ಕುತೂಹಲ ಸೃಷ್ಟಿಸಿದ ನಿರ್ದೇಶಕ ಮನ್ಸೂರೆಯವರ ‘19 20 21’ ಚಿತ್ರದ ಪೋಸ್ಟರ್

ಹರಿವು, ನಾತಿಚರಾಮಿ ಹಾಗೂ ಆ್ಯಕ್ಟ್-1978 ಚಿತ್ರದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರು, '19.20.21' ಎಂಬ ವಿಶಿಷ್ಟ ಚಿತ್ರದ ಶೀರ್ಷಿಕೆಯ ಹೊಸ ಚಿತ್ರದ ಮೊದಲ ಪೋಸ್ಟರ್ ಅನ್ನು 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದಲ್ಲಿ ರಂಗಭೂಮಿ ಕಲಾವಿದೆ ಶೃಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಾಜಿ ಮನೋಹರ್, ಎಂ ಡಿ ಪಲ್ಲವಿ, ಸಂಪತ್ ಕುಮಾರ್, ಮೈತ್ರೇಯ, ಅವಿನಾಶ್, ಕೃಷ್ಣ ಹೆಬ್ಬಾಲೆ, ಪ್ರಿಯ ಹಾಗೂ ಉಗ್ರಂ ಸಂದೀಪ್ ಮತ್ತಿತರ ತಾರಾಬಳಗ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ನಿರ್ದೇಶಕ ಮನ್ಸೋರೆ, “ಸದ್ಯ ಚಿತ್ರದ ಟ್ರೈಲರ್ ಲಾಂಚ್ ಆಗುವವರೆಗೂ ಕಥೆ ಬಗ್ಗೆ ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಈ ಚಿತ್ರ ಕರ್ನಾಟಕದಲ್ಲಿ ನಡೆದಿರುವ ನೈಜ ಘಟನೆಗಳ ಆಧಾರಿತ ಸಿನಿಮಾವಾಗಿದೆ. ಮುಖ್ಯವಾಗಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಪಟ್ಟ ಚಿತ್ರವಾಗಿದ್ದು, ಒಂದು ಸಮುದಾಯದ ಕಥೆಯಾಗಿದೆ. ಕರ್ನಾಟಕದಲ್ಲಿ ತುಂಬಾ ಚರ್ಚೆಯಾಗಿರುವಂತಹ ವಿಷಯ ದೆಹಲಿಯವರೆಗೂ ತಲುಪಿರುವ ಕಥೆ ಈ ಚಿತ್ರದಲ್ಲಿ ಇದೆ. ಹಾಗಾಗಿ ಚಿತ್ರದ ಟ್ರೈಲರ್ ಬಿಡುಗಡೆಯಾದ ದಿನ ಆಶ್ಚರ್ಯ ಹುಟ್ಟಿಸಲಿದೆ” ಎಂದು ಹೇಳಿದ ಅವರು ಕಥೆಯ ಗುಟ್ಟನ್ನು ಬಿಟ್ಟುಕೊಡಲಿಲ್ಲ. 

“ಆ್ಯಕ್ಟ್ 1978 ಸಿನಿಮಾದಂತೆ ಇಲ್ಲಿಯೂ ಕೆಲವು ಪ್ರಶ್ನೆಗಳನ್ನು ಎತ್ತಿ ಇಡಿಯಲಾಗಿದೆ. ಪ್ರೇಕ್ಷಕರು ಆ ಪ್ರಶ್ನೆಗಳ ಬಗ್ಗೆ ಯೋಚನೆ ಮಾಡುವಂತಹ ಒಂದು ಚಿತ್ರ '19.20.21'. ಸ್ವಾತಂತ್ರ್ಯ ಅನ್ನುವುದು ಎಲ್ಲರಿಗೂ ಸಿಕ್ಕಿದಿಯಾ? ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತದ ಕಟ್ಟ ಕಡೆಯ ಪ್ರಜೆಗೂ ಈ ಸ್ವಾತಂತ್ರ್ಯ ಸಿಕ್ಕಿದಿಯಾ? ಮುಕ್ತವಾಗಿ ಮಾತನಾಡುವುದಕ್ಕೆ, ಸ್ವತಂತ್ರವಾಗಿ ಬದುಕುವುದಕ್ಕೆ ಸ್ವಾತಂತ್ರ್ಯ ಇದಿಯೇ ಎಂಬ ಪ್ರಶ್ನೆಯನ್ನು ಈ ಪೋಸ್ಟರ್ ಮೂಲಕ ಕೇಳಲಾಗಿದೆ” ಎಂದು ತಿಳಿಸಿದರು.

ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಇಂತಹ ಸಾಮಾಜಿಕ ಕಾಳಜಿ ಇರುವಂತ ಚಿತ್ರಗಳಿಗೆ ಮಾರುಕಟ್ಟೆ ಇದೆ. ಈ ಹಿನ್ನೆಲೆಯಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆಯೂ ಸಾಮಾಜಿಕ ಕಾಳಜಿ ಇರುವಂತಹ ಚಿತ್ರಗಳನ್ನು ಮಾಡುತ್ತಿರುವ ಮನ್ಸೋರೆ ಅವರ ಧೈರ್ಯಕ್ಕೆ ಕಾರಣ.

ಚಿತ್ರ ಮಾಡುವ ಮುನ್ನಾ ಸಾಕಷ್ಟು ಸಂಶೋಧನೆ ಮಾಡಿದ್ದು, ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿರುವ ವಿಷಯಗಳನ್ನ ಈ ಕಥೆಯಲ್ಲಿ ಹೇಳುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ಸಿನಿಮಾ | ಸಂಪ್ರದಾಯಗಳೇ ಕೊರಳಿಗೆ ಉರುಳಾದಾಗ ʻರಕ್ಷಾ ಬಂಧನʼವೂ ನೆಪ

ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಹಿನ್ನೆಲೆ ಸಂಗೀತದ ಕೆಲಸ ಬಾಕಿಯಿದೆ. ಚಿತ್ರದ ಟ್ರೈಲರ್ ಅನ್ನು ಅಕ್ಟೋಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಿದ್ದಾರೆ. ನವೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆಯಾಗಲಿದೆ.

'ಆ್ಯಕ್ಟ್ 1978' ಚಿತ್ರದ ನಿರ್ಮಾಪಕ ಆರ್ ದೇವರಾಜ್ ಅವರು ‘19.20.21’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ಸತ್ಯ ಹೆಗಡೆಯವರು ಕೆಲಸ ಮಾಡಿದ್ದಾರೆ. ಜೊತೆಗೆ ರಂಗಭೂಮಿ, ಧಾರಾವಾಹಿ ಹಾಗೂ ಸಿನಿಮಾದಲ್ಲಿ ಅಭಿನಯಿಸಿರುವ ಸುಮಾರು 75ರಿಂದ 80 ಮಂದಿ ಕಲಾವಿದರು ಈ ಚಿತ್ರದಲ್ಲಿ ಕೆಲಸ ನಟಿಸಿದ್ದಾರೆ.

ಮಂಗಳೂರು, ಕುಂದಾಪುರ, ಯಲ್ಲಾಪುರ, ಧಾರಾವಾಡ, ಹುಬ್ಬಳ್ಳಿ ಹಾಗೂ ಬೆಂಗಳೂರು ನಗರದ ಸುತ್ತಮುತ್ತ ಸಿನಿಮಾ ಚಿತ್ರೀಕರಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಆರಂಭಗೊಂಡು ಮೇ ತಿಂಗಳವರೆಗೆ ಒಟ್ಟು 50 ದಿನದಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. 

"'ಹರಿವು', 'ನಾತಿಚರಾಮಿ' ಹಾಗೂ 'ಆ್ಯಕ್ಟ್ 1978' ಚಿತ್ರಗಳಿಂದ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆ ಸೇರಿದಂತೆ ಎಲ್ಲ ಕಡೆಯಿಂದಲೂ ಪ್ರೇಕ್ಷಕರು ಇದ್ದಾರೆ. ನನ್ನ ನಿರ್ದೇಶನ ಎಂಬ ಕಾರಣಕ್ಕೆ ಸಿನಿಮಾಗಳನ್ನು ನೋಡುವುದಕ್ಕೆ  ಪ್ರೇಕ್ಷಕರು ಬರುತ್ತಾರೆ. ನಾನು ಮಾಡುವ ಚಿತ್ರಗಳಲ್ಲಿ ಯಾರೋ ನಟ ಅಥವಾ ನಟಿಗಾಗಿ ಸಿನಿಮಾ ನೋಡಲು ಬರುವುದಿಲ್ಲ. ಮನ್ಸೋರೆ ಅವರ ಸಿನಿಮಾದಲ್ಲಿ ವೈಶಿಷ್ಟ್ಯ ಇರುತ್ತದೆ. ಸಾಮಾಜಿಕವಾಗಿ ಯೋಚನೆ ಮಾಡುವುದಕ್ಕೆ ಒಂದಷ್ಟು ವಿಚಾರಗಳು ಸಿಗುತ್ತವೆ ಎಂಬ ನಂಬಿಕೆ ಮೇಲೆ ಹಲವು ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ಇಷ್ಟಪಡುತ್ತಾರೆ" ಎಂದು ಕಮ‍ರ್ಷಿಯಲ್‌ ಸಿನಿಮಾಗಳ ನಡುವೆ ಸಾಮಾಜಿಕ ಕಾಳಜಿ ಇರುವಂತ ಚಿತ್ರಗಳನ್ನು ಮಾಡುವ ಉದ್ದೇಶ ತಿಳಿಸಿದರು.

“ಸಿನಿಮಾವನ್ನು ಬೇರೆ ಭಾಷೆಗಳಲ್ಲಿ ಮಾಡಿಕೊಡಿ ಅಥವಾ ಕಥೆ ಹಾಗೇ ಇರಲಿ. ಸಬ್ ಟೈಟಲ್ಸ್ ಬೇರೆ ಭಾಷೆಗಳಲ್ಲಿ ಮಾಡಿಕೊಡಿ ಎಂದು ಹಲವು ಅವಕಾಶಗಳು ಬರುತ್ತಿವೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ” ಎಂದು ಮನ್ಸೋರೆ ಈ ದಿನ.ಕಾಮ್‌ಗೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್