ದಾರಿಯಲ್ಲಿ ಸಿಕ್ಕ ಕತೆ - 4 | ಭೋಪಾಲದಲ್ಲಿ ಸಿಕ್ಕಿಯೂ ಸಿಕ್ಕದ ರಂಗಜಂಗಮ ಬಿ ವಿ ಕಾರಂತ

ಎಂಟು ಗಂಟೆಗಳ ಪ್ರಯಾಣ ಮಾಡಿ ಭೋಪಾಲ್‌ ತಲುಪಿದ್ದಾಯ್ತು. ಹೇಗಾದರೂ ಸರಿ ಅಂದೇ 'ಭಾರತ ಭವನ' ನೋಡಲೇಬೇಕಿತ್ತು. ಚಾಲಕರಿಗೆ ನಮ್ಮ ಧಾವಂತ ಕಂಡು ಕುತೂಹಲ, ಅಚ್ಚರಿ. "ಇಷ್ಟು ಪ್ರಯಾಣ ಮಾಡಿದ್ದೀರಿ, ಮೊದಲು ಹೋಟೆಲಿಗೆ ಹೋಗಿ ಸುಧಾರಿಸಿಕೊಳ್ಳಿ," ಎನ್ನುತ್ತಿದ್ದ ಅವರಿಗೆ ಬೇಗನೆ ಮನೆ ತಲುಪುವ ಅವಸರ. ಆದರೆ, ನಾವು ಕೇಳಬೇಕಲ್ಲ...!

ಯಾವುದೇ ಊರಿಗೆ ತಿರುಗಾಡಲು ಹೋಗುವ ಮೊದಲು ಆ ಊರಿನ ಬಗ್ಗೆ ವಿವರಗಳನ್ನು ಕೆದಕುವುದು, ನೋಡಬೇಕಾದ ಜಾಗಗಳನ್ನು ಪಟ್ಟಿ ಮಾಡಿಟ್ಟುಕೊಂಡು, ಅದನ್ನು ನಮ್ಮ ಪ್ರವಾಸದ ವ್ಯವಸ್ಥಾಪಕರಿಗೆ ಕಳಿಸುವುದು, ಅದಕ್ಕೆ ಮೊದಲು ಅವರಿಂದ ಪಟ್ಟಿ ಕೇಳಿ, ನಾವು ಬಿಟ್ಟ ಯಾವುದಾದರೂ ಜಾಗ ಅಲ್ಲಿದೆಯೇನೋ ಎಂದು ಹುಡುಕುವುದು, ಸ್ನೇಹಿತರನ್ನು ಆ ಊರುಗಳ ಬಗ್ಗೆ ವಿಚಾರಿಸುವುದು ಇವೆಲ್ಲ ನಡೆದೇ ಇರುತ್ತದೆ. ಹಾಗೆಯೇ, ಸ್ನೇಹಿತರೊಬ್ಬರೊಡನೆ ನಾವು ಭೋಪಾಲ್‌ಗೆ ಹೋಗುತ್ತಿದ್ದೇವೆ ಎಂದ ಕೂಡಲೇ ಅವರು ಹೇಳಿದ ಮೊದಲ ಮಾತು, 'ಭಾರತ ಭವನ!' ಹೌದು, ಭಾರತ ಭವನ - ರಂಗಪ್ರೀತಿಯ ಕನ್ನಡಿಗರೆಲ್ಲರಿಗೂ ಅದು ನಮ್ಮ ಕಾರಂತರು ಕಟ್ಟಿದ ಕನಸು... ಆ ಕನಸು ದುರಂತದಲ್ಲಿ ಪರ್ಯಾವಸಾನವಾಗಿದ್ದು ಮತ್ತೊಂದು ಕತೆ.

1982ರಲ್ಲಿ ಮಧ್ಯ ಪ್ರದೇಶ ಸರ್ಕಾರ ವಿವಿಧ ಕಲೆಗಳ ಒಂದು ಸಮುಚ್ಛಯವನ್ನು ಭೋಪಾಲ್ ಸರೋವರದ ಎದುರುಗಡೆ ಸ್ಥಾಪಿಸಿತು. ಅದೇ 'ಭಾರತ ಭವನ.' ಅನೇಕ ಆರ್ಟ್ ಗ್ಯಾಲರಿಗಳು, ವರ್ಕ್‌ಶಾಪ್‌ಗಳು, ಆಂಫಿ ಥಿಯೇಟರ್, ಆಡಿಟೋರಿಯಂಗಳು, ಭಾರತೀಯ ಕಾವ್ಯದ ಒಂದು ಲೈಬ್ರರಿ, ಮ್ಯೂಸಿಯಂ ಇತ್ಯಾದಿಗಳು ಅಲ್ಲಿವೆ. ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅದನ್ನು ಉದ್ಘಾಟಿಸಿದ್ದರು. ಸುಮಾರು 12 ಮಂದಿ ಸದಸ್ಯರ ಸ್ವಾಯತ್ತ ಸಂಸ್ಥೆ ಅದನ್ನು ನೋಡಿಕೊಳ್ಳುತ್ತದೆ.

ಅದರ ಮೊದಲ ದಿನಗಳಲ್ಲಿ ಅಲ್ಲಿದ್ದ 'ರಂಗಮಂಡಲ ರೆಪರ್ಟರಿ'ಯನ್ನು ರೂಪಿಸಿದ್ದು ನಮ್ಮ ಬಿ ವಿ ಕಾರಂತರು. ಅಲ್ಲಿನದೇ ದೇಸಿ ಫಾರ್ಮ್ ಮತ್ತು ಸಂಗೀತವನ್ನು ಅವರು ರಂಗಕ್ಕಿಳಿಸಿದವರು. ಅಲ್ಲೇ ಎಂದಲ್ಲ, ಅವರು ಕೆಲಸ ಮಾಡಿದಲ್ಲೆಲ್ಲ ಆ ಮಣ್ಣಿನ ಕಲೆಯನ್ನು ರಂಗಕ್ಕೇರಿಸಿದವರು ಅವರು.

ಬಾಬುಕೋಡಿ ವೆಂಕಟರಮಣ ಕಾರಂತ ಅಥವಾ ಬಿ ವಿ ಕಾರಂತ ಅಥವಾ ಅವರ ಸ್ನೇಹಿತರು, ಶಿಷ್ಯರು ಪ್ರೀತಿಯಿಂದ ಕರೆಯುತ್ತಿದ್ದ 'ಬಾಬಾ,' ನಾಟಕಕ್ಕಾಗಿ ಮನೆ ಬಿಟ್ಟು ಓಡಿದವರು. ಗುಬ್ಬಿ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಗುಬ್ಬಿ ವೀರಣ್ಣನವರು ಬನಾರಸ್‌ಗೆ ಓದಲು ಕಳಿಸುತ್ತಾರೆ. ಆಮೇಲೆ ಅವರು ರಾಷ್ಟ್ರೀಯ ನಾಟಕ ಶಾಲೆಗೆ (NSD) ಸೇರುತ್ತಾರೆ. ಮುಂದೆ ಅದೇ NSDಗೆ ನಿರ್ದೇಶಕರೂ ಆಗುತ್ತಾರೆ. ಈ ಜಂಗಮನ ಮುಂದಿನ ನಿಲ್ದಾಣ ಭಾರತ ಭವನದ ‘ರಂಗಮಂಡಲ.' ಕಹಿಘಟನೆಯೊಂದರ ಕಾರಣಕ್ಕೆ ಕಾರಂತರು ಅಲ್ಲಿಂದ ಹೊರಗೆ ಬರುತ್ತಾರೆ.

ಈ ಲೇಖನ ಓದಿದ್ದೀರಾ?: ದಾರಿಯಲ್ಲಿ ಸಿಕ್ಕ ಕತೆ - 3 | ಮಿಲನದ ನಂತರ ಗಂಡನ್ನು ಕೊಲ್ಲುವ ಹೆಣ್ಣು ಜೇಡ ಮತ್ತು ಪನ್ನಾ ಕಾಡಿನ 'ಮಂದಣ್ಣ' ಲಖನ್

ಮಾನಸಿಕವಾಗಿ ಕುಸಿದಿದ್ದ ಕಾರಂತರನ್ನು ಮತ್ತೆ ಮೇಲೇಳುವಂತೆ ಮಾಡಿದ್ದು ಮತ್ತೆ ಅದೇ ರಂಗಭೂಮಿ. 1989ರಲ್ಲಿ ಕರ್ನಾಟಕದಲ್ಲಿ ಅವರು 'ರಂಗಾಯಣ'ವನ್ನು ಕಟ್ಟುತ್ತಾರೆ, ರೆಪರ್ಟರಿ ನಡೆಸುತ್ತಾರೆ. 'ಬೆನಕ' ಅವರು ಕಟ್ಟಿದ ತಂಡ. ಅದರ ಪೂರ್ಣ ಹೆಸರು 'ಬೆಂಗಳೂರು ನಗರ ಕಲಾವಿದರು.' ಅವರ ನಾಟಕದ ಸಂಗೀತ ಮತ್ತು ಸಂಗೀತವನ್ನಷ್ಟೇ ಅಲ್ಲ, ಶಬ್ಧವನ್ನು ಸಹ ಅವರು ನಾಟಕಕ್ಕೆ ಒಗ್ಗಿಸುತ್ತಿದ್ದ, ಪಾತ್ರವಾಗಿಸುತ್ತಿದ್ದ ಬಗ್ಗೆ ಕತೆಗಳೇ ಇವೆ.

ಕಾರಂತರ ನಿರ್ದೇಶನದ 'ಹಯವದನ,' 'ಕತ್ತಲೆ ಬೆಳಕು,' 'ಏವಂ ಇಂದ್ರಜಿತ್,' 'ಸಂಕ್ರಾಂತಿ,' 'ಸತ್ತವರ ನೆರಳು,' 'ಹುತ್ತವ ಬಡಿದರೆ,' 'ಗೋಕುಲ ನಿರ್ಗಮನ' ಇತ್ಯಾದಿ ನಾಟಕಗಳು ತಮ್ಮದೇ ಕಾರಣಕ್ಕೆ ಇಂದಿಗೂ ಹೆಸರಾಗಿವೆ. 'ಹಯವದನ' ಮತ್ತು 'ಸತ್ತವರ ನೆರಳು' ಇಂದಿಗೂ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ದಾಸರ ಪದಗಳನ್ನು ಅವರು 'ಸತ್ತವರ ನೆರಳು' ನಾಟಕಕ್ಕೆ ಒಗ್ಗಿಸಿದ ರೀತಿ ಹೇಗಿದೆ ಎಂದರೆ, ಅವೆರಡೂ ಬೇರ್ಪಡಿಸಲೇ ಆಗದಷ್ಟು ಹೊಂದಿಕೊಂಡುಬಿಟ್ಟಿವೆ!

ಸುಮಾರು ಎಂಟು ಗಂಟೆಗಳ ಪ್ರಯಾಣ ಮಾಡಿ ನಾವು ಭೋಪಾಲ್‌ಗೆ ಬರುವಷ್ಟರಲ್ಲಿ, ಅಂದು ಹೇಗಾದರೂ ಸರಿ 'ಭಾರತ ಭವನ'ವನ್ನು ನೋಡಲೇಬೇಕಿತ್ತು ಅನ್ನಿಸಿತ್ತು. ಚಾಲಕರಿಗೆ ನಮ್ಮ ಅವಸರ, ಧಾವಂತ ಕಂಡು ಕುತೂಹಲ, ಅಚ್ಚರಿ. ಅವರೂ ಭೋಪಾಲ್‌ನವರೇ. "ಇಷ್ಟು ಪ್ರಯಾಣ ಮಾಡಿದ್ದೀರಿ, ಮೊದಲು ಹೋಟೆಲಿಗೆ ಹೋಗಿ ಸುಧಾರಿಸಿಕೊಳ್ಳಿ," ಎನ್ನುತ್ತಿದ್ದ ಅವರಿಗೂ, ಪಾಪ... ಮನೆಗೆ ಹೋಗುವ ಅವಸರ. ಆದರೆ, ನಾವು ಕೇಳುತ್ತಿಲ್ಲ! "ಇಷ್ಟೊತ್ತಿಗೆ ಅದು ಬಂದ್ ಆಗಿರುತ್ತದೆ ಬಿಡಿ," ಎಂದು ಸಹ ಹೇಳಿ ನಮ್ಮ ಉತ್ಸಾಹಕ್ಕೆ ತಣ್ಣೀರೆರೆಚಲು ಪ್ರಯತ್ನಿಸಿದರು. ಆದರೆ ನಾವು ಬಿಡಬೇಕಲ್ಲ! ಗೂಗಲ್‌ನಲ್ಲಿ ಹುಡುಕಿ, "ಇನ್ನೂ ಸಮಯವಿದೆ," ಎಂದೆವು. ವಿಪರೀತ ಟ್ರಾಫಿಕ್ಕಿನ ನಡುವೆ ನಾವು ಅಲ್ಲಿಗೆ ಹೋಗಿ ಮುಟ್ಟಿದಾಗ ಸಮಯ ಸಂಜೆ 7.15. 8 ಗಂಟೆಗೆ ಅದು ಬಂದ್ ಆಗುವ ಸಮಯ. ನಾನೂ ಭಾರತಿಯೂ ಅಕ್ಷರಶಃ ಒಳನುಗ್ಗಿದೆವು. ಯಾವಾಗ ನಮ್ಮ ಚಾಲಕರಿಗೆ ಇವರು ಬಿಡುವುದಿಲ್ಲ ಎನ್ನುವುದು ಗ್ಯಾರೆಂಟಿಯಾಯಿತೋ, ಮನೆಗೆ ಫೋನ್ ಮಾಡಿ ವಿಷಯ ತಿಳಿಸಿ, ನಮ್ಮ ಹುಚ್ಚನ್ನು ನೋಡುತ್ತ ನಿಂತರು.

ಈ ಲೇಖನ ಓದಿದ್ದೀರಾ?: ದಾರಿಯಲ್ಲಿ ಸಿಕ್ಕ ಕತೆ - 2 | ತೇಜಸ್ವಿ ಕತೆಗಳ ಊರಿನಂಥದ್ದೊಂದು ನಿಗೂಢ ಊರು - ಓರ್‌ಚಾ

ಒಳಗೆ ಹೆಜ್ಜೆಯಿಟ್ಟ ತಕ್ಷಣ, ಕಾರಂತರ ಚಿತ್ರ ಇರುವ ಬ್ಯಾನರ್ ಕಂಡು ನಮ್ಮ ಖುಷಿ ಮತ್ತಷ್ಟು ಹೆಚ್ಚಾಯಿತು. ಅದನ್ನು ತೆಗೆಯುತ್ತಿದ್ದರು. ಅವರನ್ನು ತಡೆದು, ನಾವು ಕಾರಂತರ ಮಣ್ಣಿನವರು ಎಂದು ಹೇಳಿ, ಅವಸರದಿಂದ ಅಲ್ಲಿ ಫೋಟೊ ತೆಗೆಸಿಕೊಂಡು ಥಿಯೇಟರ್ ನೋಡಲು ಹೋದೆವು. ಈಗ 'ಭಾರತ ಭವನ' ಏನೇನೋ ಆಗಿ ಬದಲಾಗಿದೆ, ಆದರೂ ನಮಗೆ ಅದನ್ನು ಕುರಿತ ಮೋಹ ಕಡಿಮೆಯಾಗಿಲ್ಲ. ಅಲ್ಲಿನ ಥಿಯೇಟರ್ ನೋಡಿದೆವು. ಅಲ್ಲಿ ಸಿಕ್ಕ ರಾಮ್ ಬಾಬು ಎನ್ನುವವರೊಡನೆ ಮಾತಾಡಿದೆವು. ನಾವು ಕರ್ನಾಟಕದವರು ಎಂದಾಗ ಅವರಿಗೂ ಖುಷಿಯಾಯಿತು. ಅವರೂ ಕಾರಂತರ ಜೊತೆಗೆ ಕೆಲಸ ಮಾಡಿದವರೇ. ನಮ್ಮಿಬ್ಬರಿಗೂ ಕಾರಂತರ ಆಫೀಸ್ ನೊಡುವ ಹಂಬಲ. ಅವರನ್ನು ಕೇಳಿದಾಗ ಅವರು ಹೇಳಿದ್ದು, "ಬಾಬಾ ಒಂದು ಕಡೆ ಎಲ್ಲೂ ಕೂರುತ್ತಲೇ ಇರಲಿಲ್ಲ! ಅವರಿಗೆ ಆಫೀಸು ಯಾಕೆ?"

ಆಮೇಲೆ ಸಿಕ್ಕವರು ಆನಂದ್. ಅವರಿಗೂ ನಮ್ಮ ಪ್ರವರ ಹೇಳಿದ್ದಾಯ್ತು, ಅವರೂ ಖುಷಿಪಟ್ಟರು. "ನಾನಿವತ್ತು‌ ಹೀಗಿರಲು ಕಾರಣ ಬಾಬಾ," ಅಂದರು. 'ಭಾರತ ಭವನ'ದಲ್ಲಿ ಕಾರಂತರ ಯಾವುದಾದರೊಂದು ಫೋಟೊ, ಉಬ್ಬುಶಿಲ್ಪ, ರೇಖಾಚಿತ್ರ ಏನಾದರೂ ಇದೆಯೇ ಎಂದು ಕೇಳಿದೆವು. 'ಭಾರತ ಭವನ'ದ ಹಿನ್ನೆಲೆಯಲ್ಲಿ ಕಾರಂತರ ಒಂದು ಫೋಟೊ ಬೇಕಾಗಿತ್ತು. ಆದರೆ, ನಮ್ಮ ಮಾತು ಕೇಳಿ ಅವರು ಮ್ಲಾನವಾದರು. ಇಡೀ 'ಭಾರತ ಭವನ'ದಲ್ಲಿ ಈ ರಂಗಜಂಗಮನ ಒಂದಾದರೂ ಪಟ ಇಲ್ಲ...! ಯಾಕೋ ಹೇಳಲಾಗದ ವಿಷಾದ. ಸುಮ್ಮನೆ ಸುತ್ತಾಡುತ್ತಿದ್ದಾಗ ಆನಂದ್ ಅವರು ಸರಸರ ಎಂದು ಬಂದು, ನಮ್ಮ ಕೈಗೆ ಎರಡು ಬ್ರೋಷರ್‌ಗಳನ್ನಿಟ್ಟರು. ಅದು ಕಾರಂತರ ನೆನಪಿನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ನಾಟಕೋತ್ಸವದ ಬ್ರೋಷರ್... ಅವರ ಕಣ್ಣುಗಳಲ್ಲಿ ಏನೋ ಖುಷಿ.

ವಿಷಾದದಲ್ಲಿದ್ದ ಮನಸ್ಸಿಗೆ ಏನೋ ಹೊಳೆದಂತಾಯಿತು. ಕಾರಂತರು ಇಂದಿಗೂ ಬದುಕಿರುವುದು ಅವರ ನಾಟಕಗಳಲ್ಲಿ... ಈಗ ನಮ್ಮ ಕೈಯಲ್ಲಿರುವ ಬ್ರೋಷರ್ ಅದಕ್ಕೆ ಸಾಕ್ಷಿ. ಜಂಗಮನ ಪಟವನ್ನು ನಾವೇಕೆ ಸ್ಥಾವರದಲ್ಲಿ ಹುಡುಕುತ್ತಿದ್ದೇವೆ? ಬಹುಶಃ ಅವರಿಗೂ ಅದು ಹೀಗೇ ಇರಬೇಕಿತ್ತೇನೋ ಅನ್ನಿಸಿ ನಿರಾಳವಾಯಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app