ರುಚಿ-ಅಭಿರುಚಿ | ಮುಲಾಜಿಲ್ಲದೆ ಹೊಟ್ಟೆ ತುಂಬ ಊಟ ಮಾಡಿಸುವ ಅಣಬೆ ಕರಿ

ಮಲೆನಾಡ ಕಡೆ ಈಗಲೂ ಸಾಕಷ್ಟು ಮಂದಿ ಸಸ್ಯಾಹಾರಿಗಳು ಅಣಬೆ ಪದಾರ್ಥ ತಿನ್ನುವುದಿಲ್ಲ. ಮಾಂಸಾಹಾರಿಗಳು ಕೂಡ ವಾರದ ದಿನ ಅಣಬೆ ತಿನ್ನೋಲ್ಲ! ನಮ್ಮ ಮನೆಗಳಲ್ಲೀಗ ಅಣಬೆ ಬಗ್ಗೆ ಇಂತಹ ಮಡಿವಂತಿಕೆ ಇಲ್ಲ. ಆದರೆ, ತಿನ್ನಲು ಯೋಗ್ಯವಾದ ಅಣಬೆಗಳನ್ನು ಬೆಟ್ಟದಿಂದ ತಂದು ಅಡುಗೆ ಮಾಡೋದು ಅಪರೂಪವೇ. ಅದೇನೇ ಇದ್ದರೂ, ನನಗಂತೂ ಅಣಬೆ ಬಹಳ ಇಷ್ಟ

ನಮ್ಮ, ಅಂದರೆ, ಒಟ್ಟಾರೆ ಭಾರತೀಯ ಅಡುಗೆಯ ಪದ್ಧತಿ ಗಮನಿಸಿ. ಇಲ್ಲಿ ಹೆಚ್ಚಾಗಿ ತಿನಿಸುಗಳನ್ನು ತಯಾರಿಸಲು ಬೇಕಾದ ಸಮಯ ಜಾಸ್ತಿ. ಆದರೆ, ತಿಂದು ಮುಗಿಸುವುದು ಬೇಗ.‌ ಹೆಚ್ಚಿನ ಅಡುಗೆಗಳನ್ನು ಗಂಟೆಗಟ್ಟಲೆ ಶ್ರಮವಹಿಸಿ ಮಾಡುತ್ತೇವೆ. ಆದರೆ, ಊಟಕ್ಕೆ ತೆಗೆದುಕೊಳ್ಳೋ ಸಮಯ? ಕಾಲು ಗಂಟೆ... ಅರ್ಧ ಗಂಟೆ... ಅದಕ್ಕೂ ಜಾಸ್ತಿಯಾದರೆ ಬೈಗಳು ಪಕ್ಕಾ. ನಿಧಾನಕ್ಕೆ ಸಮಯ ತೆಗೆದುಕೊಂಡು ಊಟ ಮಾಡುವುದನ್ನು ಅಶಿಸ್ತು ಎಂದೇ ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಆ ಅಭ್ಯಾಸ ಬದಲಾಗತೊಡಗಿದೆ ನಿಧಾನಕ್ಕೆ.

ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | ಊರೆಲ್ಲ ಪರಿಮಳ ಹರಡಿದ ಕಣಿಲೆ ಸುಕ್ಕೆ ಮತ್ತು ಸುನಂದಕ್ಕನ ರಾಯಭಾರ

ನಾನು ಬೇಗ ಊಟ ಮಾಡುವ ಮತ್ತು ನಿಧಾನಕ್ಕೆ ಊಟ ಮಾಡುವ ಎರಡೂ ವಿಧಾನಗಳಿಗೆ ಹೊಂದಿಕೊಂಡರೂ, ಅಡುಗೆ ಮಾಡುವಾಗ ಮಾತ್ರ ಬೇಗ ಮಾಡಿ ಆಗುವಂತಹ ಅಡುಗೆಗಳೇ ಇಷ್ಟ. ಅಡುಗೆ ಇಷ್ಟದ ಕೆಲಸವೇ ಆದರೂ ನನಗದು ಬೇಗ ಮುಗಿದುಬಿಡಬೇಕು‌. ಇನ್ನು, ಆ ಶೈಲಿ-ಈ ಶೈಲಿ ಅಂತೆಲ್ಲ ಹೆಚ್ಚಾಗಿ ನೋಡಲು ಹೋಗುವುದಿಲ್ಲ. ನಾಲಿಗೆಗೆ ಇಷ್ಟವಾದರೆ ಆಯಿತು. ಆದರೂ ಯಾಕೋ ಏನೋ ಮಾಂಸಾಹಾರ ಪ್ರಯತ್ನಿಸಬೇಕೆಂದು ಅನ್ನಿಸಿಲ್ಲ‌. ಗೆಳೆಯರು ನಾನಾ ಅಡುಗೆಯ ಪಟ ಹಾಕಿದಾಗ, 'ವಿಲೇಜ್ ಕುಕಿಂಗ್' ಚಾನಲ್ಲಿನಲ್ಲಿ ನೋಡಿ ಖುಷಿಪಟ್ಟರೂ ಎದುರಿದ್ದಾಗ ತಿನ್ನಲು ಮನಸ್ಸು ಹಿಂಜರಿಯುತ್ತದೆ. ಏನೇ ಇರಲಿ, ಮುಖ್ಯ ವಿಷಯದ ಕಡೆಗೆ ಬರೋಣ.

Image

ಮಲೆನಾಡ ಕಡೆ ಈಗಲೂ ಬಹಳ ಜನ ಸಸ್ಯಾಹಾರಿಗಳು ಅಣಬೆ ತಿನ್ನುವುದಿಲ್ಲ. ಮಾಂಸಾಹಾರಿಗಳು ಕೂಡ ವಾರದ ದಿನ ಅಣಬೆ ತಿನ್ನೋಲ್ಲ. ಅಣಬೆಯ ಬಗ್ಗೆ ಈಗ ಅಂತಹ ಮಡಿವಂತಿಕೆಯನ್ನು ನಮ್ಮ ಮನೆಗಳಲ್ಲಿ ಕಾಣುತ್ತಿಲ್ಲ. ಆದರೆ, ಮಳೆಗಾಲದಲ್ಲಿ ಊರಿನ ಕಡೆ ಹೋಗೋದು ಅಪರೂಪವಾದ ಕಾರಣ ತಿನ್ನಲು ಯೋಗ್ಯವಾದ ಅಣಬೆಗಳನ್ನು ಬೆಟ್ಟದಿಂದ ತಂದು ಅಣಬೆಯಡುಗೆ ಮಾಡೋದು ಕನಸಾಗಿಯೇ ಉಳಿದಿದೆ. ಏನೇ ಇದ್ದರೂ, ನನಗೆ ಅಣಬೆ ಬಹಳ ಇಷ್ಟ. ವಿದೇಶದಲ್ಲಿದ್ದಾಗಲೂ ಬೇರೆ-ಬೇರೆ ರೀತಿಯ ಅಣಬೆಗಳ ರುಚಿ ನೋಡಿದ್ದೇನೆ.

ಇತ್ತೀಚೆಗೆ ಅಂಗಡಿಗೆ ಹೋದಾಗ, ಮಾಮೂಲಿ ಬಟನ್ ಅಣಬೆಗಳ ಜೊತೆ ಕಾಡು ಅಣಬೆಯ ರೀತಿ ಇರುವ ಅಣಬೆಗಳು ಕಂಡಿದ್ದವು. ಗೊಂಚಲು ಗೊಂಚಲಾದ ಅಣಬೆಗಳು. ಜ್ವರ ಬಂದು ನಾಲಿಗೆ ರುಚಿ ಕೆಟ್ಟಿತ್ತು. ಒಳ್ಳೇ ಅಣಬೆ ಕರಿ ಮಾಡೋಣವೆಂದು ತಂದೇಬಿಟ್ಟೆ.

Image

ಅಣಬೆ ಕರಿ ಮಾಡೋದೇನು ಬ್ರಹ್ಮವಿದ್ಯೆಯೇ? ಬಹಳ ಸುಲಭ‌. ಅರ್ಧ ಗಂಟೆ ಸಾಕು. ಮೊದಲು ಅಣಬೆಗಳನ್ನು ಚೆನ್ನಾಗಿ ತೊಳೆದು, ಬೇಕಾದ ಅಳತೆಗೆ ಕತ್ತರಿಸಿ ತವಾಕ್ಕೆ ಹಾಕಿ, ಐದಾರು ನಿಮಿಷ ಹುರಿದುಕೊಳ್ಳಬೇಕು. ನೀರಿನ ಅಂಶ ಬಿಟ್ಟುಕೊಳ್ಳುತ್ತದೆ; ಅದನ್ನು ಚೆಲ್ಲಿ, ಇದನ್ನು ಒಂದು ಬಟ್ಟಲಿಗೆ ಹಾಕಿಟ್ಟುಕೊಳ್ಳಿ. ಆಮೇಲೆ ಅದೇ ತವಾವನ್ನು ನೀಟಾಗಿ ಒರೆಸಿ ಮುಂದಿನ ಹಂತಕ್ಕೆ ಸಿದ್ಧರಾಗಿ. ನಾನು ಕೊಬ್ಬರಿ ಎಣ್ಣೆ ಮತ್ತು ಬೆಣ್ಣೆ ಮಿಶ್ರ ಮಾಡಿ ಮಸಾಲೆ ಹುರಿಯುತ್ತೇನೆ ಸಾಮಾನ್ಯ. ಅಂದರೆ, ಕಾದ ಎಣ್ಣೆ ಮತ್ತು ಬೆಣ್ಣೆ ಮಿಶ್ರಣಕ್ಕೆ ನಾಲ್ಕು ಮೊಗ್ಗು ಲವಂಗ, ಚೂರು ಚಕ್ಕೆ ಹಾಕಿ; ಮಸಾಲೆ ಪರಿಮಳ ಬಂದ ನಂತರ, ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ, ಗೋಡಂಬಿ, ಹಸಿಮೆಣಸು, ಶುಂಟಿ ಮತ್ತು ಈರುಳ್ಳಿ ಹಾಕಿ ಹುರಿಯಬೇಕು. ಈರುಳ್ಳಿ ಬಂಗಾರದ ಬಣ್ಣಕ್ಕೆ ಬಂದ ನಂತರ ಚೂರು ಅರಿಶಿಣ ಹಾಕಿ. ಆಮೇಲೆ ಚಿಕ್ಕದಾಗಿ ಹೆಚ್ಚಿದ ಎರಡು ಟೊಮ್ಯಾಟೋ ಹಾಕಿ ಹುರಿದುಕೊಳ್ಳಬೇಕು. ಸ್ವಲ್ಪ ಕಸೂರಿ‌ಮೆಂತೆ ಬರೆಸಿದರೆ ಒಳ್ಳೆಯದು. ಎರಡು ಚಮಚ ಗರಂ ಮಸಾಲಾ, ಒಂದು ಅಥವಾ ಎರಡು ಚಮಚ ಜೇನನ್ನು ಹಾಕಿ ಚೆನ್ನಾಗಿ ಕಲೆಸಿ. ಮಸಾಲೆ ಸಿದ್ಧ. ಮಸಾಲೆ ತಣಿದ ನಂತರ ಮಿಕ್ಸಿಗೆ ಹಾಕಿ ಚಂದ ರುಬ್ಬಿ. ಬೇಕಾದಷ್ಟು ನೀರು ಸೇರಿಸಿಕೊಂಡು (ಅನ್ನಕ್ಕಾದರೆ ಚೂರು ಜಾಸ್ತಿ ನೀರು. ಚಪಾತಿಗಾದರೆ ಕಮ್ಮಿ), ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಅಣಬೆ ಹಾಕಿ ಕುದಿಸಬೇಕು. ನಂತರ ಕರಿಬೇವು ಮತ್ತು ಹಸಿಮೆಣಸಿನ ಒಗ್ಗರಣೆ. ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಅದ್ಭುತವಾದ 'ಮಶ್ರೂಂ ಕರಿ' ರೆಡಿ.

ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | 'ಏನೇ ಮೀನು ರಾಶಿಯವಳೇ... ಮೀನು ರುಚಿ ಇರ್ತ?' ಎಂಬ ವ್ಯಂಗ್ಯ ಹೊತ್ತಿಸಿದ ಕಿಡಿ

"ಇದೇನೋ...? ನೋಡಕೆ ಪಕ್ಕಾ ನಾನ್ ವೆಜ್ ತರ ಕಾಣ್ತಾ ಇದ್ಯಲ್ಲೋ!" ಅಂತ ದೀಪ್ತಿ ಅಂದಳು. "ನೋಡೋಕೆ ಹಾಗಿದ್ರೂ ಇದು ವೆಜ್ಜು - ಸಕ್ಕತ್ತಾಗಿದೆ ತಿನ್ನು," ಅಂದೆ. ವಾರದ ಅನಾರೋಗ್ಯದ ನಂತರ ಮೊದಲ ಬಾರಿ ಹೊಟ್ಟೆ ತುಂಬಾ ಊಟ ಮಾಡಿದೆ.

ನಿಮಗೆ ಏನು ಅನ್ನಿಸ್ತು?
6 ವೋಟ್