ವಾರದ ವಿಶೇಷ | ನೀವೂ ಸಾವಯವ ರೈತರಾ? ಇಲ್ಲಿದೆ ನೋಡಿ, ನೇರ ಮಾರುಕಟ್ಟೆಯ ಹಲವು ಕತೆ

ಯಾವುದೇ ರಾಸಾಯನಿಕಗಳನ್ನು ಬಳಸದ ಸಾವಯವ ಕೃಷಿ ಉತ್ಪನ್ನಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಏನೆಲ್ಲ ಕಷ್ಟ ಬೀಳುವ ರೈತರಿಗೆ ಸಾವಯವ ಅನ್ನೋದು ಸವಾಲೇ ಅಲ್ಲ ಬಿಡಿ. ಬೆಳೆಯುವುದೇನೋ ಬೆಳೆದುಬಿಡಬಹುದು; ಆದರೆ, ಮಾರುಕಟ್ಟೆಗಾಗಿ ಏನು ಮಾಡೋದು? ಈ ಪ್ರಶ್ನೆ ಈಗಲೂ ಹಲವರಲ್ಲಿ ಇರಬಹುದು. ಇದಕ್ಕೆ ಅತ್ಯಂತ ಸೂಕ್ತ ಉತ್ತರ ಈ ಲೇಖನದಲ್ಲಿದೆ

"ಏನ್ ಮಾಡದು ಸಾ. ಮಾರ್ಕೆಟ್ಟೇ  ಇಲ್ಲ..." ರವಿ ಅವಲತ್ತುಕೊಂಡರು.

ಹೆಗ್ಗಡದೇವನಕೋಟೆಯ ಅಂತರಸಂತೆ ಸಮೀಪದ ನೂರಲಕುಪ್ಪೆ ಗ್ರಾಮದಲ್ಲಿದ್ದೆ. ಪೇರಳೆ ಮತ್ತು ಹೆರಳೆ ಕಾಯಿ ಹಣ್ಣಾಗಿ ಉದುರಿ ನೆಲದ ಮೇಲೆ ಚೆಲ್ಲಾಡುತ್ತಿದ್ದವು.

"ಎಳ್ಳಿಕಾಯಿ ಉಪ್ಪಿನಕಾಯಿ ಮಾಡೋದಲ್ವಾ? ಪಿತ್ತಕ್ಕೆ ಒಳ್ಳೇದು," ಅಂದೆ. "ಟೈಮೇ ಇರಲ್ಲ ಸಾ. ಮನೆ ಕೆಲಸ, ತೋಟ, ದನ-ಕರ ಅಂತ ಅದಕ್ಕೇ ಸಾಕಾಗ್ತದೆ," ರವಿ ಮಡದಿ ಗೌರಮ್ಮ ಪೇಚಾಡಿದರು.

ಗಂಡ-ಹೆಂಡತಿ ಪಡಿಪಾಟಲು ಬಿದ್ದು ತರಕಾರಿ ಬೆಳೆಯುವುದು. ರೇಟಿಲ್ಲದೆಯೋ, ರೋಗ ರುಜಿರುಜಿನಗಳಿಗೆ ಸಿಕ್ಕೋ ಬೆಳೆದ ತರಕಾರಿ ನೆಲಕಚ್ಚಿದರೆ ಒಂದಷ್ಟು ಸಾಲ ಮೈಮೇಲೆ. ಈ ವರ್ಷ ಮಳೆ ಹೊಡೆತಕ್ಕೆ ಬೆಳೆ ಏಳ್ತಾನೇ ಇಲ್ಲ.

* * *

ನಾಗರಹೊಳೆಯ ಕಾಡಿನ ನಡುವೆ ಸಿಕ್ಕಿಬಿದ್ದ ಮಚ್ಚೂರು ಹಾಡಿಯ ಪಾರ್ವತಿಯ ಪಡಿಪಾಟಲು ಇನ್ನೊಂದು ತರ. ಮನೆ ಸುತ್ತಲಿನ ಕಾಡಿನ ಮರಗಳ ನಡುವೆಯೇ ಅರಿಶಿಣ, ಶುಂಠಿ, ಬೀನ್ಸ್‌, ಸೊಪ್ಪು, ಗೆಣಸು ಸಹಜವಾಗೇ ಬೆಳೆದಿದ್ದಾರೆ. ಔಷಧ, ಗೊಬ್ಬರ ಹಾಕೇ ಗೊತ್ತಿಲ್ಲ; ತರೋಕೆ ಕಾಸೂ ಇಲ್ಲ. "ಮನೆ ಗೊಬ್ಬರನೇ ಸಾಕಾಗ್ತದೆ. ಹುಳ ಬಂದ್ರೆ ಬೂದಿ ಹಾಕ್ತೀವಿ," - ಪಾರ್ವತಿ ಹೇಳ್ತಾರೆ.

"ಕೇರಳದರು ಬರ್ತಾರೆ ಸಾ. ಟೆಂಪೋ ಮನೆಗೇ ತರ್ತಾರೆ. ಅವರಿಗೆ ಮಾರ್ತಿವಿ," ಪಾರ್ವತಿ ತಮ್ಮ ರಾಮ ಹೇಳುತ್ತಿದ್ದ.

Image

"ಇನ್ನೇನು ಒಳ್ಳೇ ದುಡ್ಡು ಸಿಗ್ತದಲ್ಲ...?" ಎಂದೆ. "ಏನ್ ಕೊಡ್ತರೇ ಸಾ. ಅವರು ಎಷ್ಟು ಕೊಟ್ಟರೆ ಅಷ್ಟು ಇಸ್ಕೊಳ್ಳೋದು. ನಮಗೆ ಮಾರ್ಕೆಟ್ ಹೋಗೋಕೆ ಆಗಲ್ಲ. ಬಲು ದೂರ. ಬಸ್ಸೇ ಸಿಗಲ್ಲ," ರಘು ಗೋಳಾಡಿದ.

ತರಕಾರಿ, ಹಣ್ಣು-ಹಂಪಲು ಕೊಳ್ಳುವ ಕೇರಳದ ಮಧ್ಯವರ್ತಿಗಳು, ಕೊಂಡದ್ದನ್ನು ಮಾನಂದವಾಡಿ ಟೌನ್‌ಗೆ ಕೊಂಡೊಯ್ದು ದುಪ್ಪಟ್ಟು ಬೆಲೆಗೆ ಮಾರ್ತಾರೆ. ಜೇನುಕುರುಬರ ಹಾಡಿಯಲ್ಲಿ 15 ರೂಪಾಯಿಗೆ ಕೊಳ್ಳುವ ನೀಲಿ ಕಾಚಲ್ ಗೆಣಸಿಗೆ ಮಾನಂದವಾಡಿಯಲ್ಲಿ 75 ರೂಪಾಯಿ ಬೆಲೆ. ಅತ್ತ ಬೆಳೆದವರಿಗೂ ಲಾಭ ಇಲ್ಲ. ಕೊಂಡವರಿಗೂ ನೆಮ್ಮದಿ ಇಲ್ಲ‌. ಇದು ಹಳ್ಳಿಗಳ ಸ್ಥಿತಿ.

ರಾಗಿಯೋ, ಭತ್ತವೋ, ಟೊಮೊಟೋ ಯಾವುದೇ ಕೃಷಿ ಉತ್ಪನ್ನ ಇರಲಿ, ಮಾರಾಟದ್ದೇ ಸಮಸ್ಯೆ. ಕಷ್ಟಪಟ್ಟು ಬೆಳೆದದ್ದನ್ನು ಮಾರಾಟ ಮಾಡಿ ಮನೆಗೆ ಬರುವಲ್ಲಿ ಬೆಳೆದವರು ಹೈರಾಣವಾಗ್ತಾರೆ. ನೆಲಕಚ್ಚುವ ಹಣ್ಣು, ತರಕಾರಿಗಳಿಗೆ ಮಾನ ತಂದುಕೊಂಡುವ ಮೌಲ್ಯವರ್ಧನೆ ಮಾಡಿ ತೋರಿಸುವವರು, ಕೈ ಹಿಡಿದು ಮುನ್ನಡೆಸುವವರು ಇಲ್ಲ.

ಇಂಥ ಹೊತ್ತಿನಲ್ಲಿ, ಸಮಸ್ಯೆಗಳನ್ನೇ ಸವಾಲನ್ನಾಗಿಸಿ ಮಾರುಕಟ್ಟೆ ಗೆದ್ದ ಕತೆಗಳು ಸಾಕಷ್ಟಿವೆ.

* * *

Image
'ನಮ್ದು ರೈತರ ಮಾರುಕಟ್ಟೆ'

ಧಾರವಾಡದ 'ಗುರುವಾರದ ಸಂತೆ' ಅದರಲ್ಲೊಂದು. ಕಳೆದ ಗುರುವಾರ ನಾನು ಧಾರವಾಡದಲ್ಲಿದ್ದೆ. ಕೋರ್ಟ್ ಸರ್ಕಲ್ಲಿನ ಬಳಿಯ ಗಾಂಧಿ ಪ್ರತಿಷ್ಠಾನದ ಪಡಸಾಲೆಯ ಸಂತೆಯಲ್ಲಿ ಜನರ ದಂಡು. ಕೇಜಿ, ಅರ್ಧ ಕೇಜಿ ಪ್ಯಾಕ್ ಮಾಡಿದ ಅಕ್ಕಿ, ಸಿರಿಧಾನ್ಯ, ಬೇಳೆಕಾಳು ಕೊಳ್ಳಲು ನೂಕುನುಗ್ಗಲು. ಕಚೇರಿಯ ಬಿಡುವಿನ ಸಮಯದಲ್ಲಿ ಸಂತೆಗೆ ಬಂದು, ತಮಗೆ ಬೇಕಾದ ಉತ್ಪನ್ನ ಆಯ್ಕೆ ಮಾಡಿಕೊಂಡು, ಕೇಳಿದಷ್ಟು ರೊಕ್ಕ ಕೊಟ್ಟು ಹೋಗುವ ತರಾತುರಿ. ರೈತ ಮತ್ತು ಗ್ರಾಹಕರ ನಡುವಿನ ಬಾಂಧವ್ಯ, ಪರಸ್ಪರ ನಂಬಿಕೆಯಿಂದ ಹುಟ್ಟಿಕೊಂಡ ಮಾರುಕಟ್ಟೆ ಇದು.

ಖಾನಾಪುರದ ಗುಂಡೇನಟ್ಟಿ ಶಂಕರ ಲಂಗಟಿ ಗುರುವಾರದ ಸಂತೆಯ ಕೇಂದ್ರಬಿಂದು. "ಸಿದ್ದಾರೂಢ ಸಾವಯವ ಕೃಷಿಕರ ಬಳಗ' ಗುಂಪು ರಚನೆ ಮಾಡಿಕೊಂಡು, ಗ್ರಾಹಕರ ಬೇಡಿಕೆಯನ್ನು ಅವಲಂಬಿಸಿ ಬೆಳೆಗಳನ್ನು ಬೆಳೆಯುತ್ತಾರೆ. ಸಂಘದ ಸದಸ್ಯರು ಬೆಳೆದದ್ದನ್ನು ಉತ್ತಮ ಬೆಲೆಗೆ  ಕೊಂಡು, ಸಂಸ್ಕರಣೆ ಇಲ್ಲವೇ ಮೌಲ್ಯವರ್ಧನೆ ಮಾಡಿ ಗುರುವಾರದ ಸಂತೆಗೆ ತಂದು ಮಾರಾಟ ಮಾಡುವ ಜವಾಬ್ದಾರಿಯನ್ನು ಶಂಕರ ಲಂಗಟಿ ಹೊತ್ತಿದ್ದಾರೆ.

ಆರಂಭದಲ್ಲಿ ಐದಾರು ಸಾವಿರದಷ್ಟಿದ್ದ ಪ್ರತಿ ವಾರದ ವಹಿವಾಟು ಈಗ ಐವತ್ತು ಸಾವಿರಕ್ಕೂ ಹೆಚ್ಚಿದೆ. ಆರಂಭದಲ್ಲಿ ಶಂಕರಣ್ಣ ಒಬ್ಬರೇ ಮಾರುಕಟ್ಟೆ ನೋಡಿಕೊಳ್ಳುತ್ತಿದ್ದರು. ಈಗ ಅವರ ಜೊತೆ ಇಬ್ಬರು ಗಂಡುಮಕ್ಕಳು ಜೊತೆಯಾಗಿದ್ದಾರೆ. ತಾವೇ ಟೆಂಪೋ ಕೊಂಡು ಸಂತೆಗೆ ಸರಕು ತರುತ್ತಾರೆ. ಸೊಸೆಯಂದಿರು ಮೌಲ್ಯವರ್ಧಿತ ಪದಾರ್ಥಗಳನ್ನು ಸಿದ್ಧಪಡಿಸುತ್ತಾರೆ.

ಅನೇಕ ಗ್ರಾಹಕರು ವರ್ಷಕ್ಕೊಮ್ಮೆಯಾದರೂ ರೈತರ ಹೊಲಗಳಿಗೆ ಭೇಟಿ ನೀಡುವುದರಿಂದ ಅವರಿಗೂ ಸಂತೆಯ ಬಗ್ಗೆ ಗೌರವ, ವಿಶ್ವಾಸ. ಒಂದೆರೆಡು ರೂಪಾಯಿ ಜಾಸ್ತಿಯಾದರೂ ಉತ್ತಮ ಗುಣಮಟ್ಟದ ಪದಾರ್ಥ ಪಡೆಯುತ್ತಿದ್ದೇವೆ ಎನ್ನುವ ಭರವಸೆ.

* * *

Image

ಹರಿಹರದ ಕುಂಬಳೂರಿನ ಆಂಜನೇಯ - ವಾರದ ಸಂತೆ ಮಾಡಿ ಗೆದ್ದ ಇನ್ನೊಬ್ಬ ಕೃಷಿಕ. ಸಹಜ ಸಮೃದ್ಧದ ಬೆಂಬಲದಿಂದ 'ಶರಣ ಮುದ್ದಣ್ಣ ಸಾವಯವ ಕೃಷಿಕರ ಬಳಗ' ಕಟ್ಟಿದ ಆಂಜನೇಯ, ನೂರಾರು ಬಗೆಯ ದೇಸಿ ಭತ್ತಗಳನ್ನು ಬೆಳೆದು ಹೆಸರು ಮಾಡಿದರು. ಸಣ್ಣ ಕಾಳಿನ 'ಸಿಂಧೂರ ಮಧುಸಾಲೆ' ಮತ್ತು 'ಅಂದನೂರು ಸಣ್ಣ' ಎಂಬ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿದವರು.

ಸಾವಯವದಲ್ಲಿ ಬೆಳೆದ ಭತ್ತಕ್ಕೆ ಉತ್ತಮ ಬೆಲೆ ಸಿಗದಿದ್ದರಿಂದ ತಾವೇ ಮಾರುಕಟ್ಟೆ ಮಾಡಲು ಮುಂದಾದರು. ದಾವಣಗೆರೆಯ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಆರಂಭವಾದ ಶನಿವಾರದ 'ಸಾವಯವ ಸಂತೆ' ಆರು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ.

ಗ್ರಾಹಕರು ಬರುವಾಗ ಕೈಚೀಲ ಹಿಡಿದು ಬರುತ್ತಾರೆ. ತಮಗೆ ಬೇಕಾದ ತಳಿಯ ಅಕ್ಕಿ, ಬೇಳೆಕಾಳನ್ನು ತಾವು ತಂದ ಚೀಲಕ್ಕೆ ತುಂಬಿಸಿಕೊಳ್ಳುವುದರಿಂದ ಪ್ಯಾಕಿಂಗ್ ಮಾಡುವ ಖರ್ಚು, ಶ್ರಮ, ರಗಳೆ ಇಲ್ಲ. ಕೈಗೆಟುಕುವ ದರಕ್ಕೆ ಉತ್ಪನ್ನವನ್ನು ಗ್ರಾಹಕನ ಕೈಗಿಡಲು ಸಾಧ್ಯವಾಗುತ್ತಿದೆ.

* * *

ಬಯಲುಸೀಮೆ ಬೆಳೆಗಾರರ ಸಂಘ ಮಂಡ್ಯದಲ್ಲಿ ರೈತಸಂತೆಯ ಕಲ್ಪನೆಯನ್ನು ಸಾಕಾರಗೊಳಿಸಿತು.
ಜಿಲ್ಲಾಧಿಕಾರಿ ಕಚೇರಿ ಎದುರುಗಿನ ಜಾಗವೇ ಸಂತೆಯ ಜಾಗ. ಭಾನುವಾರ ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ನಡೆಯುತ್ತಿದ್ದ ಸಂತೆ ಬಹುಬೇಗ ಜನಪ್ರಿಯವಾಯಿತು. ತಾಜಾ ಮತ್ತು ವಿಷಮುಕ್ತ ಪದಾರ್ಥಗಳನ್ನು ಹುಡುಕಿ ಗ್ರಾಹಕರು ಬರಲಾರಂಭಿಸಿದರು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಅನಿವಾರ್ಯವಾಗಿ ಸಂತೆ ನಿಲ್ಲಿಸಬೇಕಾಯಿತು. ಈಗ ಮಂಡ್ಯದ ಕ್ರಿಡಾಂಗಣದ ಬಳಿ ಪ್ರತೀ ದಿನ 'ಸಾವಯವ ಸಂತೆ' ನಡೆಯುತ್ತಿದೆ.

* * *

Image
'ನಮ್ದು ರೈತರ ಮಾರುಕಟ್ಟೆ'

ಹೋಮ ಆರ್ಗಾನಿಕ್ ಫಾರ್ಮಿಂಗ್ ಗುಂಪು ಅಭಯ್ ಮುತಾಲಿಕ್ ದೇಸಾಯಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ರೈತರ ಸಂತೆಯನ್ನು ನಡೆಸುತ್ತಿದೆ. 80ರ ದಶಕದಲ್ಲೇ 'ಸಾವಯವ ರೈತರ ಸಂತೆ'ಯನ್ನು ‌ಆರಂಭಿಸಿದ ಹೆಗ್ಗಳಿಕೆ ಇವರದು. ಇದು ಕರ್ನಾಟಕದ ಮೊದಲ‌ ಸಾವಯವ ರೈತರ ಸಂತೆ ಕೂಡ.

ಇನ್ನು, 'ಅಮೃತ ಭೂಮಿ'ಯು ಚಾಮರಾಜನಗರದಲ್ಲಿ 'ನಮ್ದು ಮಾರುಕಟ್ಟೆ'ಯನ್ನು ನಡೆಸುತ್ತಿದೆ.

* * *

ಮೈಸೂರು ರೈತ ಸಂತೆಗಳ ಸ್ವರ್ಗ. ಎರಡು ದಶಕಗಳ ಹಿಂದೆ ಸಹಜ ಕೃಷಿಕ ಎ ಪಿ ಚಂದ್ರಶೇಖರ್ ಮತ್ತು ಇತರ ರೈತರು ಹುಟ್ಟುಹಾಕಿದ 'ನೇಸರ' ರೈತರ ಮಾರುಕಟ್ಟೆಯನ್ನು ಆರಂಭಿಸಿತು. ನಂತರದ ವರ್ಷಗಳಲ್ಲಿ 'ಆರಂಭ,' 'ನಿಸರ್ಗ' ಒಂದಷ್ಟು ವರ್ಷ ರೈತ ಸಂತೆಗಳನ್ನು ನಡೆಸಿದವು. ಕಳೆದ ದಶಕದಲ್ಲಿ ಸಹಜ ಸಮೃದ್ಧ ಸಣ್ಣ ರೈತರನ್ನು ಮಾರುಕಟ್ಟೆಗೆ ಪರಿಚಯಿಸಲು ನಂಜರಾಜ ಬಹದ್ದೂರ್ ಛತ್ರದಲ್ಲಿ  ವಾರದ ಸಂತೆ, ಮೇಳಗಳನ್ನು ಆರಂಭಿಸಿತು.‌ ಆಲೂರು ಮೂರ್ತಿಯವರ ಮುಂದಾಳತ್ವದಲ್ಲಿ ಕಾಡಾ ಕಚೇರಿಯಲ್ಲಿ ನಡೆಯುತ್ತಿರುವ 'ವಾರದ ಹಸಿರು ಸಂತೆ' ಇದೀಗ ಏಳನೇ ವರ್ಷಕ್ಕೆ ಕಾಲಿಟ್ಟಿದೆ.

ಚಾಮರಾಜನಗರದ ರೈತ ನಾಯಕ ಹೊನ್ನೂರು ಪ್ರಕಾಶ್ ಮತ್ತು ಇತರ ಸಾವಯವ ರೈತರು ಜೊತೆಗೂಡಿ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯ ಬಳಿ ಪ್ರತಿ ಭಾನುವಾರ ರೈತ ಸಂತೆ ನಡೆಸುತ್ತಿದ್ದಾರೆ.

ಸುದರ್ಶನ-ಪದ್ಮ ತಮ್ಮ ತೋಟದ ಉತ್ಪನ್ನವನ್ನು ತಾವೇ ಮಾರುಕಟ್ಟೆಗೆ ತಂದಿದ್ದಾರೆ. ಪ್ರತಿ ಭಾನುವಾರ ಮುಂಜಾನೆ, ಕಾಳಿದಾಸ ರಸ್ತೆಯಲ್ಲಿ 'ಫಾರ್ಮರ್ಸ್ ಮಾರ್ಕೆಟ್' ನಡೆಯುತ್ತದೆ. ಇವರದೇ ಆದ  ಸುಸಜ್ಜಿತ ಸಾವಯವ ಮಳಿಗೆಯೂ ಇದೆ.

ಹೆಸರಾಂತ ಸಹಜ ಕೃಷಿಕ ಕೈಲಾಸ ಮೂರ್ತಿ ಕುಕ್ಕರಹಳ್ಳಿ ಕೆರೆಯ ಬಳಿ ವಾರಾಂತ್ಯದಲ್ಲಿ ತಮ್ಮ‌ ತೋಟದ ಉತ್ಪನ್ನಗಳನ್ನು ತಾವೇ ಮಾರಾಟ ಮಾಡುವುದು ವಿಶೇಷ. ಗ್ರಾಹಕರನ್ನು ನೇರ ತಲುಪುವ ಅವಕಾಶ.

ಬೆಳವಲ ಫೌಂಡೇಶನ್ ನಡೆಸುವ 'ಬೆಳವಲ ಬಜಾರ್' ವಿಶೇಷವಾದದ್ದು. ಬಡ ಕುಟುಂಬಗಳಿಂದ ಕಾಲೇಜು ಕಲಿಯಲು ನಗರಕ್ಕೆ ಬಂದ ವಿದ್ಯಾರ್ಥಿಗಳು ತಮ್ಮ ಬಿಡುವಿನ ಕಾಲದಲ್ಲಿ ಬೆಳವಲ ತೋಟದಲ್ಲಿ ಹಣ್ಣು-ತರಕಾರಿ ಬೆಳೆಸುತ್ತಾರೆ. ತಾವು ಬೆಳೆದ ಹಣ್ಣು, ತರಕಾರಿಗಳನ್ನು ಅವರೇ ಕೊಯ್ಲು ಮಾಡಿ ಭಾನುವಾರದ ಸಂತೆಯಲ್ಲಿ ಮೈಸೂರಿನ ಗ್ರಾಹಕರಿಗೆ ನೇರ ಮಾರಾಟ ಮಾಡುತ್ತಾರೆ. ಗ್ರಾಹಕರ ಮನೆ ಬಾಗಿಲಿಗೂ ತಲುಪಿಸುತ್ತಾರೆ. ಮಾರಾಟದಿಂದ ಬರುವ ಆದಾಯವನ್ನು ವಿದ್ಯಾರ್ಥಿಗಳು ತೊಡಗಿಸಿಕೊಂಡ ಕಾಲಾವಧಿ ಆಧರಿಸಿ, ಅವರ ಶಿಕ್ಷಣದ ಖರ್ಚಿಗಾಗಿ ಹಂಚಲಾಗುತ್ತದೆ.

Image

ಬೆಂಗಳೂರಲ್ಲಿ ರೈತ ಸಂತೆಗಳು ನಾಯಿಕೊಡೆಗಳಂತೆ ತಲೆಎತ್ತಿ ನೆಲಕಚ್ಚುವುದು ಸಾಮಾನ್ಯ. 'ಫಾರ್ಮರ್ಸ್ ಮಾರ್ಕೆಟ್' ಹೆಸರಲ್ಲಿ ಸಂತೆಗಳು ನಡೆದರೂ, ರೈತರ ಭಾಗವಹಿಸುವಿಕೆ ಮತ್ತು ಸಾವಯವದ ಖಾತರಿ ಸಿಗದು. ಸಂತೆಯಲ್ಲಿ ಸಂತರ ಹುಡುಕಿದಂತೆ ಅಲ್ಲೊಂದು ಇಲ್ಲೊಂದು ಪ್ರಾಮಾಣಿಕ ಪ್ರಯತ್ನ ಕಾಣಸಿಗುತ್ತವೆ. ಸರ್ಜಾಪುರದ ಭೂಮಿ ಕಾಲೇಜಿನ 'ಭೂಮಿ ಸಂತೆ'ಯಲ್ಲಿ ಪ್ರಾಮಾಣಿಕ ಸಾವಯವ ರೈತ ಮತ್ತು ರೈತ ಗುಂಪುಗಳನ್ನು ಕಾಣಬಹುದು.

ಗೊಟ್ಟಿಗೆರೆಯ 'ರಾಗಿ ಕಣ' ಸಂತೆಯಲ್ಲಿ ರೈತರು, ಕುಶಲಕರ್ಮಿಗಳು, ಆಹಾರ ಉತ್ಪನ್ನಗಳ ತಯಾರಕರನ್ನು ಕಾಣಬಹುದು. ಸಂತೆಯ ಜೊತೆಜೊತೆಗೆ ಅರಿವಿನ ಕಾರ್ಯಕ್ರಮ ಏರ್ಪಡಿಸುವುದು 'ರಾಗಿ ಕಣ'ದ ವಿಶೇಷ.

ಕೋಣನಕುಂಟೆ ಸಮೀಪದ ಅಗರದ 'ಸಹಜ ಆರ್ಗಾನಿಕ್ಸ್‌'ನಲ್ಲಿ ಪ್ರತೀ ದಿನ ತಾಜಾ ತರಕಾರಿ ಮತ್ತು ಹಣ್ಣುಗಳು ಸಿಗುತ್ತವೆ.

ಆನೇಕಲ್ ತಾಲೂಕಿನ ಮಾಯಸಂದ್ರದ ತರಕಾರಿ ಬೆಳೆಗಾರರು ವೈವಿಧ್ಯಮಯ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟಕ್ಕೆ ತರುತ್ತಾರೆ. ಜಯನಗರದ 'ಬಫೆಲೋ ಬ್ಯಾಕ್' ಕೂಡ ರೈತ ಸಂತೆಯನ್ನು ನಡೆಸುತ್ತದೆ. ಲಾಲ್‌ಬಾಗ್‌ನ ಡಬಲ್ ರೋಡ್ ಪ್ರವೇಶದ್ವಾರದ ಬಳಿ ಇರುವ ಜೈವಿಕ್ ಕೃಷಿಕ ಸೊಸೈಟಿ, ರೈತರ ಹೊಲಗಳಿಂದ ತಾಜಾ ತರಕಾರಿ ಮತ್ತು ಹಣ್ಣನ್ನು ಸಂಗ್ರಹಿಸಿ ಮಳಿಗೆಯಲ್ಲಿ ಮಾರಾಟ ಮಾಡುತ್ತದೆ.

ಕೊಪ್ಪಳ ಸಾವಯವ ಕೃಷಿಕರ ಬಳಗ (KOFA), ತೋಟಗಾರಿಕಾ ಇಲಾಖೆಯ ಸಹಭಾಗಿತ್ವದಲ್ಲಿ ರೈತ ಸಂತೆಯನ್ನು ಯಶಸ್ವಿಯಾಗಿ ನಡೆಸುತ್ತಿತ್ತು. ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ನಿಂತ ಸಂತೆ ಮತ್ತೆ ನಡೆಯಬೇಕಿದೆ.

ಬೇರೆ ಜಿಲ್ಲೆಗಳಲ್ಲೂ ರೈತ ಸಂತೆಯ ಪ್ರಯೋಗ ನಡೆಯಬೇಕಿದೆ. ರೈತ ಸಂತೆಗಳನ್ನು ಜನಪ್ರಿಯ ಮಾಡಬೇಕಾದ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ದಕ್ಷ ಅಧಿಕಾರಿಗಳು ಇರುವ ಜಿಲ್ಲೆಗಳಲ್ಲಿ ರೈತ ಸಂತೆಯ ಪ್ರಯೋಗಗಳು ನಡೆದರೂ, ಒಟ್ಟಾರೆಯಾಗಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಪ್ರಯತ್ನ ಹೇಳಿಕೊಳ್ಳುವಂತಿಲ್ಲ.

ಈ ಲೇಖನ ಓದಿದ್ದೀರಾ?: ಫೇಸ್‌ಬುಕ್‌ನಿಂದ | ಎಷ್ಟೇ ಟ್ರಾಗುಟ್ರಿ, ಬುಲ್ಡೋಜರು, ಪವರ್ ಟಿಲ್ಲರು ಬಂದ್ರೂ ನೀವಿನ್ನೂ ಈ ಲೋಕಕ್ಕೆ ಬೇಕು ಕಾಳಪ್ಪಣ್ಣ

ಥಾಯ್‌ಲ್ಯಾಂಡ್‌ನಂಥ ಪುಟ್ಟ ದೇಶದಿಂದ ನಾವು ಕಲಿಯುವುದು ಸಾಕಷ್ಟಿದೆ. ಅಲ್ಲಿ ರೈತ ಮಾರುಕಟ್ಟೆಗಳು ಬಹು ಜನಪ್ರಿಯ. ಹೆದ್ದಾರಿ, ಆಸ್ಪತ್ರೆ, ಮಾಲ್‌ಗಳಲ್ಲಿ ರೈತ ಮಾರುಕಟ್ಟೆಗಳನ್ನು ಕಾಣಬಹುದು. ಸೊಪ್ಪಿನಿಂದ ಮಾಂಸದವರೆಗೆ, ಅಕ್ಕಿಯಿಂದ ಶರಬತ್ತಿನವರೆಗೆ ತರೇಹೇವಾರಿ ತಾಜಾ ಕೃಷಿ ಉತ್ಪನ್ನಗಳು ಇಲ್ಲಿ ಲಭ್ಯ. ಥಾಯ್‌ಲ್ಯಾಂಡಿನ ತೆಂತಾ ಹಾಲು, ಕೊಕೊನೆಟ್ ಜೆಲ್ಲಿ‌, ಐಸ್ ಎಳನೀರು ಬಹು ಜನಪ್ರಿಯ. ಮೌಲ್ಯವರ್ಧನೆಯ ನಾನಾ ರೂಪಗಳನ್ನು ನೋಡಬೇಕೆನ್ನುವವರು ಥಾಯಲ್ಯಾಂಡ್ ಹೋಗಿಬರಬೇಕು.

ಥಾಯಲ್ಯಾಂಡ್ ಮಾದರಿಯಲ್ಲಿ ಕೃಷಿ ಮಾರುಕಟ್ಟೆಗಳನ್ನು ಹುಟ್ಟುಹಾಕಬೇಕು ಎಂಬುದು ನನ್ನ ಬಹುದಿನದ ಕನಸು. ಕಳೆದ ಶನಿವಾರ (ಸೆ.3) ಮೈಸೂರಿನ 'ನಮ್ದು ರೈತ ಮಾರುಕಟ್ಟೆ'ಗೆ ಚಾಲನೆ ನೀಡುವುದರೊಂದಿಗೆ ಕನಸು ನನಸಾಯಿತು.

ಮೈಸೂರಿನ ಜಯಲಕ್ಷೀಪುರಂನಲ್ಲಿರುವ 'ನಮ್ದು ಮಾರುಕಟ್ಟೆ' ಕವಿತಾ ಶ್ರೀನಿವಾಸನ್ ಮತ್ತು ಸೌರಬ್ ಸಹಾನಿಯವರ ಕನಸಿನ ಕೂಸು.

ಬೆಂಗಳೂರಲ್ಲಿ ಹುಟ್ಟಿ ಬೆಳೆದ ಕವಿತಾ ಶ್ರೀನಿವಾಸನ್, ಪದವಿಯ ನಂತರ ಕೃಷಿ ಮಹಿಳೆಯರ ಜೊತೆ ಕೆಲಸ ಮಾಡಲು ಹಳ್ಳಿಗಳಿಗೆ ಹೋದರು. ಮಹಿಳಾ ಕಿಸಾನ್ ಅಧಿಕಾರ್ ಮಂಚ್ ಸಂಘಟನೆಯ ಮೂಲಕ‌ ಹಳ್ಳಿಗಾಡಿನ ಕೃಷಿ ಮಹಿಳೆಯರ ಜೀವನಮಟ್ಟ ಸುಧಾರಿಸುವ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರೈತ ನಾಯಕ ನಂಜುಂಡಸ್ವಾಮಿಯವರ ಕನಸಿನ ಕೂಸಾದ ಅಮೃತ ಭೂಮಿಗೆ ಬಂದರು. ಅಲ್ಲಿ ಸೌರಬ್ ಸಹಾನಿಯವರ ಪರಿಚಯವಾಯಿತು.

ಸೌರಬ್ ಸಹಾನಿ ಮೂಲತಃ ದೆಹಲಿಯವರು. ಐಟಿ ಎಂಜಿನಿಯರ್ ಆಗಿದ್ದವರು. ಮಾರುಕಟ್ಟೆಯ ಪಟ್ಟುಗಳನ್ನು ಅರಿತಿದ್ದ ಸೌರಬ್ ಅವರಿಗೆ, ಅನೇಕ ಕಂಪನಿಗಳನ್ನು ಹುಟ್ಟುಹಾಕಿ ಮುನ್ನಡೆಸಿದ ಅನುಭವ ಇತ್ತು.

ಇವರಿಬ್ಬರೂ ಸೇರಿ ಕಳೆದ ಫೆಬ್ರವರಿಯಲ್ಲಿ 'ನಮ್ದು ಮಾರುಕಟ್ಟೆ'ಯನ್ನು ಆರಂಭಿಸಿದರು. ಮಧ್ಯವರ್ತಿಗಳ ಹಾವಳಿಯಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಆಶಾಕಿರಣವಾಗಲು, ರೈತರಿಗೆ ಪರ್ಯಾಯ ಮಾರುಕಟ್ಟೆ ಸೃಷ್ಟಿಸಲು ಆರಂಭವಾದ ಮಳಿಗೆಯಿದು.

Image
'ನಮ್ದು ರೈತರ ಮಾರುಕಟ್ಟೆ'

ಕಳೆದ ಎರಡು ವರ್ಷಗಳಿಂದ 'ಸಹಜ ಸಮೃದ್ಧ'ವು ಹೆಗ್ಗಡದೇವನಕೋಟೆಯ ಕಾಡು ಹಳ್ಳಿಗಳಲ್ಲಿ Consumption of Resilient Orphan Crops & Products for Healthier Diets (CROPS4HD) ಎಂಬ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ನಿರ್ಲಕ್ಷಿತ ಬೆಳೆಗಳಾದ ಗೆಡ್ಡೆ-ಗೆಣಸು, ಸಿರಿಧಾನ್ಯ, ಒಣಭೂಮಿ ಭತ್ತ, ಹುರುಳಿ, ಮಡಕೆ ಹೆಸರು, ದಂಟು ಸೊಪ್ಪು, ಬಿದಿರು ಕಳಲೆ, ನುಗ್ಗೆ, ಹಲಸು, ನೆಲ್ಲಿ ಮೊದಲಾದ ಬೆಳೆಗಳ ಕೃಷಿಯನ್ನು ಮತ್ತೆ ಮುನ್ನಲೆಗೆ ತರುತ್ತಿದೆ. ಇಲ್ಲಿನ ಹಳ್ಳಿಗಳಲ್ಲಿ ಸುತ್ತಾಡುವಾಗಲೆಲ್ಲ ರೈತರದು ಒಂದೇ ಮಾತು - "ಮಾರ್ಕೆಟ್ ಇಲ್ಲ ಸ್ವಾಮಿ..."

"ಸರಿ, ಮಾರ್ಕೆಟ್ ಕೊಡ್ತೀವಿ. ಗೌರ್ಮೆಂಟ್ ಗೊಬ್ಬರ ಹಾಕದೆ ಬೆಳೀತೀರಾ?" ಎಂಬ ನನ್ನ ಪ್ರಶ್ನೆಗೆ ಸಬೂಬು ಹೇಳಿ ಸೈಡಾದವರು ಬಹಳಷ್ಟು ಮಂದಿ. "ಆಯ್ತು ಸಾ. ಬೆಳೆದೇ ಬಿಡುವ," ಎಂದು ರಾಮೇನಹಳ್ಳಿ ಶ್ರೀನಿವಾಸ್, ನೂರಲಕುಪ್ಪೆಯ ಸುರೇಶ್, ನಾಗಮ್ಮ, ಚಿನ್ನಮ್ಮ, ಮಚ್ಚಾರೆಯ ನೀಲೇಗೌಡ, ರವಿ, ಮಚ್ಚೂರಿನ ಪಾರ್ವತಿ, ರಘು, ಮೂಲೆಮನೆ ಹಾಡಿಯ ಕುಮಾರಿ ಮೊದಲಾದ ಹದಿನೆಂಟು ಮಂದಿ ಮುಂದೆ ಬಂದರು.

ರಾಮೇನಹಳ್ಳಿ ಶ್ರೀನಿವಾಸ್ 32 ಬಗೆಯ ದಂಟಿನ ಸೊಪ್ಪಿನ ತಳಿಗಳನ್ನು ಬೆಳೆದು ಸಾವಯವ ಕೃಷಿಗೆ ಮುನ್ನುಡಿ ಬರೆದರು. ರವಿ - ಬಳ್ಳಿ ತರಕಾರಿಗಳು, ನೀಲೇಗೌಡರು- ಕರಿ ಮುದ್ದುಗ ರಾಗಿ, ಕೋಸು, ಪಾರ್ವತಿ - ಗೆಡ್ಡೆ ಗೆಣಸು, ನಾಗಮ್ಮ - ಮುಳ್ಳು ದಂಟು ಮೊದಲಾದ ತರಕಾರಿಗಳ ಬೆಳೆದರು. ಚಿನ್ನಮ್ಮ ನಿರ್ಲಕ್ಷಿಸಿದ್ದ ಎಳ್ಳಿಗಿಡಕ್ಕೆ ಪಾತಿ ಮಾಡಿ ನೀರು, ಗೊಬ್ಬರ ಕೊಟ್ಟರು‌. ಕುಮಾರಿ ಪೇರಳೆ ಗಿಡದಲ್ಲಿ ಜೋತುಬಿದ್ದಿದ್ದ ಕಾಯಿಗಳನ್ನು ಗಿಣಿಗಳು ತಿನ್ನದಂತೆ ಬಟ್ಟೆ ಕಟ್ಟಿದರು.

ವಿಷಮುಕ್ತ ತರಕಾರಿ ಬೆಳೆಯುವ ನಮ್ಮ ಪ್ರಯತ್ನಕ್ಕೆ ಮಳೆರಾಯ ಇನ್ನಿಲ್ಲದ ಕೋಟಲೆ ಕೊಟ್ಟ. ನರ್ಸರಿ ಕೂಡ ಮಾಡಲಾಗದಷ್ಟು ಮಳೆಯೋ ಮಳೆ. ನೆಟ್ಟ ಪೈರು ನೆಲ ಬಿಟ್ಟು ಮೇಲೇಳಲೇ ಇಲ್ಲ. ಅಣ್ಣೇ ಸೊಪ್ಪು, ಗಣಿಕೆ ಸೊಪ್ಪು, ಬಿದಿರು ಕಳಲೆ, ಸೊಕ್ಕತ್ತಿ ಸೊಪ್ಪು ಮೊದಲಾದ ತಿನ್ನುವ ಕಳೆಗಳು ವೈನಾಗಿ ಬಂದವು.

Image

ಆಗಸ್ಟ್ ಮೊದಲ ವಾರ ಮೈಸೂರಿನಲ್ಲಿ ನಡೆದ ಹಲಸಿನ ಮೇಳಕ್ಕೆ ನಮ್ಮ ಹೆಗ್ಗಡದೇವನಕೋಟೆ ರೈತರು ಇವನ್ನೆಲ್ಲ ಮಾರಾಟಕ್ಕೆ ತಂದರು. ಇದನ್ನು ಕಂಡ 'ನಮ್ದು ಮಾರುಕಟ್ಟೆ'ಯ ಕವಿತಾ, "ಕೇಪಿ, ನಮ್ದು ಮಳಿಗೆ ಆವರಣದಲ್ಲಿ ರೈತರ ಸಂತೆ ಶುರು ಮಾಡೋಣ. ನಾವು ಎಲ್ಲ ಸಹಕಾರ ಕೊಡ್ತೀವಿ," ಎಂದರು.

ಆ ಕ್ಷಣ 'ಲಡ್ಡು ಬಂದು ಬಾಯಿಗೆ ಬಿತ್ತು' ಎನಿಸಿತು. ಮಳೆ ಬಿಡೋದು ಕಾಯ್ತಾ ಕುಂತರೆ ಮಾರುಕಟ್ಟೆ ಕೈ ಬಿಡ್ತದೆ ಅನ್ನಿಸಿ, "ಸರಿ ಕವಿತಾ, ಸಂತೆ ಶುರು ಮಾಡೇಬಿಡೋಣ," ಎಂದೆ.

ಕವಿತಾ ಸೆಪ್ಟೆಂಬರ್ 3ರ ಶನಿವಾರ ರೈತರ ಸಂತೆಗೆ ಮಹೂರ್ತ ಇಟ್ಟರು. ಬೆಳಗ್ಗೆ ಒಂಬತ್ತರಿಂದ ಎರಡು ಗಂಟೆವರೆಗೆ ಸಂತೆ ನಡೆಸುವುದೆಂದು ತೀರ್ಮಾನವಾಯಿತು. ಹನ್ನೆರೆಡು ಮಂದಿ ರೈತರು ತಮ್ಮ ತೋಟದ ಉತ್ಪನ್ನಗಳನ್ನು ಮಾರಾಟಕ್ಕೆ ತಂದರು. ದಂಟು ಸೊಪ್ಪು, ಬೆರಕೆ ಸೊಪ್ಪು, ನುಗ್ಗೇ ಸೊಪ್ಪು,  ಸೀಬೆಹಣ್ಣು, ಎಳ್ಳೀಕಾಯಿ, ಲಾಂಗ್ ಬೀನ್ಸು, ರಾಗಿ ಹಿಟ್ಟು, ನುಗ್ಗೆಕಾಯಿ, ಬಾಳೆಹಣ್ಣು, ಬಾಳೆದಿಂಡು, ಬಾಳೆ ಹೂವು, ಹಾಗಲ, ಹೀರೆ... ಮೊದಲಾದ ಪದಾರ್ಥಗಳು ಸಂತೆಗೆ ಬಂದವು. ಬಾಯಿ ಚಪ್ಪರಿಸಲು ಹಸಿ ತರಕಾರಿ ಚಾಟ್, ಕುಡಿಯಲು ಹನಿ ಕಾಫಿ, ಮಿಲ್ಲೆಟ್ ಡ್ರಿಂಕ್, ಘಮಗುಟ್ಟಲು ಆರ್ಗಾನಿಕ್ ಸೋಪು, ಶಾಂಪು ಮಳಿಗೆಗಳು ಕೂಡ ಜೊತೆಗಿದ್ದವು.

'ನಮ್ದು ಮಾರುಕಟ್ಟೆ'ಗೆ ಬರುವ ಗ್ರಾಹಕರಿಗೂ ಇದು ಹೊಸ ಅನುಭವ. ಇದುವರೆಗೂ ಪ್ಯಾಕೆಟ್ ನೋಡಿ ಸಾವಯವ ಉತ್ಪನ್ನ ಕೊಳ್ಳುತ್ತಿದ್ದ ಗ್ರಾಹಕರು, ಈಗ ರೈತರ ಮುಖ ನೋಡಿ ಸೊಪ್ಪು, ಹಣ್ಣು ತರಕಾರಿ ಖರೀದಿಸಿದರು. ಮಳೆಯ ಅವಾಂತರ, ತರಕಾರಿ ಬೆಳೆವ ಕಷ್ಟವನ್ನೆಲ್ಲ ಕೇಳಿ ತಿಳಿದುಕೊಂಡರು. ಚೌಕಾಸಿ ಮಾಡದೆ ರೈತರು ಕೇಳಿದ್ದಕ್ಕಿಂತ ಕೊಂಚ ಹೆಚ್ಚೇ ಕೊಟ್ಟರು. "ಚಿಲ್ಲರೆ ಇಲ್ಲಾಂದ್ರೆ, ಇರಲಿ ಬಿಡಿ," ಎಂದು ಉದಾರಿಗಳಾದರು.

Image
'ನಮ್ದು ರೈತರ ಮಾರುಕಟ್ಟೆ'

ಹೆಗ್ಗಡದೇವನಕೋಟೆಯ ಹಳ್ಳಿಗಳಿಂದ ಬಂದಿದ್ದ ನಮ್ಮ ಐವರು ರೈತರಿಗೆ ₹4,625 ವ್ಯಾಪಾರ ಆಯಿತು. "ಹಿತ್ತಲಲ್ಲಿ ಇದ್ದ ಕಬ್ಬಿನ ಮೂರು ಜಲ್ಲೆ ತಂದಿದ್ದೆ, 150 ರೂಪಾಯಿಗೆ ಹೋಯಿತು," ಎಂದ ಚಿನ್ನಮ್ಮನ ಮುಖ ಮೊರದಗಲ. "ತೆವರಿ ಮೇಲೆ ಬೆಳೆದಿದ್ದ ಇಪ್ಪತ್ತು ಕಟ್ಟು ಗಣಕೆ ಸೊಪ್ಪು ತಂದಿದ್ದೆ. ಎಲ್ಲ ಖಾಲಿ. 200 ರೂಪಾಯಿ ಸಿಕ್ತು. ಇನ್ನೂ ವಸಿ ತರಬೇಕಿತ್ತು ಕನ, ಎಲ್ಲ ಹೋಗದು..." ದೇವಮ್ಮಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಸಂಕಟ. ರವಿಯಂತೂ ಪುಲ್ ಖುಷ್; ನೆಲದ ಪಾಲಗ್ತಿದ್ದ ಎಳ್ಳಿಕಾಯಿ, ಸೀಬೆಹಣ್ಣು ದುಡ್ಡು ತಂದುಕೊಟ್ಟವು ಅಂತ.

ರೈತರ ಬಳಿ ಉಳಿದಿದ್ದ ಕೆ.ಜಿ.ಯಷ್ಟು ತರಕಾರಿ, ಹಣ್ಣುಗಳನ್ನು 'ನಮ್ದು ಮಾರುಕಟ್ಟೆ'ಯೇ ಕೊಂಡುಕೊಂಡಿತು.

'"100 ಬೇವಿನಕಡ್ಡಿ ಬೇಕು. ಮುಂದಿನ ವಾರ ತಂದುಕೊಡಿ," ಎಂದು ಗ್ರಾಹಕರೊಬ್ಬರು ಆರ್ಡರ್ ಕೊಟ್ಟರು. "ಔಷಧಿಗೆ ನೆಲನೆಲ್ಲಿ ಬೇಕು. ಒಂದು ಕಂತೆ ತರ್ತೀರಾ ಪ್ಲೀಸ್..." ಎಂದೊಬ್ಬರು ಚಿನ್ನಮ್ಮನ ಬಳಿ ಕೋರಿಕೆ ಸಲ್ಲಿಸಿದರು. "ನಮ್ಮ ಮನೆಯಲ್ಲಿ ಹಲಸಿನ ಗಿಡ ಕವರ್‌ಗೆ ಹಾಕಿದ್ದೇನೆ. ಮುಂದಿನ ವಾರ ತಂದುಕೊಡ್ತೀನಿ. ನಿಮ್ಮ ಹೊಲದಲ್ಲಿ ನೆಡಿ. ಒಳ್ಳೆ ಟೇಸ್ಟ್ ಹಣ್ಣು; ತೊಳೆ ಜಾಸ್ತಿ," ಎಂದು ನೀಲೇಗೌಡರಿಗೆ ಒಬ್ಬರು ಆಶ್ವಾಸನೆ ಕೊಟ್ಟರು. ಖುಷಿಯಾದ ನೀಲೇಗೌಡರು, ಸೀಬೆಯ ನಾಲ್ಕು ದ್ವಾರ್ಗಾಯಿ ಅವರ ಕೈಗಿತ್ತು, "ತಕಬನ್ನಿ ಬುದ್ದೀ... ನೆಡ್ತೀನಿ," ಎಂದು ಕೈ ಕುಲುಕಿದರು.

ರೈತ ಸಂತೆಯ ಸೊಗಸು ಕಳೆಗಟ್ಟುವುದೇ ಹೀಗೆ. ವ್ಯಾಪಾರ, ವಹಿವಾಟು, ದುಡ್ಡಿಗೂ ಮಿಗಿಲಾಗಿ  ಬಾಂಧವ್ಯಗಳ ಬೆಸೆಯುವ ಗಳಿಗೆ. ಗ್ರಾಹಕನ ಆರೋಗ್ಯ ಮತ್ತು ರೈತನ ನೆಮ್ಮದಿ ಜೊತೆಯಾಗಿ ಹೆಜ್ಜೆ ಹಾಕುವ ಸಂಭ್ರಮ.

'ನಮ್ದು ರೈತರ ಮಾರುಕಟ್ಟೆ' ಚಿತ್ರ ಕೃಪೆ: ಕೋಮಲ್ ಕುಮಾರ್
ನಿಮಗೆ ಏನು ಅನ್ನಿಸ್ತು?
6 ವೋಟ್