
ಕಿಶೋರಿ ಅಮೋನ್ಕರ್ ಹೆಸರಾಂತ ಹಿಂದುಸ್ತಾನಿ ಗಾಯಕಿ. 1932, ಏಪ್ರಿಲ್ 10ರಂದು ಸಂಗೀತ ಕುಟುಂಬದಲ್ಲಿ ಜನಿಸಿದ ಕಿಶೋರಿ ಅವರ ತಾಯಿ ಜೈಪುರ್ ಘರಾನಾ ಶೈಲಿಯ ಸಂಗೀತದಲ್ಲಿ ಹೆಸರುವಾಸಿಯಾಗಿದ್ದರು. ತಾಯಿಯಿಂದ ಜೈಪುರ್ ಘರಾನಾ ಸಂಗೀತವನ್ನು ಕಲಿತ ಕಿಶೋರಿ ಸಂಗೀತದಲ್ಲಿ ತಮ್ಮದೇ ಶೈಲಿಯನ್ನು ರೂಪಿಸಿಕೊಂಡು ಬೆಳೆದರು ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮ ಛಾಪು ಮೂಡಿಸಿದರು. ಸಂಗೀತ ಲೋಕಕ್ಕೆ ಇವರ ಕೊಡುಗೆಯನ್ನು ಪರಿಗಣಿಸಿ ಪದ್ಮ ಭೂಷಣ(1987), ಪದ್ಮ ವಿಭೂಷಣ (2002)ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇಂತಹ ಅಪೂರ್ವ ಸಂಗೀತ ಕಲಾವಿದರ ನೇರ ಶಿಷ್ಯೆಯಾಗಿ ಸಂಗೀತ ಸಾಧನೆ ಮಾಡಿದ ಡಾ. ಕೆ ಎಸ್ ವೈಶಾಲಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.