ವಾರಾಂತ್ಯದ ಓದು | 'ಒಳ್ಳೆಯ ಬರಹಗಾರರು' ಅಂದರೆ ಯಾರು? ಅವರು 'ಕೆಟ್ಟ ಬರಹಗಾರರು' ಅನ್ನಿಸಿಕೊಳ್ಳುವುದು ಯಾವಾಗ?

ರಾಜಕೀಯ ಪಕ್ಷಗಳ ಪರ 'ಫರ್ಮಾನು' ಹೊರಡಿಸುವುದು, ರಾಜಕಾರಣಿಗಳ ಕುರಿತು ಕಿಲೋಮೀಟರುಗಟ್ಟಲೆ ಕವಿತೆ ಬರೆಯುವುದು, ಸಾರ್ವಜನಿಕ ಲಜ್ಜೆ ಬಿಟ್ಟು ಅಧಿಕಾರಕ್ಕಾಗಿ ಲಾಬಿ ಮಾಡುವುದು ಬರಹಗಾರರ ಸಹಜ ಲಕ್ಷಣವೇನೋ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ, ಬರಹಗಾರರ ಬೌದ್ಧಿಕಲೋಕದ ಕುರಿತ ಸೂಕ್ಷ್ಮ ಅವಲೋಕನ ಇಲ್ಲಿದೆ

ನಾನು ಕಂಡಂತೆ, ಈ ಲೋಕದ ದೊಡ್ಡ-ದೊಡ್ಡ ಲೇಖಕರು ಮತ್ತು ಚಿಂತಕರು, 'ನಾನೇಕೆ ಬರೆಯುತ್ತೇನೆ?' ಎನ್ನುವ ಕುರಿತು ಸಾಕಷ್ಟು ಜಿಜ್ಞಾಸೆಗಳನ್ನು ಬೆಳೆಸಿದ್ದಾರೆ. ಇಂತಹ ಹಲವು ಬರಹಗಳು ನಮ್ಮನ್ನು ನಿರಂತರವಾಗಿ ಮುನ್ನಡೆಸುವ ದಾರಿದೀಪಗಳಾಗಿವೆ. ಇದೇ ಬೆಳಕಿನಲ್ಲಿ ಹೊಸದಾದ ತಿಳಿವನ್ನು ಕಂಡುಕೊಳ್ಳುವುದಕ್ಕೂ ನಮಗೆ ಸಾಧ್ಯವಾಗಿದೆ. ಸಂಸ್ಕೃತಿ ವಿಕಾಸದ ಪಥ ಬದಲಾದಂತೆ, ಸಮೂಹಗಳ ಮುನ್ನೋಟದ ದೆಸೆಗಳು ಹೊಸದಾಗಿ ಏರ್ಪಟ್ಟಂತೆ ಬರಹಗಾರರ ಆದ್ಯತೆ, ಆಯ್ಕೆ ಹಾಗೂ ತಮ್ಮ ಲೋಕವನ್ನು ವಿವರಿಸುವ ಬಗೆಯೂ ಬದಲಾಗುವುದನ್ನು ಆಯಾ ಕಾಲದ ಬರಹಗಾರರ ಬರವಣಿಗೆಯಲ್ಲಿ ನೋಡುತ್ತೇವೆ. ಹಾಗಾಗಿ, ಬರಹವನ್ನು ವಿಕಾಸಶೀಲತೆಯ ಸೂಚಕವನ್ನಾಗಿಯೂ ಪರಿಗಣಿಸುವ ಪರಿಪಾಠ ನಮ್ಮದಾಗಿದೆ.

ಪ್ರತಿಯೊಂದು ಬರಹದಲ್ಲಿ ಬದುಕಿನ ಆಶೋತ್ತರಗಳನ್ನು ಬಣ್ಣಿಸುವ ಇಲ್ಲವೇ ವ್ಯಾಖ್ಯಾನಿಸುವ ಕ್ರಮವನ್ನು ಅನುಸರಿಸಲಾಗುತ್ತದೆ. ಇವೆರಡೂ ನೆಲೆಗಳು ಸಮೂಹಗಳನ್ನು ಅರ್ಥೈಸುವುದಕ್ಕೆ ಪೂರಕವಾಗಿರುತ್ತವೆ. ಕೆಲವು ಸಮೂಹಗಳಿಗೆ ತಮ್ಮನ್ನು ಬಣ್ಣಿಸುವ ವಿಧಾನ ಮುಖ್ಯವಾದರೆ, ಮತ್ತೆ ಕೆಲವು ಸಮೂಹಗಳಿಗೆ ತಮ್ಮನ್ನು ವ್ಯಾಖ್ಯಾನಿಸುವ ಬಗೆ ಪ್ರಮುಖವಾಗಿ ತೋರುತ್ತದೆ. ಕೆಲವು ಬರಹಗಾರರು ಸಮೂಹಗಳ ಇಡಿತನದ ಚಹರೆಗಳನ್ನು ಕಂಡರಿಸುವ ದಾರ್ಶನಿಕತೆಯನ್ನು ಮೆರೆದಿದ್ದಾರೆ. ಇಂತಹ ಲೇಖಕರು ಎಲ್ಲ ಕಾಲದ ಬದುಕಿನ ತುಡಿತಕ್ಕೂ ಮಿಡಿಯುವ ಸಾರ್ವತ್ರಿಕ ಮನೋಭಾವವವನ್ನು ಹೊಂದಿರುತ್ತಾರೆ. ಅಂದರೆ, ಬದುಕನ್ನು ಅರ್ಥೈಸುವ ಈ ಆಯಾಮ ಸರಳ ರೇಖಾತ್ಮಕವಾದದ್ದು ಅಲ್ಲ. ಅದು ಅತ್ಯಂತ ಸಂಕೀರ್ಣತೆಯಿಂದ ಕೂಡಿರುತ್ತದೆ. ಇಂತಹ ಸಂಕೀರ್ಣತೆಯನ್ನು ಅರಿಯುವ ಮತ್ತು ಅರ್ಥೈಸುವ ಕೆಲಸವನ್ನು ಬರಹಗಾರರು ಬಹಳ ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ, ಶತಮಾನಗಳಿಂದಲೂ ಬರಹಗಾರರನ್ನು ಸಾಮಾಜಿಕ ಚಿಂತಕರನ್ನಾಗಿಯೂ ನಾವು ಕಾಣುತ್ತಲೇ ಬಂದಿದ್ದೇವೆ. ಈ ಮಾತಿಗೆ ಯಾರಾದರೂ ತಕರಾರು ತೆಗೆಯಬಹುದು. ಆ ತಕರಾರು ಸಹಜವೂ ಆಗಿರುತ್ತದೆ. ಆದರೆ, ಬರಹಗಾರರ ಸಾಮಾಜಿಕ ಬದ್ಧತೆ ಹೀಗೇ ಇರಬೇಕು ಎನ್ನುವ ನಿರೀಕ್ಷೆಯನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಅಂತಹದೊಂದು ನಿರೀಕ್ಷೆ ನಮ್ಮ ಸಮೂಹಗಳಲ್ಲಿ ಎಲ್ಲ ಕಾಲದಲ್ಲಿಯೂ ನೆಲೆನಿಂತಿರುವುದನ್ನು ಬಹುತೇಕವಾಗಿ ನಾವು ಕಾಣುತ್ತೇವೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಬರಹಗಾರರೂ ತಾವು ಯಾವ ಸಿದ್ಧಾಂತ ಅಥವಾ ತತ್ವಕ್ಕೆ ಬದ್ಧ ಅನ್ನುವುದನ್ನು ತಮ್ಮ ಬರಹಗಳ ಮೂಲಕವೇ ನಿಚ್ಚಳಪಡಿಸಿರುತ್ತಾರೆ. ಆದ್ದರಿಂದ, ಎಲ್ಲ ಬರಹಗಾರರನ್ನೂ ಸಾಮಾಜಿಕ ಬದ್ಧತೆಯನ್ನು ಹೊಂದಿದವರು ಎಂದು ಬಿಂಬಿಸಲು ಆಗುವುದಿಲ್ಲ. ಆದರೆ, ಲೋಕದ ಹಿತವನ್ನು ಬಯಸುವ ವ್ಯಕ್ತಿಗಳು ಸಾಮಾಜಿಕ ಐಕ್ಯತೆ ಮತ್ತು ಬದ್ಧತೆಯನ್ನು ಕಾಪಾಡುವ ತುಡಿತ ಹೊಂದಿರುತ್ತಾರೆ.

ಈ ಬಗೆಯ ಬರಹಗಾರರು ಸಾಕಷ್ಟು ಪ್ರಮಾಣದಲ್ಲಿ ಕನ್ನಡದಲ್ಲಿ ಮತ್ತು ಜಗತ್ತಿನ ಇತರೆ ನುಡಿಗಳಲ್ಲಿ ಕಾಣಿಸುತ್ತಾರೆ. ಇವರಲ್ಲಿ, 'ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ' ಎನ್ನುವ ತತ್ವಕ್ಕೆ ಬದ್ಧರಾಗಿ ಬರೆದವರೇ ಹೆಚ್ಚು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸರಿತನವನ್ನು ಹಂಬಲಿಸುವ ಬರಹಗಾರರು ಎಲ್ಲ ಕಾಲದಲ್ಲಿಯೂ ಕೇಡಿನ ವಿರೋಧಿಗಳೇ ಆಗಿರುತ್ತಾರೆ. ಕೆಲವು ಸನ್ನಿವೇಶದಲ್ಲಿ ಇಂತಹ ಕೆಲವು ಬರಹಗಾರರನ್ನು ಮತಾಂಧತೆಯ ನೆಲೆಯಲ್ಲಿಟ್ಟು ವಿಶ್ಲೇಷಿಸುವ ಸಂದರ್ಭಗಳನ್ನು ಕನ್ನಡದಲ್ಲಿಯೂ ಮತ್ತು ಲೋಕದ ಬೇರೆ-ಬೇರೆ ನುಡಿಗಳಲ್ಲಿಯೂ ನೋಡುತ್ತೇವೆ. ಉದಾಹರಣೆಗೆ, ಕನ್ನಡದಲ್ಲಿ ಹಲವು ಕವಿಗಳನ್ನು ಯಾವುದೇ ಒಂದು ಧರ್ಮದ ವ್ಯಾಪ್ತಿಗೆ ಸೀಮಿತಪಡಿಸಿ ಚರ್ಚಿಸುವುದನ್ನು ಗಮನಿಸಬಹುದು. ಇದು ಕೇವಲ ಸರಿ ಮತ್ತು ತಪ್ಪಿನ ಪ್ರಶ್ನೆಯಲ್ಲ. ಬದಲಾಗಿ, ಆಯಾ ಕಾಲದ ಸಾಮಾಜಿಕತೆಯ ಪ್ರಶ್ನೆಯೂ ಆಗಿರುತ್ತದೆ. ಈ ಪ್ರಶ್ನೆಗಳನ್ನು ಪರಿಶೀಲಿಸಿ ನೋಡದೆ, ಕೇವಲ ಕವಿಗಳ ಬದ್ಧತೆಯನ್ನು ನಮ್ಮ ಈ ಕಾಲದ ಪ್ರಶ್ನೆಗಳ ಜೊತೆಗೆ ಸಮೀಕರಿಸಿ ನೋಡುವುದು ಎಷ್ಟು ಸೂಕ್ತ ಎನ್ನುವುದನ್ನು ಅರಿಯುವುದು ಅತ್ಯಂತ ಜರೂರಾಗಿದೆ. ಅಂದರೆ, ಕಾಲದ ಆದ್ಯತೆ ಮತ್ತು ತುರ್ತುಗಳು ಕವಿ ಇಲ್ಲವೇ ಬರಹಗಾರರ ಸಾಮಾಜಿಕ ಬದ್ಧತೆಯನ್ನು ನಿರ್ಧರಿಸುತ್ತವೆ. ಹಾಗಂತ, ಜೀವವಿರೋಧಿ ನಿಲುವುಗಳನ್ನು ಪ್ರತಿನಿಧಿಸುವ ಸಾಹಿತ್ಯ ಅಥವಾ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ನಾವು ಪುರಸ್ಕರಿಸಬೇಕು ಎಂದು ಹೇಳುತ್ತಿಲ್ಲ. ಯಾವುದೇ ಕವಿ ಸಮೂಹ ವಿರೋಧಿ ನಿಲುವು ತಾಳುವುದಕ್ಕೆ ಕಾರಣವಾಗಿರುವ ಚಾರಿತ್ರಿಕ ಮತ್ತು ಸಾಮಾಜಿಕ ಕಾರಣಗಳನ್ನು ಬಿಡಿಸಿ ನೋಡುವ ಅಗತ್ಯವಿದೆ.

ಇವತ್ತು ಭಾರತದಲ್ಲಿ ಹಲವು ಬರಹಗಾರರು ಪ್ರತಿಗಾಮಿತನವನ್ನು ಪ್ರದರ್ಶಿಸುವುದಕ್ಕೆ ನಮ್ಮ ರಾಜಕೀಯ ವಾತಾವರಣವೇ ಕಾರಣವಾಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಇಂತಹ ರಾಜಕೀಯ ವಾತಾವರಣದ ಪರಿಣಾಮವಾಗಿಯೇ ಪ್ರತಿಗಾಮಿತನ ಮುನ್ನೆಲೆಗೆ ಬರುತ್ತದೆ ಎಂದು ಹೇಳುತ್ತಿಲ್ಲ. ಪ್ರಭುತ್ವವೇ ಈ ಪ್ರತಿಗಾಮಿ ನಿಲುವುಗಳನ್ನು ಮಾನ್ಯ ಮಾಡುವ ಹೊಣೆಯನ್ನು ಹೊತ್ತಾಗ, ಇಂತಹ ನಿಲುವುಗಳಿಗೆ ಸಾಮಾಜಿಕ ಬೆಂಬಲ ದೊರೆಯುತ್ತದೆ. ಅಂದರೆ, ರಾಜಕೀಯ ಪ್ರಭುತ್ವ ಮತ್ತು ಧರ್ಮಗಳ ಸಹಯೋಗದಿಂದ ಏರ್ಪಡುವ ವಿದ್ಯಮಾನವು ಬಹುತೇಕವಾಗಿ ಪ್ರತಿಗಾಮಿತನವನ್ನು ಪ್ರಚುರಪಡಿಸುವ ನೆಲೆಯೇ ಆಗಿರುತ್ತದೆ. ಈ ವಿದ್ಯಮಾನಗಳನ್ನು ವಿರೋಧಿಸುವ ಬರಹಗಾರರನ್ನು ಪ್ರಗತಿಪರ, ಬಂಡಾಯ ಅಥವಾ ಜೀವಪರ ಬರಹಗಾರ ಎಂದು ಬಣ್ಣಿಸಲಾಗುತ್ತದೆ. ಹಾಗಾದರೆ, ಈ ಬಣ್ಣನೆ ತಪ್ಪೇ ಎನ್ನುವ ಪ್ರಶ್ನೆಯೂ ಹಲವರಲ್ಲಿ ಒಡಮೂಡುತ್ತದೆ. ಯಾರು ತಮ್ಮ ಧರ್ಮದ ಯಥಾಸ್ಥಿತಿಯನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ಬಯಸುತ್ತಾರೋ, ಅವರು ಸಮೂಹ ವಿರೋಧಿ ನಿಲುವುಗಳನ್ನು ಯಥೇಚ್ಛವಾಗಿ ಅಭಿವ್ಯಕ್ತಿಸುತ್ತ ಇರುತ್ತಾರೆ ಮತ್ತು ಅದುವೇ ಸಾರ್ವತ್ರಿಕ ಸತ್ಯವೆಂದು ಬಿಂಬಿಸುತ್ತಾರೆ. ಸಾಮಾಜಿಕ ಬದ್ಧತೆಯನ್ನು ಸಮೂಹಗಳ ಏಳಿಗೆಗಾಗಿಯೇ ಹೊಂದಿರುವ ಬರಹಗಾರರು ಮಾತ್ರ ಎಲ್ಲ ಕಾಲದಲ್ಲಿಯೂ ಸಮೂಹಗಳ ಒಳಿತನ್ನು ಬಯಸುವ ಹೊಣೆಯನ್ನು ಹೊಂದಿರುತ್ತಾರೆ. ಬರಹಗಾರರು 'ನಾನು ಏಕೆ ಬರೆಯುತ್ತೇನೆ?' ಎಂದು ಕೇಳಿಕೊಳ್ಳದಿದ್ದರೆ, ಸಮೂಹಗಳನ್ನು ಪ್ರತಿನಿಧಿಸುವ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಅತ್ಯಂತ ಸುಲಭವಾಗುತ್ತದೆ.

"ಲೋಕಕ್ಕೆ ಕೇಡನ್ನು ಬಯಸುವ ಬರಹಗಾರರು ಇರುತ್ತಾರೆಯೇ?" ಎನ್ನುವಂತಹ ಪ್ರಶ್ನೆಗಳು ನಮ್ಮಲ್ಲಿ ಯಾರಿಗಾದರೂ ಒಡಮೂಡಬಹುದು. ದಿಟ... ಯಾವುದೇ ಬರಹಗಾರ ನೇರವಾಗಿ ಸಾಮಾಜಿಕ ಒಡಕನ್ನೇ ತನ್ನ ಬರಹದ ಅಜೆಂಡವನ್ನಾಗಿ ರೂಪಿಸಿಕೊಳ್ಳುವುದಿಲ್ಲ. ಬದಲಾಗಿ, ಸಮೂಹಗಳನ್ನು ಶೋಷಿಸುವ, ನಿಯಂತ್ರಿಸುವ ಹಾಗೂ ತಮ್ಮ ಅಧೀನದಲ್ಲಿಯೇ ಇರಬೇಕು ಎಂಬಂತಹ ಸಿದ್ಧಾಂತಗಳನ್ನು ಪಾಲಿಸುವ ವರ್ಗಗಳನ್ನು ಪ್ರತಿನಿಧಿಸುವ ಬದ್ಧತೆಯನ್ನು ಹೊಂದಿರುವ ಬರಹಗಾರರು ಇರುತ್ತಾರೆ. ಪರಿಣಾಮವಾಗಿ, ಸಾಮಾಜಿಕ ಅಸಮಾನ ವಿನ್ಯಾಸಗಳು ಮತ್ತು ಬದುಕಿಗೆ ಅಂಟಿಕೊಂಡಿರುವ ಕೇಡುಗಳು ಯಥಾವತ್ತಾಗಿ ಇವರ ಅಭಿವ್ಯಕ್ತಿಯ ಮಾಧ್ಯಮವಾಗಿ ಮುಂದುವರಿಯುತ್ತವೆ. ಇಂತಹ ನಿಲುವುಗಳನ್ನು ಸಮರ್ಥಿಸುವ ಸಾಕಷ್ಟು ಬರಹಗಾರರು ನಮ್ಮ ಸುತ್ತಮುತ್ತ ಇರುವುದನ್ನು ಮರೆಯುವಂತಿಲ್ಲ. ಸಾಮಾಜಿಕ ವಿವೇಕದ ಪರವಾಗಿರುವ ಮತ್ತು ಮಾತೆಂಬುದು ಜೋತಿರ್ಲಿಂಗವೆಂದು ನಂಬಿದ ಪ್ರತೀ ಬರಹಗಾರ ತಾನು ಬದುಕುವ ಲೋಕದ ಹಿತವನ್ನು ಬಯಸುತ್ತಾನೆ/ಳೆ. ಅಧಿಕಾರ ಸಂಬಂಧಗಳು ಮತ್ತು ಸಾಮಾಜಿಕ ಸಂಕಥನಗಳಿಗೆ ವ್ಯತಿರಿಕ್ತವಾಗಿ ಯೋಚಿಸುವ ಮತ್ತು ತನ್ನ ಸಮೂಹ ಏನನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಯಾವುದನ್ನು ನಿರಾಕರಿಸಬೇಕು ಎಂಬ ವಿವೇಕ ಎಚ್ಚತ್ತುಕೊಳ್ಳದಿದ್ದರೆ, ಸಾಮಾಜಿಕ ವಿಘಟನೆ ಸಹಜ ಪ್ರವೃತ್ತಿ ಆಗುತ್ತದೆ. ಹಾಗಾಗಿ, ಆಯ್ಕೆ ಮತ್ತು ನಿರಾಕರಣೆಗಳ ನಡುವಣ ವ್ಯತ್ಯಾಸಗಳನ್ನು ಸೂಕ್ತವಾಗಿ ಅರ್ಥೈಸುವ ಬರಹಗಾರರು ಮಾತ್ರ ಸಾಮಾಜಿಕ ಬದ್ಧತೆಯನ್ನು ಹೊಂದಿರುತ್ತಾರೆ ಅನ್ನುವುದು ಖಚಿತ.

ಸಮೂಹಗಳ ಮನಸ್ಸು ಮತ್ತು ಪ್ರಜ್ಞೆಯನ್ನು ಕಾಪಾಡುವ ಮಹತ್ವದ ಕೆಲಸ ಬರಹಗಾರರಿಂದಲೂ ನಡೆದಿದೆ. ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ರಾಜಕಾರಣ ಮುಂತಾದ ತಾತ್ವಿಕ ಚೌಕಟ್ಟುಗಳನ್ನು ನೆಲೆಯಾಗಿಸಿಕೊಂಡು, ಬರಹಗಾರರ ಮೂಲಕ ಚಿಂತನೆಯೊಂದು ಮೈದೋರಿರುವುದನ್ನು ಯಾರಾದರೂ ಗುರುತಿಸಲು ಸಾಧ್ಯ. ದಿಟ ಚಿಂತನೆ ವಿಕಾಸಗೊಳ್ಳುವುದು ಬದುಕಿನ ವಿಕಾಸ ಪಥದಲ್ಲಿಯೇ. ಆದರೆ, ಅದಕ್ಕೊಂದು ತಾತ್ವಿಕ ಹಂದರ ಕಲ್ಪಿತವಾಗುವುದು ಮಾತ್ರ ಚಿಂತಕರು, ಬರಹಗಾರರಿಂದ ಎಂದು ಹೇಳಬೇಕಾಗುತ್ತದೆ. ಅಂದರೆ, ಯಾವುದೇ ಬಗೆಯ ತಿಳಿವು ಒಂದು ನಿಶ್ಚಿತ ಸ್ವರೂಪವನ್ನು ಪಡೆದುಕೊಳ್ಳುವುದಕ್ಕೆ ಬರಹಗಾರರು ಒತ್ತಾಸೆಯಾಗುತ್ತಾರೆ. ಚಿಂತನೆಯ ನೆಲೆಗಳನ್ನು ಪತ್ತೆ ಹಚ್ಚುವ, ಇಲ್ಲವೇ ಅಂತಹ ನೆಲೆಗಳನ್ನು ರೂಪಿಸುವುದಕ್ಕೆ ಕಾರಣವಾಗುವ ಒಬ್ಬೊಬ್ಬರೂ ಬರಹಗಾರರೇ ಆಗಿರುವುದಕ್ಕೆ ಸಾಧ್ಯ. ಹಾಗಾಗಿ,. ಪ್ರತೀ ಬರಹಗಾರರ ಬದುಕಿನ ವ್ಯಾಪ್ತಿಯೊಳಗೆಯೇ, ಅವರು ಬರಹಗಾರರು ಆಗುವುದಕ್ಕೆ ಬೇಕಾದ ಅನೂಹ್ಯ ಅನುಭವ ಕಲ್ಪಿತವಾಗುತ್ತದೆ. ವಿಶೇಷವಾಗಿ ಸೃಜನಶೀಲ ಬರಹಗಾರರಲ್ಲಿ ಈ ಅನುಭವ ಪ್ರಧಾನವಾಗಿ ಕೆಲಸ ಮಾಡುತ್ತದೆ. ಕೇವಲ ವೈಚಾರಿಕ ಚೌಕಟ್ಟುಗಳಲ್ಲಿ ಬರೆಯುವವರಿಗೆ ಇಂತಹ ಅನೂಹ್ಯ ಅನುಭವವು ತಾತ್ವಿಕ ನೆಲೆಗೆ ಪರಿವರ್ತನೆಯಾಗುತ್ತದೆ. ಹಾಗಾಗಿಯೇ, ಸಾಹಿತ್ಯದ ಓದಿಗೂ ಮತ್ತು ವೈಚಾರಿಕ ಬರಹಗಳ ಓದಿಗೂ ಸಾಕಷ್ಟು ವ್ಯತ್ಯಾಸಗಳು ಏರ್ಪಡುತ್ತವೆ. ಸಾಹಿತ್ಯದ ಓದಿನ ಪರಿಣಾಮ ನಮ್ಮಲ್ಲಿ ರೂಪಿಸುವ ಅನುಭವ ಲೋಕಕ್ಕೂ ಮತ್ತು ವೈಚಾರಿಕ ಬರಹಗಳ ಓದಿನ ಪರಿಣಾಮದಿಂದ ಒಡಮೂಡುವ ಗ್ರಹಿಕೆಗೂ ಸಾಕಷ್ಟು ಅಂತರಗಳು ಇರುವುದನ್ನು ಮನಗಾಣಬಹುದು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಒಂದು ಓದು ಇನ್ನೊಂದು ಓದನ್ನು ಅರಿಯುವುದಕ್ಕೆ ಒತ್ತಾಸೆಯಾಗುತ್ತದೆ ಮತ್ತು ಈ ಓದುಗಳು ಒಂದನ್ನೊಂದು ಪ್ರಭಾವಿಸುತ್ತವೆ. ಅಷ್ಟೇ ಅಲ್ಲದೆ, ನಮ್ಮ ಗ್ರಹಿಕೆಯ ಎಲ್ಲೆಗಳನ್ನು ವಿಸ್ತರಿಸುವ ಕೈಂಕರ್ಯವೂ ಇಲ್ಲಿ ನಡೆಯುತ್ತದೆ. ಇದು ಸಾಮಾಜೀಕರಣ ಪ್ರಕ್ರಿಯೆಯ ನೆಲೆಯಾಗಿ ಏರ್ಪಡುವುದಕ್ಕೂ ಸಾಧ್ಯವಿದೆ.

ಈ ಪ್ರಕ್ರಿಯೆಯಿಂದ ಉಂಟಾಗುವ ಚಿಂತನೆಯ ಮೂಲ ಆಕರ ನಮ್ಮ ಬದುಕಿನ ದೈನಂದಿನ ಅನುಭವವೇ ಆಗಿರುತ್ತದೆ. ಅಂದರೆ, ಯಾವುದನ್ನು ನಾವು ಸಾಮಾನ್ಯವಾಗಿ 'ಸಂಸ್ಕೃತಿ' ಎಂದು ಗುರುತಿಸುತ್ತೇವೋ, ಅದು ಇಂತಹ ಅನುಭವವನ್ನು ನೆಲೆಯಾಗಿಸಿಕೊಂಡಿರುತ್ತದೆ. ಇಡೀ ಬದುಕಿನ ನೋಟಕ್ರಮವನ್ನು ಪರಿಭಾವಿಸುವ ಬಗೆಯೇ ಸಂಸ್ಕೃತಿಯೊಂದು ನಿರ್ಮಾಣಗೊಳ್ಳುವ ವಿಧಾನವಾಗಿರುತ್ತದೆ. ಈ ಸಾಂಸ್ಕೃತಿಕ ವಿನ್ಯಾಸವನ್ನೇ, ಚಿಂತಕ ಸ್ಟುವರ್ಟ್ ಹಾಲ್, ಬದುಕಿನ ಅನುಭವ (ಎಕ್ಸ್‌ಪಿರಿಯನ್ಸ್ ಲೀವ್ಡ್), ಅರ್ಥೈಸಿದ ಅನುಭವ (ಎಕ್ಸ್‌ಪಿರಿಯನ್ಸ್ ಇಂಟರ್‌ಪ್ರಿಟೆಡ್) ಹಾಗೂ ನಿರ್ವಚಿತ ಅನುಭವ (ಎಕ್ಸ್‌ಪಿರಿಯನ್ಸ್ ಡಿಫೈನ್ಡ್) ಎಂದು ವರ್ಗೀಕರಿಸಿ, ಸಂಸ್ಕೃತಿ ಓದಿನ ಮಾದರಿಯನ್ನು ನಿರೂಪಿಸುವುದನ್ನು ಕಾಣಬಹುದು. ವ್ಯಾಪಕ ಅರ್ಥದಲ್ಲಿ ಹೇಳುವುದಾದರೆ, ಅನುಭವ ಅನ್ನುವುದು ಮಾನವಿಕ ವಿಜ್ಞಾನಗಳನ್ನು ಮಾತ್ರ ವಿವರಿಸುವ ಕ್ರಮವಲ್ಲ, ಬದಲಾಗಿ ಬದುಕಿನ ಎಲ್ಲ ವಿದ್ಯಮಾನಗಳನ್ನು ನೆಲೆಯಾಗಿಸಿಕೊಂಡು ಚಿಂತನೆಯ ಸ್ವರೂಪವನ್ನು ಅರಿಯುವುದಾಗಿದೆ. ಸಮಾಜವನ್ನು ಇಡಿಯಾಗಿ ಗ್ರಹಿಸುವುದಕ್ಕೆ ಬೇಕಾಗುವ ಚಿಂತನೆಯ ಮಾದರಿಯನ್ನು ಅರ್ಥೈಸುವ ಈ ವಿನ್ಯಾಸವನ್ನೇ ಪ್ರಧಾನವಾಗಿ 'ಸಂಸ್ಕೃತಿ ಓದು' ಎಂದು ಹೇಳಲಾಗುತ್ತದೆ. 50 ಮತ್ತು 60ರ ದಶಕದಲ್ಲಿ, ಕಾರ್ಮಿಕ ಹಿನ್ನೆಲೆಯಿಂದ ಬಂದಂತಹ ರೇಮಂಡ್ ವಿಲಿಯಮ್ಸ್, ಹೊಗರ್ಟ್ ಮೊದಲಾದ ವಿದ್ವಾಂಸರು ಜನಪರ ಸಂಸ್ಕೃತಿ ಓದಿನ ಹಾದಿಗಳನ್ನು ನೆಲೆಗೊಳಿಸಿದರು. ಇದೇ ಬಗೆಯ ಚಿಂತನೆಯನ್ನು ಕರ್ನಾಟಕದಲ್ಲಿ ವಿಭಿನ್ನ ತಾತ್ವಿಕ ನೋಟಕ್ರಮಗಳ ಮೂಲಕ ಹಲವು ಚಿಂತಕರು ನಿರೂಪಿಸಿದ್ದಾರೆ. ಒಟ್ಟಿನಲ್ಲಿ 'ಸಂಸ್ಕೃತಿ' ಅನ್ನುವುದು ಬದುಕಿನ ಅನುಸಂಧಾನದ ತಾಣವಾಗಿದೆ ಅನ್ನುವ ತಾತ್ಪರ್ಯವನ್ನು ಇಲ್ಲಿ ಕಂಡರಿಯಲು ಸಾಧ್ಯ.

ಬರಹಗಾರರು ತಮ್ಮ ಸಮಾಜವನ್ನು ಕುರಿತು ಚಿಂತಿಸುವ ವಿಧಾನವೊಂದು ಮೈದೋರುವುದಕ್ಕೆ ಬೇಕಾಗುವ ಪರಿಕರಗಳು ಎಲ್ಲಿರುತ್ತವೆ ಮತ್ತು ಅವುಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ತಾತ್ವಿಕತೆಯನ್ನು ಕಂಡುಕೊಳ್ಳುವುದು ಮುಖ್ಯ. ಯಾವುದೇ ಒಂದು ಸಮಾಜ ತನ್ನ ವ್ಯಕ್ತಿತ್ವವನ್ನು ಪೂರ್ಣವಾಗಿ ಬೆಳೆಸಿಕೊಳ್ಳಬೇಕಾದರೆ, ಆ ಸಮಾಜದ ಎಲ್ಲ ಜನರನ್ನೂ ಪ್ರತಿನಿಧಿಸುವ ಚಿಂತನೆಯ ಧಾರೆಗಳನ್ನು ಕ್ರೂಢೀಕರಿಸುವ ಹೊಣೆಗಾರಿಕೆ ಬರಹಗಾರರಿಗೆ ಮಾತ್ರ ಸೇರಿರುತ್ತದೆ ಎಂದು ಹೇಳಿ ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಮುನ್ನಡೆಗೆ ಅಗತ್ಯವಿರುವ ಚಳವಳಿ ಇಲ್ಲವೇ ಆಂದೋಲನವನ್ನು ರೂಪಿಸುವುದು ಆಯಾ ಸಮಾಜದ ಎಲ್ಲರಿಗೂ ಸಂಬಂಧಿಸಿರುತ್ತದೆ. ಆದರೆ, ಚಿಂತಕರು, ಲೇಖಕರು ತುಂಬಾ ಮುತುವರ್ಜಿ ವಹಿಸಿ, ತಾವು ಬದುಕಿರುವ ಸಮುದಾಯಗಳ ಏಳಿಗೆಗೆ ಸಾಹಿತ್ಯ, ಸಂಸ್ಕೃತಿ,  ಕಲೆ, ವಿಜ್ಞಾನ ಹಾಗೂ ಚಿಂತನೆಯ ಪರಂಪರೆಯನ್ನು ನೆಲೆಗೊಳಿಸುವುದು ಅತ್ಯಂತ ಜರೂರಿನ ಕೆಲಸವಾಗಿದೆ. ಇಂತಹ ಚಿಂತನೆಯ ಹಿಂದಿನ ತರ್ಕ, ಆಲೋಚನೆಯ ವಿನ್ಯಾಸ ಹಾಗೂ ಸಿದ್ಧಾಂತದ ಸ್ವರೂಪವನ್ನು ಅರಿಯಲು ಬರಹಗಾರರು ಒತ್ತಾಸೆ ಆಗುತ್ತಾರೆ ಅನ್ನುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಯಾರು ಏನನ್ನು ಹೇಳುತ್ತಾರೆ, ಯಾಕೆ ಹೇಳುತ್ತಾರೆ, ಯಾವಾಗ ಹೇಳುತ್ತಾರೆ, ಎಲ್ಲಿ ಮತ್ತು ಯಾರಿಗೆ ಹೇಳುತ್ತಾರೆ ಅನ್ನುವ ವಿವರಗಳು ಎಲ್ಲ ಜ್ಞಾನಶಾಖೆಗಳಿಗೂ ಅನ್ವಯಿಸುತ್ತವೆ. ಆದರೆ, ಈ ವಿವರಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸದಲ್ಲಿ ಭಾಗಿಯಾಗುವ ಲೇಖಕರು ಮಾತ್ರ ಪ್ರಮುಖ ವ್ಯಕ್ತಿಗಳಾಗಿ ಕಾಣಿಸುತ್ತಾರೆ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ಬಿಎಂಐಸಿ ವಿರುದ್ಧದ ಸೈಕಲ್ ಜಾಥಾ ಮತ್ತು ಕೆನ್ನೆಗೆ ಬಿದ್ದ 'ಹೋರಾಟದ ಏಟು'

ಬರಹಗಾರ ಅಂದರೆ ಕೇವಲ ವ್ಯಕ್ತಿಯಲ್ಲ ಮತ್ತು ಬರಹ ಅನ್ನುವುದು ವೈಯಕ್ತಿಕ ಕ್ರಿಯೆಯೂ ಅಲ್ಲ. ಅದು ಆಲೋಚನೆಯ ಕ್ರಮ. ಹಾಗಾಗಿ, ಅದೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನವಾಗಿ ಮೈದೋರುತ್ತದೆ. ಈ ಬಗೆಯ ವಿದ್ಯಮಾನಗಳು ಸಾಂಸ್ಕೃತಿಕ ರಾಜಕಾರಣವನ್ನು ರೂಪಿಸುತ್ತವೆ ಮತ್ತು ಅದನ್ನು ಸಮೂಹಗಳ ಏಳಿಗೆಯ ವಿನ್ಯಾಸವನ್ನಾಗಿ ರೂಪಾಂತರಿಸುತ್ತವೆ. ಚರಿತ್ರೆಯಲ್ಲಿ ಜ್ಞಾನವು ಹೇಗೆ ಕಾರ್ಯ ನಿರ್ವಹಿಸಿದೆ ಮತ್ತು ಪರಿಣಾಮವಾಗಿ ಏನೆಲ್ಲ ಅಪಾಯಗಳು ಏರ್ಪಟ್ಟಿವೆ ಎಂಬುದನ್ನು ಫುಕೋ ತನ್ನ ಅಧ್ಯಯನಗಳ ಮೂಲಕ ನಿಚ್ಚಳಗೊಳಿಸಿದ್ದಾನೆ. ಹಾಗಾಗಿಯೇ, ಜ್ಞಾನ ಮತ್ತು ಅಧಿಕಾರ ಸಂಕಥನಗಳು ಸಮೂಹಗಳ ಬಿಡುಗಡೆಯ ದಾರಿಗಳಾಗದೆ, ನಿಯಂತ್ರಣದ ಅಸ್ತ್ರಗಳಾಗುವ ಅಪಾಯವನ್ನು, ಫುಕೋನ ವಿಶ್ಲೇಷಣೆಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ. ಅದಕ್ಕಾಗಿಯೇ ಬರಹಗಾರನ/ಳ ಹೊಣೆಗಾರಿಕೆಗೆ ಮಹತ್ವ ಬಂದಿರುತ್ತದೆ. ಅಂದರೆ, ಜ್ಞಾನ ಮತ್ತು ಅಧಿಕಾರ ಸಂಕಥನಗಳನ್ನು, ಸಮೂಹಗಳ ಬಿಡುಗಡೆಯ ದಾರಿಯ ದೀಪಗಳನ್ನಾಗಿ ಪರಿವರ್ತಿಸುವ ಬದ್ಧತೆ ಬರಹಗಾರರಿಗೆ ಹೇಗೆ ಅನ್ವಯಿಸುತ್ತದೆ ಎಂಬ ವಾಸ್ತವವನ್ನು ಈಗಲಾದರೂ ಅರಿಯುವ ಜರೂರಿದೆ.

ಚಿತ್ರಗಳು - ಸಾಂದರ್ಭಿಕ | ಕೃಪೆ: Unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app