ವಿಶೇಷ ಲೇಖನ | ಕಡಲು, ಕಂಬಳ, ಕೆಸರುಗದ್ದೆ ಆಟ, ಹುಲಿ ವೇಷ... ಕುಂದಾಪುರಕ್ಕೊಮ್ಮೆ ಬನ್ನಿ ಮಾರ್‍ರೆ

ಸಮೃದ್ಧ ಭಾಷೆಯೊಂದು ಹೇಗಿರುತ್ತದೆ, ಅಂಥದ್ದೊಂದು ಭಾಷೆಯ ಚಹರೆ ಹೇಗಿರುತ್ತದೆ ಎಂದು ಯಾರಾದರೂ ಕೇಳಿದರೆ, ಥಟ್ಟನೆ 'ಕನ್ನಡ' ಎಂದು ನೀವು ಧಾರಾಳ ಹೇಳಬಹುದು. ನಿಮ್ಮ ಉತ್ತರಕ್ಕೆ ಬಲ ಕೊಡಲು ನೂರಕ್ಕೂ ಹೆಚ್ಚು ನುಡಿಗಟ್ಟುಗಳು ಕರ್ನಾಟಕಾದ್ಯಂತ ಸಿಗುತ್ತವೆ. ಅದರಲ್ಲಿ ಕುಂದಾಪ್ರ ಕನ್ನಡವೂ ಒಂದು. ಜುಲೈ 24ರಿಂದ 30ರವರೆಗೆ ಈ ನುಡಿಯ ಹಬ್ಬ

ಕುಂದಾಪುರದಲ್ಲಿ ಕುಂದೇಶ್ವರ (ಈಶ್ವರ) ದೇವಸ್ಥಾನ ಇದ್ದುದರಿಂದಲೋ, ಕುಂದವರ್ಮನೆಂಬ ರಾಜ ಈ ಪ್ರಾಂತ್ಯವನ್ನು ಆಳ್ವಿಕೆ ಮಾಡಿದ್ದರಿಂದಲೇ ಈ ಊರಿಗೆ "ಕುಂದಾಪುರ' ಎಂದು ಹೆಸರು ಬಂತು ಎಂದು ಇತಿಹಾಸ ಹೇಳುತ್ತದೆ. 'ಕುಂದ' ಎಂದರೆ 'ಮಲ್ಲಿಗೆ ಹೂ' ಎಂಬ ಅರ್ಥವೂ ಇದೆ. ಈ ಭಾಗದ ಜನರು ಬಹಳ ಹಿಂದಿನ ಕಾಲದಿಂದಲೂ ಮಲ್ಲಿಗೆ ಹೂವನ್ನು ಬೆಳೆಯುತ್ತಿದ್ದರಂತೆ. ಹಾಗಾಗಿ, ಈ ಪ್ರಾಂತ್ಯಕ್ಕೆ 'ಕುಂದಾಪುರ' ಎಂಬ ಹೆಸರು ಬಂತು ಎಂಬುದು ಚರಿತೆ. ಭೌಗೋಳಿಕವಾಗಿ ಹೇಳುವುದಾದರೆ, ಕುಂದಾಪುರ ತಾಲೂಕಿನಲ್ಲಿ ವಾಸಿಸುವ ಜನರು ಮಾತನಾಡುವ ಕನ್ನಡವೇ 'ಕುಂದಾಪ್ರ ಕನ್ನಡ.' 'ಕುಂದಗನ್ನಡ' ಕೂಡ ಹೇಳುವುದುಂಟು. ಬಹಳ ಹಿಂದೆ ಇದನ್ನು 'ಕೋಟ ಕನ್ನಡ' ಎಂದೂ ಕರೆಯುತ್ತಿದ್ದರಂತೆ.

ಕುಂದಾಪ್ರ ಕನ್ನಡ ಮಾತನಾಡುವುದು, ಕೇಳುವುದೇ ಒಂದು ಖುಷಿ. ಇದರ ವಿಶೇಷತೆ ಏನೆಂದರೆ, ಕರ್ನಾಟಕದ ಬೇರೆ ಭಾಗದ ಕನ್ನಡಿಗರು ಮಾತನಾಡುವ ಕನ್ನಡಕ್ಕಿಂತ ಬಹಳ ವೇಗವಾಗಿ ಮಾತನಾಡುವುದು. ಅಂದರೆ, ಹೇಳಬೇಕಾದ ಮಾತನ್ನು ಚುರುಕಾಗಿ ಅಕ್ಷರವನ್ನು ಮೊಟುಕುಗೊಳಿಸಿ ಮಾತನಾಡುವುದು. ನಿಜಾಂಶದಲ್ಲಿ ಇವರು ಮಾತನಾಡುವುದು ಕನ್ನಡವೇ ಆದರೂ ಕೊಂಚ ಭಿನ್ನ ಶೈಲಿ. ಉದಾಹರಣಿ ಕೊಡ್ಕ್ ಅಂದ್ರೆ - ಊಟ ಆಯ್ತಾ ಅಂತ ಕೇಳೋಕೆ 'ಉಂಡ್ಯಾ,' 'ಮುಖ - ಸೊಡ್' 'ತಗೊಳ್ಳಿ - ತೆಕಣಿ', 'ಊಟಕ್ಕೆ ಹೋಗೋಣ - ಉಂಬುಕ್ ಹೋಪ,' 'ಒರೆಸುವುದು ಮತ್ತು ಗುಡಿಸುವುದು - ಒರ್ಸಿ - ಗುಡ್ಸುದ್,' 'ಕುತ್ತಿಗೆ - ಮ್ಯಾಳಿ,' 'ಏನಿದೆ - ಎಂತ ಇತ್,' 'ಬರುತ್ತೀಯಾ - ಬತ್ಯಾ' 'ಹೋಗುತ್ತೀಯಾ - ಹೋತ್ಯಾ' - ಹೀಗೆ ಗ್ರಾಂಥಿಕ ಕನ್ನಡದ ಪದಗಳು ಬೇರೆಯೇ ರೂಪ ತಾಳುತ್ತವೆ. ಕುಂದಗನ್ನಡದಲ್ಲಿ ಮಹಾಪ್ರಾಣ ಪದಗಳೇ ಕಮ್ಮಿ. ಹಾಗಾಗಿಯೇ ಈ ಶೈಲಿಯು ನಯ ನವಿರು. ಈ ಭಾಷೆಯನ್ನು ಮಾತನಾಡುವಾಗ ಕಿವಿಗೊಟ್ಟು ಆಲಿಸುವುದೇ ಒಂದು ಚಂದದ ಅನುಭವ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಗಾದಿ ಅಂದ್ರ ಕುಂದಾಪ್ರ ಗಾದಿ, ಜನ ಅಂದ್ರ ಕುಂದಾಪ್ರ ಜನ

ಕುಂದಗನ್ನಡದಲ್ಲಿ ದೇಸಿ ಸೊಗಡಿನ ಕೃಷಿ ಬದುಕಿನ ಚಿತ್ರಣವನ್ನು ಹೊಂದಿರುವ ನೂರಾರು ಗಾದೆ ಮಾತು, ಒಗಟು, ಬೈಗುಳಗಳನ್ನು ಕಾಣಬಹುದು; ಕರ್ನಾಟಕದ ಇತರೆ ಪ್ರಾಂತ್ಯಗಳ ಯಾವುದೇ ನುಡಿಗಟ್ಟಿಗೆ ಹೋಲಿಸಿದರೆ, ಇದು ಕುಂದಗನ್ನಡದ ವಿಶೇಷ ಎನ್ನಲು ಅಡ್ಡಿಯಿಲ್ಲ. "ಕುಪ್ಳ ಹಾರಿ ಹೋಯ್ತ್, ಕೊಳ್ಕಿ ಗೆದ್ದಿ ಉರ್ದ್ ಹೋಯ್ತ್," "ಕುಟ್ಟಿ ಕುಂದಾಪ್ರಕ್ಕೋದಂಗೆ," "ಎತ್ ಸತ್ ಹೋಯ್ತ್, ಒಣ್ಗ್ ಬಿಟ್ ಹೋಯ್ತ್," "ಹೆಡ್ಡ ಹೆಂಡ್ತಿ ಮನಿಗ್ ಹೋದಂಗಾಯ್ತ್," "ಕಲ್ತದ್ ಹೆಚ್ಚಾಯ್ತ್, ಕಾಲ್ ಮೇಲ್ ಆಯ್ತ್, ಗಾಳಿ ಬರ್ಕ್, ಮನಿಗ್ ಹೋಯ್ಕ್," "ಕೊಳ್ಕಿಬೈಲರ್ ಎತ್ತಿನ ಹಿಸ್ದಂಗೆ," "ವಕ್ವಾಡಿಯರ್ ಬಂದ್ ಗ್ವಾಡಿ ಉಳಸ್ರ್," "ಬಸೂರ್ ಉಪ್ಚಾರೋ," ಅನ್ನೋ ಗ್ರಾಮೀಣ ಸೊಗಡಿನ ಗಾದೆಗಳು. "ಅಮ್ಮ ಕೊಟ್ಟ ಚಾಪಿ ಮಡ್ಸುಕೆಡಿಯಾ," "ಅಪ್ಪ ತೊಡಿ ಮರ, ಮಗ ಗೆರ್ಸಿಹರ," ಅಂಗಿ ಕಳ್ಚದಾ, ಬಾಮಿಗೆ ಹಾರದ," "ಚಣ್ಣ ಕ್ವಾಣಿಗೆ ಚಿಕ್ಕಿ ಕೂಡಿತ್ತ್," ಎಂಬ ಒಗಟುಗಳು. ಈ ಗಾದೆ ಮಾತು, ಒಗಟುಗಳಿಗೆ ಪ್ರಾದೇಶಿಕ ಇತಿಮಿತಿಗಳಿದ್ದರೂ ಇದರ ಅರ್ಥ, ಆಶಯ ಎಲ್ಲ ಪ್ರದೇಶಕ್ಕೂ, ಕಾಲಕ್ಕೂ ಅನ್ವಯಿಸುತ್ತದೆ. ಕುಂದಾಪ್ರ ಕನ್ನಡದ ಹಿತವಾದ ಬೈಗುಳಗಳನ್ನು ನಾವು ನಾಟಕ, ಸಿನಿಮಾಗಳಲ್ಲಿ ಕೇಳಿ ಆನಂದಿಸಿರುತ್ತೇವೆ. ಇಷ್ಟೇ ಅಲ್ಲ, ಕುಂದಾಪುರದ ಕುಚ್ಚಲಕ್ಕಿ ಅನ್ನ, ಕಾಣೆ ಮೀನಿನ ಸಾರು, ಊರ್ ಕೋಳಿ ಸಾರಿನ ಊಟವನ್ನು ಒಮ್ಮೆ ಸವಿದವರು ಅದರ ರುಚಿಯನ್ನು ಮರೆಯುವುದುಂಟೆ.

ಹೊಯ್ ನೀವ್ ಕುಂದಾಪ್ರ ಬದಿಯರಾ...?

Image
ಚಿತ್ರ ಕೃಪೆ: ರಾಮ್ ಅಜೆಕಾರು

ಕುಂದಾಪುರದ ಜನ ಬಹಳ ಹಿಂದಿನಿಂದಲೂ ವ್ಯಾಪಾರ, ಉದ್ಯೋಗದ ನಿಮಿತ್ತ ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿ ಅಲ್ಲೇ ಕಾಯಂ ನೆಲೆ ನಿಂತಿದ್ದರೂ ಅವರು ತಮ್ಮ ತಾಯಿ ನೆಲದ ಭಾಷೆಯನ್ನು ಮರೆತಿಲ್ಲ. ಅವರೆಲ್ಲರೂ ತಮ್ಮ-ತಮ್ಮ ಮನೆಯೊಳಗೆ ಮಾತನಾಡುವುದು ಕುಂದಾಪ್ರ ಕನ್ನಡದಲ್ಲೇ. ಹುಟ್ಟಿದಾಗಿನಿಂದ ಮಾತಾಡಿಕೊಂಡು ಬಂದಿರುವ ಈ ಭಾಷೆ ನಮ್ಮವರ ಮನಸ್ಸಿನಲ್ಲಿ ಬೆರೆತುಹೋಗಿದೆ. ನಮ್ಮ ಭಾಷೆಯಲ್ಲೇ ಹೇಳುವುದಾದರೆ, "ಇದ್ ನಮ್ ಅಬ್ಬಿ ಭಾಷಿ, ಅಬ್ಬಿ ಭಾಷಿ ಮಾತಾಡುಕೆ ಸಿಕ್ರೆ ಆಪು ಖುಷಿಯೇ ಬೇರೆ ಕಾಣಿ." ತಾಯಿಯೊಂದಿಗೆ ಮಗುವಿಗೆ ಇರುವ ಬಿಡಿಸಲಾಗದ ನಂಟಿನಂತೆ ಈ ಭಾಷೆ ನಮ್ಮ ಜನರ ಬದುಕಿನೊಂದಿಗೆ ಬೆರೆತುಹೋಗಿದೆ. ಎಲ್ಲೋ ಪರ ಊರಿನಲ್ಲಿ ನೆಲೆಸಿರುವಾಗ ಅಥವಾ ಪ್ರವಾಸಕ್ಕೆಂದು ಹೋದಾಗ ನಮ್ಮೂರಿನ ಭಾಷೆ ಮಾತಾಡುವ ಜನ ಸಿಕ್ಕಾಗ ಅವರೊಂದಿಗೆ, "ಹೊಯ್ ನೀವ್ ಕುಂದಾಪ್ರ ಬದಿಯರಾ..! ನಮ್ದು ಕುಂದಾಪ್ರವೇ, ನಿಮ್ ಮನಿ ಎಲ್?" ಅಂತಲೇ ನಮ್ಮವರ ಸಂಭಾಷಣೆ ಶುರುವಾಗುತ್ತದೆ. ಪರಿಚಯ ಸ್ನೇಹವಾಗಿ ಗಂಟೆಗಟ್ಟಲೇ ಊರಿನ ಸಮಾಚಾರಗಳ ಬಗ್ಗೆ ಹರಟುತ್ತಾರೆ.

ಒಮ್ಮೆ ನಾನು ಅಮೃತಸರಕ್ಕೆ ಪ್ರವಾಸ ಹೋಗಿದ್ದೆ. ಜಲಿಯನ್‌ ವಾಲಾಬಾಗ್‌ನಲ್ಲಿ ನಮ್ಮೂರಿನವರೊಬ್ಬರು ನಾನು ಕುಂದಗನ್ನಡ ಮಾತನಾಡುವುದನ್ನು ಕೇಳಿ ನನ್ನ ಬಳಿ ಬಂದು ನೀವು ಕರ್ನಾಟಕದವರಾ, ಉಡುಪಿ - ಕುಂದಾಪುರ ಕಡೆಯವರಾ ಎಂದು ವಿಚಾರಿಸಿ; ನಾನು ಹೌದು ನನ್ನದು ಕುಂದಾಪುರ ಎಂದಾಕ್ಷಣ ಅವರ ಮುಖದಲ್ಲಿ ಕಂಡ ಸಂತೋಷ ಹೇಳತೀರದು. ಅರ್ಧ ಗಂಟೆ ನನ್ನೊಂದಿಗೆ ಮಾತನಾಡಿ, ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಪ್ರೀತಿಯನ್ನು ತೋರಿದ್ದು ನಾನೆಂದೂ ಮರೆಯಲಾರೆ. ನಮ್ಮನ್ನು ಬೇರೆ ಊರಿನವರು ಗುರುತಿಸುವುದೇ ನಾವಾಡುವ ಭಾಷೆಯಿಂದ. ಅದು ನಮಗೆ ಭಾಷೆ ತಂದು ಕೊಡುವ ಐಡೆಂಟಿಟಿ. ಹಾಗಾಗಿಯೇ ಇದು ಕೇವಲ ಒಂದು ಭಾಷಿಯಲ್ಲ, ಬದುಕು.

ಭಾಷೆಯನ್ನು ಬಳಸಿದರೆ ಉಳಿಸಿದಂತೆಯೇ ಅಲ್ಲವೇ?

Image
ರವಿ ಬಸ್ರೂರು, ಪಂಜು ಗಂಗೊಳ್ಳಿ, ಮನು ಹಂದಾಡಿ

ಇತ್ತೀಚಿನ ದಿನಗಳಲ್ಲಿ ಯುವಜನರು ತಮ್ಮೂರಿನ ಭಾಷೆಯನ್ನು ಮಾತಲ್ಲಿ ಬಳಸಲು ಹಿಂಜರಿಯುವುದನ್ನು ಕಾಣಬಹುದು. ಇದಕ್ಕೆ ಕಾರಣ ತಮ್ಮ ಭಾಷೆಯ ಬಗ್ಗೆ ಇರುವ ಕೀಳರಿಮೆ, ಮುಜುಗರ. ಭಾಷೆಯ ಇತಿಹಾಸ, ಪರಂಪರೆಯ ಬಗ್ಗೆ ಅರಿವಿಲ್ಲದೆಯೋ, ಭಾಷೆಗೆ ಸಿಗದ ಗೌರವದಿಂದಲೋ ಈ ರೀತಿ ಮನೋಭಾವನೆ ಇರುವುದು ಸಹಜ. ಸ್ವತಂತ್ರ ಭಾಷೆಗೆ (ಆಡಳಿತ ಭಾಷೆ?) ಸಿಗುವ ಗೌರವ, ಸ್ಥಾನಮಾನಗಳು ಅದರದ್ದೇ ಬೇರೆ-ಬೇರೆ ರೂಪವಾದ ನುಡಿಗಟ್ಟುಗಳಿಗೂ ಸ್ವಲ್ಪ ಮಟ್ಟಿಗೆ ಸಿಗುವಂತಾದರೆ, ಅಂತಹ ಕೀಳರಿಮೆ ಕಿತ್ತೊಗೆದು ಅಭಿಮಾನ ಮೂಡಿಸಬಹುದು.

ಕುಂದಾಪ್ರ ಕನ್ನಡ ಕುರಿತ ಪ್ರೀತಿ, ಅಭಿಮಾನದಿಂದ ಹಲವಾರು ಚಟುವಟಿಕೆಗಳು ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ಕುಂದಾಪುರ ಸಮೀಪದ ಉಪ್ಪುಂದದಲ್ಲಿ ಸಮಾನಮನಸ್ಕ ಸ್ನೇಹಿತರು ಒಟ್ಟುಗೂಡಿ ನಡೆಸಿಕೊಂಡು ಬರುತ್ತಿರುವ 'ಕುಂದಗನ್ನಡ ಅಧ್ಯಯನ ಕೇಂದ್ರ' ಪ್ರತಿವರ್ಷವೂ ಕುಂದಗನ್ನಡದ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸುತ್ತ ಬರುತ್ತಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮದೇ ತಂಡವನ್ನು ಕಟ್ಟಿಕೊಂಡು ಭಾಷೆಯ ಮೇಲಿನ ಮಮತೆ ಮತ್ತು ಸಾಧಿಸುವ ಹಠದಿಂದ ಕುಂದಾಪ್ರ ಕನ್ನಡದಲ್ಲಿ ಎರಡು ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಿಸಿ ಕುಂದಾಪ್ರ ಜನರ ಮನಸ್ಸು ಗೆದ್ದಿದ್ದಾರೆ. ತಮ್ಮ ಹಾಸ್ಯ ಭಾಷಣದ ಮೂಲಕ ಕುಂದಗನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಮನು ಹಂದಾಡಿಯವರನ್ನು ನಾವು ಅಭಿನಂದಿಸಲೇಬೇಕು. ಇತ್ತೀಚೆಗೆ 'ಕುಂದಾಪ್ರ ಕನ್ನಡ ನಿಘಂಟು' ಸಂಪಾದಿಸಿದ ಪಂಜು ಗಂಗೊಳ್ಳಿಯವರ ಪ್ರಯತ್ನ ಮೆಚ್ಚುವಂಥದ್ದು. ಇವರಲ್ಲದೆ, ತೆರೆಮರೆಯಲ್ಲಿ ಇದ್ದುಕೊಂಡು ಕುಂದಾಪ್ರ ಕನ್ನಡಕ್ಕಾಗಿ ತಮ್ಮ ಕೊಡುಗೆ ನೀಡುತ್ತಿರುವ ಎಲ್ಲರನ್ನೂ ನಾವು ಅಭಿನಂದಿಸಲೇಬೇಕು.

ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ 'ಕುಂದಗನ್ನಡ ಅಧ್ಯಯನ ಪೀಠ' ಸ್ಥಾಪಿಸುವ ಪ್ರಸ್ತಾಪ ಕೇಳಿಬಂದಿರುವುದು ಅತ್ಯುತ್ತಮ ಬೆಳವಣಿಗೆ. ನಮ್ಮ ಅಜ್ಜ-ಅಜ್ಜಿಯರ ಕಾಲದಿಂದ ಉಳಿದು ಬೆಳೆದುಬಂದಿರುವ ಈ ಶ್ರೀಮಂತ ಭಾಷೆಯನ್ನು ಮುಂದಿನ ತಲೆಮಾರು ಬಳಸುವಂತಾಗಬೇಕು. ನದಿ, ಮಣ್ಣು, ಕಾಡು, ಪ್ರಾಣಿ ಸಂಕುಲವನ್ನು ನಾವು ಉಳಿಸಿದಂತೆ ನಮ್ಮ-ನಮ್ಮ ಭಾಷೆಗಳನ್ನು ಕಾಪಿಡುವುದು ಕೂಡ ಕರ್ತವ್ಯವೇ. ಇದಕ್ಕಾಗಿ ನಾವೇನು ಮಾಡಬಹುದು? ಪ್ರೀತಿ, ಅಭಿಮಾನದಿಂದ ಭಾಷೆಯನ್ನು ಬಳಸಿದರೆ ಸಾಕಲ್ಲವೇ?

ವಿಶ್ವ ಕುಂದಾಪ್ರ ಕನ್ನಡ ದಿನ

Image

ಕುಂದಗನ್ನಡದ ಮೇಲಿನ ಅಕ್ಕರೆ, ಪ್ರೀತಿ, ಕಾಳಜಿ, ಅಭಿಮಾನದೊಂದಿಗೆ ಕುಂದಾಪ್ರ ಜನತೆ 'ವಿಶ್ವ ಕುಂದಾಪ್ರ ಕನ್ನಡ ದಿನ' ಎಂಬ ಭಾಷೆ ಮತ್ತು ಸಂಸ್ಕೃತಿಯ ಹಬ್ಬವನ್ನು ಕಳೆದ ನಾಲ್ಕು ವರ್ಷಗಳಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಕುಂದಾಪುರ ಪ್ರಾಂತ್ಯದಲ್ಲೇ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ 'ಜನಸೇವಾ ಟ್ರಸ್ಟ್ ಮೂಡುಗಿಳಿಯಾರು' ಸದಸ್ಯರಿಗೆ ಈ ರೀತಿಯ ಪರಿಕಲ್ಪನೆ ಮೂಡಿದ್ದು ನಿಜಕ್ಕೂ ಪ್ರಶಂಸನೀಯ. ಕೇವಲ ಐದಾರು ಲಕ್ಷ ಜನರು ಮಾತನಾಡುವ ಕನ್ನಡದ ನುಡಿಗಟ್ಟಿಗೆ ಕುಂದಾಪುರ ಜನ ವರ್ಷದಲ್ಲಿ ಒಂದು ದಿನ ಮುಡಿಪಾಗಿಟ್ಟು ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ವಿಶ್ವಾದ್ಯಂತ ಪಸರಿಸಿರುವ ಕುಂದಾಪ್ರ ಜನತೆ ಪ್ರತಿವರ್ಷ ಈ ಹಬ್ಬವನ್ನು ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ಈ ಹಬ್ಬದ ಇನ್ನೊಂದು ವಿಶೇಷತೆ ಎಂದರೆ, ಆಚರಣೆಯ ದಿನಾಂಕವನ್ನು ನಿಗದಿ ಮಾಡಿರುವುದಿಲ್ಲ. ಬದಲಿಗೆ, ಪ್ರತಿವರ್ಷವೂ ಆಸಾಡಿ ಅಮಾವಾಸ್ಯೆ ಎಂದು ಬರುತ್ತದೋ ಆ ದಿನದಂದು ಆಚರಿಸಲಾಗುತ್ತದೆ. ಕೃಷಿ ಪ್ರಧಾನವಾದ ನಮ್ಮೂರಿನಲ್ಲಿ 'ಆಸಾಡಿ ಅಮಾಸಿ' ಎನ್ನುವುದು ವಿಶೇಷವಾದ ದಿನ. ಈ ದಿನದಂದು ಕುಂದಾಪ್ರದಲ್ಲಿ ಹಲವೆಡೆ ಕೆಸರುಗದ್ದೆ ಕಂಬಳೋತ್ಸವ, ಆಟೋಟ ಸ್ಪರ್ಧೆ, ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿರುವ ಕುಂದಗನ್ನಡಿಗರು ಒಟ್ಟಾಗಿ ದೊಡ್ಡ ಮಟ್ಟದಲ್ಲಿ 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನು ಆಚರಿಸಿ, ತಮ್ಮ ಊರು, ಭಾಷೆಯನ್ನು ನೆನಪಿಸಿಕೊಳ್ಳುತ್ತಾರೆ. ಕಾಲೇಜಿನ ತರುಣ ತರುಣಿಯರು ತಮ್ಮ ವಾಟ್ಸಪ್, ಫೇಸ್‌ಬುಕ್‌ಗಳ ಡಿಪಿ, ಸ್ಟೇಟಸ್‌ಗಳಲ್ಲಿ ಫೋಟೊ, ವಿಡಿಯೊಗಳನ್ನು ಹಾಕಿ ತಮ್ಮ ಅಭಿಮಾನ ತೋರುತ್ತಾರೆ.

ಕುಂದಾಪುರ ಜನರು ತಮ್ಮ ಭಾಷಾ ದಿನವನ್ನು ಆಚರಿಸುವುದನ್ನು ಗಮನಿಸಿದ ಕೊಡಗಿನಲ್ಲಿರುವ 'ಅರೆ ಭಾಷೆ' ಮಾತನಾಡುವ ಮಂದಿ, 'ಅರೆ ಭಾಷೆ ದಿನ' ಆಚರಿಸಲು ಶುರುಮಾಡಿರುವುದು ಭಾಷೆಯ ಉಳಿವಿಗೆ ಸಂಬಂಧಿಸಿದಂತೆ ಆಶಾದಾಯಕ ಬೆಳವಣಿಗೆ. ಹೊಸ ಪರಿಕಲ್ಪನೆಯೊಂದಿಗೆ ಶುರು ಮಾಡಿದ 'ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ' ಕುಂದಗನ್ನಡದ ಘನತೆಯನ್ನು ವಿಶ್ವಾದ್ಯಂತ ಪಸರಿಸುತ್ತಿದೆ. ಈ ವರ್ಷ 'ಆಸಾಡಿ ಅಮಾಸಿ' ಜುಲೈ 28ರಂದು ಬಂದಿದೆ. ಅಂದು, ಕುಂದಾಪ್ರ ಕನ್ನಡಿಗರು ತಾವಿರುವಲ್ಲೇ 'ವಿಶ್ವ ಕುಂದಾಪ್ರ ಕನ್ನಡ ದಿನ' ಆಚರಿಸಲಿದ್ದಾರೆ. ಅಸಲಿಗೆ ಈ ಹಬ್ಬ ಜುಲೈ 24ರಿಂದಲೇ ಆರಂಭವಾಗಿ ಜುಲೈ 30ರವರೆಗೂ ನಾನಾ ಸ್ಥಳಗಳಲ್ಲಿ ನಡೆಯಲಿರುವುದು ವಿಶೇಷ. ಸಾಧ್ಯವಾದರೆ ಭಾಗವಹಿಸಿ, ನಿಮ್ಮ ಪ್ರೀತಿ ಹಂಚಿ. ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು.

ಮುಖ್ಯ ಚಿತ್ರ ಕೃಪೆ: ಫೋಕಸ್ ರಘು
ನಿಮಗೆ ಏನು ಅನ್ನಿಸ್ತು?
10 ವೋಟ್