ರುಚಿ-ಅಭಿರುಚಿ | 'ಏನೇ ಮೀನು ರಾಶಿಯವಳೇ... ಮೀನು ರುಚಿ ಇರ್ತ?' ಎಂಬ ವ್ಯಂಗ್ಯ ಹೊತ್ತಿಸಿದ ಕಿಡಿ

ಹದಿನೈದು ಕೆಂಪು ಬಣ್ಣದ, ಆದರೆ ಖಾರ ಹದವಾಗಿರುವ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಏಳೆಂಟು ಎಸಳು ಬೆಳ್ಳುಳ್ಳಿ, ವಾಟೆ ಹುಳಿ, ಅಗತ್ಯವಿದ್ದಷ್ಟು ಉಪ್ಪು ಹಾಕಿ ರುಬ್ಬಿಕೊಂಡು ಮಸಾಲೆ ತೆಗೆದರೆ, ಆ ಮಸಾಲೆಯ ವಾಸನೆಗೇ ಅರ್ಧ ಲೋಟ ಅಕ್ಕಿ ಹೆಚ್ಚು ಇಟ್ಟು ಅನ್ನ ಮಾಡಬೇಕು ಅನ್ನಿಸದಿದ್ದರೆ ಕೇಳಿ! ಬೇಕಿದ್ದರೆ, ರುಬ್ಬುವಾಗ ಸಣ್ಣದೊಂದು ಶುಂಠಿಯನ್ನು ಸೇರಿಸಿಕೊಳ್ಳಬಹುದು

ಚಿಕ್ಕಂದಿನಲ್ಲಿ ಮೀನನ್ನು ಅಷ್ಟೊಂದು ಇಷ್ಟಪಟ್ಟು ತಿಂದವಳಲ್ಲ ನಾನು. ಬಹುಶಃ ನನ್ನ ಬಾಲ್ಯದ ಪ್ರಭಾವ ಇರಬಹುದು. ಅಪ್ಪ-ಅಮ್ಮ ಶಿರಸಿಯ ಒಂದು ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಹವ್ಯಕ ಬ್ರಾಹ್ಮಣರೊಬ್ಬರ ಮನೆಯಲ್ಲಿ ಬಾಡಿಗೆಗಿದ್ದೆವು. ಊಟಕ್ಕೆ ಒಮ್ಮೆ ಕುಳಿತ ನಂತರ ಮಧ್ಯೆ ಏಳದ ಭಟ್ಟರು, ಏನಾದರೂ ಬೇಕಿದ್ದರೆ ಆ ಕಡೆಯಿಂದ, "ತಂಗೀ..." ಎಂದು ಕರೆಯುತ್ತಿದ್ದರು. ನಾನು ಓಡಿಹೋಗಿ, ಅವರಿಗೆ ಬೇಕಾದ ಅನ್ನವನ್ನೋ ತಂಬುಳಿಯನ್ನೋ ಮಜ್ಜಿಗೆಯನ್ನೋ ಬಡಿಸಿ ಬರುತ್ತಿದ್ದೆ.  ಹಾಗೆಂದು, ಅವರು ಉಳಿದವರ ಬಳಿಯೂ ಹಾಗೇ ನಡೆದುಕೊಳ್ಳುತ್ತಾರೆ ಎಂದೇನೂ ಇರಲಿಲ್ಲ. ಆದರೆ, ನನಗೆ ಮಾತ್ರ ಅವರ ಮನೆಯ ಎಲ್ಲ ಕೋಣೆಗಳಿಗೆ ಹೋಗುವ, ಅವರ ಅಡುಗೆಮನೆಯಲ್ಲಿ ತಿಂಡಿ ನಾನೇ ತೆಗೆದುಕೊಂಡು ತಿನ್ನುವ ಸ್ವಾತಂತ್ರ್ಯವಿತ್ತು. ಅವರ ಮನೆಯ ಹೆಣ್ಣುಮಕ್ಕಳಾದರೂ ಅಷ್ಟೇ; ಅಮ್ಮನ ಬಳಿಯೋ ಅಥವಾ ನಮ್ಮ ಜೊತೆ ಇರುತ್ತಿದ್ದ ಮಾವನ ಮಕ್ಕಳ ಬಳಿಯೋ ಮಾತನಾಡುತ್ತ ಒಲೆಯ ಮೇಲಿದ್ದ ಮೊಟ್ಟೆ ಸಾರನ್ನು ತಿರುವುತ್ತಿದ್ದರು.

ಆದರೆ, ಒಂದೇ ಕಷ್ಟವೆಂದರೆ, ಅಪ್ಪ ಆ ಮನೆಯಲ್ಲಿ ಮೀನು ಮಾಡಲು ಒಪ್ಪುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಮಾಡುವ ಮೀನಿನ ಅಡುಗೆಯ ವಾಸನೆಯಿಂದ ಅವರಿಗೆ ಮುಜುಗರ ಆಗದಿರಲಿ ಎಂಬುದು ಅಪ್ಪನ ಆಶಯವಾದರೆ, "ಅಕ್ಕೋರೆ, ಮೀನು ಬಂದದೆ. ತಕ್ಕೊಳ್ತೀರೋ...?" ಎಂದು ಭಟ್ಟರೂ ನಮ್ಮ ಆಹಾರಕ್ಕೆ ತೊಂದರೆ ಯಾಕೆ ಎಂಬಂತೆ ಕೇಳುತ್ತಿದ್ದರು. ಆದರೆ, ಮನೆಯಲ್ಲಿ ಮೀನಿನ ಅಡುಗೆ ತುಂಬ ಕಡಿಮೆ ಎಂದೇ ಹೇಳಬೇಕು. ಊರಿಂದ ಅಜ್ಜ, ಅತ್ತೆ ಯಾರಾದರೂ ಬಂದರೆ ಮಾತ್ರ ಮೀನು. ಅದೂ, ಮತ್ತೆ ಬಿಸಿ ಮಾಡಿ ವಾಸನೆ ಹಬ್ಬದಂತೆ.

Image

ಹೀಗೆ, ಅವರಿಗೆ ತೊಂದರೆಯಾಗದಿರಲಿ ಎಂದು ನಾವು, ನಮಗೆ ತೊಂದರೆಯಾಗದಿರಲಿ ಎಂದು ಅವರು ಯೋಚಿಸುವ ಮನಸ್ಥಿತಿಯಲ್ಲಿಯೇ ಬೆಳೆದ ನನ್ನ ಮನಸ್ಥಿತಿ ಬದಲಾಗಿದ್ದು ಹೈಸ್ಕೂಲು ಮೆಟ್ಟಿಲೇರಿದ ಮೇಲೆ. ಇಬ್ಬರು ಪ್ಯೂನ್‌ಗಳನ್ನು ಬಿಟ್ಟರೆ ಮತ್ಯಾವ ನರಹುಳವೂ ಹವ್ಯಕ ಗಂಡಸರನ್ನು ಬಿಟ್ಟು ಬೇರೆ ಇರದ ಆ ಹೈಸ್ಕೂಲಿನಲ್ಲಿ ಮಾಸಾಹಾರ ಎಂದರೆ ಅತ್ಯಂತ ಕೀಳು ಎಂಬಂತೆ ಸಂಸ್ಕೃತ ಶಿಕ್ಷಕರು ತರಗತಿಗಳಲ್ಲಿ ಹೇಳಲಾರಂಭಿಸಿದರು. ಅವರು ನನ್ನ ಕ್ಲಾಸ್‌ಗೆ ಬರುವುದೇ ವಾರಕ್ಕೊಂದು ನೀತಿಶಿಕ್ಷಣ ಅವಧಿಗೆ. ಆದರೂ ಪ್ರತೀ ಸಲವೂ ಮಾಂಸಾಹಾರ ಹಾಳು ಎನ್ನುವ ಕುರಿತು ಉದ್ದುದ್ದ ಭಾಷಣ ನೀತಿ ಬೋಧನೆಯಂತೆ ಮಾಡುತ್ತಿದ್ದರು. ಒಂದು ದಿನವಂತೂ ನೇರ ನನ್ನನ್ನು ಎಬ್ಬಿಸಿ ನಿಲ್ಲಿಸಿ, "ಏನೇ ಮೀನು ರಾಶಿಯವಳೇ... ಮೀನು ರುಚಿ ಇರ್ತ?" ಎಂದು ವ್ಯಂಗ್ಯವಾಗಿ ಕೇಳಿದ್ದರು. ಅದೆಲ್ಲಿಂದ ಸಿಟ್ಟು ನೆತ್ತಿಗೇರಿತೋ ಗೊತ್ತಿಲ್ಲ. "ನಿಮ್ಮ ಅಪ್ಪೆಹುಳಿಗಿಂತ ರುಚಿ ಇರ್ತು ಸರ್..." ಎಂದುಬಿಟ್ಟಿದ್ದೆ. ನಾನು ಕೊಟ್ಟ ಎದುರುತ್ತರ ಅವರನ್ನು ಕೆರಳಿಸಿತು. "ಬಾ... ಬಾ..." ಎನ್ನುತ್ತ ನನ್ನ ರಟ್ಟೆ ಎಳೆದು ಸೀದಾ ಮುಖ್ಯೋಪಾಧ್ಯಾಯರ ರೂಮಿಗೆ ಕರೆದೊಯ್ದಿದ್ದರು.

ಇದಕ್ಕೂ ಮೊದಲಿನ ಒಂದು ಕತೆಯನ್ನು ಇಲ್ಲಿ ಹೇಳಿಬಿಡುತ್ತೇನೆ. ಆ ಹೈಸ್ಕೂಲಿನಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಅಥವಾ ಸಂಸ್ಕೃತವನ್ನು ಆಯ್ದುಕೊಳ್ಳುವ ಅವಕಾಶವಿತ್ತು. ಎಂಟನೇ ತರಗತಿಗೆ ಬಂದ ನಾನು ಸಂಸ್ಕೃತದಲ್ಲಿ ಹೆಚ್ಚು ಅಂಕ ಗಳಿಸಬಹುದೆಂದು ಯಾರೋ ಹೇಳಿದರೆಂಬ ಕಾರಣಕ್ಕೆ ಪ್ರಥಮ ಭಾಷೆ ಸಂಸ್ಕೃತದ ತರಗತಿಯಲ್ಲಿ ಕುಳಿತಿದ್ದೆ. ಆದರೆ, ಕ್ಲಾಸಿಗೆ ಬಂದ ಸಂಸ್ಕೃತ ಮೇಷ್ಟ್ರು ವ್ಯಂಗ್ಯವಾಗಿ ನೋಡುತ್ತ, ಶೂದ್ರರಿಗೆಲ್ಲ ಸಂಸ್ಕೃತ ಯಾಕೆ ಎಂಬರ್ಥ ಬರುವಂತೆ ಹೇಳಿದ್ದರು. ನಂತರದ ಕ್ಲಾಸ್‌ಗಳಲ್ಲಿ ಪ್ರಥಮ ಭಾಷೆ ಕನ್ನಡ ತರಗತಿಯಲ್ಲಿ ಕುಳಿತುಕೊಳ್ಳಲಾರಂಭಿಸಿದೆ. ಆದರೆ, ಪಕ್ಕದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಅಪ್ಪ ನಮ್ಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರಿಗೆ ಸೂಚ್ಯವಾಗಿ ವಿಷಯ ತಿಳಿಸಿದ್ದರಂತೆ. ಬಹುಶಃ ನಮ್ಮ ಮುಖ್ಯೋಪಾಧ್ಯಾಯರು ಸಂಸ್ಕೃತ ಮೇಷ್ಟ್ರಿಗೆ ಹೇಳಿದ್ದರೇನೋ. ಹೀಗಾಗಿ, ವಾರಕ್ಕೊಮ್ಮೆ ನೀತಿಶಿಕ್ಷಣ ತರಗತಿಯಲ್ಲಿ ನನ್ನನ್ನು ಗುರಿಯಾಗಿಸಿಕೊಳ್ಳುವ ಪರಿಪಾಠ ಅವರಿಗೆ ಬಂದುಬಿಟ್ಟಿತ್ತು.

Image

ಮುಖ್ಯೋಪಾಧ್ಯಾಯಯರ ಕೊಠಡಿಯಲ್ಲಿ ಉಳಿದೆಲ್ಲ ವಿಷಯ ಮರೆಯಾಗಿ ನಾನು ಹೇಳಿದ 'ಅಪ್ಪೆಹುಳಿಗಿಂತ ರುಚಿ...' ಎನ್ನುವ ಮಾತು ಮಾತ್ರ ಹೈಲೈಟ್ ಆಗಿಬಿಟ್ಟಿತ್ತು. ಎಲ್ಲರೂ ಹವ್ಯಕ ಬ್ರಾಹ್ಮಣ ಶಿಕ್ಷಕರಾದರೂ ನಮ್ಮ ಇಂಗ್ಲಿಷ್ ಸರ್, "ಏನಾಯ್ತು ನೀನು ಹೇಳು..." ಎಂದು ನನಗೊಂದು ಅವಕಾಶ ಕೊಟ್ಟಿದ್ದರು. ನಾನು ನಡೆದ ವಿಷಯ ತಿಳಿಸಿ, "ಮೀನು ಪ್ರೈ ರುಚಿ ಇರ್ತದಾ ಎಂದು ಕೇಳಿದರು. ನಾನು ಅಪ್ಪೆಹುಳಿಗಿಂತ ರುಚಿ ಎಂದಿದ್ದು ನಿಜ..." ಎಂದು ಹೇಳಿದೆನಲ್ಲದೆ, "ನಮ್ಮ ಆಹಾರದ ಬಗ್ಗೆ ಕುಹಕ ಯಾಕೆ?" ಎಂದೂ ಸೇರಿಸಿದ್ದೆ. ಮುಖ್ಯೋಪಾಧ್ಯಾಯರಿಗೆ ವಿಷಯ ಬೆಳೆಸುವುದು ಬೇಡವಿತ್ತು. ಜೊತೆಗೆ ನನ್ನ ಮುಖದಲ್ಲಿ ಕಾಣುತ್ತಿದ್ದ ಕೋಪ, ಅವಮಾನ ಹಾಗೂ ದುಃಖ ಕಂಡು, ಏನಾದರೂ ಅನಾಹುತ ಮಾಡಬಹುದು ಹುಡುಗಿ ಎಂದೆನಿಸಿತೋ ಏನೋ. "ನೋಡಿ ಆರ್ ಎಮ್ ಹೆಗಡ್ರೆ, ಅವರವರ ಊಟ ಅವರವರದ್ದು. ನೀವು ಹಾಗೆಲ್ಲ ಊಟದ ಬಗ್ಗೆ ಮಾತಾಡಬೇಡಿ..." ಎಂದಿದ್ದಲ್ಲದೆ, "ಇವಳು ಅಣ್ಣ ಉಲ್ಲಾಸನ ಹಾಗೆ ಶಾಂತ ಸ್ವಭಾವದವಳಲ್ಲ. ಮೂಗಿನ ತುದಿಲೇ ಸಿಟ್ಟು," ಎಂದು ಬೈಯ್ದು ಕ್ಲಾಸಿಗೆ ಕಳಿಸಿದ್ದರು.

ಆದರೆ, ಅಂದಿನ ಅವಮಾನ ನಾನು ಮೀನು ಫ್ರೈಯನ್ನು ಇನ್ನಿಲ್ಲದಂತೆ ಪ್ರೇಮಿಸುವಂತೆ ಮಾಡಿಬಿಟ್ಟಿತು. ಆಗಿಂದ ನಾನು ಅಪ್ಪಟ ಮೀನುಪ್ರೇಮಿಯಾಗಿಬಿಟ್ಟೆ. ಮೀನು ಬೇಕಿಲ್ಲದ ಅಪ್ಪ ಮತ್ತು ಮೀನು ಬೇಕು ಅನ್ನಿಸಿದರೂ ಅಪ್ಪನಿಗಾಗಿ ಸುಮ್ಮನಿರುವ ಅಮ್ಮ. ಯಾವುದನ್ನೂ ಬೇಕು ಎಂದು ಎಂದಿಗೂ ಹೇಳದ ಅಣ್ಣ. ಇವರ ನಡುವೆ ನಾನು "ಮೀನು ಬೇಕು..." ಎಂದು ತಿಂಗಳಿಗೊಮ್ಮೆ ನಾವಿದ್ದಲ್ಲಿ ಬರುವ ಅಪ್ಪನ ಚಿಕ್ಕಪ್ಪನಿಗೆ ತಾಕೀತು ಮಾಡುತ್ತಿದ್ದೆ. ಆದರೆ, ಮದುವೆಯಾಗಿದ್ದು ಮಾತ್ರ ಅಪ್ಪಟ ಮೀನುಪ್ರಿಯರ ಮನೆಗೆ.

Image

ದಿನಕ್ಕೆ ಕನಿಷ್ಠ ನಾಲ್ಕೈದು ತರಹದ ಮೀನು ತರುವ ಮಾವ. ಪೇಟೆಗೆ ಹೋದರೆ, ಹೊಸದಾಗಿ ಬರುವ ಮೀನು ಬುಟ್ಟಿಗಳನ್ನು ನೋಡುವುದು, ತಾಜಾ ಇದ್ದರೆ ಕೊಂಡು ಅಲ್ಲಿ ಸಿಗುವ ಯಾರನ್ನಾದರೂ ಕರೆದು, "ಮನೆಗೆ ಹೋಗಿ ಕೊಟ್ಟು ಬಾ," ಎನ್ನುವುದು ಮಾವನ ಕೆಲಸ. ಇದು ವಾರಕ್ಕೆ ನಾಲ್ಕು ದಿನ ಪುನರಾವರ್ತನೆ ಆಗುತ್ತಿತ್ತಂತೆ. ಮೀನು ಹಿಡಿದುಕೊಂಡು ಯಾರಾದಾರೂ ಮನೆ ಬಾಗಿಲಿಗೆ ಬಂದರೆ ಅತ್ತೆಯ ಕೋಪ ನೆತ್ತಿಗೇರುತ್ತಿತ್ತಂತೆ. ಮನೆ, ಗದ್ದೆ, ತೋಟದ ಕೆಲಸಗಳ ನಡುವೆ ತಾಸಿಗೊಮ್ಮೆ ಮೀನು ತಂದರೆ ಅದನ್ನು ಕೊಯ್ದು ಸ್ವಚ್ಛ ಮಾಡಿ ಪದಾರ್ಥ ಮಾಡುವುದು ನಿಜಕ್ಕೂ ಅವರಿಗೆ ಕಷ್ಟವಾಗುತ್ತಿತ್ತು. ಆದರೆ, ಅತ್ತೆಗೂ ಮೀನು ಪದಾರ್ಥ ಮಾಡುವುದೆಂದರೆ ತುಂಬಾ ಪ್ರೀತಿ. ಅತ್ತೆ ಮಾಡುವ ಮೀನು ಸಾರು, ಮಸಾಲಾ ಫ್ರೈ (ನನ್ನ ನಾಡವ ಜನಾಂಗದಲ್ಲಿ ಇದನ್ನು 'ಹಚ್ಚುವುದು' ಎನ್ನುತ್ತಾರೆ) ಹಾಗೂ ಶೆಟ್ಲಿ, ಏಡಿ, ಕಲ್ಗಾ, ಚಿಪ್ಪೆಕಲ್ಲು ಮುಂತಾದವುಗಳ ಸುಕ್ಕಾ - ಸಾರು ಅದ್ಭುತ ರುಚಿಯಾಗಿರುತ್ತಿತ್ತು. ಅದರಲ್ಲೂ, ಅವರು ಮಾಡುತ್ತಿದ್ದ ಫ್ರೈಗೆ (ನಾಡವ ಭಾಷೆಯಲ್ಲಿ 'ಸುಡುವುದು' ಎನ್ನುತ್ತೇವೆ) ಇರುವ ರುಚಿಯನ್ನು ನಾನು ಯಾವ ಸ್ಟಾರ್ ಹೋಟೆಲ್‌ಗಳಲ್ಲೂ ಕಂಡಿಲ್ಲ. ಅದಕ್ಕೆ ಅವರು ತಮ್ಮದೇ ಆದ ಮಸಾಲೆ ತಯಾರಿಸಿಕೊಳ್ಳುತ್ತಿದ್ದರು.

ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | ಊರೆಲ್ಲ ಪರಿಮಳ ಹರಡಿದ ಕಣಿಲೆ ಸುಕ್ಕೆ ಮತ್ತು ಸುನಂದಕ್ಕನ ರಾಯಭಾರ

ಹದಿನೈದು ಕೆಂಪು ಬಣ್ಣದ, ಆದರೆ ಖಾರ ಹದವಾಗಿರುವ ಮೆಣಸು, ಕೊತ್ತಂಬರಿ ಬೀಜ, ಏಳೆಂಟು ಎಸಳು ಬೆಳ್ಳುಳ್ಳಿ, ಹಾಗೂ ಹುಳಿ (ಇಲ್ಲಿ ಹುಳಿ ಎಂದರೆ ಹುಣಸೆ ಹುಳಿ ಅಲ್ಲ. ವಾಟೆ ಹುಳಿ. ವಾಟೆ ಹುಳಿಗೆ ನಮ್ಮ ಜನಾಂಗದ ಮೀನು ಸಾರುಗಳಲ್ಲಿ ಅಗ್ರಸ್ಥಾನ. ಬೇರೆ ಹುಳಿ - ಮಾವಿನ ಹುಳಿ, ಮುರಗಲು ಹುಳಿ, ಹುಣಸೆ ಹುಳಿ - ಹಾಕಿ ಮೀನು ಸಾರು ಮಾಡಿದರೆ, ತಾಟು ತಳ್ಳಿ ಎದ್ದುಹೋಗುವ ನಾಡವ ಗಂಡಸರು ಇಂದಿಗೂ ಇದ್ದಾರೆ. ಹೀಗಾಗಿ, ನಮ್ಮಲ್ಲಿ ವಾಟೆಹುಳಿ ಬಿಟ್ಟು ಬೇರೆ ಹುಳಿ ನಿಷಿದ್ಧ.) ಅಗತ್ಯವಿದ್ದಷ್ಟು ಉಪ್ಪು ಹಾಕಿ ರುಬ್ಬಿಕೊಂಡು ಮಸಾಲೆ ತೆಗೆದರೆ, ಆ ಮಸಾಲೆಯ ವಾಸನೆಗೇ ಅರ್ಧ ಲೋಟ ಅಕ್ಕಿ ಹೆಚ್ಚು ಇಟ್ಟು ಅನ್ನ ಮಾಡಬೇಕಾಗುತ್ತದೆ! ಬೇಕಿದ್ದರೆ ಸಣ್ಣದೊಂದು ಶುಂಠಿಯನ್ನು ರುಬ್ಬುವಾಗ ಸೇರಿಸಿಕೊಳ್ಳಬಹುದು.

ಮೀನು ಕೊಯ್ದು, ಉಪ್ಪು ಹಾಕಿ ತಿರುವಿ ಸ್ವಚ್ಛ ಮಾಡಿ, ಪುನಃ ಉಪ್ಪು ಕಲೆಸಿ ಅರ್ಧ ತಾಸು ಇಡಬೇಕು. ನಂತರ ತೊಳೆದು, ಮೀನಿನ ಎಲ್ಲ ಕಡೆ ಮಸಾಲೆ ಸಮನಾಗಿ ಹರಡಿರುವಂತೆ ಕಲೆಸಿ ಹತ್ತು ನಿಮಿಷ ಬಿಡಬೇಕು. ಸಣ್ಣ ರವೆಯಲ್ಲಿ ಉರುಳಾಡಿಸಿ ಕಾವಲಿಗೆ ತುಸುವೇ ಎಣ್ಣೆ ಹಾಕಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಆಗಾಗ ತಿರುವಿ ಹಾಕುತ್ತ ಮೀನಿನ ಮೇಲ್ಪದರ ತುಸುವೂ ಕಪ್ಪಾಗದಂತೆ ನೋಡಿಕೊಳ್ಳುವುದು ಮುಖ್ಯ. ಬಿಸಿ-ಬಿಸಿ ರವಾ ಫ್ರೈ ಊಟಕ್ಕಾದರೂ ಸೈ, ಬೇಕಿದ್ದರೆ ಚಹಾಕ್ಕಾದರೂ ಸೈ.

Image

ನಾನು ಮೀನು ಫ್ರೈ ಫೋಟೋ ಹಾಕಿದಾಗಲೆಲ್ಲ, "ರವಾ-ತವಾ ಪ್ರೈ ಮಾಡ್ತೀರಲ್ಲ? ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ನನಗೆ ಏನಿದ್ದರೂ ಡೀಪ್ ಫ್ರೈ ಇಷ್ಟ," ಎಂದು ಬಹಳಷ್ಟು ಜನ ಹೇಳುವುದುಂಟು. ಆದರೆ, ನಮ್ಮಲ್ಲಿ ಹಿರಿಯರು ಮೂರು ಹೊತ್ತು ಊಟ ಮಾಡುತ್ತಿದ್ದರು. ಹತ್ತು- ಹತ್ತೂವರೆಗೆ ಗಂಜಿ ಊಟ, ಮೂರರಿಂದ ನಾಲ್ಕು ಗಂಟೆಯೊಳಗೆ ಮಧ್ಯಾಹ್ನದ ಊಟ (ಇದಕ್ಕೆ ಒಂಬತ್ತು ತಾಸಿನ ಊಟ ಎನ್ನುತ್ತಿದ್ದರು), ನಂತರ ರಾತ್ರಿ ಎಂಟೂವರೆಯೊಳಗೆ ರಾತ್ರಿಯೂಟ. ಕೃಷಿ ಮೂಲದ ಶ್ರಮಜೀವಿಗಳಾದ ಹಿರಿಯರಿಗೆ ಮೂರು ಊಟ ಅತ್ಯವಶ್ಯವಾಗಿತ್ತು. ಮತ್ತು ಮೂರೂ ಊಟಕ್ಕೆ ಮೀನಿನ ಮಸಾಲೆ, ಫ್ರೈ ಕಡ್ಡಾಯ. ಹೀಗಿರುವಾಗ, ಎಣ್ಣೆ ಜಾಸ್ತಿ ಹಾಕಿ ಮಸಾಲಾ ಫ್ರೈ ಮಾಡುವುದು ಅಥವಾ ಡೀಪ್ ಫ್ರೈ ಮಾಡುವುದು ಮಾಡಿದರೆ ಆರೋಗ್ಯದ ಗತಿಯೇನು? ಇಂದಿಗೂ ರವಾ-ತವಾ ಫ್ರೈಗೆ ಎಣ್ಣೆ ತುಸು ಜಾಸ್ತಿಯಾದರೂ ತಿನ್ನದೆ ಬಿಟ್ಟುಬಿಡುವವರಿದ್ದಾರೆ ನಮ್ಮಲ್ಲಿ. ಹೀಗಾಗಿ, ಒಣದಾದ ರವಾ-ತವಾ ಫ್ರೈ ನಮ್ಮಲ್ಲಿ ಎಲ್ಲರಿಗೂ ಅಚ್ಚುಮೆಚ್ಚು.

ಅಂದಹಾಗೆ, ನಾನು ಹೇಳಿದ ಮಸಾಲೆ ತೆಗೆದು ಒಮ್ಮೆ ರವಾ ಫ್ರೈ ಮಾಡಿ ನೋಡಿ. ಸಣ್ಣ ಉರಿಯಲ್ಲಿ ತುಸುವೇ ಎಣ್ಣೆ ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಬೇಕಿದ್ದರೆ ಮಸಾಲೆ ರುಬ್ಬುವಾಗ ಸಣ್ಣ ಶುಂಠಿ, ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಿ; ನಿಜಕ್ಕೂ ಒಂದು ಸಂತೃಪ್ತ ಊಟವಾಗುತ್ತದೆ.

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
9 ವೋಟ್