ಸುದ್ದಿಯಾದವರು | ಸದ್ದಿಲ್ಲದೆ 21 ಮುಕುಟ ಧರಿಸಿದ ನೊವಾಕ್ ಜೊಕೊವಿಚ್

Novak Djokovic 9

ಇತ್ತೀಚೆಗೆ ಮುಕ್ತಾಯವಾದ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್, ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್‌ರನ್ನು ಮಣಿಸಿ ಸತತ ನಾಲ್ಕನೇ ಮತ್ತು ಒಟ್ಟಾರೆ ಏಳನೇ ಬಾರಿ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಕ್ಕಿದ್ದರು. ಫೆಡರರ್-ನಡಾಲ್-ಜೊಕೊವಿಚ್ ಪೈಪೋಟಿಯಲ್ಲಿ ನಡಾಲ್‌ ಮುಂದಿದ್ದರೂ, 21 ಪ್ರಶಸ್ತಿ ಗೆದ್ದಿರುವ ಜೊಕೊವಿಚ್ ಸಾಧನೆ ಗಮನಾರ್ಹ

ವೈಯಕ್ತಿಕ ಪ್ರತಿಷ್ಠೆಯ ಕ್ರೀಡೆಯೆಂದೇ ಚಿರಪರಿಚಿತವಾಗಿರುವ ಟೆನಿಸ್ ಅಂಗಳದಲ್ಲಿ ಕಳೆದೆರಡು ದಶಕಗಳಿಂದ ತ್ರಿವಳಿಗಳ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಗೆ ಅಭಿಮಾನಿಗಳು ಸಾಕ್ಷಿಯಾಗುತ್ತಲೇ ಬಂದಿದ್ದಾರೆ. ಸರ್ಬಿಯಾದ ನೊವಾಕ್‌ ಜೊಕೊವಿಚ್, ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಸ್ವಿಝರ್‌ಲ್ಯಾಂಡ್‌ನ ರೋಜರ್ ಫೆಡರರ್ - ಈ ತ್ರಿಮೂರ್ತಿಗಳು 21ನೇ ಶತಮಾನದಲ್ಲಿ ಟೆನಿಸ್ ಆಟವನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸಿದ್ದಾರೆ ಎಂಬುದು ನಿರ್ವಿವಾದ.

22 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ನಡಾಲ್‌ ಮುಂದಿದ್ದರೂ, ತಲಾ 21 ಪ್ರಶಸ್ತಿಗಳ ಜೊತೆ ಜೊಕೊವಿಚ್ ಮತ್ತು ತಾಳ್ಮೆಯ ಪ್ರತಿರೂಪದಂತಿರುವ ಫೆಡರರ್ ರೇಸ್ ಅನ್ನು ಜೀವಂತವಾಗಿರಿಸಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಫೆಡರರ್, ಗಾಯದ ಕಾರಣದಿಂದ ಟೆನಿಸ್ ಅಂಗಳದಿಂದ ದೂರ ಉಳಿದಿದ್ದಾರೆ. ಅವರ ಅನುಪಸ್ಥಿತಿಯು ಉಳಿದಿಬ್ಬರಿಗೆ ವರವಾಗಿರುವುದಂತೂ ನಿಜ.

ಕಳೆದ ಭಾನುವಾರವಷ್ಟೇ ಮುಕ್ತಾಯವಾದ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ 35 ವರ್ಷದ ನೊವಾಕ್ ಜೊಕೊವಿಚ್, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎದುರಾಳಿ ನಿಕ್ ಕಿರ್ಗಿಯೊಸ್‌ ಅವರನ್ನು ಮಣಿಸಿ, ಸೆಂಟರ್‌ ಕೋರ್ಟ್‌ನಲ್ಲಿ ಸತತ ನಾಲ್ಕನೇ ಮತ್ತು ಒಟ್ಟಾರೆ ಏಳನೇ ಬಾರಿ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಕ್ಕಿದ್ದರು.

ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಸೋತರೂ ನಂತರದ ಎರಡು ಸೆಟ್ ಗೆದ್ದು ಜೊಕೊವಿಚ್ ಮುನ್ನಡೆ ಸಾಧಿಸಿದ್ದರು. ಟೈಬ್ರೇಕರ್‌ಗೆ ಸಾಗಿದ ನಿರ್ಣಾಯಕ ಸೆಟ್‌ನಲ್ಲಿ 7-6 ಅಂತರದಲ್ಲಿ ಗೇಮ್ ಗೆದ್ದು ಪಂದ್ಯವನ್ನೂ ಗೆದ್ದರು. ಅದಕ್ಕೂ ಮೊದಲು, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲೂ ನೊವಾಕ್ ಮೊದಲ ಗೇಮ್‌ನಲ್ಲಿ ಎದುರಾಳಿಗೆ ಶರಣಾಗಿದ್ದರು. ಆದರೆ, ಆ ಬಳಿಕ ಮೈಕೊಡವಿ ನಡೆಸಿದ ಹೋರಾಟದಲ್ಲಿ ಗೆಲುವಿನ ನಗೆ ಬೀರಿದ್ದರು. ಆ ಮೂಲಕ, 21ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸಿದ ದಾಖಲೆವೀರರ ಪಟ್ಟಿಯಲ್ಲಿ ಫೆಡರರ್ ಜತೆ ಸೇರಿದರು. ಕಳೆದ ವರ್ಷದ ವಿಂಬಲ್ಡನ್‌ನ ರೋಚಕ ಫೈನಲ್ ಪಂದ್ಯದಲ್ಲಿ ಫೆಡರರ್ ಮಣಿಸಿ ಜೊಕೊವಿಚ್ ಚಾಂಪಿಯನ್ ಆಗಿದ್ದರು.

ಶ್ರೇಯಾಂಕದಲ್ಲಿ ವಿಶ್ವದಾಖಲೆ

Image
Novak Djokovic 2

2020ರ ಫೆಬ್ರವರಿ ಮೂರರಂದು ಅಸೋಸಿಯೇಷನ್ ಆಫ್ ಟೆನಿಸ್‌ ಪ್ರೊಫೆಷನಲ್ಸ್ (ಎಟಿಪಿ) ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದ ಜೊಕೊವಿಚ್, ಆ ಬಳಿಕ ಸತತ 361 ವಾರಗಳ ಕಾಲ ನಂ.1 ಟೆನಿಸಿಗನಾಗಿ ಮೆರೆದಿದ್ದರು. 1973ರ ಬಳಿಕ ಗಣಕೀಕೃತ ದಾಖಲೆ ವ್ಯವಸ್ಥೆ ಜಾರಿಗೆ ಬಂದ ನಂತರದ ವರ್ಷಗಳಲ್ಲಿ ಇಷ್ಟೊಂದು ಸುದೀರ್ಘ ಅವಧಿಗೆ ಓರ್ವ ಆಟಗಾರ ಅಗ್ರಸ್ಥಾನದಲ್ಲಿ ಮುಂದುವರಿದದ್ದು ಇದೇ ಮೊದಲಾಗಿತ್ತು. ದುಬೈ ಚಾಂಪಿಯನ್‌ಶಿಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೆಕ್ ರಿಪಬ್ಲಿಕ್ ಆಟಗಾರ ಜಿರಿ ವೆಸ್ಲಿಗೆ ಶರಣಾಗುವುದರ ಮೂಲಕ ಜೊಕೊವಿಚ್ ಅಗ್ರ ಶ್ರೇಯಾಂಕದಿಂದ ಹೊರಬಿದ್ದಿದ್ದರು. ಆ ಬಳಿಕ, 27ನೇ ಸ್ಥಾನದಲ್ಲಿದ್ದ ಡ್ಯಾನಿಯಲ್ ಮೆಡ್ವಡೋವ್ ಅಗ್ರಸ್ಥಾನ‌ಕ್ಕೇರಿದ್ದರು. ದಶಕಗಳ ಪ್ರತಿಸ್ಪರ್ಧಿ ಫೆಡರರ್ ಅವರು 310 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು.

ಕೋವಿಡ್ ಲಸಿಕೆ ರಗಳೆ

ಕೊರೊನಾ ವೈರಸ್ ಸುಳಿಯಿಂದ ಹೊರಬರಲು ಜಗತ್ತಿನ ಬಹುತೇಕ ರಾಷ್ಟಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿವೆ. ಆದರೆ, ನೊವಾಕ್ ಜೊಕೊವಿಚ್ ಲಸಿಕೆ ಪಡೆಯಲು ಒಪ್ಪಿರಲಿಲ್ಲ. ಇದಕ್ಕಾಗಿ ಯಾವ ಬೆಲೆ ಬೇಕಾದರೂ ತೆರಲು ತಾನು ಸಿದ್ಧ ಎಂದು‌ ಸರ್ಬಿಯಾದ ಸ್ಟಾರ್ ಆಟಗಾರ ದೃಢ ನಿರ್ಧಾರ ಘೋಷಿಸಿದ್ದರು. "ನನ್ನ ದೇಹಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕುಗಳು ಯಾವುದೇ ಪ್ರಶಸ್ತಿ ಅಥವಾ ಬೇರೆ ಎಲ್ಲದಕ್ಕಿಂತಲೂ ಹೆಚ್ಚು ಮುಖ್ಯವಾಗಿವೆ," ಎಂಬುದು ಅವರ ಹೇಳಿಕೆ.

ಇದೇ ವೇಳೆ ತಾವು ಲಸಿಕೆ ವಿರೋಧಿಯಲ್ಲ ಎಂಬುದನ್ನು ಕೂಡ ಜೊಕೊವಿಚ್ ಸ್ಪಷ್ಟಪಡಿಸಿದ್ದರು.
"ನಾನು ಎಂದಿಗೂ ಲಸಿಕೆಗೆ ವಿರುದ್ಧವಾಗಿಲ್ಲ. ಜಾಗತಿಕವಾಗಿ, ಪ್ರತಿಯೊಬ್ಬರೂ ಈ ವೈರಸ್ ಅನ್ನು ನಿಯಂತ್ರಿಸಲು ಮತ್ತು ಈ ವೈರಸ್‌ಗೆ ಶೀಘ್ರದಲ್ಲೇ ಅಂತ್ಯ ಹಾಡಲು ದೊಡ್ಡ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ,” ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕೋವಿಡ್ ಲಸಿಕೆ ಪಡೆಯದ ಕಾರಣ ವರ್ಷದ ಮೊದಲ ಗ್ರ್ಯಾನ್‌ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ವೇಳೆ ಭಾರೀ ಹೈಡ್ರಾಮವೇ ನಡೆದು, ಜೊಕೊವಿಚ್ ವೀಸಾವನ್ನೇ ಆಸ್ಟ್ರೇಲಿಯಾ ಸರ್ಕಾರ ರದ್ದುಗೊಳಿಸಿತ್ತು. ಆದರೆ ಸರ್ಕಾರದ ವಿರುದ್ಧದ ಕಾನೂನು ಹೋರಾಟದಲ್ಲಿ ಮೊದಲು ಗೆಲುವು ಪಡೆದಿದ್ದ ನೊವಾಕ್, ಆಡಲು ತಯಾರಿ ನಡೆಸಿದ್ದರು. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿಗೆ ಸರ್ಬಿಯಾದ ಆಟಗಾರನ ವೀಸಾ ರದ್ದುಪಡಿಸಿದ ಕಾರಣ ಜೊಕೊವಿಚ್ ಅನಿವಾರ್ಯವಾಗಿ ಮೆಲ್ಬೋರ್ನ್‌ನಿಂದ ವಾಪಸ್‌ ತೆರಳಿದ್ದರು.

ಯುದ್ಧಭೂಮಿಯಲ್ಲಿ ಅಭ್ಯಾಸ

Image
Novak Djokovic 11

1987ರ ಮೇ 22ರಂದು ರಿಪಬ್ಲಿಕ್ ಆಫ್ ಯುಗೊಸ್ಲಾವಿಯಾದಲ್ಲಿ ಜನಿಸಿದ ಜೊಕೊವಿಚ್, ತನ್ನ ಇಬ್ಬರು ಸಹೋದರರು ಟೆನಿಸ್ ಆಡುವುದನ್ನು ನೋಡುತ್ತಲೇ ಬೆಳೆದವರು. 1990ರ ಅವಧಿಯಲ್ಲಿ ಸರ್ಬಿಯಾದಿಂದ ಸ್ವಾತಂತ್ರ್ಯ ಬಯಸಿ ಕೊಸೊವೊ ಪ್ರಾಂತ್ಯದಲ್ಲಿ ದೊಡ್ಡ ಹೋರಾಟ ಆರಂಭವಾಗಿತ್ತು. ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿ ಯುದ್ಧ ಪ್ರಾರಂಭವಾಗಿತ್ತು. ಸಾವಿರಾರು ಮಂದಿ ಈ ಯುದ್ಧದಲ್ಲಿ ಪ್ರಾಣ ತೆತ್ತಿದ್ದರು. ಬಾಂಬ್‌ಗಳ ನಿರಂತರ ದಾಳಿಯ ಭೀತಿಯ ನಡುವೆಯೇ ಜೊಕೊವಿಚ್, ಸುರಕ್ಷಿತ ತಾಣಗಳನ್ನು ಹುಡುಕಿಕೊಂಡು ಟೆನಿಸ್ ಅಭ್ಯಾಸ ನಡೆಸುತ್ತಿದ್ದರು.

ತನ್ನ ನಾಲ್ಕನೇ ವಯಸ್ಸಿನಲ್ಲೇ ಟೆನಿಸ್ ಅಭ್ಯಾಸ ಆರಂಭಿಸಿದ್ದ ಜೊಕೊವಿಚ್, ಆರನೇ ವಯಸ್ಸಿನಲ್ಲಿ ಸರ್ಬಿಯಾದ ಆಟಗಾರ ಮತ್ತು ತರಬೇತುದಾರನಾಗಿದ್ದ ಗೆಲೆನಾ ಜೆನ್ಸಿಕ್ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. 1999ರವರೆಗೂ ಜೆನ್ಸಿಕ್ ಗರಡಿಯಲ್ಲಿ ಪಳಗಿದ ಜೊಕೊವಿಚ್‌ರಲ್ಲಿ ವೃತ್ತಿಪರ ಆಟಗಾರನಾಗುವ ಎಲ್ಲ ಸಾಧ್ಯತೆಗಳನ್ನು ಗಮನಿಸಿದ ಜೆನ್ಸಿಕ್, ಮತ್ತಷ್ಟು ಸುಧಾರಿತ ತರಬೇತಿ ಪಡೆಯಲು ತಿಳಿಸಿ, ಕ್ರೊಯೇಷಿಯಾದ ಮಾಜಿ ಆಟಗಾರ ನಿಕೋಲಾ ಪಿಲಿಕ್ ಅವರ ಬಳಿ ಕಳುಹಿಸಿಕೊಟ್ಟರು. 12 ವರ್ಷದವನಿದ್ದಾಗಲೇ ಸರ್ಬಿಯಾದಿಂದ ಜರ್ಮನಿಯ ನಿಕೋಲ ಪಿಲಿಕ್ ಅಕಾಡೆಮಿಯತ್ತ ಜೊಕೊವಿಚ್ ಪ್ರಯಾಣ ಬೆಳೆಸಿದರು.

ಮೊದಲ ಪ್ರಶಸ್ತಿ

Image
Novak Djokovic 5

2001ರಲ್ಲಿ ತನ್ನ 14ನೇ ವಯಸ್ಸಿನಲ್ಲೇ ಜೊಕೊವಿಚ್ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಯುರೋಪಿಯನ್ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದ ಜೊಕೊವಿಚ್, ಅದೇ ಟೂರ್ನಿಯಲ್ಲಿ ತಮ್ಮ ತಂಡವನ್ನೂ ಗೆಲುವಿನತ್ತ ಮುನ್ನಡೆಸಿದ್ದರು. ಅದೇ ವರ್ಷ ನಡೆದ ಜೂನಿಯರ್ ಡೇವಿಸ್ ಕಪ್‌ನಲ್ಲಿ ರಿಪಬ್ಲಿಕ್ ಆಫ್ ಯುಗೊಸ್ಲಾವಿಯಾ ತಂಡವನ್ನು ಪ್ರತಿನಿಧಿಸಿದ್ದ ಜೊಕೊವಿಚ್, ಸಿಂಗಲ್ಸ್ ವಿಭಾಗದ ಫೈನಲ್ ಫೈಟ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದರು.

ಜೂನಿಯರ್ ವಿಭಾಗದ ಸಿಂಗಲ್ಸ್‌ನಲ್ಲಿ ಜೊಕೊವಿಚ್ 40-11 ಗೆಲುವಿನ ದಾಖಲೆ ಹೊಂದಿದ್ದಾರೆ. ಡಬಲ್ಸ್ ವಿಭಾಗದಲ್ಲಿ 23-6 ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. 2003ರಲ್ಲಿ ಎಟಿಪಿ ಚಾಲೆಂಜರ್ಸ್ ಸೀರೀಸ್ ಗೆದ್ದ ಬಳಿಕ, 2004ರಲ್ಲಿ ವಿಶ್ವ ಜೂನಿಯರ್ ಶ್ರೇಯಾಂಕದಲ್ಲಿ ಜೊಕೊವಿಚ್ 24ನೇ ಸ್ಥಾನಕ್ಕೇರಿದ್ದರು.

2005ರಲ್ಲಿ‌ ಮೊದಲ ಗ್ರ್ಯಾನ್‌ ಸ್ಲ್ಯಾಮ್

Image
Novak Djokovic 4

2005ರಲ್ಲಿ‌ ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ಜೊಕೊವಿಚ್
ಯಶಸ್ವಿಯಾದರು. ಆದರೆ, ಮೊದಲ ಸುತ್ತಿನಲ್ಲೇ ರಷ್ಯಾದ ಖ್ಯಾತ ಆಟಗಾರ ಮರಾತ್ ಸಫಿನ್ ವಿರುದ್ಧ ಸೋಲು ಅನುಭವಿಸಿ ಟೂರ್ನಿಯಿಂದಲೇ ಹೊರನಡೆದರು. ಆ ಮೂಲಕ ತಮ್ಮ ವೃತ್ತಿಜೀವನದ ಮೊತ್ತಮೊದಲ ಗ್ರ್ಯಾನ್‌ ಸ್ಲ್ಯಾಮ್ ಪ್ರವೇಶದಲ್ಲಿ ನೊವಾಕ್ ನಿರಾಸೆ ಅನುಭವಿಸಿದ್ದರು.

2006ರಲ್ಲಿ ಎರಡು ಎಟಿಪಿ ಟೂರ್ನಿಗಳನ್ನು ಗೆಲ್ಲುವುದರ ಮೂಲಕ ತಮ್ಮ‌ ಟ್ರೋಫಿ ಹಂಟ್ ಆರಂಭಿಸಿದ್ದರು. ಡಚ್ ಓಪನ್ ಮತ್ತು ಮೊಸೆಲ್ಲೆ ಓಪನ್ ಗೆದ್ದ ಬಳಿಕ ಅದೇ ವರ್ಷ ಎಟಿಪಿ ಶ್ರೇಯಾಂಕದಲ್ಲಿ ಜೊಕೊವಿಚ್, ಮೊದಲನೇ ಬಾರಿಗೆ ಅಗ್ರ 20ರ ಒಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಫೆಡರರ್‌, ನಡಾಲ್‌ರನ್ನು ಮಣಿಸಿದ ನೊವಾಕ್

2007ರಲ್ಲಿ‌ ನಡೆದ ರೋಜರ್ ಕಪ್ ಟೂರ್ನಿಯಲ್ಲಿ ವಿಶ್ವದ ಮೂರು ಅಗ್ರ ಕ್ರಮಾಂಕದ ಆಟಗಾರರನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದ ನೊವಾಕ್, ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಆಂಡಿ ರಾಡಿಕ್, ಸೆಮಿಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಹಾಗೂ ಫೈನಲ್‌ನಲ್ಲಿ ನಂ.1 ಆಟಗಾರ ರೋಜರ್ ಫೆಡರರ್ ಸೋಲಿಸಿ ಜೊಕೊವಿಚ್ ಚಾಂಪಿಯನ್ ಆಗಿದ್ದರು. ಅದೇ ವರ್ಷ ಸರ್ಬಿಯಾದ ಶ್ರೇಷ್ಠ ಅಥ್ಲೀಟ್ ಗೌರವದ ಜೊತೆಗೆ ಗೋಲ್ಡನ್ ಬ್ಯಾಡ್ಜ್ ಪಡೆದಿದ್ದರು.

2008: ಮೊದಲ ಗ್ರ್ಯಾನ್‌ ಸ್ಲ್ಯಾಮ್ ಪ್ರಶಸ್ತಿ

Image
Novak Djokovic 8

21 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡೆಯ ನೊವಾಕ್‌ ಜೊಕೊವಿಚ್ ತಮ್ಮ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಗೆದ್ದಿದ್ದು 2008ರಲ್ಲಿ. ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ನ ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಮಣಿಸಿ ಫೈನಲ್ ಪ್ರವೇಶಿಸಿದ್ದ ಜೊಕೊವಿಚ್, ಪ್ರಶಸ್ತಿ ಸುತ್ತಿನಲ್ಲಿ ಶ್ರೇಯಾಂಕ ರಹಿತ ಆಟಗಾರ ಜೋ ವಿಲ್ಫ್ರೆಡ್ ತ್ಸೋಂಗರನ್ನು ಮಣಿಸಿ ಟೆನಿಸ್ ಜಗತ್ತು ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ್ದರು.

ಅದೇ ವರ್ಷ ಮೊದಲ ಬಾರಿಗೆ ಟೆನಿಸ್ ಮಾಸ್ಟರ್ಸ್ ಕಪ್ ಕೂಡ ಜೊಕೊವಿಚ್ ಪಾಲಾಗಿತ್ತು. 2010ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಸರ್ಬಿಯಾ, ಡೇವಿಸ್‌ ಕಪ್ ಗೆಲ್ಲುವಲ್ಲಿ ಜೊಕೊವಿಚ್ ಪ್ರಮುಖ ಪಾತ್ರ ವಹಿಸಿದ್ದರು.

2013ರಲ್ಲಿ ಆಸ್ಟ್ರೇಲಿಯಾ ಓಪನ್, ಯುಎಸ್ ಓಪನ್ ಹಾಗೂ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದ ಜೊಕೊವಿಚ್, 43 ಪಂದ್ಯಗಳಲ್ಲಿ ಸೋಲರಿಯದ ಸರದಾರನಾಗಿ ಮುನ್ನಡೆದಿದ್ದರು. ಐದು ಎಟಿಪಿ ವರ್ಲ್ಡ್‌ ಟೂರ್ ಮಾಸ್ಟರ್ಸ್ 1000 ಸೇರಿದಂತೆ ಹತ್ತು ಪ್ರಮುಖ ಟೂರ್ನಿಗಳಲ್ಲಿ ಅದೇ ವರ್ಷ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದರು. ಒಂದೇ ವರ್ಷ ಎಟಿಪಿ ವರ್ಲ್ಡ್‌ ಟೂರ್ ಟೂರ್ನಿಗಳಲ್ಲಿ 12 ಮಿಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಗೆದ್ದ ದಾಖಲೆಯೂ ಜೊಕೊವಿಚ್ ಹೆಸರಲ್ಲಿದೆ.

2012, 2013ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದ ಅವರು, 2014ರಲ್ಲಿ ಸ್ಟಾನ್ ವಾಂವ್ರಿಕಾ ವಿರುದ್ಧ ಸೋತರು. ಆದರೆ ಮರುವರ್ಷವೇ (2015) ವಾಂವ್ರಿಕಾರನ್ನು ಸೆಮಿಫೈನಲ್‌ನಲ್ಲಿ ಮಣಿಸಿ, ಫೈನಲ್ ಪಂದ್ಯದಲ್ಲಿ ಆಂಡಿ ಮರ್ರೆ ಮಣಿಸಿ ಮತ್ತೆ ಚಾಂಪಿಯನ್ ಆದರು. 2014, 2015 ಹಾಗೂ 2016ರಲ್ಲಿ ಮಿಯಾಮಿ ಓಪನ್ ಟೂರ್ನಿ ಗೆದ್ದ ಜೊಕೊವಿಚ್, ಇದೇ ವರ್ಷಗಳಲ್ಲಿ ಎಟಿಪಿ ವರ್ಲ್ಡ್‌ ಟೂರ್ ಫೈನಲ್ಸ್ ಕೂಟಗಳಲ್ಲೂ ಚಾಂಪಿಯನ್ ಆದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸುವ ಯೋಜನೆಯಲ್ಲಿ ಜೊಕೊವಿಚ್ ಕಣಕ್ಕಿಳಿದಿದ್ದರಾದರೂ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೋತಿದ್ದರು. ಆ ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲೂ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. ನಂತರ ನಡೆದ ಮಿಶ್ರ ಡಬಲ್ಸ್‌ನಲ್ಲೂ ಜೊಕೊವಿಚ್-ನೀನಾ ಸ್ಟೊಜನೊವಿಕ್ ಜೋಡಿಗೆ ಸೋಲಾಗಿತ್ತು.

32 ಗ್ರ್ಯಾನ್ ಸ್ಲ್ಯಾಮ್ ಫೈನಲ್ಸ್, 21 ಕಿರೀಟ

Image
Novak Djokovic 10

ಇದುವರೆಗೂ 32 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಫೈನಲ್ಸ್ ತಲುಪಿರುವ ಜೊಕೊವಿಚ್, 21 ಬಾರಿ ಚಾಂಪಿಯನ್ ಪಟ್ಟವನ್ನಲಂಕರಿಸಿದ್ದಾರೆ. ಇದರಲ್ಲಿ ಒಂಬತ್ತು ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್ಸ್ ತಲುಪಿದ್ದು, ಒಂಬತ್ತು ಬಾರಿಯೂ ಗೆಲುವು ದಾಖಲಿಸಿರುವುದು ವಿಶೇಷ. ಉಳಿದಂತೆ ಫ್ರೆಂಚ್ ಓಪನ್, ಯುಎಸ್ ಓಪನ್ ಹಾಗೂ ವಿಂಬಲ್ಡನ್ ಫೈನಲ್ ಪಂದ್ಯಗಳಲ್ಲಿ 11 ಬಾರಿ ಸೋಲು ಕಂಡಿದ್ದಾರೆ. ಇತ್ತೀಚೆಗಷ್ಟೇ ಮುಗಿದ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್‌ರನ್ನು ಮಣಿಸುವ ಮೂಲಕ ಜೊಕೊವಿಚ್ ಏಳನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ವಿಲಿಯಂ ರೆನ್ಶೋ ಮತ್ತು ದಿಗ್ಗಜ ಆಟಗಾರ ಪೀಟ್ ಸಾಂಪ್ರಾಸ್ ದಾಖಲೆಯನ್ನು ಸಮದೂಗಿಸಿದ್ದಾರೆ. ಎಂಟು ವಿಂಬಲ್ಡನ್ ಗೆದ್ದಿರುವ ಫೆಡರರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

2014ರವರೆಗೂ ಕೇವಲ ಏಳು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದ ಜೊಕೊವಿಚ್, ಆ ಬಳಿಕದ ನಾಲ್ಕು ವರ್ಷಗಳಲ್ಲಿ ಒಂಬತ್ತು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. ಅದೇ ವೇಗ ಇನ್ನೂ ಮುಂದುವರಿದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್