
'ಬ್ರಾಹ್ಮಣಿಕಲ್ ಡೈರೆಕ್ಟರ್' ಎಂದು ತಮಿಳರಿಂದಲೇ ಟೀಕೆಗೆ ಒಳಗಾಗಿರುವ ನಿರ್ದೇಶಕ ಮಣಿರತ್ನಂ, 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲೂ ಬ್ರಾಹ್ಮಣ್ಯ ತುಂಬಿದ್ದಾರೆ. ಜೊತೆಗೆ, ಶೈವ ಪರಂಪರೆಗೆ ಸೇರಿದ ರಾಜರಾಜ ಚೋಳನ್ ಎಂಬ ರಾಜನನ್ನು ಹಿಂದೂವನ್ನಾಗಿ ಚಿತ್ರಿಸಿದ್ದಾರೆ. ಈ ಮೂಲಕ ಚೋಳ ಪರಂಪರೆಗೆ ಅವಮಾನ ಮಾಡಿದ್ದಾರೆ ಎಂಬುದೇ ವಿವಾದದ ಮೂಲ
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದ ಬೆನ್ನಿಗೇ, ದಕ್ಷಿಣ ಭಾರತಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ, ವಿವಾದಕ್ಕೆ ಈಡಾಗಿರುವ ಮತ್ತೊಂದು ಚಿತ್ರ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್.' ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಈ ಪರಿ ಸದ್ದು ಮಾಡಲಿಕ್ಕಿರುವ ಏಕೈಕ ಕಾರಣ 'ರಾಜರಾಜ ಚೋಳನ್' ಎಂಬ ಆ ಒಂದು ಹೆಸರು ಮಾತ್ರ. ಆದರೆ, ಚಿತ್ರ ಬಿಡುಗಡೆಯಾದ ನಂತರ ಆತ ಹಿಂದೂ ರಾಜನೇ ಅಥವಾ ಹಿಂದೂ ಅಲ್ಲವೇ ಎಂಬ ಚರ್ಚೆ ಮುನ್ನೆಲೆಗೆ ಬಂದು ಕುಳಿತಿದೆ.
'ಬ್ರಾಹ್ಮಣಿಕಲ್ ಡೈರೆಕ್ಟರ್' ಎಂದು ತಮಿಳರಿಂದಲೇ ಟೀಕೆಗೆ ಒಳಗಾಗಿರುವ ನಿರ್ದೇಶಕ ಮಣಿರತ್ನಂ, ಈ ಚಿತ್ರದಲ್ಲೂ ಬ್ರಾಹ್ಮಣ್ಯವನ್ನು ತುಂಬಿದ್ದಾರೆ. ಜೊತೆಗೆ, ಶೈವ ಪರಂಪರೆಗೆ ಸೇರಿದ ರಾಜರಾಜ ಚೋಳನ್ ಎಂಬ ರಾಜನನ್ನು ಹಿಂದೂವನ್ನಾಗಿ ಚಿತ್ರಿಸಿದ್ದಾರೆ. ಈ ಮೂಲಕ ಚೋಳ ಪರಂಪರೆಗೆ ಅವಮಾನ ಮಾಡಿದ್ದಾರೆ ಎಂಬುದೇ ವಿವಾದದ ಮೂಲ. ಇಷ್ಟಕ್ಕೂ ರಾಜರಾಜ ಜೋಳನ್ ಹಿಂದೂ ಅಲ್ಲ ಎಂಬ ಕೂಗು ಎದ್ದಿರುವುದು ತಮಿಳು ವಿಚಾರವಾದಿಗಳ ನಡುವಿನಿಂದಲೇ ಎಂಬುದು ಉಲ್ಲೇಖಾರ್ಹ.
ಅಲ್ಲದೆ, ಇದೇ ಚಿತ್ರವನ್ನು ಮುಂದಿಟ್ಟು ಬಿಜೆಪಿ, ಆರೆಸ್ಸೆಸ್ ಸೇರಿದಂತೆ ಬಲಪಂಥೀಯ ಸಂಘಟನೆಗಳು ತಮಿಳು ಸಮಾಜದ ಒಳಗೆ ಹಿಂದುತ್ವವನ್ನು ತುಂಬುತ್ತಿವೆ ಮತ್ತು ತಮ್ಮ ಮತೀಯ ರಾಜಕಾರಣಕ್ಕೆ ಈ ಚಿತ್ರವನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಕೂಗಿಗೆ ಮೊದಲ ದನಿಯಾದವರು ಚಿತ್ರ ನಿರ್ದೇಶಕ ವೆಟ್ರಿಮಾರನ್.
ವೆಟ್ರಿಮಾರನ್ ಹೇಳಿದ್ದೇನು?
ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ವೆಟ್ರಿಮಾರನ್, ತಮಿಳು ಅಸ್ಮಿತೆಗೆ ಧಕ್ಕೆ ತರಲಾಗುತ್ತಿದೆ ಎಂದು 'ಪೊನ್ನಿಯಿನ್ ಸೆಲ್ವನ್' ಚಿತ್ರದ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದರು.
"ನಮ್ಮ ಗುರುತುಗಳನ್ನು ನಿರಂತರವಾಗಿ ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ತಮಿಳಿನ ಪುರಾತನ ಕವಿ ತಿರುವಳ್ಳುವರ್ ಅವರನ್ನು ಕೇಸರಿಕರಣದ ಚೌಕಟ್ಟಿನೊಳಗೆ ತರುವುದು, ರಾಜರಾಜ ಚೋಳನನ್ನು ಹಿಂದೂ ಎಂದು ಕರೆಯುವುದು ನಮ್ಮ ಅಸ್ಮಿತೆಗೆ ಆಗುತ್ತಿರುವ ಅತಿ ದೊಡ್ಡ ಧಕ್ಕೆ," ಎಂಬ ಅಸಮಾಧಾನ ವೆಟ್ರಿಮಾರನ್ ಅವರದ್ದು.

ವೆಟ್ರಿಮಾರನ್ ನೀಡಿದ್ದ ಈ ಹೇಳಿಕೆ ಮೂಲಭೂತವಾದಿಗಳ ಕಣ್ಣನ್ನು ಕೆಂಪಾಗಿಸಿರುವುದು ಸುಳ್ಳಲ್ಲ. ಆದರೆ, ಆ ಬಿಸಿ ಆರುವ ಮುನ್ನವೇ ನಟ ಕಮಲ್ ಹಾಸನ್ ಸಹ, ವೆಟ್ರಿಮಾರನ್ ಹೇಳಿಕೆಗೆ ತನ್ನ ಬೆಂಬಲ ಘೋಷಿಸಿದ್ದು ಮತ್ತು "ರಾಜರಾಜ ಚೋಳನ್ ಮಾತ್ರವಲ್ಲ, ಚೋಳ ಸಾಮ್ರಾಜ್ಯದಲ್ಲಿ ಯಾರೂ ಹಿಂದೂ ಆಗಿರಲಿಲ್ಲ. ಆ ಕಾಲದಲ್ಲಿ ಹಿಂದೂ ಎಂಬ ಧರ್ಮವೇ ಇರಲಿಲ್ಲ," ಎಂದು ಹೇಳಿರುವುದು ಮೂಲಭೂತವಾದಿಗಳ ಪಾಲಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಾಗಿರುವುದು ಮಾತ್ರ ಸುಳ್ಳಲ್ಲ.
ಆದರೆ, ರಾಜರಾಜ ಜೋಳ ನಿಜವಾಗಿಯೂ ಹಿಂದೂ ಧರ್ಮದವನೇ ಅಥವಾ ಅಲ್ಲವೇ ಎಂದು ತಿಳಿದುಕೊಳ್ಳಲು, ವಿಚಾರವಾದಿಗಳು ಮತ್ತು ಮೂಲಭೂತವಾದಿಗಳನ್ನು ಪಕ್ಕಕ್ಕಿಟ್ಟು ತಮಿಳುನಾಡಿನ ಇತಿಹಾಸಕಾರರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಆಲಿಸುವುದು ಈ ಹೊತ್ತಿಗೆ ಸಾಕಷ್ಟು ಮುಖ್ಯ.
ಇತಿಹಾಸಕಾರರ ವಾದವೇನು?

ಇತಿಹಾಸ ತಜ್ಞ, ಪುರಾತತ್ವ ಇಲಾಖೆಯಲ್ಲಿ ನಿರ್ದೇಶಕರಾಗಿ ಸಾಕಷ್ಟು ಕೆಲಸ ಮಾಡಿದ್ದ, ಚೋಳರ ಇತಿಹಾಸ ಮುರಿದು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರೊಫೆಸರ್ ದೇವನಾಯಗಂ ಈ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
"ಚೋಳರ ನಿಜವಾದ ಸುವರ್ಣಯುಗ ಆರಂಭವಾಗುವುದು ರಾಜರಾಜನ ಕಾಲದಲ್ಲೇ. ಆದರೆ, ಆ ಕಾಲದಲ್ಲಿ ಹಿಂದೂ ಎಂಬ ಪದ ಬಳಕೆಯಲ್ಲೇ ಇರಲಿಲ್ಲ. ಅಲ್ಲದೆ, ಈಗ ನಾವು ಹಿಂದೂ ದೇವರು ಎಂದು ಪೂಜಿಸುವ ಯಾವ ದೇವರುಗಳೂ ಆ ಕಾಲದಲ್ಲಿ ಹಿಂದೂ ದೈವಗಳೇ ಆಗಿರಲಿಲ್ಲ," ಎನ್ನುತ್ತಾರೆ ದೇವನಾಯಗಂ.
ಈ ಲೇಖನ ಓದಿದ್ದೀರಾ?: ವಾರಾಂತ್ಯದ ಓದು | ಹಿಂದಿ ಹೇರಿಕೆಗೆ ಪ್ರತಿರೋಧದ ಪೆಟ್ಟು; ಗೆರೆಗಳಲ್ಲಿ ಬರೆ ಎಳೆದ ತಮಿಳು ವ್ಯಂಗ್ಯಚಿತ್ರಕಾರರು
"ಚೋಳರ ಕಾಲದಲ್ಲಿ ಶೈವ ಧರ್ಮ, ವೈಷ್ಣವ ಧರ್ಮ, ಜೈನ ಧರ್ಮ ಹಾಗೂ ಬೌದ್ಧ ಧರ್ಮಗಳು ಆಚರಣೆಯಲ್ಲಿದ್ದವು. ಚೋಳ ವಂಶಸ್ಥರ ಆರಾಧ್ಯ ದೈವ ಶಿವನೇ ಆಗಿದ್ದ. ಶೈವ ಪರಂಪರೆ ಅವರ ಧರ್ಮವಾಗಿತ್ತು. ರಾಜರಾಜ ಚೋಳ ಪರಶಿವನ ಕಟ್ಟಾ ಭಕ್ತ. ತನ್ನ ಜೀವಿತದ ಕೊನೆಯ 13 ವರ್ಷಗಳನ್ನು ಆತ ಶಿವನ ಆರಾಧನೆಯಲ್ಲೇ ಕಳೆದಿದ್ದ. ಇದೇ ಕಾರಣಕ್ಕೆ ರಾಜರಾಜ ಚೋಳನನ್ನು 'ಶಿವಪಾದ ಶೇಖರ' ಎಂದೂ ಕರೆಯಲಾಗುತ್ತದೆ. ಚೋಳರು 8ರಿಂದ 13ನೇ ಶತಮಾನದ ನಡುವೆ 200ಕ್ಕೂ ಹೆಚ್ಚು ಶಿವ ದೇಗುಲಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ, ಚೋಳರು ಹಿಂದೂಗಳಲ್ಲ - ಶೈವ ಧರ್ಮದವರು," ಎಂಬುದು ದೇವನಾಯಗಂ ವಿವರಣೆ.

ಇದೇ ಸಂದರ್ಭದಲ್ಲಿ ಇತಿಹಾಸ ತಜ್ಞ ಪ್ರೊಫೆಸರ್ ಕುಡವಾಯಿಲ್ ಬಾಲಸುಬ್ರಮಣ್ಯಂ ಅವರ 'ಚೋಳರ ಕಾಲ ಮತ್ತು ಧಾರ್ಮಿಕ ನಂಬಿಕೆಗಳು' ಎಂಬ ಸಂಶೋಧನಾ ಪುಸ್ತಕವೂ ಸಾಕಷ್ಟು ಸದ್ದು ಮಾಡುತ್ತಿದೆ.
ಈ ಪುಸ್ತಕದಲ್ಲಿ ಅವರು, “ಚೋಳರ ಕಾಲದಲ್ಲಿ ಶೈವ ಧರ್ಮ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಅಷ್ಟೇ ಅಲ್ಲದೆ, 11-12ನೇ ಶತಮಾನದ ಶಿವ ದೊಡ್ಡವನೇ ಅಥವಾ ವಿಷ್ಣು ದೊಡ್ಡವನೇ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ಬೆಳೆದಿತ್ತು. ಈ ಕಾರಣಕ್ಕೆ ಹಲವು ಅಂತರ್ಯುದ್ಧಗಳೇ ನಡೆದಿದ್ದವು," ಎಂದು ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಅವಧಿಯಲ್ಲಿ ಚೋಳ ವಂಶಸ್ಥರು ವಿಷ್ಣುವಿನ ಕಡುವಿರೋಧಿಗಳಾಗಿದ್ದರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದ ರಾಜರಾಜನ ಮರಿಮೊಮ್ಮಗ ಮೂರನೇ ಕುಲೋತ್ತುಂಗ ಚೋಳ, ಇಂದಿನ ಚಿದಂಬರ್ ಜಿಲ್ಲೆಯಲ್ಲಿರುವ ತಿಳ್ಳೈ ನಟರಾಜರ್ ದೇವಾಲಯದಲ್ಲಿದ್ದ ವಿಷ್ಣುವಿನ ವಿಗ್ರಹವನ್ನು ಕಿತ್ತು, ರಂಗರಾಜ ನಂಬಿ ಎಂಬ ವೈಷ್ಣವ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನೂ ಅದಕ್ಕೆ ಕಟ್ಟಿ ಸಮುದ್ರಕ್ಕೆ ಎಸೆದಿದ್ದ," ಎಂದು ಕುಡವಾಯಿಲ್ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
2008ರಲ್ಲಿ ಬಿಡುಗಡೆಯಾಗಿದ್ದ ಕಮಲ್ ಹಾಸನ್ ನಟನೆಯ 'ದಶಾವತಾರಂ' ಚಿತ್ರವನ್ನು 12ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದಲ್ಲಿ ನಡೆದ ಶೈವ-ವೈಷ್ಣವ ಧರ್ಮಗಳ ನಡುವಿನ ಗಲಾಟೆ ಆಧರಿಸಿಯೇ ತೆಗೆಯಲಾಗಿತ್ತು ಎಂಬುದು ಗಮನಾರ್ಹ. ಈ ಇತಿಹಾಸವನ್ನು ಮುಂದಿಟ್ಟು ಮಾತನಾಡುವ ತಮಿಳು ಇತಿಹಾಸ ತಜ್ಞರು, "12ನೇ ಶತಮಾನದಲ್ಲಿ ಭಾರತದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಮಾತ್ರವಲ್ಲ, ಹಿಂದೂ ಧರ್ಮವೂ ಇರಲಿಲ್ಲ. 1830ರ ನಂತರ ಬ್ರಿಟಿಷರು ಭಾರತೀಯರನ್ನು 'ಹಿಂದೂ' ಎಂದು ಕರೆಯಲು ಆರಂಭವಾಗಿ, ಕೊನೆಗೆ ಶೈವ-ವೈಷ್ಣವ ಪಂಥದವರು ಒಟ್ಟಾಗಿ ಹಿಂದೂ ಎಂಬ ಪರಿಧಿಯೊಳಕ್ಕೆ ಬರಬೇಕಾಯಿತೇ ವಿನಾ ತಮಿಳುನಾಡಿನಲ್ಲಿ ಎಂದಿಗೂ ಈ ಎರಡು ಪಂಥ ಹಿಂದೂವಾಗಿ ಬದುಕಲಿಲ್ಲ," ಎಂದು ಪ್ರತಿಪಾದಿಸುತ್ತಾರೆ.
ಈ ವಾದಕ್ಕೆ ಉದಾಹರಣೆಯನ್ನೂ ನೀಡುವ ಇತಿಹಾಸಕಾರರು, ಚೋಳರು ಕಟ್ಟಿದ ಯಾವ ಶೈವ ಪರಂಪರೆಯ ದೇವಾಲಯದಲ್ಲೂ ಈಗಲೂ ವೈಷ್ಣವ ಪಂಥದ ಅರ್ಚಕರನ್ನು ನೇಮಿಸಲಾಗುವುದಿಲ್ಲ. ಅದೇ ರೀತಿ, ವೈಷ್ಣವ ದೇವಾಲಯಗಳ ಪ್ರಮುಖ ಹುದ್ದೆಗಳಲ್ಲಿ ಶೈವ ಪರಂಪರೆಗೆ ಜಾಗವೇ ಇಲ್ಲ ಎಂಬುದನ್ನು ವಿಶೇಷವಾಗಿ ಉಲ್ಲೇಖಿಸುತ್ತಾರೆ.

ಚೋಳ ಹಿಂದೂ ಅರಸ ಎಂಬ ವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಟಿ ಬಿಚ್ಚಿದ್ದ ತಮಿಳುನಾಡಿನ ಶ್ರೀರಂಗಂ ರಂಗನಾದರ್ ದೇವಾಲಯದ ಪ್ರಧಾನ ಅರ್ಚಕ ರಂಗರಾಜನ್ ನರಸಿಂಹನ್, "ನಾವು ಹಿಂದೂಗಳಲ್ಲ. ನಮ್ಮ ಧರ್ಮ ವೈಷ್ಣವ ಧರ್ಮ. ವಿನಾ ಕಾರಣ ಏಕೆ ನಮ್ಮನ್ನು ನೀವು ಹಿಂದೂಗಳು ಎಂದು ಉಲ್ಲೇಖಿಸುತ್ತಿದ್ದೀರಿ?" ಎಂದು ಗರಂ ಆಗಿ ಮಾಧ್ಯಮಗಳ ಎದುರು ಪ್ರತಿಕ್ರಿಯಿಸಿದ್ದನ್ನೂ ಇಲ್ಲಿ ಗಮನಿಸಬೇಕಾಗುತ್ತದೆ.
ಇದು ಇತಿಹಾಸಕಾರರ ಮಾತಾದರೆ, ತಮಿಳು ವಿಚಾರವಂತರು ವರ್ತಮಾನದಲ್ಲಿ ದಲಿತರ ಮೇಲಾಗುತ್ತಿರುವ ಅನೇಕ ಸಂಗತಿಗಳನ್ನು ಉಲ್ಲೇಖಿಸುತ್ತ, ತಾವು ಏಕೆ ಹಿಂದೂಗಳಲ್ಲ ಎಂಬುದನ್ನು ಸಾರುತ್ತಿದ್ದಾರೆ.
ತಮಿಳು ವಿಚಾರವಂತರ ವಾದವೇನು?

"ಹಿಂದೂ ಧರ್ಮದಲ್ಲಿ ಬ್ರಾಹ್ಮಣರು ಮಾತ್ರ ಹಿಂದೂಗಳು, ಉಳಿದವರೆಲ್ಲ ದಲಿತರು ಎಂದು ಉಲ್ಲೇಖಿಸಲಾಗುತ್ತದೆ. ಹಿಂದುತ್ವದ ದೃಷ್ಟಿಕೋನದಲ್ಲಿ ನೋಡುವುದಾರೆ, ಶೇ.97ರಷ್ಟು ತಮಿಳರು ಹಿಂದೂಗಳೇ ಅಲ್ಲ," ಎನ್ನುತ್ತಾರೆ ತಮಿಳುನಾಡಿನ ನಾಮ್ ತಮಿಳರ್ ಪಕ್ಷದ ಮುಖ್ಯಸ್ಥ ಸೀಮಾನ್. ಆರೆಸ್ಸೆಸ್ ಮತ್ತು ಬಿಜೆಪಿ ಹೊಸದಾಗಿ ತಮಿಳುನಾಡಿನ ಒಳಗೆ ಖಾವಿ ಬಣ್ಣವನ್ನು ತುಂಬುವ ಕೆಲಸ ಮಾಡುತ್ತಿದೆ ಎಂಬುದು ಅವರ ಆರೋಪ.
ತಮಿಳರು ಹೇಗೆ ಹಿಂದೂಗಳಲ್ಲ ಎಂದು ಬಿಜೆಪಿಯೊಳಗಿನ ಕೆಲವು ಸನ್ನಿವೇಶಗಳ ಮೂಲಕವೇ ತಮ್ಮ ವಾದವನ್ನು ಮುಂದಿಡುವ ಅವರು, ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯಪಾಲೆ ತಮಿಳಿಸೈ ಸೌಂದರ್ರಾಜನ್ ಪ್ರಕರಣವನ್ನು ಮುಂದಿಡುತ್ತಾರೆ.

ತಮಿಳಿಸೈ ಸೌಂದರ್ರಾಜನ್ ತಮಿಳುನಾಡಿನ ಬಿಜೆಪಿ ಮುಖ್ಯಸ್ಥೆಯಾಗಿದ್ದವರು. ಅಲ್ಲದೆ, ಪ್ರಸ್ತುತ ತೆಲಂಗಾಣ ರಾಜ್ಯಪಾಲೆ. ಇವರು ಕಳೆದ ಮೇ ತಿಂಗಳಲ್ಲಿ ಕಂಚಿ ಶಂಕರಾಚಾರ್ಯ ಮಠಕ್ಕೆ ತೆರಳಿದ್ದರು. ಇವರ ಜೊತೆ ಇವರದೇ ಪಕ್ಷದ ಬ್ರಾಹ್ಮಣರೂ ಹೋಗಿದ್ದರು. ಆದರೆ, ಬ್ರಾಹ್ಮಣರಿಗೆ ಪ್ರಸಾದವನ್ನು ಗೌರವಯುವತಾಗಿ ನೀಡಿದ್ದ ಕಂಚಿಯ ಜಯೇಂದ್ರ ಶಂಕರಾಚಾರ್ಯ, ತಮಿಳಿಸೈ ಓರ್ವ ದಲಿತೆ ಎಂಬ ಕಾರಣಕ್ಕೆ ಆಕೆಯ ಕೈಗೆ ಪ್ರಸಾದ ಎಸೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹಲವರು ಇದನ್ನು ವಿರೋಧಿಸಿದ್ದರು. ಆದರೆ, ಬಿಜೆಪಿ ಮಾತ್ರ ಈ ಬಗ್ಗೆ ಇದುವರೆಗೂ ತುಟಿ ಬಿಚ್ಚಿಲ್ಲ. ಈ ವಿಚಾರವೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಖೈರ್ಲಾಂಜಿ ಘಟನೆ ಕುರಿತು ಮಾತನಾಡುವ ಸೀಮಾನ್, "ಆರೆಸ್ಸೆಸ್ ಕೇಂದ್ರ ಕಚೇರಿ ಇರುವ ನಾಗಪುರದಿಂದ ಕೇವಲ 150 ಕಿಲೋಮೀಟರ್ ದೂರ ಇರುವ ಖೈರ್ಲಾಂಜಿಯಲ್ಲಿ 2006ರಲ್ಲಿ ಭೂಮಿಗೆ ನೀರು ಹರಿಸಿದ ಕಾರಣಕ್ಕೆ ದಲಿತ ಸಮುದಾಯಕ್ಕೆ ಸೇರಿದ ಬಯ್ಯಾಲಾಲ್, ಆತನ ಹೆಂಡತಿ ಸುರೇಖಾ, ಮಗಳು ಪ್ರಿಯಾಂಕ ಹಾಗೂ ಅಂಗವಿಕಲ ಮಗನ ಮೇಲೆ ಹಲ್ಲೆ ನಡೆಸಲಾಯ್ತು. ಇಬ್ಬರೂ ಹೆಣ್ಣುಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿಸಿ ಅತ್ಯಾಚಾರವೆಸಗಲಾಯ್ತು. ಒಂದೇ ಕುಟುಂಬದ ನಾಲ್ಕು ಜನರನ್ನು ದಾರುಣವಾಗಿ ಕೊಲ್ಲಲಾಯ್ತು. 'ನಾವೆಲ್ಲ ಹಿಂದು-ನಾವೆಲ್ಲ ಒಂದು' ಎಂಬ ಬಿಜೆಪಿ, ಆರೆಸ್ಸೆಸ್ ಇಂತಹ ಘಟನೆ ಬಗ್ಗೆ ಏಕೆ ಇದುವರೆಗೂ ಮಾತನಾಡಿಲ್ಲ?" ಎಂಬ ಕಟು ಪ್ರಶ್ನೆಯನ್ನು ಮುಂದಿಡುತ್ತಾರೆ.

ತಮಿಳುನಾಡಿನ ವಿಡುದಲೈ ಚಿರುತೈ ಪಕ್ಷದ ಮುಖ್ಯಸ್ಥ ತೋಳ್ ತಿರುಮಾವಳವನ್ ಸಹ ಈ ಬಗ್ಗೆ ಮಾತಾಡಿದ್ದಾರೆ. "ತಿರುವಳ್ಳುವರ್ ತಮಿಳು ಸಮಾಜದ ಶ್ರೇಷ್ಠ ಕವಿ. ಆತ ತನ್ನ ಯಾವ ವಚನದಲ್ಲೂ ಜಾತಿ, ಧರ್ಮ, ದೇವರ ಬಗ್ಗೆ ಉಲ್ಲೇಖಿಸಿಯೇ ಇಲ್ಲ. ಐದು ಸಾವಿರ ವರ್ಷಗಳ ಹಿಂದೆಯೇ ಸಮಾನತೆ ಸಹಬಾಳ್ವೆಯ ಬಗ್ಗೆ ಮಾತನಾಡಿದ ಹರಿಕಾರ ಅವರು. ಆದರೆ, ಬಿಜೆಪಿ ಪಕ್ಷದವರು ಆತನಿಗೂ ಖಾವಿ ಉಡಿಸುವ ಮೂಲಕ ಆತನನ್ನೂ ಹಿಂದುತ್ವದ ಪರಿಧಿಗೆ ತರಲು ಪ್ರಯತ್ನಿಸಿದ್ದರು. ಅಲ್ಲದೆ, ಆತನ ಪ್ರತಿಮೆಯನ್ನು ಕಾಶಿ ದಡದಲ್ಲಿಡಲು ಮುಂದಾದರು. ಆದರೆ, ತಿರುವಳ್ಳುವರ್ ಬ್ರಾಹ್ಮಣನಲ್ಲ ಎಂಬ ಏಕೈಕ ಕಾರಣಕ್ಕೆ ಅವರ ಪ್ರತಿಮೆಯನ್ನು ಕಾಶಿಯಲ್ಲಿ ಸ್ಥಾಪಿಸಲು ಅವಕಾಶ ನೀಡಿರಲಿಲ್ಲ. ಆ ಪ್ರತಿಮೆ ಸ್ಥಾಪಿಸಿದರೆ ಗಂಗೆ ಅಪವಿತ್ರಳಾಗುತ್ತಾಳೆ ಎಂದು ಹೇಳಿ ಬಲಪಂಥೀಯರು ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ತಕರಾರು ತೆಗೆದಿದ್ದರು. ಈಗ ರಾಜರಾಜ ಜೋಳನ್ ಓರ್ವ ಹಿಂದೂ ಎಂದು ಬೀಗುವ ಬಿಜೆಪಿ, ಆರೆಸ್ಸೆಸ್ ನಾಯಕರು, ನಮ್ಮ ಅಸ್ಮಿತೆಯ ಭಾಗವಾಗಿದ್ದ ತಿರುವಳ್ಳುವರ್ಗೆ ಅವಮಾನ ಆದಾಗ ಸುಮ್ಮನಿದ್ದದ್ದು ಏಕೆ?" ಎಂದು ಪ್ರಶ್ನಿಸುತ್ತಾರವರು.

ಹೀಗೆ, ಒಂದೆಡೆ ತಮಿಳುನಾಡಿನ ಬಿಜೆಪಿ ನಾಯಕರು ರಾಜರಾಜ ಚೋಳನ್ ಓರ್ವ ಹಿಂದೂ ಎಂದು ಕೊಂಡಾಡುತ್ತಿದ್ದರೆ, ಮತ್ತೊಂದೆಡೆ, ದಲಿತರ ಬಗೆಗಿನ ಬಿಜೆಪಿ ನಾಯಕರ ಇಬ್ಬಗೆ ನೀತಿಯನ್ನು ಮುಂದಿಟ್ಟು ಶೇಕಡ 97ರಷ್ಟು ತಮಿಳರು ಹಿಂದೂಗಳಲ್ಲ ಎಂದು ಅಲ್ಲಿನ ವಿಚಾರವಾದಿಗಳು ವಾದಿಸುತ್ತಿದ್ದಾರೆ. ಮತ್ತೊಂದೆಡೆ, ಇತಿಹಾಸ ತಜ್ಞರು ಸಹ ರಾಜರಾಜನ್ ಹಿಂದೂ ಅಲ್ಲ ಎಂದು ಹೇಳುವ ಮೂಲಕ, ಆ ಕಾಲದಲ್ಲಿ ಹಿಂದುತ್ವ ಎಂಬ ಪದ ಬಳಕೆಯೇ ಇಲ್ಲ ಎಂದು ಹೇಳುತ್ತ, ಬಲಪಂಥೀಯರ ವಾದಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ.
ಆದರೆ, ತಮಿಳುನಾಡಿನ ಪಾಲಿಗೆ ಈ ವಾದ ಹುಟ್ಟಲು ನೇರವಾಗಿ 'ಪೊನ್ನಿಯಿನ್ ಸೆಲ್ವನ್' ಚಿತ್ರವೇ ಕಾರಣವಲ್ಲ. ಬದಲಾಗಿ, ಮೊದಲಿಂದಲೂ ಚಾಲ್ತಿಯಲ್ಲಿದ್ದ ಈ ವಾದ-ಪ್ರತಿವಾದವನ್ನು 'ಪೊನ್ನಿಯಿನ್ ಸೆಲ್ವನ್' ಕೆದಕಿದಂತಾಗಿದೆ ಅಷ್ಟೇ. ಹೀಗಾಗಿ, ಈ ವಿವಾದ ಖಂಡಿತ ಇಲ್ಲಿಗೇ ಮುಗಿಯುವಂಥದ್ದಲ್ಲ.