ನೆನಪು | ರಾಜಶೇಖರ್ ಪಂಡ ಏರ್‌ ಯಾ?

ಬರವಣಿಗೆಗಳ ಪುಸ್ತಕ ತರಬೇಕೆಂದು ಜಿ ಆರ್ ಅವರಿಗೆ ಒತ್ತಾಯ ಮಾಡುತ್ತಿದ್ದಾಗ, "ನಾನು ಬರೆದ ಅದೆಷ್ಟೋ ಸಂಗತಿಗಳ ಬಗ್ಗೆ ನನಗೇ ಈಗ ಸಮ್ಮತಿ ಇಲ್ಲ. ನನ್ನ ನಿಲುವು ಬದಲಾಗಿದೆ," ಎನ್ನುತ್ತಿದ್ದರು. ಅವರು ಹೇಗೆ ನಿರಂತರವಾಗಿ ಬೆಳೆಯುತ್ತಲೇ ಇರುತ್ತಾರೆ ಎನ್ನುವುದಕ್ಕೆ ಮತ್ತು ಹೇಗೆ ತನ್ನನ್ನೇ ತಾನು ವಿಮರ್ಶೆಗೆ ಒಳಪಡಿಸುತ್ತಾರೆ ಎಂಬುದಕ್ಕೆ ಸಣ್ಣದೊಂದು ನಿದರ್ಶನವಿದು

2019ರ ಮಳೆಗಾಲ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಹೊರಬಂದಿದ್ದ ಜಿ ರಾಜಶೇಖರ್ ಅವರಿಗೆ ಇನ್ನೊಂದು ಜೀವದ ಆಧಾರ ಇಲ್ಲದೆ ಓಡಾಡಲು ಕಷ್ಟವಾಗುತಿತ್ತು. ತನಗೆ ಸ್ವತಂತ್ರವಾಗಿ ಓಡಾಡಲು ಆಗುತ್ತದೆ ಎಂದು ಅವರು ಹೇಳುತ್ತಿದ್ದರೂ, ಅವರ ದೇಹ ಸಂಪೂರ್ಣವಾಗಿ ಸಾಥ್ ನೀಡುತ್ತಿರಲಿಲ್ಲ. ನಡೆದಾಡಲು ಆಗುತ್ತಿದ್ದರೂ, ಬ್ಯಾಲೆನ್ಸ್ ಮಾಡಲು ಇನ್ನೊಬ್ಬರು ಜೊತೆಗಿರಬೇಕಾಗುತಿತ್ತು. ಅಲ್ಲಿತನಕ ನಿತ್ಯವೂ ಲೈಬ್ರರಿ, ಪ್ರತಿಭಟನೆ, ಸಿನಿಮಾ, ನಾಟಕ, ಸರ್ಕಸ್, ಸಾಹಿತ್ಯ ಗೋಷ್ಠಿ, ಸಂಘಟನೆ ಮೀಟಿಂಗ್- ಹೀಗೆ ಎಲ್ಲ ಕಡೆ ತಮ್ಮ ಪಾಡಿಗೆ ಹೋಗಿ ಬಂದು ಮಾಡಿಕೊಂಡಿದ್ದ ಅವರಿಗೆ, ಹಿಂದಿನಂತೆ ಎಲ್ಲ ಕಡೆ ಹೋಗಲು ಆಗದೆ ಇರುವುದು ಸಹಜವಾಗಿಯೇ ಕಿರಿಕಿರಿ ಉಂಟುಮಾಡುತಿತ್ತು. ನಾನು ಅವರನ್ನು ಕಾಣಲು ಆಗಾಗ ಅವರ ಮನೆಗೆ ಹೋಗಿಬರುತ್ತಿದ್ದೆ.

ಆಗೊಮ್ಮೆ ಗಿರೀಶ್ ಕಾರ್ನಾಡ್ ಸ್ಮರಣಾರ್ಥ ಮಣಿಪಾಲದಲ್ಲಿ ಒಂದು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾನು ಆ ಕಾರ್ಯಕ್ರಮಕ್ಕೆ ಹೋಗಲು ಇಷ್ಟಪಡುತ್ತೇನೆ ಎಂದು ಜಿ ಆರ್ ಅವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ನನ್ನ ಬಳಿ ಹೇಳಿದರು. ಹಾಗೆ ಹೇಳಿದವರೇ ತಕ್ಷಣಕ್ಕೆ, "ನನಗೆ ಒಬ್ಬನಿಗೆ ಹೋಗಲು ಬಿಡುವುದಿಲ್ಲ ಅಂತ ನನ್ನ ಹೆಂಡತಿ, ಮಕ್ಕಳು ಹೇಳುತ್ತಿದ್ದಾರೆ. ಆದರೆ ನಾನು ಹೋಗಲೇಬೇಕು," ಎಂದರು. ಹಿಂದೆ ಅವರಿದ್ದ ಸ್ಥಿತಿಗೂ ಈಗ ಅವರಿರುವ ಸ್ಥಿತಿಗೂ ವ್ಯತ್ಯಾಸ ತಿಳಿದಿದ್ದರಿಂದ ಅವರ ಈ ಧೃಡ ನಿರ್ಧಾರ ಕೇಳಿ ಆತಂಕಿತನಾದೆ. "ಸರ್, ನಿಮಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕೆಂದಿದ್ದರೆ ಓಕೆ. ಆದರೆ ನೀವೊಬ್ಬರೇ ಬಸ್ ಹತ್ತುವ ಸಾಹಸ ಎಲ್ಲ ಮಾಡಲು ಹೋಗಬೇಡಿ. ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ," ಎಂದೆ. ಅದನ್ನು ಕೇಳಿದ್ದೇ ತಡ, ಬಹಳ ಸಂತೋಷದಿಂದ, "ಹೌದಾ? ಥ್ಯಾಂಕ್ಸ್!" ಎಂದದ್ದು ಮಾತ್ರವಲ್ಲ, ತಮ್ಮ ಹೆಂಡತಿಯನ್ನು ಕರೆದು, "ನೋಡು, ನಾನು ನಾಡಿದ್ದು ಒಬ್ಬನೇ ಹೋಗುದಿಲ್ಲ. ಸಂವರ್ತ ಬರ್ತಾರಂತೆ. ನಾನು ಅವರ ಜೊತೆ ಹೋಗ್ತೇನೆ," ಎಂದು ಹೋಗಲು ಪರ್ಮಿಷನ್ ತೆಗೆದುಕೊಂಡರು.

ಆ ಕಾರ್ಯಕ್ರಮಕ್ಕೆ ಹೋಗುವಾಗ ಜಿ ಆರ್ ಹೇಳಿದ್ದು- "ಗಿರೀಶ್ ಒಬ್ಬರು ತುಂಬಾ ಇಂಪಾರ್ಟೆಂಟ್ ಪಬ್ಲಿಕ್ ಇಂಟಲೆಕ್ಚುಯಲ್ ಆಗಿದ್ರು. ಒಳ್ಳೆಯ ನಾಟಕಕಾರೂ ಹೌದು ಮತ್ತು ನನಗೆ ಸ್ನೇಹಿತರು ಸಹ ಆಗಿದ್ದರು. ಹಾಗಾಗಿ, ಈ ಕಾರ್ಯಕ್ರಮ ಮಿಸ್ ಮಾಡಿಕೊಳ್ಳುವಂತಿಲ್ಲ." ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಹೊರಟ ಅವರ ನಡೆಯಲ್ಲೂ, ಅವರ ನುಡಿಯಲ್ಲೂ ಅವರಿಗಿರುವ ಬದ್ಧತೆ, ಕಲಾಪ್ರೀತಿ ಮತ್ತು ಅವರ ಹೃದಯದಲ್ಲಿರುವ ನಿಷ್ಕಲ್ಮಶ ಪ್ರೀತಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದೇನೂ ಹೊಸತಲ್ಲ. ಆ ಬದ್ಧತೆ, ಪ್ರೀತಿ ಅವರ ಹೆಜ್ಜೆ-ಹೆಜ್ಜೆಯಲ್ಲೂ, ಅಕ್ಷರ-ಅಕ್ಷರದಲ್ಲೂ ಕಾಣಿಸುವಂಥದ್ದು. ಅಂದು ಕಾರ್ನಾಡ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಿನಿ-ಚಿಂತಕ ಮತ್ತು ಕಲಾ ವಿಮರ್ಶಕ ಅಮೃತ್ ಗಂಗರ್ ಅವರಿಗೆ ಜಿ ಆರ್ ಅವರನ್ನು ಪರಿಚಯ ಮಾಡಿಸುತ್ತ ಹೇಳಿದ್ದೆ, "ನನಗೆ ಜೀವನದಲ್ಲಿ ನಿಮ್ಮನ್ನೂ ಸೇರಿಸಿ ಹಲವಾರು ಗುರುಗಳಿದ್ದಾರೆ. ಆದರೆ, ನನ್ನ ಏಕೈಕ ಹೀರೋ ಎಂದರೆ ಇವರೇ- ಜಿ ರಾಜಶೇಖರ್."

* * *
ಆದಿ ಉಡುಪಿ ಬೆತ್ತಲೆ ಪ್ರಕರಣ ನಡೆದಾಗ ಅದರ ಕುರಿತು ಜಿ ರಾಜಶೇಖರ್ ಬಹಳ ಮೂವಿಂಗ್ ಆದ ಒಂದು ಲೇಖನ ಬರೆದರು. ಅದು 'ಲಂಕೇಶ್ ಪತ್ರಿಕೆ'ಯಲ್ಲಿ ಪ್ರಕಟವಾಗಿತ್ತು. ಮುಂದೆ ಕೋರ್ಟಿನಲ್ಲಿ ಆ ಕೇಸ್ ವಿಚಾರಣೆ ಆರಂಭಗೊಂಡಾಗ, ಪ್ರತಿ ವಿಚಾರಣೆಗೂ ಜಿ ಆರ್ ಖುದ್ದು ಹೋಗಿ ಕೂರುತ್ತಿದ್ದರು. ಅಲ್ಲಿ ಅವರು ಸಾಕ್ಷಿಯೂ ಅಲ್ಲ, ನೊಂದವರೂ ಅಲ್ಲ. ಆದರೂ ಪ್ರತಿ ಹಿಯರಿಂಗ್ ದಿನ ಅವರು ಕೋರ್ಟಿನಲ್ಲಿ ಹಾಜರಿರುತ್ತಿದ್ದರು. ಇದನ್ನು ಸಂಘ ಪರಿವಾರದವರು ಗಮನಿಸಿದ್ದರು. ಜಿ ಆರ್ ಅವರು ಆ ಇಡೀ ವಿಚಾರಣೆಗೆ ಸಾಕ್ಷಿ ಆಗಿದ್ದು ಸಂಘ ಪರಿವಾರದವರಿಗೆ ಎಷ್ಟೊಂದು ಕಿರಿಕಿರಿ ಉಂಟು ಮಾಡಿತ್ತು ಎಂಬುದು ಸ್ಪಷ್ಟವಾಗಿದ್ದು, ಆದಿ ಉಡುಪಿ ಬೆತ್ತಲೆ ಪ್ರಕರಣ ಕುರಿತಾಗಿ ಕೋರ್ಟ್ ತೀರ್ಪು ಹೊರಬಿದ್ದ ಕ್ಷಣ. ಅಂದು ಕೋರ್ಟ್ ತೀರ್ಪು ಬರುತ್ತಿದ್ದಂತೆ ಸಂಘ ಪರಿವಾರದವರು ಕೋರ್ಟ್ ಆವರಣದಲ್ಲಿಯೇ ವಿಜಯೋತ್ಸವ ಆಚರಿಸಿದರು ಮತ್ತು ಮೆರವಣಿಗೆ ಆರಂಭಿಸಿದರು. ಆ ವಿಜಯೋತ್ಸವದಲ್ಲಿ, ಮೆರವಣಿಗೆಯಲ್ಲಿ ಅವರು ಕೂಗಿದ ಘೋಷಣೆಗಳಲ್ಲಿ ಒಂದು: "ರಾಜಶೇಖರ್ ಪಂಡ ಏರ್‌ ಯಾ? ಆಯೇನ ಅಮ್ಮೆ ಬ್ಯಾರಿಯಾ!" (ರಾಜಶೇಖರ್ ಅಂದರೆ ಯಾರದು? ಅವನು ಬ್ಯಾರಿಗೆ ಹುಟ್ಟಿದವನು!)

ಈ ಘಟನೆಯಲ್ಲೂ ಮತ್ತೆ ಕಾಣಿಸಿಕೊಳ್ಳುವುದು ಅವರ ಅದೇ ಬದ್ಧತೆ. ಮತ್ತು ಅವರು ಕೇಸರಿ ಪಡೆಯವರಿಗೆ ಹೇಗೆ ದುಃಸ್ವಪ್ನವಾಗಿದ್ದರು ಎಂದು. ಆದರೆ, ರಾಜಶೇಖರ್ ಎಂದರೆ ಅಷ್ಟೆಯೇ- ಪ್ರಗತಿಪರರಿಗೆ ಹೀರೋ, ಜೀವವಿರೋಧಿಗಳಿಗೆ ದುಃಸ್ವಪ್ನ? ಸಂಘ ಪರಿವಾರ ಕೇಳಿದ ಪ್ರಶ್ನೆ - ರಾಜಶೇಖರ್ ಪಂಡ ಏರ್‌ ಯಾ?- ಗೆ ಹೀಗೆ ಗುಣವಾಚಕ ಬಳಸಿ ವಿವರಿಸಲಾಗದು. ಅದು ರಾಜಶೇಖರ್ ಲೋಕವನ್ನು, ಬದುಕನ್ನು ಅರಿಯುವ ಕ್ರಮವೂ ಅಲ್ಲ. ಹಾಗಿದ್ದರೆ, ರಾಜಶೇಖರ್ ಪಂಡ ಏರೆಯಾ?

* * *
ಮೊದಲಿಗೆ ನಾನು ಕೇಳಿ ತಿಳಿದುಕೊಂಡ ಎರಡು ಐತಿಹ್ಯಗಳನ್ನು ನಿಮ್ಮ ಮುಂದಿಡುತ್ತೇನೆ.

ಜಿ ಆರ್ ಮದುವೆ ಆದ ಆರಂಭದ ದಿನಗಳ ಮಾತು. ನಾಸ್ತಿಕರಾದ ಜಿ ಆರ್ ಅವರ ಹೆಂಡತಿ ಅಪಾರ ದೈವಶ್ರದ್ಧೆ ಮತ್ತು ಭಕ್ತಿ ಉಳ್ಳವರು. ಆ ದಿನಗಳಲ್ಲಿ ಒಮ್ಮೆ ಪಂಢರಾಪುರಕ್ಕೆ ಹೋಗಲು ನಿರ್ಧರಿಸಿದ ಅವರ ಹೆಂಡತಿ, ಬಹುಶಃ ಅವರ ಇಂದಿನ ತಮಾಷೆಯ ರೀತಿಯಲ್ಲೇ ಏನೋ, "ನೀವು ಬರಹಗಾರ ಅಲ್ವಾ? ನನಗೊಂದು ಭಜನೆ ಬರೆದು ಕೊಡಿ ನೋಡುವ!" ಎಂದು ಹೇಳಿದರಂತೆ. ನಂಬುತ್ತೀರೋ ಬಿಡುತ್ತೀರೋ; ಜಿ ಆರ್ ತಮ್ಮ ಹೆಂಡತಿಗೆ ಒಂದು ಭಜನೆಯನ್ನು ಬರೆದುಕೊಟ್ಟರಂತೆ! ಕೃಷ್ಣಾ- ಸುಧಾಮನ ಕತೆಯನ್ನೊಳಗೊಂಡ ಆ ಭಜನೆ ಕೇವಲ ಆರಾಧನಾತ್ಮಕ ಆಗಿರದೆ ಕೃಷ್ಣಾ ಮತ್ತು ಸುಧಾಮ ನಡುವಿನ ಕ್ಲಾಸ್ ಡಿಫರೆನ್ಸ್ / ವರ್ಗ ತಾರತಮ್ಯವನ್ನು ಕಾಣಿಸುವಂಥದ್ದಾಗಿತ್ತು ಎಂದು ಕೇಳಿದ್ದೇನೆ.

ಈ ಲೇಖನ ಓದಿದ್ದೀರಾ?: ಜಿ ರಾಜಶೇಖರ ಬರಹ | ನಮ್ಮ ಕಾಲದ ತವಕ ತಲ್ಲಣಗಳು: 'ಮತ್ತೊಬ್ಬನ ಸ್ವಗತ'

ಇದರ ಸತ್ಯಾಸತ್ಯತೆ ಬಗ್ಗೆ ನಾನು ಎಂದಿಗೂ ಕ್ರಾಸ್ ವೆರಿಫೈ ಮಾಡಲು ಹೋಗಿಲ್ಲ. ಅದರ ಅಗತ್ಯವೂ ಇಲ್ಲ. ಯಾಕೆಂದರೆ ನಾನು ಬಲ್ಲಂತೆ, ಜಿ ಆರ್ ಹಾಗೆ ಮಾಡಿರುವ ಎಲ್ಲ ಸಾಧ್ಯತೆ ಇದೆ. ಅವರಿಗೆ ತನ್ನ ನಿಲುವು ಎಷ್ಟು ಮುಖ್ಯವೋ, ಜನರ ಬದುಕಿನಲ್ಲಿ ಇರುವ ಕೆಡುಕಿಲ್ಲದ ನಂಬಿಕೆಗಳ ಕುರಿತಾಗಿ ಗೌರವ ಕೂಡ ಅಷ್ಟೇ ಮುಖ್ಯ ಎಂಬ ಭಾವನೆ ಇತ್ತು, ಜನರ ಸ್ವಾಯತ್ತತೆಯ ಬಗ್ಗೆ ಸಮ್ಮತಿ ಇತ್ತು. ಮತ್ತು ಜನರ ಭಾವಲೋಕವನ್ನು ಗುರುತಿಸಬಲ್ಲವರಾಗಿದ್ದರು. ಹಾಗೆಂದ ಮಾತ್ರಕ್ಕೆ ಈಗ ಬಹಳ ಚಾಲ್ತಿಯಲ್ಲಿರುವ 'ಧಾರ್ಮಿಕ ನಂಬಿಕೆ' ಮತ್ತು ಅವುಗಳಿಗೆ ಬಹಳ ಸುಲಭವಾಗಿ, ಹಲವೊಮ್ಮೆ ನಿಷ್ಕಾರಣವಾಗಿ ಆಗುವ 'ಧಕ್ಕೆ'- ಇವುಗಳ ಬಗ್ಗೆ ಅವರಿಗೆ ಸ್ಪಷ್ಟ ನಿಲುವಿತ್ತು.

ಇನ್ನೊಂದು ಪ್ರಸಂಗ ಕೇಳಿ...

ಸುರತ್ಕಲ್ ಗಲಭೆ ನೆಡೆದ ನಂತರದ ದಿನಗಳಲ್ಲಿ ತಮ್ಮ ಕೆಲವು ಸಂಗಾತಿಗಳ ಜೊತೆ ಜಿ ಆರ್ ಸತ್ಯಾನ್ವೇಷಣೆಗೆಂದು ಗಲಭೆ ನಡೆದ ಪ್ರದೇಶಕ್ಕೆ ಹೋಗಿದ್ದರು. ನೊಂದವರು, ನಷ್ಟಕ್ಕೊಳಗಾದವರನ್ನು ಸಂದರ್ಶಿಸುತ್ತ ಇದ್ದರು. ಆ ಗಲಭೆಯಲ್ಲಿ ಓರ್ವ ಮಹಿಳೆಯು ಕೆಲವು ಹುಡುಗರ ಸಹಾಯದಿಂದ ಮುಂದೆ ನಿಂತು ಒಂದಿಷ್ಟು ಮುಸಲ್ಮಾನರ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಜಿ ಆರ್ ಆ ಹೆಂಗಸನ್ನು ಭೇಟಿ ಆಗಲು ನಿರ್ಧರಿಸಿ, ಅವರ ಮನೆಯನ್ನು ಹುಡುಕುತ್ತ ಹೋದರಂತೆ. ಅವರಿವರನ್ನು ಕೇಳಿ ಆ ಹೆಂಗಸು ವಾಸವಾಗಿದ್ದ ಸ್ಥಳ ತಲುಪಿ ನೋಡಿದರೆ, ಅದೊಂದು ಸಣ್ಣ ಬಿಡಾರ. ಆ ಬಿಡಾರವೇ ಅಲ್ಲಿ ವಾಸವಾಗಿರುವವರ ಆರ್ಥಿಕ ಸ್ಥಿತಿ ಕುರಿತು ಹೇಳುವಂತಿತ್ತು. ಆ ಬಿಡಾರದ ಬಾಗಿಲಿನಲ್ಲಿ ಒಬ್ಬ ಯುವತಿ ಕೂತಿದ್ದಳು. ಆಕೆಯನ್ನು ಕೇಳಿದರೆ ಅದು ಜಿ ಆರ್ ಮತ್ತು ಸಂಗಾತಿಗಳು ಕಾಣಲು ಇಚ್ಚಿಸುತ್ತಿದ್ದ ಹೆಂಗಸಿನ ಮನೆಯೇ ಆಗಿತ್ತು. ಅವರನ್ನು ಭೇಟಿ ಆಗಬೇಕಿತ್ತು ಎಂದಾಗ, ಈ ಯುವತಿ, "ಸರಿ, ಕರೆಯುತ್ತೇನೆ," ಎಂದು ಒಳಗೆ ಹೋದಳು. ಅದೆಷ್ಟೋ ನಿಮಿಷವಾದರೂ, ಆ ಮಹಿಳೆ ಹೊರಗೆ ಬರಲಿಲ್ಲ. ಒಳಗೆ ಹೋದ ಯುವತಿಯೂ ಹೊರಬರಲಿಲ್ಲ. ಆಮೇಲೆ ಒಂದ್ಹತ್ತು ನಿಮಿಷದ ನಂತರ ಆ ಮಹಿಳೆ ಹೊರಗೆ ಬಂದು ಸತ್ಯಾನ್ವೇಷಣೆಗೆ ಹೋಗಿದ್ದವರಿಗೆ ಒಂದು ಸಂದರ್ಶನ ನೀಡಿದರು. ಆ ಅಷ್ಟೂ ಹೊತ್ತು, ಬಾಗಿಲ ಬಳಿ ಮೊದಲು ಕುಳಿತಿದ್ದ ಯುವತಿ ಹೊರಬರಲೇ ಇಲ್ಲ. ಆ ಮಹಿಳೆ ಇವರ ಪ್ರಶ್ನೆಗಳಿಗೆ ನೀಡಿದ ಉತ್ತರ, ಸಮಜಾಯಿಷಿಗಳನ್ನೆಲ್ಲ ಕೇಳಿಸಿಕೊಂಡು ಹೊರಟಾಗ, ಜಿ ಆರ್ ತಮ್ಮ ಸಂಗಾತಿಗಳ ಬಳಿ, ನೋವಿನ ದನಿಯಲ್ಲಿ, "ಗಮನಿಸಿದ್ರಾ?" ಎಂದು ಕೇಳಿದರಂತೆ. ಏನು ಎಂದು ತಿಳಿಯದ ಇತರರು, ಏನನ್ನು ಗಮನಿಸಬೇಕಿತ್ತು ಎಂದು ಕೇಳಿದಾಗ ಜಿ ಆರ್, "ಆ ಯುವತಿ ಹಾಕಿಕೊಂಡಿದ್ದ ಕುಪ್ಪಸವನ್ನೇ, ಈ ಹೆಂಗಸು ಹಾಕಿಕೊಂಡಿದ್ದರು," ಎಂದರಂತೆ. ಆ ಮನೆಯ ಆರ್ಥಿಕ ಸ್ಥಿತಿ ಎಂಥದ್ದಾಗಿತ್ತೆಂದರೆ, ಒಂದೇ ಕುಪ್ಪಸವನ್ನು ಇಬ್ಬರು ಬಳಸುತ್ತಿದ್ದರು. ಒಬ್ಬರು ಹೊರ ಬಂದಾಗ ಇನ್ನೊಬ್ಬರು ಹೊರ ಬರುವ ಸ್ಥಿತಿಯಿಲ್ಲ. ಇದನ್ನು ಗಮನಿಸಿರದ ಇತರ ಸಂಗಾತಿಗಳು ನಡೆದದ್ದೇನು ಎಂದು ಗ್ರಹಿಸಲು ಚುಕ್ಕಿಗಳನ್ನು ಜೋಡಿಸುತ್ತಿರುವಾಗ ಜಿ ಆರ್ ನಿಟ್ಟುಸಿರು ಬಿಡುತ್ತ ಹೇಳಿದರಂತೆ; "ಛೆ! ಎಂಥಾ ಬಡತನ!"

ಆಕ್ರಮಣಕ್ಕೆ ಒಳಗಾದ ಮಂದಿಯ ಪರವಾಗಿ ಫ್ಯಾಕ್ಟ್ಸ್ ಸಂಗ್ರಹಿಸಲು ಹೋಗಿದ್ದ ವ್ಯಕ್ತಿಗೆ ಆಕ್ರಮಣ ಮಾಡಿದ ಜನರ ಜೀವನದ ಕಷ್ಟವನ್ನು ಸಹ ಕಾಣುವ, ಅದನ್ನು ಸೂಕ್ಷ್ಮವಾಗಿಯೇ ಗ್ರಹಿಸುವ ಶಕ್ತಿ/ ನೋಟ ಇದೆ ಎಂದರೆ, ಅಬ್ಬಬ್ಬಾ!

2018ರಲ್ಲಿ ಜಿ ಆರ್ ಅವರನ್ನು ಗುರುಗಳಾದ ರಹಮತ್ ತರೀಕೆರೆ ಸಂದರ್ಶನ ಮಾಡಿದಾಗ, ತಮ್ಮ ಊರಿನ ಬನ್ನಂಜೆಯಲ್ಲಿರುವ/ ಇದ್ದ ಒಂದು ಗುಡಿಯ ಕುರಿತು ಹೇಳುತ್ತಾರೆ: "ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್‌ನವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೋ ಅದನ್ನೆಲ್ಲ ಮಾಡಿದಾರೆ.'' ಈ ಮಾತನ್ನು ಕೋಟ್ ಮಾಡಿ ರಹಮತ್ ಹೇಳುವುದು: "ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕೃತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ, ಪ್ರೀತಿ ಸೋಜಿಗ ಹುಟ್ಟಿಸಿತು."

ಇದು ಸೋಜಿಗದ ವಿಷಯವೇ ಹೌದು. ಜಿ ಆರ್ ಬದುಕಿನಲ್ಲಿ ಅದು ಸದಾ ಕಾಣಸಿಗುವಂಥ ಗುಣ. ಅದು ವಿರೋಧಾಭಾಸದಂತೆ ಕಂಡರೂ, ಹಾಗಲ್ಲ. ಲೋಕವನ್ನು, ಬದುಕನ್ನು, ಮನುಷ್ಯನನ್ನು ಎಲ್ಲ ವೈರುಧ್ಯ, ವಿಪರ್ಯಾಸ, ಸಂಕೀರ್ಣತೆಗಳ ಸಮೇತ ಗ್ರಹಿಸುವ, ಅರಿಯುವ ಸ್ವಭಾವ ಅವರದ್ದು. ಹಾಗಾಗಿ ಅದು ಸೋಜಿಗದ ಮಾತೇ! ಹಾಗೆ ನೋಡಿದರೆ, ಜಿ ಆರ್ ಅವರೇ ಒಂದು ಸೋಜಿಗ! ಅದಕ್ಕೇ ಹೇಳಿದ್ದು, ಬರಿ ವ್ಯಕ್ತಿ ವಿಶೇಷಣ, ಗುಣವಾಚಕ ಬಳಸಿ ಜಿ ಆರ್ ಕುರಿತು ಹೇಳಲಾಗದು ಎಂದು.

ಹೆಗ್ಗೋಡಿನ ನೀನಾಸಂ ಪ್ರತಿವರ್ಷ ನೆಡೆಸುವ ಸಂಸ್ಕೃತಿ ಶಿಬಿರದಲ್ಲಿ ಒಮ್ಮೆ - ಅದು 2007 ಎಂದು ನೆನಪು - ಅವರು ಮಾಡಿದ ಭಾಷಣ ನಾನು ಕೇಳಿಸಿಕೊಂಡ ಅವರ ಅತ್ಯುತ್ತಮ ಭಾಷಣಗಳಲ್ಲೊಂದು. ಅಂದು ಅವರು ಕುವೆಂಪು ಅವರ ಆತ್ಮಕತೆಯಲ್ಲಿ ಬರುವ ಒಂದು ಸಂದರ್ಭವನ್ನು ವಿವರಿಸಿ ಮಾತನಾಡಿದ್ದರು. ರಾಮಕೃಷ್ಣ ಪರಮಹಂಸರ ಅಭಿಮಾನಿ ಆಗಿದ್ದ ಕುವೆಂಪು ಒಮ್ಮೆ ಕೊಲ್ಕತ್ತಾದಲ್ಲಿರುವ ರಾಮಕೃಷ್ಣ ಆಶ್ರಮ ನೋಡಲು ಹೋಗುತ್ತಾರೆ. ಗಂಗೆಯಿಂದ ಒಡೆದು ಹರಿಯುವ ಹೂಗ್ಲಿ ನದಿಯ ತಟದಲ್ಲಿ ರಾಮಕೃಷ್ಣರ ಆಶ್ರಮ. ನದಿ ದಾಟಿ ಆಚೆ ಹೋದರೆ, ಮತ್ತೊಂದು ದಡದಲ್ಲಿ ಕಾಳಿ ಮಂದಿರ. ಒಂದು ಸಣ್ಣ ದೋಣಿಯ ಮೂಲಕ ನದಿಯನ್ನು ದಾಟುವ ಕುವೆಂಪು, ಆ ನದಿ ಎಷ್ಟು ಕಲುಷಿತವಾಗಿತ್ತು ಎಂದು ವಿವರವಾಗಿ ಬರೆಯುತ್ತಾರೆ. ಆ ನದಿಯ ನೀರಿನ ಒಂದು ಹನಿಯೂ ತನ್ನ ಮೈಗೆ ತಾಕಿದರೆ ಚರ್ಮರೋಗ ಬರಬಹುದೇನೋ ಎಂಬಷ್ಟು ಕಲುಷಿತವಾಗಿತ್ತು ಎಂದು ಹೇಳುವ ಕುವೆಂಪು, ಆ ರಾತ್ರಿ ತಾನು ತಂಗಿದ್ದ ಕೋಣೆಯಲ್ಲಿ ಒಂದು ಕವಿತೆ ಬರೆದಿದ್ದು, ಅದು ಎಲ್ಲಿಯೂ ಪ್ರಕಟವಾಗದೆ ಉಳಿದಿದೆ ಎನ್ನುತ್ತ ಆ ಕವಿತೆಯನ್ನು ಓದುಗರ ಮುಂದಿಡುತ್ತಾರೆ. ಆ ಕವಿತೆಯಲ್ಲಿ ಗಂಗೆಯನ್ನು ಪವಿತ್ರೆ, ಪಾಪನಾಶಿನಿ ಎಂದೆಲ್ಲ ವರ್ಣಿಸುತ್ತಾರೆ. ಕುವೆಂಪು ಜೀವನದ ಈ ಎಪಿಸೋಡ್ ಒಂದನ್ನು ಎತ್ತಿಕೊಂಡು ಅಂದು ಜಿ ಆರ್, "ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ, ಫಿಸಿಕಲ್ ಗಂಗಾ ಮತ್ತು ಮಿಥಿಕಲ್ ಗಂಗಾ ಒಂದೇ ಅಲ್ಲ ಎಂಬುದನ್ನು." ಅಲ್ಲಿಂದ ಮುಂದೆ ಹೋಗಿ ಅವರು ಆ ದಿನ, "ಕಾಣುವ ಸತ್ಯ, ಕಾಣಿಸಿದ ಸತ್ಯ, ಕಂಡ ಸತ್ಯ, ಉಣಬಡಿಸಿದ ಸತ್ಯ," - ಹೀಗೆ ಬದುಕಿನಲ್ಲಿ ನಮ್ಮೆದುರಿಗಿರುವ, ನಮ್ಮೊಳಗಿರುವ ಹಲವಾರು ಶೇಡ್ ಕಡೆ ಗಮನ ಸೆಳೆದಿದ್ದರು.

Image

ಸರಿ-ತಪ್ಪು, ಹಗಲು-ರಾತ್ರಿ, ಕಪ್ಪು-ಬಿಳುಪು, ಸತ್ಯ-ಸುಳ್ಳು, ನ್ಯಾಯ-ಅನ್ಯಾಯ -ಇಂಥ ಬೈನರಿಗಳ ಮೂಲಕವೇ ಜಗತ್ತನ್ನು ನೋಡುವ ಕ್ರಮಕ್ಕೆ ಭಿನ್ನವಾಗಿ, ಬದುಕಿನ ಕ್ಲಿಷ್ಟ ವಾಸ್ತವಗಳನ್ನು ಅರ್ಥ ಮಾಡಿಕೊಂಡೇ, ಉರುಗ್ವೆ ದೇಶದ ಲೇಖಕ ಎಡ್ವಾರ್ಡೊ ಗಾಲಿಯನೋ ಹೇಳುವಂತೆ ಬರಹಗಾರರರು ಅರಸಬೇಕಾದ ನಿಗೂಢ ಮೂರನೇ ದಡ ಹುಡುಕುತ್ತ ಸಾಗಿದ ಚಿಂತಕ, ಲೇಖಕ, ಜಿ ಆರ್.

ಬೈನರಿಗಳಲ್ಲಿ ಲೋಕವನ್ನು, ಬದುಕನ್ನು ಗ್ರಹಿಸುವ ಕ್ರಮ ಇರುವವರಲ್ಲಿನ ಮತ್ತೊಂದು ಗುಣ ಎಂದರೆ, ಲೋಕದ ಅಂಕುಡೊಂಕುಗಳಿಗೆ ತಮ್ಮದೊಂದು ಸರ್ಟಿಫಿಕೆಟ್ ಇಶ್ಯೂ ಮಾಡುವುದು, ಜಡ್ಜ್‌ಮೆಂಟ್ ಪಾಸ್ ಮಾಡುವುದು. ಈ ಕುರಿತಾಗಿ ಒಮ್ಮೆ ಚಹಾ ಕುಡಿಯುತ್ತ ಮಾತನಾಡುವಾಗ ಜಿ ಆರ್, "ಇವರೆಲ್ಲ ನಡೆಯುತ್ತಿರುವ ಪಂದ್ಯಕ್ಕೆ ತಾವು ಅಂಪೈರ್ ಅಂತ ತಿಳ್ಕೊಂಡಿದ್ದಾರೆ," ಅಂತಂದಿದ್ದರು. ಈ ಲೋಕದಲ್ಲಿ ಎಲ್ಲರಂತೆ ತಾನೂ ಒಬ್ಬ ಜೀವಿ ಮತ್ತು ಇಲ್ಲಿ ನಡೆಯುತ್ತಿರುವ ಆಟದಲ್ಲಿ ಬೇಡವೆಂದರೂ ತಾನು ಭಾಗಿ ಅಂತ ಅಂದುಕೊಳ್ಳದೆ, ತಾನು ಇರುವುದೇ ಇತರರಿಗೆ ಪ್ರಸಾದ ಹಂಚಲಿಕ್ಕೆ ಎಂದು ತಿಳಿಯುವ ಬೌದ್ಧಿಕ ಪ್ರಪಂಚದ ಬಗ್ಗೆ ಅವರಿಗೆ ಅಸಮಾಧಾನ ಇತ್ತು. ಆದರೆ, ಅಂಥದ್ದನ್ನೆಲ್ಲ ಹೇಳಿಕೊಂಡು ತಿರುಗಿದ್ದು ಇಲ್ಲವೇ ಇಲ್ಲ ಎನ್ನಬಹುದು. ಬದಲಿಗೆ, ಆ ಕ್ರಮಕ್ಕೆ ಭಿನ್ನವಾಗಿ ನಡೆದುಕೊಳ್ಳುವುದನ್ನೇ ಆಯ್ದುಕೊಂಡವರು ಜಿ ಆರ್.

ಅದಕ್ಕೇ ಬಹುಶಃ 2002ರಲ್ಲಿ ಬೆಂಗಳೂರಿನಲ್ಲಿ ಪಾಲರಾಜ್ ಮತ್ತು ಸಮೀರಾ ಎಂಬುವವರ ಅಂತರ್ಧರ್ಮೀಯ ವಿವಾಹ ನಡೆದ ಬೆನ್ನಿಗೇ, ಸಮೀರಾಳ ತಂದೆ ಮತ್ತು ಸಹೋದರ ದಂಪತಿಯನ್ನು ಮಚ್ಚಿನಿಂದ ಕೊಂದಾಗ, ಜಿ ಆರ್ ಅವರಿಗೆ ಅಲ್ಲಿ ಕಾಣಿಸುವುದು 'ಹಿಂಸೆಯ ಸಾಮಾನ್ಯತೆ.' ಆ ಲೇಖನದಲ್ಲಿ ಜಿ ಆರ್, 21 ವರ್ಷಗಳ ಕಾಲ ಮಗಳನ್ನು ಸಾಕಿದ ತಂದೆ, ಆಕೆಯ ಜೊತೆ ಬೆಳೆದ ಸಹೋದರ ಸಮೀರಾಳ ಕೊಲೆ ಮಾಡುತ್ತಾರೆ ಅಂತಾದರೆ, ಅದು ಹೃದಯಶೂನ್ಯತೆ ಅಥವಾ ಕ್ರೌರ್ಯ ಎಂದು ಮಾತ್ರ ಕಾಣದೆ; ಜೀವಗೊಟ್ಟು ಸಾಕಿ ಸಲುಹಿದ ತಂದೆ, ಜೊತೆಜೊತೆಯಾಗಿಯೇ ಬೆಳೆದ ಸಹೋದರ ಇವರನ್ನು ಕೊಲೆಗಾರರನ್ನಾಗಿಸುವ ವ್ಯವಸ್ಥೆ ಎಂಥದ್ದು ಮತ್ತು ಆ ವ್ಯವಸ್ಥೆ ರೂಪಿಸುವ ಮನಸ್ಥಿತಿ ಎಂಥದ್ದು ಎಂದು ಪ್ರಶ್ನಿಸುತ್ತಾರೆ! ಈ ಪ್ರಶ್ನೆ ಎತ್ತುತ್ತ ಅವರು, ನಾವೆಲ್ಲರೂ ನಮ್ಮ-ನಮ್ಮ ಕುಟುಂಬದಲ್ಲಿ ಅಂತರ್ಜಾತೀಯ, ಅಂತರ್ಮತೀಯ ವಿವಾಹ ಕುರಿತಾಗಿ ಅಸಹನೀಯ ಮಾತುಗಳನ್ನು ಕೇಳಿಲ್ಲವೇ ಎಂದು ಕೇಳಿಕೊಳ್ಳುವಾಗ, ಜಿ ಆರ್ ಸಮೀರಾಳ ತಂದೆ ಮತ್ತು ಸಹೋದರ ಸಹ ನಮ್ಮ ನಡುವಿನಲ್ಲೇ ಇರುವ ಮನುಷ್ಯರು ಎಂದು ನೆನಪಿಸುತ್ತಾರೆ. ಕ್ರೌರ್ಯ ನಡೆಸಿದವರು, ಕ್ರೌರ್ಯಕ್ಕೆ ಒಳಗಾದವರು ಯಾರೂ ಜಿ ಆರ್ ಪಾಲಿಗೆ ಹೊರಗಿನವರಲ್ಲ. ಅವರೆಲ್ಲರೂ ನಮ್ಮ ನಡುವಿನವರೇ. ಹಾಗಾಗಿ, ಯಾವುದನ್ನೂ ಅವರು ಕೇವಲ ಅಂಪೈರ್ ಕಣ್ಣಿನಲ್ಲಿ ಕಂಡಿದ್ದೇ ಇಲ್ಲ.

ಅದಕ್ಕಾಗಿಯೇ ಮತ್ತೆ-ಮತ್ತೆ ಅನ್ನಿಸುವುದು, ಚಿಂತಕ, ಲೇಖಕ, ಸಾಕ್ಷಿಪ್ರಜ್ಞೆ ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬ ಅಸಾಮಾನ್ಯ ಸಾಮಾನ್ಯ ಮನುಷ್ಯ ನಮ್ಮ ಜಿ ಆರ್.

ಹೌದು, ಜಿ ಆರ್ ನಿಜಾರ್ಥದಲ್ಲಿ ಒಬ್ಬ ಕಾಮನ್ ಮ್ಯಾನ್! ಆರ್ ಕೆ ಲಕ್ಷ್ಮಣ್ ಅವರ ವ್ಯಂಗ್ಯಚಿತ್ರದಲ್ಲಿ ಬರುವ ಕಾಮನ್ ಮ್ಯಾನ್ ಹೇಗೆ ಜಗತ್ತಿನ ಆಗುಹೋಗುಗಳಿಗೆ ಒಬ್ಬ ವಿಟ್ನೆಸ್ ಆಗಿರುವನೋ, ಹಾಗೆಯೇ ಜಿ ಆರ್ ಸಹ ಅವರ ಜೀವಿತಾವಧಿಯಲ್ಲಿ ಲೋಕಲ್ ಮತ್ತು ಗ್ಲೋಬಲ್ ಆಗುಹೋಗುಗಳಿಗೆ ಓರ್ವ ವಿಟ್ನೆಸ್.

ಒಮ್ಮೆ ಒಂದು ಮೀಟಿಂಗಿಗೆ ಬಂದವರ ಮೊಗದಲ್ಲಿ ಅವರು ತಡೆಹಿಡಿದುಕೊಂಡಿದ್ದ ನಗು ಹೊಸ ಹೊಳಪನ್ನೇ ಮೂಡಿಸಿತ್ತು. ಬಹಳ ಪುಳಕಿತರಾಗಿರುವಂತೆ ಕಂಡ ಜಿ ಆರ್, "ಹೇ ಸಂವರ್ತ, ನೀವು 'ಬೊಡಿಗಾರ್ಡ್' ಸಿನಿಮಾ ನೋಡಿದೀರಾ?" ಎಂದು ಕೇಳಿದರು. ನಾನು ಬಹಳ ಕಾಂಡಸೆಂಡಿಂಗ್ ದನಿಯಲ್ಲಿ, "ಏ..." ಎಂದು ಡಿಸ್ಮಿಸ್ ಮಾಡುತ್ತ, "ಇಲ್ಲ..." ಎಂದೆ. ಅವರು, "ಹೌದಾ?" ಎನ್ನುತ್ತ, ನನ್ನ ಡಿಸ್ಮಿಸ್ಸಿವ್ ಉತ್ತರಕ್ಕೆ ಏನೇನೂ ವೇಟ್ ಕೊಡದೆ, "ಗೊತ್ತಾ... ಅದರಲ್ಲಿ ಸಲ್ಮಾನ್ ಖಾನ್ ತನ್ನ ಬೈಸೆಪ್ಸ್ ಅನ್ನು ಫ್ಲೆಕ್ಸ್ ಮಾಡ್ತಾನೆ. ಅದು ನೃತ್ಯದ ಒಂದು ಸ್ಟೆಪ್!" ಎಂದು ಜೋರಾಗಿ ನಕ್ಕರು. ಆ ಹೊತ್ತಿಗೆ ಅವರು ಸಲ್ಮಾನ್ ಖಾನ್ ಮಾಡುವಂತೆ ತನ್ನೆರಡು ಕೈಗಳನ್ನು ಎತ್ತಿ ಅಣಕ ಮಾಡಿದ ರೀತಿ ಕಂಡು ನಾನು ಸಹ ನಕ್ಕಿದ್ದೆ. ಆದರೆ, ನಿಜವಾಗಿಯೂ ನನಗೆ ಆಶ್ಚರ್ಯ ಆಗಿದ್ದು, ಜಿ ಆರ್ ಅವರು ಹೋಗಿ ಸಲ್ಮಾನ್ ಖಾನ್ ಸಿನಿಮಾ ನೋಡಿದ್ದು. ಆಮೇಲೆ ತಿಳಿದ ವಿಷಯ ಏನೆಂದರೆ, ಜಿ ಆರ್ ತೀರಾ ಜನಪ್ರಿಯವಾದ ಸಿನೆಮಾಗಳನ್ನೆಲ್ಲ ನೋಡುತ್ತಾರೆ! ಅವರಷ್ಟು ವಿದ್ವತ್ತು ಮತ್ತು ಕಲಾಭಿರುಚಿ ಇರುವ ವ್ಯಕ್ತಿ ಪಾಪ್ಯುಲರ್ ಕಲ್ಚರ್ ಅನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಅವರಿಗೆ ಅವೆಲ್ಲ ಕೀಳಭಿರುಚಿ ಮತ್ತು ತಿರಸ್ಕರಿಸಬೇಕಾದ ಸಂಗತಿ ಅಲ್ಲವೇ ಅಲ್ಲ. ಅವೆಲ್ಲವೂ ಜನರ ನಾಡಿಮಿಡಿತವನ್ನು ಹಿಡಿದ ಸಂಗತಿಗಳು. ಅವೆಲ್ಲವೂ ನಮ್ಮ ನಿತ್ಯಜೀವನದ ಭಾಗ. ಹಾಗಾಗಿ ಅವರಿಗೆ ಅವೆಲ್ಲವೂ ಮುಖ್ಯ. ಮತ್ತು ಅವುಗಳ ಮೂಲಕವೂ ಜಗತ್ತನ್ನು ಕಾಲದ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು.

ಈ ಲೇಖನ ಓದಿದ್ದೀರಾ?: ನುಡಿನಮನ| ಸಾದತ್ ಹಸನ್ ಮಾಂಟೊವನ್ನು ನಮ್ಮ ಎದೆಗಿಳಿಸಿದವರು ಜಿ ಆರ್‌

ಜನಪ್ರಿಯವಾದದ್ದು ಜನಪರ ಆಗಿರಬೇಕಿಲ್ಲ ಎಂಬ ಸಾಮಾನ್ಯ ಜ್ಞಾನ ಹೊಂದಿದ್ದ ಅವರು, ಜನಪ್ರಿಯವಾದದ್ದಕ್ಕೆ ಬೆನ್ನು ತಿರುಗಿಸಿರಲಿಲ್ಲ. ಸಾಮಾನ್ಯರ ಬದುಕಿನ ಭಾಗವಾಗಿದ್ದ ಪಾಪ್ಯುಲರ್ ಕಲ್ಚರ್ ಅನ್ನು ಸಾಮಾನ್ಯರಂತೆ ಅವರು ಅನುಭವಿಸಿದ್ದರು.

ಆದರೆ ಆರ್ ಕೆ ಲಕ್ಷ್ಮಣ್ ಅವರ ಕಾಮನ್ ಮ್ಯಾನ್ ಮತ್ತು ನಮ್ಮ ಜಿ ಆರ್ ಅವರಿಗೆ ಒಂದು ಪ್ರಮುಖ ವ್ಯತ್ಯಾಸವಿದೆ. ಅದೇನೆಂದರೆ, ಆರ್ ಕೆ ಲಕ್ಷ್ಮಣ್ ಅವರ ಕಾಮನ್ ಮ್ಯಾನ್, ಒಬ್ಬ ಸೈಲೆಂಟ್ ವಿಟ್ನೆಸ್. ಆದರೆ, ನಮ್ಮ ಜಿ ಆರ್... ಎನಿಥಿಂಗ್ ಬಟ್ ಸೈಲೆಂಟ್!

* * *
ಜಿ ಆರ್ ಮುನ್ನಡೆಸಿದ, ಜೀವ ತುಂಬಿದ, ಪ್ರಜ್ಞೆ ಮೂಡಿಸಿದ ಚಳವಳಿಗಳು, ಹೋರಾಟಗಳು, ಸಂಘಟನೆಗಳು ಅಸಂಖ್ಯ. ಬದುಕಿನ, ಲೋಕದ ಅಷ್ಟೆಲ್ಲ ಸಂಕೀರ್ಣತೆ ಸೂಕ್ಷ್ಮತೆ ಅರಿವಿದ್ದವರಿಗೆ ಆ ಅರಿವು ಅವರ ದಿಕ್ಕೆಡಿಸಿದ್ದು ಯಾವತ್ತೂ ಇಲ್ಲ. ಅವರಿಗೆ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟತೆ ಇತ್ತು, ಖಚಿತತೆ ಇತ್ತು. ಹಾದಿ-ಬೀದಿ ಓಡಾಡಿ ಸಂಶೋಧನೆ ನಡೆಸಿ ಬರೆದ 'ಕಾಗೋಡು ಸತ್ಯಾಗ್ರಹ,' ಬೀದಿ-ಬೀದಿಯಲ್ಲಿ ನಿಂತು, ಎಲ್ಲ ಅಂಕಿ-ಅಂಶಗಳನ್ನು ಬರೆದಿಟ್ಟುಕೊಂಡ ಚೀಟಿಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಮಾಡಿದ ಭಾಷಣಗಳು, ಸಂಘಟನೆಯ ಕಚೇರಿಗಳಲ್ಲಿ ಕೂತು ಬರೆದು-ಮನೆಯಲ್ಲಿ ಕೂತು ತಿದ್ದಿದ ಅನೇಕ ಕರಪತ್ರಗಳು, ಡಿ.ಸಿ, ಎಸ್.ಪಿ, ಮಂತ್ರಿಗಳಿಗೆ ಬರೆದ ಮನವಿ ಪತ್ರಗಳು, ಊರೂರು ಸುತ್ತಿ ಫ್ಯಾಕ್ಟ್ ಫೈಂಡಿಂಗ್ ಮಾಡಿ 'ಲಂಕೇಶ್ ಪತ್ರಿಕೆ,' 'ಕಮ್ಯುನಲಿಸ್ಮ್ ಕೊಂಬಾಟ್' ಮತ್ತಿತರೆ ಪತ್ರಿಕೆಗಳಿಗೆ ಬರೆದು ಹಿಂಸೆಗಳನ್ನು ದಾಖಲಿಸಿದ್ದು... ಇಷ್ಟು ಮಾತ್ರವಲ್ಲ, ಇಂಟರ್ನೆಟ್, ಸ್ಮಾರ್ಟ್ ಫೋನ್ ಇಲ್ಲದ ದಿನಗಳಲ್ಲಿ ತಾನು ಪತ್ರಿಕೆಯಲ್ಲಿ ಓದಿದ ಯಾವುದೋ ಒಂದು ಒಳ್ಳೆಯ ಲೇಖನ, ಇಲ್ಲವೇ ಮರೆಯದೆ ಗಮನಿಸಬೇಕಾದ ಸುದ್ದಿ ಇವುಗಳ ಅನೇಕ ಪ್ರತಿ ಜೆರಾಕ್ಸ್ ಮಾಡಿ ಸಿನಿಮಾ ಸ್ಕ್ರೀನಿಂಗ್ ಅಥವಾ ನಾಟಕ ಪ್ರದರ್ಶನದ ಮುಂಚೆ ನೆರೆದವರಿಗೆ ಹಂಚುತ್ತಿದ್ದದ್ದು ಎಲ್ಲವೂ ಅವರ ರಾಜಕೀಯವೇ! ಒಮ್ಮೆಯಂತೂ ಹೆರಾಲ್ಡ್ ಪಿಂಟರ್ ಅವರ ನೊಬೆಲ್ ಸ್ವೀಕಾರ ಭಾಷಣದ ಪ್ರತಿಯನ್ನು ಜೆರಾಕ್ಸ್ ಮಾಡಿಸಿ ಹಂಚಿದ್ದರು!

ಉಡುಪಿಯಲ್ಲಿ ಡಾ.ಪಿ ವಿ ಭಂಡಾರಿ ಮುಂದಾಳತ್ವದಲ್ಲಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಉಳಿಸಲು ಹೋರಾಟ ನಡೆಯುತ್ತಿದ್ದಾಗ, ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರನ್ನು ಕಡೆಗಣಿಸಿ ಹೋರಾಟದ ಮೀಟಿಂಗ್ ಅಟೆಂಡ್ ಮಾಡಿದ್ದರು. ಅಂದು ಸ್ನೇಹಿತರೊಬ್ಬರು ಅವರನ್ನು ಮನೆಗೆ ಬಿಡುತ್ತೇನೆ ಎಂದಾಗ ಓಕೆ ಎಂದರು. ಆದರೆ ದೇಹಕ್ಕೆ ಆರಾಮಿಲ್ಲದ್ದು, ಅದರ ನಡುವೆ ಮೀಟಿಂಗ್ ಅಟೆಂಡ್ ಮಾಡಿದ್ದು ದೈಹಿಕ ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮ ಬೀರಿತ್ತು. ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಕಷ್ಟವಾಗಿ, ಚಲಿಸುವ ಗಾಡಿಯಿಂದ ಇನ್ನೇನು ಬೀಳುತ್ತಾರೆ ಅನ್ನುವಂತಾಗಿತ್ತು. ಆಕಸ್ಮಿಕವಾಗಿ ಸ್ನೇಹಿತರ ಗಾಡಿಯ ಹಿಂದೆಯೇ ಹೊರಟಿದ್ದ ಕೆ ಫಣಿರಾಜ್, ಆಧಾರ ತಪ್ಪಿದ್ದ ಜಿ ಆರ್ ಅವರನ್ನು ಹಿಡಿದುಕೊಂಡರು. ಆಮೇಲೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿದ್ದರು. ಅವರನ್ನು ನೋಡಲು ಹೋದಾಗ, ಬಹಳ ಸೀರಿಯಸ್ ಆಗಿ, "ಇಲ್ಲ, ನನಗೇನೂ ಆಗಿಲ್ಲ. ಒಂದು ಚೂರು ತಲೆ ಸುತ್ತಿದ ಹಾಗಾಯ್ತು ಅಷ್ಟೇ!" ಅಂದರು. ಆರಾಮು ಮಾಡಿಕೊಂಡು ಮನೆಯಲ್ಲಿ ಇರಬಹುದಿತ್ತಲ್ಲ ಅಂದ್ರೆ, "ಮೀಟಿಂಗ್ ಇತ್ತಲ್ವ. ಹೋದೆ," ಅಂದರು. ಅಲ್ಲೇ ಇದ್ದ ಮತ್ತೊಬ್ಬ ಜೀವಪರ ಜೀವಿ ದಿನಕರ ಬೆಂಗ್ರೆ ತಮ್ಮದೇ ಶೈಲಿಯಲ್ಲಿ, "ಆ ಆಸ್ಪತ್ರೆ ಉಳಿಸಲಿಕ್ಕೆ ಹೋಗಿ ಈ ಆಸ್ಪತ್ರೆಗೆ ಬಂದರು," ಎಂದರು. ಕೇಳಿದ್ದೇ ತಡ ಜಿ ಆರ್ ಜೋರಾಗಿ ನಕ್ಕರು!

2019ರಲ್ಲಿ ಪಾರ್ಕಿನ್ಸನ್ ಇದೆ ಎಂದು ತಿಳಿದುಬಂದ ಸಂದರ್ಭ ಆಸ್ಪತ್ರೆಯಲ್ಲಿದ್ದ ಜಿ ಆರ್, ಅದೇ ಸಮಯದಲ್ಲಿ ಇದ್ದ ಪ್ರತಿಭಟನೆಗಳಿಗೆ ಹೋಗಲಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದರು. ಆಮೇಲೆ ಅವರ ಆರೋಗ್ಯ ನಿಧಾನವಾಗಿ, ಹಂತಹಂತವಾಗಿ ಕ್ಷೀಣಿಸುತ್ತ ಹೋಯಿತು. ಆದರೂ ಅವರು ನಂಬಿದ್ದ ಆದರ್ಶಗಳನ್ನು ಪಾಲಿಸುವ, ಅವರು ಸಮಾಜಮುಖಿ ಕನಸನ್ನು ಹಂಚಿಕೊಂಡ ಯಾವುದೇ ಕಾರ್ಯಕ್ರಮ ಇದ್ದರೆ ಜಿ ಆರ್ ತಮ್ಮ ಹೆಂಡತಿ ಇಲ್ಲವೇ ಮಕ್ಕಳ ಜೊತೆಗೆ ಖಂಡಿತ ಬರುತ್ತಿದ್ದರು. ಪಾರ್ಕಿನ್ಸನ್ ಇದೆ ಎಂದು ತಿಳಿದ ಬಳಿಕ, ಅವರು ಒಮ್ಮೆ ದಲಿತ ಸಂಘರ್ಷ ಸಮಿತಿ ನಡೆಸಿದ್ದ ಮೆರವಣಿಗೆಯಲ್ಲಿ ತಾನೂ ನಡೆದರು! ಮುಂದೆ ಸಿಎಎ-ಎನ್ಆರ್‌ಸಿ ವಿರೋಧಿಸಿ ಪ್ರತಿಭಟನೆಗಳು ಆರಂಭಗೊಂಡಾಗ ಸಮಾಲೋಚನಾ ಸಭೆಗಳಿಗೂ ಹಾಜರಾಗುತ್ತಿದ್ದರು. ಉಡುಪಿಯ ಡಿ.ಸಿ ಆಫೀಸ್ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದಾಗ, ನಮ್ಮೆಲ್ಲರ, "ಬೇಡ ಬೇಡ," ಒತ್ತಾಯಕ್ಕೆ ವಿರುದ್ಧವಾಗಿ ಉಪವಾಸ ಮಾಡಿದ್ದರು! ಅಂದು ಅಲ್ಲಿ ನಾನು ಆಜಾದಿ ಘೋಷಣೆ ಕೂಗುತ್ತಿದ್ದಾಗ ನನ್ನ ಹಿಂದೆ ಕೂತು ದನಿಗೆ ದನಿ ಸೇರಿಸಿದ್ದರು. ಪತ್ರಕರ್ತ ಮಿತ್ರ ನಜೀರ್ ಪೊಲ್ಯ ಆ ಕ್ಷಣದ ಒಂದು ವಿಡಿಯೊ ತೆಗೆದಿದ್ದ. ಅಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ; ಜಿ ಆರ್ ದೈಹಿಕವಾಗಿ ಸ್ವಲ್ಪ ಸುಸ್ತಾಗಿದ್ದಾರೆ, ಆದರೂ ಹುಮ್ಮಸ್ಸಿನಿಂದ ಕೈ ಎತ್ತುತ್ತ ಘೋಷಣೆ ಕೂಗುತ್ತಿದ್ದಾರೆ!

ಮುಂದೆ ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿತು. ಮೈ ನಡುಕ ಹೆಚ್ಚಾಯಿತು. ಆಗೊಮ್ಮೆ ಯಾಸೀನ್ ಕೋಡಿಬೆಂಗ್ರೆ, ಹುಸೈನ್ ಇವರು ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಶಿವಸುಂದರ್ ಮುಖ್ಯ ಮಾತುಗಾರರಾಗಿ ಬಂದಿದ್ದರು. ಆಗಾಗ ಹೋಗಿ ಜಿ ಆರ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿಬರುತ್ತಿದ್ದ ನಾನು, ಅವರು ಹಿಂದಿನಂತೆ ಓಡಾಡಲು ಸಾಧ್ಯ ಆಗದಿರುವುದನ್ನು ಅರಿತು, ಹಿರಿಯ ಸ್ನೇಹಿತರಲ್ಲಿ ಆಗಾಗ, "ನೀವು ಉಡುಪಿಗೆ ಬಂದರೆ ಹೇಳಿ. ಹೋಗಿ ಜಿ ಆರ್ ಅವರನ್ನು ನೋಡಿಕೊಂಡು ಬರಬಹುದು," ಎನ್ನುತ್ತಿದ್ದೆ. ಅಂದು ಬೆಳಗ್ಗೆ ಮಣಿಪಾಲದಲ್ಲಿ ಭೇಟಿ ಆದಾಗ ಶಿವಸುಂದರ್ ಬಳಿ, "ಜಿ ಆರ್ ಅವರನ್ನು ಭೇಟಿ ಮಾಡಿದ್ರ?" ಎಂದು ಕೇಳಿದೆ. ಅದಕ್ಕವರು, "ಇವತ್ತು ಸಂಜೆ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ಹಠ ಹಿಡಿದಿದ್ದಾರಂತೆ. ಅದು ಬೇಡ, ನಾನೇ ಬಂದು ನಿಮ್ಮನ್ನು ಮಾತನಾಡಿಸುತ್ತೇನೆ ಅಂತ ಹೇಳಿದ್ದೇನೆ. ಈಗ ಅಲ್ಲಿಗೆ ಹೋಗುತ್ತಿದ್ದೇನೆ," ಎಂದು ಜಿ ಆರ್ ಮನೆಗೆ ತೆರಳಿದರು. ಅಂದು ಸಂಜೆ ಶಿವಸುಂದರ್ ಮಾತು ಆರಂಭಿಸಿದಾಗ ಜಿ ಆರ್ ತಮ್ಮ ಮಗ ವಿಷ್ಣುವಿನ ಸಹಾಯದೊಂದಿಗೆ ಸಭೆಗೆ ಬಂದೇಬಿಟ್ಟರು! ಆಗಂತೂ ಅವರು ಕೂತರೂ ಮೈ ನಡುಗುತ್ತಿತ್ತು. ಆದರೂ ಶಿವಸುಂದರ್ ಮಾತುಗಳನ್ನು ಕೇಳಿಸಿಕೊಂಡು ನಂತರ ಸಂವಾದ ಆರಂಭಗೊಂಡಾಗ ಆಯೋಜಕರಲ್ಲಿ ಕೇಳಿ ಮೈಕ್ ಪಡೆದು, ಶಿವಸುಂದರ್ ಅವರ ಮಾತಿನಲ್ಲಿ ಬಿಟ್ಟುಹೋಗಿದ್ದ ಕೆಲವು ಅಂಶಗಳನ್ನು ಸೇರಿಸಿ, ಚರ್ಚೆ ಮಾಡಲಾಗುತ್ತಿದ್ದ ವಿಷಯಕ್ಕೆ ಹೊಸ ನೋಟ ನೀಡಿದರು... ನಾನು ನಿಬ್ಬೆರಗಾಗಿದ್ದೆ!

Image

ಅವರ ಬದ್ಧತೆ ಮತ್ತು ಜೀವಪರತೆ ಎಂಥದ್ದು ಎನ್ನಲು ಇನ್ನೂ ಎರಡು ಉದಾಹರಣೆ ಕೊಡುತ್ತೇನೆ.

ನನ್ನ 'ಬಾಳ್ಕಟ್ಟೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಲು ಜಿ ಆರ್ ಅವರನ್ನು ಕೇಳಿಕೊಂಡೆ. "ಒಹ್! ಖಂಡಿತ..." ಎಂದಿದ್ದಲ್ಲದೆ, "ಅದನ್ನು ಕೇಳಲಿಕ್ಕೆ ಇಲ್ಲಿ ತನಕ ಯಾಕೆ ಬಂದ್ರಿ? ಫೋನಿನಲ್ಲಿ ಹೇಳಿದ್ರೆ ಸಾಕಿತ್ತು. ಇಂಥ ಅವಕಾಶಕ್ಕೆ ನಾನು ಕಾದು ಕೂತಿರ್ತೇನೆ," ಎಂದು ನಕ್ಕರು. ಅಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಬಹು ದೀರ್ಘವಾಗಿ ದೇಶದ ಈಗಿನ ಪರಿಸ್ಥಿತಿ ಕುರಿತಾಗಿ ಮಾತನಾಡಿದರು ಮತ್ತು ಅದನ್ನು ನನ್ನ ಪುಸ್ತಕಕ್ಕೆ ಕನೆಕ್ಟ್ ಮಾಡಿದರು. ಅವರ ಭಾಷಣ ನನಗೆ ಅಷ್ಟೊಂದು ಹಿಡಿಸಲಿಲ್ಲ. ಯಾಕೆಂದರೆ, ಅದೇ ಸಮಯದ ಆಸುಪಾಸಿನಲ್ಲಿ ಅವರು ಇನ್ನೊಂದೆರಡು ಕಡೆ ಭಾಷಣ ಮಾಡುತ್ತ ಅವೇ ಮಾತುಗಳನ್ನು ಹೇಳಿದ್ದರು ಮತ್ತು ಅಲ್ಲಿ ಸಭಿಕನಾಗಿ ನಾನು ಆ ಮಾತುಗಳನ್ನು ಕೇಳಿಸಿಕೊಂಡಿದ್ದೆ. ನಾನು ನಿರಾಸೆಗೊಂಡು ಈ ಮಾತನ್ನು ನನ್ನ ಆಪ್ತ ಸ್ನೇಹಿತನೊಬ್ಬನ ಬಳಿ ನಾವಿಬ್ಬರೇ ಇರುವ ಸಂದರ್ಭದಲ್ಲಿ ಹೇಳಿಕೊಂಡೆ. ಅದಕ್ಕವನು, "ಎಷ್ಟು ವಯಸ್ಸು ಅವರಿಗೆ?" ಎಂದು ಕೇಳಿದ. "ಎಪ್ಪತ್ತು ದಾಟಿದೆ," ಎಂದೆ ನಾನು. "ಪ್ರಾಯ ಆದಾಗ ಪೀಪಲ್ ರಿಪೀಟ್ ದೆಮ್‌ಸೆಲ್ವ್ಸ್‌..." ಎಂದ ಗೆಳೆಯ, ತನ್ನಜ್ಜ ಹೇಗೆ ವಯಸ್ಸಾದ ಬಳಿಕ ಒಂದೇ ಕತೆಯನ್ನು ಮತ್ತೆ-ಮತ್ತೆ ಹೇಳುತ್ತಿದ್ದರು - ಅದು ತನ್ನ ಬಾಲ್ಯದ ದಿನದ ಬಡತನದ ಕುರಿತಾಗಿತ್ತು- ಎಂದು ನೆನಪಿಸಿಕೊಂಡ. ಕೊನೆಗೆ, "ಹೀ ಹ್ಯಾಡ್ ಓನ್ಲಿ ಒನ್ ಸ್ಟೋರಿ ಟು ನರೇಟ್," ಎಂದ. ಅಲ್ಲಿ ನನಗೆ ಜಿ ಆರ್ ಮತ್ತಷ್ಟು ಆಪ್ತರಾದರು, ಅವರ ಬಗ್ಗೆ ಗೌರವ ಹೆಚ್ಚಿತ್ತು. ಅವರಿಗೆ ಮರೆವು ಆರಂಭ ಆಗಿರಲಿಲ್ಲವಾದರೂ, ಆಗಿತ್ತು ಎಂದು ಕಲ್ಪಿಸಿಕೊಂಡರೆ- ಕೊನೆಗೆ ಅವರ ಬಳಿ ಮತ್ತೆ-ಮತ್ತೆ ಹೇಳಲು ಇದ್ದ "ಓನ್ಲಿ ಸ್ಟೋರಿ" - ತನ್ನ ಬಾಲ್ಯದ ಕುರಿತಾಗಿಯೂ ಅಲ್ಲ, ತನ್ನ ವೈಯಕ್ತಿಕ ಕಷ್ಟಗಳದ್ದೂ ಅಲ್ಲ! ಈ ಸಮಾಜ ಹೇಗೆ ಅಮಾನವೀಯಗೊಳ್ಳುತ್ತಿದೆ ಎಂಬುದು ಅವರ ಓನ್ಲಿ ಸ್ಟೋರಿ!

ಆ ದಿನ ನನ್ನ ಗೆಳೆಯನಿಗೆ ಇದನ್ನೇ ಹೇಳಿ ನನ್ನ ಮಾತು ಸಮರ್ಥಿಸಿಕೊಳ್ಳಲು ಒಂದು ಘಟನೆ ನೆನಪಿಸಿಕೊಂಡಿದ್ದೆ. ಅದೇನೆಂದರೆ, 2014ರಲ್ಲಿ ಚುನಾವಣಾ ಫಲಿತಾಂಶ ಬಂದ ಮಾರನೇ ದಿನ ಜಿ ಆರ್ ಅವರನ್ನು ಭೇಟಿ ಮಾಡಲು ಹೋದಾಗ, ಬಹಳ ದಣಿದ ದನಿಯಲ್ಲಿ, "ನಿನ್ನೆ ಫಲಿತಾಂಶ ಫ್ಯಾಕ್ಟ್ ಮಾತ್ರ ಆಗಿತ್ತು. ಇವತ್ತು ಸ್ಲೋಲಿ ಫೀಲಿಂಗ್ ಆಗ್ತಾ ಇದೆ..." ಅವರು ಹೀಗೆ ಹೇಳಿದಾಗ, ಅವರ ಹೆಂಡತಿ, "ಇವತ್ತೂ ಅಂತೇ!" ಉದ್ಗರಿಸಿ, ನಮ್ಮ ಕಡೆ ನೋಡುತ್ತ, "ಇವರು ನಿನ್ನೆ ಕೂಗಿದ್ದಲ್ವಾ?" ಎಂದರು. ತಕ್ಷಣ ಜಿ ಆರ್, "ನಾನೆಲ್ಲಿ ಕೂಗಿದ್ದು? ಸುಮ್ಮನೆ ಏನೆಲ್ಲ ಹೇಳಬೇಡ," ಎಂದರು. ಅವರು ಎಂಬರಾಸ್ ಆದ ರೀತಿಯಲ್ಲೇ ತಿಳಿಯುತ್ತಿತ್ತು, ಅವರ ಹೆಂಡತಿ ಹೇಳಿದ್ದು ನಿಜವೆಂದು! ಅದಾಗಿ ಸ್ವಲ್ಪ ದಿನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಕಣ್ಣೀರಿಟ್ಟಿದ್ದು ಸುದ್ದಿಯಾದಾಗ, ಸುದ್ದಿಯಾಗದ ಕಣ್ಣೀರಿನ ಸದ್ದು ಕೇಳಿಸಿತ್ತು, ಅದರ ಹಿಂದಿನ ಕಾಳಜಿ ಮತ್ತು ಆತಂಕ ಬೆರಗು ಹುಟ್ಟಿಸಿತು!

ಕರೊನಾ ಮೊದಲನೇ ಅಲೆ ತಾಂಡವ ಆಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ನನ್ನ ಅಮ್ಮ ಡೆಂಘಿ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೊಂದು ದಿನ ಬೆಳಗ್ಗೆ ಮನೆಯಲ್ಲಿ ಅಪ್ಪನನ್ನು ಕಂಡು ಮತ್ತೆ ಅಮ್ಮನ ಬಳಿ ಹೋಗಬೇಕಿದ್ದರೆ, ಆಸ್ಪತ್ರೆಯ ಪಾರ್ಕಿಂಗ್‌ನಲ್ಲಿ ಜಿ ಆರ್ ಅವರ ಮಗ ರಘು ಕಂಡ. ಏನಾಯಿತು ಎಂದು ಕೇಳಿದರೆ ನಮ್ಮ ಜಿ ಆರ್ ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಆಸ್ಪತ್ರೆಯಲ್ಲಿ ಅವರು ಅಡ್ಮಿಟ್ ಆಗಿದ್ದ ರೂಮ್ - ನನ್ನ ಅಮ್ಮನ ಅಡ್ಮಿಟ್ ಆಗಿದ್ದ ವಾರ್ಡಿನ ಸಮೀಪದಲ್ಲೇ ಇತ್ತು. ಪ್ರತಿದಿನ ಬೆಳಗ್ಗೆ ಒಮ್ಮೆ ಜಿ. ಆರ್ ಅವರನ್ನು ಕಾಣಲು ಹೋಗುತ್ತಿದ್ದೆ. ಒಂದು ದಿನ ಬೆಳಗ್ಗೆ ಹೋದಾಗ ಜಿ ಆರ್ ಆಗಷ್ಟೇ ನಿದ್ದೆಯಿಂದ ಎದ್ದಿದ್ದರು. ಪಕ್ಕದಲ್ಲೇ ಇದ್ದ ರಘು ಆಗಷ್ಟೇ ನಿದ್ದೆಯಿಂದ ಏಳುತ್ತಿದ್ದ. ನಾನು ಜಿ ಆರ್ ಸೌಖ್ಯ ವಿಚಾರಿಸುತ್ತ ಇರುವಾಗ, ರಘು ತಂದೆಯನ್ನು, "ನಿನ್ನೆ ರಾತ್ರಿ ಎಂತ ಮಾಡಿದಿ, ಗೊತ್ತುಂಟಾ?" ಎಂದು ಕೀಟಲೆ ದನಿಯಲ್ಲಿ ಕೇಳಿದ. ಜಿ ಆರ್, "ಏನು? ಎಂತ ಮಾಡಿದೆ?" ಎಂದು ಮಲಗಿಕೊಂಡೇ ಕೇಳಿದರು. ರಘು ತನ್ನ ಕಿಸೆಯಿಂದ ಫೋನ್ ತೆಗೆದ. ಒಂದು ವಿಡಿಯೋ ಪ್ಲೇ ಮಾಡಿದ. ಆ ದಿನಗಳಲ್ಲಿ ಜಿ ಆರ್ ತಮ್ಮ ಹಿರಿಯ ಮಗ ವಿಷ್ಣು ಜೊತೆಗೂಡಿಕೊಂಡು ತಮ್ಮ 'ಕಾಗೋಡು ಸತ್ಯಾಗ್ರಹ' ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡುತ್ತಿದ್ದರು. ವಿಷ್ಣು ಒಂದೆರಡು ಸಾಲು ಓದಿ ಹೇಳುವುದು, ಅದನ್ನು ಜಿ ಆರ್. ಅನುವಾದ ಮಾಡಿ ಹೇಳುವುದು; ಅನುವಾದ ಇನ್ಹೇಗೆ ಮಾಡಬಹುದು ಎಂದು ವಿಷ್ಣು ಮತ್ತು ಅವರು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದು. ಹೀಗೆ ಸಾಗಿತ್ತು ಅವರ ಅನುವಾದ ಕಾರ್ಯ. ರಘು ಪ್ಲೇ ಮಾಡಿದ ವಿಡಿಯೋದಲ್ಲಿ ಜಿ ಆರ್ ನಿದ್ದೆಯಲ್ಲಿದ್ದು, ನಿದ್ದೆಯಲ್ಲಿ ಅನುವಾದ ಡಿಕ್ಟೇಟ್ ಮಾಡುತ್ತಿದ್ದರು! ರಘು ನಗುತ್ತಿದ್ದ. ಜಿ ಆರ್ ತುಂಬಾ ಮುಗ್ಧವಾಗಿ, "ನಾನು ನಿದ್ದೆಯಲ್ಲಿ ಮಾತಾಡ್ತಾ ಇದ್ದೇನೆ," ಎಂದರು. ರಘು, "ಅಲ್ಲ, ಅಣ್ಣನಿಗೆ ಅನುವಾದ ಡಿಕ್ಟೇಟ್ ಮಾಡ್ತಿದ್ದಿ," ಎಂದ. ಜಿ ಆರ್ ಮತ್ತೆ ಮುಗ್ಧವಾಗಿ "ಹೌದಾ?" ಎಂದು ಕೇಳಿ ಮುಗುಳ್ನಕ್ಕರು. ನನಗೆ ಮೈಯೆಲ್ಲ ವಿದ್ಯುತ್ ಸಂಚಾರ ಆದಂತಾಗಿತ್ತು. ಕ್ರಾಂತಿಗಾಗಿ, ತನ್ನ ನಂಬಿಕೆಗಾಗಿ, ತನ್ನ ಕನಸಿಗಾಗಿ ನಿದ್ದೆಗೆಟ್ಟು ದುಡಿದವರನ್ನು ಕಂಡಿದ್ದೆ, ಅಂಥವರ ಬಗ್ಗೆ ಕೇಳಿದ್ದೆ. ಆದರೆ, ತಾನು ನಂಬಿದ ವಿಷನ್‌ಗಾಗಿ ನಿದ್ದೆಯಲ್ಲೂ ದುಡಿದ ವ್ಯಕ್ತಿಯನ್ನು ಹಿಂದೆಂದೂ ಕಂಡಿರಲಿಲ್ಲ. ಅಂಥದ್ದನ್ನು ಕೇಳಿಯೂ ಇರಲಿಲ್ಲ. ಆದರೆ, ಕಂಡು-ಕೇಳರಿಯದ ಅಂತಹ ವ್ಯಕ್ತಿ ನನ್ನ ಕಣ್ಣೆದುರೇ ಇದ್ದರು.

ಥಟ್ ಈಸ್ ಜಿ ಆರ್... ಅದು ಅವರ ಬದ್ಧತೆ, ಅದು ಅವರ ಜೀವಪರತೆ. ಅದಕ್ಕಾಗಿಯೇ ಒಮ್ಮೆ ಅವರ ಜನ್ಮದಿನದಂದು ನಾನು ಬರೆದ ಒಂದು ಟಿಪ್ಪಣಿಗೆ ಅಷ್ಟೊಂದು ಜನ ಪಾಸಿಟಿವ್ ಆಗಿ ಸ್ಪಂದಿಸಿದ್ದು. ಆ ಟಿಪ್ಪಣಿಯಲ್ಲಿ ಬರೆದದ್ದು ಹೀಗಿದೆ:

"ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಉಡುಪಿಗೆ ಸರ್ಕಸ್ ಬಂದಿತ್ತು. ಹೋಗಬೇಕು-ಹೋಗಬೇಕು ಎಂದುಕೊಳ್ಳುತ್ತ ಇದ್ದೆ. ಆದರೆ ಹೋಗಲು ಆಗಿರಲಿಲ್ಲ. ಅದೇ ಸಮಯದಲ್ಲಿ ಒಂದು ದಿನ ಸ್ನೇಹಿತೆ ಸಹಮತ ಬೊಳುವಾರ್ ಫೋನ್ ಮಾಡಿ, ಉಡುಪಿಗೆ ಬರಲಿಕ್ಕಿದೆ ಎಂದು ಹೇಳಿದಾಗ, "ಬಾ, ಹೋಗಿ ಸರ್ಕಸ್ ನೋಡಬಹುದು," ಎಂದಿದ್ದೆ. ಆದರೆ ಸಹಮತ ಕೈ ಕೊಟ್ಟಳು.

ಇದಾಗಿ ಸ್ವಲ್ಪ ಸಮಯದಲ್ಲಿ ಒಂದು ದಿನ ಜಿ ರಾಜಶೇಖರ್ ಫೋನ್ ಮಾಡಿ, "ತೀಸ್ತಾ ಅವರ ಆತ್ಮಕತೆ ನಿಮ್ಮ ಬಳಿ ಇದೆಯಲ್ಲ. ನಾನು ಬೊರೋ ಮಾಡಬಹುದಾ?" ಎಂದು ಕೇಳಿದರು. ನಾನು, "ಸರಿ ಸರ್. ಆದರೆ ಒಂದು ಕಂಡೀಶನ್. ನೀವು ಸರ್ಕಸ್ ಹೋಗುವಾಗ ನನ್ನನ್ನೂ ಕರ್ಕೊಂಡು ಹೋಗ್ಬೇಕು," ಎಂದೆ. ಉಡುಪಿಯಲ್ಲಿ ಈ ತನಕ ಬಂದ ಎಲ್ಲ ಸರ್ಕಸ್ ನೋಡಿದ ರೆಕಾರ್ಡ್ ತನ್ನದು ಎಂದು ರಾಜಶೇಖರ್ ಹಿಂದೊಮ್ಮೆ ಹೇಳಿದ್ದು ನೆನಪಿತ್ತು ನನಗೆ. "ಒಹ್ ಸರಿ. ಆದರೆ, ನಾನು ಸ್ಟಾಲ್ ಟಿಕೆಟ್ ಗಿರಾಕಿ. ನಿಮಗೆ ಸರಿ ಹೋಗ್ತದೋ ಗೊತ್ತಿಲ್ಲ," ಎಂದರು. "ನಾನು ರೆಡಿ ಸರ್," ಎಂದೆ.

ಈ ಲೇಖನ ಓದಿದ್ದೀರಾ?: ಜಿ ರಾಜಶೇಖರ ಬರಹ | ಗಂಗಾಧರ ಚಿತ್ತಾಲರ ಕೊನೆಯ ಪದ್ಯಗಳು

ಸರ್ಕಸ್ ನೋಡಿ ಬಂದ ದಿನ ಸಹಮತಾಳಿಗೆ ಫೋನ್ ಮಾಡಿ, "ನೀನು ಕೈ ಕೊಟ್ಟಿ. ಆದರೂ ನಾನು ಹೋಗಿ ಸರ್ಕಸ್ ನೋಡಿ ಬಂದೆ ಇವತ್ತು," ಎಂದಾಗ ಆಕೆ, ಸರ್ಕಸ್ ನೋಡಲಿಕ್ಕೆ ಯಾರ ಜೊತೆ ಹೋಗಿದ್ದೆ ಎಂದು ಕೇಳಿದಳು. ನಾನು ರಾಜಶೇಖರ್ ಜೊತೆ ಎಂದ ಕೂಡಲೇ ಆಕೆ ಜೋರಾಗಿ ನಕ್ಕು, "ಎಲ್ಲರೂ ಸಿಂಹ ನೋಡಲಿಕ್ಕೆ ಸರ್ಕಸ್ ಹೋದರೆ, ನೀವು ಸಿಂಹವನ್ನು ಕರ್ಕೊಂಡು ಸರ್ಕಸ್ ಹೋದದ್ದಾ?" ಎಂದು ಕೇಳಿದಳು. ನನಗೂ ಜೋರು ನಗು ಬಂತು.

ಇದಾಗಿ ಒಂದಿಷ್ಟು ಸಮಯ ಕಳೆದು, ಉಡುಪಿಯ ಕ್ಲಾಕ್ ಟವರ್ ಬಳಿ ಒಂದು ಪ್ರತಿಭಟನೆಗೆ ಸೇರಿದಾಗ ಅಲ್ಲಿ ಇದ್ದ ಧ್ವಜಸ್ಥ೦ಭದ ಬಳಿ ಜಿ ರಾಜಶೇಖರ್ ಕೂತಿದ್ದರು. ನಾನು ಅವರು ಬೆನ್ನು ಮಾಡಿದ ಕಡೆ ನಿಂತು - ಬಹುಶಃ ಇದ್ರೀಸ್ ಅವರ ಜೊತೆಗಿರಬೇಕು - ಮಾತನಾಡುತ್ತಿದ್ದೆ. ಆಚೆ ನೋಡಿದರೆ, ಲಾಂಛನದ ಮೂರು ಸಿಂಹ ಕಾಣಿಸುತಿತ್ತು ಮತ್ತು ಅದರ ಹಿಂದೆ ರಾಜಶೇಖರ್ ಕೂತಿರುವುದು ಕಾಣಿಸುತಿತ್ತು. ಒಂದು ಕ್ಷಣ ರಾಜಶೇಖರ್ ಹಿಂದೆ ತಿರುಗಿದರು. ನಾನು ನಿಂತಲ್ಲಿಂದ ನೋಡಿದರೆ, ರಾಷ್ಟ್ರೀಯ ಲಾಂಛನದ ನಾಲ್ಕನೇ ಸಿಂಹ ಹಿಂತಿರುಗಿ ನೋಡಿದಂತೆ ಕಾಣಿಸುತಿತ್ತು.

ಆ ಹೊತ್ತಿಗೆ ಸಹಮತ ಹೇಳಿದ ಮಾತು ನೆನಪಾಗಿ ಅನ್ನಿಸಿತು, ಬಹುಶಃ ಆ ಕಾಣದ ನಾಲ್ಕನೇ ಸಿಂಹ ರಾಜಶೇಖರ್ ಥರಾನೇ ಇದ್ದಿರಬಹುದು ಎಂದು. ಇಲ್ಲದಿದ್ದರೂ ಸಂವಿಧಾನವನ್ನು ಮತ್ತು ಪ್ರಜಾಪಭುತ್ವವನ್ನು ಕಾಪಾಡಲು ಜೀವನ ಮುಡಿಪಾಗಿಟ್ಟ ಜಿ ರಾಜಶೇಖರ್ ಅವರನ್ನು ಆ ನಾಲ್ಕನೇ ಸಿಂಹ ಎಂದು ನಾವು ಕಲ್ಪಿಸಿಕೊಂಡರೆ ತಪ್ಪೇನೂ ಇಲ್ಲ.

ಇಂದು ಏಪ್ರಿಲ್ 3, ಜಿ ರಾಜಶೇಖರ್ ಅವರ ಜನ್ಮದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!"

* * *
ಪಾರ್ಕಿನ್ಸನ್ ಪ್ರಭಾವದಿಂದ ಆರೋಗ್ಯ ಕ್ಷೀಣಿಸುತ್ತಿದ್ದದ್ದಲ್ಲದೆ, ಆಮೇಲೆ ಒಮ್ಮೆ ಅವರಿಗೆ ಕೊರೊನಾ ಸಹ ತಗುಲಿ ವೀಕ್ ಆದರು. ಹಾಗಾಗಿ, ನಾನು ಅನುವಾದಿಸಿದ ನಾಗರಾಜ್ ಮಂಜುಳೆ ಅವರ ಕವನ ಸಂಕಲನ ಬಿಡುಗಡೆ ಸಮಾರಂಭ ಏರ್ಪಡಿಸಿದಾಗ, ಜಿ ಆರ್ ಅವರನ್ನು ಖುದ್ದು ಹೋಗಿ ಆಹ್ವಾನಿಸಬೇಕು ಅಂತ ಆಸೆ ಇದ್ದರೂ ಹೋಗದೆ ಕುಳಿತೆ. ಹೋಗಿ ಆಹ್ವಾನಿಸಿದರೆ ಅವರು, "ಹೋಗಲೇಬೇಕು," ಅಂತ ಹಠ ಹಿಡಿದರೆ, ಅವರ ಮನೆಯವರಿಗೆ ಕಷ್ಟ ಆಗಬಹುದೇನೋ ಅನ್ನಿಸಿತು. ಆಹ್ವಾನಿಸದೆ ಹೋದರೆ ನನ್ನನ್ನೇ ನಾನು ಕ್ಷಮಿಸಿಕೊಳ್ಳಲಾರೆ. ಯಾಕೆಂದರೆ ಜಿ ಆರ್ ಈಸ್ ಜಿ ಆರ್. ಏನು ಮಾಡಲಿ ಎಂದು ತೋಚದೆ ಕೊನೆಗೆ ಅವರ ಹೆಂಡತಿಯ ವಾಟ್ಸಾಪಿಗೆ ಆಹ್ವಾನ ಪತ್ರಿಕೆ ಕಳುಹಿಸಿ ಸುಮ್ಮನಾದೆ. ಅಂದು ತಲ್ಲೂರು ನುಡಿಮಾಲೆ ಉಪನ್ಯಾಸ ಮಾಡಲು ಬಂದಿದ್ದ ನನ್ನ ಮುರ್ಶೀದ್ ರಹಮತ್ ತರೀಕೆರೆ 'ಬಹುತ್ವದ ಬಹುಮುಖಗಳು' ಭಾಷಣವನ್ನು ಜಿ ಆರ್ ಅವರಿಗೆ ಅರ್ಪಿಸಿ ಮಾತು ಆರಂಭಿಸಿದ್ದರು. ಮಾತು ಶುರುವಾಗಿ ಸ್ವಲ್ಪ ಹೊತ್ತಿನಲ್ಲೇ ಜಿ ಆರ್ ತನ್ನ ಮಗ ರಘುನಂದನ್ ಜೊತೆ ಸಭಾಂಗಣಕ್ಕೆ ಬಂದರು! ಸ್ಟೇಜ್ ಮೇಲೆ ಕೂತಿದ್ದ ನನಗೆ ಸಂಭ್ರಮ! ಮುರ್ಶೀದ್ ರಹಮತ್ ಭಾಷಣ ಮಾಡುತ್ತಿದ್ದಾರೆ, ನೆಚ್ಚಿನ ಕವಿ-ನಿರ್ದೇಶಕ ನಾಗರಾಜ್ ಮಂಜುಳೆ ಸ್ಟೇಜ್ ಮೇಲೆ ಜೊತೆಗಿದ್ದಾನೆ. ಕಣ್ಣೆದುರಿಗೆ ಅಪ್ಪ-ಅಮ್ಮ ಕೂತಿದ್ದಾರೆ. ಅವರ ಆಚೀಚೆ ಹತ್ತಿರ-ದೂರದಿಂದ ಬಂದ ಸ್ನೇಹಿತರು, ಶಿಷ್ಯರು ಇದ್ದಾರೆ. ಆದರೆ, ಎಲ್ಲಕ್ಕಿಂತ ಹೆಚ್ಚಿನ ಸಂಭ್ರಮದ ವಿಷಯ ಅನಿರೀಕ್ಷಿತವಾಗಿ ಬಂದ ಜಿ ಆರ್. ಯಾಕೆಂದರೆ, ಜಿ ಆರ್ ಈಸ್ ಜಿ ಆರ್!

ಅಂದು ರಹಮತ್ ಅವರ ಭಾಷಣದ ನಂತರ ಚಹಾ ವಿರಾಮದಲ್ಲಿ ನಾಗರಾಜ್ ಮಂಜುಳೆಯನ್ನು ಅಭಿಮಾನಿಗಳೆಲ್ಲ ಸುತ್ತುವರಿದಿದ್ದರು. ಕೆ ಫಣಿರಾಜ್ ಹತ್ತಿರ ಬಂದು, "ಸ್ಯಾಮಿ," ಎಂದು ಕರೆಯುತ್ತ, "ರಾಜಶೇಖರ್ ಬಂದಿದ್ದಾರೆ," ಎಂದರು. ನಾನು, "ನೋಡಿದೆ ಸರ್," ಅನ್ನುತ್ತ, ನಾಗರಾಜ್ ಕಡೆ ಬೆಟ್ಟು ಮಾಡಿ, "ಬಿಡಿಸಿ ಕರೆದುಕೊಂಡು ಹೋಗ್ತೇನೆ," ಎಂದೆ. ನಾಗರಾಜ್ ಬಳಿ ಹೋಗಿ, "ನಮ್ಮ ನಡುವಿನ ಅತ್ಯಂತ ಹಿರಿಯ ವಿಮರ್ಶಕರು ಬಂದಿದ್ದಾರೆ. ಅವರಿಗೆ ಇಲ್ಲಿ ತನಕ ನಡೆದುಕೊಂಡು ಬರಲಾಗದು. ಅವರಿಗೆ ಪಾರ್ಕಿನ್ಸನ್ ಇದೆ," ಎಂದಾಗ, ನಾಗರಾಜ್, "ಹೌದು, ಹಿರಿಯರಲ್ವಾ? ಅವರು ಒಳಗೆ ಬರುತ್ತಿರಬೇಕಾದರೆ ನೋಡಿದೆ," ಎನ್ನುತ್ತ ನನ್ನ ಜೊತೆ ಹೆಜ್ಜೆ ಹಾಕಲು ಆರಂಭಿಸಿದ. ನಾನು ಅವನ ಬಳಿ, "ನಾನು ಕಾಶ್ಮೀರದ ಸ್ವಾತಂತ್ರ ಹೋರಾಟಗಾರರಿಂದ ಹಿಡಿದು, ಕೂಡಂಕುಳಂನಲ್ಲಿ ಬಂಧಿತರಾದ ಪರಿಸರ ಹೋರಾಟಗಾರರ ತನಕ, ಗುಜರಾತಿನ ಮಾನವ ಹಕ್ಕುಗಳ ಹೋರಾಟಗಾರರಿಂದ ಬೆಂಗಳಾದ ವರ್ಗ ಹೋರಾಟದ ಕ್ರಾಂತಿಕಾರಿಗಳ ತನಕ ಹಲವಾರು ಮಂದಿಯನ್ನು ಸಮೀಪದಿಂದ ನೋಡಿದ್ದೇನೆ. ನನ್ನ ಬದುಕಿನಲ್ಲಿ ನಾನು ತುಂಬಾ ಕಾನ್ಫಿಡೆಂಟ್ ಆಗಿ ಹೇಳಬಲ್ಲ ಒಂದು ಮಾತೆಂದರೆ, ನನ್ನ ಮಟ್ಟಿಗೆ ಇವರಂತಹ ಮನುಷ್ಯ ಇನ್ನೊಬ್ಬರಿಲ್ಲ," ಎಂದು ಹೇಳುತ್ತ ಹೋದೆ. ಅಷ್ಟು ಹೊತ್ತಿಗೆ ನಾಗರಾಜ್ ಮತ್ತು ನಾನು ಜಿ ಆರ್ ಅವರನ್ನು ಸಮೀಪಿಸಿದೆವು. ನಡುಗುವ ಕೈಗಳನ್ನು ಜೋಡಿಸಿ ಜಿ ಆರ್ ನಮಸ್ಕರಿಸಿದರು. ನಾಗರಾಜ್ ಕೈಜೋಡಿಸಿ ನಮಸ್ಕರಿಸಿದ. ಒಂದಿಷ್ಟು ಮಾತುಕತೆ ನಡೆಯಿತು. ಆಗ ಅಲ್ಲಿಗೆ ಬಂದ ರಹಮತ್ ಸರ್, ನಾಗರಾಜ್ ಬಳಿ, "ಸಂವರ್ತನ ಕುರಿತು ನನಗೊಂದು ಕಂಪ್ಲೇಂಟ್ ಇದೆ. ಅವನು ನನ್ನನ್ನು ತನ್ನ ಗುರು ಎಂದು ಹೇಳುತ್ತಾನೆ. ಆದರೆ ಜಿ ಆರ್ ಅವನಿಗೆ ಮಹಾಗುರು ಅಂತ ಹೇಳುತ್ತಾನೆ," ಎಂದು ಕೀಟಲೆ ಮಾಡಿದರು. ನಾನು ಅದಕ್ಕೆ ಸ್ಪಂದಿಸುತ್ತ, "ಇಲ್ಲ," ಎನ್ನುತ್ತ, "ಅನೇಕ ಗುರುಗಳಿದ್ದಾರೆ ನನಗೆ, ಆದರೆ ಇವರು ನನ್ನ ಏಕೈಕ ಹೀರೋ!" ಎಂದೆ. ಜಿ ಆರ್ ತುಂಬಾ ಮುಗ್ಧವಾಗಿ, "ಹೌದು ಹೌದು" ಎಂದು ತಲೆ ಅಲುಗಾಡಿಸಿದರು.

ಚಹಾ ವಿರಾಮ ಮುಗಿಯುತ್ತಿತ್ತು. ಮತ್ತೆ ಸ್ಟೇಜ್ ಕಡೆ ನಾಗರಾಜ್ ಮತ್ತು ನಾನು ನಡೆಯಲು ಆರಂಭಿಸಿದಾಗ ನಾಗರಾಜ್, "ಇವರು ಸಾಹಿತಿ ಸಹ ಅಂತ ಹೇಳಿದಿ ಅಲ್ವಾ?" ಎಂದು ಕೇಳಿದ. "ಹೌದು. ಹೋರಾಟಗಾರರೂ ಹೌದು, ಬರಹಗಾರರೂ ಹೌದು," ಎಂದ ನಾನು, "ಇವರ ಹೋರಾಟಕ್ಕೆ ಕಾವ್ಯದ ಸೂಕ್ಷ್ಮತೆ ಇದೆ. ಇವರ ಸಾಹಿತ್ಯಕ ಬರವಣಿಗೆಗೆ ರಾಜಕೀಯ ಪ್ರಜ್ಞೆ ಇದೆ. ಹಾಗಾಗಿಯೇ ಅತ್ಯಂತ ಮುಖ್ಯ ವ್ಯಕ್ತಿ ಇವರು," ಎಂದೆ.

* * *

Image

ಕರಾವಳಿಯಲ್ಲಿ ಕೋಮುವಾದ ಹೆಚ್ಚುತಿದ್ದ ದಿನಗಳಲ್ಲೇ ಅವುಗಳ ಕುರಿತು ಬರೆಯಲು ಆರಂಭಿಸಿದ ಜಿ ಆರ್, ಹಿಂದೂ ಕೋಮುವಾದಕ್ಕೆ ಪ್ರತಿಯಾಗಿ ಮುಸ್ಲಿಮರಲ್ಲಿ ಹೆಚ್ಚುತ್ತಿರುವ ಮೂಲಭೂತವಾದವನ್ನು ಸಹ ಗಮನಿಸುತ್ತಿದ್ದರು. ಆದರೆ, ಅವರು ಎಂದೂ ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದ ಇವುಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿದ್ದಿಲ್ಲ. ಅಲ್ಪಸಂಖ್ಯಾತರಲ್ಲಿ ಮೂಲಭೂತವಾದ ಹೆಚ್ಚಬಹುದೇ ಹೊರತು ಅವರಿಂದ ಕೋಮುವಾದ ಹುಟ್ಟಲು ಸಾಧ್ಯ ಇಲ್ಲ ಎಂದೇ ಹೇಳುತ್ತಿದ್ದರು. ಆ ಸ್ಪಷ್ಟತೆ ಅವರಿಗಿತ್ತು. ಒಮ್ಮೆ ಒಂದು ಸಣ್ಣ ಸಭೆಯಲ್ಲಿ ಮಾತನಾಡುತ್ತ, ಅನಂತಮೂರ್ತಿ ಗಾಂಧಿಯ ಗ್ರಾಮ ಸ್ವರಾಜ್ ಮಾದರಿಯನ್ನೇ ರೊಮ್ಯಾಂಟಿಸೈಸ್ ಮಾಡುತ್ತ, 'ಊರ ಹಿರಿಯರು' ಮತ್ತು ಅವರ 'ಮಾರ್ಗದರ್ಶನ' ಮತ್ತು ಅಲ್ಲಿರುವ 'ವಿವೇಕ' ಮುಖ್ಯ ಎಂದೆಲ್ಲ ಮಾತನಾಡಿದರು. ಈ ಮಾತನ್ನು ಜಿ ಆರ್ ವಿರೋಧಿಸಿದರು. ಜಾತೀಯತೆ ಬೇರು ಬಿಟ್ಟಿರುವ ಸಮಾಜದಲ್ಲಿ 'ಊರ ಹಿರಿಯ' ವಿವೇಕಯುತರಾಗಿರುವುದು ಸಹಜ ಅಲ್ಲ, ಅಪರೂಪವೂ ಅಲ್ಲ, ಅಸಂಭವವೇ ಎಂದು ಹೇಳಿದರು. "ನಮ್ಮ ಊರಿನ ಹಿರಿಯರು ಅಂತ ನಾವು ಯಾರನ್ನು ಒಪ್ಪಿಕೊಳ್ಳಬೇಕು? ಪೇಜಾವರ ಶ್ರೀಗಳನ್ನೋ? ಅವರು ಮುನ್ನಡೆಸಿದರೆ ಸಮಾಜಕ್ಕೆ ಉಳಿಗಾಲ ಉಂಟಾ?" ಎಂದೆಲ್ಲ ಕೇಳಿದರು. ಅನಂತಮೂರ್ತಿಯವರು ಮುಂದುವರಿದು, 'ಹಿತ್ತಲ ಭಾಷೆ, ಪಡಸಾಲೆ ಭಾಷೆ' ಎಂಬ ರೂಪಕಗಳನ್ನು ಬಳಸಿ ಮಾತನಾಡುತ್ತಿದ್ದಾಗ, ಜಿ ಆರ್, "ಈ ಸಮಾಜದಲ್ಲಿ ಎಷ್ಟು ಜನರಿಗೆ ಮನೆಗಳಿವೆ, ಎಷ್ಟು ಮನೆಗಳಲ್ಲಿ ಪಡಸಾಲೆ ಉಂಟು ಎಂಬ ಪ್ರಶ್ನೆ ಕೇಳಿಕೊಳ್ಳದೆ, ಈ ರೂಪಕಗಳನ್ನು ಬಳಸಲಿಕ್ಕೆ ಆಗದು," ಎಂದೇ ಹೇಳಿಬಿಟ್ಟರು. ಇನ್ನೊಮ್ಮೆ, ಹಿಂಸೆಯ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಸನ್ನ ಅವರು ಹಾವು-ಕಪ್ಪೆ ಉದಾಹರಣೆ ಕೊಡುತ್ತ, "ಹಿಂಸೆ ಪ್ರಕೃತಿಯ ಭಾಗ," ಎಂದು ಹೇಳಿದಾಗ, ಜಿ ಆರ್ "ವ್ಯವಸ್ಥೆಯ ಹಿಂಸೆ, ಸಂಸ್ಥೆಗಳನ್ನು ಬಳಸಿಕೊಂಡು ಅಧಿಕಾರ ನಡೆಸುವ ಹಿಂಸೆ, ರಾಜಕೀಯ ಹಿತಾಸಕ್ತಿಗಾಗಿ ಆರ್ಕೇಸ್ಟ್ರೇಟ್ ಮಾಡಲಾಗುವ ಹಿಂಸೆ - ಇವುಗಳೆಲ್ಲ ಇರುವಾಗ, ಹಿಂಸೆ ಪ್ರಕೃತಿಯಲ್ಲೇ ಇದೆ ಎನ್ನುವುದು ಬೇಜವಾಬ್ದಾರಿತನ," ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಜೀವಪ್ರೇಮಿ ವಿಜ್ಞಾನಿಗಳು, ಅದರಲ್ಲೂ ಐನ್‌ಸ್ಟೈನ್ ಅವರನ್ನು ನೆನಪಿಸಿಕೊಂಡು, ನಾವು ವಿಜ್ಞಾನವನ್ನು ಸಹ ಪ್ರಶ್ನಿಸಬೇಕಾಗುತ್ತದೆ ಎಂದು ಬರೆದರು.

ಇಷ್ಟೆಲ್ಲ ಜೀವಪರತೆ ಇರುವ ವ್ಯಕ್ತಿ ಉಡುಪಿಯಲ್ಲಿ ನೆಡೆಯಲಿದ್ದ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಸೌಹಾರ್ದ ಸಾಹಿತ್ಯ ಸಮ್ಮೇಳನ ಏರ್ಪಡಿಸಿದಾಗ ಅಲ್ಲಿ ಮಾತನಾಡುತ್ತ, "ಜನರನ್ನು ಒಲಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಅದು ಸಾಹಿತ್ಯದ ಗುರಿಯೂ ಅಲ್ಲ. ಅದು ಜಾಹೀರಾತು ಮಾಡುವ ಕೆಲಸ. ಜನರನ್ನು ಒಲಿಸಿಕೊಳ್ಳಲು ಹವಣಿಸಿದಾಗ ಸಾಹಿತ್ಯ ಸಾಯುತ್ತದೆ. ಸಾಹಿತ್ಯ ಮಾಡಬೇಕಾದದ್ದು ಸಂವೇದನೆ ರೂಪಿಸುವುದು," ಎಂದು ಮಾತನಾಡಿದ್ದು ನೆನಪು. ಸೈದ್ಧಾಂತಿಕ ಸ್ಪಷ್ಟತೆ, ವೈಚಾರಿಕ ಬದ್ಧತೆ ಇರುವ ವ್ಯಕ್ತಿ ಘೋಷಣೆಗಳನ್ನೇ ಕಾವ್ಯ ಎಂದು ನಂಬಲಿಲ್ಲ, ಅಜಿಟ್ ಪ್ರೊಫ್ ಅನ್ನೇ ಕಲೆ ಎಂದು ಹೇಳಲಿಲ್ಲ. ಮಂಗಳೂರಿನಲ್ಲಿ ನಡೆದ ಒಂದು ಸಾಹಿತ್ಯಕ ಕಾರ್ಯಕ್ರಮದಲ್ಲಿ ನಡುನಡುವೆ ಕೆಲವೊಮ್ಮೆ ಒಂದೆರಡು ಕ್ರಾಂತಿಗೀತೆಗಳನ್ನು ಹಾಡಲಾಗುತ್ತಿತ್ತು. ಅದು ಶುರುವಾಯಿತೇನೋ ಎಂಬಷ್ಟು ಹೊತ್ತಿಗೆ ನಾವು ಕೆಲವು ಗೆಳೆಯರು ಸಭಾಂಗಣದಿಂದ ಹೊರಹೋಗುತ್ತಿದ್ದೆವು. ಒಮ್ಮೆ ನಾವು ಹಾಗೆ ಜಾರಿಕೊಳ್ಳುವಾಗ ಜಿ ಆರ್ ಸಹ ಹೊರ ನಡೆಯುವುದು ಕಂಡಿತು. ಅವರೂ ನನ್ನ ಕಡೆ ನೋಡಿದರು. "ಇಂಥ ಕಾರ್ಯಕ್ರಮದಲ್ಲಿ ಅತ್ಯಂತ ಅನ್-ಬೇರೆಬಲ್ ಅಂದ್ರೆ ಈ ಹಾಡುಗಳು," ಎಂದು ನಕ್ಕರು. ಅವರು ಕಣ್ಣು ಮುಚ್ಚಿಕೊಂಡು, ಹುಬ್ಬು ಏರಿಸಿಕೊಂಡು, ತಲೆ ಅಲ್ಲಾಡಿಸುತ್ತ ಹೇಳಿದ ಪರಿಯೂ ತುಂಬಾ ಅನಿಮೇಟೆಡ್ ಆಗಿತ್ತು. ಅವರ ಮಾತು ಖರೆಯೂ ಆಗಿತ್ತು. ನಾನು ಅವರೊಂದಿಗೆ ನಕ್ಕಿದ್ದೆ. ತಾನು ನಂಬಿರುವ ಸಿದ್ಧಾಂತಕ್ಕೆ ಒಪ್ಪಿಗೆ ಆಗುತ್ತದೆ ಅನ್ನುವ ಮಾತ್ರಕ್ಕೆ ಯಾವುದೇ ಕಲೆಯನ್ನು, ಸಾಹಿತ್ಯವನ್ನು ಅವರು ಮೆಚ್ಚಿಕೊಂಡದ್ದಿಲ್ಲ. ಅದು ಮೊಟ್ಟಮೊದಲನೆಯದಾಗಿ ಸಾಹಿತ್ಯವಾಗಿ, ಕಲೆಯಾಗಿ ಮಾಡಬೇಕು. ಅದಕ್ಕೆ ಅವರಿಗೆ ನಿರಂಜನರ ಮತ್ತು ಪ್ರಗತಿಶೀಲ ಲೇಖಕರ ಎಷ್ಟೋ ಕೃತಿಗಳ ಬಗ್ಗೆ ಅಂತ ಇಂಪ್ರೆಸ್ಸಿವ್ ಆದ ಒಪೀನಿಯನ್ ಇರಲಿಲ್ಲ. 'ಕುಸುಮಬಾಲೆ'ಯೂ ಅವರಿಗೆ 'ಬ್ಯಾಡ್ ಫೈತ್' ಬರವಣಿಗೆಯಾಗಿ ಕಂಡಿತ್ತು.

ಜಿ ಆರ್ ಅವರ ಕಲಾ ಮೀಮಾಂಸೆ ಅವರ ಈ ಮಾತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ: "ಬಂಡಾಯದ ಬರವಣಿಗೆಯಲ್ಲಿ ನಾನು ಸಾಹಿತ್ಯದಿಂದ ಬಯಸುವ ಯಾವ ಗುಣಗಳೂ ಇರಲಿಲ್ಲ. ಬಹಳ ಒಳ್ಳೆಯ ವಿಷಯದ ಪ್ರತಿಪಾದನೆಗಾಗಿ ನೀವು ಪ್ರಬಂಧ ಬರೆದರೆ ಅರ್ಥವಾಗುತ್ತದೆ, ಕರಪತ್ರ ಬರೆದರೆ ಒಪ್ಕೋತೀನಿ... ಏನನ್ನಾದರೂ ಪ್ರತಿಪಾದಿಸುವುದಕ್ಕೋಸ್ಕರ ಕತೆ ಬರೆದರೆ ಒಪ್ಪಿಕೊಳ್ಳೋದು ಕಷ್ಟವಾಗುತ್ತೆ. ನೀವು ಕತೆ ಬರೆದು ಅದರಿಂದ ತತ್ವ ಹುಟ್ಟಿದರೆ ಸರಿ. ಕತೆ, ಕವಿತೆ, ನಾಟಕವನ್ನು ಪ್ರತಿಪಾದನೆಗೋಸ್ಕರ ಬರೆದರೆ, ನಿಮ್ಮ ಮನಸ್ಸಿಗೆ ಕೊಟ್ಟ ಆಕೃತಿಯನ್ನೇ ಕೃತಿಗೂ ಕೊಡುತ್ತೀರಿ. ಕೃತಿ ತಾನಾಗೇ ಒಂದು ಆಕೃತಿ ಪಡೆಯೋದಿಲ್ಲ. ಅಲ್ಲಿಯ ಪಾತ್ರಗಳಿಗೆ ಒಂದು ಸ್ವ ಇರೋದಿಲ್ಲ. ಅದಕ್ಕೆ ನೀವು ಕೊಟ್ಟ ಸ್ವ ಇರುತ್ತೆ. ನೀವು ಆಡುಗ - ಚದುರಂಗದ ಕಾಯಿಗಳು ಅವು."

ಅವರ ಈ ಮಾತನ್ನು ಅವರು ಬದುಕನ್ನು ಸಮಗ್ರವಾಗಿ ಗ್ರಹಿಸುವ ಕ್ರಮ ಎಂದೇ ಭಾವಿಸಬೇಕು. ಯಾಕೆಂದರೆ, ಅವರು ಆದಿ ಉಡುಪಿಯ ಬೆತ್ತಲೆ ಪ್ರಕರಣ ಕುರಿತು ಮಾಡಿದ ವರದಿಯಲ್ಲಿ ಬರೆದ ಕೊನೆಯ ಸಾಲುಗಳನ್ನು ಗಮನಿಸಿ: "ಘಟನೆ ನಡೆದ ಎರಡು ದಿನಗಳ ನಂತರ ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋದಾಗ, ಅವರ ಬೆಡ್ಡುಗಳ ಸುತ್ತ ಅವರ ಮನೆಯವರು ಮತ್ತು ಬಂಧು-ಬಳಗದವರು ನಿಂತಿದ್ದರು. ಹಸನಬ್ಬರ ತಾಯಿ, ಅಂದರೆ ಹಾಜಬ್ಬನವರ ಪತ್ನಿಯೂ ಇದ್ದರು. ಯಾರನ್ನು ಕಂಡರೂ ಅವರಿಗೆ ಅಳುವೇ ಒತ್ತರಿಸಿ ಬರುತ್ತಿತ್ತು. ಹೌದು, ಈ ವಿಷಯವನ್ನು ಹೇಳಲೇಬೇಕು; ಮುಸಲ್ಮಾನರಿಗೂ ತಾಯಿ, ತಂದೆ, ಅಕ್ಕ-ತಂಗಿ, ಬಂಧು-ಬಳಗ ಎಲ್ಲ ಇರುತ್ತಾರೆ. ಅವರು ಇಲ್ಲಿಯೇ ಹುಟ್ಟಿ ಬೆಳೆದವರು. ನಮ್ಮ ಹಾಗೆಯೇ ಈ ದೇಶದ ಪ್ರಜೆಗಳು ಮತ್ತು ಸಂಸಾರವಂದಿಗರು. ಇವು ಬಹಳ ಸರಳವಾದ ಸತ್ಯಗಳು. ಆದರೆ ಉಡುಪಿಯಲ್ಲಂತೂ ಇದನ್ನು ಮತ್ತೆ-ಮತ್ತೆ ಹೇಳಲೇಬೇಕಾದ ಅವಶ್ಯಕತೆ ಇದೆ." ಸಾಹಿತ್ಯದಲ್ಲೇ ಆಗಲೇ, ನಿಜ ಜೀವನದಲ್ಲೇ ಆಗಲಿ, ಮನುಷ್ಯರನ್ನು ಮನುಷ್ಯರ ಬದುಕನ್ನು ತೀರಾ ಟು ಡೈಮೆನ್ಷನಲ್ ಆಗಿ ನೋಡಲು ಜಿ ಆರ್ ನಿರಾಕರಿಸುತ್ತಿದ್ದರು ಮತ್ತು ಅದು ಅವರಿಗೆ ರುಚಿಸುತ್ತಲೂ ಇರಲಿಲ್ಲ. ಅದು ಬಂಡಾಯ ಸಾಹಿತ್ಯದ ಒಳಗಿದ್ದರೂ ಸರಿ, ಹಿಂದುತ್ವ ರಾಜಕೀಯದ ಭಾಗವಾಗಿ ನಿಜಜೀವನದ ಮನುಷ್ಯರ ಕುರಿತಾಗಿ ಹಬ್ಬುವ ಸುಳ್ಳುಗಳೇ ಆಗಲಿ- ಎಲ್ಲವನ್ನೂ ಸಂಶಯದೃಷ್ಟಿಯಲ್ಲೇ ನೋಡುತ್ತಿದ್ದರು, ವಿರೋಧಿಸುತ್ತಿದ್ದರು. ಮನುಷ್ಯ ಪ್ರೀತಿ ಎಂದರೆ ಮನುಷ್ಯನನ್ನು ಮನುಷ್ಯನಾಗಿಯೇ ನೋಡುವುದು ಪ್ರಥಮ ಕಾರ್ಯ ಎಂದೇ ನಂಬಿದವರು ಮತ್ತು ಹಾಗೆ ನೆಡೆದುಕೊಂಡವರು ಜಿ ಆರ್.

ಒಮ್ಮೆ ನನಗೆ ಬಹಳ ಅಚ್ಚರಿ ಆಗುವಂತಹ ಒಂದು ಘಟನೆ ಸಂಭವಿಸಿತು. ಆಗ ನಾನು ಮಂಗಳೂರಿನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಓರ್ವ ಮುಸ್ಲಿಂ ವ್ಯಕ್ತಿಯ ಮೇಲೆ ವಿನಾಕಾರಣ ನಡೆದ ಪೊಲೀಸ್ ದೌರ್ಜನ್ಯ ಕುರಿತು ಒಂದು ವರದಿ ಮಾಡಿದ್ದೆ. ವರದಿ ಪ್ರಕಟ ಆದ ದಿನ ಮತ್ತೆ ಆಸ್ಪತ್ರೆ ಕಡೆ ಹೋಗಿದ್ದೆ- ಈ ಬಾರಿ ವರದಿ ಮಾಡಲು ಅಲ್ಲ, ಬದಲಾಗಿ ಕೇವಲ ಓರ್ವ ನಾಗರಿಕನಾಗಿ, ಪೆಟ್ಟು ತಿಂದ ವ್ಯಕ್ತಿಯ ಸೌಖ್ಯ ವಿಚಾರಿಸಲು. ಹೋದರೆ, ಅಲ್ಲಿಗೆ ಜಿ ಆರ್ ಬಂದಿದ್ದರು. ನನ್ನನ್ನು ಕಂಡವರೇ, "ಒಹ್! ನಿಮ್ಮ ರಿಪೋರ್ಟ್ ನೋಡಿಯೇ ಬಂದದ್ದು ನಾನು," ಎನ್ನುತ್ತ, ತಾನು 'ಲಂಕೇಶ್ ಪತ್ರಿಕೆ'ಗೆ ಈ ವಿಷಯವನ್ನು ಬರೆಯುವುದಾಗಿ ಹೇಳಿದರು. ನನಗೆ ಜಿ ಆರ್ ಹೇಗೆ ಮಾಹಿತಿ ಸಂಗ್ರಹಿಸುತ್ತಾರೆ, ಹೇಗೆ ಇಂಟರ್ವ್ಯೂ ಮಾಡ್ತಾರೆ ಅನ್ನುವ ಕುತೂಹಲ ಇದ್ದ ಕಾರಣ, ಅವರು ಪೆಟ್ಟು ತಿಂದ ವ್ಯಕ್ತಿಯನ್ನು ಮಾತನಾಡಿಸುತ್ತಿದ್ದಾಗ ಅವರ ಹಿಂದೆ ನಿಂತು ಕೇಳಿಸಿಕೊಳ್ಳುತ್ತಿದ್ದೆ.  ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಹೆಸರು, ಊರು, ಉದ್ಯೋಗ, ವಿದ್ಯಾರ್ಹತೆ ಎಲ್ಲವನ್ನೂ ತಿಳಿದುಕೊಂಡು, ಆಮೇಲೆ ದೌರ್ಜನ್ಯ ನಡೆದ ದಿನ ಏನೇನು ನೆಡಯಿತು ಎಂದೆಲ್ಲ ಸವಿವರವಾಗಿ ಕೇಳಿಸಿಕೊಂಡರು. ಈ ಎಲ್ಲ ಮಾತುಕತೆ ನಡೆಯುವ ಸಂದರ್ಭ ಸಹಜವಾಗಿಯೇ ಅಕ್ಕಪಕ್ಕದ ಬೆಡ್ಡಿನ ಜನ ಹತ್ತಿರ ಬಂದು ಕೇಳಿಸಿಕೊಳ್ಳುತ್ತಿದ್ದರು. ಒಂದು ಹಂತದಲ್ಲಿ ಜಿ ಆರ್ ಆ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಉದ್ದೇಶಿಸಿ, "ನೀವು ನಿಮಗೆ ಆದ ಅನ್ಯಾಯದ ಕುರಿತು ಮೇಲಾಧಿಕಾರಿಗಳಿಗೆ ಕಂಪ್ಲೇಂಟ್ ಮಾಡ್ತೀರಾ?" ಅಂತ ಕೇಳಿದರು. ಪೆಟ್ಟು ತಿಂದ ಆ ವ್ಯಕ್ತಿ ಬಹಳ ಅಸಹಾಯಕನಾಗಿ, "ನನಗೇನು ಮಾಡಬೇಕೋ ಗೊತ್ತಿಲ್ಲ," ಎನ್ನುತ್ತ, "ನೀವೇ ಹೇಳಿ," ಎಂದು ವಿನಂತಿಸಿಕೊಂಡರು. ಅದಕ್ಕುತ್ತರವಾಗಿ ಜಿ ಆರ್, ಏನಾದರೂ ಹೇಳುವ ಮೊದಲೇ, ಪಕ್ಕದ ಹಾಸಿಗೆಯಲ್ಲಿದ್ದ ಪೇಶಂಟ್ ಮಲಗಿದಲ್ಲಿಂದಲೇ, "ನಿಮ್ಮದು ತಪ್ಪೇನೂ ಇಲ್ಲ ಅಂತಾದರೆ ನೀವು ಕಂಪ್ಲೇಂಟ್ ಮಾಡ್ಬೇಕು. ನೀವು ಸುಮ್ಮನಿರಬಾರದು. ಸತ್ಯಕ್ಕೆ ಜಯ ಸಿಗಬೇಕು," ಎಂದು ಪುಟ್ಟ ಭಾಷಣವನ್ನೇ ಶುರು ಮಾಡಿದರು. ಅವರು ನಡುವೆ ಒಂದು ಅರೆಕ್ಷಣಕ್ಕೆ ನಿಲ್ಲಿಸಿದ ಕೂಡಲೇ ಜಿ ಆರ್, "ನಾನಾಗಿದ್ರೆ ಖಂಡಿತ ಕಂಪ್ಲೇಂಟ್ ಮಾಡ್ತಿರ್ಲಿಲ್ಲ," ಎಂದುಬಿಟ್ಟರು. ನನಗೆ ಶಾಕ್ ಆಯಿತು. ನಾನು ನಮ್ಮೆಲ್ಲ ಸಮಾನತೆ, ನ್ಯಾಯ, ಭ್ರಾತೃತ್ವ ಹೋರಾಟದ ಗುರು, ಮಾರ್ಗದರ್ಶಕ ಎಂದು ಭಾವಿಸಿದ ಜಿ ಆರ್ ಹೋರಾಡುವುದಿಲ್ಲ ಎಂದು ಹೇಳಿದ್ದೇ? ನನಗೆ ಮಾತ್ರವಲ್ಲ, ದೌರ್ಜನ್ಯಕ್ಕೆ ಒಳಗಾಗಿದ್ದ ಆ ವ್ಯಕ್ತಿಗೂ ಆಶ್ಚರ್ಯವಾಯಿತು. ಆಗ ಜಿ ಆರ್, "ಅಲ್ಲ... ಹೊಟ್ಟೆಪಾಡಿಗೆ ಕಷ್ಟಪಡುವ ನಾವು ಈ ಅಧಿಕಾರಿಗಳನ್ನೆಲ್ಲ ಎದುರು ಹಾಕಿಕೊಂಡು ಬದುಕೋದು ಹೌದಾ?" ಎಂದು ಕೇಳಿದರು! ನ್ಯಾಯಪರವಾಗಿ ಸದಾ ನಿಲ್ಲುವ ಜಿ ಆರ್ ಸುಮ್ಮನೆ "ಹೋರಾಡಿ," ಎಂದು ಜನರಿಗೆ ಪಂಪ್ ಹೊಡೆದವರಲ್ಲ. ಅಂದು ನಡೆದ ಆ ಮಾತುಕತೆ ಜೀವ ಮತ್ತು ಜೀವನ ಮುಖ್ಯವಾದದ್ದು ಎಂದೇ ಹೇಳುವಂತಿತ್ತು. ಅಷ್ಟೇ ಮುಖ್ಯವಾಗಿ ಗಮನಿಸಬೇಕಾದದ್ದು, ನೊಂದಾತ ಹೋರಾಡುವ ಶಕ್ತಿ ಹೊಂದಿರದೆ ಇರಬಹುದು ಅಥವಾ ವ್ಯವಸ್ಥೆಯ ಕ್ರೌರ್ಯ ಏಕಾಂಗಿ ಪ್ರತಿರೋಧದ ಹೆಡೆಮುರಿಯಬಹುದು ಎಂಬ ಅರಿವು ಜಿ ಆರ್ ಅವರಿಗೆ ಇದ್ದದ್ದು. ಅಷ್ಟಾದರೂ, ಜಿ ಆರ್ ಆ ಪೊಲೀಸ್ ದೌರ್ಜನ್ಯ ಕುರಿತಾಗಿ ವಿವರವಾಗಿಯೇ ವರದಿ ಮಾಡಿದ್ದರು. ಅವರು ಸುಮ್ಮನಿದ್ದಿರಲಿಲ್ಲ.

ಈ ಎಲ್ಲ ಹೋರಾಟ, ಚಳವಳಿಗಳು ಅಗತ್ಯ ಎಂದು ಕಂಡರೂ, ಅವುಗಳ ಬಗ್ಗೆ ತೀರಾ ಆಶಾವಾದ ಹೊಂದಿದ್ದರೇ ಜಿ ಆರ್? ಬಹುಶಃ ಇಲ್ಲವೇನೋ. ಬೀದಿ ಬದಿಯಲ್ಲಿ ತುಂಬಾ ಇಂಟೆನ್ಸ್ ಆಗಿ ಭಾಷಣ ಮಾಡಿ ಮತ್ತೆ ಜಿಲ್ಲಾಧಿಕಾರಿಗೋ, ತಹಶೀಲ್ದಾರರಿಗೋ ಮನವಿ ಪತ್ರ ಕೊಟ್ಟ ನಂತರ ಅದೆಷ್ಟೋ ಬಾರಿ, ನಾಟಕೀಯ ದನಿ ಮಾಡಿಕೊಂಡು, "ಬೃಹತ್ ಪ್ರತಿಭಟನೆ," ಎಂದು ನಗುತ್ತಿದ್ದರು. ಪ್ರತಿಭಟನೆಗೆ ನೆರೆದಿದ್ದ ನಾವು, "ಮೂರು-ಮುಕ್ಕಾಲು ಜನ," ಅವರೊಂದಿಗೆ ನಗುತ್ತಿದ್ದೆವು. ಅವರೇ ಹೇಳಿದ್ದಿದೆ: "ಮೂರು ಮುಕ್ಕಾಲು ಜನ ಡಿ.ಸಿ ಅವರಿಗೆ ಹೋಗಿ ಒಂದು ಮನವಿ ಕೊಡ್ತೀವಿ- ಸಮಸ್ತ ಜನತೆಯ ಪರವಾಗಿ ಅಂತ. ಮತ್ತೆ ಘೋಷಣೆ ಕೂಗ್ತೀವಿ, 'ಎಲ್ಲಿಯವರೆಗೆ ಹೋರಾಟ, ಗೆಲ್ಲುವವರೆಗೆ ಹೋರಾಟ' ಅಂತ. ಇದೆಲ್ಲ ಎಡಪಂಥೀಯರ ಕವಿಸಮಯಗಳು. ಈ ತರಹದ ಕವಿಸ್ಮಯಗಳನ್ನು ಎಡಪಂಥೀಯರು ಬಳಸಬಾರದು ಎಂದು ಹೇಳುತ್ತಿಲ್ಲ. ಏನಿಲ್ಲವಾದರೂ ಅವು ನಮ್ಮ ಆತ್ಮವಿಶ್ವಾಸಕ್ಕಾಗಿ ಬೇಕು. ಆದರೆ, ಅವು ನಿಜವಲ್ಲ ಅಂತಲೂ ನಮಗೆ ಗೊತ್ತಿರಬೇಕು." ಹೋರಾಟಗಳ ಬಗ್ಗೆ, ಚಳವಳಿಗಳ ಬಗ್ಗೆ ಅಷ್ಟೊಂದು ಆಶಾವಾದ ಹೊಂದಿರದ ಜಿ ಆರ್ ಯಾಕೆ ತನ್ನ ಜೀವನದ ಹೆಚ್ಚಿನ ಭಾಗವನ್ನು ಅವುಗಳಿಗಾಗಿ ತೇಯ್ದರು? ಅವರೇ ಒಮ್ಮೆ ಹೇಳಿದಂತೆ, "ಎದುರಿಸಬೇಕು- ಅಷ್ಟೇ ಗೊತ್ತಿದೆ." ತನ್ನ ಸುತ್ತಲಿನ ಲೋಕಕ್ಕೆ ಸ್ಪಂದಿಸದೆ ಇರಲಾಗದ ಜೀವನಪ್ರೀತಿ ಅವರದ್ದು. ತಪ್ಪಾದಾಗ ಅದನ್ನು ತಪ್ಪು ಎಂದು ಹೇಳುವ, ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಡುವ ಸ್ವಭಾವ ಅವರದ್ದು. ಮನುಷ್ಯನಾಗಿ ಪ್ರತಿರೋಧ ತನ್ನ ಕರ್ತವ್ಯ ಎಂದೇ ಅವರು ನಂಬಿದ್ದರು ಮತ್ತು ಹಾಗೆಯೇ ಬದುಕಿದ್ದರು. ಅಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿದ್ದರೂ ವಿಚಲಿತರಾಗದೆ ಹೋರಾಟ ಮುಂದುವರಿಸಿದ್ದರು. ಸಾಮಾನ್ಯವಾಗಿ ಎಂತಹ ಹೋರಾಟಗಾರರೂ ತಮ್ಮ ಚಳವಳಿಗೆ ಜಯ ಸಿಗದೆ ಹೋದಾಗ ನಿರಾಸೆಗೊಳಗಾಗುತ್ತಾರೆ, ಭ್ರಮನಿರಸರಾಗುತ್ತಾರೆ. ನಾಟಕಕಾರ ಸಿಜಿಕೆ ಅವರ ಆತ್ಮಕತೆಯಲ್ಲಿ ಅಂಥ ಸನ್ನಿವೇಶಗಳನ್ನು ದಾಖಲಿಸುತ್ತಾರೆ. ಆ ಆತ್ಮಕತೆ ಓದಿದ ಜಿ ಆರ್ ಅವರು ಸಿಜಿಕೆ ಅವರಿಗೊಂದು ಪತ್ರ ಬರೆದರು. ಅಲ್ಲಿ ಬರುವ ಈ ಮಾತುಗಳನ್ನು ಕೇಳಿ: "ನೀವು ಮತ್ತು ನಮ್ಮ ವಯಸ್ಸಿನ ಅನೇಕರು ಪಾಲುಗೊಂಡಿದ್ದ ಸಮುದಾಯ, ಬಂಡಾಯ ಚಳವಳಿಗಳ ಬಗ್ಗೆ ನಿಮ್ಮ ಬರವಣಿಗೆ ಹೆಚ್ಚು ವಿಮರ್ಶಾತ್ಮಕವಾಗಿ ಇರಬೇಕಿತ್ತು. ನಮಗಾದ ಭ್ರಮನಿರಸನ ನಿಜಕ್ಕೂ ಅಷ್ಟು ದೊಡ್ಡ ಸಂಗತಿಯಾಗಬೇಕಾದ್ದಿಲ್ಲ. ಭ್ರಮೆಗಳನ್ನು ಇಟ್ಟುಕೊಳ್ಳಲು ನಮಗೆ ಯಾರೂ ಹೇಳಲಿಲ್ಲ; ಅಥವಾ ಕನ್ನಡ ಸಂಸ್ಕೃತಿಯ ದಿಕ್ಕುದೆಸೆಗಳನ್ನು ಬದಲಿಸುವ ಗುತ್ತಿಗೆಯನ್ನು ನಮಗೆ ಯಾರೂ ಕೊಟ್ಟಿರಲಿಲ್ಲ. ಈ ಜವಾಬ್ದಾರಿಯನ್ನು ನಮಗೆ ನಾವೇ ಆರೋಪಿಸಿಕೊಂಡಿದ್ದೆವು. ನಾವು ಬದಲಿಸಲು ಹೊರಟ ಕನ್ನಡ ಸಂಸ್ಕೃತಿ ನಮ್ಮೆಲರಿಗಿಂತ ದೊಡ್ಡದು ಎಂಬ ವಿನಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಕನ್ನಡದ ಜಾನಪದವು ನಮ್ಮ ಕಾಳಜಿ ಇಲ್ಲದೆಯೇ ಸಾವಿರಾರು ವರ್ಷಗಳಿಂದ ಬಾಳುವೆ ಮಾಡಿಕೊಂಡು ಬಂದಿದೆ." ಇಲ್ಲಿ ನಾವು ಬದಲಿಸಹೊರಟ ಲೋಕ ನಮಗಿಂತ ಎಷ್ಟು ಶಕ್ತಿಶಾಲಿ, ಪ್ರಭಾವಶಾಲಿ ಎಂಬ ಅರಿವು ಕಾಣಿಸುತ್ತದೆ. ಅದನ್ನು ಸ್ವೀಕರಿಸುವ ವಿನಯ ಕಾಣುತ್ತದೆ. ಆದರೆ, ಸಿನಿಕತನ, ನಿರಾಶಾವಾದ ಕಾಣಿಸದು. ಇಷ್ಟೆಲ್ಲ ಇದ್ದರೂ ನಮ್ಮ ಕೆಲಸ ನಾವು ಮಾಡಲೇಬೇಕು ಎಂಬ ಪ್ರಜ್ಞೆ ಕಾಣಿಸುತ್ತದೆ. ಮತ್ತು ಅದು ಅಗತ್ಯ ಇರುವ ಕಾರಣ ಮಾಡಬೇಕೇ ಹೊರತು, ತೀರಾ ಥ್ರಿಲ್‌ಗಾಗಲೀ, ಇಲ್ಲವೇ ವಿಜಯಪ್ರಾಪ್ತಿ ಸಾಯುವ ಮುನ್ನ ಉಣ್ಣಲು ಆಗುತ್ತದೆ ಎಂಬ ಆಸೆಯಿಂದಾಗಲೀ ಮಾಡಲಾಗದು ಎಂಬ ಸಜೇಶನ್ ಸಹ ಕಾಣಿಸುತ್ತದೆ. ಮತ್ತು ಮುಖ್ಯವಾಗಿ, ಜಿ ಆರ್ ಇಷ್ಟೆಲ್ಲ ಗೊತ್ತಿದ್ದರೂ ತಾವು ಹೋರಾಟದ ಹಾದಿ ತುಳಿದರು ಎಂದರೆ ಅದು ಅವರ ಫಲಾಪೇಕ್ಷೆ ಇಲ್ಲದೆಯೇ ಆಯ್ದುಕೊಂಡ ಮಾರ್ಗ ಎಂಬುದನ್ನು ನಾವು ಮನಗಾಣಬೇಕು. ಇಟ್ ಈಸ್ ಅ ಚಾಯ್ಸ್ ಥಟ್ ಹೀ ಮೇಡ್!

ಈ ಲೇಖನ ಓದಿದ್ದೀರಾ?: ನುಡಿ ನಮನ | ರಾಜಶೇಖರರ ಬರಹಗಳನ್ನು ಓದುವುದೆಂದರೆ ನಮ್ಮೊಳಗನ್ನು ಗಾಢವಾಗಿ ಪರೀಕ್ಷಿಸಿಕೊಂಡಂತೆ

ಜಿ ಆರ್ ಒಮ್ಮೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ನಿತ್ಯವೂ ಸಂಜೆ ಭೇಟಿ ಮಾಡುತ್ತಿದ್ದೆ. ಅವರಿಗೆ ಆ ಬೆಡ್ಡಿನಲ್ಲಿ ಕಟ್ಟಿಹಾಕಿದಂತಾಗುತ್ತಿತ್ತು ಮತ್ತು ಎದ್ದು ಓಡಾಡಬೇಕು ಅಂತಲೂ ಅನ್ನಿಸುತ್ತಿತ್ತು. ನಾನು ಸಂಜೆ ಅವರನ್ನು ಭೇಟಿ ಮಾಡಲು ಹೋದಾಗ ಅವರ ಕೈ ಹಿಡಿದುಕೊಂಡು ಅವರಿದ್ದ ರೂಮಿನ ಆಚೆಗೆ ಕಾರಿಡಾರ್ ಕೊನೆಯ ತನಕ ವಾಕ್ ಮಾಡುತ್ತಿದ್ದೆವು. ಆ ಕಾರಿಡಾರ್ ಕೋಣೆಯಲ್ಲಿ ಒಂದು ವಿಶಾಲ ಕಿಟಕಿಯಿತ್ತು. ಅದು ಆರನೆಯದ್ದೋ ಏಳನೆಯದ್ದೋ ಮಹಡಿ ಆಗಿದ್ದ ಕಾರಣ ಆ ಕಿಟಕಿಯಿಂದ ಮಣಿಪಾಲದ ಒಂದಿಡೀ ಭಾಗ ಕಾಣಿಸುತಿತ್ತು. ಮೊದಲನೇ ದಿನ ಹೋಗಿ, ಅಲ್ಲಿ ಒಂದೆರಡು ನಿಮಿಷ ನಿಂತು, ಮರಳಿ ಬಂದಿದ್ದೆವು. ಎರಡನೇ ದಿನ ಮತ್ತೆ ವಾಕಿಂಗ್ ಹೋಗೋಣ ಎಂದಾಗ ಮತ್ತದೇ ಕಾರಿಡಾರ್ ಕೊನೆಯ ತನಕ ಹೊರಟೆವು. ಆ ಕಿಟಕಿ ಬಳಿ ಬಂದು ನಿಂತಾಗ, ಪೌರಾಣಿಕ ನಾಟಕದ ರಾಜರು ಸಭೆಯನ್ನು ನೋಡುತ್ತ ಕೋಟೆ ಮೇಲೆ ನಿಂತು ಇಡೀ ರಾಜ್ಯವನ್ನೇ ವೀಕ್ಷಿಸುವ ಹಾಗೆ ನಟನೆ ಮಾಡುವ ರೀತಿಯಲ್ಲೇ ಜಿ ಆರ್ ಎರಡೂ ಕೈಗಳನ್ನು ಎತ್ತಿ, ನಾಟಕೀಯ ದನಿಯಲ್ಲಿ, "ಎಲ್ಲ ಹಾಗೆಯೇ ಇದೆ!" ಎಂದು ಹೇಳಿ ನಕ್ಕರು. ಅವರ ಈ ನಟೋರಿಯಸ್ ಸೈಡ್ ಹೊಸದಲ್ಲದಿದ್ದರೂ, ಆ ನಟನೆಯನ್ನು ಬಹಳ ಎಂಜಾಯ್ ಮಾಡಿದ್ದೆ. "ಎಲ್ಲ ಬಿಲ್ಡಿಂಗ್ ಇದ್ದಲ್ಲೇ ಇದೆ. ಗುಡ್ ಗುಡ್..." ಎಂದು ಆ ಹಾಸ್ಯವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದರು. ನನ್ನ ನಗುವೂ ಜೋರಾಗಿತ್ತು. ಆಮೇಲೆ ಆ ಕಾರಿಡಾರ್ ಕೋಣೆಯಿಂದ ರೂಮ್ ತನಕ ಹಗೂರವಾಗಿ ಮರಳುವಾಗ, "ಎಲ್ಲ ಹಾಗೆ ಇರದೆ ಮತ್ತಿನ್ನೇನು? ಆದರೂ, ದಿನಾ ಹೋಗಿ ನೋಡಿ ಬರಬೇಕು ಅನ್ನುವ ಕೆಟ್ಟ ಕುತೂಹಲ," ಎಂದು ತನ್ನ ಬಗೆಗೇನೇ ತಮಾಷೆ ಮಾಡಿಕೊಂಡರು. ಆಮೇಲೆ ತಕ್ಷಣ, "ನಮ್ಮ ಹೋರಾಟಗಳೂ ಹೀಗೇನೇ. ಎಲ್ಲದೂ ಹಾಗೆಯೇ ಇರ್ತದೆ. ಏನೂ ಬದಲಾಗುದಿಲ್ಲ. ಆದರೂ ನಾವು ನಡುನಡುವೆ ಹೋಗಿ ಇಂಥ ಪರ್ಫಾರ್ಮೆನ್ಸ್ ಮಾಡಿ ಬರ್ತೇವೆ," ಎಂದರು. ನನಗೆ ನಗಬೇಕೋ ಬೇಡವೋ ತಿಳಿಯಲಿಲ್ಲ. ಜಿ ಆರ್ ಮಾತ್ರ ನಕ್ಕಿದ್ದರು. ಅಷ್ಟು ತಮಾಷೆ ಮಾಡಿದರೂ, ಅಷ್ಟು ನಕ್ಕರೂ, ಮತ್ತೆ ಎಲ್ಲ ಹೋರಾಟದಲ್ಲಿ ಎಂದಿನಷ್ಟೇ ಸೀರಿಯಸ್ ಆದ, ಎಂದಿನಷ್ಟೇ ಇಂಟೆನ್ಸ್ ಆದ ಭಾಷಣ ಮಾಡುತ್ತ ಬಂದರು.

ಭಾಷಣಕ್ಕೆ ಕರೆಯದೆ ಇದ್ದರೂ, ತಮ್ಮ ಸಮಾಜಮುಖಿ ಕನಸನ್ನು ಹಂಚಿಕೊಂಡ ಕಾರ್ಯಕ್ರಮದಲ್ಲಿ ಹೃದಯಪೂರ್ವಕಾಗಿ ಭಾಗವಹಿಸುವ ಅವರ ಗುಣ ದೊಡ್ಡದು. ಒಮ್ಮೆ ಮಂಗಳೂರಿನಲ್ಲಿ ಹೊಸ ಬಗೆಯ ಪ್ರಗತಿಪರ ಕಾರ್ಯಕ್ರಮವೊಂದರ ಚರ್ಚೆ ನೆಡೆದಿತ್ತು. ಆ ಕಾರ್ಯಕ್ರಮಕ್ಕೆ ಕೆಲವು ಸಂಘಟನೆಗಳ ಜೊತೆ ಗುರುತಿಸಿಕೊಂಡ ಕೆಲವರನ್ನು ಸೇರಿಸಿಕೊಳ್ಳಬಾರದು ಎಂಬ ಮಾತು ಬಂತು, ಅದಕ್ಕೆ ಸಮ್ಮತಿಯೂ ಸಿಕ್ಕಿತು. ಆ ಪಟ್ಟಿಯಲ್ಲಿ ಜಿ ಆರ್ ಅವರ ಹೆಸರೂ ಇತ್ತು. ಅವರನ್ನು ಸೇರಿಸಿಕೊಳ್ಳಬೇಕು ಎಂದು ನಾನು ಹೇಳಿದೆನಾದರೂ, ನನ್ನ ಮಾತಿಗೆ ಯಾವ ಬೆಂಬಲ ಸಿಗದೆಹೋಯಿತು. ಈ ಕೈಬಿಡಲಾದ ಕೆಲವು ಸಂಘಟನೆಗಳ ಕೆಲವರು ಈ ರೀತಿಯಾಗಿ ನಾವುಗಳು ನಮ್ಮ ನಮ್ಮೊಳಗೆ 'ಟುಕ್ಡೆ-ಟುಕ್ಡೆ' ಆಗುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಒಂದಿಷ್ಟು ವಾಕ್ಸಮರಗಳೂ ನೆಡೆದವು. ಅದ್ಯಾವುದರಲ್ಲೂ ಇಲ್ಲದ ಜಿ ಆರ್, ಆ ಕಾರ್ಯಕ್ರಮದ ದಿನ ಬಂದು ಕೂತು, ಸಾಮಾನ್ಯ ಪ್ರೇಕ್ಷಕನಂತೆ ಭಾಗವಹಿಸಿ, ಆಯೋಜಕರಿಗೆ, "ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಅಗತ್ಯ ಮಾಡಲೇಬೇಕಾಗಿದ್ದ ಕಾರ್ಯಕ್ರಮ ಇದು," ಎಂದು ಬೆನ್ನು ತಟ್ಟಿ ಹೋದರು. ತನ್ನನ್ನು ಮಾತಿಗೆ ಕರೆಯಲಿಲ್ಲ ಎಂದೆಲ್ಲ ಬೇಸರಿಸಿಕೊಂಡಿದ್ದೇ ಇಲ್ಲ ಜಿ ಆರ್. ಆಯೋಜಿಸಲಾದ ಕಾರ್ಯಕ್ರಮ ತನ್ನ ವಿಷನ್ ಜೊತೆ ಮ್ಯಾಚ್ ಆದರೆ ಹೋಗಿ ಭಾಗವಹಿಸುತ್ತಿದ್ದದ್ದು ಅವರ ಹೃದಯವೈಶಾಲ್ಯತೆಯನ್ನು ತೋರಿಸುತ್ತದೆ.

ಈ ಹೃದಯವೈಶಾಲ್ಯತೆ ಕೇವಲ ಚಳವಳಿ, ಹೋರಾಟ, ಇವುಗಳಿಗೆ ಮಾತ್ರ ಸೀಮಿತವಲ್ಲ. ಅದು ಅವರ ವೈಯಕ್ತಿಕ ಸಂಬಂಧಗಳಲ್ಲಿಯೂ ಕಾಣಿಸುತಿತ್ತು. ಅಹರ್ನಿಶಿ ಪ್ರಕಾಶನದ ಅಕ್ಷತಾ ಎಂದೋ ಒಮ್ಮೆ ತನಗೆ 'ಮಟ್ಟು ಗುಳ್ಳ' ಪ್ರಿಯವಾದದ್ದು ಎಂದು ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು, 'ಜನ-ನುಡಿ' ಕಾರ್ಯಕ್ರಮಕ್ಕೆ ಬರುವಾಗ ಎರಡು ಕಿಲೋ ಮಟ್ಟು ಗುಳ್ಳ ಹೊತ್ತುಕೊಂಡು ಬಂದಿದ್ದರು! ಜಿ ಆರ್ ಅವರ ಆರೋಗ್ಯ ಕ್ಷೀಣಿಸಿದ ನಂತರ ಅವರನ್ನೊಮ್ಮೆ ಭೇಟಿ ಆಗಲು ಅಕ್ಷತಾ ಬಂದಿದ್ದಾಗ, ಜೊತೆಗೆ ನಾನೂ ಹೋಗಿದ್ದೆ. ಆಗ ಜಿ ಆರ್ ಅವರ ಹೆಂಡತಿ ಹೇಳಿದರು, "ನೀವು ಬರ್ತೀರಿ ಅಂತ ಹೇಳಿದಾಗಿನಿಂದ 'ಅಕ್ಷತಾಳಿಗೆ ಮಟ್ಟು ಗುಳ್ಳ ಇಷ್ಟ. ತಂದಿಡು. ಅವಳು ಬಂದಾಗ ಕೊಡಬೇಕು' ಅಂತ ಹೇಳ್ತಿದ್ದಾರೆ. ಆದರೆ ನೋಡಿ, ಒಳ್ಳೆಯ ಮಟ್ಟು ಗುಳ್ಳ ಸಿಗಲೇ ಇಲ್ಲ," ಎಂದರು. ತನ್ನ ತೀವ್ರ ಅನಾರೋಗ್ಯದ ನಡುವೆಯೂ ತನಗಿಂತ ವಯಸ್ಸಿನಲ್ಲಿ ಅದೆಷ್ಟೋ ಕಿರಿಯರೊಬ್ಬರ ರುಚಿ-ಆಸೆ ಇವುಗಳನ್ನು ಮರೆಯಲಿಲ್ಲ. ಜಿ ಆರ್ ಅಂದು ನನ್ನನ್ನು, "ನಿಮಗೆ ಈಗ ನಿದ್ದೆ ಬರ್ತದಾ?" ಎಂದು ಕೇಳಿದರು. ಅವರಿಗೆ ಪಾರ್ಕಿನ್ಸನ್ ಆರಂಭವಾದ ಸಂದರ್ಭದಲ್ಲಿ ನನ್ನ ಮಾನಸಿಕ ಆರೋಗ್ಯ ಬಹಳ ಕೆಟ್ಟಿತ್ತು. ನನಗೆ ನಿದ್ದೆ ಬರುತ್ತಲಿರಲಿಲ್ಲ. ಅದನ್ನು ಅವರ ಬಳಿ ಹೇಳಿಕೊಂಡಿದ್ದೆ. ಆಮೇಲೆ ಪ್ರತೀ ಸಾರಿಯೂ ನನ್ನ ನಿದ್ದೆ ಕುರಿತಾಗಿ ವಿಚಾರಿಸುತ್ತಿದ್ದರು. ಎಷ್ಟೋ ಬಾರಿ, "ಗಸಗಸೆ ಪಾಯಸ ಕುಡಿದರೆ ನಿದ್ದೆ ಬರ್ತದೆ," ಅಂತ ಹೇಳುವುದು ಮಾತ್ರವಲ್ಲ, ಹೆಂಡತಿಯ ಬಳಿ, "ಸಂವರ್ತರಿಗೆ ಒಂಚೂರು ಗಸಗಸೆ ಪಾಯಸ ಮಾಡಿಕೊಡು," ಅಂತ ಹೇಳುತ್ತಿದ್ದರು. ಅವರ ಹೆಂಡತಿಯೂ ಪ್ರೀತಿಯಿಂದ ಮಾಡಿಕೊಡುತ್ತಿದ್ದರು. ಅವರ ಆರೋಗ್ಯ ಕ್ಷೀಣಿಸುತ್ತ ಹೋದಾಗ, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು, ನಿರರ್ಗಳವಾಗಿ ಮಾತನಾಡುವುದು ಕಷ್ಟವಾಗಿ ಮಾತು ಕಡಿಮೆ ಆದಾಗಲೂ, ಅದೆಷ್ಟೋ ಬಾರಿ ಬೇರೇನೂ ಮಾತನಾಡಲು ಆಗದೆ ಇದ್ದರೂ, "ನಿದ್ದೆ ಬರ್ತದಾ ಇವಾಗ?" ಎಂದು ವಿಚಾರಿಸುತ್ತಿದ್ದರು. ಒಮ್ಮೆ ರಘು ನಕ್ಕು, "ಅಪ್ಪ ಅವರಿಗೆ ನಿದ್ದೆ ಬಾರದೆ ಇದ್ದದ್ದು ಎರಡು ವರ್ಷದ ಹಿಂದೆ. ಈಗಲೂ ಅದನ್ನೇ ಕೇಳ್ತೀಯಲ್ಲ!" ಎಂದು ತಮಾಷೆ ಮಾಡಿದ. ಅದಕ್ಕೆ ತುಂಬಾ ಮುಗ್ಧವಾಗಿ ಜಿ ಆರ್, "ಹೌದಾ? ಈಗ ನಿದ್ದೆ ಬರ್ತದಾ? ಒಳ್ಳೇದು ಒಳ್ಳೇದು!" ಅಂತಂದಿದ್ದರು.

ಅವರು ಹೀಗೆಲ್ಲ ವೈಯಕ್ತಿಕ ಕಾಳಜಿ ತೋರಿದಾಗ, ಇಂತಹ ಮಾತೃವಾತ್ಸಲ್ಯದ ವ್ಯಕ್ತಿಯನ್ನು ವಿದ್ಯಾರ್ಥಿದೆಸೆಯಲ್ಲಿ ಮೊದಲು ಕಂಡಾಗ ಯಾಕೆ ಗಾಬರಿಪಟ್ಟೆನೋ ಎಂದು ನನಗೆ ನಾನೇ ಕೇಳಿಕೊಂಡು ನಕ್ಕಿದ್ದಿದೆ! ಬಹುಶಃ ಎಲ್ಲರಂತೆಯೇ ನಾನು ಸಹ ಮೊದಮೊದಲಿಗೆ ಅವರ ಗಂಭೀರ ಮೊಗ ನೋಡಿ ಗಾಬರಿಗೊಳ್ಳುತ್ತಿದ್ದೆ. ಅವರ ಬಳಿ ಹೋಗಲು ಹೆದರುತ್ತಿದ್ದೆ. ಅವರಿಗೆ ಸಮೀಪವಾದಂತೆ ಭಯ ಕರಗಿಹೋಯಿತು. ಆದರೆ, ಭಕ್ತಿ ಮತ್ತು ಗೌರವ ಹೆಚ್ಚ್ಚುತ್ತಲೇ ಹೋಯಿತು. ಪ್ರೀತಿಯೂ ಅಷ್ಟೇ, ಮುಲ್ಟಿಪ್ಲೈ ಆಗುತ್ತ ಹೋಯಿತು.

ಹಾಗೆ ಭಯದ ಪೊರೆ ಕಳಚಿದ ಮೇಲೆ ಜಿ ಆರ್ ಆಪ್ತರಾದಾಗ ಕೆಲವೊಮ್ಮೆ ನಾನು ನನ್ನ ಕೆಲವಾರು ವೈಯಕ್ತಿಕ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದುಂಟು. ಬಹಳ ಕಾಳಜಿಯಿಂದ ಮಾತುಗಳನ್ನು ಕೇಳಿಸಿಕೊಂಡು, ತನ್ನ ಬದುಕಿನ ಅನುಭವದ ಆಧಾರದ ಮೇಲೆಯೇ ಸ್ಪಂದಿಸುವುದನ್ನು ಕಂಡಿದ್ದೇನೆ. ಸುಮ್ಮನೆ ಎಲ್ಲೋ ಓದಿದ ಫಿಲೊಸಫಿ, ಯಾರೋ ಹೇಳಿದ ಹಿತವಚನಗಳನ್ನು ಗುಡಿಸಿ ಸಾರಿಸುತ್ತಿರಲಿಲ್ಲ. ಹಾಗೆ ಕೆಲವೊಮ್ಮೆ ತನ್ನ ಮಿತಿಗಳ ಕುರಿತಾಗಿ, ತಾನು ಮಾಡಿದ ತಪ್ಪುಗಳ ಕುರಿತಾಗಿ ಹೇಳಿಕೊಂಡು, "ಐ ಆಮ್ ಅಷೇಮ್ಡ್ ಆಫ್ ಮೈಸೆಲ್ಫ್," ಎನ್ನುತ್ತಿದ್ದರು. ನಾವು ಅವರನ್ನು ಎಷ್ಟು ಸೀರಿಯಸ್ ಆಗಿ ಗೌರವಿಸುತ್ತೇವೆ ಎಂದು ತಿಳಿದಿದ್ದೂ ಆ ಮಾತುಗಳನ್ನು ಕೆಲವೊಮ್ಮೆ ಹೇಳುತ್ತಿದ್ದರು.

ಈ ಲೇಖನ ಓದಿದ್ದೀರಾ?: ನುಡಿ ನಮನ | ಜಿ. ರಾಜಶೇಖರ ಎಂಬ ಕೋಟೆಯ ಕಾವಲುಗಾರ

ಒಮ್ಮೆ ಒಂದು ಗಂಭೀರ ಚರ್ಚೆ ನಡೆಯುತ್ತಿತ್ತು. ಅದು ಅಪರೂಪಕ್ಕೆ ವ್ಯಕ್ತಿಕೇಂದ್ರಿತ ಚರ್ಚೆ ಆಗಿತ್ತು. ಆಗ ಮಾತುಮಾತಿನಲ್ಲಿ ಜಿ ಆರ್, "ನಾವು ಸಾರ್ವಜನಿಕವಾಗಿ ಹೇಳಿಕೊಳ್ಳದೆ ಹೋದರೂ, ನಮ್ಮಷ್ಟಕ್ಕೆ ನಾವು ಈ ಮಾತುಗಳನ್ನು ಹೇಳಿಕೊಂಡಿರ್ತೇವೆ. ಹಾಗಾಗಿ, ಈ ಮಾತುಗಳನ್ನು ಆಡಬಾರದಾದರೂ ಆಡುತ್ತಿದ್ದೇನೆ..." ಎಂದು ಒಂದು ಮಾತನ್ನು ಹೇಳಿದರು. ಅದು ಸ್ವಲ್ಪ ಪೊಲಿಟಿಕಲ್ ಇನ್‌ಕರೆಕ್ಟ್ ಆದ ಮಾತಾಗಿತ್ತು. ಜಿ ಆರ್ ಆ ಮಾತುಗಳನ್ನು ಹೇಳಿದರೇ ಎಂದು ನನಗಂತೂ ಆಶ್ಚರ್ಯ ಆಯಿತು. ಆದರೆ ಅವರು ಹೇಳಿದಂತೆ, ಆ ಮಾತು ನಾನು ಸಹ ನನ್ನ ಏಕಾಂತದಲ್ಲಿ ನನಗೇ ನಾನೇ ಹೇಳಿಕೊಂಡ ಮಾತಾಗಿತ್ತು. ಅದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ನನ್ನಲ್ಲಿರಲಿಲ್ಲ, ಅಷ್ಟೆ. ಆಮೇಲೆ ಆ ಮೀಟಿಂಗ್ ಮುಗಿಸಿ ಹೊರಡುವಾಗ ಜಿ ಆರ್, "ಛೆ! ನಾನು ಆ ರೀತಿ ಯೋಚನೇನೂ ಮಾಡಬಾರದಿತ್ತು," ಎಂದು ರಿಗ್ರೆಟ್ ಮಾಡಿದರು. ಆಮೇಲೆ ತಾವೇ, "ಆದರೆ ಹಾಳಾದ್ದು ಆಲೋಚನೆಗಳು ಬರ್ತಾವಲ್ಲ, ಏನು ಮಾಡೋದು?" ಎಂದರು. ಅವರ ಆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ನನ್ನನ್ನು ನಡುಗಿಸಿತ್ತು.

ಅವರ ಬರವಣಿಗೆಗಳ ಪುಸ್ತಕ ತರಬೇಕೆಂದು ಒತ್ತಾಯ ಮಾಡುತ್ತಿದ್ದಾಗ, "ನಾನು ಬರೆದ ಅದೆಷ್ಟೋ ಸಂಗತಿಗಳ ಬಗ್ಗೆ ನನಗೇ ಈಗ ಸಮ್ಮತಿ ಇಲ್ಲ. ನನ್ನ ನಿಲುವು ಬದಲಾಗಿದೆ," ಎನ್ನುತ್ತಿದ್ದರು. ಅದು ಅವರು ಹೇಗೆ ನಿರಂತರವಾಗಿ ಬೆಳೆಯುತ್ತಲೇ ಇರುತ್ತಾರೆ ಎನ್ನುವುದಕ್ಕೂ ಮತ್ತು ಹೇಗೆ ತನ್ನನ್ನೇ ತಾನು ವಿಮರ್ಶೆಗೆ ಒಳಪಡಿಸುತ್ತಾರೆ ಎಂಬುದಕ್ಕೂ ನಿದರ್ಶನ.

ಒಮ್ಮೆ ಅವರು ಶಾಲೆಯ ಯೂನಿಫಾರ್ಮ್ ಪದ್ಧತಿಯನ್ನು ಟೀಕಿಸಿ ಮಾತಾಡಿದಾಗ, ನಾನು, "ಸರ್, ನನ್ನ ಫ್ರೆಂಡ್ ಒಬ್ಬರ ತಂಗಿ ತಾನು ಯೂನಿಫಾರ್ಮ್ ಇರುವ ಶಾಲೆಗೆ ಮಾತ್ರ ಹೋಗುತ್ತೇನೆ ಅಂತ ಹೇಳಿದ್ದಳು. ಅದಕ್ಕೆ ಕಾರಣ ಹೊಸ-ಹೊಸ ಬಟ್ಟೆ ಹಾಕಿಕೊಂಡು ಹೋಗಲು ಸಾಧ್ಯ ಆಗದೆ ಇರೋದು ಮತ್ತು ಅದೇ ಬಟ್ಟೆಗಳನ್ನು ರಿಪೀಟ್ ಮಾಡುವಾಗ ಆಗುವ ಕೀಳರಿಮೆ," ಎಂದು ಹೇಳಿದೆ. ಅದಕ್ಕವರು, "ನೀವು ಹೇಳೋದು ಸರಿ ಇದೆ. ನನ್ನ ನಿಲುವು ಸ್ವಲ್ಪ ಕನ್‌ಫ್ಯೂಸ್ಡ್ ಆಗಿದೆ," ಎಂದರು. ನಾನು ಬೆಚ್ಚಿದೆ. ತಾನು ನಂಬಿದ್ದೇ ಸರಿ ಎಂದು ನಂಬುವ, ನಂಬಿಸುವ ಜನರ ನಡುವೆ, ಜನರಿಂದ ನಮ್ಮ ಸಾಕ್ಷಿಪ್ರಜ್ಞೆ ಎಂದು ಹೇಳಿಸಿಕೊಳ್ಳುವ ಈ ಮನುಷ್ಯ, ತನ್ನ ಸ್ಪಷ್ಟ ನಿಲುವಿಗೆ, ವಿಚಾರ ಸ್ಪಷ್ಟತೆಗೆ ಬಲ್ಲ ಈ ಮನುಷ್ಯ ತಾನು 'ಕನ್‌ಫ್ಯೂಸ್ಡ್" ಆಗಿದ್ದೇನೆ ಎಂದು ಹೇಳಲು ಹಿಂಜರಿಯದೆ ಹೋದದ್ದು - ಇವೆಲ್ಲವೂ ಅವರು ತಾನು ಜನಸಾಮಾನ್ಯರಿಗಿಂತ ಎತ್ತರದಲ್ಲಿರುವ ವ್ಯಕ್ತಿ ಎಂದು ತಿಳಿದುಕೊಂಡಿಲ್ಲ ಎಂದೇ ಹೇಳುತ್ತದೆ.

ಜನರಲ್ಲಿರುವ ಇತಿಮಿತಿಗಳು, ಸಣ್ಣತನಗಳು, ಕನ್ಫ್ಯೂಷನ್ ತನ್ನಲ್ಲೂ ಇದೆ ಎಂದು ಅದನ್ನು ಆಕ್ಸೆಪ್ಟ್ ಮಾಡಿಕೊಂಡಿದ್ದರು. ತನ್ನಂತೆ ಪರರು, ಪರರಂತೆ ತಾನು ಎಂಬಂತೆ ಬದುಕುವ, ಹಾಗೆಯೇ ಬದುಕನ್ನು ಗ್ರಹಿಸಿದ ವಿಶೇಷ ವ್ಯಕ್ತಿ ನಮ್ಮ ಜಿ ಆರ್.

ಜಿ ಆರ್ ಕುರಿತಾಗಿ ಇಷ್ಟೊಂದು ಪ್ರೀತಿ, ಗೌರವ, ಭಕ್ತಿ ಇದ್ದು, ಅವರು ನನ್ನ ಏಕೈಕ ಹೀರೋ ಎಂದು ಹೇಳಲಿಕ್ಕೆ ಕಾರಣ ಮತ್ತು ಅವರ ಬಗ್ಗೆ ಇಷ್ಟೊಂದು 'ಗುಡ್ ಫೈತ್' ಇರಲು ಕಾರಣ, ಅವರು ಯಾವ ಜಾತಿಯಲ್ಲಿ ಹುಟ್ಟಿದರೋ, ಯಾವ ಪರಿಸ್ಥಿಯಲ್ಲಿ ಹುಟ್ಟಿದರೋ, ಅದನ್ನೆಲ್ಲ ಗುರುತಿಸಿಯೇ- ತಮ್ಮ ಮಿತಿಗಳು, ಸಣ್ಣತನಗಳು, ಕನ್ಫ್ಯೂಷನ್ ಇವೆಲ್ಲದರಂತೆ- ಅಕ್ನಾಲೆಜ್ ಮಾಡಿಕೊಂಡು, ಅಂದರೆ ನಿರಾಕರಿಸದೆ, ಅವುಗಳನ್ನು ನಿರಂತರ ಪ್ರಯತ್ನದಿಂದ ಮೀರಿ ಕೇವಲ ಮನುಷ್ಯನಾಗಿ ರೂಪಾಂತರಗೊಂಡರು, ಅಪ್ಪಟ ಮನುಷ್ಯನಾಗಿ ಬಾಳ್ವೆ ನಡೆಸಿದರು. ಮನುಷ್ಯನ ಒಳ್ಳೆತನದ ಸಾಧ್ಯತೆಗಳನ್ನು ತಮ್ಮ ಸಹಜೀವಿಗಳಿಗೆ ತೋರಿಸಿಕೊಟ್ಟರು.

ಉರ್ದು ಸಾಹಿತ್ಯದ ಪಂಡಿತೆ ರಕ್ಷನ್ದಾ ಜಲೀಲ್ ಒಮ್ಮೆ ಮಣಿಪಾಲಕ್ಕೆ ಬಂದಿದ್ದರು. ನಮ್ಮ ಮನೆಯ ತಾರಸಿಯ ಮೇಲೆ ಸಣ್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿ ಆರ್ ಅವರನ್ನು ಒಳಗೊಂಡಂತೆ ಹತ್ತು-ಹದಿನೈದು ಮಂದಿ ಸಭಿಕರಿದ್ದ ಕಾರ್ಯಕ್ರಮವದು. ರಕ್ಷನ್ದಾ ಆಪಾ ಅಂದು ಪ್ರೋಗ್ರೆಸಿವ್ ರೈಟರ್ಸ್ ಮೂವ್ಮೆಂಟ್ ಕುರಿತಾಗಿ ಮಾತನಾಡಿದರು. ಆಮೇಲೆ ಮುಕ್ತ ಚರ್ಚೆ. ಸಂವಾದದ ಸಂದರ್ಭದಲ್ಲಿ ನಾನು ಒಂದು ಪ್ರಶ್ನೆ ಕೇಳಬೇಕು ಎಂದುಕೊಂಡೆ. ಹಿಂದೊಮ್ಮೆ ಖ್ಯಾತ ಉರ್ದು ಕಥನಕಾರ ಸಾದತ್ ಹಸನ್ ಮಂಟೋ ಕುರಿತಾಗಿ ಬರೆಯುತ್ತ ರಕ್ಷನ್ದಾ, "ಇಫ್ ಪ್ರೋಗ್ರೆಸಿವ್ ರೈಟರ್ಸ್ ಹ್ಯಾಡ್ ಅನ್ ಐಡಿಯಾಲಜಿ, ಮಂಟೋ ಹಾಡ್ ಆ ವರ್ಲ್ಡ್ ವ್ಯೂ." ಎಂದಿದ್ದರು. ಅದನ್ನು ನೆನಪಿಸಿ, "ಐಡಿಯಾಲಜಿಯಿಂದ ಮೂಡಿದ ಈಸ್ಥೆಟಿಕ್ಸ್ ಮತ್ತು ವರ್ಲ್ಡ್ ವ್ಯೂನಿಂದ ಮೂಡಿದ ಈಸ್ಥೆಟಿಕ್ಸ್ ಹೇಗೆ ಭಿನ್ನ?" ಎಂದು ಕೇಳಬೇಕೆಂದಿದ್ದೆ. ಆದರೆ, ಆ ಪ್ರಶ್ನೆ ಕೇಳಲು ನಾನು ಬಾಯ್ದೆರೆದು, "ಮಂಟೋ ಕುರಿತಾಗಿ..." ಎಂದು ಹೇಳುತ್ತಿದ್ದಂತೆ ಜಿ ಆರ್, "ಹೌದು, ನನಗೂ ಆ ಕುತೂಹಲ ಇದೆ. ಪ್ರೋಗ್ರೆಸಿವ್ ಮೂವ್ಮೆಂಟ್‌ನ ಭಾಗ ಆಗಿರದ ಮಂಟೋ ಬಗ್ಗೆ ನಿಮ್ಮ ಒಬ್ಸರ್ವೇಶನ್ಸ್ ಏನು?" ಎಂದು ಕೇಳಿಬಿಟ್ಟರು. ರಕ್ಷನ್ದಾ ಆ ಪ್ರಶ್ನೆಗೆ ಉತ್ತರ ನೀಡಿದರು. ನನ್ನ ಪ್ರಶ್ನೆ ಹಾಗೆಯೇ ಉಳಿಯಿತು. ಈ ಘಟನೆಯನ್ನು ಮತ್ತೆ-ಮತ್ತೆ ನೆನಪಿಸಿಕೊಂಡಿದ್ದೇನೆ. ಹಾಗೆ ನೆನಪಿಸಿಕೊಂಡಾಗಲೆಲ್ಲ ಅನ್ನಿಸುತ್ತದೆ, ಬಹುಶಃ ಜಿ ಆರ್ ಅಂದು ಗೊತ್ತಿಲ್ಲದೆ ಶೂಟ್‌ಡೌನ್ ಮಾಡಿದ್ದು ನನ್ನ ಪ್ರಶ್ನೆಯನ್ನಲ್ಲ, ಬದಲಾಗಿ, ಇಂತಹ ಪ್ರಶ್ನೆಗಳಿಗೆ ಥಿಯರಿಟಿಕಲ್ ಉತ್ತರ ಬಯಸುವ ಇಚ್ಛೆಯನ್ನೇ ಶೂಟ್‌ಡೌನ್ ಮಾಡಿದರು ಎಂದು. ಅದೆಲ್ಲ ಅಷ್ಟು ಸುಲಭದಲ್ಲಿ ದಕ್ಕುವಂತದ್ದೂ ಅಲ್ಲ. ಮೊತ್ತಮೊದಲನೆಯದಾಗಿ ಅದಕ್ಕ್ಕಾಗಿ ಒಂದು ವರ್ಲ್ಡ್ ವ್ಯೂ ಅನ್ನು ಸಂಪಾದಿಸಬೇಕು. ಆಗಷ್ಟೇ ಎಲ್ಲವೂ ಕಾಣಿಸತೊಡಗುತ್ತದೆ- ರಾಜಕೀಯದಲ್ಲೂ ಈಸ್ಥೆಟಿಕ್ಸ್‌ನಲ್ಲೂ. ಮಾಂಟೋನಂತೆ ಜಿ ಆರ್ ಕೂಡ ಐಡಿಯಾಲಜಿ ಮೀರಿ ವರ್ಲ್ಡ್ ವ್ಯೂ ಹೊಂದಿದವರಾಗಿದ್ದರು. ಅಂತಹವರು ಅಪರೂಪ.

"ರಾಜಶೇಖರ್ ಪಂಡ ಏರ್‌ ಯಾ?" ಎಂದು ಉಡಾಫೆಯಲ್ಲಿ ಕೇಳುವ ಮಂದಿಗೆ ಹೇಗೆ ಸುಲಭದಲ್ಲಿ ಹೇಳುವುದು- ಜಿ ರಾಜಶೇಖರ್ ಯಾರೆಂದು... ಜಿ ರಾಜಶೇಖರ್ ಏನೆಂದು!

Image
ನಿಮಗೆ ಏನು ಅನ್ನಿಸ್ತು?
0 ವೋಟ್