ಒಂದು ನಿಮಿಷದ ಓದು | ಒಡಿಶಾ ಬೌದ್ಧ ತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Odisha

ಒಡಿಶಾದಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸೋದ್ಯಮ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಆದರೆ, ಮೊದಲಿನ ವರ್ಷಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

ಒಡಿಶಾದ 'ಗೋಲ್ಡನ್ ಟ್ರಯಾಂಗಲ್' ಎಂದು ಹೆಸರಾಗಿರುವ ಭುವನೇಶ್ವರ್, ಪುರಿ, ಕೋನಾರ್ಕ್‌ಗೆ ಭೇಟಿ ನೀಡಿದ ಪ್ರವಾಸಿಗರಿಗೆ ಹೋಲಿಸಿದರೆ, 'ಡೈಮಂಡ್ ಟ್ರಯಾಂಗಲ್‌'ಗಳಾದ ಬೌದ್ಧ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಈ ಮೊದಲು ಹೀಗಾಗಿರಲಿಲ್ಲ ಎಂಬುದು ವಿಶೇಷ.

ಕೋವಿಡ್-19 ಸಾಂಕ್ರಾಮಿಕದ ಮೊದಲು ಬೌದ್ಧ ಪ್ರವಾಸಿ ತಾಣಗಳಾದ ರತ್ನಗಿರಿ, ಲಲಿತಗಿರಿ ಹಾಗೂ ಉದಯಗಿರಿಗೆ 2018ರಲ್ಲಿ 74,023 ದೇಶಿ ಪ್ರವಾಸಿಗರು ಮತ್ತು 911 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. 2019ರಲ್ಲಿ ಸುಮಾರು 1.26 ಲಕ್ಷ ದೇಶೀಯ ಮತ್ತು 1,041 ವಿದೇಶಿ ಪ್ರವಾಸಿಗರು ಪ್ರವಾಸ ಕೈಗೊಂಡಿದ್ದರು. 2020ರ ಜನವರಿಯಿಂದ ಮಾರ್ಚ್‌ವರೆಗೆ 12,733 ದೇಶಿ ಪ್ರವಾಸಿಗರು ಮತ್ತು 243 ಅಂತಾರಾಷ್ಟ್ರೀಯ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿದ್ದರು.

ಒಡಿಶಾದಲ್ಲಿ ಕನಿಷ್ಠ 200 ಬೌದ್ಧ ಮಂದಿರಗಳಿವೆ. ಈ ತ್ರಿಕೋನ ಸ್ಥಳಗಳಲ್ಲಿ ಲಲಿತಗಿರಿಯು ಅತ್ಯಂತ ಹಳೆಯದಾಗಿದ್ದು, ಒಂದನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಉದಯಗಿರಿ ಮತ್ತು ರತ್ನಗಿರಿ ನಂತರದಲ್ಲಿ ಸ್ಥಾಪಿತವಾದವು. ಈ ಮೂರು ತಾಣಗಳಲ್ಲಿ ಬೌದ್ಧ ವಿಹಾರಗಳು, ಸ್ಥೂಪಗಳು ಹಾಗೂ ಶಿಲ್ಪಕಲೆಯ ಅವಶೇಷಗಳಿವೆ.

ಮೂಲಭೂತ ಸೌಕರ್ಯಗಳ ಸಂಪೂರ್ಣ ಕೊರತೆ ಈ ಮೂರೂ ತಾಣಗಳಿಗೆ ಹಿನ್ನಡೆ ಆಗುವಂತೆ ಮಾಡಿದೆ. ಪ್ರವಾಸಿ ಸ್ಥಳಗಳಲ್ಲಿ ಉಪಾಹಾರ ಗೃಹ, ಸ್ನಾನಗೃಹಗಳ ವ್ಯವಸ್ಥೆ ಸರಿಯಾಗಿಲ್ಲ ಎಂಬ ಆರೋಪಗಳಿವೆ. “ರತ್ನಗಿರಿಯಲ್ಲಿ ನವೀಕರಣ ಕಾರ್ಯ ಪ್ರಾರಂಭವಾಗಿದೆ. ಉದಯಗಿರಿಯಲ್ಲಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ,” ಎಂದಿದ್ದಾರೆ ಜಾಜ್ಪುರ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಹಿಮಾಲಯ ತ್ರಿಪಾಠಿ.

ನಿಮಗೆ ಏನು ಅನ್ನಿಸ್ತು?
1 ವೋಟ್