ಸಿಂಹಗಳ ಬಗ್ಗೆ ನಮಗೆ ಎಷ್ಟು ಗೊತ್ತು!? ಇಲ್ಲಿವೆ ನಿಗೂಢ ಮಾಹಿತಿಗಳು

ಆಗಸ್ಟ್‌ 10, “ವಿಶ್ವ ಸಿಂಹಗಳ ದಿನ”. ಅಂದರೆ ನಿಜವಾದ, ನೈಸರ್ಗಿಕವಾದ ಸಿಂಹಗಳು. ನಮ್ಮ ದೇಶದ ಹಾದಿ-ಬೀದಿಗಳಲ್ಲಿ ಬಣ್ಣಬಣ್ಣದ ಧರಿಸುಗಳಲ್ಲಿ ಸುತ್ತುವ ಎರಡು ಕಾಲಿನ ಸಿಂಹಗಳಲ್ಲ ಅಥವ ಪ್ರಧಾನಿ ಮೋದಿ ಬದಲಿಸಲು ಹೊರಟಿರುವ ರಾಷ್ಟ್ರೀಯ ಲಾಂಛನದ ರೂಪಗೆಟ್ಟ ಸಿಂಹಗಳು ಅಲ್ಲ. ಆದರೆ ನಮ್ಮ ರಾಜ್ಯದಲ್ಲಿಯೇ ಇಲ್ಲದ ಇವುಗಳ ಬಗ್ಗೆ ಇಲ್ಲಿ ಪ್ರಸ್ತಾಪವೇಕೆ?
World Lion Day – August 10, 2022

ಪ್ರತಿ ವರ್ಷ ಆಗಸ್ಟ್‌ 10ರಂದು “ವಿಶ್ವ ಸಿಂಹಗಳ ದಿನ” ಆಚರಿಸಲಾಗುತ್ತದೆ. ಇದು ಆರಂಭವಾಗಿದ್ದು 2013ರಲ್ಲಿ, ಪ್ರಚೋದನೆ: ಡೆರಿಕ್ ಮತ್ತು ಬೇವರ್ಲಿ ಜ್ಯೂಬರ್ಟ್ ದಂಪತಿಗಳಿಂದ.

ಸಿಂಹಗಳು, ನಮ್ಮ ರಾಜ್ಯದಲ್ಲಿಯೇ ಇಲ್ಲ. ಆದರೂ ಇವುಗಳ ಬಗ್ಗೆ ಇಲ್ಲಿ ಪ್ರಸ್ತಾಪವೇಕೆ ಎಂದು ಯೋಚಿಸಬಹುದು. ಇವುಗಳ ಅಸ್ತಿತ್ವ ಇರುವುದು ಎರಡು ಖಂಡಗಳಲ್ಲಿ ಮಾತ್ರ. ಒಂದು: ಆಫ್ರಿಕ, ಎರಡು: ಏಷಿಯಾ. ಈ ಏಷಿಯಾ ಖಂಡದಲ್ಲಿನ 48 ದೇಶಗಳ ಪೈಕಿ ದಕ್ಷಿಣ ಏಷಿಯಾದಲ್ಲಿರುವ ಭಾರತದಲ್ಲಿ. ಅದರಲ್ಲೂ ಪೂರ್ವ ಭಾರತದಲ್ಲಿ. ಮುಖ್ಯವಾಗಿ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರ. ಇವನ್ನು “ಏಷ್ಯಾಟಿಕ್ ಲಯನ್” ಎನ್ನುತ್ತಾರೆ.

ಇಲ್ಲಿ ಮಾತ್ರ ಏಕೆ? ಇನ್ನೆಲ್ಲಿಯೂ ಏಕಿಲ್ಲ? ಅಂದರೆ, ಇದ್ದವು, 19ನೇ ಶತಮಾನದ ಅಂತ್ಯದವರೆಗೂ ಸೌದಿ ಆರೇಬಿಯಾ, ಟರ್ಕಿಯ ಪೂರ್ವ ಭಾಗ, ಇರಾನ್, ಮೆಸಪಟೋಮಿಯ, ಪಾಕಿಸ್ತಾನ, ಇಂಡಸ್ ನದಿಯ ಪೂರ್ವಭಾಗದಿಂದ ಬಂಗಾಲದವರೆಗೆ  ಮತ್ತು ಮಧ್ಯ ಭಾರತದ ನರ್ಮದ ನದಿ ಸುತ್ತಮುತ್ತಲ ಪ್ರದೇಶಗಳಲ್ಲಿ ಇವುಗಳ ಅಸ್ತಿತ್ವ ಇತ್ತು. 

ಸದ್ಯಕ್ಕೆ ಇವುಗಳ ಅಸ್ತಿತ್ವ ಇರುವುದು ಗುಜರಾತಿನ ಸುಮಾರು 20,000 ಚ.ಕಿ.ಮೀಗಳ ವ್ಯಾಪ್ತಿಯಲ್ಲಿ ಮಾತ್ರ. ಇಷ್ಟು ಚಿಕ್ಕ ಪ್ರದೇಶದಲ್ಲಿ ಅಷ್ಟು ದೊಡ್ಡ ಪ್ರಭೇದದ ಪ್ರಾಣಿಗಳು ಎಷ್ಟಿರಬಹುದು? 2015 ರಲ್ಲಿ ಮಾಡಲಾದ ಗಣತಿಯ ಪ್ರಕಾರ ಸುಮಾರು 523 ಸಿಂಹಗಳಿದ್ದವು. ಇವುಗಳಲ್ಲಿ, 109; ವಯಸ್ಕ ಗಂಡು ಸಿಂಹಗಳು, 201; ವಯಸ್ಕ ಹೆಣ್ಣು ಸಿಂಹಗಳು ಮತ್ತು 213; ಮರಿಗಳು. ಮತ್ತೆ ಆಗಸ್ಟ್ 2007ರಲ್ಲಿ ಮಾಡಲಾದ ಗಣತಿಯಲ್ಲಿ ಇವುಗಳ ಸಂಖ್ಯೆ 650 ಎಂದು, 2020ರ ಗಣತಿಯಲ್ಲಿ ಇವುಗಳ ಸಂಖ್ಯೆ 674ಕ್ಕೆ ಏರಿದೆ ಎಂದು ಹೇಳಲಾಗಿದೆ. 2015 ರಿಂದ 2020ರ ವರೆಗೆ ಶೇ. 29 ಹೆಚ್ಚಳ ಕಂಡಿವೆ ಎಂದು ಅಂದಾಜು ಮಾಡಿದ್ದಾರೆ.  

ಇವು ಎಲ್ಲೆಲ್ಲಾ ಬದುಕಬಲ್ಲವು? ಅಂದರೆ; ಹೆಚ್ಚು ದಟ್ಟಣಿ ಇಲ್ಲದ ಕಾಡುಗಳು, ಹುಲ್ಲುಗಾವಲುಗಳು, ಒಣ ಕಾಡುಗಳು ಮತ್ತು ಅರೆ ಮರುಭೂಮಿ ಪ್ರದೇಶಗಳು. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿಂಹಗಳನ್ನು ಹೊಂದಿರುವ ಪ್ರದೇಶವೆಂದರೆ ಸಹರಾ ಮರುಭೂಮಿಗೆ ಹೊಂದಿಕೊಂಡಿರುವ ದಕ್ಷಿಣ ಆಫ್ರಿಕಾದ ಭಾಗ. 

ಒಟ್ಟಾರೆ ಆಫ್ರಿಕ ಖಂಡದಲ್ಲಿಎಷ್ಟುಇರಬಹುದು? ಯೂರೋಪಿಯನ್ನರು ಆಫ್ರಿಕಕ್ಕೆ ಕಾಲಿಡುವುದಕ್ಕೆ ಮುಂಚೆ ಲಕ್ಷಗಳ ಸಮೀಪದಲ್ಲಿದ್ದ ಇವು, ಈಗ ಐದನೇ ಒಂದು ಭಾಗಕ್ಕೆ ಇಳಿದಿವೆ. “ಪ್ಯಾಂಥೆರಾ” ಎಂಬ ಸಂಘಟನೆ ಪ್ರಕಾರ ಅಂದಾಜು 20,000 ಸಿಂಹ, ಸಿಂಹಿಣಿಯರು ಇದ್ದಾರೆ. ಈ ಹಿಂದೆ ಅವು ಆವರಿಸಿದ್ದ ಪ್ರದೇಶಕ್ಕೆ ಹೋಲಿಸಿದರೆ ಈಗ ಅವು ಹೊಂದಿರುವುದು ಕೇವಲ ಶೇ. 5ರಷ್ಟು ಪ್ರದೇಶ ಮಾತ್ರ.

ಸಿಂಹ-ಸಿಂಹಿಣಿಯರ ನಡುವೆ ಎದ್ದು ಕಾಣುವ ಹಲವು ವ್ಯತ್ಯಾಸಗಳಿವೆ. ಹೊರ ನೋಟದಲ್ಲಿಯೇ ಇವನ್ನು ಗುರುತಿಸಬಹುದು. ದೊಡ್ಡ ಗಾತ್ರದ ದೇಹ, ಕುತ್ತಿಗೆಯ ಸುತ್ತ ಕೇಸರಗಳು, ನಡಿಗೆಯ ಗಾಂಭೀರ್ಯ, ನಾಯಕತ್ವದ ಗುಣ, ಆಕ್ರಮಣದ ವೇಗ ಮತ್ತು ಒತ್ತಡ, ಸೋಂಭೇರಿತನ, ಪಕ್ಕಾ ಫ್ಯೂಡಲ್ ನಡವಳಿಕೆ ಇತ್ಯಾದಿಗಳು ಸಿಂಹಿಣಿಯರಿಂದ ಸಿಂಹಗಳನ್ನು ಬೇರ್ಪಡಿಸುತ್ತವೆ. ಏಕೆಂದರೆ, ಇವುಗಳಲ್ಲಿ, ಕೌಟುಂಬಿಕ ಜೀವನವಿದೆ, ಇದನ್ನು ಸಮುದಾಯ ಬದುಕು ಎಂದೂ ಹೇಳಬಹುದು. ಹೆಂಗಸರಿಂದ ದುಡಿಸಿ, ತಿಂದುಂಡು, ಗತ್ತಿನಲ್ಲಿ ತಿರುಗುವುದು ಗಂಡು ಸಿಂಹಗಳ ಜಾಯಮಾನ. 

ನಿಜಾರ್ಥದಲ್ಲಿ ಈ ಕುಟುಂಬಗಳಲ್ಲಿ ಶಿಕಾರಿ ಮಾಡುವುದು ಸಿಂಹಿಣಿಯರು. ಆದರೆ ಮೊದಲು ಊಟಕ್ಕೆ ಕೂರುವುದು ಸಿಂಹ ಎಂಬ ಯಜಮಾನ. ಆಕಸ್ಮಿಕ ಶಿಕಾರಿ ಸಿಂಹಿಣಿಯರ ಕೈ ತಪ್ಪಿ ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಹಠಾತ್ತಾಗಿ ಶಿಕಾರಿಯ ಮೇಲೆರಗಿ ಅದನ್ನು ಮಗ್ಗ ಮಲಗಿಸುವುದು ಮಾತ್ರ ಇದೇ ಸೋಂಭೇರಿ ಸಿಂಹ. ಹಾಗೆಯೇ ಇತರ ಗುಂಪು ಮತ್ತು ಪೋಲಿಬಿದ್ದ ಸಿಂಹಗಳಿಂದ ಕುಟುಂಬವನ್ನು ಕಾಪಾಡುವುದೂ ಸಹ ಇದೇ ಸೋಂಭೇರಿ ಕೇಸರ.

ಆಹಾರ ಏನು ಅಂದರೆ, ಈ ಸಿಂಹಗಳ ಸಂಸಾರ  ಹೊಂಚಿ ಹಾಕಿ, ಗುಂಪಿನಲ್ಲಿ ಮುಗಿಬಿದ್ದು ಎಂಥ ದೊಡ್ಡ ಪ್ರಾಣಿಯನ್ನು ಬೇಕಾದರೂ ಮಣಿಸಬಲ್ಲವು. ಆನೇಕ ಬಾರಿ ಆನೆ, ಜಿರಾಫೆ, ಘೇಂಡಾಮೃಗ, ಕಾಡೆಮ್ಮೆ/ಕೋಣ, ನೀರಾನೆ ಹೀಗೇ ಯಾವುದೇ ಗಾತ್ರದ ಪ್ರಾಣಿ ಇವುಗಳಿಗೆ ಶಿಕಾರಿ ಆಗಬಲ್ಲದು. ಆದರೆ, ಇವು ಹೆಚ್ಚು ಗಮನ ಕೇಂದ್ರೀಕರಿಸುವುದು ಆ ದೊಡ್ಡ ಪ್ರಾಣಿಗಳ ಸಣ್ಣ ಮರಿಗಳ ಮೇಲೆ.

ಇವು ಎಷ್ಟೆಲ್ಲಾ ತಿನ್ನಬಹುದು, ಒಂದು ಊಟಕ್ಕೆ ಒಂದು ವಯಸ್ಕ ಸಿಂಹ 30 ಕೇಜಿಗಳ ವರೆಗೆ ಮಾಂಸ ತಿನ್ನಬಲ್ಲವು. ವಾರಕ್ಕೆ ಒಂದು ಅಥವ ಎರಡು ಇಂತಹ ಊಟಗಳು ಸಾಮಾನ್ಯ.

ಇವುಗಳ ಕೌಟುಂಬಿಕ ಅಥವ ಸಮುದಾಯ ಜೀವನ ಬಹುಪಾಲು ನಮ್ಮ ಹಳೆಯ ಕತೆಗಳಲ್ಲಿ ಬರುವ ಅಟ್ಟಹಾಸದ ಮಹಾರಾಜ ಅಥವ ದುರಂಹಂಕಾರಿ ಜಮೀನ್ದಾರನ ತದ್ರೂಪು. ಗುಂಪಿನಲ್ಲಿರುವ ಎಲ್ಲ ಸಿಂಹಿಣಿಯರೂ ಯಜಮಾನನ ಸ್ವತ್ತು. ಅವುಗಳನ್ನು ಗುಂಪಿನಲ್ಲಿರುವ ಇನ್ನಾರೂ ಮುಟ್ಟುವಂತಿಲ್ಲ. ವಯಸ್ಕ ಗಂಡುಗಳು ಅಂತಹ ಪ್ರಯತ್ನ ಮಾಡಿದರೆ ಶಿಕ್ಷೆ ಖಚಿತ.

ಹಾಗೆಯೇ ವಯಸ್ಕರ ದಂಗೆಗಳೂ ಸಹಜ. ಹಾಲಿ ಯಜಮಾನನ್ನು ಕೊಂದೋ ಇಲ್ಲಾ ಓಡಿಸಿಯೋ ಇನ್ನೊಂದು ವಯಸ್ಕ ಸಿಂಹ ಯಾಜಮಾನ್ಯ ದಕ್ಕಿಸಿಕೊಳ್ಳಬೇಕು. ಇಲ್ಲವಾದರೆ ಗುಂಪು ತೊರೆದು, ಇನ್ನೆಲ್ಲಾದರೂ ಹೋಗಿ ಬೇರೆ ಗುಂಪಿನ ಯಜಮಾನನ್ನು ಸೋಲಿಸಿ ಆ ಗುಂಪಿನ ನಾಯಕ ಆಗಬೇಕು. ಅಥವ ಹೇಗೋ ಮಾಡಿ ತನ್ನದೇ ಒಂದು ಗುಂಪನ್ನು ಕಟ್ಟಿಕೊಳ್ಳಬೇಕು. ಈ ಮೂರೂ ಕ್ರಮಗಳು ಇವುಗಳಲ್ಲಿಸಾಮಾನ್ಯ ಮತ್ತು ನಿರಂತರ ಪ್ರಕ್ರಿಯೆಗಳು. 
ಆದರೆ, ಇಲ್ಲೊಂದು ವಿಶೇಷ ಇದೆ. ಒಂದು ಪಕ್ಷ ಒಂದು ಯುವ ಸಿಂಹ ತನ್ನ ಗುಂಪಿನ ಅಥವ ಇನ್ನೊಂದು ಗುಂಪಿನ ಯಜಮಾನನ್ನು ಕೊಂದೋ ಓಡಿಸಿಯೋ ಮಾಡಿದಲ್ಲಿ ಅದು ಮೊದಲಿಗೆ ಮಾಡುವ ಕೆಲಸ ಎಂದರೆ ಆ ಹಳೆ ಯಜಮಾನನಿಗೆ ಹುಟ್ಟಿದ್ದ, ಇನ್ನೂ ಬಾಲ್ಯಾವಸ್ಥೆಯಲ್ಲಿರುವ  ಮರಿಗಳನ್ನು ಕೊಲ್ಲುವುದು. ಆದ್ದರಿಂದಲೇ, ಇಲ್ಲಿ ನಡೆಯುವ ಯಜಮಾನಿಕೆಯ ಸಂಘರ್ಷದಲ್ಲಿ ಸಿಂಹಿಣಿಯರು ತಟಸ್ಥ ನೀತಿ ಅನುಸರಿಸುತ್ತಾರೆ ಮತ್ತು ತಮ್ಮ ಮರಿಗಳನ್ನು ಹೊಸ ಯಜಮಾನನಿಂದ ರಕ್ಷಿಸಿಕೊಳ್ಳಲು ಹಲವು ತಂತ್ರ ಬಳಸುತ್ತಾರೆ. 

ಇಲ್ಲಿ ಸೋತ ಸಿಂಹ ಇನ್ನೆಲ್ಲೋ ತನ್ನ ಸಾಮ್ರಾಜ್ಯ ಕಟ್ಟಲು ಸಾಧ್ಯವಿಲ್ಲ. ಅದು ಸೋತಿದೆ ಎಂದರೆ ಅಲ್ಲಿಗೆ ಮುಗಿಯಿತು. ಅದು ಆಡಳಿತಕ್ಕೆ, ಗುಂಪಿನ ರಕ್ಷಣೆಗೆ ಅಸಮರ್ಥವಾಗಿದೆ ಮತ್ತು ಅದಕ್ಕೆ ವಯಸ್ಸಾಗಿ ಶಕ್ತಿ ಕುಂದಿದೆ ಎಂದೇ ಅರ್ಥ. ಹೀಗಾದ ಸಿಂಹಗಳು ಸಾಮಾನ್ಯವಾಗಿ ತನ್ನ ಗುಂಪನ್ನು ತೊರೆಯುತ್ತವೆ ಮತ್ತು ಒಂಟಿಯಾಗಿ ಬಿಡುತ್ತವೆ. ಶಿಕಾರಿಯ ಸಾಮರ್ಥ್ಯವಿದ್ದಲ್ಲಿ ಕೆಲವು ದಿನ ಬದುಕುತ್ತವೆ. ಇಲ್ಲವಾದರೆ ಮಾನಸಿಕ ಘಾಸಿ, ಹಸಿವೆಯಿಂದ ನಿತ್ರಾಣಗೊಂಡು ಏಕಾಂಗಿಯಾಗಿ ಸಾವನ್ನಪ್ಪುತ್ತವೆ.

ಭಾರತದಲ್ಲಿ ಹಿರಿಮೆ ಇರುವುದು ಕೇಸರ ಉಳ್ಳ ಗಂಡು ಸಿಂಹಗಳಿಗೆ. ಈ ಕೇಸರಗಳುಳ್ಳ ಗಡವ ಮುಖ ಒಂದು ರೀತಿಯಲ್ಲಿ ಪೌರುಷದ  “ಐಕಾನ್” ಆಗಿಬಿಟ್ಟಿದೆ. ಆದರೆ ಜೀವ ವಿಜ್ಞಾನದ ಪ್ರಕಾರ ಈ ಕೇಸರಗಳು ನೈಸರ್ಗಿಕ ಆಯ್ಕೆ ಅಲ್ಲ. ಅವು ಲೈಂಗಿಕ ಆಯ್ಕೆ. ಇಂಥ ದಟ್ಟ ಕೇಸರವುಳ್ಳ ದಿಟ್ಟ ಮುಖದ ಸಿಂಹಗಳಿಗೆ ಸಿಂಹಿಣಿಯರಲ್ಲಿ ಬೇಡಿಕೆ ಹೆಚ್ಚು. ಹಾಗಾಗಿ ಇವು ಲೈಂಗಿಕ ಆಯ್ಕೆಯಾಗಿ ಬೆಳೆಯುತ್ತಾ ಬಂದಿವೆ. ಹಾಗಾದರೆ ಈ ಕೇಸರ ರಹಿತ ಸಿಂಹಗಳೇ ಇಲ್ಲವೇ? ಇವಕ್ಕೆ ಸಿಂಹಿಣಿಯರೇ ದೊರೆಯುವುದಿಲ್ಲವೇ? ಹಾಗೇನಿಲ್ಲ, ಗಡ್ಡ ಮೀಸೆಗಳ ದಟ್ಟಣಿಯಿಲ್ಲದ ಗಂಡಸರಿಗೂ ಇದ್ದಾರಲ್ಲ! ಇದ್ದಾರೆ. ಅವರಿಗೂ ಹೆಣ್ಣುಗಳು ದೊರೆಯುತ್ತವೆಯಲ್ಲ! ದೊರೆಯುತ್ತವೆ. ಇಲ್ಲಿಯೂ ಹಾಗೇ. ಈ ಕೇಸರೇ ಇಲ್ಲದ ಸಿಂಹಗಳೂ ಉಂಟು. ಇವಕ್ಕೆ ವಿಶ್ವವಿಖ್ಯಾತ ಮಾದರಿ ಎಂದರೆ “ತ್ಸಾವೋ ನರಭಕ್ಷಗಳು” ಎಂದೇ ಪ್ರಸಿದ್ದವಾದ ಕೀನ್ಯಾದ ಕೇಸರ ರಹಿತ ಜೋಡಿ ಗಂಡು ಸಿಂಹಗಳು.

ಇವು ಪ್ರಸಿದ್ಧಿಗೆ ಬಂದಿದ್ದು ಮಾರ್ಚ್ 1898 ರಲ್ಲಿ. ಆಫ್ರಿಕಾದ ಉಗಾಂಡವನ್ನು ಹಿಂದೂ ಮಹಾಸಾಗರದ ಕಿಲಿಂಡಿನಿ ಬಂದರಿಗೆ ಸಂಪರ್ಕಿಸುವ  ರೈಲು ದಾರಿ ನಿರ್ಮಾಣದ ಅಂಗವಾಗಿ ಕೀನ್ಯಾದ ತ್ಸಾವೋ ನದಿಗೆ  ಸೇತುವೆ ಕಟ್ಟುವ ಪ್ರಯತ್ನ ನಡೆಯಿತು. ಲೆಫ್ಟಿನೆಂಟ್ ಜಾನ್ ಹೆನ್ರಿ ಪ್ಯಾಟರ್ಸನ್ ಇದರ ನಾಯಕತ್ವ ಹೊಂದಿದ್ದ. ಎಂಟು ಮೈಲಿ ಉದ್ದಕ್ಕೂ ಸಾವಿರಾರು ಕೂಲಿಕಾರರು ಬೀಡು ಬಿಟ್ಟಿದ್ದರು.  ಅವನು ಅಲ್ಲಿಗೆ ಬರುವುದಕ್ಕೆ ಒಂದು ದಿನ ಮುಂಚಿತವಾಗಿ ಇಲ್ಲಿನ ಇಬ್ಬರು ಕಾರ್ಮಿಕರನ್ನು ಎರಡು ಸಿಂಹಗಳು ಕೊಂದು-ತಿಂದಿದ್ದವು. ಆನಂತರದಲ್ಲಿ ಇವುಗಳ ಕಾಟ ಯಾವ ಮಟ್ಟಕ್ಕೆ ಹೆಚ್ಚಿತೆಂದರೆ, ಇಡೀ ಯೋಜನೆಯನ್ನು ತಿಂಗಳಾನುಗಟ್ಟಲೆ ಸ್ಥಗಿತಗೊಳಿಸಬೇಕಾಯಿತು. 

ಹಗಲು ರಾತ್ರಿ ಎನ್ನದೆ ಸಿಕ್ಕ ಸಿಕ್ಕವರನ್ನು ಕೊಂದು ತಿನ್ನುತ್ತಿದ್ದ ಈ ಸಿಂಹಗಳ ಖಾತೆಗೆ ಜಮೆಯಾಗಿದ್ದು 136 ಕಾರ್ಮಿಕರು ಎಂದು ಪ್ಯಾಟರ್ಸನ್ ಹೇಳುತ್ತಾನೆ.  ಇವುಗಳನ್ನು ಕೊಲ್ಲಲು ಸರ್ಕಾರ ಮಾಡದ ಪ್ರಯತ್ನಗಳೇ ಇಲ್ಲ. ಇಷ್ಟಾದರೂ ಅವುಗಳನ್ನು 10 ತಿಂಗಳ ಕೊಲ್ಲಲಾಗಲಿಲ್ಲ. ಇಂಗ್ಲೆಂಡಿನ ಹೌಸ್ ಆಫ್ ಲಾರ್ಡ್ ನಲ್ಲಿ ಅಂದಿನ ಪ್ರಧಾನಿ ಲಾರ್ಡ್ ಸಿಲಿಸ್ಬೆರಿ ಇವುಗಳ  ಕಾಟದ ಪ್ರಸ್ತಾಪ ಮಾಡಿದ್ದರು ಅಂದರೆ ವಿಷಯದ ಗಾಂಭೀರ್ಯ ಅರ್ಥವಾಗುತ್ತದೆ.

ಅಂತಿಮವಾಗಿ, ಹಲವು ಹರಸಾಹಸಗಳ ನಂತರ 9ನೇ ಡಿಸೆಂಬರ್ 1898 ರಂದು ಇದರಲ್ಲಿ ಒಂದು ಸಿಂಹವನ್ನು ಕೊಲ್ಲಲಾಯಿತು. ಮೂಗಿನಿಂದ ಬಾಲದ ತುದಿಯವರೆಗೆ ಇದರ ಉದ್ದ 9 ಅಡಿ 8 ಅಂಗುಲ. ಇದರ ಹೆಣವನ್ನು ಹೊತ್ತಿದ್ದು ಒಂಭತ್ತು ಜನರು. ಇದಾದ 20 ದಿನಗಳ ನಂತರ ಇನ್ನೊಂದನ್ನು ಕೊಲ್ಲಲಾಯಿತು. ನಂತರ ಇವು ಕೇಸರ ರಹಿತ ನರಭಕ್ಷಕಗಳು ಎಂದೇ ಜಗತ್ಪ್ರಸಿದ್ದವಾಗಿವೆ.

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಯಾವುದೇ ಪ್ರಕ್ರಿಯೆಗಳನ್ನು ಇವುಗಳೊಂದಿಗೆ ಹೋಲಿಸಿಕೊಂಡರೆ ಅದು ನಿಮ್ಮ ಸಮಸ್ಯೆ!!

ನಿಮಗೆ ಏನು ಅನ್ನಿಸ್ತು?
0 ವೋಟ್