ಭಾನುವಾರದ ಓದು | ಮೈದುಂಬಿ ಹರಿಯುತ್ತಿರುವ ತುಮಕೂರಿನ ಜಯಮಂಗಲಿ ನದಿ ಕಥನ

ಪ್ರವಾಹ ತಂದೊಡ್ಡುವ ಸಂಕಷ್ಟಗಳ ನಡುವೆಯೂ ನದಿ ಎಂಬುದು ಜನಸಾಮಾನ್ಯರ ಎದೆಯಲ್ಲಿ ನೆಮ್ಮದಿ ಮೂಡಿಸುವ ಸಂಗತಿ. ಆದರೆ, ಕರ್ನಾಟಕದ ಬಯಲುಸೀಮೆಯ ನದಿಗಳು ತುಂಬಿ ಹರಿದಿದ್ದಕ್ಕಿಂತಲೂ ಬರಿದಾಗಿ ಸುದ್ದಿಯಾಗುವುದೇ ಹೆಚ್ಚು. ಇಂಥ ನದಿಗಳಲ್ಲಿ ಜಯಮಂಗಲಿಯೂ ಒಂದು. ಹಲವು ಕಾರಣಕ್ಕೆ ವಿಶೇಷವೆನಿಸಿದ ಈ ನದಿಯ ಸ್ವಗತ ಇಲ್ಲಿದೆ

ನಾನು ಜಯಮಂಗಲಿ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟಸಾಲುಗಳಲ್ಲಿ ಹುಟ್ಟಿ, ಆಂಧ್ರದ ಸಂಗಮೇಶ್ವರದಲ್ಲಿ ನನ್ನ ಅಕ್ಕ ಉತ್ತರ ಪಿನಾಕಿನಿಯನ್ನು ಕೂಡಿಕೊಂಡು ಬಂಗಾಳ ಸಮುದ್ರ ಸೇರುವವಳು. ಕರ್ನಾಟಕದ ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಆಂಧ್ರಪ್ರದೇಶದ ಮಡಕಸಿರಾ ತಾಲೂಕುಗಳಲ್ಲಿ ನನ್ನ ಪ್ರಯಾಣ. ಸುಮಾರು 80 ಕಿಲೋಮೀಟರ್ ಹರಿಯುವೆ. ದೇವರಾಯನದುರ್ಗದ ಬಂಡೆಗಲ್ಲಿನ ಬುಡದಲ್ಲಿರುವ ಪುಟ್ಟ ಕೊಳದಲ್ಲಿ ಹುಟ್ಟಿ, ಆ ವಿಶಾಲ ಅರಣ್ಯದ ಮರಗಿಡಬಳ್ಳಿಗಳ ಬೇರುಗಳಲ್ಲಿ ಹನಿಯಾಗಿ ಜಿನುಗಿ, ಸಣ್ಣ ತೊರೆಯಾಗಿ ಮಾರ್ಪಟ್ಟು ಇರಕಸಂದ್ರದ ಬೃಹತ್ ಕೆರೆಗೆ ಜೀವದಾಯಿನಿಯಾಗಿ, ಅಲ್ಲಿಂದ ಮುಂದಕ್ಕೆ ನನಗೊಂದು ನದಿಯ ಸ್ವರೂಪ ಪ್ರಾಪ್ತವಾಗುತ್ತದೆ.

ನಾನೇ ಒಂದು ಪುಟ್ಟ ನದಿಯಾದರೆ, ನನಗೂ ಎರಡು ಉಪನದಿಗಳಿವೆ. ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿಯ ಬಳಿ ದೊಡ್ಡಬಳ್ಳಾಪುರದ ಕಡೆಯಿಂದ ಬರುವ ಗರುಡಾಚಲ ಮತ್ತು ಅಕ್ಕಿರಾಂಪುರದ ಬಳಿ ಸಿದ್ದರಬೆಟ್ಟದ ಕಡೆಯಿಂದ ಬರುವ ಸುವರ್ಣಮುಖಿ ನದಿಗಳು ನನ್ನೊಂದಿಗೆ ಸೇರಿಕೊಳ್ಳುತ್ತವೆ. ಅಲ್ಲಿಂದ ಮುಂದಕ್ಕೆ ನನ್ನ ಹರಿವು ಮತ್ತಷ್ಟು ವಿಶಾಲವಾಗುತ್ತದೆ. ಗರುಡಾಚಲವಂತೂ ಮಳೆ ಅಭಾವದಿಂದ ಬರಡಾಗಿ ಬಹುತೇಕ ಜನಸಮುದಾಯದ ವಿಸ್ಮೃತಿಗೆ ಸರಿದಿತ್ತು. ಈ ವರ್ಷ ಅದೂ ಸಹ ತನ್ನ ಜಾಡು ಕಂಡುಕೊಂಡಿದ್ದು ವಿಶೇಷ.

2021 ಮತ್ತು 2022ನೇ ಇಸವಿ ನನ್ನ ಬದುಕಿನ ಮರೆಯಲಾರದ ವರ್ಷಗಳು. ಮೂರು ದಶಕಗಳು ಬರಡಾಗಿದ್ದ ನನ್ನ ಒಡಲು ತುಂಬಿ ಹರಿದ ವರ್ಷಗಳಿವು. ಒಂದೆರಡು ದಿನವಲ್ಲ - ಸತತ ಮೂರ್ನಾಲ್ಕು ತಿಂಗಳು. ಮಧುಗಿರಿ ತಾಲೂಕು ಕೊಡಿಗೇನಹಳ್ಳಿಯ ಜಯಮಂಗಲಿ ಸೇತುವೆ ಬಳಿ ನನ್ನನ್ನು ಕಣ್ತುಂಬಿಕೊಳ್ಳಲು ಜನಜಾತ್ರೆ. ಕಾಲು ಹಾದಿಗಳಗುಂಟ ಓಡೋಡಿ ಬರುವವರೇನು, ವಾಹನಗಳನ್ನು ನಿಲ್ಲಿಸಿ ನೋಡುವವರೇನು! ಅರ್ಧ ಕಿಲೋಮೀಟರ್ ಉದ್ದದ ಸೇತುವೆಯಡಿ "ಮರ್‍ರೋ..." ಎಂದು ಹರಿಯುತ್ತಿದ್ದೆ ನಾನು. ಅದೇ ಅವರ ಸಂಭ್ರಮಕ್ಕೆ ಕಾರಣವಾಗಿತ್ತು. ಇಂಥದ್ದೇ ದೃಶ್ಯಗಳು ಕೋಡಗದಾಲದ ಹತ್ತಿರ, ವೀರಾಪುರದ ತಡೆ ಅಣೆ ಬಳಿ, ಪುರವರದ ಹಳೇ ಸೇತುವೆ, ಕೊರಟಗೆರೆ ಬಳಿಯ ಕೋಡ್ಲಾಪುರ ಸೇತುವೆ, ತೀತಾ ಅಣೆಕಟ್ಟೆಯ ಬಳಿಯೂ ಇತ್ತು.

Image

1991ರಲ್ಲಿ ಒಮ್ಮೆ ಹೀಗೆ ತುಂಬಿ ಹರಿದಿದ್ದೆ ನಾನು. 2007 ಮತ್ತು 2016ರಲ್ಲಿಯೂ ಉತ್ತಮ ಮಳೆಯಾಗಿ ನನ್ನೊಡಲು ತುಂಬಿತ್ತು. ಆದರೆ, ಒಂದೆರಡು ದಿನ ಮಾತ್ರ, ನಂತರದ ಕೆಲ ವರ್ಷ ಅಲ್ಪ-ಸ್ವಲ್ಪ ನೀರು ಬಂದಿತ್ತದಾರೂ, ನನ್ನಕ್ಕ ಪಿನಾಕಿನಿಯನ್ನು ತಲುಪಿರಲಿಲ್ಲ. ಆದರೆ, ಈ ವರ್ಷ ನನ್ನ ಗಾತ್ರ ಮೀರಿ ಹರಿದಿದ್ದೇನೆ. ನನ್ನನ್ನೇ ನಂಬಿರುವ ಪರಿಗಿ ಕೆರೆಯನ್ನೂ ಯಶಸ್ವಿಯಾಗಿ ಸೇರಿದ ಸಮಾಧಾನ ನನ್ನದು. 90ರ ದಶಕದಿಂದೀಚೆಗೆ ಹುಟ್ಟಿದ ಮಂದಿಗೆ ನಾನು ಮೈದುಂಬಿ ಹರಿದಿದ್ದು ಒಂದು ಹೊಸ ನೋಟವಾದರೆ, ಹಳೆಯ ತಲೆಮಾರಿಗೆ ನನ್ನಲ್ಲಿ ಹಿಂದಿನ ಜಲಸಮೃದ್ಧಿಯನ್ನು ಮತ್ತೆ ಕಂಡ ಸೋಜಿಗ, ಜೊತೆಗೆ ಆನಂದ.

ನಾನು ಸಮೃದ್ಧವಾಗಿ ಹರಿಯುತ್ತಿದ್ದ ಕಾಲದಲ್ಲಿ ನದಿ ದಡದಲ್ಲಿದ್ದ ರೈತರು ಭತ್ತ, ವೀಳ್ಯದೆಲೆ, ಕಬ್ಬು, ರೇಷ್ಮೆ ಇತ್ಯಾದಿ ಬೆಳೆಯುತ್ತಿದ್ದರು. ನದಿ ನೀರನ್ನು ಕಾಲುವೆಗಳ ಮೂಲಕ ಕೆರೆಗಳಿಗೆ ಹಾಯಿಸಿಕೊಂಡು ಅಲ್ಲಿಯೂ ವರ್ಷಕ್ಕೆರಡು ಬೆಳೆ ತೆಗೆಯುತ್ತಿದ್ದರು. ಹಾಲುಬ್ಬಲು, ಘಂಗಡಲೆ, ಕೊಯಮತ್ತೂರು ಸಣ್ಣ, ಬರೋಡ ಭತ್ತ, ದೇವಮಲ್ಲಿಗೆ, ಹಂಸ, ದೊಡ್ಡ ರಾಗಿ, ಮುಳ್ಳು ಬದನೆ... ಇತ್ಯಾದಿ ಅನೇಕ ದೇಸಿ ತಳಿಗಳನ್ನು ಬೆಳೆಯಲಾಗುತ್ತಿತ್ತು. 70-80ರ ದಶಕದಲ್ಲಿ ಪ್ರತೀ ವರ್ಷ ಕನಿಷ್ಠ 2-3 ತಿಂಗಳಾದರೂ ಹರಿಯುತ್ತಿದ್ದೆ. ಚೆನ್ನಾಗಿ ಮಳೆಯಾದ ವರ್ಷ ನನ್ನಲ್ಲಿ ಆರು ತಿಂಗಳು ನೀರಿನ ಹರಿವು. ಮಳೆಗಾಲದಲ್ಲಿ ಇಷ್ಟು ಹರಿದರೆ ಸಾಕಿತ್ತು. ಉಳಿದ ಅವಧಿಯಲ್ಲಿ ನದಿ ಪಕ್ಕದ ಬಾವಿಗಳು, ಕೆರೆಗಳು, ತಲಪರಿಗೆಗಳು ನೀರಿನಿಂದ ಸಮೃದ್ಧವಾಗಿರುತ್ತಿದ್ದವು.

Image

ಈ ಸಮೃದ್ಧತೆಯನ್ನು ಕಂಡು 1933ರ ಮಾರ್ಚ್ 21ರಂದು, ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು, ಕೊರಟಗೆರೆ ತಾಲೂಕು ಕ್ಯಾಮೇನಹಳ್ಳಿಯ ಬಳಿ ನನಗೊಂದು ಅಣೆಕಟ್ಟು ನಿರ್ಮಿಸಲು ಅಡಿಗಲ್ಲು ಹಾಕುತ್ತಾರೆ. ಈ ಕಲ್ಲಿನ ಅಣೆಕಟ್ಟು ಈಗಲೂ ಸುಭದ್ರವಾಗಿದೆ. ಹಾಗೆಯೇ, ಮಧುಗಿರಿ ತಾಲೂಕಿನ ಪುರವರದ ಬಳಿ ನದಿ ದಾಟಲು ಅನುಕೂಲವಾಗುವಂತೆ 1949ರ ಜುಲೈ 30ರಂದು ಆಗಿನ ಮೈಸೂರು ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸೇತುವೆ ನಿರ್ಮಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಮೈದನಹಳ್ಳಿ ಬಳಿ ನನ್ನ ದಡದಲ್ಲಿಯೇ ಅಪರೂಪದ ಕೃಷ್ಣಮೃಗಗಳನ್ನು ರಕ್ಷಿಸಲು ನೂರಾರು ಎಕರೆಯನ್ನು ವನ್ಯಧಾಮವಾಗಿ ಘೋಷಿಸಲಾಗಿದೆ. ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಸ್ವಚ್ಚಂದವಾಗಿ ಅಡ್ಡಾಡುವ ಕೃಷ್ಣಮೃಗಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. 1985ರಲ್ಲಿ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಬಳಿಯ ತೀತಾ ಗ್ರಾಮದಲ್ಲಿ ನನಗೊಂದು ವಿಶಾಲ ಜಲಾಶಯ ನಿರ್ಮಿಸಲಾಗುತ್ತದೆ. ನಾನು ಎಷ್ಟು ಮೈದುಂಬಿ ಹರಿಯುತ್ತಿದ್ದೆ ಎಂಬುದಕ್ಕೆ ಇವೆಲ್ಲ ಉದಾಹರಣೆಗಳು.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ನೀವೂ ಸಾವಯವ ರೈತರಾ? ಇಲ್ಲಿದೆ ನೋಡಿ, ನೇರ ಮಾರುಕಟ್ಟೆಯ ಹಲವು ಕತೆ

90ರ ದಶಕದ ನಂತರ ನನ್ನ ಚಹರೆ ಬದಲಾಗುತ್ತ ಹೋಯಿತು. ಒಂದು ಕಾಲದಲ್ಲಿ ತಿಂಗಳುಗಟ್ಟಲೆ ಹರಿಯುತ್ತ, ತನ್ನ ಹರಿವಿನುದ್ದಕ್ಕೂ ಹಸಿರಿನ ಚಿತ್ತಾರವನ್ನು ಬರೆಯುತ್ತಿದ್ದ ನಾನು, ನಂತರ ಅಸ್ತಿಪಂಜರವಾಗುತ್ತ ಸಾಗಿದೆ. ಚಂಚಲ ಮಳೆಯ ಜೊತೆಗೆ, ಮನುಷ್ಯರ ಹಸ್ತಕ್ಷೇಪವೂ ಸೇರಿ ನನ್ನೊಡಲ ಮರಳು ಸೂರೆಯಾಗತೊಡಗಿತು. ಮರಳು ಬಗೆದ ಆಳ ಗಾಯಗಳ ಮೇಲೆ ತ್ಯಾಜ್ಯಗಳನ್ನು ಸುರಿದು ತಿಪ್ಪೆಗುಂಡಿ ಮಾಡಿಕೊಂಡರು. ಇದರೊಟ್ಟಿಗೆ ಒತ್ತುವರಿಯ ಕಬಂಧಬಾಹುಗಳ ಕಾಟ. ನಾನು ಹರಿಯುವ ಪಾತ್ರದ ಆಸುಪಾಸು ಇದ್ದ ಹಳ್ಳಿಗಳ ಹಿರಿಯ ತಲೆಮಾರು ನನ್ನನ್ನು ಜತನದಿಂದ ಕಾಪಾಡಿ, ತಮ್ಮ ಕೃಷಿಗೆ, ಜಾನುವಾರುಗಳಿಗೆ, ಕುಡಿಯುವ ನೀರಿಗೆ ಉಪಯೋಗಿಸಿಕೊಂಡರೆ, ಅದೇ ಗ್ರಾಮಗಳ ಹೊಸ ತಲೆಮಾರು ಮರಳು ಬಗೆದು ಮಾರುತ್ತಿದ್ದಾರೆ. ಈ ಎರಡೂ ಅತಿಗಳನ್ನು ನೋಡುವ ದುರ್ದೈವ ನನ್ನದು.

Image

ಇವರು ಮರಳಿನಾಸೆಗೆ ಬಗೆದಿರುವ ಗುಂಡಿಗಳು ಎಷ್ಟು ಅಗಾಧವಾಗಿವೆಯೆಂದರೆ, ಎಂತಹ ಮಳೆ ಬಂದರೂ ಇವುಗಳನ್ನು ತುಂಬಿ ನೀರು ಮುಂದೆ ಸಾಗುವುದು ಅಸಾಧ್ಯ ಎನ್ನುವಂತಾಗಿದೆ! ಹೀಗೆ ನನ್ನೊಡಲು ಬರಡಾಗುತ್ತಿದ್ದಂತೆ, ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೇ ತತ್ವಾರವಾಗಿದೆ, ಸಾವಿರಾರು ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ. ಮರಳು ತೆಗೆದಿರುವ ಕಡೆಯೆಲ್ಲ ವೇಗವಾಗಿ ಸೀಮೆಜಾಲಿ ಪೊದೆಗಳು ವ್ಯಾಪಿಸಿವೆ. ಈ ಪೊದೆಗಳು ಸಹ ನೀರು ಸರಾಗವಾಗಿ ಹರಿಯಲು ಅಡ್ಡಿ.
ಒತ್ತುವರಿ ನನಗೆದುರಾಗಿರುವ ಮತ್ತೊಂದು ಆಪತ್ತು. ನದಿ ದಡದಲ್ಲಿ ಜಮೀನಿರುವವರು ಒತ್ತರಿಸಿ ಬೇಲಿ ಹಾಕಿ ತೆಂಗು, ಅಡಿಕೆ ತೋಟಗಳನ್ನೇ ಮಾಡಿದ್ದಾರೆ. ಇನ್ನು, ಹಳ್ಳಿ, ಪಟ್ಟಣಗಳ ಪಕ್ಕದಲ್ಲಿ ನದಿ ದಂಡೆಗೆ ಮಣ್ಣು ಸುರಿದು ಎತ್ತರ ಮಾಡಿ ಅಂಗಡಿ, ಹೋಟೆಲ್ಲುಗಳನ್ನಿಟ್ಟಿದ್ದಾರೆ. ಸದಾ ಹರಿಯುವ ನದಿಗಳನ್ನೇ ಬಿಡದ ಭೂದಾಹಿಗಳು, ಕಾಲು ಶತಮಾನಕ್ಕೊಮ್ಮೆ ಹರಿಯುವ ನನ್ನನ್ನು ಬಿಟ್ಟಾರೆಯೇ?

ನನ್ನೊಡಲ ನೀರಿನ ಮೂಲ ಕಡಿಮೆಯಾಗಲು ಮತ್ತೊಂದು ಕಾರಣವೆಂದರೆ, ನಾನು ಹುಟ್ಟುವ ದೇವರಾಯನದುರ್ಗದ ಅರಣ್ಯ ನಾಶ. ಬೆಟ್ಟದ ಮೇಲೆ ಭಕ್ತರು, ಪ್ರವಾಸಿಗರ ಅನುಕೂಲಕ್ಕೆಂದು ಯಾತ್ರಿ ನಿವಾಸಗಳು, ವಾಣಿಜ್ಯ ಸಂಕೀರ್ಣಗಳು, ವಾಹನ ನಿಲುಗಡೆ ತಾಣಗಳು ತಲೆ ಎತ್ತುತ್ತಿವೆ. ಗಿಡ-ಮರ ಕಡಿದು, ಜೆಸಿಬಿಗಳಿಂದ ಮಣ್ಣು ಕತ್ತರಿಸಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.

Image
ದೇವರಾಯನದುರ್ಗ

ಇನ್ನು, ದುರ್ಗದ ಬೆಟ್ಟಸಾಲುಗಳ ಕೆಳಭಾಗದಲ್ಲಿ ಕೃಷಿಗಾಗಿ ಒತ್ತುವರಿ, ಕಾಡು ಕಡಿತ ನಡೆಯುತ್ತಲೇ ಇದೆ. ಇವೆಲ್ಲವೂ ಈ ಬೆಟ್ಟಸಾಲುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಂದಿಸಿವೆ. ಅಲ್ಲದೆ, ನದಿ ಜಲಾನಯನ ಪ್ರದೇಶದಲ್ಲಿ ಬರುವ ದುರ್ಗದಹಳ್ಳಿ, ಇರಕಸಂದ್ರ, ಅಕ್ಕಿರಾಂಪುರ ಮುಂತಾದ ಬೃಹತ್ ಕೆರೆಗಳು ಹೂಳು ತುಂಬಿ, ಅವುಗಳ ನೀರು ಹಿಡಿದಿಡುವ ಸಾಮರ್ಥ್ಯವೇ ಕಡಿಮೆಯಾಗಿದೆ. ಅವು ತುಂಬಿದರೂ ಬೇಗ ನೀರು ಖಾಲಿಯಾಗುತ್ತದೆ. ನದಿ ಅಕ್ಕ-ಪಕ್ಕ ಸಾವಿರಾರು ಕೊಳವೆಬಾವಿಗಳಿದ್ದು, ಅವು ಅಂತರ್ಜಲವನ್ನು ಹೀರಿ ಮೇಲ್ಮಣ್ಣು ಒಣಗಿಹೋಗಿದೆ. ಎಷ್ಟೇ ಮಳೆ ಬಂದರೂ ನೀರು ಇಂಗುತ್ತದೆಯೇ ವಿನಾ ಹರಿಯುವುದಿಲ್ಲ.

ಹೀಗೆ, ನಿರ್ಲಕ್ಷ್ಯ ಮಾಡಿರುವ ಹಳ್ಳಿಗಳ ಜೊತೆಗೆ, ನನ್ನನ್ನು ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿರುವ ಹಳ್ಳಿಗಳೂ ಇವೆ. ಅದೇ ಸಂತೋಷದ ವಿಷಯ. ಮರಳು ದೋಚುವವರ ಜೊತೆಗೆ ಮರಳು ಗಣಿಗಾರಿಕೆಗೆ ಸ್ವಯಂ ನಿಷೇಧ ಹಾಕಿಕೊಂಡ ಹಳ್ಳಿಗರ ಮಾದರಿಗೂ ನಾನು ಸಾಕ್ಷಿಯಾಗಿದ್ದೇನೆ. ಕಾಳೇನಹಳ್ಳಿ, ವೀರಾಪುರ, ರೆಡ್ಡಿಹಳ್ಳಿ, ವೀರನಾಗೇನಹಳ್ಳಿ, ಮುದ್ದೇನಹಳ್ಳಿ, ಸ್ವಲ್ಪಮಟ್ಟಿಗೆ ಇಮ್ಮುಡಿಗಾನಹಳ್ಳಿ ಹಾಗೂ ಪುರವರ ಗ್ರಾಮದ ಬಳಿ ನದಿಯಿಂದ ಮರಳು ತೆಗೆಯಲು ಅಲ್ಲಿನ ಸ್ಥಳೀಯರು ಅವಕಾಶ ಕೊಟ್ಟಿಲ್ಲ. ಸ್ವಂತ ಬಳಕೆಗೆ ಬೇಕೆಂದರೆ ಎತ್ತಿನ ಗಾಡಿಯಲ್ಲಿ ಮಾತ್ರ ಮರಳು ಒಯ್ಯಲು ಅವಕಾಶವಿದೆ. ಟ್ರ್ಯಾಕ್ಟರ್ ಅಥವಾ ಲಾರಿ/ ಟಿಪ್ಪರ್‌ಗಳನ್ನು ಯಾವುದೇ ಕಾರಣಕ್ಕೂ ಮರಳು ತುಂಬಲು ತರುವಂತಿಲ್ಲ. ಅಕ್ಕಪಕ್ಕದ ಊರಿನವರಿಗೂ ಇದೇ ನೀತಿ ಅನ್ವಯ. ಪ್ರಭಾವಿ ರಾಜಕಾರಿಣಿಗಳ ಒತ್ತಡ ಬಂದಾಗ್ಯೂ ಜನ ಅದಕ್ಕೆ ಸೊಪ್ಪು ಹಾಕದಿರುವುದು ಅವರ ದಿಟ್ಟತನಕ್ಕೆ ಸಾಕ್ಷಿ. ಹಾಗಾಗಿಯೇ, ಈ ಭಾಗದಲ್ಲಿ ನನ್ನ ಹರವು, ವ್ಯಾಪ್ತಿಯ ನೈಜ ಚಿತ್ರಣವನ್ನು ನೋಡಬಹುದು. ಕೆಲವೆಡೆ ನನ್ನ ಅಗಲವು ಒಂದು ಕಿಲೋಮೀಟರ್‌ಗೂ ಹೆಚ್ಚಾಗಿದೆ.

Image

ಇವರ ಕಷ್ಟಕ್ಕೆ ಪ್ರತಿಫಲವಾಗಿ ಎಂತಹ ಬರಗಾಲ ಬಂದರೂ ಈ ಭಾಗದಲ್ಲಿ ಅಂತರ್ಜಲ ಅಪಾಯದ ಮಟ್ಟಕ್ಕೆ ಇಳಿದಿಲ್ಲ, ಕುಡಿಯುವ ನೀರಿಗೆ ತೊಂದರೆಯಾಗಿಲ್ಲ; ನದಿಯಲ್ಲಿ ಮರಳು ಇರುವುದರಿಂದಲೇ ಇದು ಸಾಧ್ಯವಾಗಿದೆ. ನದಿ ಹರಿಯದಿದ್ದರೂ ಈ ಮರಳಿನಲ್ಲಿ ಒರತೆ ತೋಡಿದರೆ ನೀರು ಬರುತ್ತದೆ. ನೀರು ಇಂಗಿ ಅಂತರ್ಜಲ ಮಟ್ಟ ಉತ್ತಮವಾಗಿರುತ್ತದೆ. ಇದರಿಂದ ಸುತ್ತಮುತ್ತಲ ಕೊಳವೆಬಾವಿಗಳಿಗೆ ಸಮೃದ್ಧ ನೀರು. ಈ ಗುಟ್ಟು ಬಲ್ಲ ಈ ಭಾಗದ ರೈತರು ಮರಳು ತೆಗೆಯಲು ಬಿಟ್ಟಿಲ್ಲ. ಅಷ್ಟೇ ಅಲ್ಲ, ವೀರಾಪುರ ಸುತ್ತಮುತ್ತಲ ಹಲವು ಹಳ್ಳಿಗರು, ಹೆಣ್ಣುಮಕ್ಕಳು ಈಗಲೂ ನದಿಯಲ್ಲಿ ಚಿಲುಮೆ ತೆಗೆದು ಕೊಡಗಳಲ್ಲಿ ನೀರು ಕೊಂಡೊಯ್ಯುತ್ತಾರೆ. ಇಲ್ಲಿನ ನೀರು ಅತ್ಯಂತ ರುಚಿಕರ ಎನ್ನುವ ಇವರ ಮಾತುಗಳನ್ನು ಕೇಳುವುದೇ ಆನಂದ. ನನಗೆ ಅತ್ಯಂತ ತೃಪ್ತಿ ಕೊಡುವ ದೃಶ್ಯಗಳಿವು.

ಇತ್ತೀಚಿನ ದಿನಗಳಲ್ಲಿ ಹಲವು ಕಡೆ ನನಗೆ ಅಡ್ಡಲಾಗಿ ಕಿರು ಅಣೆಕಟ್ಟುಗಳನ್ನು ಹಾಕಲಾಗಿದೆ. ಅಲ್ಲಿ ನೀರು ನಿಂತು ಸುತ್ತಮುತ್ತಲ ಪ್ರದೇಶದ ಅಂತರ್ಜಲ ಮಟ್ಟ ಉತ್ತಮವಾಗಿದೆ. ಅಲ್ಲದೆ ಈ ನೀರಿನಲ್ಲಿ ಸಿಗುವ ಮೀನುಗಳನ್ನು ಹಿಡಿಯಲು ಹೆಂಗಸರು ಮಕ್ಕಳಾದಿಯಾಗಿ ಹಳ್ಳಿಗರು ಗುಂಪುಗುಂಪಾಗಿ ಬರುತ್ತಾರೆ. ಅವರ ಸಂಭ್ರಮ ನೋಡುವುದೇ ಸೊಗಸು.

2021ರಲ್ಲಿ ತಿಂಗಳುಗಟ್ಟಳೆ ನನ್ನೊಳಗೆ ಹರಿದ ನೀರಿನ ಹರಿವು, ಅದರ ಮೊರೆತ, ರಭಸಗಳು ಜನರ ಮನಸ್ಸಿನಲ್ಲಿ ಮುಂದಿನ ಎಷ್ಟೋ ವರ್ಷ ಉಳಿಯುವುದು ಖಚಿತ. ಈ ಸಲ ನದಿ ತುಂಬಿ ಹರಿದಿರುವುದರಿಂದ ಮುಂದಿನ 2-3 ವರ್ಷ ಅಂತರ್ಜಲ ಉಳಿಯಲಿದೆ.

Image

ನಾನು ಪ್ರತೀ ವರ್ಷ ಹರಿಯದಿದ್ದರೂ ನದಿಯಲ್ಲಿ ಮರಳು ಇದ್ದರೆ ನೀರಿನ ಸೆಲೆ ಹಾಗೇ ಇರುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಕಾಳೇನಹಳ್ಳಿ ಮತ್ತಿತರೆ ಗ್ರಾಮಗಳ ಜನರು ಮೇಲ್ಪಂಕ್ತಿ ಹಾಕಿ ತೋರಿಸಿದ್ದಾರೆ. ಇಡೀ ನದಿ ಪಾತ್ರಕ್ಕೆ ಇದು ವ್ಯಾಪಿಸಬೇಕು, ದೇವರಾಯನದುರ್ಗದ ಅರಣ್ಯ ಮೂಲ ಸ್ವರೂಪಕ್ಕೆ ಮರಳಬೇಕು, ನದಿ ಒತ್ತುವರಿ ನಿಲ್ಲಬೇಕು. ಆಗ ಸಾಧಾರಣ ಮಳೆಯಾದರೂ ನಾನು ನಿಮ್ಮೆಲ್ಲರನ್ನೂ ಪೊರೆಯುತ್ತೇನೆ.

ಬಯಲುಸೀಮೆಯಾದ ತುಮಕೂರು ಜಿಲ್ಲೆಯಲ್ಲಿ ಸರ್ವ ಋತುಗಳಲ್ಲಿಯೂ ಹರಿಯುವ ಜೀವಂತ ನದಿಗಳಿಲ್ಲ. ಆದರೆ, ಅಲ್ಪಸ್ವಲ್ಪವಾದರೂ ಚಹರೆ ಉಳಿಸಿಕೊಂಡಿರುವ ನಾನು ಮತ್ತು ನನ್ನಂತೆಯೇ ಗುಟುಕು ಜೀವ ಇಟ್ಟುಕೊಂಡಿರುವ ಶಿಂಷಾ, ಸುವರ್ಣಮುಖಿ, ಗರುಡಾಚಲ, ಕುಮುದ್ವತಿ, ನಾಗಿನಿ ಮುಂತಾದ ಪುಟ್ಟ-ಪುಟ್ಟ ನದಿಗಳನ್ನು ಜೀವಂತವಾಗಿಟ್ಟುಕೊಂಡರೆ, ನಾವು ನಿಮ್ಮ ಬಾಯಾರಿಕೆ ತೀರಿಸುತ್ತೇವೆ. ಜೊತೆಗೆ, ಸಕಲ ಜೀವರಾಶಿಗಳನ್ನೂ ಸಲಹುತ್ತೇವೆ.

ಫೋಟೊಗಳು: ಗಂಗಾಧರ್ ವಿ ರೆಡ್ಡಿಹಳ್ಳಿ
ನಿಮಗೆ ಏನು ಅನ್ನಿಸ್ತು?
59 ವೋಟ್