ಜನುಮದಿನ ಸ್ಮರಣೆ | ಸ್ವರ ಸಾಮ್ರಾಟ್ ಅಲಿ ಅಕ್ಬರ್ ಖಾನ್

Ustad Akbar Ali Khan 8

"ಸಂಗೀತವು ನಮ್ಮನ್ನು ಪರಮಾತ್ಮನೆಡೆಗೆ ಒಯ್ಯುವ ಹಾದಿ ಎಂದು ನಾವೆಲ್ಲರೂ ಭಾವಿಸುತ್ತೇವೆ. ನಮ್ಮ ಕುಟುಂಬದಲ್ಲಿ ನಮಗೆ ಸಂಗೀತ ಎನ್ನುವುದು ಆಹಾರವೂ ಹೌದು. ಹಾಗಾಗಿ, ಸಂಗೀತ ಈಗ ಯಾಕೆ, ಆಗ ಯಾಕೆ ಎಂದು ನಾವು ವಿವರಿಸಬೇಕಿಲ್ಲ. ಏಕೆಂದರೆ, ಅದು ಬದುಕಿನ ಮೂಲಭೂತ ಅವಶ್ಯಕತೆ" – ಸರೋದ್ ವಾದಕ ಉಸ್ತಾದ್ ಅಲಿ ಅಕ್ಬರ್ ಖಾನ್

"ವಿಜ್ಞಾನಕ್ಕೆ ಐನ್‌ಸ್ಟೈನ್ ಹೇಗೋ ಹಾಗೆ ಹಿಂದುಸ್ತಾನಿ ಸಂಗೀತಕ್ಕೆ ಅಲಿ ಅಕ್ಬರ್ ಖಾನ್...” “ಉಸ್ತಾದ್ ಅಲಿ ಅಕ್ಬರ್ ಖಾನ್‌ರಂತಹ ಮಹಾನ್ ಸಂಗೀತ ದಾರ್ಶನಿಕನ ಪ್ರಭಾವ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಗಿಲ್ಲದೆ ಇರುವ ಒಬ್ಬನೇ ಒಬ್ಬ ಸಂಗೀತ ವಾದಕನೂ ಭಾರತದಲ್ಲಿಲ್ಲ...” ಇತ್ಯಾದಿ ಹಲವಾರು ಮಾತುಗಳನ್ನು ನಾವು ಅಲಿ ಅಕ್ಬರ್‌ ಖಾನ್ ಅವರ ಬಗ್ಗೆ ಕೇಳಿರುತ್ತೇವೆ. ಅಲಿ ಅಕ್ಬರ್ ಖಾನ್ ಸರೋದ್‌ಗೆ ಇನ್ನೊಂದು ಹೆಸರಾಗಿಬಿಟ್ಟಿದ್ದರು. ಸರೋದ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಇವರಿಗೇ ಸಲ್ಲಬೇಕು.  

ತಂದೆ ಅಲ್ಲಾವುದ್ದೀನ್ ಖಾನ್ ಅವರಿಂದ ಮೂರನೇ ವರ್ಷಕ್ಕೆ ಸಂಗೀತದ ಪಾಠ ಪ್ರಾರಂಭ. ಅದು ಅಂತಿಂಥ ಪಾಠವಲ್ಲ. ಮಗು ಅಂತ ಯಾವುದೇ ಮುಲಾಜೂ ಇರಲಿಲ್ಲ. ತೀರಾ ಕಠಿಣವಾದ ಪಾಠಕ್ರಮ. ಸೂರ್ಯ ಹುಟ್ಟುವ ಮೊದಲೇ ಪಾಠ ಶುರು. ನಾಲ್ಕು ಗಂಟೆಗೆ ಸರಿಯಾಗಿ ರಿಯಾಜ್ ಪ್ರಾರಂಭ. ಬೆಳಗಾಗುತ್ತಿದ್ದಂತೆ, "ಅಲಿ ಅಕ್ಬರ್..." ಅಂತ ಅಪ್ಪ ಕೂಗುತ್ತಿದ್ದರು. ಮೊದಲ ಕರೆಗೆ ಸರೋದ್ ಹಿಡಿದು ಅಲಿ ಅಕ್ಬರ್ ತನ್ನ ರೂಮು ಬಿಟ್ಟಾಗಿರುತ್ತಿತ್ತು. ಎರಡನೇ ಕರೆಗೆ ರೂಮಿನ ಬಳಿ ಇರುತ್ತಿದ್ದರು.  ಮೂರನೇ ಕರೆಗೆ ಅಪ್ಪನ ಬಳಿ ಕುಳಿತಾಗಿರುತ್ತಿತ್ತು. ಎಲ್ಲವೂ ಕರಾರುವಾಕ್ಕಾಗಿ ಆಗಬೇಕು. ಸ್ವಲ್ಪ ಎಡವಟ್ಟಾದರೆ ಏಟು ತಪ್ಪಿದ್ದಲ್ಲ. ಹಾಗಾಗಿ ಪಾಪ, ಅಲಿ ಅಕ್ಬರ್ ಖಾನ್ ಮಲಗುವಾಗ ಡ್ರೆಸ್ ಮಾಡಿಕೊಂಡೇ ಮಲಗುತ್ತಿದ್ದರಂತೆ. ತಂದೆಯ ಈ ಕಠಿಣ ಶಿಕ್ಷಾ ಕ್ರಮ ತಾಳಲಾರದೆ ಮನೆ ಬಿಟ್ಟು ಓಡಿಹೋಗಿದ್ದೂ ಉಂಟು. ಯಾವುದೋ ಒಂದು ಸಂಚಾರ ಸರಿಯಾಗಿ ಬರಲಿಲ್ಲ ಎಂದು ಖಾನ್‌ ಸಾಹೇಬರನ್ನು ಒಂದು ವಾರ ಮರಕ್ಕೆ ಕಟ್ಟಿ ಹೊಡೆದಿದ್ದಷ್ಟೇ ಅಲ್ಲ, ಊಟ ಕೂಡ ಕೊಡಲಿಲ್ಲವಂತೆ!

ಖಾನ್ ಸಾಹೇಬರು ಅಪ್ಪನನ್ನು ನೆನಸಿಕೊಳ್ಳುತ್ತ, “ಅವರು ತುಂಬಾ ಕಟ್ಟುನಿಟ್ಟಿನ ಮನುಷ್ಯ. ನನ್ನೊಂದಿಗೆ ಎಂದೂ ಆಟವಾಡಲೇ ಇಲ್ಲ. ನಗಲೂ ಇಲ್ಲ. ನನ್ನ ಪಾಲಿಗೆ ಹುಲಿಯಂತಿದ್ದರು... ನನಗೆ ಅವರಿಂದ ಪ್ರೀತಿ ಬೇಕಿತ್ತು. ಆದರೆ, ಅವರು ಯೋಚಿಸಿದ್ದೇ ಬೇರೆ ರೀತಿ. ಅತಿಯಾಗಿ ಪ್ರೀತಿಸಿಬಿಟ್ಟರೆ ಮಗ ಹಾಳಾಗಿಬಿಡುತ್ತಾನೆ ಅಂತ ಅವರಿಗೆ ಅಳುಕು ಇತ್ತು. ಆಗ ನನಗೆ ಅವರ ನಡವಳಿಕೆಯ ಬಗ್ಗೆ ತುಂಬಾ ಸಿಟ್ಟು ಇತ್ತು. ಈಗ ನನಗೆ ಅರ್ಥವಾಗಿದೆ. ನಾನು ಅವರಿಗೆ ಋಣಿಯಾಗಿದ್ದೇನೆ,” ಎನ್ನುತ್ತಾರೆ.

ತಂದೆ ಇಷ್ಟೊಂದು ಕಠಿಣವಾಗಿ ನಡೆದುಕೊಂಡಿದ್ದರ ಬಗ್ಗೆ ಖಾನ್ ಸಾಹೇಬರೇ ಒಂದು ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ: “ಅವರು ಪಟ್ಟ ಶ್ರಮ ಅವರನ್ನು ಕಲಿಸುವ ವಿಷಯದಲ್ಲಿ ನಿರ್ದಯಿಯನ್ನಾಗಿಸಿತ್ತು. ಮುಂಗೋಪ ಕೂಡ ಅಸಾಧ್ಯವಾಗಿತ್ತು. ವಿದ್ಯಾರ್ಥಿಗಳನ್ನು ಸರಿಯಾಗಿ ರೂಪಿಸಬೇಕು, ಅವರು ಸರಿಯಾಗಿ ಕಲಿಯಬೇಕು ಅನ್ನುವ ಕಾಳಜಿಯೇ ಅವರನ್ನು ಹೀಗೆ ಮಾಡಿದ್ದು. ಆದರೆ, ನಮ್ಮ ವಾದ್ಯ ಸಂಗೀತ ಪರಂಪರೆಯಲ್ಲಿ ಏನೇನು ಅತ್ಯುತ್ತಮವಾದದ್ದು ಇದೆಯೋ ಅದೆಲ್ಲದರ ಸಂಯೋಜನೆಯನ್ನು ನಮ್ಮ ತಂದೆಯವರು ಕಲಿಸಿದರು. ಅವರು ನನಗೆ ಎಲ್ಲ ರೀತಿಯ ವಾದ್ಯಗಳನ್ನೂ ಹೇಳಿಕೊಟ್ಟರು. ಬಾಕ್, ಬೆಥೂವನ್ ಕೇಳಿಸಿದರು. ದಿನಕ್ಕೆ 15 ಗಂಟೆ ಪಾಠ ಮಾಡಿದ್ದೂ ಇದೆ. ಅಭ್ಯಾಸ ಕೂಡ ತುಂಬಾ ಕಠಿಣವಾಗಿರುತ್ತಿತ್ತು. ನಾನು ನುಡಿಸುವಾಗ ತಂತಿಯನ್ನು ತುಂಡರಿಸುವುದನ್ನು ಕಲಿತೆ. ಯಾಕೆಂದರೆ, ಅದನ್ನು ಸರಿಪಡಿಸುವ ನೆಪದಲ್ಲಿ ಒಂದರ್ಧ ಗಂಟೆ ಪುರುಸೊತ್ತು ಪಡೆಯಬಹುದಿತ್ತು!”

ಸಂಗೀತ ಒಲಿಯಬೇಕಾದರೆ ಸಾಧನೆ ಬೇಕು ಅನ್ನೋದು ಖಾನ್ ಸಾಹೇಬರಿಗೂ ಮನವರಿಕೆಯಾಗಿತ್ತು. “ನಿರಂತರವಾಗಿ ಹತ್ತು ವರ್ಷ ಸಾಧನೆ ಮಾಡಿದರೆ, ನಿಮ್ಮ ಸಂಗೀತದಿಂದ ನಿಮಗೆ ಒಂದಿಷ್ಟು ಸಂತೋಷ ಸಿಗಬಹುದು. ಇಪ್ಪತ್ತು ವರ್ಷ ಅಭ್ಯಾಸ ಮಾಡಿದರೆ, ನೀವು ಕಾರ್ಯಕ್ರಮ ನೀಡಬಹುದು, ಸಭಿಕರನ್ನೂ ಆನಂದಪಡಿಸಬಹುದು. ಮೂವತ್ತು ವರ್ಷ ಅಭ್ಯಾಸ ಮಾಡಿದರೆ ನಿಮ್ಮ ಗುರುವೂ ನಿಮ್ಮನ್ನು ಮೆಚ್ಚಿಕೊಳ್ಳಬಹುದು. ಆದರೆ, ನಿಜವಾದ ಕಲಾವಿದನಾಗಬೇಕಾದರೆ ಇನ್ನೂ ಹಲವಾರು ವರ್ಷ ಅಭ್ಯಾಸ ಮಾಡಬೇಕು. ಆಗ ನೀವು ದೇವರನ್ನೂ ಮೆಚ್ಚಿಸಬಹುದು. ನನಗೆ ಸಂಗೀತ ನಿಜವಾಗಿ ಅರ್ಥವಾಗಿದ್ದು ನನಗೆ 50 ವರ್ಷ ಆದಾಗ,” ಎನ್ನುತ್ತಾರವರು. “ಅಲಿ ಅಕ್ಬರ್‌ ಖಾನ್ ತಮ್ಮ ಧಮನಿಗಳಲ್ಲಿ ಸಂಗೀತವನ್ನೇ ತುಂಬಿಕೊಂಡು ಹುಟ್ಟಿದವರು. ಆದರೆ ನಿರಂತರ ಕಠಿಣ ಅಭ್ಯಾಸದಿಂದ ಅವರು ವಾದಕರಲ್ಲೆಲ್ಲ ಅತ್ಯಂತ ಶ್ರೇಷ್ಠರೆನಿಸಿಕೊಂಡರು," ಎಂದು ಖಾನ್‌ ಸಾಹೇಬರ ಬಗ್ಗೆ ಪಂಡಿತ್ ರವಿಶಂಕರ್ ಹೇಳುತ್ತಾರೆ.

ಖಾನ್ ಸಾಹೇಬರು ತಮ್ಮ 13ನೇ ವರ್ಷದಲ್ಲಿ ಮೊದಲ ಕಛೇರಿಯನ್ನು (ಅಲಹಾಬಾದ್, 1936) ನೀಡಿದರು. ಅತ್ಯಂತ ಸಣ್ಣ ವಯಸ್ಸಿನಲ್ಲಿ ಆಕಾಶವಾಣಿಗೆ ಆಯ್ಕೆಯಾದ ಕಲಾವಿದರೂ ಇವರೇ. ನಂತರ ಹಲವಾರು ಕಾರ್ಯಕ್ರಮಗಳನ್ನು ತಂದೆಯವರ ಜೊತೆಗೂ, ಸ್ವತಂತ್ರವಾಗಿಯೂ ನೀಡಿದರು. ಆಕಾಶವಾಣಿಯಲ್ಲೂ ಕಾರ್ಯಕ್ರಮ ನೀಡುತ್ತಿದ್ದರು. 1940ರಲ್ಲಿ ಲಕ್ನೋ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿ ಸೇರಿಕೊಂಡರು. ಮಗನಿಗೆ ಸ್ವಲ್ಪ ಸ್ವಾತಂತ್ರ್ಯ ಸಿಗಲಿ ಅಂತ ಅವರ ತಂದೆಯವರೇ ಈ ಏರ್ಪಾಡು ಮಾಡಿದ್ದರು. ಆದರೆ, ಮಗನಿಗೆ ಮಾಮೂಲಿಗಿಂತ ಅರ್ಧದಷ್ಟು ಮಾತ್ರ ಸಂಬಳ ನೀಡಬೇಕೆಂದು ತಾಕೀತು ಮಾಡಿದ್ದರಂತೆ! ಯಾಕೆಂದರೆ, ಮಗನಲ್ಲಿ ವಿನಯ ಉಳಿಯಬೇಕು ಅಂತ! “ನಮ್ಮ ತಂದೆಯವರ ಮುಖ್ಯ ಉದ್ದೇಶವೇ ನನ್ನ ಸಂಗೀತವನ್ನು ಕೇಳುವುದಾಗಿತ್ತು. ನನ್ನ ಸಂಗೀತ ಪದೇ-ಪದೇ ಪ್ರಸಾರವಾಗುತ್ತಿತ್ತು. ತಪ್ಪು ಕಂಡ ತಕ್ಷಣ ಮುಂದಿನ ರೈಲಿನಲ್ಲಿ ಲಕ್ನೋಗೆ ಬಂದು ಅದು ಸರಿಯಾಗುವವರೆಗೆ ನುಡಿಸುವಂತೆ ಮಾಡಿಹೋಗುತ್ತಿದ್ದರು,” ಎಂದು ನೆನೆದಿದ್ದಾರೆ ಖಾನ್.

1942ರಲ್ಲಿ ಜೋಧಪುರದ ಮಹಾರಾಜ ಹನುಮಂತ ಸಿಂಗ್ ಅವರ ಆಸ್ಥಾನ ವಿದ್ವಾಂಸರಾಗಿ ಅಲಿ ಅಕ್ಬರ್ ಖಾನ್ ನೇಮಕಗೊಂಡರು. ಅಲ್ಲಿ ಇವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ತೀರಾ ಸಣ್ಣ ವಯಸ್ಸಿಗೆ ಅವರಿಗೆ ಉಸ್ತಾದ್ ಎಂಬ ಬಿರುದನ್ನು ನೀಡಿದರು. ಅಲಿ ಅಕ್ಬರ್‌ ಖಾನ್ ಅವರ ನೇತೃತ್ವದಲ್ಲಿ ಒಂದು ಸಂಗೀತ ಶಾಲೆಯನ್ನು ಪ್ರಾರಂಭ ಮಾಡಬೇಕೆಂದಿದ್ದರು. ಆದರೆ, ಈ ಆಸೆ ನೆರವೇರಲಿಲ್ಲ. ಏಕೆಂದರೆ, ಮಹಾರಾಜರು 1948ರಲ್ಲಿ ವಿಮಾನ ಅಪಘಾತದಲ್ಲಿ ಮೃತರಾದರು. ನಂತರದ ದಿನಗಳಲ್ಲಿ ಖಾನ್ ಸಾಹೇಬರ ಹಣಕಾಸಿನ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ಮುಂಬೈಗೆ ಹೋದರು. ಅಲ್ಲಿ ಮೊದಲು ಸಂಗೀತ ಪಾಠ ಹೇಳಿಕೊಡುತ್ತಿದ್ದರು. ನಂತರ ಸಿನಿಮಾಗೆ ಕರೆ ಬಂತು. ಆಗ ಸಿನಿಮಾ ಸಂಗೀತ ಇನ್ನೂ ಶಾಸ್ತ್ರೀಯ ರಾಗಗಳನ್ನೇ ಆಧರಿಸಿತ್ತು. ಅಂದಿನ ಪ್ರಮುಖ ಸಂಗೀತ ನಿರ್ದೇಶಕರೆಲ್ಲ ಶಾಸ್ತ್ರೀಯ ಸಂಗೀತ ಕಲಿತವರೇ ಆಗಿದ್ದರು. ಎಸ್ ಡಿ ಬರ್ಮನ್, ಅನಿಲ್ ಬಿಸ್ವಾಸ್, ಪನ್ನಾಲಾಲ್ ಘೋಷ್ ಇವರೆಲ್ಲ ಶ್ರೇಷ್ಠ ಮಟ್ಟದ ಶಾಸ್ತ್ರೀಯ ಸಂಗೀತ ಕಲಾವಿದರಾಗಿದ್ದರು.

ಇದನ್ನು ಓದಿದ್ದೀರಾ?: ಪಂಡಿತ್ ರಾಜೀವ್ ತಾರಾನಾಥ್ ಮಾತು | ಖಾನ್ ಸಾಹೇಬರು ಯಾವ ರಾಗ ಮುಟ್ಟಿದರೂ ಚಿನ್ನ

ಸಿನಿಮಾಗೆ ಸಂಗೀತ ನೀಡುವುದು ಖಾನ್ ಸಾಹೇಬರಿಗೆ ಅಷ್ಟೇನೂ ಇಷ್ಟವಿರಲಿಲ್ಲ. ಗೆಳೆಯ ಋತ್ವಿಕ್ ಘಟಕ್ ತಮ್ಮ 'ಅಜಾಂತ್ರಿಕ್' ಚಲನಚಿತ್ರಕ್ಕೆ ಸಂಗೀತ ನೀಡಲು ಪುಸಲಾಯಿಸಿದರಂತೆ. ಅವರಿಗೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ, ಘಟಕ್ ಅವರು ಹೇಳುವಂತೆ, "ಅಜಾಂತ್ರಿಕ್‌'ಗೆ ಅವರು ನುಡಿಸಿದ ಹಿನ್ನೆಲೆ ಸಂಗೀತ ಸಿನಿಮಾಕ್ಕೆ ತೀರಾ ಸೊಗಸಾಗಿ ಹೊಂದಿಕೊಳ್ಳುತ್ತಿತ್ತು.” ನಂತರ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದರು. ಇದು ಬಾಬಾಗೆ ಸ್ವಲ್ಪವೂ ಇಷ್ಟವಿರಲಿಲ್ಲ. “ಇಂದಿನಿಂದ ನೀನು ನನ್ನ ಮಗನೇ ಅಲ್ಲ,” ಅಂತ ಸಿಟ್ಟಿನಿಂದ ಮಗನಿಗೆ ಟೆಲಿಗ್ರಾಂ ಕೂಡ ಕಳುಹಿಸಿದರು. ತಂದೆಯವರ ಸ್ವಭಾವವನ್ನು ತಿಳಿದಿದ್ದ ಖಾನ್ ಸಾಹೇಬರು ತುಂಬಾ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸ ಮುಂದುವರಿಸಿದ್ದರು.

ಚೇತನ್ ಆನಂದ್ ಅವರ 'ಆಂಧಿಯಾ,' ಸತ್ಯಜಿತ್ ರೇ ಅವರ ‘ದೇವಿ,' ಮರ್ಚೆಂಟ್ ಐವರಿ ಅವರ ‘ದಿ ಹೌಸ್ ಹೋಲ್ಡರ್,' ತಪನ್ ಸಿನ್ಹರವರ ‘ಕ್ಷುದಿತ ಪಾಷಾಣ್’ ಮೊದಲಾದ ಸಿನಿಮಾಗಳಿಗೆ ಸಂಗೀತ ನೀಡಿದರು. ಚಲನಚಿತ್ರಗಳಿಗೆ ಅವರು ನೀಡಿರುವ ಸಂಗೀತದಲ್ಲಿ ಚೇತನ್ ಆನಂದರ 'ಆಂಧಿಯಾ' ಚಿತ್ರಕ್ಕೆ ನೀಡಿರುವ ಸಂಗೀತ ಅತ್ಯುತ್ತಮವಾದುದು ಎನ್ನುವ ಅಭಿಪ್ರಾಯವಿದೆ.

ತಪನ್ ಸಿನ್ಹ ಅವರ ಚಿತ್ರಕ್ಕೆ ನೀಡಿದ ಸಂಗೀತಕ್ಕೆ 'ವರ್ಷದ ಅತ್ಯುತ್ತಮ ಸಂಗೀತಗಾರ' ಪ್ರಶಸ್ತಿ ಲಭಿಸಿತು. ಠಾಕೂರರ ಸಣ್ಣಕತೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಖಾನ್‌ ಸಾಹೇಬರ ಸೂಕ್ಷ್ಮತೆ ಬಗ್ಗೆ ತಪನ್ ಸಿನ್ಹ ಅವರು ತುಂಬಾ ಭಾವಪರವಶರಾಗಿ ಮಾತನಾಡುತ್ತಾರೆ. ಠಾಕೂರರು ಗೆಳೆಯರು ಎನ್ನುವ ಕಾರಣಕ್ಕೆ ಖಾನ್ ಸಾಹೇಬರ ತಂದೆ ಈ ಸಿನಿಮಾವನ್ನು ನೋಡಿದರಂತೆ. ಅದರ ಸಂಗೀತ ಬಾಬಾರವರಿಗೆ ತುಂಬಾ ಮೆಚ್ಚುಗೆಯಾಗಿ, ಯಾರ ಸಂಗೀತ ಅಂತ ವಿಚಾರಿಸಿಕೊಂಡರಂತೆ. ಅಲಿ ಅಕ್ಬರ್ ಖಾನರ ಸಂಗೀತ ಅಂತ ಗೊತ್ತಾದ ತಕ್ಷಣ ಮಗನಿಗೆ, “ಸಿನಿಮಾಗೆ ಸಂಗೀತ ನೀಡುವುದನ್ನು ಮುಂದುವರಿಸು,” ಅಂತ ಟೆಲಿಗ್ರಾಂ ಕಳುಹಿಸಿದರಂತೆ. ಆದರೆ, ಮಗ ಆ ವೇಳೆಗಾಗಲೇ ಸಿನಿಮಾಕ್ಕೆ ಸಂಗೀತ ನೀಡುವುದನ್ನು ನಿಲ್ಲಿಸಲು ತೀರ್ಮಾನಿಸಿದ್ದರು. “ಇನ್ನು ಮುಂದೆ ಸಿನಿಮಾಗೆ ಸಂಗೀತ ನೀಡುವುದಿಲ್ಲ,” ಎಂದು ಮರು ಟೆಲಿಗ್ರಾಂ ಕಳುಹಿಸಿದರು.

ಆದರೂ ನಂತರದಲ್ಲಿ ಆಗೀಗ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕದಲ್ಲಿ 1993ರಲ್ಲಿ ಬರ್ಟಿ ಲೂಸಿಯವರ 'ಲಿಟಲ್ ಬುದ್ಧ' ಸಿನಿಮಾಕ್ಕೆ ಕೂಡ ಸಂಗೀತ ನೀಡಿದರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರೆಡೆಗೆ ತೆಗೆದುಕೊಂಡು ಹೋಗುವುದಕ್ಕೆ ಸಿನಿಮಾ ಒಂದು ಒಳ್ಳೆಯ ಮಾಧ್ಯಮ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಸಿನಿಮಾಕ್ಕೆ ಸಂಗೀತ ನೀಡಲು ಒಪ್ಪಿಕೊಳ್ಳುತ್ತಿದ್ದರು. “ರಿಕ್ಷಾವಾಲಾಗಳು, ಟಾಂಗಾವಾಲಾಗಳೂ ಕೂಡ ಈ ಶಾಸ್ತ್ರೀಯ ಸಂಗೀತವನ್ನು ಕೇಳುವಂತಾಗಬೇಕು,” ಎನ್ನುವುದು ಅವರ ಇಚ್ಛೆಯಾಗಿತ್ತು. ಲಾರ್ಡ್ ಯಹೂದಿ ಮೆನುಹಿನ್‌ರ ಆಹ್ವಾನದ ಮೇರೆಗೆ ಖಾನ್‌ ಸಾಹೇಬರು 1955ರಲ್ಲಿ ಅಮೆರಿಕಗೆ ಪ್ರಯಾಣ ಮಾಡಿದರು. ನ್ಯೂಯಾರ್ಕಿನ ಮಾಡರ್ನ್ ಆರ್ಟ್ಸ್ ಮ್ಯೂಸಿಯಂನಲ್ಲಿ ಕಾರ್ಯಕ್ರಮ ನೀಡಿದರು.

ಇವರ ಹಲವಾರು ಧ್ವನಿಸುರುಳಿಗಳು ಹೊರಬಂದಿವೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೊತ್ತಮೊದಲ ಎಲ್‌ಪಿ ರೆಕಾರ್ಡಿಂಗ್ ಖಾನ್ ಸಾಹೇಬರದ್ದೇ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯ ಟಿವಿಯಲ್ಲಿ ಮೊತ್ತಮೊದಲು ನೀಡಿದವರೂ ಖಾನ್‌ ಸಾಹೇಬರೇ. ಇವೆಲ್ಲವೂ 1960ರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವು ಪಾಶ್ಚಿಮಾತ್ಯ ಪ್ರಪಂಚದಲ್ಲಿ ಜನಪ್ರಿಯವಾಗಲು ಕಾರಣವಾದವು.

ಖಾನ್ ಸಾಹೇಬರು ಕಲ್ಕತ್ತೆಯಲ್ಲಿ 1956ರಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ಪ್ರಾರಂಭಿಸಿದರು. ನಂತರ ಪಾಶ್ಚಾತ್ಯ ವಿದ್ಯಾರ್ಥಿಗಳಲ್ಲಿ ಇರುವ ಅಸಾಧಾರಣ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗಮನಿಸಿ, ಅಮೆರಿಕದಲ್ಲಿ 1965ರಿಂದ ಪಾಠ ಮಾಡಲು ಪ್ರಾರಂಭಿಸಿದರು. ಕ್ಯಾಲಿಫೋರ್ನಿಯಾದ ಸ್ಯಾನ್ ರಾಫೆಲ್‌ನಲ್ಲಿ 1967ರಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ಪ್ರಾರಂಭಿಸಿದರು. ಇದು ಪ್ರಪಂಚದಲ್ಲೇ ಹಿಂದುಸ್ತಾನಿ ಸಂಗೀತ ಕಲಿಸುವ ಅತ್ಯುತ್ತಮ ಶಾಲೆಯಾಯಿತು. “ಮುಂದೆ ಯಾರಾದರೂ ಹಿಂದುಸ್ತಾನಿ ಸಂಗೀತ ಕಲಿಯಬೇಕಾದರೆ ಇಲ್ಲಿಗೇ ಬರಬೇಕಾಗುತ್ತದೆ,” ಎಂದು ಖಾನ್ ಸಾಹೇಬರು ಹೆಮ್ಮೆಯಿಂದ ಹೇಳಿಕೊಂಡಿದ್ದೂ ಇದೆ. ಮುಂದೆ ಬೇಸಲ್, ಸ್ವಿಟ್ಜರ್‌ಲ್ಯಾಂಡ್ ಮೊದಲಾದ ಕಡೆಗಳಲ್ಲಿ ಅಲ್ಲಿನ ಆಸಕ್ತರಿಗಾಗಿ ಶಾಖೆಗಳನ್ನು ಪ್ರಾರಂಭಿಸಿದರು. ತಂದೆಯವರ ಆದರ್ಶಕ್ಕೆ ಸ್ವಲ್ಪವೂ ಕುಂದಾಗದಂತೆ ಕೊನೆಯವರೆಗೂ ಅವರು ವಿದ್ಯಾದಾನ ಮಾಡುತ್ತ ಇದ್ದರು.

ಅಮೆರಿಕದ ವಾತಾವರಣವನ್ನು ನೆನಪಿಸಿಕೊಳ್ಳುತ್ತ, “ಭಾರತದಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರಬಹುದು. ಆದರೆ, ಅಮೆರಿಕದಲ್ಲಿ ಅವರು ಪಾಶ್ಚಾತ್ಯ ಸಂಗೀತವನ್ನು ಮಾತ್ರವಲ್ಲ ಭಾರತೀಯ ಸಂಗೀತವನ್ನೂ ಕೇಳುತ್ತಾರೆ. ನನ್ನ ಬಳಿಗೆ ಸಂಗೀತ ಕಲಿಯಲು ಅಮೆರಿಕ, ಯೂರೋಪಿನ ಹಲವರು ಬರುತ್ತಾರೆ. ತಮಾಷೆ ಅಂದರೆ ಭಾರತೀಯರೇ ಕಡಿಮೆ. ಬಹುಶಃ ಅದಕ್ಕೆ ಕಾರಣ, ಪಾಪ... ಅವರು ಇಲ್ಲಿಗೆ ಬರುವುದೇ ಹಣ ಸಂಪಾದಿಸುವುದಕ್ಕೆ ಸಂಗೀತ ಕಲಿಯುವುದಕ್ಕಲ್ಲ,” ಎಂದು ಸಂದರ್ಶನವೊಂದರಲ್ಲಿ ಹೇಳುತ್ತಾರೆ.

ಆದರೆ, ಭಾರತದಲ್ಲಿ ಶಾಸ್ತ್ರಿಯ ಸಂಗೀತ ಅಪಾಯದಲ್ಲಿದೆ ಎಂಬುದನ್ನು ಅವರು ಒಪ್ಪುತ್ತಿರಲಿಲ್ಲ. ಏರಿಳಿತಗಳು ಇರುತ್ತವೆ ಅಷ್ಟೆ ಎನ್ನುತ್ತಿದ್ದರು. ನಿಜವಾದ ರಸಿಕರ ಧ್ವನಿ ಇಂದು ಕ್ಷೀಣವಾಗಿರುವುದರಿಂದ ಕಲಾವಿದರು ಹೊಣೆಗೇಡಿಗಳಾಗುತ್ತಿದ್ದಾರೆ ಎಂದು ಖಾನ್ ಸಾಹೇಬರಿಗೆ ಗಾಢವಾಗಿ ಅನ್ನಿಸಿತ್ತು. “ನಾವು ಚಿಕ್ಕವರಿದ್ದಾಗ, ಮುಂದಿನ ಸಾಲಿನಲ್ಲಿ ಸಂಗೀತಗಾರರು, ನಿಜವಾದ ಸಂಗೀತ ರಸಿಕರು ಕುಳಿತು ಸಂಗೀತ ಕೇಳುತ್ತಿದ್ದರು. ಅವರ ಮೆಚ್ಚುಗೆ ಅಥವಾ ಅಸಂತೃಪ್ತಿಯನ್ನು ನೋಡಿಯೇ ನಮ್ಮ ಸಂಗೀತ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಿತ್ತು. ಸಂಗೀತ ಇಷ್ಟವಾಗಿಬಿಟ್ಟರೆ ವೇದಿಕೆ ಹತ್ತಿ ಸಂಗೀತಗಾರರನ್ನು ತಬ್ಬಿಕೊಂಡು ಅಭಿನಂದಿಸುತ್ತಿದ್ದರು. ಇಷ್ಟವಾಗದಿದ್ದರೆ ಅಷ್ಟೇ ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಿದ್ದರು. ಸಂಗೀತಕ್ಕೆ ಮತ್ತು ಸಂಗೀತಗಾರರಿಗೆ ನಿಜವಾಗಿ ಬೇಕಾದ್ದು ಅದು. ಆದರೆ, ಈಗ ಹಣವಿದ್ದವರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ನಿಜವಾದ ರಸಿಕರು ಎಲ್ಲೋ ಮೂಲೆಯಲ್ಲಿ ಕುಳಿತಿರುತ್ತಾರೆ. ಇದರಿಂದ ಸಂಗೀತಗಾರರು ಹೊಣೆಗೇಡಿಗಳಾಗುತ್ತಾರೆ. ಜನರನ್ನು ಗಿಮಿಕ್‌ಗಳಿಂದ ರಂಜಿಸಲು ಪ್ರಯತ್ನಿಸುತ್ತಾರೆ. ಇದು ನಿಜವಾದ ಸಂಗೀತವಲ್ಲ,” ಎಂಬುದು ಅವರ ಅಭಿಪ್ರಾಯ.

60 ಮತ್ತು 70ರ ದಶಕದಲ್ಲಿ ಅಲಿ ಅಕ್ಬರ್‌ ಖಾನ್ ಮತ್ತು ಪಂಡಿತ್ ರವಿಶಂಕರ್ ಅವರ ಜುಗಲ್‌ಬಂದಿಗಳು ಸಂಗೀತ ಪ್ರೇಮಿಗಳನ್ನು ರೋಮಾಂಚನಗೊಳಿಸಿದ್ದವು. ಅವುಗಳ ಪೈಕಿ ಕೆಲವು ಜುಗಲ್‌ಬಂದಿಗಳ ಮುದ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಅವುಗಳಲ್ಲಿ ಮುಖ್ಯವಾಗಿ, ಹೇಮ್ ಬಿಹಾಗ್, ಬಿಲಾಸ್‌ಖಾನಿ ತೋಡಿ, ಸಿಂಧು ಭೈರವಿ, ಪಲಾಸ್ ಕಾಪಿ, ಶ್ರೀ ಹಾಗೂ ಮಾಂಜ್ ಖಮ್ಮಾಜ್ ಇವುಗಳು ಜುಗಲ್‌ಬಂದಿಯಲ್ಲಿ ಒಬ್ಬ ವಾದ್ಯಗಾರ ಇನ್ನೊಬ್ಬ ವಾದ್ಯಗಾರನ ಮನೋಧರ್ಮವನ್ನು ಹೇಗೆ ಹೆಚ್ಚಿಸಬಲ್ಲ ಮತ್ತು ಒಬ್ಬನ ವಾದನ ಇನ್ನೊಬ್ಬನಿಗೆ ಹೇಗೆ ಪೂರಕವಾಗಿರಬಹುದು ಎನ್ನುವುದರ ಅದ್ಭುತ ಉದಾಹರಣೆಗಳಾಗಿವೆ. ಅಲಿ ಅಕ್ಬರ್ ಅವರ ಸರೋದ್‌ ಪೌರುಷಕ್ಕೆ ರವಿಶಂಕರ್ ಅವರ ಸಿತಾರಿನ ಲಜ್ಜೆಯ ಬಿನ್ನಾಣ ಮಾಧುರ್ಯದ ಬೇರೆಯೇ ಒಂದು ಲೋಕವನ್ನು ಸೃಷ್ಟಿಸುತ್ತದೆ.

ಅಲಿ ಅಕ್ಬರ್ ಅವರು ಅತಿ ಹೆಚ್ಚು ಧ್ವನಿಮುದ್ರಿತವಾಗಿರುವ ಕಲಾವಿದ ಎನಿಸುತ್ತದೆ. 1950 ಮತ್ತು 60ರ ದಶಕದಲ್ಲಿ ಎಚ್‌ಎಂವಿ ಕಂಪನಿ ಧ್ವನಿ ಮುದ್ರಿಸಿದ ಬಾಗೇಶ್ರೀ ಕಾನಡಾ ರಾಗವು ರಾಗವಿಸ್ತಾರದಲ್ಲಿ ಖಾನ್ ಸಾಹೇಬರು ಕ್ರಮಿಸಿದ ಅಭಿಜಾತ-ರಮ್ಯ ಮಾರ್ಗಕ್ಕೆ ಪ್ರಾತಿನಿಧಿಕವಾಗಿದೆ.  ಅವರ ಮಾಲ್‌ಕೌನ್ಸ್, ತುಂಬಾ ಭಾವಪೂರ್ಣವಾದ ಜೈಜೈವಂತಿ, ಮತ್ತೆ-ಮತ್ತೆ ಕಾಡುವ ಅಸಾವರಿ... ಇವೆಲ್ಲವೂ ಈ ನಾದಶಿಲ್ಪಿಯ ಅದ್ಭುತ ಸೃಜನಶೀಲತೆಯ ಪ್ರತೀಕವಾಗಿವೆ. ಅತ್ಯಂತ ಕಡಿಮೆ ಉಳಿಯೇಟುಗಳಲ್ಲಿ ರಾಗದ ಪರಿಪೂರ್ಣ ಪ್ರತಿಮೆಯನ್ನು ಕೆತ್ತುವ ಅವರ ಕ್ರಮದಿಂದಾಗಿ ಈ ಧ್ವನಿಮುದ್ರಣಗಳು ಅವರ ಮೇರು ಕೃತಿಗಳೆನಿಸಿಕೊಂಡಿವೆ. ಬೈರಾಗಿ, ಮಿಯಾ ಕಿ ತೋಡಿ, ಭೂಪಾಲ್ ತೋಡಿ, ನಟ್ ಭೈರವ್ ಮುಂತಾದ ಮುಂಜಾವಿನ ರಾಗಗಳು ಅವರು ನುಡಿಸುವಾಗ ಪಡೆದುಕೊಳ್ಳುವ ಘನತೆ ಮತ್ತು ಗಾಂಭೀರ್ಯವನ್ನು ಗಮನಿಸಬಹುದು. ಬಸಂತ್ ಮುಖಾರಿ ಹಾಗೂ ಜೋಗಿಯಾ ಇವುಗಳ ನೇರ ಧ್ವನಿಮುದ್ರಣದಲ್ಲಿ ಮುಂಜಾವಿನ ರಾಗಗಳ ಆಧ್ಯಾತ್ಮಿಕತೆಯನ್ನು ಇವರು ಮೂಡಿಸಿರುವುದನ್ನು ಗಮನಿಸಬೇಕು. ಟಿ-ಸೀರೀಸ್‌ನವರು ಹೊರತಂದಿರುವ ಇವರ ದರ್ಬಾರಿ, ಪೀಲೂ, ಶ್ರೀ ಈ ರಾಗಗಳ ಆಕಾಶವಾಣಿಯ ಧ್ವನಿಮುದ್ರಣಗಳು ಅವರಲ್ಲಿರುವ ಆಳವಾದ ಅಂತಮುರ್ಖತೆಯ ಕಾಂತಿಯನ್ನು ಸೂಸುತ್ತವೆ. ಅವರ ಸಿಂಧು ಭೈರವಿ ಮತ್ತು ಮಿಶ್ರ ಶಿವರಂಜನಿಯ ಮನೋಜ್ಞ ಪ್ರಸ್ತುತಿಗಳು ಧ್ಯಾನದ ಗುಣದಿಂದ ತುಂಬಿ ತುಳುಕಾಡುತ್ತಿವೆ.

ಬಾಬಾ ಅವರು, "ನಿನ್ನ ತಂದೆ ಹಾಗೂ ಗುರುವಾಗಿ ನಿನಗೆ ಒಂದು ಬಿರುದನ್ನು ನೀಡುತ್ತೇನೆ,” ಎನ್ನುತ್ತ, ‘ಸ್ವರ ಸಾಮ್ರಾಟ್’ ಎಂದು ಇವರನ್ನು ಕರೆದರು. ಇದೇ ತನಗೆ ಸಿಕ್ಕಿರುವ ಅತ್ಯುನ್ನತವಾದ ಬಿರುದು ಎಂಬುದಾಗಿ ಖಾನ್ ಸಾಹೇಬರು ಹೇಳಿಕೊಳ್ಳುತ್ತಿದ್ದರು.  

ತಂದೆ ಅಲ್ಲಾವುದ್ದೀನ್‌ ಖಾನ್, "ಸೂರ್ಯ-ಚಂದ್ರರನ್ನು ನಿನಗೆ ನೋಡಲು ಸಾಧ್ಯವಾಗುವವರೆಗೂ ಸಂಗೀತವನ್ನು ಕಲಿಸು," ಎಂದು ಆದೇಶಿಸಿದ್ದರಂತೆ. ಅದರಂತೆ ಖಾನ್, ಸಾಯುವ ಹಿಂದಿನ ದಿನವೂ ಮಕ್ಕಳನ್ನು ಪಾಠಕ್ಕೆ ಮನೆಗೆ ಕರೆದಿದ್ದರು. ಹಾರ್ಮೋನಿಯಂ ತರಲು ಮಗನಿಗೆ ಹೇಳಿದರಂತೆ. ತುಂಬಾ ಸುಸ್ತಾಗಿದ್ದರು. ತಲೆ ಎತ್ತಲೂ ಆಗುತ್ತಿರಲಿಲ್ಲ. ಆದರೂ ಹಾಡುತ್ತ ಹೇಳಿಕೊಡಲು ಪ್ರಾರಂಭಿಸಿದರಂತೆ. ಕೆಲವರಿಗೆ ಕಣ್ಣೀರು ಬಂತು. ಅದು ಕೊನೆಯ ನಮಸ್ಕಾರವಾಗಿತ್ತು. ಸಂಗೀತವನ್ನು, ಕಲಿಸುವುದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಸಿದ್ದ ಮತ್ತೊಬ್ಬ ಸಂಗೀತಗಾರ ಇರಲಿಕ್ಕಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್