ಪಂಡಿತ್ ರಾಜೀವ್ ತಾರಾನಾಥ್ ಮಾತು | ಖಾನ್ ಸಾಹೇಬರು ಯಾವ ರಾಗ ಮುಟ್ಟಿದರೂ ಚಿನ್ನ

Ustad Akbar Ali Khan 6

ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ ಜನ್ಮದಿನ ಇಂದು. ಗುರುಗಳಾದ ಖಾನ್ ಅವರ ಪ್ರಯೋಗಗಳನ್ನು ಹತ್ತಿರದಿಂದ ಕಂಡ ಪಂಡಿತ್ ರಾಜೀವ್ ತಾರಾನಾಥ್ ಅವರ ಮಾತುಗಳು ಇಲ್ಲಿವೆ. ಖಾನ್ ಸಾಹೇಬರ ಸರೋದ್ ವಾದನ ಒಂದು ಅದ್ಭುತವಾದರೆ, ತಮ್ಮ ಗುರುಗಳ ಪ್ರಯೋಗಗಳ ಕುರಿತ ತಾರಾನಾಥರ ವಿವರಣೆ ಮತ್ತೊಂದು ಅದ್ಭುತ

ಯಾರೋ ಒಬ್ಬ ಪವಾಡ ಪುರುಷ ಹುಟ್ತಾನೆ. ಒಂದು ಕಲೆಗೆ ಅವನು ಮಹತ್ವದ ಕೊಡುಗೆ ನೀಡ್ತಾನೆ. ಹಾಗೆ ಕೊಡುಗೆಯನ್ನು ನೀಡ್ತಾ-ನೀಡ್ತಾ ಇಡೀ ಕಲೆಯನ್ನೇ ಬದಲಿಸಿಬಿಡ್ತಾನೆ. ಜಗತ್ತಿನ ಇತಿಹಾಸದಲ್ಲಿ ಇಂತಹ ಹಲವು ನಿದರ್ಶನಗಳು ಸಿಗ್ತವೆ. ಬಿಥೋವೆನ್ ಹಾಗಿದ್ದ, ಬಾಕ್ ಹಾಗಿದ್ದ.

Eedina App

ನಾವು ಗಮನಿಸಬೇಕಾದ್ದು ಅವರು ಬರೋದಕ್ಕಿಂತ ಮೊದಲು ಆ ಕಲೆ ಹೇಗಿತ್ತು, ಅವರ ನಂತರದಲ್ಲಿ ಆ ಕಲೆ ಏನಾಯ್ತು ಅನ್ನೋದನ್ನು. ಉದಾಹರಣೆಗೆ, ರವೀಂದ್ರನಾಥ್ ಟ್ಯಾಗೋರ್ ಅಂತಹವರನ್ನು ಗಮನಿಸಿ. ಅಂತಹವರನ್ನು ನಾನು ಬೇರೆ ಎಲ್ಲೂ ನೋಡೇ ಇಲ್ಲ. ಕಲೆ ಒಂದನ್ನೇ ಅಲ್ಲ, ಅವರು ಜನರ ಆಡುಮಾತನ್ನೇ ಬದಲಿಸಿಬಿಟ್ಟರು. ರವೀಂದ್ರನಾಥ್ ಅವರ ಬರುವಿಗೆ ಮುನ್ನ ಬಂಗಾಲದ ಮಧ್ಯಮ ವರ್ಗ, ಅಂದರೆ ಅಲ್ಲಿನ 'ಭದ್ರಲೋಕ್' ಮಾತನಾಡ್ತಿದ್ದ ಬಂಗಾಲಿ ಭಾಷೆಯನ್ನೇ ಟ್ಯಾಗೋರ್ ಬದಲಿಸಿಬಿಟ್ಟರು. ಅವರು ಒಂದು ಸರಳವಾದ ಭಾಷೆಯನ್ನು ರೂಢಿಗೆ ತಂದರು. ಅಷ್ಟೇ ಅಲ್ಲ, ಆ ಭಾಷೆಯನ್ನು ಬೇರೆ ಯಾವ-ಯಾವ ಆಯಾಮಗಳಲ್ಲಿ ಬಳಸಬಹುದೋ ಅಷ್ಟೂ ಆಯಾಮಗಳಲ್ಲಿ ಬಳಸಿದರು. ರವೀಂದ್ರ ಸಂಗೀತವನ್ನೂ ಸೃಷ್ಟಿ ಮಾಡಿದರು. ಅವರ ಕಾಲಕ್ಕಿಂತ ಬಹಳ ಮುಂದಿದ್ದರು.

ಖಾನ್ ಸಾಹೇಬರು ಸರೋದ್ ಸಂಗೀತವನ್ನೇ ಹೇಗೆ ಬದಲಿಸಿಬಿಟ್ಟರು ಅನ್ನೋದು ಈಗ ಮುಖ್ಯ.  ಈಗ ನಾನು ಹೇಳುವುದೆಲ್ಲವೂ ತುಂಬಾ subjective ಆಗೇ ಇರುತ್ತದೆ. ಆದರೆ, ನೀವು ಆ ಸಂಗೀತವನ್ನು ಕೇಳಿದರೆ, ನಿಮಗೆ ವ್ಯತ್ಯಾಸ ತಿಳಿಯಬಹುದು. ಸರೋದ್ ನುಡಿಸಾಣಿಕೆ ತುಂಬಾ ಸ್ಟಕ್ಯಾಟೋ ಆಗಿತ್ತು. ಈಗ ನಾವು ಬಾರಿಸುವ ಸರೋದ್‌ನ ಈ ಆಕೃತಿ, ಅಷ್ಟು ತಂತಿಗಳು, ಒಟ್ನಲ್ಲಿ ಆ ಕ್ವಾಲಿಟಿ ಇವೆಲ್ಲವನ್ನೂ ಮೊಟ್ಟಮೊದಲಿಗೆ ಕಲ್ಪಿಸಿಕೊಂಡು, ವಿನ್ಯಾಸಗೊಳಿಸಿದವರು ಉಸ್ತಾದ್ ಅಲ್ಲಾವುದ್ದೀನ್ ಖಾನ್‌ ಸಾಹೇಬರು. ಆ ವಿನ್ಯಾಸವನ್ನು ಸಿದ್ಧಪಡಿಸಿ ತಮ್ಮ ಸಹೋದರ ಆಯತ್ ಅಲಿ ಖಾನ್ ಅವರಿಗೆ ಕೊಟ್ಟರು. ಅವರು ಅದರ ಆಧಾರದ ಮೇಲೆ ಸರೋದ್ ಮಾಡಿ, ಅದನ್ನು ಅಲಿ ಅಕ್ಬರ್‌ ಖಾನ್ ಅವರಿಗೆ ಕೊಟ್ಟರು. ಅದೇ ಸರೋದನ್ನು ಅವರು ಕೊನೇ ತನಕ ಬಾರಿಸಿದರು.

AV Eye Hospital ad
Ustad Allavuddhin Khan
ಉಸ್ತಾದ್ ಅಲ್ಲಾವುದ್ದೀನ್ ಖಾನ್‌

ಆ ಸರೋದ್ ಅದೆಷ್ಟು ಹಳೆಯದಾಗಿತ್ತೆಂದರೆ, ಅದರೊಳಗೆ ಮರದ ಪುಡಿ ಉದುರುತ್ತಿತ್ತು. ಏನಾದರೂ ತೆಗೆಯೋಕ್ಕೆ ಹೋದರೆ ಪುಡಿ ಬಿದ್ದುಬಿಡ್ತಾ ಇತ್ತು. ಏಕೆಂದರೆ, ಅದು ಅಷ್ಟು ಒಣಗಿಹೋಗಿತ್ತು. ಅದನ್ನವರು ಸುಮಾರು ಇಪ್ಪತ್ತರ ದಶಕದಲ್ಲಿ ಕೊಟ್ಟಿದ್ದರು ಅನ್ನಿಸುತ್ತದೆ. ಅಂತಹ ಸರೋದ್ ಇನ್ನೊಂದಿಲ್ಲ. ಈ ಸರೋದ್‌ನಲ್ಲಿ 'ಆಸ್' ಅಂದರೆ, 'sustenance of sound' ಸಾಧ್ಯವಾಗಿತ್ತು. ಅಂದರೆ, ನೀವು ಮೀಟು ಹಾಕಿದ ಮೇಲೂ ನಾದ ಸ್ವಲ್ಪ ಹೊತ್ತು ಉಳಿದುಕೊಂಡಿರುತ್ತಿತ್ತು. ಅದು ವಾದ್ಯದಲ್ಲೇ ಇದೆಯಾ ಅಥವಾ ನಾವು ನುಡಿಸುವುದರಲ್ಲಿ ಇದೆಯಾ ಎನ್ನುವುದನ್ನು ಹೇಳೋದು ಸ್ವಲ್ಪ ಕಷ್ಟ. ಆದರೆ ನನಗದು ಗೊತ್ತು; ಹಾಗೆ ಮಾಡಬಲ್ಲ ಶಕ್ತಿ ಅದರಲ್ಲೇ ಇದೆ. ಅದಕ್ಕಿಂತ ಹಿಂದಿನ ಸರೋದಿನಲ್ಲಿ ಇರಲಿಲ್ಲ. ಏಕೆಂದರೆ, ಅದರ ಮೇಲೂ ನಾನು ಕೈ ಆಡಿಸಿದ್ದೇನೆ.

ಇನ್ನೊಂದು ವಿಷಯವೆಂದರೆ, ಒಂದು ವಾದ್ಯ ನಿಮಗೇನು ಕೊಡುತ್ತದೋ ಅದರಿಂದ ನಿಮ್ಮ ಸಂಗೀತ ಬೆಳೆಯುತ್ತದೆ. ನಿಮ್ಮ ಕಲೆಯನ್ನು ಆ ವಾದ್ಯವೂ ರೂಪಿಸುತ್ತದೆ. ವಾದ್ಯದಲ್ಲಿ ಇಲ್ಲದ ಸಾಧ್ಯತೆಯನ್ನು ನೀವು ಸ್ವಲ್ಪ ಮಟ್ಟಿಗೆ ಅದಕ್ಕೆ ತಂದುಕೊಡಬಹುದು. ಕಲೆಯನ್ನೂ ಸ್ವಲ್ಪ ವಿಸ್ತರಿಸಬಹುದು. ಮಹಾಲಿಂಗಂ ಏನು ಮಾಡಿದರು? ಅವರು ಹಿಂದಿನ ಕೊಳಲಿನಿಂದ ತೆಗೆದುಕೊಳ್ಳಲಿಲ್ಲ. ನಾದಸ್ವರದಿಂದ ತಮ್ಮ ಸಂಗೀತವನ್ನು ವಿಸ್ತರಿಸಿಕೊಂಡರು. ನಾದಸ್ವರದ ಉತ್ಕಟತೆ ಏನಿತ್ತೋ ಅದನ್ನು ಕೊಳಲಿನಲ್ಲಿ ತರಲು ಪ್ರಯತ್ನಿಸಿದರು. ಹಾಗಂತ ಅದರಲ್ಲಿ ಪಿಯಾನೋ ಬರಲಿ ಅಂತಂದರೆ ಬರೋದಿಲ್ಲ.

ಹೀಗೆ ಸರೋದ್‌ಗೂ ಕೆಲವು ಸಾಧ್ಯತೆಗಳಿರುತ್ತವೆ. ಅದನ್ನು ಸಂಪೂರ್ಣವಾಗಿ ಹೊರತೆಗೆದವರು ಅಲಿ ಅಕ್ಬರ್‌ ಖಾನ್ ಸಾಹೇಬರು. ಖಾನ್‌ ಸಾಹೇಬರ ತಂದೆ ಅವರಿಗೆ ಹೇಳಿದ್ದರಂತೆ, “ನಾನು ನನ್ನ ಜೀವನವೆಲ್ಲ ಈ ವಿದ್ಯೆಯನ್ನು ನಿನಗಾಗಿ ಶೇಖರಿಸುವುದರಲ್ಲೇ ಇದ್ದೆ. ಅದನ್ನೆಲ್ಲ ಶೇಖರಿಸಿ ಆ ಮುದ್ದೆಯನ್ನು ನಿನಗೆ ಕೊಟ್ಟಿದ್ದೇನೆ. ನೀನದನ್ನು ಹದ ಮಾಡಬೇಕು.” ಈ ಮಾತನ್ನು ಖಾನ್‌ ಸಾಹೇಬರು ನನಗೆ ಹೇಳಿದರು. ಖಾನ್‌ ಸಾಹೇಬರು ಈ 'ಆಸ್'ನ ಸಾಧ್ಯತೆಗಳನ್ನು ತುಂಬಾ ಅನ್ವೇಷಿಸಿದ್ದರು.

Ustad Akbar Ali Khan 5
ಉಸ್ತಾದ್ ಅಲಿ ಅಕ್ಬರ್ ಖಾನ್

ಈ ಎಲ್ಲ ಪ್ರಯತ್ನಗಳೂ ಮೂಲತಃ ಗಾಯನ ಕೇಂದ್ರಿತವಾದವು (ಗಾಯನವನ್ನೇ ಆಧರಿಸಿದೆ). ಎಲ್ಲವೂ ಗಾಯನದಿಂದಲೇ ಹೊರಬಂದಿದ್ದು. ನಾವು ಎಲ್ಲರೂ ವೋಕಲ್ ಮ್ಯೂಸಿಕ್ಕನ್ನೇ ನಮ್ಮ ವಾದ್ಯದಲ್ಲಿ ನುಡಿಸಲು ಹೋಗ್ತೀವಿ. ಅದು ಯಾರೇ ಆಗಲಿ, ನಮ್ಮ ಸಂಗೀತದ ಕೇಂದ್ರದಲ್ಲಿ ಈ ವೋಕಲ್ ಮ್ಯೂಸಿಕ್ ಇರುತ್ತದೆ. ಹಾಗಾಗಿ ಹಾಡುಗಾರಿಕೆ ತಿಳಿದಿರಬೇಕು. ನಮಗೆ ಅದರ ರುಚಿ ಇರಬೇಕು, ಅದರ ರುಚಿ ಇಲ್ಲದಿದ್ದರೆ ನಾವು ನುಡಿಸುವುದು ಕೂಡ ತುಂಬಾ ಯಾಂತ್ರಿಕ ಆಗಿಬಿಡುತ್ತದೆ; ಅದು ಸರೋದ್ ಇರಬಹುದು, ಬಾನ್ಸುರಿ ಇರಬಹುದು ಅಥವಾ ಯಾವುದೇ ಇರಬಹುದು. ಖಾನ್‌ ಸಾಹೇಬರ ಧ್ವನಿ ಚೆನ್ನಾಗಿಲ್ಲ, ರವಿಶಂಕರ್‌ಜೀ ಅವರ ಧ್ವನಿ ಚೆನ್ನಾಗಿಲ್ಲ, ಆದರೆ, ಅವರ ಸಂಗೀತ ಸೊಗಸಾಗಿರುತ್ತದೆ. ಅವರು ವೋಕಲ್ ಮ್ಯೂಸಿಕ್ ತರೋ ಪ್ರಯತ್ನ ಮಾಡ್ತಾ ಇದ್ರು.

ತಮ್ಮ ಮೊದಲ ರೆಕಾರ್ಡಿಂಗ್ ನುಡಿಸಿದಾಗ ಅವರಿಗೆ ಹತ್ತೊಂಬತ್ತು ವರ್ಷ. ಅವರು ಪೀಲೂ ಮತ್ತು ಶ್ರೀರಾಗ್ ನುಡಿಸಿದ್ದರು. ನೀವು ಅದನ್ನು ಕೇಳಿ, ನಂತರ ಅವರ ಈಚೀಚಿನ ಮುದ್ರಿಕೆಗಳನ್ನು ಕೇಳಿದ್ರೆ, ಅವರಲ್ಲಾದ ಬದಲಾವಣೆಯನ್ನು ಗುರುತಿಸಬಹುದು. ದಿನದಿಂದ ದಿನಕ್ಕೆ ತಮ್ಮ ಸಂಗೀತವನ್ನು ವೋಕಲ್ ಮ್ಯೂಸಿಕ್‌ಗೆ ಹತ್ತಿರ ಹತ್ತಿರ ತಂದುಬಿಟ್ಟರು. ಹಾಡುಗಾರಿಕೆಯಲ್ಲಿನ ದ್ರುಪದ್ ಅಂಗಕ್ಕೆ ಹತ್ತಿರ ತಂದರು. ಅಲ್ಲಾವುದ್ದೀನ್ ಖಾನ್‌ ಸಾಹೇಬರು ದ್ರುಪದ್ ಅಂಗದಲ್ಲಿ ನುಡಿಸ್ತಾ ಇದ್ರು.  ನಾವೆಲ್ಲರೂ ಅದನ್ನು ನುಡಿಸ್ತೀವಿ. ಅದನ್ನು ನುಡಿಸುತ್ತ, ಅದರಲ್ಲಿ ಸೊಗಸನ್ನು ಪಡೆಯುತ್ತ, ಮಜಾ ಪಡೆಯುತ್ತ ಇರುವಾಗಲೇ, ಅದ್ಹೇಗೋ ನಮ್ಮಲ್ಲಿರುವ ಬೇರೆ ಸಂಗೀತದ ಅನುಭವವೆಲ್ಲ ಅದರೊಳಕ್ಕೆ ಬಂದುಬಿಡುತ್ತದೆ. ಅದು ಖ್ಯಾಲ್‌ನಿಂದ ಬರುತ್ತೆ. ಹಾಗೇ ಉಳಿದದ್ದರಿಂದಲೂ ಬರುತ್ತೆ. ಹಿಂದಿಯಲ್ಲಿ ಇದನ್ನು 'ಹರ್‌ಕತ್' ಅನ್ತಾರೆ. 'ಹರ್‌ಕತ್' ಅನ್ನೋದು ಸಣ್ಣ ಹೂವಿದ್ದ ಹಾಗೆ. ನಾವು ಎಲ್ಲೆಲ್ಲೋ ಸೊಗಸು ಪಡೆದಿರ‍್ತೀವಿ, ಅದನ್ನೆಲ್ಲಾ ಇಲ್ಲಿ ತಂದು ಸೇರಿಸಲು ಪ್ರಯತ್ನಿಸುತ್ತಾ ಇರ‍್ತೀವಿ. ತಿಳಿದು ಮಾಡ್ತೀವೋ ಅಥವಾ ತಿಳೀದೆ ಮಾಡ್ತೀವೋ... ಅದು ಬಂದುಬಿಡುತ್ತೆ. ಒಟ್ಟಿನಲ್ಲಿ ಕಲೆ ಬದಲಾಗುತ್ತದೆ. ಬೆಳೆಯುತ್ತೆ ಅನ್ನೋಣ. ಇದನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ಕಲೆ ಬದಲಾಗಿದೆ ಅಂದರೆ ಅದು ಬೆಳೆದಿದೆ ಎಂದರ್ಥ. ಕಲೆ ಅನ್ನೋದು ಡೈನಮಿಕ್. ಕೆಲವರು ಡೈನಮೈಸ್ ಮಾಡ್ತಾರೆ, ಇನ್ನು ಕೆಲವರು ತೆಪ್ಪಗೆ ಅದು ಹ್ಯಾಗಿದೆಯೋ ಹಾಗೆ ಮೊದಲಿನಿಂದ ಕೊನೆಯವರೆಗೂ ಇಟ್ಟಿರುತ್ತಾರೆ. ಆದರೆ, ಅಲಿ ಅಕ್ಬರ್ ಖಾನ್‌ ಸಾಹೇಬರು, ಬೀಥೊವನ್, ಶೇಕ್ಸ್‌ಪಿಯರ್ ಇವರುಗಳು ಆ ಕಲೆಯ ಒಳಗೆ ಹೊಕ್ಕರು. ಆ ಕಲೆಯೇ ಬದಲಾಗಿಬಿಡ್ತು.

ಸರೋದ್‌ನ ನಾದಗುಣ ಹೆಚ್ಚಿಸಿಬಿಟ್ಟರು

Ustad Akbar Ali Khan 3
ಉಸ್ತಾದ್ ಅಲಿ ಅಕ್ಬರ್ ಖಾನ್

ಒಂದು ವಾದ್ಯದ ನಾದ ಹೆಚ್ಚು ಹೊತ್ತು ಉಳಿದರೆ, ಸಸ್ಟೈನ್ ಆದರೆ, ಆಗ ಅದರಲ್ಲಿ ಹಾಡುಗಾರಿಕೆಯ ಕೆಲವು 'ಹರ್‌ಕತ್'ಗಳನ್ನು ಸೇರಿಸಿಕೊಳ್ಳುವುದಕ್ಕೆ ಆಸ್ಪದ ಆಗ್ತದೆ. ಅವುಗಳನ್ನು ಖಾನ್‌ ಸಾಹೇಬರು ಜೋಡಿಸಿಕೊಂಡರು. ಅಷ್ಟೇ ಅಲ್ಲ, ಅವುಗಳನ್ನು ವಾದ್ಯಕ್ಕೆ ಒಗ್ಗಿಸಿಕೊಂಡುಬಿಟ್ಟರು. ಚೌರಾಸಿಯಾ, ಪನ್ನಾಲಾಲ್ ಘೋಷ್, ಇಬ್ಬರೂ ಒಂದೇ ಘರಾನದವರು. ಅವರು ನುಡಿಸೋದನ್ನು ಕೇಳಿ ನೋಡಿ. ಚೌರಾಸಿಯಾ ಅವರ ಸಂಗೀತದಲ್ಲಿ ತಂತ್ರಗಾರಿಕೆ, ಇನ್‌ಸ್ಟ್ರುಮೆಂಟಲಿಸಂ ಹೆಚ್ಚಿಗೆ ಇದೆ. ಅದರಲ್ಲಿ ಸರೋದ್, ಸಿತಾರ್ ಏನು ಮಾಡುತ್ತೋ ಅದನ್ನವರು ತಮ್ಮ ಬಾನ್ಸುರಿಯಲ್ಲಿ ಮಾಡುವ ಪ್ರಯತ್ನ ಮಾಡ್ತಿರ‍್ತಾರೆ. ಝಾಲಾ ಬಾರಿಸ್ತಾರೆ.

ಆಮೇಲೆ, ಖಾನ್‌ ಸಾಹೇಬರು ಸರೋದಿನ ಎಲ್ಲ ಬಗೆಯ ಸ್ಟ್ರೋಕ್ಸನ್ನೂ (ಮೀಟುಗಳನ್ನು) ಶೋಧಿಸಿಬಿಟ್ಟರು. ಎಲ್ಲೆಲ್ಲಿ ಮೀಟಿದರೆ ಏನೇನು ನಾದ ಬರುತ್ತದೆ ಇವೆಲ್ಲವನ್ನೂ ಅನ್ವೇಷಿಸಿದರು. ಆದರೆ, ಅದಕ್ಕವರು ಹೆಸರಿಟ್ಟು ಫಿಕ್ಸ್ ಮಾಡಲಿಲ್ಲ. ಹೆಸರಿಡೋದು ಮುಖ್ಯವಲ್ಲ. ಅವರು ನುಡಿಸುವಾಗ ಅದನ್ನು ನೀವು ಕಂಡುಹಿಡಿದುಕೊಳ್ಳಬೇಕು. ಮೀನು ಎಲ್ಲೆಲ್ಲೋ ಓಡಾಡ್ತ್ತಾ ಇರುತ್ತೆ. ಅದು ನಾನು ಈ ದಿಕ್ಕಿಗೆ ಹೋಗ್ತಾ ಇದ್ದೀನಿ ಅಂತ ಹೇಳುತ್ತೇನು? ನೀವು ಅದನ್ನು ಎಲ್ಲಿ ಹಿಡಿದುಕೊಳ್ತೀರೋ ಅಲ್ಲಿ ಸಿಗುತ್ತೆ, ಇಲ್ಲದಿದ್ದರೆ ಸಿಗೋದಿಲ್ಲ. He made remarkable use of the tonal qualities of the Sarod. ಹಿಂದುಸ್ತಾನಿ ಫ್ಲೂಟ್‌ನಲ್ಲಿ ಮಾಡಿದವರು ಚೌರಾಸಿಯಾ. ಭಾರತೀಯ ವಾದ್ಯಗಳಲ್ಲಿ ನನಗೆ ತಿಳಿದ ಮಟ್ಟಿಗೆ ಟೋನಲ್ ಪಾಸಿಬಲಿಟೀಸ್ ಬಹಳ ಕಡಿಮೆ. ಯಾಕೆಂದರೆ, ನಮ್ಮ ಜನ ಅದರ ಮೇಲಿನ ಅಲಂಕಾರ, ಕೆತ್ತನೆಯ ಕೆಲಸ ಇವುಗಳ ಮೇಲೆ ಹೆಚ್ಚು ಸಮಯ ಕಳೆದುಬಿಟ್ಟರು. ಆದರೆ, ಯುರೋಪಿನಲ್ಲಿ ಅದರ ಶ್ರವಣಗುಣದ (ಅಕೂಸ್ಟಿಕ್ಸ್) ಬಗ್ಗೆ ಕೆಲಸ ಮಾಡಿದರು. ಸ್ಟ್ರಾಡಿವಾರಿಯಸ್ ಈ ಕೆಲಸವನ್ನು ಮಾಡಿದ. ಕಡೆಯಲ್ಲಿ ಅವನದೊಂದು ವಿಶೇಷ ವಾರ್ನಿಷ್ ಇತ್ತು. ಅದರಿಂದ ಆ ನಾದ ಉಂಟಾಗುತ್ತಿತ್ತು. ನಮ್ಮಲ್ಲಿ ಆ ಬಗ್ಗೆ ಯೋಚಿಸೋದೇ ಇಲ್ಲ. ಅದು ದೇವರಿಗೆ ಬಿಟ್ಟಿದ್ದು ಅಂದುಬಿಡ್ತಾರೆ. ಖಾನ್‌ ಸಾಹೇಬರು ಬಂದ ಮೇಲೆ ಸರೋದಿನ ಟೋನಲ್ ಪಾಸಿಬಲಿಟೀಸ್ ಅಗಾಧವಾಯಿತು.

ಇರೋ ರಾಗದಲ್ಲಿ ಹೊಸತನ ಹುಟ್ಟಿಸ್ತಾ ಇದ್ರು

ರಾಗಗಳ ಬಗ್ಗೆ ಹೇಳೋದಾದ್ರೆ, ಅವರು ಕೆಲವು ರಾಗಗಳನ್ನು ಹೊಸದಾಗಿ ಮಾಡಿದರು. ಈ ಕೆಲಸವನ್ನು ಎಷ್ಟೋ ಜನ ಮಾಡಿದರು. ರಾಗಗಳ ಸೃಷ್ಟಿ ಎನ್ನುವುದು ನಿಜವಾದ ಅರ್ಥದಲ್ಲಿ ಆಗಿದ್ದು ಯುರೋಪಿನಲ್ಲಿ. ನಮ್ಮ ಹಾಗೆ ಒಂದು ಸ್ವರವನ್ನು ತೆಗೆದು ಮತ್ತೊಂದು ಸ್ವರವನ್ನು ಹಾಕುವುದಲ್ಲ. ಇಡೀ ರಚನೆಯನ್ನೇ ಬರೀತಾರೆ. ನಾವು ಬರೀ ಸುಮ್ಮನೆ ಆರೋಹ ಮತ್ತು ಅವರೋಹದಲ್ಲಿ ಸ್ವಲ್ಪ ಬದಲಾಯಿಸ್ತೇವೆ. ಅದನ್ನೇ ಉಜ್ಜುತ್ತಾ ಇದ್ದರೆ ಏನೋ ಹುಟ್ಟುತ್ತೆ. ಅದನ್ನು ಖಾನ್‌ ಸಾಹೇಬರು ಕೂಡ ಮಾಡಿದರು; ಚಂದ್ರನಂದನ್ ಅನ್ನೋ ರಾಗ. ಈಗ ನಾನು ಬಾರಿಸುವಾಗ ಮಂದಿ ಅದನ್ನು ಬಾರಿಸು ಅಂತ ಬೇಡ್ತಾರೆ. ಇನ್ನು, ಗೌರಿಮಂಜರಿ ಮುಂತಾದ ಕೆಲವು ರಾಗಗಳನ್ನು ಮಾಡಿದರು. ಅವು ನನ್ನ ಮಟ್ಟಿಗೆ ಅಷ್ಟು ಮುಖ್ಯವಲ್ಲ. ರಾಗಸೃಷ್ಟಿ ಮಾಡೋದು ಅಷ್ಟು ದೊಡ್ಡದೇನಲ್ಲ.  

Ustad Akbar ali khan
ಉಸ್ತಾದ್ ಅಲಿ ಅಕ್ಬರ್ ಖಾನ್

ನಿಜವಾದ ಹೆಚ್ಚುಗಾರಿಕೆ ಅಂದರೆ, ಇರೋ ರಾಗಗಳಲ್ಲಿ ಹೊಸತನ ತರೋದು. ಉದಾಹರಣೆಗೆ, ಕಲ್ಯಾಣಿ, ಯಮನ್ ಇವುಗಳನ್ನು ಲಕ್ಷ-ಲಕ್ಷ ಮಂದಿ ನುಡಿಸಿರ‍್ತಾರೆ. ಯಾವುದೋ ಕಾಲದಿಂದ ಬಂದಿದ್ದು ಅವು. ಅದನ್ನು ನೀವಿಂದು ನುಡಿಸ್ತೀರಿ. ಮಾತಿನ ಹಾಗೆ ಅದು. ಈ ಕನ್ನಡ ಮಾತನ್ನು ಎಷ್ಟು ಮಂದಿ ಆಡ್ತಾ ಇರ‍್ತಾರೆ. ಹೀಗೆ ಮಾತಾಡುತ್ತ ಒಂದು ಹೊಸ ವಾಕ್ಯವನ್ನು ಒಂದು ಹೊಸ ರೀತಿಯಲ್ಲಿ ಮೂಡಿಸಿದರೆ ಅವನು ದೊಡ್ಡ ಮನುಷ್ಯ ಆಗ್ತಾನೆ. ಹೌದಾ? ಮಾತಿನ ಹಾಗೆ ನಮ್ಮ ಸಂಗೀತ. ಈಗ ನಾನು ಮಾತನಾಡಿದ್ದು ಇನ್ನೊಂದು ಅರ್ಧ ಗಂಟೆಗೆ ನಾನು ಮಾತನಾಡಲಿಕ್ಕಿಲ್ಲ. ಬಹಳ ದೊಡ್ಡ ರಾಗಗಳು, ಘನರಾಗಗಳು ಅಂತಾರಲ್ಲ ಅವುಗಳು, ಉದಾಹರಣೆಗೆ ಯಮನ್, ಮಾರ್ವಾ, ದರ್ಬಾರಿ ಕಾನಡ, ಮುಂತಾದ ಹಳೆಯ ರಾಗಗಳು ಎಷ್ಟೋ ಜನರ ಬಾಯಲ್ಲಿ, ಕೈಯಲ್ಲಿ ಸವೆದುಹೋಗಿವೆ. ಅಂತಹ ರಾಗಗಳಲ್ಲಿ ಅವರು ಹೊಸತನ ಹುಟ್ಟಿಸ್ತಾ ಇದ್ರು. ಅಂತಹ ರಾಗದಲ್ಲಿ ಅವರು ಹಿತವನ್ನು, ಒಂದು ಅಪೂರ್ವವಾದ ಸುಖವನ್ನು ಹುಟ್ಟಿಸ್ತಾ ಇದ್ರು. ಯಾವುದೋ ಒಂದು ರಾಗದಲ್ಲಿ, ಒಂದು ಹಾಡಿನಲ್ಲಿ ನೆಲೆಗೊಂಡು ಬಿಡ್ತಾ ಇದ್ರು. ಅವು ನಿಮಗೆ ತಿಳಿದಿರುತ್ತೆ. ಹೆಂಗಪ್ಪಾ ಅಂದ್ರೆ, ಸಂಗೀತಗಾರ ಮತ್ತು ಕೇಳುಗರಾದ ನೀವು, ನಿಮ್ಮಬ್ಬರ ನಡುವೆ ಆ ರಾಗ ಹರಿದಾಡ್ತಾ, transact ಮಾಡ್ತಾ ಇರುತ್ತೆ. ಆಟ ಆಡ್ತಾ ಇರುತ್ತೆ. ಅದೇ ಅಭಿಜಾತ ಸಂಗೀತ. ಅದರಲ್ಲಿ 'ಸ' ಇರುತ್ತೆ. 'ಸ' ನಮ್ಮೆಲ್ಲರಿಗೂ ಗೊತ್ತು.  ಅದರಲ್ಲಿ ನಾವೆಲ್ಲ ನೆಮ್ಮದಿಯಾಗಿ ಇದ್ದುಬಿಟ್ಟಿರುತ್ತೀವಿ. ಅಲ್ಲಿಂದ ಒಬ್ಬ ಹೊರಟುಬಿಡ್ತಾನೆ. ಅಲ್ಲಿಂದ ಮುಂದೆ ಮೂರನೇ, ನಾಲ್ಕನೇ ಹೆಜ್ಜೆಗೆ ನಮಗೆ ಅವನ ಹಿಂದೆ ಹೋಗೋಕ್ಕಾಗೋದಿಲ್ಲ. ಆಗೇನು ಮಾಡ್ತೀವಿ, ನಾವು ಅವನನ್ನು ನೋಡ್ತಾ ಇರ‍್ತೀವಿ. ಅವನು ಎಲ್ಲಿ ಹೋಗ್ತಾ ಇದ್ದಾನೆ, ಆ ರಾಗದ ಚೌಕಟ್ಟು ಗಮನಿಸ್ತೀವಿ, ಅದರ ಸರಹದ್ದುಗಳು, ಅವು ನಮಗೆ ಗೊತ್ತು. ಅವು ಗೊತ್ತಿರೋದ್ರಿಂದ ಅವನು ಎಲ್ಲಿ ಹೋಗ್ತಾ ಇದಾನೆ ಅನ್ನೋದನ್ನ ನೋಡ್ತಾ ಇರ‍್ತೀವಿ. From the known to the unknown. ಅವನು ಮೇಲಿನ 'ಸ' ಮುಟ್ಟಿದಾಗ ನಮಗೆಲ್ಲರಿಗೂ ಒಂದು ಸೆನ್ಸ್ ಆಫ್ ರಿಲೀಫ್, ಒಂದು ಸಮಾಧಾನ ಮೂಡುತ್ತದೆ. ಅದು ನಮ್ಮೆಲ್ಲರ ಅನುಭವ. ಹಾಗಾಗಿಯೇ, ಒಬ್ಬ ನಾಕು ಕಾಸಿನ ಸಂಗೀತಗಾರ ಕೂಡ ನಿಷಾದ ಮುಟ್ಟಿಬಿಟ್ಟು ನಿಮ್ಮನ್ನ ಆಟ ಆಡಿಸ್ತಾ ಇರ‍್ತಾನೆ. ಅವನು ಯಾವಾಗ ಅಲ್ಲಿಂದ ಬರ‍್ತಾನೆ ಅಂತ ನೀವು ಚಡಪಡಿಸ್ತಾ ರ‍್ತೀರಿ. ಆಮೇಲೆ 'ಸ' ಬಂದ ಕೂಡಲೇ ಆಹಾ ಅನ್ನಿಸುತ್ತದೆ, ಅಲ್ವಾ? A dialectic movement from the anonymous to the individual and then back to the anonymous. ಅನಾನಿಮಸ್ ಆದಷ್ಟೂ ರಿಲೀಫ್ ಜಾಸ್ತಿ, ಇಂಡುವಿಜುಯಲ್ ಆದಷ್ಟೂ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚು. ನಾಲ್ಕು ಜನ ಇದ್ದ ಹಾಗೆ ನನ್ನ ಪಾಡಿಗೆ ನಾನು ಇರ‍್ತೀನಯ್ಯ ಅಂದರೆ, ಅದು ನೆಮ್ಮದಿ. ಅದೊಂದು ಇದ್ದೇ ಇದೆಯಲ್ಲ, “ನಾಲ್ಕು ಜನ ಮಾಡಿದ ಹಾಗೆ ಮಾಡು. ನಿನಗೇನು ತುರುಸು ಇದೆಯೇನೋ?” ಅಂತ ನಮ್ಮ ಹಿರಿಯರು ಹೇಳ್ತಾರಲ್ಲ. ಇದನ್ನು ಎಲ್ಲ ಸಂಗೀತಗಾರರೂ ತಿಳಿದುಕೊಂಡಿರುತ್ತಾರೆ. ಟೆನ್ಷನ್‌ನಿಂದ ರಿಲೀಫ್, ಅನಾನಿಮಿಟಿ ಇಂದ ಇಂಡಿವಿಜುಯಾಲಿಟಿ. ಉದಾಹರಣೆಗೆ, ಈ ಯಮನ್ ರಾಗ ಅನ್ನೋದು ಒಂದು ದೊಡ್ಡ ಹೊಳೆ. ಎಲ್ಲರೂ ಈಜಿರುವ ಹೊಳೆ. ಅದರಲ್ಲಿ ನಿಮಗೇನು ಹೊಸತು ಸಿಕ್ಕೀತು? ಅಡಿಗರು ಹೇಳಿದ ಹಾಗೆ ಕೆಲವರು, 'ಅನ್ಯರೊರೆದುದನೇ' ಒರೆಯುತ್ತಾರೆ. ಅದು ಒಂದು ಕೊನೆ, ಇನ್ನೊಂದು ಕೊನೆಯಲ್ಲಿ ಕೋತಿ ಆಡಿಸ್ತೀನಿ, ದನ ಒದರೋ ಹಾಗೆ ಒದರ‍್ತೀನಿ ಅಂತ ಹೇಳೋ ಅಂತಹವರೂ ಇದ್ದಾರೆ. ಸುಮ್ಮನೆ ಸರ್ಕಸ್ಸು. ಇವೆರಡೂ ಯಾತಕ್ಕೂ ಬಾರದ್ದು.

ಇದನ್ನು ಓದಿದ್ದೀರಾ?: ನುಡಿಚಿತ್ರ | ದಿಲ್ಲಿಯ ರಾಜಕುಮಾರಿ ನಾಚ್ಚಿಯಾರ್ ಮತ್ತು ಮೇಲುಕೋಟೆಯ ಚೆಲುವನಾರಾಯಣ

ತಿಳಿದಿರೋ ರಾಗಗಳಲ್ಲಿ ಅಂದರೆ, ಕೇಳುವವನಿಗೂ ತಿಳಿದಿದೆ ಮತ್ತು ಕಲಾವಿದನಿಗೂ ತಿಳಿದಿದೆ, ಆ ರಾಗವನ್ನು ಬೋರಾಗದಂತೆ, ಉದಾಹರಣೆಗೆ ಈಗ, 'ಕೃಷ್ಣಾ ನೀ ಬೇಗನೆ ಬಾರೋ' ಕೃತಿಗೆ ಹತ್ತಿರದ ಚಲನ್‌ಗಳನ್ನು ಕೊಡ್ತಾ ಹೋದಾಗ, ನಾವು "ಆಹಹಹಾ..." ಅಂದುಬಿಡ್ತೀವಿ. ಆದರೆ, ಬರೀ ಗೊತ್ತಿರೋದನ್ನೇ ಮಾಡ್ತಾ ಹೋದರೆ, ಇವನು ಬರೀ ಚರ್ವಿತಚರ್ವಣ ಕೊಡ್ತಾನೆ ಅಂತ ಆಗಿಬಿಡುತ್ತೆ.  ಆದರೆ, ಇನ್ನೊಂದು ಬಗೆಯ ಕಲಾವಿದ ಇರ‍್ತಾನೆ. ಅವನು ನಿಮ್ಮನ್ನು ತನ್ನ ಜೊತೆ ಉಳಿಸಿಕೊಳ್ಳೋದಕ್ಕೆ ಇದನ್ನೂ ಕೊಡ್ತಾನೆ ಮತ್ತು ಅಲ್ಲಿಂದ ಮುಂದಕ್ಕೆ ನಿಮ್ಮನ್ನು ಬಿಟ್ಟು ಅದೇ ರಾಗದಲ್ಲಿ ನಿಮ್ಮನ್ನು ದಿಗ್ಭ್ರಮೆಗೊಳಿಸುವಂಥದ್ದನ್ನೂ ಕೊಡ್ತಾನೆ. ಅದಕ್ಕೆ ತುಂಬ ಒಳ್ಳೆ ನಿದರ್ಶನ ಅಂತಂದ್ರೆ, ನಮ್ಮ ಟಿ ಆರ್ ಮಹಾಲಿಂಗಂ. ಕಾಂಭೋಜಿ ಎಲ್ಲರೂ ನುಡಿಸುವ ರಾಗ. ಅದನ್ನು ಅವರು ನುಡಿಸುವಾಗ ಹೀಗೆ ಮಾಡೋರು. ಅದನ್ನು ನುಡಿಸಿದಾಗ ಜನ, "ಆಹಾಹಾ... ಏನು ನುಡಿಸಿಬಿಟ್ಟ," ಅಂತ ಅನ್ನೋರು. ಅವರು ಕುಡಿದಿದ್ದಾರಾ ಅಥವಾ ನಾವು ಕುಡಿದಿದ್ದೀವಾ ಅಂತ ಅನ್ನಿಸಿಬಿಡೋದು. ಎಲ್ಲೆಲ್ಲೋ ಹೋಗಿ ಕೊನೆಗೆ ಒಂದು ಗುಡಿಯಲ್ಲಿದ್ದೀವೋ ಅಥವಾ ಮಾರುಕಟ್ಟೆಯಲ್ಲಿ ಇದ್ದೀವೋ, ಅಲ್ಲಿಗೆ ತಂದು ಸೇರಿಸಿಬಿಡೋರು. ಇಂತಹ ಕೆಲಸವನ್ನು ಖಾನ್‌ ಸಾಹೇಬರು ಮಾಡ್ತಿದ್ದರು. ಆ ರಾಗದ ಯಾವುದೋ ಮೂಲೆ, ಅಂತಹುದೊಂದು ಮೂಲೆ ಇದೆ ಅನ್ನೋದೇ ನನಗೆ ಗೊತ್ತಿಲ್ಲ, ಅಂತಹ ಮೂಲೆಯನ್ನು ಸೃಷ್ಟಿ ಮಾಡಿ, ಅದನ್ನು ಸುಷ್ಟವಾಗಿ ಮಾಡಿ, ಅದರಲ್ಲಿ ನೆಲೆಸಿ, ಅದನ್ನು ಮೂಲೆ ಅಲ್ಲ ಎನ್ನುವಂತೆ ಮಾಡಿ, ಅಲ್ಲಿ ಹೊಸ ಲೈಟ್ ಹಾಕಿ, ಅಲ್ಲಿಂದ ಮತ್ತೆ ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವ ಒಂದು ಜಾಗದಲ್ಲಿ ಬಿಡುವ ಅಸಾಧ್ಯ ಶಕ್ತಿ ಖಾನ್‌ ಸಾಹೇಬರಿಗಿತ್ತು. ಆದರೆ ಅದು ಎಲ್ಲಿಂದ ಬಂತು ಅಂತ ಕೇಳಿದ್ರೆ, "ಆ..." ಅಂತಿದ್ರು ಅಷ್ಟೇ. Which is very loveable ಅವರಿಗೇ ಗೊತ್ತಿಲ್ಲದೆ ಬಂದು ಹೊರಟು ಹೋಗಿಬಿಡುತ್ತೆ. ಅದಕ್ಕೆ ದೇಣಿಗೆ ಅಂತಾರೆ ನೋಡಿ, ದೇವರು ಕೊಟ್ಟಿದ್ದು. ಅದಕ್ಕೆ ರವಿಶಂಕರ್ ಹೇಳ್ತಿದ್ರು, “ನಿಮ್ಮ ಗುರು ಇದ್ದಾನಲ್ಲ, ಅವನು ಒಂದು ಸ್ವರದಿಂದ ಇನ್ನೆಲ್ಲೋ ಹೋಗಿಬಿಡ್ತಾನೆ. ಅದು ಇಲ್ಲಿ ಕಲಿತದ್ದು ಖಂಡಿತ ಅಲ್ಲ. ಅವನು ಎಲ್ಲಿ ಕಲಿತನೋ ನಮಗೆ ಗೊತ್ತಿಲ್ಲ. ಅವನಿಗೇ ಗೊತ್ತಿಲ್ಲ....” ಅಂತ. ಇದು ಬಹಳ ದೊಡ್ಡ ಮಾತು.

Ustad Akbar Ali Khan 4
ಉಸ್ತಾದ್ ಅಲ್ಲಾವುದ್ದೀನ್ ಖಾನ್‌, ಪಂಡಿತ್ ರವಿಶಂಕರ್ ಹಾಗೂ ಉಸ್ತಾದ್ ಅಲಿ ಅಕ್ಬರ್ ಖಾನ್

ಇನ್ನು, ಬಹಳ ದೊಡ್ಡ-ದೊಡ್ಡ ಸಂಗೀತಗಾರರಿದ್ದಾರೆ. ಆದರೆ, ಅವರು ಹಾಡೋದು ಪ್ರೆಡಿಕ್ಟಬಲ್. ಹೀಗೇ ಹೋಗ್ತಾರೆ ಅಂತ ನಮಗೆ ಗೊತ್ತು. ಆದರೆ, ಕೆಲವರು, ಹೊಸದಾಗಿ ಇರಬೇಕೆಂದು, ಹೊಸತರ ಹಿಂದೇ ಹೋಗೋರಿದ್ದಾರೆ. ಅವರು ಕೊನೆಗೆ ರಾಗವನ್ನೇ ಧ್ವಂಸ ಮಾಡಿಬಿಡ್ತಾರೆ. 'ಸಂಡೇ' ಅಂತ ಒಂದು ಪತ್ರಿಕೆ ಬರ‍್ತಾ ಇತ್ತು. ಅದರಲ್ಲಿ ಒಬ್ಬ ಬೆಂಗಾಲಿ ಬರೆದ, “ಕೆಲವು ಸಂಗೀತಗಾರರು ಆ ರಾಗದ ಮಧ್ಯದಲ್ಲಿ ಇರ‍್ತಾರೆ. ಅಂದರೆ, ಬಹಳ ಸಂಪ್ರದಾಯ ಶರಣರು, ರೂಢಿಗೇ ಅಂಟಿಕೊಂಡಿರೋರು (conventional). ಆ ರಾಗ ಎನ್ನುವ ಮಠದಲ್ಲೇ ಇರ‍್ತಾರೆ. ಅಲ್ಲಿಂದ ಸ್ವಲ್ಪ ಆಚೆ ಈಚೆ ಹೋಗ್ತಾರೆ. ಆದರೆ, ಆ ಮಠ ಬಿಟ್ಟು ಹೋಗೋದಿಲ್ಲ. ಇನ್ನು ಕೆಲವರು ಆ ಮಠದಲ್ಲೂ ಇರ‍್ತಾರೆ, ಆದರೆ ರಾಗವನ್ನು ಚಾಚ್ತಾ ಹೋಗ್ತಾರೆ, ಅದನ್ನು ಹರಡ್ತಾ-ಹರಡ್ತಾ ಹೋಗ್ತಾರೆ. ಆ ರಾಗಕ್ಕೂ ಒಂದು ಅಂಚು ಇರುತ್ತೆ, ಸರಹದ್ದು ಇರುತ್ತೆ. ಆ ಸರಹದ್ದು ತಲುಪಿ, ಇನ್ನೇನು ಬಿದ್ದೇಬಿಡ್ತಾರೆ ಎನ್ನುವಾಗ, ಹಿಂತಿರುಗಿ ಬಂದುಬಿಡ್ತಾರೆ. ಅದು ಉಸ್ತಾದ್ ಅಲಿ ಅಕ್ಬರ್‌ ಖಾನ್. ಇನ್ನು ಕೆಲವರಿದ್ದಾರೆ, ಅವರನ್ನು ಹೆಸರಿಸೋದಕ್ಕೆ ಸಾಧ್ಯವಿಲ್ಲ, ಅವರು ರಾಗವನ್ನು ಅದೆಷ್ಟು ತಳ್ತಾರೆ ಅಂತಂದ್ರೆ, ಅದು ಬಿದ್ದೇ ಹೋಗಿಬಿಡುತ್ತೆ. ಆ ರಾಗದಿಂದ ಇನ್ನೆಲ್ಲೋ ಹೊರಟುಹೋಗ್ತಾರೆ. ಕೇಳೋದಕ್ಕೆ ಚೆನ್ನಾಗಿರುತ್ತೆ. ಕಚಗುಳಿ ಇಟ್ಟಂತೆ ಇರುತ್ತೆ. ಆದರೆ, ಕಚಗುಳಿ ಅಷ್ಟೇ. ಕಚಗುಳಿಗೆ ಎಷ್ಟು ಬೆಲೆ ಇರುತ್ತೋ ಅಷ್ಟೇ.”

ತಾಳದ ಜೊತೆ ಚಕಮಕಿ

Rajeev Taranath 3
ಪಂಡಿತ್ ರಾಜೀವ್ ತಾರಾನಾಥ್

ಇನ್ನು ಲಯಕಾರಿ, ಅಂದರೆ ತಾಳದ ಜೊತೆಗೆ ಚಕಮಕಿ. ನಮ್ಮ ಸಂಗೀತದಲ್ಲಿ ಲಯದ ಜೊತೆ ಸುಮಾರು ಎರಡು ತರಹದ ಸಂಬಂಧ ನೋಡ್ಬಹುದು. ಬಹಳ ಒಳ್ಳೆ ಸಂಗೀತಗಾರರರ‍್ತಾರೆ. ಅವರಿಗೆ ತಬಲಾ ತಾಳಕ್ಕೆ ಮಾತ್ರ ಬೇಕು. ಅದನ್ನು ಮೊದಲೇ ಹೇಳಿಬಿಟ್ಟಿರ‍್ತಾರೆ: “ನೋಡಯ್ಯಾ... ನಾನು ಸಂಗೀತ ನುಡಿಸೋದಕ್ಕೆ ಬಂದಿದ್ದೀನಿ. ನೀನು ತಾಳ ಇಡು ಅಷ್ಟೆ.”  ಅದನ್ನು 'ಠೇಕಾ' ಅಂತಾರೆ. ಠೇಕಾ ಅಂತಂದ್ರೆ, ಅದರಲ್ಲಿ ಎಷ್ಟೋ ಮಾತ್ರೆಗಳಿರುತ್ತೆ. ಅದೊಂದು ಫ್ರೇಮ್, ಅದು ನಿರಂತರ ನಡೀತಾ ಇರುತ್ತೆ. ಕೆಲವು ಸಂಗೀತಗಾರರು ತುಂಬಾ ಸ್ಪಷ್ಟವಾಗಿ, “ಅದನ್ನು ಕೊಡ್ತಾ ಹೋಗು, ನಾನು ಸಂಗೀತ ನುಡಿಸ್ತೀನಿ” ಅಂತ ಹೇಳಿಬಿಟ್ಟಿರ‍್ತಾರೆ. ಇನ್ನು ಕೆಲವರು ಅದರ ಜೊತೆಗೆ ಸಂಗೀತ ನುಡಿಸ್ತಾರೆ. ಉದಾಹರಣೆಗೆ, 'ಸವಾಲ್-ಜವಾಬ್, ಸಾಥ್-ಸಂಗತ್' ಹೀಗೆ. ಒಟ್ಟು ಚಕಮಕಿ, ಆಟ ಆಡೋದು. ಒಂದು ಸಲ ಅವರು ಹಿಡೀತಾರೆ, ಒಂದು ಸಲ ಇವರು ಹಿಡೀತಾರೆ. ಹೀಗೆ, ತಬಲಾದವರಿಗೆ ನಮ್ಮ ಸಂಗೀತದಲ್ಲಿ ಪ್ರಾಮುಖ್ಯ ನೀಡಿದ್ದು ಅಲ್ಲಾವುದ್ದೀನ್ ಖಾನ್‌ ಸಾಹೇಬರು. ಅಲ್ಲಾವುದ್ದೀನ್ ಖಾನ್‌ ಸಾಹೇಬರಿಂದ ನಾವು ಏನೇನು ಪಡೆದುಕೊಂಡೆವು ಅನ್ನೋದನ್ನು ನಾವು ಇನ್ನೂ ಹೇಳೋಕ್ಕಾಗ್ತಾ ಇಲ್ಲ. ಅದನ್ನು ರವಿಶಂಕರ್, ಅಲಿ ಅಕ್ಬರ್‌ ಖಾನ್, ನಂತರ ಚೌರಾಸಿಯಾ, ಅಂದರೆ ಅವರು ನನ್ನ ತಲೆಮಾರಿನವರು, ಅದನ್ನು ತುಂಬಾ ಮುಂದೆ ತೆಗೆದುಕೊಂಡು ಬಂದುಬಿಟ್ಟರು. ಅದರಲ್ಲಿ ರವಿಶಂಕರರು ಕರ್ನಾಟಕ ಸಂಗೀತದಿಂದ ಬಹಳ ಕಲಿತರು. ಕರ್ನಾಟಕ ಸಂಗೀತದಲ್ಲಿ ತಾಳವನ್ನು ಹೇಗೆ ಹ್ಯಾಂಡಲ್ ಮಾಡ್ತಾರೆ ಅನ್ನೋದನ್ನು ಬಹಳಷ್ಟು ಗಮನಿಸಿದರು. ಖಾನ್‌ ಸಾಹೇಬರು ಅದನ್ನು ಮಾಡಲಿಲ್ಲ. ಆದರೆ, ಸರೋದ್‌ ವಾದನದಲ್ಲಿ ಅವರು ತಮ್ಮ ತಂದೆಯಿಂದ ಪಡೆದ ಲಯಸಂಬಂಧಿ ಅಂಶಗಳು ಮತ್ತು ತಮ್ಮದೇ ಆದ ಕಲ್ಪನಾಶಕ್ತಿ ಇವೆರಡನ್ನೂ ಸೇರಿಸಿಕೊಂಡು ಲಯಕಾರಿ ಮಾಡ್ತಾ ಇದ್ರು. ಆದರೆ, ಇದೆಲ್ಲಕ್ಕಿಂತ ಬಹಳ ಮುಖ್ಯವಾದದ್ದು ಅಂದರೆ, ಅವರು ರಾಗದ ಸಾಧ್ಯತೆಗಳನ್ನು ಬಹಳವಾಗಿ ಹೆಚ್ಚಿಸಿದರು. ಯಾವ ರಾಗ ಮುಟ್ಟಿದರೂ ಅದು ಚಿನ್ನ ಆಗಿಬಿಡ್ತಾ ಇತ್ತು.

ಕೃಪೆ: ವಾದಿ ಸಂವಾದಿ, ರಾಗಮಾಲಾ ಪ್ರಕಟಣೆ

ಸಂದರ್ಶಕರು: ವೇಣುಗೋಪಾಲ್ ಮತ್ತು ಶೈಲಜ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app