ದಾರಿಯಲ್ಲಿ ಸಿಕ್ಕ ಕತೆ - 3 | ಮಿಲನದ ನಂತರ ಗಂಡನ್ನು ಕೊಲ್ಲುವ ಹೆಣ್ಣು ಜೇಡ ಮತ್ತು ಪನ್ನಾ ಕಾಡಿನ 'ಮಂದಣ್ಣ' ಲಖನ್

ಕಾಡಿನ ದೊರೆಯಾಗುವ ಸಿಂಹವನ್ನು ಅದಕ್ಕಿಂತಲೂ ಬಲಶಾಲಿಯಾದ ಇನ್ನೊಂದು ಸಿಂಹ ಕೊಂದರೆ, ಅದು ಮೊದಲು ಮಾಡುವ ಕೆಲಸ - ಸತ್ತ ಸಿಂಹದ ಮರಿಗಳನ್ನು ಕೊಲ್ಲುವುದು... ಮುಂತಾಗಿ ಹೇಳುತ್ತಿರುವಾಗಲೇ, ಅಲ್ಲೆಲ್ಲೋ ಒಂದೆಡೆ ಕಪ್ಪು ಮುಖದ ಕೋತಿ ಕಿರುಚಿದ ರೀತಿಗೆ ಹುಷಾರಾದ ಅವರು, "ಇಲ್ಲೆಲ್ಲೋ ಹುಲಿ ಇದೆ..." ಅಂದರು. ತಕ್ಷಣ ಗಾಡಿ ನಿಲ್ಲಿಸಿದೆವು...

ಮಧ್ಯಪ್ರದೇಶಕ್ಕೆ ಸುತ್ತಲು ಹೋಗುವಾಗ ಪನ್ನಾ ಅಭಯಾರಣ್ಯ ನಮ್ಮ ಪಟ್ಟಿಯಲ್ಲಿರಲಿಲ್ಲ. "ಪ್ಲೀಸ್... ಮಿಸ್ ಮಾಡಲೇಬೇಡಿ," ಎಂದು ತಂಗಿಯ ಮಗ ಒತ್ತಾಯ ಮಾಡಿದ ಮೇಲೆ ಸುಮ್ಮನಿರಲಾಗಲಿಲ್ಲ. ಖುಜರಾಹೊ ದೇಗುಲಗಳನ್ನು ನೋಡಿ ಆಗಿತ್ತು, ಅಲ್ಲಿ ಇನ್ನೂ ಒಂದು ದಿನ ಬಾಕಿ ಇತ್ತು. ಮತ್ತೊಮ್ಮೆ ಅವನ್ನೇ ನೋಡುವ ಬದಲು ಇಲ್ಲಿಗೆ ಯಾಕೆ ಹೋಗಿಬರಬಾರದು ಎಂದುಕೊಂಡು, "ಪನ್ನಾ ಹುಲಿ ಅಭಯಾರಣ್ಯವನ್ನು ಈಗ ಪಟ್ಟಿಯಲ್ಲಿ ಸೇರಿಸಬಹುದೇ?" ಎಂದು ಕೇಳಿದೆ. "ಅದಕ್ಕಾಗಿ ಪ್ರತ್ಯೇಕ ಜೀಪು ಮತ್ತು ಗೈಡ್ ಬುಕ್ ಮಾಡಿಕೊಳ್ಳಬೇಕು, ಪ್ರತ್ಯೇಕವಾಗಿ ಹಣ ಪಾವತಿಸಬೇಕು," ಎಂದು ಹೇಳಿದರು. ಒಪ್ಪಿಕೊಂಡೆವು. ಬೆಳಗ್ಗೆ ಬೇಗ ಹೊರಡಬೇಕಾಗಿದ್ದರಿಂದ ಹೋಟೆಲ್‌ನವರಿಗೆ ಹೇಳಿದ್ದಕ್ಕೆ, ಉಪಾಹಾರ ಪ್ಯಾಕ್ ಮಾಡಿ ರಿಸೆಪ್ಷನ್‌ನಲ್ಲಿ ಕೊಟ್ಟಿದ್ದರು. ಆದರೆ, ಹೊರಟ ಮೇಲೂ ನನಗೆ ಮತ್ತು ಭಾರತಿಗೆ ಅದರ ಬಗ್ಗೆ ಹೆಚ್ಚಿನ ನಿರೀಕ್ಷೆ ಏನೂ ಇರಲಿಲ್ಲ. ಸುಮಾರು ಸಲ ಹೀಗೆ ಹೋಗಿ, ಅಲೆದು, ಎಲ್ಲೋ ಒಂದು ಜಿಂಕೆ, ಇನ್ನೆಲ್ಲೋ ಒಂದು ಕಡವೆ ನೋಡಿ ವಾಪಸಾಗಿದ್ದಿದೆ. ಆದರೂ ಬಿಡಲು ಮನಸ್ಸಿಲ್ಲ!

ಬೆಳಗ್ಗೆ ನಾಲ್ಕೂವರೆಗೆ ಎದ್ದು, ಪನ್ನಾ ತಲುಪುವಾಗ ಆರು ಗಂಟೆ. ಅಲ್ಲಿ ನಮಗೆ ಸಿಕ್ಕ ಗೈಡ್ ಲಖನ್. ಬುಂದೇಲಿ ಮಾತೃಭಾಷೆಯ, ಈ ಕೆಲಸದಲ್ಲಿ 21 ವರ್ಷ ಅನುಭವ ಇರುವ ಲಖನ್ ಅತ್ಯಂತ ಸಂಕೀರ್ಣ ವಿಷಯಗಳನ್ನೂ ಬದುಕಿಗೆ ಸಮೀಕರಿಸಿ ಸರಳವಾಗಿ ವಿವರಿಸುತ್ತಾರೆ. ಅವರಲ್ಲಿನ ಎಚ್ಚರ, ಹರಿತವಾದ ಬುದ್ಧಿಶಕ್ತಿ, ಅದನ್ನು ನಿರ್ಭಿಡೆಯಿಂದ ಹೇಳುವ ರೀತಿ ಸ್ವಲ್ಪ ಸಮಯದಲ್ಲೇ ನಮಗೆ ಅರಿವಾಯಿತು. ಕಾಡಿನ ಬಗ್ಗೆ ಅವರ ತಿಳಿವನ್ನು ನೋಡುತ್ತ ನನಗೆ, ತೇಜಸ್ವಿಯವರ 'ಮಂದಣ್ಣ' ನೆನಪಾದ! ಅವರೊಡನೆ ಮಾತನಾಡುತ್ತ, ಸುಮಾರು ನಾಲ್ಕೂವರೆ ಐದು ಗಂಟೆಗಳ ಕಾಲ ಕಾಡು ಸುತ್ತಿದ್ದು ನಾನು ಮರೆಯದ ಅನುಭವಗಳಲ್ಲಿ ಒಂದು.

* * *

AV Eye Hospital ad

ಎದುರಿಗೆ ಒಂದು ದೊಡ್ಡ ಕಾಡು. ನಾವು ಹೋಗಲು ಇದ್ದದ್ದು ಒಂದು ತೆರೆದ ಜೀಪ್. ಅದನ್ನು ನೋಡಿ ಆತಂಕ ಆದದ್ದು ಸುಳ್ಳಲ್ಲ! "ನಿಮಗೆ ಅವುಗಳನ್ನು ನೋಡುವ ಇಂಟರೆಸ್ಟ್ ಇರುವ ಹಾಗೆ ಅವಕ್ಕೆ ನಿಮ್ಮನ್ನು ನೊಡೋ ಆಸಕ್ತಿ ಇರಲ್ಲ ಬಿಡಿ ಮೇಡಂ. ಅವು ಡಿಸ್ಟೆನ್ಸ್ ಮೇಂಟೇನ್ ಮಾಡ್ತವೆ," ಎಂದು ಕಣ್ಣು ಮಿಟುಕಿಸಿ ನಗುತ್ತಲೇ ಲಖನ್, ಅರಣ್ಯದ ರೀತಿ-ನೀತಿಗಳನ್ನು ಹೇಳಲು ಪ್ರಾರಂಭಿಸಿದರು.

ಕಾಡಿನ ಒಳಗೆ ಹೋಗುವಾಗ ಸಣ್ಣಗೆ ಬೆಳಕು ಆರಂಭವಾಗಿತ್ತು. ಸುತ್ತಮುತ್ತಲೂ ವಿರಳವಾಗಿ ಕಂಡರೂ, ಕಣ್ಣು ಹಾಯಿಸಿದಾಗ ದಟ್ಟವಾದಂತೆ ಕಾಣುವ ಕಾಡು, ತೊಟತೊಟ ಎಂದು ಸದ್ದು ಮಾಡುತ್ತ ಬೀಳುವ ಇಬ್ಬನಿ, ಮೇಲಿಂದ ಆಗಾಗ ಉದುರುವ ಸಣ್ಣ-ಸಣ್ಣ ಹುಳುಗಳು, ಕಾಡಿನದೇ ಆದ ಸದ್ದು, ಅಲ್ಲಲ್ಲಿ ಎದುರಾಗುವ ಪ್ರಾಣಿ, ಪಕ್ಷಿ, ವಿಶಿಷ್ಟವಾದ ಮರಗಳು... ಲಖನ್‌ಗೆ ಅದರ ಮಾಮೂಲಿ ಹೆಸರು, ವೈಜ್ಞಾನಿಕ ಹೆಸರು ಎರಡೂ ಗೊತ್ತಿತ್ತು; ಎರಡನ್ನೂ ಹೇಳಿಯೇ ವಿವರಿಸುತ್ತಿದ್ದರು. ಆದರೆ, ಈಗ ನನಗೆ ಒಂದಾದರೂ ನೆನಪಿಲ್ಲ!

ಈ ಲೇಖನ ಓದಿದ್ದೀರಾ?: ದಾರಿಯಲ್ಲಿ ಸಿಕ್ಕ ಕತೆ - 2 | ತೇಜಸ್ವಿ ಕತೆಗಳ ಊರಿನಂಥದ್ದೊಂದು ನಿಗೂಢ ಊರು - ಓರ್‌ಚಾ

ಅಲ್ಲಿ ನಮಗೆ Black Widow Spider ಕಂಡುಬಂತು. ವೃತ್ತಾಕಾರದಲ್ಲಿ ಹೆಣೆದ ವಿಶಾಲವಾದ ಬಲೆ. ನಡುವಲ್ಲಿ ಕಪ್ಪು ಜೇಡ. ಸುಮಾರು ದೊಡ್ಡದೇ ಆದ ಜೇಡ. "ಮಿಲನದ ನಂತರ ಗಂಡನ್ನು ಕೊಲ್ಲುವ ಈ ಹೆಣ್ಣು ಜೇಡ ಹೆಣೆಯುವ ಬಲೆ ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ, ಸಣ್ಣ-ಸಣ್ಣ ಹಕ್ಕಿಗಳು ಕೂಡ ಅದರಲ್ಲಿ ಸಿಲುಕಿಕೊಳ್ಳುತ್ತವೆ," ಎಂದು ಅವರು ಹೇಳುವಾಗಲೇ, ನಿಂತಿದ್ದ ಅವರೂ ಬಲೆಗೆ ಸಿಲುಕಿದ್ದರು; ಅಂಟಿನಂತಹ ಆ ಬಲೆಯನ್ನು ಕೊಡವಿಕೊಳ್ಳುವುದು ಅವರಿಗೆ ಕಷ್ಟವೇ ಆಯಿತು ಎನ್ನಬೇಕು!

ಹತ್ತಿರದ ಬುಡಕಟ್ಟು ಜನಾಂಗಕ್ಕೆ ಸೇರಿದ ಅವರಿಗೆ ಸೋ ಕಾಲ್ಡ್ 'ಅಭಿವೃದ್ಧಿ' ಮತ್ತು ಅದರ ಸುತ್ತಲಿನ ಲೆಕ್ಕಾಚಾರದ ಬಗೆಗೆ ಇದ್ದ ಸಿಟ್ಟು ಅವರ ಮಾತಿನಲ್ಲೇ ಕಾಣುತ್ತಿತ್ತು. "ಕಾಡಿನ ನಡುವೆ ಇಷ್ಟು ದೊಡ್ಡ ರಸ್ತೆ ಯಾರಿಗೆ ಬೇಕು ಮೇಡಂ? ಎಷ್ಟು ದೊಡ್ಡ-ದೊಡ್ಡ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದುಬಿಟ್ಟರು. ನನ್ನ ಅಜ್ಜನ ಕಾಲದ ಮರಗಳು ಅವು! ಮತ್ತೆ ಅವುಗಳನ್ನು ಬೆಳೆಸಲು ಸಾಧ್ಯವೇ?" ಎಂದು ನಿಟ್ಟುಸಿರಿಟ್ಟರು. ಅವರ ಜೀವನಾನುಭವ, ಘೋಷಣೆಗಳಿಗೆ ಮರುಳಾಗದ ಅವರ ವಾಸ್ತವ ಪ್ರಜ್ಞೆ, ಓದಿಗೂ ಮೀರಿ ಬದುಕಿನ ಅನುಭವಗಳೊಂದಿಗೆ ಬಂದ ಅವರ ತಿಳಿವಳಿಕೆ ನೋಡಿದಾಗ ನನಗೆ ಅವರೊಡನೆ ಇನ್ನೂ ಮಾತನಾಡಬೇಕು ಅನ್ನಿಸುತ್ತಿತ್ತು. ಗಂಟೆಗಟ್ಟಲೆ ಕಾಡಿನಲ್ಲಿ ಸುತ್ತಾಡುವಾಗ ಮಾತೋ ಮಾತು. ಮೀಸಲಾತಿಯ ಬಗ್ಗೆ ಅವರು ಹೇಳಿದ ಒಂದು ಮಾತು ನನ್ನ ಬಾಯಿ ಕಟ್ಟಿಹಾಕಿತ್ತು. "ನೋಡಿ ಮೇಡಂ... ಮೀಸಲಾತಿ ಕೊಟ್ಟಿದ್ದಾರೆ ಎಂದು ಬೊಬ್ಬೆ ಹಾಕುತ್ತಾರೆ. ಆದರೆ, ರಾಜಕೀಯವಾಗಿ ಏನಾಗುತ್ತಿದೆ ನೋಡಿ; ಒಬ್ಬೊಬ್ಬರನ್ನೇ ಮೀಸಲಾತಿಯ ಪಟ್ಟಿಗೆ ಸೇರಿಸುತ್ತ ಹೋಗುತ್ತಿದ್ದಾರೆ. ಯಾರಿಗೆಂದು ಮೀಸಲಾತಿ ಶುರುವಾಯಿತೋ ಅವರು ಈಗಲೂ ಹೊಡದಾಡಲೇಬೇಕಾಗಿದೆ," ಎಂದು ಅದನ್ನು ಸರಳವಾಗಿ ವಿವರಿಸಿದರು.

ಮಾತು ಸಿಂಹದ ಕಡೆಗೆ ತಿರುಗಿತು. ಕಾಡಿನ ದೊರೆಯಾಗುವ ಒಂದು ಸಿಂಹವನ್ನು ಅದಕ್ಕಿಂತಲೂ ಬಲಶಾಲಿಯಾದ ಇನ್ನೊಂದು ಸಿಂಹ ಕೊಂದರೆ, ಅದು ಮೊದಲು ಮಾಡುವ ಕೆಲಸ - ಸತ್ತ ಸಿಂಹದ ಮರಿಗಳನ್ನು ಕೊಲ್ಲುವುದು. ಅದಕ್ಕೆ ತನ್ನದೇ ಸಂತಾನವನ್ನು ಮುಂದುವರಿಸುವ ಇಚ್ಛೆ ಇರುತ್ತದೆ. ಆದರೆ, ಸಿಂಹಿಣಿ ತನ್ನ ಮರಿಗಳನ್ನು ಮುಚ್ಚಿಡುತ್ತ, ಬಚ್ಚಿಡುತ್ತ ಅದರ ರಕ್ಷಣೆ ಮಾಡುತ್ತದೆ. ಚಿಂಕಾರ ಅಥವಾ ಕೃಷ್ಣಮೃಗದ ಸಮುದಾಯದಲ್ಲಿ ಹೆಣ್ಣು ಹೇಗೆ ಅತ್ಯಂತ ಬಲಶಾಲಿಯಾದ ಗಂಡನ್ನೇ ಆರಿಸಿಕೊಳ್ಳುತ್ತದೆ ಮತ್ತು ಆ ಮೂಲಕ ಮುಂದಿನ ಜನಾಂಗ ಹೆಚ್ಚು ಶಕ್ತಿಶಾಲಿಯಾಗಿರಬೇಕು ಎಂದು ಬಯಸುತ್ತದೆ ಎಂದು ಹೇಳುತ್ತಿರುವಾಗಲೇ, ಅಲ್ಲೆಲ್ಲೋ ಒಂದೆಡೆ ಕಪ್ಪು ಮುಖದ ಕೋತಿ ಕಿರುಚಿದ ರೀತಿಗೆ ಹುಷಾರಾದ ಅವರು, "ಇಲ್ಲೆಲ್ಲೋ ಹುಲಿ ಇದೆ..." ಅಂದರು. ತಕ್ಷಣ ಗಾಡಿ ನಿಲ್ಲಿಸಿದೆವು.

ಡವಗುಡುತ್ತಿದ್ದ ಎದೆ, ಅಪಾರ ನಿರೀಕ್ಷೆಗಳೊಂದಿಗೆ ಕಾದೇ ಕಾದೆವು. ಊಹ್ಞುಂ... ಸುಳಿವೇ ಇಲ್ಲ. ಮತ್ತೆ ಹೊರಟೆವು. ಇದ್ದಕ್ಕಿದ್ದಂತೆ, "ಲೆಪರ್ಡ್..." ಎಂದು ಅವರು ಪಿಸುಗುಟ್ಟಿ, ಬೆರಳು ಚಾಚಿ ತೋರಿಸಿದಾಗ ಎದೆ ಧಸಕ್ಕೆಂದಿತು. ನಮ್ಮೆದುರೇ ರಸ್ತೆ ದಾಟಿ, ಹುಲ್ಲಿನ ನಡುವೆ ಸದ್ದೇ ಇಲ್ಲದೆ ನುಸುಳಿದ ಅದು ಕೆಲವು ಕ್ಷಣಗಳು ಕಾಣಲೇ ಇಲ್ಲ. ಎಲ್ಲೂ ಏನೂ ಸದ್ದಿಲ್ಲ. ಕಾಡೆನ್ನುವ ಕಾಡೇ ಸ್ತಬ್ಧವಾದಂತೆ...

...ಅಷ್ಟರಲ್ಲಿ, "ರಪ್..." ಎಂದು ಹಾರಿದ ಚಿರತೆ ಏನನ್ನೋ ಹಿಡಿದು, ನೆಲಕ್ಕೆ ಅವುಚಿ ಹಿಡಿಯಿತು. ಜೀವಭಯದಲ್ಲಿ ಅದು ಹೇಗೆ ಒದ್ದಾಡುತ್ತಿತ್ತು ಎಂದರೆ, ಚಿರತೆಯ ಇಡೀ ದೇಹ ಅಲುಗಾಡುತ್ತಿತ್ತು. ನಾನು ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸುತ್ತಲೇ ಇದ್ದೆ. ಆಗ ಮೊಬೈಲ್ ತೆಗೆದುಕೊಂಡ ಲಖನ್, ಇಡೀ ದೃಶ್ಯವನ್ನು ರೆಕಾರ್ಡ್ ಮಾಡಿದರು. ಅದೊಂದು ಸಾಂಬರ್ ಜಿಂಕೆಮರಿ. ಕೆಲವು ಕ್ಷಣಗಳ ನಂತರ ಅದು ಸ್ತಬ್ಧವಾಯಿತು.‌ ಚಿರತೆ ಅದನ್ನು ಎಳೆದುಕೊಂಡು ಮರೆಯಾಯಿತು. "ಚಿರತೆ ನಾಚಿಕೆಯ ಪ್ರಾಣಿ. ಇದು ಸುಲಭಕ್ಕೆ ನೋಡಲು ಸಿಗುವುದಿಲ್ಲ..." ಲಖನ್ ಹೇಳಿದರು. ನಾವು ಅರಿವಿಲ್ಲದವರಂತೆ ಕೂತಿದ್ದೆವು.

ಇಲ್ಲಿ ಒಂದು ಘಟನೆಯನ್ನು ಕುರಿತು ಬರೆಯಬೇಕು... "ಪನ್ನಾ ತಪ್ಪದೆ ನೋಡಿ," ಎಂದಿದ್ದ ತಂಗಿಯ ಮಗ ಪುಟ್ಟ ಹುಡುಗನಾಗಿದ್ದಾಗ ನಡೆದ ಘಟನೆ ಅದು. ಅವನಿಗೆ ಊಟ ಮಾಡಿಸುವಾಗ, ನಿದ್ದೆ ಮಾಡಿಸುವಾಗ ಕತೆ ಇರಲೇಬೇಕು. ಒಮ್ಮೆ ಅವನಿಗೆ ಪುಣ್ಯಕೋಟಿಯ ಕತೆ ಹೇಳುತ್ತಿದ್ದೆ. ಪುಣ್ಯಕೋಟಿ, ಅದರ ಕರು, ಅವಳ ಗೆಳತಿಯರು ಎಲ್ಲರ ಕತೆ ಹೇಳುತ್ತಿದ್ದೆ. ಕತೆ ಮುಗಿದು, ಹುಲಿ ಬೆಟ್ಟದಿಂದ ಜಿಗಿದು, ಜೀವ ಬಿಟ್ಟು, ಪುಣ್ಯಕೋಟಿ ಮಗುವನ್ನು ಸೇರಿ, ಅದೊಂದು ಹ್ಯಾಪಿ ಎಂಡಿಂಗ್ ಎನ್ನುವಂತೆ ಕತೆ ಮುಗಿಸಿದ ಮೇಲೂ, ಅವನ ಕಣ್ಣುಗಳಲ್ಲಿ ಇನ್ನೂ ನೀರಿನ ಪಸೆ ಆರಿರಲಿಲ್ಲ. "ಆಮೇಲೆ ಹುಲಿಯ ಪಾಪು ಏನಾಯಿತಮ್ಮ?" ಎಂದ ಅವನ ಮಾತು ಆಮೇಲೆ ನಾನು ಯೋಚಿಸುವ ರೀತಿಯನ್ನೇ ಬದಲಿಸಿತ್ತು. ಜೊತೆಗೆ, ಪುಣ್ಯಕೋಟಿ ಕತೆಯ ನಾಯಕನಾಗಿ ಹುಲಿ ಕಂಡುಬಂದಿತ್ತು. ಹಾಗಾಗಿಯೇ, ಈಗ ಕಣ್ಣೆದುರು ನಡೆದ ಬೇಟೆಯಲ್ಲಿ ನಾನು ನ್ಯಾಯಾಧೀಶಳಾಗಲಿಲ್ಲ!

ಈ ಲೇಖನ ಓದಿದ್ದೀರಾ?: ದಾರಿಯಲ್ಲಿ ಸಿಕ್ಕ ಕತೆ - 1 | ಗೋಡೆ-ಬಾಗಿಲುಗಳಿಲ್ಲದ ತಾನಸೇನನ ಸಮಾಧಿ

ಆಮೇಲೆ ಜಿಂಕೆ, ಸಾರಂಗ, ಕಡವೆ, ಹದ್ದು, ತರಹೇವಾರಿ ಹಕ್ಕಿಗಳು, ಉಡ ಏನೆಲ್ಲ ಕಂಡುಬಂದವು! "ಕಾಡಿನ ಹಸಿರನ್ನೇ ದಿಟ್ಟಿಸಿ ನೋಡಿ, ಕಣ್ಣುಗಳಿಗೆ ಅದು ಅಭ್ಯಾಸವಾಗಬೇಕು. ಕಣ್ಣುಗಳು ಅದಕ್ಕೆ ಹೊಂದಿಕೊಳ್ಳಬೇಕು. ಆಮೇಲೆ ಪ್ರಾಣಿಗಳ ಇರುವಿಕೆ ನಿಮ್ಮ ಕಣ್ಣುಗಳಿಗೆ ಗೊತ್ತಾಗುತ್ತದೆ," ಎಂದ ಲಖನ್ ಮಾತು ಕೇಳುತ್ತಲೇ, ಅಲ್ಲೆಲ್ಲೋ ಅಡಗಿದ್ದ ಸುಮಾರು ದೊಡ್ಡದೇ ಆದ ಉಡವನ್ನು ತೋರಿಸಿದಾಗ, "ಅರೆ, ಶಭಾಷ್!" ಎಂದು ಲಖನ್ ಬೆನ್ನು ತಟ್ಟಿದಾಗ ಪರೀಕ್ಷೆ ಪಾಸು ಮಾಡಿದ ಹೆಮ್ಮೆ!

ಕಡೆಗೆ ಸಿಕ್ಕಿದ್ದು 'ಬಾಹುಬಲಿ' ಸಿನಿಮಾದಲ್ಲಿ ಇದ್ದಂತಹ ಒಂದು ಜಲಪಾತ. ಹೋಟೆಲಿನಿಂದ ತಂದ ತಿಂಡಿಯನ್ನು ಲಖನ್ ಮತ್ತು ಜೀಪಿನ ಚಾಲಕರೊಂದಿಗೆ ಹಂಚಿಕೊಂಡು ತಿಂದು ವಾಪಸಾದಾಗ ಮೊದಲು ಮಾಡಿದ ಕೆಲಸ ತಂಗಿಯ ಮಗನಿಗೆ ಫೋನ್ ಮಾಡಿದ್ದು!

ನಿಮಗೆ ಏನು ಅನ್ನಿಸ್ತು?
0 ವೋಟ್
eedina app