ಮರೆಯಲಾಗದ ಇತಿಹಾಸ | ಬ್ರಿಟನ್‌ ನಾಗರಿಕರ ನಾಡಿ ಮಿಡಿತ ಅರಿತಿದ್ದ ಎಲಿಜಬೆತ್

ನನ್ನ ಇಡೀ  ಜೀವನವನ್ನು ನಿಮಗೆ ಮುಡಿಪಾಗಿಡುವೆ ಎಂದು ಬ್ರಿಟನ್‌ ನಾಗರಿಕರ ಮುಂದೆ ರಾಣಿ ಎಲಿಜಬೆತ್ ಘೋಷಿಸಿದ್ದರು. ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಪ್ರತಿಜ್ಞೆ ಮತ್ತು ಸಾಂವಿಧಾನಿಕ ಕರ್ತವ್ಯದ ಭಾರದಲ್ಲೇ ಕೊನೆಯವರೆಗೂ ಜೀವನ ಸವೆಸಿದ್ದಾರೆ. ಸಾವಿಗೆ 2 ದಿನಗಳ ಮೊದಲು ಲಿಜ್ ಟ್ರಸ್‌ ಅವರನ್ನು ಪ್ರಧಾನಿಯಾಗಿ ನೇಮಿಸುವ ಕೊನೆಯ ಸಾಂವಿಧಾನಿಕ ಕರ್ತವ್ಯ ನಿಭಾಯಿಸಿದ್ದರು.

ಸೆಪ್ಟೆಂಬರ್ 8ರಂದು ಗುರುವಾರ ಸಂಜೆ 6.30ರ ಸುಮಾರಿಗೆ "ಲಂಡನ್ ಬ್ರಿಡ್ಜ್ ಈಸ್ ಡೌನ್" ಎಂಬ ಕೋಡ್‌ ಸಂದೇಶವನ್ನು  ರಾಣಿಯ ಖಾಸಗಿ ಕಾರ್ಯದರ್ಶಿಯ ಮೂಲಕ ಬ್ರಿಟನ್‌ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ರಾಣಿ ಎಲಿಜಬೆತ್ II ಅಂದು ಸಂಜೆ 96ನೇ ವಯಸ್ಸಿನಲ್ಲಿ ನಿಧನರಾದರು ಎಂಬುದನ್ನು ಆ ಸಂದೇಶ ದೃಢಪಡಿಸಿತ್ತು. ಈ ಸಂದೇಶದ ಪದಗಳೇ ದೇಶದಲ್ಲಿ ದೊಡ್ಡ ದುರಂತ ಸಂಭವಿಸಿದೆ ಎನ್ನುವುದನ್ನು ಸೂಚಿಸುತ್ತವೆ. ಬ್ರಿಟನ್‌ನ ದೊಡ್ಡ ಕುಸಿತಕ್ಕೆ ಸಾಕ್ಷಿಯಾದ ಕೋಡ್ ಸಂದೇಶವದು. 

ಬ್ರಿಟನ್ ಮತ್ತು ವಿಶ್ವಾದ್ಯಂತ ಲಕ್ಷಾಂತರ ಸಾರ್ವಜನಿಕರೊಂದಿಗೆ ರಾಜಮನೆತನ ತಮ್ಮ ಪ್ರೀತಿಯ ‌ರಾಣಿಯ ಸಾವಿಗೆ ಶೋಕಿಸುತ್ತಿದೆ ಮತ್ತು ದುಃಖಿಸುತ್ತಿದೆ. ಏಳು ದಶಕಗಳ ಸ್ಥಿರತೆಗೆ ರಾಣಿಯ ಆಡಳಿತ ಸಾಕ್ಷಿಯಾಗಿದೆ. ಈಗಿನ ಸಾವು ದೊಡ್ಡ ಆಘಾತ.

21 ಏಪ್ರಿಲ್ 1947ರಂದು ತಮ್ಮ 21ನೇ ಜನ್ಮದಿನದಂದು, ಹೆತ್ತವರೊಂದಿಗೆ ದಕ್ಷಿಣ ಆಫ್ರಿಕ ಪ್ರವಾಸದ ಸಂದರ್ಭ ಅವರು ಮುಂದಿನ ರಾಣಿಯಾಗುವ ಸಿದ್ಧತೆಯಲ್ಲಿದ್ದರು. "ಊಹಾತ್ಮಕ ಉತ್ತರಾಧಿಕಾರಿ" ಎಂಬ ಹಿರಿಮೆಯಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಗುಂಪಿಗೆ ಪ್ರಸಾರ ಮಾಡಲು ಮತ್ತು ರಾಜಪ್ರಭುತ್ವದ ತನ್ನದೇ ಆದ ಮರುವ್ಯಾಖ್ಯಾನದ ಅವಕಾಶ ಅವರ ಮುಂದಿತ್ತು.

"ನನ್ನ ಇಡೀ ಜೀವನವನ್ನು ನಿಮಗಾಗಿ ಮುಡಿಪಾಗಿಡುತ್ತೇನೆ" ಎಂದು ಬ್ರಿಟನ್‌ ನಾಗರಿಕರ ಮುಂದೆ ಅವರು ಘೋಷಿಸಿದ್ದರು. ತಮ್ಮ ಜೀವನದ ಪ್ರತಿ ದಿನವೂ ಇದೇ ಪ್ರತಿಜ್ಞೆ ಮತ್ತು  ಸಾಂವಿಧಾನಿಕ ಕರ್ತವ್ಯಗಳಿಗಾಗಿ ಅವರು ಬದುಕಿದ್ದಾರೆ. ಸಾವಿಗೆ ಎರಡು ದಿನಗಳಿಗೆ ಮೊದಲೂ ಅವರು ಲಿಜ್ ಟ್ರಸ್ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸಿ ಬ್ರಿಟನ್‌ನಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ಕೊಡುವ ತಮ್ಮ ಕೊನೆಯ ಸಾಂವಿಧಾನಿಕ ಕರ್ತವ್ಯ ನಿಭಾಯಿಸಿದ್ದರು.

Image

ರಾಣಿ ಎಲಿಜಬೆತ್ 1952ರಲ್ಲಿ ತಮ್ಮ ತಂದೆ ಕಿಂಗ್ ಜಾರ್ಜ್ VIರ ಮರಣದ ನಂತರ 70 ವರ್ಷಗಳ ಕಾಲ ಬ್ರಿಟನ್‌ನ ಜೀವನದ ಕೇಂದ್ರ ಭಾಗವಾಗಿದ್ದರು. ಬ್ರಿಟನ್‌ನ ಮೊದಲ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್. ಅವರಿಂದ ತೊಡಗಿ ಲಿಜ್‌ಟ್ರಸ್‌ವರೆಗೂ ರಾಣಿ ದೇಶದಲ್ಲಿ 15 ಪ್ರಧಾನ ಮಂತ್ರಿಗಳನ್ನು ಅಧಿಕೃತವಾಗಿ ನೇಮಿಸಿದ್ದಾರೆ.

ದೀರ್ಘಾವಧಿಯ ಹಿಂದಿನ ದೊರೆಗಳು (ಎಲಿಜಬೆತ್ I, ಸಿಂಹಾಸನದಲ್ಲಿ 45 ವರ್ಷಗಳು,  ಜಾರ್ಜ್ III ಸುಮಾರು 60 ವರ್ಷಗಳು ಮತ್ತು ವಿಕ್ಟೋರಿಯ 64 ವರ್ಷ) ರಾಷ್ಟ್ರೀಯ ಮತ್ತು ಸಾಮ್ರಾಜ್ಯಶಾಹಿ ವಿಸ್ತರಣೆಯ ಅವಧಿಯ ಅಧ್ಯಕ್ಷತೆವಹಿಸಿ  ಬ್ರಿಟಿಷ್ ಸಾಮ್ರಾಜ್ಯವನ್ನು ಹೆಚ್ಚು ಶಕ್ತಿಶಾಲಿ ಮತ್ತು ಸಮೃದ್ಧವಾಗಿ ಆಳ್ವಿಕೆ ನಡೆಸಿದ್ದರು. ಆದರೆ ಎಲಿಜಬೆತ್ II ಆಳ್ವಿಕೆಯಲ್ಲಿ ವಸಾಹತುಶಾಹಿ ಮತ್ತು ಸಾಮ್ರಾಜ್ಯ ಶಾಹಿ ಯುಗದ ಅಂತ್ಯ, ರಾಷ್ಟ್ರೀಯ ಮರುಶೋಧನೆಯ ಮೇಲ್ವಿಚಾರಣೆ (ಮೊದಲು ಯುರೋಪಿಯನ್ ಒಕ್ಕೂಟಕ್ಕೆ ಸೇರುವುದು ಮತ್ತು ನಂತರ ಯುರೋಪಿಯನ್ ವಿರೋಧಿ ಬ್ರೆಕ್ಸಿಟ್‌ ಬದಲಾವಣೆ) ಜವಾಬ್ದಾರಿ ಇತ್ತು. ಒಕ್ಕೂಟದ ಸಮಗ್ರತೆ ಮತ್ತು ಸ್ಕಾಟಿಷ್ ಸ್ವಾತಂತ್ರ್ಯದ ಜನಾಭಿಪ್ರಾಯ ಸಂಗ್ರಹಣೆ, 1956ರಲ್ಲಿ ಸೂಯೆಜ್ ವೈಫಲ್ಯ,  ಗಣಿಗಾರರ ಮುಷ್ಕರ, ಭಯೋತ್ಪಾದಕ ದೌರ್ಜನ್ಯಗಳು, ಡಯಾನಾ ಸಾವು, ವಿಂಡ್ಸರ್ ಕ್ಯಾಸಲ್ ಬೆಂಕಿ, ಆರ್ಥಿಕ ಬಿಕ್ಕಟ್ಟು, ಗಲಭೆಗಳು ಮೊದಲಾಗಿ ಕಳೆದ ಏಳು ದಶಕಗಳಲ್ಲಿ ಅವರು ಬ್ರಿಟನ್‌ ಇತಿಹಾಸದ ಜೊತೆಗೆ ಜೀವಿಸಿದ್ದರು.

ಈ ಎಲ್ಲಾ ಆಘಾತಗಳ ನಡುವೆಯೂ ಬ್ರಿಟನ್‌ ಶಾಂತ ಸಾಗರವಾಗಿ ಮುನ್ನಡೆಯಲು ರಾಣಿಯ ಸಮಚಿತ್ತ ಸಲಹೆಗಳು ಮತ್ತು ಮಾರ್ಗದರ್ಶನವೂ ಕಾರಣ. ರಾಣಿಯ ದಯೆ, ಸರಳತೆ, ಸಹಾನುಭೂತಿ ಹಾಗೂ ಸೌಜನ್ಯ ದೇಶದ ನೋವಿಗೆ ಸ್ಪಂದಿಸಿ ಹೊಸ ಚಿಗುರಿಗೆ ಅವಕಾಶ ಕೊಟ್ಟಿದೆ. ವಾರ್ಷಿಕ ಕ್ರಿಸ್ಮಸ್ ಭಾಷಣಗಳ ಮೂಲಕ ರಾಷ್ಟ್ರದ ಸಮಸ್ಯೆಗಳನ್ನು ಗ್ರಹಿಸಿ ರಾಣಿ ತಮ್ಮ ಅಭಿಪ್ರಾಯ ಮುಂದಿಡುತ್ತಿದ್ದರು. ದೇಶದ ಬಿಕ್ಕಟ್ಟನ್ನು ಶಮನಗೊಳಿಸಲು ಕರೆ ನೀಡುತ್ತಿದ್ದರು. ಎಲಿಜಬೆತ್ ಹಿಂದಿನ ಎಲ್ಲ ರಾಜ- ರಾಣಿಗಿಂತ ಬಿನ್ನವಾಗಿ ನಡೆದವರು. ಸಾಮ್ರಾಜ್ಯಶಾಹಿಯ ಅಧಿಕಾರ ದಾಹಿ ಹಿಂದಿನ ದೊರೆಗಳು- ರಾಣಿಯರಿಗಿಂತ ಭಿನ್ನವಾಗಿ ಜನರ ಸ್ಪಂದನವಾಗಿ ಆಡಳಿತಕ್ಕೆ ಕಿವಿಮಾತು ಹೇಳುತ್ತಿದ್ದರು.

ಕೋವಿಡ್ ಸಮಯದಲ್ಲಿ ನಾಗರಿಕರು ಎದುರಿಸುತ್ತಿದ್ದ ಕಷ್ಟಗಳು ತನ್ನದೆಂಬಂತೆ ಮಿಡಿದರು. ಎರಡನೇ ಮಹಾಯುದ್ಧ ನೋಡಿದ್ದೇನೆ, ಯುದ್ಧ ಎಂಬುವುದು ಮನುಷ್ಯ ವಿರೋಧಿ ಎಂದು ರಾಣಿ ಅಭಿಪ್ರಾಯಪಟ್ಟಿದ್ದರು. ವಸಾಹತುಶಾಹಿ ಸಂದರ್ಭದಲ್ಲಿ ಎದುರಿಸಿದ ಕ್ರೂರ ನೋವಿನ ಶಮನಕ್ಕೆ ಹದಿನಾಲ್ಕು ರಾಜ್ಯಗಳ ಸಾಂವಿಧಾನಿಕ ಮುಖ್ಯಸ್ಥರಾಗಿ (ಬ್ರಿಟನ್, ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಜಮೈಕಾ ಕಾಮನ್‌ವೆಲ್ತ್ ಗುಂಪಿನ ರಾಷ್ಟ್ರಗಳ ಮುಖ್ಯಸ್ಥೆಯಾಗಿ ಹಲವು ದೇಶಗಳಿಗೆ ರಾಜತಾಂತ್ರಿಕ ಭೇಟಿ ನೀಡಿದರು.

ಅಕ್ಟೋಬರ್ 1997ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದಾಗ, ಕೇಸರಿ ವಸ್ತ್ರ ಧರಿಸಿ ಅಮೃತಸರದ ಜಲಿಯನ್ ವಾಲಾಬಾಗ್ ಸ್ಮಾರಕ ಸ್ಥಳದಲ್ಲಿ (ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ಅತ್ಯಂತ ಭಯಾನಕ ದೌರ್ಜನ್ಯಗಳಲ್ಲಿ ಒಂದಾಗಿದೆ) ನಮಸ್ಕರಿಸಿದರು. 1919ರಲ್ಲಿ ಅಮಾಯಕ ಭಾರತೀಯರ ಮೇಲೆ ಜನರಲ್ ಡೈಯರ್ ಆದೇಶದಲ್ಲಿ ಐವತ್ತು ಸೈನಿಕರು ಎಗ್ಗಿಲ್ಲದೆ ಗುಂಡಿಕ್ಕಿ ನೂರಾರು ಮಂದಿ ಸಾವಿಗೀಡಾದ ಸ್ಥಳವದು. ಶಾಂತಿಯುತವಾಗಿ ಪ್ರತಿಭಟನೆಗಿಳಿದಿದ್ದ ಮತ್ತು  ವೈಶಾಖ ಹಬ್ಬವನ್ನು ಆಚರಿಸುವ ಜನರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. 10 ನಿಮಿಷಗಳ ನರಹತ್ಯೆಯ ನಂತರ, ಕನಿಷ್ಠ 379 ಜನರು ಸಾವನ್ನಪ್ಪಿ, ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಅತಿದೊಡ್ಡ ಕ್ರೌರ್ಯಕ್ಕೆ ಸಾಕ್ಷಿಯಾಗಿರುವ ಸ್ಮಾರಕ. ಹಲವು ದಶಕಗಳ ನಂತರ ಈ ಸ್ಮಾರಕಕ್ಕೆ ಭೇಟಿ ನೀಡಿದಾಗ ರಾಣಿ ಕ್ಷಮೆಯಾಚಿಸಬೇಕು ಎಂದು ಭಾರತೀಯರು ನಿರೀಕ್ಷಿಸಿದ್ದರು. ರಾಣಿ ಹತ್ಯಾಕಾಂಡದ ತಪ್ಪನ್ನು ಒಪ್ಪಿಕೊಂಡರು ಮತ್ತು "ಇತಿಹಾಸವನ್ನು ಮರುರಚಿಸಲು ಸಾಧ್ಯವಿಲ್ಲ, ನಾವು ಇಲ್ಲದಿದ್ದರೆ ರಚಿಸಬಹುದು" ಎಂದು  ಪ್ರಾಮಾಣಿಕವಾಗಿ ಹೇಳಿದರು.

Image

ತಮ್ಮ ಅರಮನೆಯ ಕಚೇರಿಯಲ್ಲಿ ಕುಳಿತು ಶ್ರದ್ಧೆಯಿಂದ ಪ್ರತಿ ವಾರ ಕೆಂಪು ಪೆಟ್ಟಿಗೆಯಲ್ಲಿ ರವಾನಿಸಲಾದ ರಹಸ್ಯ ಸರ್ಕಾರಿ ದಾಖಲೆಗಳನ್ನು ಓದುತ್ತಿದ್ದರು. ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಕಚೇರಿಯ ಅಧಿಕಾರಿಗಳೊಂದಿಗೆ ಸಾಪ್ತಾಹಿಕ ಭೇಟಿ ತಪ್ಪದೆ ನಿಭಾಯಿಸುತ್ತಿದ್ದರು. ಪ್ರತಿ ವರ್ಷ ಬ್ರಿಟನ್‌ನಾದ್ಯಂತ ದತ್ತಿ ಮತ್ತು ಕಟ್ಟಡಗಳ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. 

1966ರಲ್ಲಿ ಅಬರ್‌ಫಾನ್‌ನಲ್ಲಿ ಕಲ್ಲಿದ್ದಲು ಗಣಿ ಕುಸಿದು 116 ಮಕ್ಕಳು ಮತ್ತು ಇಪ್ಪತ್ತೆಂಟು ಮಂದಿ ಸಾವನ್ನಪ್ಪಿದ್ದರು. ಅಬರ್‌ಫಾನ್‌ಗೆ ತೆರಳಿ ಗಣಿಗಾರಿಕೆ ಸಮುದಾಯಗಳಿಗೆ ಸಾಂತ್ವನ ಹೇಳಿದರು. 1997ರಲ್ಲಿ ಡಯಾನಾ ಸಾವನ್ನಪ್ಪಿದಾಗ ಮಾತ್ರ ಗೈರುಹಾಜರಾಗಿದ್ದರು. 

ಬ್ರಿಟಿಷ್ ರಾಜಪ್ರಭುತ್ವವನ್ನು ಸಾಮಾನ್ಯವಾಗಿ 'ದಿ ಫರ್ಮ್' ಎಂದು ಕರೆಯಲಾಗುತ್ತದೆ. ಸಾಮ್ರಾಜ್ಯಶಾಹಿ ಕುಟುಂಬವು ಆಂಗ್ಲೋ- ಸ್ಯಾಕ್ಸನ್‌ನೊಂದಿಗೆ 1000 ವರ್ಷಗಳ ಪರಂಪರೆ ಹೊಂದಿದೆ ಮತ್ತು ನಂತರ ಕೆಲವು ಸ್ಕಾಟಿಷ್ ಆಡಳಿತಗಾರರ ಪ್ರಭಾವವಿದೆ. ರಾಜಪ್ರಭುತ್ವದ ಪ್ರವೇಶವು ಆನುವಂಶಿಕ ವಂಶಾವಳಿಯ ಮೂಲಕ ಮತ್ತು ಆಡಳಿತಗಾರನ ಮೊದಲ ಮತ್ತು ನಂತರದ ಮಗುವಿಗೆ ಹಾದು ಹೋಗುತ್ತದೆ. ರಾಣಿ ಎಲಿಜಬೆತ್ II ಎಂದಿಗೂ ರಾಜಪ್ರಭುತ್ವಕ್ಕೆ ನೇರ ಪ್ರವೇಶದ ಸಾಲಿನಲ್ಲಿ ಇರಲಿಲ್ಲ. ಆಕೆಯ ಪ್ರವೇಶದ ದಶಕಗಳ ಮೊದಲು ಕಿಂಗ್ ಜಾರ್ಜ್ V (ಅವಳ ಅಜ್ಜ) ನಿಧನರಾದರು. 1936ರಲ್ಲಿ ಸಿಂಹಾಸನಕ್ಕೆ ನೇರ ಸಾಲಿನಲ್ಲಿದ್ದ ಆಕೆಯ ದೊಡ್ಡಪ್ಪ ಡೇವಿಡ್ ಕಿಂಗ್ ಎಡ್ವರ್ಡ್ III ರಾಜರಾದರು. ಆದರೆ ಎರಡನೇ ಬಾರಿ ವಿಚ್ಛೇದನ ಪಡೆದು ಅಮೆರಿಕನ್ ವಾಲಿಸ್ ಸಿಂಪ್ಸನ್ ಅವರನ್ನು ಮದುವೆಯಾಗಲು ಶೀಘ್ರದಲ್ಲೇ ಅಧಿಕಾರ ತ್ಯಜಿಸಿದರು. ನಂತರ ರಾಜಕುಮಾರಿ ಎಲಿಜಬೆತ್‌ರ ನಾಚಿಕೆ ಸ್ವಭಾವದ- ತೊದಲುನುಡಿಯ ತಂದೆ ಕಿಂಗ್ ಜಾರ್ಜ್ VI ರಾಜರಾಗಿ ಅಧಿಕಾರ ಸ್ವೀಕರಿಸಿದರು. ರಾಜಕುಮಾರಿ ಎಲಿಜಬೆತ್‌ ಅವರಿಗೆ ಇದರಿಂದ ಅದೃಷ್ಟ ಖುಲಾಯಿಸಿತು, ಸಿಂಹಾಸನದ ಉತ್ತರಾಧಿಕಾರಿಯಾದರು. 

ಕಿಂಗ್ ಜಾರ್ಜ್ VI ಅವರು ಸಿಗಾರ್ ಸೇವನೆಯ ವ್ಯಸನಿ ಮತ್ತು  1952ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದರು.  ಆಗ ಎಲಿಜಬೆತ್ ಅವರು ತಮ್ಮ ಪತಿ ಫಿಲಿಪ್‌ರೊಂದಿಗೆ ಕೀನ್ಯಾದಲ್ಲಿದ್ದರು. ರಾಣಿಯಾದಾಗ ಅವರಿಗೆ 25 ವರ್ಷ. ಎಲಿಜಬೆತ್‌ ಮರಣದ ನಂತರ, ಅವರ ಮಗ ಪ್ರಸ್ತುತ ರಾಜ ಚಾರ್ಲ್ಸ್ III ರಾಜರಾಗಿದ್ದಾರೆ. ನಂತರದ ಸ್ಥಾನದಲ್ಲಿ ಅವರ ಮಗ ಡ್ಯೂಕ್ ಆಫ್ ಕೇಂಬ್ರಿಡ್ಜ್ ರಾಜಕುವರ ವಿಲಿಯಂ ಸಿಂಹಾಸನದ ಹೊಸ ಉತ್ತರಾಧಿಕಾರಿ.

ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ (ರಾಣಿ ಎಲಿಜಬೆತ್ II) ಲಂಡನ್‌ನಲ್ಲಿ 21 ಏಪ್ರಿಲ್ 1926ರಂದು ಸಿಸೇರಿಯನ್ ಮೂಲಕ ಜನಿಸಿದ್ದರು. ಅವರು ರಾಜಕುವರ ಆಲ್ಬರ್ಟ್ (ಕಿಂಗ್ ಜಾರ್ಜ್ VI) ಮತ್ತು ಲೇಡಿ ಎಲಿಜಬೆತ್ ಬೋವ್ಸ್- ಲಿಯಾನ್ ಅವರ ಮಗಳು. ಹೆತ್ತವರಿಗೆ ಹಿರಿಯ ಮಗು. 1930ರಲ್ಲಿ ಜನಿಸಿದ ಮಾರ್ಗರೆಟ್ ಅವರ ಸಹೋದರಿ. 

13ರ ವಯಸ್ಸಿನಲ್ಲಿ ರಾಯಲ್ ನೇವಿ ಡಿಸ್ಟ್ರಾಯರ್‌ನಲ್ಲಿ ಮೊದಲ ಲೆಫ್ಟಿನೆಂಟ್ ಆಗಿದ್ದ ಭಾವಿ ಪತಿ ಫಿಲಿಪ್‌ ಅವರನ್ನು ಭೇಟಿಯಾದರು. 1947ರಲ್ಲಿ ಇಬ್ಬರೂ ವಿವಾಹವಾದರು. ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಈಗಿನ ರಾಜ ಚಾರ್ಲ್ಸ್ III ಹಿರಿಯ ಮಗ. ನಂತರ ಜನಿಸಿದವರು ರಾಜಕುಮಾರಿ ಅನ್ನಿ, ರಾಜಕುವರ ಆಂಡ್ರ್ಯೂ ಮತ್ತು ರಾಜಕುವರ ಎಡ್ವರ್ಡ್. ಎಲ್ಲಾ ಕುಟುಂಬಗಳಂತೆ, ರಾಣಿಯ ಕುಟುಂಬವೂ ಕಷ್ಟಗಳನ್ನು ಎದುರಿಸಿದೆ. ಅವರ ಮೂವರು ಮಕ್ಕಳು ವಿಚ್ಛೇದನೆ ಪಡೆದು ಮದುವೆಯಾಗಿದ್ದಾರೆ. ರಾಜಕುವರ ಆಂಡ್ರ್ಯೂ ವಿಚ್ಛೇದನೆ ನಂತರ ಹಾಲಿವುಡ್ ಫಿಲ್ಮ್ ಫೈನಾನ್ಶಿಯರ್ ಎಪ್‌ಸ್ಟೀನ್ ಅವರನ್ನು ಭೇಟಿಯಾದರು ಮತ್ತು ಹದಿಹರೆಯದ ಹುಡುಗಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಎದುರಿಸಿದ್ದರು.

Image

ಈಗಿನ ರಾಜ ಚಾರ್ಲ್ಸ್ ತಮಗಿಂತ 15 ವರ್ಷ ಚಿಕ್ಕವರಾದ ರಾಜಕುಮಾರಿ ಡಯಾನಾರನ್ನು ವಿವಾಹವಾದರು. ಆದರೆ ಇಬ್ಬರ ನಡುವಿನ ಹೊಂದಾಣಿಕೆ ಬಹಳ ದಿನ ಇರಲಿಲ್ಲ. ಆತ್ಮಚರಿತ್ರೆ ಮತ್ತು ದೂರದರ್ಶನ ಸಂದರ್ಶನಗಳಲ್ಲಿ ರಾಜಕುಮಾರಿ ಡಯಾನಾ ಅವರು ತಮ್ಮ  ಮದುವೆಯಲ್ಲಿ ಪ್ರೇಮದ ಕೊರತೆ ಬಿಚ್ಚಿಟ್ಟಿದ್ದರು. ದಂಪತಿ 1995ರಲ್ಲಿ ವಿಚ್ಛೇದನೆ ಪಡೆದರು. 

1997ರಲ್ಲಿ ಪ್ಯಾರಿಸ್‌ನಲ್ಲಿ ಕಾರು ಅಪಘಾತದಲ್ಲಿ ಡಯಾನ ದುರಂತ ಸಾವು ಕಂಡರು. ನಂತರ ರಾಜಕುವರ ಚಾರ್ಲ್ಸ್ 2005ರಲ್ಲಿ ತಮ್ಮ ದೀರ್ಘಕಾಲದ ಗೆಳತಿ ಕ್ಯಾಮಿಲ್ಲಾ ಪಾರ್ಕರ್ ಅವರನ್ನು ವಿವಾಹವಾದರು. 2022ರ ಆರಂಭದಲ್ಲಿ ರಾಣಿ ಎಲಿಜಬೆತ್ ಈ ವಿವಾಹಕ್ಕೆ ಒಪ್ಪಿಗೆ ನೀಡಿದರು. ಡಯಾನ ಅವರ ಮರಣದ ನಂತರ, ರಾಜಪ್ರಭುತ್ವದ ವಿರುದ್ಧ ಸಾರ್ವಜನಿಕ ಕೋಪ ಮತ್ತು ಹಿಮ್ಮೆಟ್ಟುವಿಕೆ ನಿಭಾಯಿಸಲು ಕಷ್ಟಪಟ್ಟರು. ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಡಯಾನ ಸಾವಿಗೆ ಸಂತಾಪ ಸೂಚಿಸಿದರು. 

ಇತ್ತೀಚೆಗೆ ರಾಣಿಯ ಎರಡನೇ ಮೊಮ್ಮಗ ರಾಜಕುಮಾರ ಹ್ಯಾರಿ ಅವರು ಹಾಲಿವುಡ್‌ ನಟಿ ಮೇಘನ್ ಮಾರ್ಕೆಲ್ ಅವರನ್ನು ವಿವಾಹವಾಗಿರುವುದು ರಾಜಮನೆತನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸಿನಿಮಾ ನಟಿ, ಬ್ರಿಟನ್ ಪ್ರಜೆಯಲ್ಲದ, ಕರಿ ಜನಾಂಗದ ಮಹಿಳೆಯನ್ನು ರಾಜಮನೆತನ ಒಪ್ಪಿಕೊಳ್ಳಲು ಸಿದ್ಧವಾಗಲಿಲ್ಲ. ಈ ತಾರತಮ್ಯವನ್ನು ಸಹಿಸದೆ ಹ್ಯಾರಿ- ಮೇಘನಾ  ಅರಮನೆ ತೊರೆದು, ದೇಶ ತೊರೆದು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಖಾಸಗಿ ಜೀವನ ನಡೆಸಲು ತಿರ್ಮಾನಿಸಿದರು. ಕುಟುಂಬದೊಳಗಿನ ಈ ಎಲ್ಲಾ ಪ್ರಕ್ಷುಬ್ಧತೆಗಳನ್ನು ರಾಣಿ ಎಲಿಜಬೆತ್ II ಸಮಚಿತ್ತ ಮತ್ತು ದೃಢಚಿತ್ತತೆಯಿಂದ ನಿಭಾಯಿಸಿದರು. 

ಆಕೆಯ ಸುದೀರ್ಘ ಆಳ್ವಿಕೆಯಲ್ಲಿ, ಪಟ್ಟಾಭಿಷೇಕ, ರಜತ ಮಹೋತ್ಸವ, ಚಾರ್ಲ್ಸ್ ವಿವಾಹ, ಸುವರ್ಣ ಮಹೋತ್ಸವ, ರಾಜಕುಮಾರರಾದ ವಿಲಿಯಂ ಮತ್ತು ಹ್ಯಾರಿಯ ಜನನ, ವಿವಾಹ, 90ನೇ ಜನ್ಮದಿನ ಮತ್ತು ಇತ್ತೀಚೆಗೆ ಮೊದಲಾದ ಸಂತೋಷವನ್ನೂ ಅನುಭವಿಸಿದ್ದಾರೆ. ಬೀದಿ ಪಾರ್ಟಿಗಳಲ್ಲಿ ಭಾಗವಹಿಸಲು ಮಾಲ್‌ಗಳಿಗೆ ಭೇಟಿ ನೀಡಿದಾಗ ಲಕ್ಷಾಂತರ ಸಂದರ್ಶಕರು ಅವರನ್ನು ಅಭಿನಂದಿಸುತ್ತಿದ್ದರು. ತಮ್ಮ ಪ್ರೀತಿಯ ರಾಣಿಗೆ ತಮ್ಮ ಸಂತೋಷ ಮತ್ತು ಗೌರವ ಸೂಚಿಸಲು ಸಾರ್ವಜನಿಕರು ಉತ್ಸುಕರಾಗಿ ಮುಂದೆ ಬರುತ್ತಿದ್ದರು.

2021ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜೀವಮಾನದ ಸಂಗಾತಿ ಮತ್ತು ವಿಶ್ವಾಸಾರ್ಹ ಮಿತ್ರ ಪತಿ ಫಿಲಿಪ್ ಅವರನ್ನು ಕಳೆದುಕೊಂಡರು. ಈ ನೋವನ್ನೂ ರಾಣಿ ಒಂಟಿಯಾಗಿ ಎದುರಿಸಿದರು. ಅವರ ಮರಣದ ನಂತರ ರಾಣಿ ಎಲಿಜಬೆತ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಅವರ ಆರೋಗ್ಯವೂ ದುರ್ಬಲವಾಗಿತ್ತು. 

ಬ್ರಿಟನ್‌ ಪ್ರಧಾನಿಯಾಗಿ ಲಿಜ್ ಟ್ರಸ್ ಅವರನ್ನು ನೇಮಿಸುತ್ತಿರುವ ಚಿತ್ರದಲ್ಲಿ, ಬಹಳ ಶಾರೀರಿಕವಾಗಿ ದುರ್ಬಲವಾಗಿ ಕಂಡು ಬಂದಿದ್ದರು. ಆದರೆ, ಕೆಲ ದಿನಗಳಲ್ಲೇ ಅವರ ನಿಧನ ವಾರ್ತೆ ಬರುವ ಬಗ್ಗೆ ಯಾರೂ ನಿರೀಕ್ಷಿಸಿರಲಿಲ್ಲ. ಆಕೆಯ ಶವಪೆಟ್ಟಿಗೆಗೆ ಅಂತಿಮ ಗೌರವ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ವೆಸ್ಟ್‌ಮಿನ್‌ಸ್ಟರ್ ಹಾಲ್‌ಗೆ ಭೇಟಿ ನೀಡಿದ್ದಾರೆ. 

Image

10,000 ಪೊಲೀಸ್ ಅಧಿಕಾರಿಗಳು ಯುನಿಕಾರ್ನ್ (ಸಂಘಟನಾ ಪ್ರಕ್ರಿಯೆ ಮತ್ತು ಸಮನ್ವಯ) ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದು ಲಂಡನ್ ಪೋಲಿಸರು ಈವರೆಗೆ ನಿಭಾಯಿಸಿರುವ ಅತಿ ದೊಡ್ಡ ಕಾರ್ಯಾಚರಣೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಎರಡು ಸಾವಿರಕ್ಕೂ  ಹೆಚ್ಚು ಅತಿಥಿಗಳು ಮತ್ತು ಅನೇಕ ರಾಷ್ಟ್ರಗಳ ಮುಖ್ಯಸ್ಥರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭಾರತವನ್ನು ರಾಷ್ಟ್ರಪತಿ ಮುರ್ಮು ಪ್ರತಿನಿಧಿಸುತ್ತಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬ್ರಿಟನ್‌ ಸರ್ಕಾರ ಸೆಪ್ಟೆಂಬರ್ 19ರಂದು ಸಾರ್ವಜನಿಕ ರಜಾದಿನ ಘೋಷಿಸಿದೆ.

ರಾಣಿಯ ಸಾವಿನೊಂದಿಗೆ, ಬದಲಾವಣೆಗಳೂ ಬರುತ್ತವೆ. ಬ್ರಿಟನ್‌ನ ಕರೆನ್ಸಿ, ಅಂಚೆಚೀಟಿಗಳು, ಪಾಸ್‌ಪೋರ್ಟ್, ರಾಯಲ್ ಸೀಲ್ ಇತ್ಯಾದಿಗಳು ಬದಲಾಗಲಿವೆ. ಅವೆಲ್ಲವೂ ರಾಜ ಚಾರ್ಲ್ಸ್ ಅವರ ಚಿತ್ರವನ್ನು ಹೊಂದಿರುತ್ತದೆ. ರಾಷ್ಟ್ರಗೀತೆ 'ಗಾಡ್ ಸೇವ್ ದ ಕಿಂಗ್' ಎಂದು ಪ್ರಾರಂಭವಾಗಲಿದೆ.

ಯುವ ಪೀಳಿಗೆಯ ನಾಲ್ಕನೇ ಒಂದು ಭಾಗ ಮಾತ್ರ (25 ವರ್ಷಕ್ಕಿಂತ ಕಡಿಮೆ ಹಳೆಯ) ರಾಜಪ್ರಭುತ್ವವನ್ನು ಬೆಂಬಲಿಸಿದೆ.  ಬ್ರಿಟನ್‌ ಜನಸಂಖ್ಯೆಯ ಅರ್ಧದಷ್ಟು ಜನರು ಇನ್ನೂ ರಾಜ ಚಾರ್ಲ್ಸ್ III ಮತ್ತು ಡಯಾನ ಸಂಬಂಧ ಹಾಗೂ ಆಕೆಯ ಮಾರಣಾಂತಿಕ ಕಾರು ಅಪಘಾತದ  ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಕಾಮನ್‌ವೆಲ್ತ್ ದೇಶಗಳ ಸಮೂಹ ಒಡೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯ ಸೇರಿದಂತೆ ಅನೇಕ ಸದಸ್ಯ ರಾಷ್ಟ್ರಗಳು ರಾಣಿ ಎಲಿಜಬೆತ್ II ಮರಣದ ನಂತರ ಗಣರಾಜ್ಯವಾಗಲು ಇಚ್ಛೆ ವ್ಯಕ್ತಪಡಿಸಿವೆ. ಚಾರ್ಲ್ಸ್ ತನ್ನ ಆಳ್ವಿಕೆಯಲ್ಲಿ ಸ್ವಲ್ಪ ಹಿನ್ನಡೆ ಎದುರಿಸುತ್ತಿರುವ ಕಾರಣ ಮುಂದಿನ ಹಾದಿ ಕಷ್ಟಕರವಾಗಿದೆ ಮತ್ತು  ಬ್ರೆಕ್ಸಿಟ್ ನಂತರದ ವಿಶ್ವದಲ್ಲಿ ಬ್ರಿಟನ್‌ ಇನ್ನೂ ತನ್ನದೇ ಆದ ಸ್ಥಾನ ಕಂಡುಕೊಂಡಿಲ್ಲ. ಸರಳವಾಗಿ ಹೇಳುವುದಾದರೆ ಅವರು ರಾಣಿಯಲ್ಲ ಮತ್ತು ಅವರ ಆಳ್ವಿಕೆ ಕೊನೆಗೊಂಡಾಗ ಮಾತ್ರ, ಅವರ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳುತ್ತೇವೆ.

ನಿಮಗೆ ಏನು ಅನ್ನಿಸ್ತು?
1 ವೋಟ್