ವಾರಾಂತ್ಯದ ಓದು | 19 ವರ್ಷದಿಂದ ಜೈಲಿನಲ್ಲಿರುವ ಮಹಿಳೆಯನ್ನು ನಿರಪರಾಧಿ ಎಂದು ಸಾಧಿಸಲು ಮುಂದಾದ 90 ವಿಜ್ಞಾನಿಗಳು!

ನಾಲ್ಕು ಮಕ್ಕಳು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ್ದಕ್ಕೆ, ಆ ಮಕ್ಕಳ ತಾಯಿಯನ್ನೇ ಕೊಲೆಗಾರ್ತಿ ಎಂದು ದೂಷಿಸಿ ಜೈಲಿಗೆ ಹಾಕಲಾದ ಪ್ರಕರಣದ ಕತೆ ಇದು. ತಾನು ನಿರಪರಾಧಿ ಎಂದು ಎಷ್ಟೇ ಹೇಳಿಕೊಂಡರೂ, ಅದನ್ನು ಆಕೆ ನಿರೂಪಿಸಲಾಗಿರಲಿಲ್ಲ. ಕೊನೆಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದೀಗ ವಿಜ್ಞಾನ ಅವಳ ನೆರವಿಗೆ ಧಾವಿಸಿದೆ. ಏನಿದರ ಸ್ವಾರಸ್ಯ?

ಆಸ್ಟ್ರೇಲಿಯಾದ ವೈಜ್ಞಾನಿಕರ ಸಂಘವೊಂದು ಮಹಿಳೆಯೊಬ್ಬರ ನೆರವಿಗೆ ಧಾವಿಸಿದೆ. ಕಳೆದ ಹತ್ತೊಂಬತ್ತು ವರ್ಷಗಳಿಂದ ಜೈಲಿನಲ್ಲಿರುವ ಈ ಮಹಿಳೆ ಅಪರಾಧಿಯೋ, ನಿರಪರಾಧಿಯೋ ಎನ್ನುವುದನ್ನು ತೀರ್ಮಾನಿಸಲು ವಿಜ್ಞಾನಿಗಳ ತಂಡವೊಂದನ್ನು ಆಸ್ಟ್ರೇಲಿಯಾದ ವಿಜ್ಞಾನ ಅಕಾಡೆಮಿ ರಚಿಸಿದೆ. "ವಿಜ್ಞಾನಿಗಳು ಹೀಗೆ ಜೈಲಿನಲ್ಲಿರುವ ಎಲ್ಲರ ನೆರವಿಗೆ ಬರುವುದಿಲ್ಲವಲ್ಲ? ಇದೇನು ವಿಶೇಷ? ಆಕೆಯೇನು ರಾಣಿಯೇ?" ಎನ್ನಬೇಡಿ. ಆಕೆ ರಾಣಿಯೂ ಅಲ್ಲ, ರಾಜಕಾರಣಿಯೂ ಅಲ್ಲ. ಕ್ಯಾಥಲೀನ್ ಫಾಲ್ಬಿಗ್ ಎನ್ನುವ ಸಾಮಾನ್ಯ ಮಹಿಳೆ. ಅದುವೂ ತನ್ನ ನಾಲ್ಕು ಮಕ್ಕಳನ್ನು ಕೊಂದಳು ಎನ್ನುವ ಅಪವಾದಕ್ಕೆ ಗುರಿಯಾಗಿ ಜೈಲಿನಲ್ಲಿರುವ ತಾಯಿ.

ಕ್ಯಾಥಲೀನ್ ಅಪರಾಧಿ ಇರಲಿಕ್ಕಿಲ್ಲ, ನಿರಪರಾಧಿಯೇ ಇರಬಹುದು ಎನ್ನುವುದನ್ನು ವಾದಿಸಲೆಂದೇ ಆಸ್ಟ್ರೇಲಿಯಾದ ವಿಜ್ಞಾನ ಅಕಾಡೆಮಿ ಮುಂದೆ ಬಂದಿದೆ. ಅಕಾಡೆಮಿಯನ್ನು ಪೋಲೀಸರ ಅಥವಾ ಅಪರಾಧಿಯ ಪರವಲ್ಲದ, ವಿಶೇಷ ಸಾಕ್ಷಿ ಎಂದು ಪರಿಗಣಿಸಲು ನ್ಯಾಯಾಧೀಶರೂ ಒಪ್ಪಿಗೆ ಕೊಟ್ಟಾಗಿದೆ. "ಕ್ಯಾಥಲೀನ್ ಫಾಲ್ಬಿಗ್ ನಿರಪರಾಧಿಯೂ ಆಗಿರಬಹುದು. ಅಪರಾಧ ಪ್ರಕೃತಿಯದ್ದಾಗಿರಬಹುದು," ಎಂದು ಈ ತಿಂಗಳು ನ್ಯಾಯಾಧೀಶರ ಮುಂದೆ ವಾದಿಸಲು ಅಕಾಡೆಮಿಯು ಮುಂದಾಗಿದೆ.

ಕ್ಯಾಥಲೀನ್ ಫಾಲ್ಬಿಗ್‌ಳ ಕತೆ ವಿಜ್ಞಾನದ ಬೆಳವಣಿಗೆಯ ಕತೆ. ವಿಜ್ಞಾನದಲ್ಲಿನ ಸುಧಾರಣೆಗಳು ಹೇಗೆ ನಮ್ಮ ಪೂರ್ವಗ್ರಹಪೀಡಿತ ವಿಚಾರಗಳನ್ನು ಬದಲಿಸುತ್ತವೆ ಎನ್ನುವುದಕ್ಕೂ ಇದು ಉದಾಹರಣೆ. ನಮ್ಮ ಪೂರ್ವಗ್ರಹಗಳನ್ನು, ನಂಬಿಕೆಗಳನ್ನು ವೈಜ್ಞಾನಿಕ ಪುರಾವೆಗಳ ಹಿನ್ನೆಲೆಯಲ್ಲಿ ಪರಿಶೀಲಿಸಿಕೊಳ್ಳಬೇಕಾದ ಅಗತ್ಯವನ್ನು ಎತ್ತಿಹಿಡಿಯುವ ಕತೆ.

ಪುರಾಣಗಳದ್ದೂ ಇದೇ ಕತೆ

Image

ಭಾರತೀಯ ಮತ್ತು ಗ್ರೀಕ್ ಪುರಾಣಗಳಲ್ಲಿ ತಮ್ಮದೇ ಸಂತಾನವನ್ನು ಕೊಂದವರ ಕತೆಗಳು ಹಲವು ಇವೆ. ಅವು ದೇವರ ಕತೆಗಳಾಗಿದ್ದರಿಂದ ಯಾರೂ ಅದು ನ್ಯಾಯವೋ, ಅನ್ಯಾಯವೋ ಎಂದು ಚಿಂತಿಸುವುದೂ ಇಲ್ಲ. ಉದಾಹರಣೆಗೆ, ಗ್ರೀಕ್ ಪುರಾಣದಲ್ಲಿ ಕ್ರೋನಸ್ ಎನ್ನುವ ಒಬ್ಬ ರಾಜನ ಕತೆ ಇದೆ. ಈತನನ್ನು ಶನಿ ಎಂದು ಕೂಡ ಹೇಳುವುದುಂಟು. ಕ್ರೋನಸ್ ತನ್ನ ಹೆಂಡತಿ ರಿಯಾಳಿಗೆ ಹುಟ್ಟಿದ ಎಲ್ಲ ಮಕ್ಕಳನ್ನೂ ನುಂಗಿಬಿಡುತ್ತಿದ್ದನಂತೆ. ಬದುಕಿ ಉಳಿದರೆ ಅವು ತನ್ನ ಸ್ಥಾನವನ್ನು ಕಸಿದುಕೊಂಡಾವು ಎನ್ನುವುದು ಅವನ ಭಯ. ರಿಯಾ ಕೊನೆಗೂ ಒಂದು ಮಗುವನ್ನು ಬಚ್ಚಿಟ್ಟು, ಅದರ ಜಾಗದಲ್ಲಿ ಕಲ್ಲನ್ನು ಬಟ್ಟೆಯಲ್ಲಿ ಸುತ್ತಿ ಕ್ರೋನಸ್‌ನಿಗೆ ಕೊಟ್ಟಳು. ಹೀಗೆ ಬದುಕಿ ಉಳಿದ ಎಂಟನೆಯ ಮಗುವೇ ಮುಂದೆ ಜಿಯೂಸ್ ಎಂಬ ದೇವತೆಯಾದ ಎನ್ನುತ್ತಾರೆ. ಆದರೆ, ಈ ಪ್ರಕರಣದಲ್ಲಿ ರಿಯಾಳನ್ನಾಗಲೀ, ಕ್ರೋನಸ್‌ನನ್ನಾಗಲೀ ಯಾರೂ ಅಪರಾಧಿ ಎನ್ನುವುದಿಲ್ಲ.

ಗ್ರೀಕರ ಕತೆ ಬಿಡಿ. ನಮ್ಮದೇ ಪುರಾಣದಲ್ಲಿ ಶಂತನು ಮತ್ತು ಗಂಗೆಯ ಕತೆಯಲ್ಲಿಯೂ ಹೀಗೆಯೇ ಆಗುತ್ತದೆ. ಆದರೆ ಇಲ್ಲಿ ಮಕ್ಕಳನ್ನು ಕೊಲ್ಲುವುದು ಗಂಗೆ. ತನಗೆ ಹುಟ್ಟಿದ ಏಳು ಮಕ್ಕಳನ್ನು ಹೀಗೆ ನದಿಗೆ ಎಸೆದು ಕೊಂದಳು ಎನ್ನುತ್ತದೆ ಮಹಾಭಾರತ. ಎಂಟನೆಯ ಮಗುವನ್ನು ಕೊಲ್ಲಲು ಹೋದಾಗ, ಬೇಡ ಎಂದು ಗಂಡ ಶಂತನು ತಡೆಯುತ್ತಾನೆ. ಮದುವೆಯಾಗುವಾಗ ನಾನು ಮಾಡುವ ಯಾವ ಕೆಲಸವನ್ನೂ ಏಕೆಂದು ಪ್ರಶ್ನಿಸಬಾರದು ಎಂದು ಗಂಗೆಗೆ ಆತ ಮಾತು ಕೊಟ್ಟಿರುತ್ತಾನೆ. ಈ ಮಾತು ತಪ್ಪಿದ ಕೂಡಲೇ ಅವನನ್ನು ತೊರೆದು ದೇವಲೋಕಕ್ಕೆ ಮರಳುವುದಾಗಿ ಗಂಗೆ ಹೇಳಿರುತ್ತಾಳೆ. ಹಾಗೆಯೇ ಹೊರಟೂ ಹೋಗುತ್ತಾಳೆ. ಹೀಗೆ ಉಳಿದ ಎಂಟನೆಯ ಮಗನೇ ಗಂಗಾಸುತ ಅಥವಾ ಭೀಷ್ಮ.

ಆದರೆ, ಪಾಪ... ನಾವೀಗ ಮಾತನಾಡುತ್ತಿರುವ ಕ್ಯಾಥಲೀನ್ ದೇವತೆಯಲ್ಲ. ನಮ್ಮಂತೆಯೇ ಈ ಸಮಾಜದಲ್ಲಿ, ನಾವೇ ಕಟ್ಟಿಕೊಂಡ ನಿಯಮಗಳ ನಡುವೆ ಬದುಕು ಕಟ್ಟಿಕೊಂಡ ಮಹಿಳೆ. ಈಕೆಗೆ ಅವಳ ನಾಲ್ಕನೆಯ ಮಗು ಸತ್ತಾಗ ಕೊಲೆಗಾರ್ತಿ ಎಂದು ದೂಷಿಸಿ, ಜೈಲಿಗೆ ಹಾಕಲಾಯಿತು. ತಾನು ನಿರಪರಾಧಿ ಎಂದು ಎಷ್ಟೇ ಹೇಳಿಕೊಂಡರೂ, ಅದನ್ನು ನಿರೂಪಿಸಲಾಗದೆ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾದಳು. ಆಸ್ಟ್ರೇಲಿಯಾದ ಕಾನೂನಿನಂತೆ ಅವಳಿಗೆ ನಲವತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಒಂದೇ ಕುಟುಂಬದಲ್ಲಿ ಸಾಲುಸಾಲಾಗಿ ನಾಲ್ಕು ಮಕ್ಕಳು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ ಕತೆ ಇದು.

ಖಚಿತ ಸಾಕ್ಷಿಗಳಿಲ್ಲದಿದ್ದರೂ 40 ವರ್ಷ ಶಿಕ್ಷೆ

Image

ಕ್ಯಾಥಲೀನಳ ಮೊದಲ ಮಗು ಸತ್ತಿದ್ದು 1989ರಲ್ಲಿ. ಈಗಾಗಲೇ 33 ವರ್ಷಗಳಾಗಿವೆ. ಆ ಮಗು ಸತ್ತಾಗ ಅದಕ್ಕೆ ಇನ್ನೂ ಹತ್ತೊಂಬತ್ತು ದಿನಗಳ ವಯಸ್ಸಾಗಿತ್ತು ಅಷ್ಟೆ. ಎರಡು ವರ್ಷಗಳ ನಂತರ ಇನ್ನೊಂದು ಮಗುವಾಯಿತು. ಎಂಟು ತಿಂಗಳ ವಯಸ್ಸಾಗಿದ್ದಾಗ ಅದುವೂ ಮರಣಿಸಿತು. ಮತ್ತೆರಡು ವರ್ಷಗಳ ನಂತರ ಇನ್ನೊಂದು ಮಗುವಿನ ಗತಿಯೂ ಹೀಗೆಯೇ ಆಗಿತ್ತು; ಆಗ ಅದರ ವಯಸ್ಸು ಹತ್ತು ತಿಂಗಳು. ಇದಾದ ಆರು ವರ್ಷಗಳ ನಂತರ ಮತ್ತೊಂದು ಮಗು ಹುಟ್ಟಿತ್ತು. ಆ ಮಗುವಿಗೆ ಒಂದೂವರೆ ವರ್ಷ ವಯಸ್ಸಾಗಿದ್ದಾಗ ಒಂದು ರಾತ್ರಿ ಅದುವೂ ಸಾವನ್ನಪ್ಪಿತ್ತು. ಹೀಗೆ ಸಾಲುಸಾಲಾಗಿ ನಾಲ್ಕೂ ಮಕ್ಕಳು ಸಾವಿಗೀಡಾಗಿದ್ದುವು.

ಕ್ಯಾಥಲೀನಳ ಕೊನೆಯ ಮಗು ಸತ್ತಿದ್ದು 1990ರಲ್ಲಿ. ಆ ರಾತ್ರಿ ಮಗು ನೀಲಿಗಟ್ಟಿದಾಗ, ಆ್ಯಂಬ್ಯುಲೆನ್ಸ್ ತರಿಸಿದ್ದೇ ಅಪರಾಧವಾಯಿತು. ಆಸ್ಪತ್ರೆ ಸೇರುವಷ್ಟರಲ್ಲಿ ಮಗು ಸತ್ತಿತ್ತು. ಅಲ್ಲಿನ ವೈದ್ಯರು ಕ್ಯಾಥಲೀನಳ ಚರಿತ್ರೆಯನ್ನು ವಿಚಾರಿಸಿ, ಪೊಲೀಸಿಗೆ ದೂರು ನೀಡಿದರು. ಕ್ಯಾಥಲೀನಳ ಮೇಲೆ ಕೇಸು ದಾಖಲಾಯಿತು. ನ್ಯಾಯಾಲಯ ವಿಚಾರಣೆಯನ್ನೂ ನಡೆಸಿತು. ಕೊನೆಗೆ 2001ನೇ ಇಸವಿಯಲ್ಲಿ ಆಕೆ ಕೊಲೆಗಾರ್ತಿ ಎಂದು ಚಾರ್ಜುಶೀಟು ದಾಖಲಿಸಲಾಯಿತು. 2003ನೇ ಇಸವಿಯಲ್ಲಿ, ನ್ಯಾಯಾಲಯವು ಇದ್ದ ಪುರಾವೆಗಳನ್ನು ಪರಿಗಣಿಸಿ ಆಕೆಯನ್ನು ನಲವತ್ತು ವರ್ಷಗಳ ಜೈಲು ಶಿಕ್ಷೆಗೆ ತಳ್ಳಿತು.

ಕ್ಯಾಥಲೀನಳ ವಿರುದ್ಧ ಇದ್ದ ಪುರಾವೆಗಳು ಯಾವುವೂ ಖಚಿತ ಸಾಕ್ಷಿಗಳಾಗಿರಲಿಲ್ಲ ಎನ್ನುವುದು ವಿಶೇಷ. ಆಕೆಯ ಯಾವ ಮಗುವಿನ ಶವದಲ್ಲಿಯೂ ಹಿಂಸೆಯ ಅಥವಾ ಗಾಯದ ಗುರುತುಗಳಿರಲಿಲ್ಲ. ಕೊಲೆ ಮಾಡಲು ಪ್ರಯತ್ನಿಸಿದ್ದಕ್ಕೆ ಯಾವ ನೇರ ಸಾಕ್ಷಿಗಳೂ ಇರಲಿಲ್ಲ. ಆದರೂ, ಮಾತು ಸ್ಪಷ್ಟವಾಗಿ ಮೂಡುವ ಮುನ್ನವೇ ಮಕ್ಕಳೆಲ್ಲವೂ ಮರಣಿಸಿದ್ದು ಮತ್ತು ಎಲ್ಲ ಮಕ್ಕಳ ಸಾವಿನ ಸಂದರ್ಭದಲ್ಲಿಯೂ ಅವುಗಳೊಟ್ಟಿಗೆ ಕ್ಯಾಥಲೀನ್ ಒಬ್ಬಳೇ ಇದ್ದುದನ್ನೇ ಸಾಂದರ್ಭಿಕ ಸಾಕ್ಷಿ ಎಂದು ನ್ಯಾಯಾಲಯ ಪರಿಗಣಿಸಿ ಶಿಕ್ಷೆ ನೀಡಿತ್ತು. ಇದೀಗ ವಿಜ್ಞಾನ ಮತ್ತು ಇತ್ತೀಚಿನ ಸಂಶೋಧನೆಗಳು ಅವಳ ನೆರವಿಗೆ ಬಂದಿವೆ, ಹೊಸ ಸಾಕ್ಷಿಯನ್ನು ಆಕೆಯ ಪರವಾಗಿ ನೀಡಲು ಮುಂದಾಗಿವೆ.

ಕ್ಯಾಥಲೀನಳ ಹಿನ್ನೆಲೆ ಏನಾಗಿತ್ತು?

Image

ಕ್ಯಾಥಲೀನಳ ಮೊದಲ ಮೂರು ಮಕ್ಕಳು ಸತ್ತಾಗ ಅವನ್ನು 'ಸಡನ್ ಡೆತ್ ಸಿಂಡ್ರೋಮ್' ಎಂದು ಪರಿಗಣಿಸಲಾಗಿತ್ತು. ಆದರೆ ನಾಲ್ಕನೆಯ ಮಗುವಿನ ಮರಣವೂ ಅದೇ ರೀತಿಯಲ್ಲಿ ಆದಾಗ ಅದನ್ನು 'ಸಂದೇಹಾಸ್ಪದ ಸಾವು' ಎಂದು ವೈದ್ಯರು ಪರಿಗಣಿಸಿದ್ದರು. "ಒಂದು ಇಂತಹ ಸಾವು ದುರಂತ. ಎರಡಾದರೆ ಅದು ಅನುಮಾನಾಸ್ಪದ. ಮೂರಾದರೆ ಖಂಡಿತ ಕೊಲೆ," ಎಂದು ಒಬ್ಬ ವೈದ್ಯ ಹೇಳಿದ್ದೂ ದಾಖಲೆಯಲ್ಲಿದೆ! ಮಕ್ಕಳಲ್ಲಿ 'ಸಡನ್ ಡೆತ್ ಸಿಂಡ್ರೋಮ್' ಎನ್ನುವುದು ಸಾವಿನ ಸಾಮಾನ್ಯ ಕಾರಣವೇನೋ ಹೌದು. ಆದರೆ, ಒಬ್ಬಳದ್ದೇ ನಾಲ್ಕೂ ಮಕ್ಕಳಿಗೂ ಇದೇ ಸಾವು ಬಂದಿದೆ ಎಂದರೆ ನಂಬುವುದು ಕಷ್ಟ. ಜೊತೆಗೆ ಕ್ಯಾಥಲೀನಳ ತಾಯಿಯ ಸಾವೂ ಕೊಲೆಯಾಗಿತ್ತು. ಆಕೆಯನ್ನು ಕ್ಯಾಥಲೀನಳ ತಂದೆ ಇರಿದು ಕೊಂದಿದ್ದ. ಆಗಿನ್ನೂ ಕ್ಯಾಥಲೀನ್ ಇನ್ನೂ ಒಂದೂವರೆ ವರ್ಷದ ಮಗುವಾಗಿದ್ದಳು. ಕ್ಯಾಥಲೀನ್ ಅನಾಥಾಲಯವೊಂದರಲ್ಲಿ ಬೆಳೆದಿದ್ದಳು. ಆಕೆಯ ಪರವಾಗಿ ಯಾವುದೇ ಪುರಾವೆಗಳೂ ಇರಲಿಲ್ಲವಾದ್ದರಿಂದ ಈ ಎಲ್ಲ ಅಂಶಗಳನ್ನೂ ಮತ್ತು ಸಾವಿನ ಸಂದರ್ಭದಲ್ಲಿ ಆಕೆಯೊಬ್ಬಳೇ ಇದ್ದುದನ್ನೂ ಪರಿಗಣಿಸಿ ನ್ಯಾಯಾಲಯ ಕ್ಯಾಥಲೀನಳನ್ನು ಅಪರಾಧಿ ಎಂದು ಪರಿಗಣಿಸಿತ್ತು.  

ಈ ಲೇಖನ ಓದಿದ್ದೀರಾ?: ವಾರಾಂತ್ಯದ ಓದು | ಜಗ್ಗಿ ವಾಸುದೇವ್‌ ಯೋಗಕೇಂದ್ರದಿಂದ ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗೆ ಕಾದಿದೆ ಸರಣಿ ಆಪತ್ತು

ಕೆಲವು ದಶಕಗಳ ಹಿಂದೆ ಇಂಗ್ಲೆಂಡಿನ ಸಾರಾ ಕ್ಲಾರ್ಕ್ ಎಂಬಾಕೆಯೂ ಇದೇ ರೀತಿಯಲ್ಲಿ ಜೈಲು ಸೇರಿದ್ದಳು. ಅದೃಷ್ಟವಶಾತ್ ಆಕೆಯ ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಒಂದು ಮಗುವಿಗೆ ಸೋಂಕು ಇದ್ದದ್ದೂ, ಇನ್ನೊಂದರಲ್ಲಿ ಹೃದಯದ ತೊಂದರೆ ಇದ್ದದ್ದೂ ತಿಳಿದುಬಂದಿತ್ತು. ಈ ಅಂಶಗಳನ್ನು ಪೊಲೀಸು ಮುಚ್ಚಿಟ್ಟದ್ದರಿಂದ ಮತ್ತು ಕೇಸಿನಲ್ಲಿ ಹಲವು ಅನುಮಾನಗಳು ಇದ್ದುದರಿಂದ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಇಂತಹ ಅದೃಷ್ಟ ಕ್ಯಾಥಲೀನಳಿಗೆ ಇರಲಿಲ್ಲ. ಆದರೆ, ಇದೀಗ ಕ್ಯಾಥಲೀನಳ ಕೇಸಿಗೆ ಹೊಸ ಜೀವ ಬಂದಿದೆ. ಮರುವಿಚಾರಣೆ ನಡೆಸಲು ಕೋರ್ಟು ಒಪ್ಪಿದೆ. ಹಾಗೆಯೇ, ಹೊಸ ಸಾಕ್ಷಿಗಳನ್ನು ಪರಿಗಣಿಸಲೂ ಒಪ್ಪಿದೆ.

ಕ್ಯಾಥಲೀನಳ ಪರವಾಗಿ ತೊಂಬತ್ತು ವಿಜ್ಞಾನಿಗಳು ಕಳೆದ ವರ್ಷ ಒಂದು ಮನವಿ ಸಲ್ಲಿಸಿದ್ದು ಇದಕ್ಕೆ ಕಾರಣ. ಕಳೆದ ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿಜ್ಞಾನ ಅಕಾಡೆಮಿಯ ತೊಂಬತ್ತು ವಿಜ್ಞಾನಿಗಳು ನ್ಯಾಯಾಲಯಕ್ಕೆ ಒಂದು ಮನವಿ ಸಲ್ಲಿಸಿ, ಕ್ಯಾಥಲೀನಳ ಮಕ್ಕಳ ಸಾವಿಗೆ ಇರಬಹುದಾದ ಬೇರೆ ಕಾರಣಗಳ ಬಗ್ಗೆ ಸಾಕ್ಷಿ ಒದಗಿಸುವುದಾಗಿ ತಿಳಿಸಿದ್ದರು. ಇದನ್ನು ನ್ಯಾಯಾಲಯ ಪರಿಗಣಿಸಿದ್ದರಿಂದ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. ಈ ವಿಚಾರಣೆಯಲ್ಲಿ ವಿಜ್ಞಾನಿಗಳ ವಾದವನ್ನು ಕೋರ್ಟು ಒಪ್ಪಿದರೆ, ಕ್ಯಾಥಲೀನಳಿಗೆ ಜೈಲಿನಿಂದ ಬಿಡುಗಡೆ ಆಗಬಹುದು.

ಏನದು ವೈಜ್ಞಾನಿಕ ಪುರಾವೆ?

Image

'ಸಡನ್ ಡೆತ್' ಎನ್ನುವುದು ಶಿಶುಗಳಿಂದ ದೊಡ್ಡವರವರೆಗೆ ಎಲ್ಲರಲ್ಲಿಯೂ ಕಾಣುವ ಒಂದು ಸಾವಿನ ಸಂದರ್ಭ. ಮೇಲ್ನೋಟಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ, ಮಲಗಿದ್ದಾಗ ನಿದ್ರೆಯಲ್ಲಿಯೇ ಚಿರನಿದ್ರೆಗೆ ತೆರಳಬಹುದು. ವಯಸ್ಸಾದವರಲ್ಲಿ ಇದಕ್ಕೆ ಬಹುತೇಕ ಹೃದಯದ ತೊಂದರೆಗಳು ಕಾರಣವೆಂದು ಹೇಳಲಾಗುತ್ತದೆ. ಶಿಶುಗಳಲ್ಲಿಯೂ ಇದು ಸಾಮಾನ್ಯವಾದರೂ, ಒಂದು ವರ್ಷದೊಳಗಿನ ಮಕ್ಕಳಲ್ಲಿ ಮಾತ್ರ ಹೆಚ್ಚು ಕಂಡುಬರುತ್ತದೆ. ಕ್ಯಾಥಲೀನಳ ನಾಲ್ಕು ಮಕ್ಕಳಲ್ಲಿ ಇಬ್ಬರು ಸರಿಸುಮಾರು ಒಂದೂವರೆ ವರ್ಷಗಳ ನಂತರ ಸತ್ತಿದ್ದರೆನ್ನುವುದೂ ಅವಳ ವಿರುದ್ಧದ ಸಾಕ್ಷಿಯಾಗಿತ್ತು.

ಅಪರೂಪವೆನ್ನಿಸಿದರೂ, ಒಂದು ವರ್ಷಕ್ಕಿಂತ ಮೊದಲೇ ಸಾವನ್ನಪ್ಪುವ ಮಕ್ಕಳ ಮರಣಕ್ಕೆ ಇದುವೇ ಮುಖ್ಯ ಕಾರಣ ಎನ್ನುವುದು ವೈದ್ಯರ ಅನಿಸಿಕೆ. ಸಡನ್ ಡೆತ್ ಸಿಂಡ್ರೋಮಿಗೆ ಹಲವು ಕಾರಣಗಳಿರಬಹುದು. ಆದರೆ ಮುಖ್ಯವಾಗಿ, ನಿದ್ರೆಯಲ್ಲಿ ಇದ್ದಕ್ಕಿದ್ದ ಹಾಗೆ ಉಸಿರಾಟ ನಿಂತುಹೋಗುವುದು ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಮಿದುಳಿನ ಭಾಗದಲ್ಲಿ ತೊಂದರೆ ಇರುವುದು ಕಾರಣವಾಗಿರಬಹುದು. ಕೆಲವೊಮ್ಮೆ ಹೃದಯದ ತೊಂದರೆಗಳು, ಸೋಂಕು, ಮಲಗುವ ಭಂಗಿ ಕೂಡ ಕಾರಣವಾಗಿರಬಹುದು. ಪಕ್ಕದಲ್ಲಿ ಮಲಗಿದ್ದ ತಾಯಿಯ ದೇಹದ ಭಾರ ಮೈಮೇಲೆ ಬಿದ್ದೂ ಮಕ್ಕಳು ಸಾವನ್ನಪ್ಪಿದ ಘಟನೆಗಳಿವೆ. ಆದರೆ, ಕ್ಯಾಥಲೀನಳ ಮಕ್ಕಳ ವಿಷಯದಲ್ಲಿ ಇವ್ಯಾವುದೂ ಇರಲಿಲ್ಲ ಎನ್ನುವುದು ವೈದ್ಯರ ವಾದವಾಗಿತ್ತು.

ಈ ಲೇಖನ ಓದಿದ್ದೀರಾ?: ವಾರಾಂತ್ಯದ ಓದು - ವಿಡಿಯೊ ವಿಶೇಷ | ಅನಸ್ತೇಷಿಯಾ, ಷೇಕ್ಸ್‌ಪಿಯರ್, ಪುಟಿನ್ ಮತ್ತು ನಾನು

ನಾಲ್ಕು ವರ್ಷಗಳ ಹಿಂದೆ ಕ್ಯಾಥಲೀನಳ ಮನವಿಯನ್ನು ಪುರಸ್ಕರಿಸಿ, ನ್ಯಾಯಾಲಯ ಮರುವಿಚಾರಣೆಗೆ ಒಪ್ಪಿತ್ತು. ತಕ್ಷಣವೇ ಆಕೆಯ ವಕೀಲರು ಕೆಲವರು ವಿಜ್ಞಾನಿಗಳನ್ನು ಸಂಪರ್ಕಿಸಿ, ಸಡನ್ ಡೆತ್ ಬಗ್ಗೆ ಹೊಸ ಪುರಾವೆಗಳೇನಾದರೂ ಇವೆಯೇ ಎಂದು ಕೇಳಿದ್ದರು. ಕ್ಯಾನ್ಬೆರಾದಲ್ಲಿರುವ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ತಳಿವಿಜ್ಞಾನಿ ಕೆರೋಲಾ ವಿನೀಸಾಳನ್ನು ಸಂಪರ್ಕಿಸಿ, ಕ್ಯಾಥಲೀನಳ ಡಿಎನ್ಎ ಪರಿಶೀಲಿಸಲು ಕೋರಲಾಗಿತ್ತು. ಡಿಎನ್ಎಯಲ್ಲಿ ದೋಷಗಳೇನಾದರೂ ಇದ್ದರೆ  ಪ್ರತಿವಾದಿಸಲು ಅನುಕೂಲವಾಗುತ್ತದೆ ಎನ್ನುವುದು ವಕೀಲರ ತರ್ಕವಾಗಿತ್ತು.

ಡಿಎನ್ಎಯಲ್ಲಿರುವ ಮಾಹಿತಿಯನ್ನು ಒಟ್ಟು ಮಾಡುವುದನ್ನು 'ಜೀನೋಮ್ ವಿಶ್ಲೇಷಣೆ' ಎನ್ನುತ್ತಾರಷ್ಟೆ. ನೀವು ಈಗ ಬೆಂಗಳೂರಿನಲ್ಲಿಯೂ ನಿಮ್ಮ ಡಿಎನ್ಎಯನ್ನು ಕೊಟ್ಟು, ನಿಮ್ಮ ತಳಿಗುಣಗಳಲ್ಲಿ ಏನಾದರೂ ದೋಷವಿದೆಯೇ ಎಂದು ಪರಿಶೀಲಿಸಿಕೊಳ್ಳಬಹುದು. ಇಪ್ಪತ್ತೊಂದನೆಯ ಶತಮಾನದಲ್ಲಿ ಸಾಧ್ಯವಾದ ಬೆಳವಣಿಗೆ ಇದು. ಮನುಷ್ಯರಲ್ಲಿ ಇರಬಹುದಾದ ಸಾವಿರಾರು ಪ್ರೊಟೀನುಗಳ ಸಾಧಾರಣ ರಚನೆಯಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ಜೀನೋಮ್ ವಿಶ್ಲೇಷಣೆಯ ಮೂಲಕ ಗುರುತಿಸಬಹುದು. ಕ್ಯಾಥಲೀನಳ ಡಿಎನ್ಎಯಲ್ಲಿ ಏನಾದರೂ ದೋಷವಿದ್ದು, ಅದರ ಕಾರಣವಾಗಿ ಅವಳ ಮಕ್ಕಳು ಸಾವನ್ನಪ್ಪಿರಬಹುದೇ ಎನ್ನುವುದು ಈ ವಕೀಲರ ಗುಮಾನಿಯಾಗಿತ್ತು.

ಡಿಎನ್‌ಎ ಪರೀಕ್ಷೆಯಲ್ಲಿ ಅಚ್ಚರಿ ಕಾದಿತ್ತು

Image

ವಿನೀಸಾ ಮತ್ತು ಆಕೆಯ ಸಹೋದ್ಯೋಗಿ ಕ್ಯಾಥಲೀನಳ ಡಿಎನ್ಎ ಸಂಗ್ರಹಿಸಿ ಪರಿಶೀಲಿಸಿದರು. ಅಲ್ಲೊಂದು ಅಚ್ಚರಿ ಕಾದಿತ್ತು. ದೇಹದಲ್ಲಿ ಕ್ಯಾಲ್ಸಿಯಂ ಲವಣದ ಚಟುವಟಿಕೆಯಲ್ಲಿ ಬಲು ಮುಖ್ಯ ಪಾತ್ರವಿರುವ 'ಕಾಲ್ಮೊಡ್ಯೂಲಿನ್ 2' ಎನ್ನುವ ಜೀನ್ ಸಾಮಾನ್ಯದಂತೆ ಇರಲಿಲ್ಲ. ಅದರಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿತ್ತು. ಇಂತಹ ಬದಲಾವಣೆಗಳನ್ನು ವಿಕೃತಿ ಅಥವಾ ಮ್ಯುಟೇಶನ್ಸ್ ಎನ್ನುತ್ತಾರೆ. ಬಹುತೇಕ ವಿಷವಸ್ತುಗಳು ಅಥವಾ ವಿಕಿರಣಗಳಿಂದ ಇಂತಹ ಬದಲಾವಣೆಗಳು ಕಾಣಿಸುತ್ತವೆ. ಕೆಲವೊಮ್ಮೆ ತಮ್ಮಿಂತಾವೇ ಕೂಡ ಇವು ಉದಯಿಸುತ್ತವೆ. ಇನ್ನೂ ಒಂದು ವಿಶೇಷವೆಂದರೆ, ಕಾಲ್ಮೊಡ್ಯೂಲಿನ್ ಪ್ರೊಟೀನು ಜೀವಕೋಶಗಳ ಒಳಗೆ ಮತ್ತು ಹೊರಗೆ ಕ್ಯಾಲ್ಸಿಯಂ ದಟ್ಟಣೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಕ್ಯಾಲ್ಸಿಯಂ ದಟ್ಟಣೆಯಲ್ಲಿ ಏರುಪೇರಾದರೆ ಹೃದಯದ ಬಡಿತವೂ ಏರುಪೇರಾಗಬಹುದು. ಸ್ನಾಯುಗಳಲ್ಲಿಯೂ ತೊಂದರೆ ಕಾಣಬಹುದು. ನರತಂತುಗಳ ಚಟುವಟಿಕೆಯಲ್ಲಿಯೂ ಇದು ಪ್ರಮುಖ. ಇಷ್ಟೊಂದು ಪ್ರಮುಖವಾದೊಂದು ಜೀನಿನಲ್ಲಿ ತೊಂದರೆ ಇರುವುದೇ ಮಕ್ಕಳ ಸಾವಿಗೆ ಕಾರಣವಾಗಿರಬಹುದೇ?

ಇದು ಊಹೆಯಷ್ಟೆ. ಮಕ್ಕಳಲ್ಲಿಯೂ ಇದೇ ದೋಷವಿದ್ದರಷ್ಟೇ ಈ ಊಹೆಗೆ ಒತ್ತಾಸೆ ಸಿಕ್ಕಂತಾಗುತ್ತದೆ. ಹೀಗಾಗಿ, ವಿನೀಸಾ ಮತ್ತು ಸಂಗಡಿಗರು ಕ್ಯಾಥಲೀನಳ ಮಕ್ಕಳ ಡಿಎನ್ಎಯನ್ನೂ ಪರಿಶೀಲಿಸಿದರು. ಅದೃಷ್ಟವಶಾತ್, ಆ ಮಕ್ಕಳು ಹುಟ್ಟಿದಾಗ, ಪರೀಕ್ಷೆಗೆಂದು ತೆಗೆದ ರಕ್ತದ ಮಾದರಿಗಳು ಆಸ್ಪತ್ರೆಗಳಲ್ಲಿ ದಾಸ್ತಾನಿದ್ದುವು. ಒಂದೇ ತಂಡ ಇದನ್ನು ಮಾಡಿದರೆ ಪೂರ್ವಗ್ರಹದಿಂದ ನಿರೀಕ್ಷಿತ ಫಲಿತಾಂಶಗಳು ಬರಬಹುದಲ್ಲ? ಹೀಗಾಗಿ, ಎರಡು ತಂಡಗಳು ಪ್ರತ್ಯೇಕವಾಗಿ ಇವನ್ನು ವಿಶ್ಲೇಷಿಸಿದವು. ಸಾಮಾನ್ಯ ಜೀನೋಮಿನಿಂದ ಇನ್ನೂರಕ್ಕೂ ಹೆಚ್ಚು ಜೀನುಗಳಲ್ಲಿ ವ್ಯತ್ಯಾಸಗಳಿದ್ದುವು. ಇವುಗಳಲ್ಲಿ ಮುಖ್ಯವಾಗಿ ಹೃದಯ, ಶ್ವಾಸಕೋಶ ಹಾಗೂ ನರಮಂಡಲಗಳ ಕಾಯಿಲೆಗಳಿಗೆ ಸಂಬಂಧಿಸಿದ ಜೀನುಗಳನ್ನು ಹುಡುಕಿದಾಗ, ಒಂಬತ್ತು ವಿಶೇಷವಾದ, ಬೇರೆ ಜೀನೋಮುಗಳಲ್ಲಿ ಕಾಣದ ವ್ಯತ್ಯಾಸಗಳು ಪತ್ತೆಯಾದವು. ಅದರಲ್ಲಿಯೂ, 'ಕಾಲ್ಮೊಡ್ಯೂಲಿನ್ 2'ರಲ್ಲಿ ಒಂದೇ ಬಗೆಯ ವ್ಯತ್ಯಾಸಗಳನ್ನು ಎರಡೂ ತಂಡಗಳೂ ಗುರುತಿಸಿದವು. ಕ್ಯಾಥಲೀನಳ ಇಬ್ಬರು ಹೆಣ್ಣುಮಕ್ಕಳ ಡಿಎನ್ಎಯಲ್ಲಿಯೂ 'ಕಾಲ್ಮೊಡ್ಯೂಲಿನ್ 2' ಜೀನಿನಲ್ಲಿ ಕ್ಯಾಥಲೀನಳಲ್ಲಿ ಕಂಡಂತಹ ದೋಷಗಳೇ ಕಂಡುಬಂದವು. ಅಷ್ಟೇ ಅಲ್ಲದೆ, ಇನ್ನೂ ಎರಡು ಪ್ರಮುಖ ಜೀನುಗಳೂ ವಿಕೃತವಾಗಿದ್ದುವು. ಇವೆಲ್ಲವನ್ನೂ ಇದೀಗ ನ್ಯಾಯಾಲಯದ ಮುಂದೆ ಇಡಲಾಗಿದೆ. ಹೃದಯ, ಶ್ವಾಸಕೋಶಗಳ ಚಟುವಟಿಕೆಗೆ ಸಂಬಂಧಿಸಿದ ಜೀನುಗಳಲ್ಲಿ ದೋಷಗಳಿರುವುದರಿಂದ ಈ ಮಕ್ಕಳ ಸಾವು ಸಹಜವಾಗಿ ಆಗಿರಬಹುದು ಎನ್ನುವುದು ವಿಜ್ಞಾನಿಗಳ ವಾದ.

ಇಟಲಿಯಿಂದಲೂ ಸಿಕ್ಕಿತೊಂದು ಪುರಾವೆ

Image

ಕ್ಯಾಥಲೀನಳ ಜೀನುಗಳಲ್ಲಿ ದೋಷವೇನೋ ಇದೆ. ಆದರೆ, ಅದರಿಂದಲೇ ಸಾವು ಸಂಭವಿಸಿದೆ ಎಂದು ಹೇಳಬೇಕೆಂದರೆ, ಈ ಜೀನ್ ರೋಗಕಾರಿ ಎಂದು ನಿರೂಪಿಸಬೇಕು. ಆದರೆ, ಕ್ಯಾಲ್ಸಿಯಂ ಚಟುವಟಿಕೆಯನ್ನು ಬಾಧಿಸುವ ಕಾರಣಕ್ಕೆ ಅದನ್ನು ರೋಗಕಾರಿ ಎಂದು ಹೇಳಲಾಗುವುದಿಲ್ಲವಲ್ಲ?  ರೋಗಕಾರಿಯಲ್ಲವಾದರೆ, ಅದು ಮಾರಕವೆಂದು ಹೇಳಲಾದೀತೇ? ಇದನ್ನು ನಿರ್ಧರಿಸಲು ವಿನೀಸಾ ಮತ್ತು ಸಂಗಡಿಗರು ಪ್ರಪಂಚದಲ್ಲಿ ಜೀನೋಮ್ ಅಧ್ಯಯನದಲ್ಲಿ ನಿರತರಾಗಿದ್ದ ಬೇರೆ ವಿಜ್ಞಾನಿಗಳನ್ನೂ ಸಂಪರ್ಕಿಸಿ ಪರಿಶೀಲಿಸಿದ್ದಾರೆ. ಇಟಲಿಯಲ್ಲಿ ಕಾಲ್ಮೊಡ್ಯೂಲಿನ್ ಜೀನುಗಳಲ್ಲಿ ಇನ್ನೊಂದು ಬಗೆಯಾದ 'ಕಾಲ್ಮೊಡ್ಯೂಲಿನ್ 3' ಎನ್ನುವ ಜೀನಿನಲ್ಲಿ ಇದೇ ಬಗೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದ ಕುಟುಂಬವೊಂದರಲ್ಲಿ ಎರಡು ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಹೃದಯದ ತೊಂದರೆಯಿಂದ ಮರಣಗೊಂಡದ್ದು ದಾಖಲೆಯಾಗಿತ್ತು. ಇದನ್ನೂ ಈಗ ವಿಜ್ಞಾನಿಗಳು ಕ್ಯಾಥಲೀನಳ ಪರವಾಗಿ ಪುರಾವೆ ಎಂದು ಪರಿಗಣಿಸಿದ್ದಾರೆ.

ಅಂತೂ, ಕ್ರೂರಿ ತಾಯಿ ಎನ್ನುವ ಅಪವಾದದಿಂದ ಕ್ಯಾಥಲೀನಳನ್ನು ಮುಕ್ತಗೊಳಿಸಲು ವಿಜ್ಞಾನದ ನೆರವು ದೊರೆಯುತ್ತಿದೆ ಎನ್ನುವುದು ಖುಷಿ. ವಿಶೇಷವೆಂದರೆ, ಇದೇ ನೆರವು ಕೆಲವು ದಶಕಗಳ ಹಿಂದೆ ದೊರೆಯುವುದು ಅಸಾಧ್ಯವಾಗಿತ್ತು. ಏಕೆಂದರೆ, ಆಗಿನ ತಂತ್ರಜ್ಞಾನ ಮತ್ತು ಅರಿವು ಇಷ್ಟು ಮುನ್ನಡೆದಿರಲಿಲ್ಲ. ನ್ಯಾಯಾಲಯ ಕ್ಯಾಥಲೀನಳ ಮಕ್ಕಳ ಸಾವು ಪ್ರಕೃತಿ ಸಹಜವಾದದ್ದೆಂದು ಪರಿಗಣಿಸಿ ಅವಳನ್ನು ಬಿಡುಗಡೆ ಮಾಡುತ್ತದೆಯೋ ಇಲ್ಲವೋ ಎಂಬ ಬಗ್ಗೆ, 'ಸಡನ್ ಡೆತ್ ಸಿಂಡ್ರೋಮ್' ಮತ್ತು ಈ ಜೀನುಗಳ ಸಂಬಂಧದ ಬಗ್ಗೆ ವಿಜ್ಞಾನಿಗಳಲ್ಲಿ ವಿಸ್ತೃತ ಚರ್ಚೆ ಆರಂಭವಾಗಿದೆ.

ಮುಖ್ಯ ಚಿತ್ರ: ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ತಳಿವಿಜ್ಞಾನಿ ಕೆರೋಲಾ ವಿನೀಸಾ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180