ಫೇಸ್‌ಬುಕ್‌ನಿಂದ | ತಿಕ್ಕಿದಷ್ಟೂ ಹೊಳೆಯುವ ಅಪ್ಪಟ ಚಿನ್ನ ಪಾ ರಂಜಿತ್

ಹರೀಶ್ ಗಂಗಾಧರ್ ಬರಹ | ಪಾ ರಂಜಿತ್ ಚಿತ್ರೋದ್ಯಮಕ್ಕೆ ಕಾಲಿಟ್ಟು ದಶಕ ಕಳೆದಿದೆ. ಏಪ್ರಿಲ್‌ನಲ್ಲಿ ರಂಜಿತ್ ಆಯೋಜಿಸಿದ್ದ 'ದಲಿತ ಇತಿಹಾಸ ಮಾಸ'ದಲ್ಲಿ ನೂರಾರು ಜನ ಭಾಗವಹಿಸಿದ್ದರು. ಕಾನ್ಸ್ ಸಿನಿ ಉತ್ಸವದಲ್ಲಿ ಕಾಣಿಸಿಕೊಂಡದ್ದಾಯ್ತು. ಇದೀಗ, ಬುಡಕಟ್ಟು ಜನಾಂಗದ ನಾಯಕನ ಕತೆ ಆಧಾರಿತ ಚಿತ್ರದ ಮೂಲಕ ಬಾಲಿವುಡ್ಡಿನತ್ತ ಪಯಣ ಶುರು

ಪಾ ರಂಜಿತ್‌ನಿಗೆ ಅವನವ್ವ, "ನಿನ್ ಜಾತಿ ಬಗ್ಗೆ ಎಲ್ಲೂ ಹೇಳಿಕೊಳ್ಬೇಡ," ಅಂತ ಆಗಾಗ ನೆನಪಿಸುತ್ತಿದ್ದರಂತೆ. ತಾಯಿಯ ಈ ಕಿವಿಮಾತುಗಳ ಹೊರತಾಗಿಯೂ ಇಲ್ಲಿಯವರೆಗೆ ಇಡಿಯ ಚಿತ್ರರಂಗದಲ್ಲಿ ತೀರಾ ವಿರಳವೆನ್ನಬಹುದಾದ ಧೈರ್ಯವನ್ನೇ ತೋರಿದ, ತನ್ನ ದಲಿತ ಅಸ್ಮಿತೆಯನ್ನೇ ತನ್ನ ಚಿತ್ರಗಳಲ್ಲಿ ಕೇಂದ್ರವಾಗಿಸಿಕೊಂಡ ರಂಜಿತ್ ಭಾರತದ ಮೊದಲ ಕಮರ್ಶಿಯಲಿ ಯಶಸ್ವಿ ಚಿತ್ರ ನಿರ್ದೇಶಕ/ ನಿರ್ಮಾಪಕ. ದಶಕಗಳ ಸಕಾರಾತ್ಮಕ ಕಾನೂನು ಕ್ರಮ ಮತ್ತು ತಾರತಮ್ಯ ನಿಷೇಧ ಕಾಯ್ದೆಗಳಿದ್ದರೂ ದೇಶದಲ್ಲಿ ಆಳವಾಗಿ ಬೇರೂರಿರುವ ಜಾತಿ ಆಧಾರಿತ ದಬ್ಬಾಳಿಕೆಗೆ ಕನ್ನಡಿ ಹಿಡಿಯುವ ರಂಜಿತ್ ಚಿತ್ರಗಳಲ್ಲಿ ದಲಿತರೇ ಮುಖ್ಯ ಪಾತ್ರಧಾರಿಗಳು.

ಅಮೆರಿಕದ ನಾಗರಿಕ ಹಕ್ಕು ಚಳವಳಿ ಕಾಲದ ಕಪ್ಪು ಕಲಾವಿದರಿಂದ ಪ್ರೇರಿತರಾದ ರಂಜಿತ್, ತಮಿಳುನಾಡಿನಲ್ಲಿ ಈ ಹಿಂದೆ 'ಅಸ್ಪೃಶ್ಯರೆಂದು' ಕರೆಸಿಕೊಳ್ಳುತ್ತಿದ್ದ ದಲಿತ ಸಮುದಾಯದ ಸಬಲೀಕರಣಕ್ಕೆ ಪಣ ತೊಟ್ಟು, ವೇಗವಾಗಿ ಜನಪ್ರಿಯವಾಗುತ್ತಿರುವ ಸಾಂಸ್ಕೃತಿಕ ಕೇಂದ್ರವೊಂದನ್ನು ಸೃಷ್ಟಿಸಿದ್ದಾರೆ. ಇಲ್ಲಿಯವರೆಗೆ ಕೆಳಜಾತಿಯವರನ್ನ ಕಡೆಗಣಿಸಿದ ಅಥವಾ ಟೈಪ್ ಕಾಸ್ಟ್ ಮಾಡಿದ ಜನಪ್ರಿಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬದಲಾಯಿಸುವುದೇ ಇದರ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಂಜಿತ್ ಹಲವು ದಿಟ್ಟ ಹೆಜ್ಜೆಗಳನಿಟ್ಟಿದ್ದಾರೆ- ದಲಿತ ಲೇಖಕ ಮತ್ತು ಕವಿಗಳಿಗೆ ಮುದ್ರಣಾಲಯ, ಜಾತಿ ವಿರೋಧಿ ಮ್ಯೂಸಿಕ್ ಬ್ಯಾಂಡ್, ದಲಿತ ಬದುಕು - ಆಹಾರಾಭ್ಯಾಸವನ್ನು ತೋರಿಸುವ ಯುಟ್ಯೂಬ್ ಚಾನೆಲ್...

"ನನ್ನ ಆಹಾರಾಭ್ಯಾಸಗಳು, ಸಂಗೀತ, ಕಲೆಯೆಲ್ಲವೂ ಜನಪ್ರಿಯ ಸಂಸ್ಕೃತಿಯಲ್ಲಿ ಬಿಂಬಿತವಾಗುವುದಕ್ಕಿಂತ ವಿಭಿನ್ನವಾಗಿವೆ. ಇದು ಜಾತಿಯತೆ ಕುರಿತು ಮಾತನಾಡುವುದಲ್ಲ. ಇದು ನನ್ನ ಸಂಸ್ಕೃತಿಯ ಮೇಲೆ ಚೆಲ್ಲುವ ಬೆಳಕು," ಎಂದು ತಮ್ಮ ಚೆನ್ನೈ ಆಫೀಸ್‌ನಲ್ಲಿ ಕುಳಿತು ಅಭಿಮಾನದ ಮಾತುಗಳನ್ನಾಡುತ್ತಾರೆ ರಂಜಿತ್.

ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ. ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟಿನಿಂದ ನಿರ್ಧರಿಸಲ್ಪಡುತ್ತವೆ. ಮೀಸೆ ಬೆಳೆಸಿಕೊಂಡ ಅಥವಾ ಮದುವೆಯಲ್ಲಿ ಕುದುರೆ ಏರಿದನೆಂಬ ತೀರಾ ಕ್ಷುಲ್ಲಕ ಎನ್ನಬಹುದಾದ ಕಾರಣಗಳಿಗಾಗಿ ಮೇಲ್ಜಾತಿಯಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ನಾನಾ ರೀತಿಯ ಹಿಂಸೆಗೆ ಒಳಗಾಗಿದ್ದಾರೆ. ಇರಲು ನೆಲೆ, ಮೂಲಭೂತ ಸೌಕರ್ಯ ಅಥವಾ ಅಂತರ್ಜಾತಿ ವಿವಾಹಗಳಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾಗುತ್ತದೆ. ಈ ದೇಶದಲ್ಲಿ ಜಲಗಾರರಾಗಿ, ಜಾಡಮಾಲಿಗಳಾಗಿ, ಹೊಲಸು ಗುಂಡಿಗಳನ್ನು ತನ್ನ ಕೈಗಳಿಂದ ತೊಳೆದು ಬದುಕಬೇಕಾದಂತಹ ಒತ್ತಡವನ್ನು ಸಮಾಜ ಅವರ ಮೇಲೆ ಹೇರಿದೆ. ಜಾತಿ ಪದ್ಧತಿ ಅನ್ನೋದು ಬರಿಯ ಭಾರತದಲ್ಲಿ ಮಾತ್ರ ಬಲಿಷ್ಠವಾಗಿರದೆ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲೂ ಆಳವಾಗಿ ಬೇರೂರಿದೆ. ಜಾತಿ ಎಂಬ ಪಿಡುಗನ್ನು ಪ್ರಪಂಚಾದ್ಯಂತ ನೆಲೆಸಿರುವ ಇಂಡಿಯನ್ ಡಯಾಸ್ಪೋರಗಳಲ್ಲಿ ಕಾಣಬಹುದು.  

“ಹೋರಾಟವೆಂಬುದು ದಲಿತನ ಪ್ರತೀ ದಿನದ ಅನುಭವ. ಅದೇ ಅವನ ಬದುಕು. ನನ್ನ ಬದುಕು ಕೂಡ ಒಂದು ಪ್ರಬಲ ಪ್ರತಿರೋಧ. ನಾನಷ್ಟೇ ಅಲ್ಲ, ನನ್ನವರೆಲ್ಲ ಶೋಷಣೆ, ದಬ್ಬಾಳಿಕೆ ಹಾಗು ತಾರತಮ್ಯ ಕುರಿತಾದ ಕತೆಗಳ ಉಗ್ರಾಣ,” ಎನ್ನುತ್ತಾರೆ ರಂಚಿತ್.

Image

ರಂಜಿತ್ ಚಿತ್ರೋದ್ಯಮಕ್ಕೆ ಕಾಲಿಟ್ಟು ದಶಕ ಕಳೆದಿವೆ. ಅಮೆರಿಕದ 'ಕಪ್ಪು ಇತಿಹಾಸ ಮಾಸ'ದಿಂದ ಪ್ರೇರಿತರಾಗಿ ಏಪ್ರಿಲ್ ತಿಂಗಳಲ್ಲಿ ರಂಜಿತ್ ಆಯೋಜಿಸಿದ್ದ 'ದಲಿತ ಇತಿಹಾಸ ಮಾಸ'ದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅದೊಂದು ಕಲಾ ಹಬ್ಬ, ಸಂಭ್ರಮ ಮತ್ತು ಅದ್ದೂರಿ ಉತ್ಸವ. ರಂಜಿತ್ ಕಾನ್ಸ್ ಸಿನಿ ಉತ್ಸವದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು ಕೂಡ. ಮುಂಬರುವ ದಿನಗಳಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ನಾಯಕನ ಕತೆ ಆಧಾರಿತ ಚಿತ್ರದ ಮೂಲಕ ಬಾಲಿವುಡ್ಡಿಗೂ ಪಾದಾರ್ಪಣೆ ಮಾಡಲಿದ್ದಾರೆ.

ನಾನಾ ವೇದಿಕೆಗಳಲ್ಲಿ ತಮ್ಮ ಕತೆಗಳನ್ನು ಹಂಚಿಕೊಳ್ಳಲು ಹಲವರಿಗೆ ರಂಜಿತ್ ಉತ್ತೇಜಿಸಿ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ರಂಜಿತ್ ಸೃಷ್ಟಿಸಿದ ಅಧಿಕೃತ ಯೌಟ್ಯೂಬ್ ಚಾನೆಲ್- 'ನೀಲಂ ಸೋಶಿಯಲ್' ಕಚೇರಿಯಲ್ಲಿ, ಇಪ್ಪತ್ತೊಂದು ವರ್ಷದ ಹುಡುಗಿ ಅಭೀಷ ತನ್ನ ಜನರ ಬಗ್ಗೆ ರ‍್ಯಾಪ್ ಸಾಂಗೊಂದನ್ನು ಹಾಡುತ್ತಿದ್ದಾಳೆ:

"ಅವರ ಕಣ್ಣೋಟದಿಂದ ದೂರಾಗಿ
ನೆಲೆಸಿದವು ಊರ ಹೊರಗೆ ಯಾರಿಗೂ ಬೇಡವಾಗಿ
ನಮ್ಮ ನಾಡಿನಲ್ಲೇ ಬದುಕಿಬೇಕಾಯಿತು ನಿರಾಶ್ರಿತರಾಗಿ
ಹಕ್ಕುಗಳ ಕಿತ್ತುಕೊಂಡಿರಿ ಎಂದು ಬಾಳಲಿಲ್ಲ ನಾವು ನಿಮ್ಮಲ್ಲಿ ಒಂದಾಗಿ..."

ದಲಿತರು ಪ್ರತಿಭಟನೆಗಳಲ್ಲಿ ಬಳಸುವ ವಾದ್ಯಗಳ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಾಳೆ ಅಭೀಷ. ಚೆನ್ನೈ ನಗರದ ಸ್ಲಂವಾಸಿಗಳನ್ನು ಏಕಾಏಕಿ ಹೊರಹಾಕಿದರ ಬಗ್ಗೆ ಕತೆಗಳನ್ನು ಬರೆದಿದ್ದಾಳೆ. ಮೇಲಿನ ರ‍್ಯಾಪ್ ಸಾಂಗಿಗೆ ಈ ಕತೆಗಳಿಗೆ ಸ್ಫೂರ್ತಿಯಾದವು.

"ನಾ ಹಾಡಿದ ಹಾಡು, ಬರೆದ ಕತೆಗಳು ಕೆಲ ಜನರಿಗಷ್ಟೇ ತಲಪಬಹುದು. ಸಣ್ಣ ಅಲೆಗಳನ್ನಾದರೂ ಸೃಷ್ಟಿಸಲು ನಾನು ಇವುಗಳನ್ನು ಮಾಡಲೆಬೇಕು... ನನ್ನ ದನಿ ಮುಖ್ಯ. ನನ್ನ ಕೆಲಸ ಮುಖ್ಯ. ನಾನು ಈ ಕೆಲಸ ಮಾಡದಿದ್ದರೆ ಬೇರಾರೂ ಮಾಡರು..." ಎನ್ನುತ್ತಾಳೆ ಅಭೀಷ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ಊರಿನಲ್ಲಿ ಬೈಗುಳವಾಗಿದ್ದ ಜಾತಿಯ ಹೆಸರೊಂದು ಹೋರಾಟದಲ್ಲಿ ಆತ್ಮಾಭಿಮಾನವಾದ ಕತೆ

ರಂಜಿತ್ ಆರಂಭಿಸಿದ ಚಾನೆಲ್‌ನಲ್ಲಿ ತುಂಬಾ ಜನಪ್ರಿಯವಾದ ಕಾರ್ಯಕ್ರಮ ದಲಿತರ ಆಹಾರದ್ದು. ಇತ್ತೀಚಿನ ಎಪಿಸೋಡ್ - ದನದ ಮಾಂಸದಿಂದ ಮಾಡಿದ ಭಕ್ಷ್ಯದ ಬಗ್ಗೆ ಇತ್ತು. ಶತಶತಮಾನಗಳಿಂದ ಬೇರೆಲ್ಲರಿಂದ ಬೇರ್ಪಟ್ಟು ಬಾಳಿದ ದಲಿತ ಸಮುದಾಯಕ್ಕೆ ದನದ ಮಾಂಸ ಮಹತ್ವದ ಆಹಾರ. ದನದ ಮಾಂಸದ ಮೇಲೀಗ ನಿಷೇದ ಹೇರಲಾಗಿದೆ. ಗೋವು ಹಿಂದೂಗಳಿಗೆ ಪವಿತ್ರವಾದುದು. ಸಾಕಷ್ಟು ದಲಿತರು ಗೋವಿನ ಹೆಸರಲ್ಲಿ ಹಿಂಸೆ ಅನುಭವಿಸಿದ್ದಾರೆ. ಮತ್ತೊಂದೆಡೆ, ದಲಿತರನ್ನು ಹೊರತುಪಡಿಸಿ ವರರು ಕುದುರೆ ಏರಿ ಮೆರವಣಿಗೆ ಹೋಗುವುದು ಭಾರತದಲ್ಲಿ ಸಂಪ್ರದಾಯ. ದಲಿತರು ಕುದುರೆ ಏರಿದಾಗ ಅಹಿತಕರ ಘಟನೆಗಳು ನೆಡೆದುಹೋಗಿವೆ. 

ಹಲವಾರು ಸ್ಟುಡಿಯೋಗಳಿಗೆ ತವರಾಗಿರುವ ಚೆನ್ನೈನ ಮತ್ತೊಂದು ಮೂಲೆಯಲ್ಲಿ ರಂಜಿತ್ 'ಕೂಗೈ' ಎಂಬ ಗ್ರಂಥಾಲಯ ಕಟ್ಟಿದ್ದಾರೆ. ಕೂಗೈ ಎಂದರೆ ತಮಿಳಿನಲ್ಲಿ ಗೂಬೆ ಎಂದರ್ಥವಾದರೂ, ಜಾತಿ ದೌರ್ಜನ್ಯವನ್ನು ಉಗ್ರವಾಗಿ ವಿರೋಧಿಸಿದ ಜನಪ್ರಿಯ ತಮಿಳು ಕಾದಂಬರಿ 'ಕೂಗೈ' ಶೀರ್ಷಿಕೆಯನ್ನೇ ಗ್ರಂಥಾಲಯಕ್ಕಿಡಲಾಗಿದೆ.

"ಸಣ್ಣ-ಸಣ್ಣ ಪಟ್ಟಣ, ಹಳ್ಳಿಗಳಿಂದ ಕನಸುಗಳನ್ನು ಹೊತ್ತು ತಮಿಳು ಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಬಹಳ ಮಂದಿ ಬರುತ್ತಾರೆ. ಅವರು ಇಲ್ಲಿಗೆ ಬಂದ ಮೇಲೆ ದಾರಿ ಕಾಣದಾಗುತ್ತದೆ," ಎನ್ನುತ್ತಾರೆ ಮೂವತ್ಮೂರು ವಯಸ್ಸಿನ ಮೂರ್ತಿ. ಇವರು ಈ ಗ್ರಂಥಾಲಯದ ಮೇಲ್ವಿಚಾರಕ. ಸಿನಿಮಾ ಸಂಬಂಧಿತ ನೂರಾರು ಪುಸ್ತಕಗಳಿವೆ ಕೂಗೈನಲ್ಲಿ. ಅಲ್ಲಿ ಕಾರ್ಯಾಗಾರ ನೆಡೆಯುತ್ತವೆ. ಉತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.

ಹಳ್ಳಿಯಲ್ಲಿ ಬರಿಯ ತಾಯಿಯ ಆರೈಕೆಯಲ್ಲಿ ಬೆಳೆದಿದ್ದ ಮೂರ್ತಿ ಹಲವು ಕನಸುಗಳನ್ನು ಹೊತ್ತುಕೊಂಡು ಚಿತ್ರೋದ್ಯಮಕ್ಕೆ ಬಂದರು. ಆದರೆ ಏನನ್ನೂ ಸಾಧಿಸಲಾಗದೆ ಹೀನಾಯವಾಗಿ ಸೋತರು. ವರುಷಗಳ ನಂತರ ಚೆನ್ನೈ ನಗರಕ್ಕೆ ಮರಳಿ ಬಂದಾಗ ಗ್ರಂಥಾಲಯ ನಿರ್ಮಾಣ ಹಂತದಲ್ಲಿತ್ತು. ಹೊಸದಾಗಿ ಕಲಿತು, ಬೆಳೆಯಲು ನೆಲೆಯೊಂದು ಸಿಕ್ಕಿತು. ಹೋದ ವರುಷ ಸಹಾಯಕ ನಿರ್ದೇಶಕನಾಗಿ ಚಿತ್ರವೊಂದಕ್ಕೆ ಕೆಲಸ ಮಾಡುವ ಅವಕಾಶ ಮೂರ್ತಿಗೆ ಸಿಕ್ಕಿದೆ. "ರಂಜಿತ್ ನಮಗೆಲ್ಲ ದಾರಿ ತೋರಿ ಬೆಳೆಸಿದರು. ಮುಂದಿನ ದಶಕದಲ್ಲಿ ಚಿತ್ರೋದ್ಯಮದ ಶ್ರೇಷ್ಠ ನಿರ್ದೇಶಕರು 'ಕೂಗೈ'ನಿಂದ ಬರಲಿದ್ದಾರೆ," ಎಂದು ವಿಶ್ವಾಸದಿಂದ ಹೇಳುತ್ತಾರೆ ಮೂರ್ತಿ.

Image

ಇಷ್ಟೊಂದು ಮಹತ್ವಾಕಾಂಕ್ಷೆಯುಳ್ಳ ಮೂವತ್ತೊಬ್ಬತ್ತು ವರ್ಷದ ರಂಜಿತ್ ನಿರಂಹಕಾರಿ. ಬಿಳಿಯ ಕಾಟನ್ ಶರ್ಟ್ ಮತ್ತು ನೀಲಿ ಷರಾಯಿ ತೊಟ್ಟು, ತನ್ನ ಸಾಧಾರಣವಾಗಿ ಸಜ್ಜುಗೊಳಿಸಿದ, ಚಲನಚಿತ್ರ ಸಂಬಂಧಿ ಯಾವುದೇ ಪರಿಕರ ಉಪಕರಣಗಳಿಲ್ಲದ ಆಫೀಸ್‌ಗೆ ಬರುತ್ತಾರವರು. ಆಫೀಸಿನಲ್ಲೋ ಎಲ್ಲೆಲ್ಲೂ ಪುಸ್ತಕಗಳು! ಸಂವಿಧಾನ ಶಿಲ್ಪಿ, ದಲಿತರ ಮಹಾನಾಯಕ ಗೌರವಾನ್ವಿತ ಭೀಮ್ ರಾವ್ ಅಂಬೇಡ್ಕರವರ ಚಿತ್ರಗಳು, ಪ್ರತಿಮೆಗಳು.

ರಂಜಿತ್ ವೃತ್ತಿಜೀವನ ಆತನ ಮೊದಲೆರಡು ಚಿತ್ರಗಳ ಭಾರೀ ಯಶಸ್ಸಿನಿಂದ ಆರಂಭಗೊಂಡಿತು. ತಮಿಳು ಚಿತ್ರಗಳಲ್ಲಿ ಜಾತಿ ಪ್ರತಿನಿಧಿತ್ವ ಬದಲಾಯಿಸಿದ ಶ್ರೇಯಸ್ಸು ರಂಜಿತ್‌ಗೆ ಸಲ್ಲಬೇಕು. "ಆತನೊಬ್ಬ ಅತ್ಯುತ್ತಮ ನಿರ್ದೇಶಕ. ಯಾವುದೇ ಅಳುಕಿಲ್ಲದೆ, ಭಯವಿಲ್ಲದೆ ತಮ್ಮ ಐಡೆಂಟಿಟಿಯ ಕುರಿತು ಮಾತನಾಡುವ ಧೈರ್ಯ ತುಂಬಿ ಹೊಸಬರಿಗೆ ಹೊಸ ಹಾದಿ ಸೃಷ್ಟಿಸಿದ್ದಾನೆ," ಅನ್ನೋದು ಸಿನಿ ವಿಮರ್ಶಕ ಭಾರದ್ವಾಜ್ ರಂಗನ್ ಅಭಿಪ್ರಾಯ.

ರಂಜಿತ್ ಅವರಿಗೆ ಬಹುದೊಡ್ಡ ಬ್ರೇಕ್ ಸಿಕ್ಕಿದ್ದು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದ ರಜನಿಕಾಂತ್ ಅವರನ್ನು ಭೇಟಿಯಾದಾಗ. ಇವರಿಬ್ಬರ ಜೋಡಿ ಎರಡು ಮೆಗಾ ಹಿಟ್‌ಗಳನ್ನು ನೀಡಿತು. 'ಕಾಲ' (ಕಪ್ಪು) ಚಿತ್ರದಲ್ಲಿ ರಜನಿಕಾಂತರದು ದಲಿತನ ಪಾತ್ರ. ಮುಂಬೈ ಸ್ಲಮ್‌ವೊಂದರಲ್ಲಿ ಬದುಕುವ ಈತ ಭ್ರಷ್ಟ ರಾಜಕಾರಣಿಯೊಬ್ಬನನ್ನು ಎದುರುಹಾಕಿಕೊಳ್ಳುತ್ತಾನೆ. 'ಕಬಾಲಿ' ಈ ಜೋಡಿಯ ಮತ್ತೊಂದು ಚಿತ್ರ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಬಾರಿ ಸದ್ದು ಮಾಡಿದವು.

"ಮೊದಲೆಲ್ಲ ನಿರ್ಮಾಪಕರು ಇಂತಹ ಚಿತ್ರದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು. ಹೂಡಿದ ದುಡ್ಡು ವಾಪಸ್ ಬರಲ್ಲ ಅಂತ ಸಬೂಬು ಹೇಳುತ್ತಿದ್ದರು. ನನ್ ಐಡಿಯಾ ತುಂಬಾ ಸಿಂಪಲ್. ಮುಖ್ಯ ವಾಹಿನಿ ಚಲನಚಿತ್ರಗಳ ವೀಕ್ಷಕರು ಕೂಡ ನಮ್ಮ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಎಂಟರ್ಟೈನಿಂಗ್ ಚಿತ್ರ ಮಾಡಬೇಕು," ಎನ್ನುತ್ತಾರೆ ರಂಜಿತ್.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಸಾಮರಸ್ಯ... ಹಾಗೆಂದರೇನು?

ಜಾತಿ ದಬ್ಬಾಳಿಕೆ ಮತ್ತು ತಾರತಮ್ಯ ಕುರಿತಾದ ತೀಕ್ಷ್ಣ, ನಿಷ್ಪಕ್ಷಪಾತ ವಿಮರ್ಶೆಗಳನ್ನು ಹಿಂದೂ ಧರ್ಮದ ಟೀಕೆಯೆಂದೇ ಗ್ರಹಿಸುವ ಹಿಂದೂ ರಾಷ್ಟ್ರವಾದಿಗಳ ತೀವ್ರ ವಿರೋಧ ರಂಜಿತರನ್ನು ವಿಚಲಿತಗೊಳಿಸಿಲ್ಲ. ಹಿಂದೂ ಫೋಬಿಯ ಎಲ್ಲರ ಮನಸಲ್ಲಿ ಮೂಡಿಸಿದ ಆರೋಪವೂ ರಂಜಿತ್ ಮೇಲಿದೆ. ಪುರಾತನ ಹಿಂದೂ ರಾಜನ ಬಗ್ಗೆ ನೀಡಿದ ಹೇಳಿಕೆಯಿಂದ ರಂಜಿತ್ ವಿರುದ್ಧ ದೂರು ದಾಖಲಾಗಿದೆ. ಈ ದೂರುಗಳು, ನಿಂದನೆಗಳಾವುದರ ಬಗ್ಗೆಯೂ ರಂಜಿತ್ ತಲೆ ಕೆಡಿಸಿಕೊಂಡಿಲ್ಲ.

"ಜನ ನನ್ನನ್ನ ಮುಂಗೋಪಿ ಅಂತ ಅಂದುಕೊಂಡಿದ್ದಾರೆ. ಆದರೆ ನಾನು ಮುಂಗೋಪಿಯಲ್ಲ. ನನ್ನ ದೈವ ಅಂಬೇಡ್ಕರ್‌ರಂತೆ ನಾನು ಕೂಡ ಹಠಮಾರಿ ಮತ್ತು ನನ್ನ ಗುರಿಗಳಿಗೆ ಸದಾ ಬದ್ಧನಷ್ಟೇ. ಸಮಾನತೆಯೊಂದೇ ನಾನು ಮುಂದಿನ ಪೀಳಿಗೆ ಬಿಟ್ಟುಹೋಗಲು ಬಯಸುವ ಸ್ವತ್ತು," ಎನ್ನುವುದು ರಂಜಿತ್ ಮನದಾಳ.

('ವಾಷಿಂಗ್ಟನ್ ಪೋಸ್ಟ್'ನಲ್ಲಿ ಪ್ರಕಟವಾದ ನಿಹಾ ಮಸಿಹ ಅವರ ಲೇಖನದ ಭಾವಾನುವಾದ)

ನಿಮಗೆ ಏನು ಅನ್ನಿಸ್ತು?
4 ವೋಟ್