ್ತು ಗುಡ್ಡೆ ಹಾಕಿದ್ದು ನನ್ನ ನಡಿಗೆಗೆ ತೊಡರಾಗಿದ್ದ ಮುರವದ ಬಳ್ಳಿಗಳನ್ನು ಮಾತ್ರ. ಮಣ್ಣು ವಿಜ್ಞಾನದಲ್ಲಿ ಈ ಮುಟ್ಟಿದರೆ ಮುರವ ಅಥವಾ ಮುನಿವ ಬಳ್ಳಿಗೆ 'ಮಣ್ಣಿನ ಪರಿಸರ ವ್ಯವಸ್ಥೆಯ ಕುಶಲಿಗ (Soil Ecosystem Engineer)' ಎಂಬ ಉನ್ನತವಾದ ಹೆಸರಿದೆ.

ಈ ಬರಹವನ್ನು ಲೇಖಕರ ಪೂರ್ವಾನುಮತಿಯೊಂದಿಗೆ ಯಥಾವತ್ತಾಗಿ ಪ್ರಕಟಿಸಲಾಗಿದೆ
ನಿಮಗೆ ಏನು ಅನ್ನಿಸ್ತು?
0 ವೋಟ್