ಭಾಷೆಯ ಆಧಾರದ ಮೇಲೆ ದೇಶ ಒಡೆಯುತ್ತಿದೆ: ಪ್ರಧಾನಿ ಮೋದಿ ಆತಂಕ; ನಾನೂ ಅದನ್ನೇ ಹೇಳಿದ್ದು ಎಂದ ಸುದೀಪ್‌

kichcha_sudeep
  • ದಕ್ಷಿಣದ ಸಿನಿಮಾಗಳಿಗೇ ʼಪ್ಯಾನ್‌ ಇಂಡಿಯಾʼ ಹಣೆ ಪಟ್ಟಿ ಏಕೆ?  
  • ಅಜಯ್‌ ದೇವಗನ್‌ ನನ್ನ ಮಾತನ್ನು ತಪ್ಪಾಗಿ ತಿಳಿದಿದ್ದರು

ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ಮೂಲಕ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದ ಕನ್ನಡದ ಸ್ಟಾರ್‌ ನಟ ಕಿಚ್ಚ ಸುದೀಪ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಶುಕ್ರವಾರ ಪ್ರಧಾನಿ ಮೋದಿ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯ ಕುರಿತು ಆಡಿದ ಮಾತುಗಳನ್ನು ಮೆಚ್ಚಿಕೊಂಡಿರುವ ಸುದೀಪ್‌, ಅಂದು ನನ್ನ ಮಾತಿನ ಅರ್ಥ ಕೂಡ ಪ್ರಾದೇಶಿಕ ಭಾಷೆಗಳನ್ನು ಗೌರವಿಸಿ ಎಂಬುದೇ ಆಗಿತ್ತು. ಈಗ ನಮ್ಮ ಪ್ರಧಾನಿಗಳೇ ಈ ಮಾತು ಹೇಳಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಭಾಷಾ ವಿವಾದದ ಕುರಿತು ಮೊದಲ ಬಾರಿಗೆ ಎನ್‌ಡಿಟಿವಿಗೆ ಸಂದರ್ಶನ ನೀಡಿರುವ ಸುದೀಪ್‌, "ನಾನು ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿದ್ದಾಗಲಿ, ಆ ಕುರಿತು ಟ್ವೀಟ್‌ ಮಾಡಿದ್ದಾಗಲಿ ಯಾವುದೇ ಗಲಭೆ ಅಥವಾ ವಿವಾದವನ್ನು ಹುಟ್ಟು ಹಾಕುವ ಸಲುವಾಗಿ ಅಲ್ಲ. ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದು ನನ್ನ ಅಭಿಪ್ರಾಯವಷ್ಟೇ ಹೇಳುವ ಪ್ರಯತ್ನ ಮಾಡಿದ್ದೇನೆ. ಈಗ ಸ್ವತಃ ಪ್ರಧಾನಮಂತ್ರಿಗಳೇ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿರುವುದು ಮಾತೃಭಾಷೆಯನ್ನು ಪ್ರೀತಿಸುವ, ಗೌರವಿಸುವ ಪ್ರತಿಯೊಬ್ಬರಿಗೂ ಖುಷಿಯ ಸಂಗತಿ" ಎಂದಿದ್ದಾರೆ.  

ಈ ಸುದ್ದಿಯನ್ನು ಓದಿದ್ದೀರಾ? ಟ್ವೀಟ್‌ವಾರ್‌| ಅಜಯ್‌ ದೇವಗನ್‌ಗೆ ಸುದೀಪ್‌ ದೇಶ ಭಾಷೆಯ ಪಾಠ

"ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ನಾನು ವೇದಿಕೆಯೊಂದರಲ್ಲಿ ಹೇಳಿದ್ದ ಮಾತು ಅಜಯ್‌ ದೇವಗನ್‌ ಅಥವಾ ಬೇರೆ ಯಾರನ್ನೂ ನೋಯಿಸುವ ಉದ್ದೇಶದಿಂದಲ್ಲ. ಕೇವಲ ದಕ್ಷಿಣದ ಸಿನಿಮಾಗಳಿಗೆ ಮಾತ್ರ (ಬಹು ಭಾಷಾ ಚಿತ್ರ) ʼಪ್ಯಾನ್‌ ಇಂಡಿಯಾʼ ಎಂಬ ಹಣೆ ಪಟ್ಟಿ ಕಟ್ಟಿ, ಹಿಂದಿಯಿಂದ ಬೇರೆ ಭಾಷೆಗಳಿಗೆ ಡಬ್‌ ಮಾಡಿದರೂ ಅವುಗಳನ್ನು ʼಪ್ಯಾನ್‌ ಇಂಡಿಯಾʼ ಚಿತ್ರಗಳೆನ್ನದೆ ಹಿಂದಿ ಚಿತ್ರಗಳೆಂದೇ ಬಿಂಬಿಸುತ್ತಿದುದನ್ನು ಕಂಡಾಗ ಕಲಾವಿದನಾದ ನನಗೆ ಸಹಜವಾಗಿ ಬೇಸರವಾಗುತ್ತಿತ್ತು. ನನ್ನ ಪ್ರಕಾರ ಮೂಲ ಭಾಷೆಯಿಂದ ಬೇರೆ ಭಾಷೆಗೆ ಡಬ್‌ ಮಾಡಲಾಗುವ ಯಾವುದೇ ಚಿತ್ರವಾದರೂ ಅದು ʼಪ್ಯಾನ್‌ ಇಂಡಿಯಾʼ ಚಿತ್ರವೇ. ಕೇವಲ ದಕ್ಷಿಣದ ಸಿನಿಮಾಗಳಿಗೆ ಪ್ಯಾನ್‌ ಇಂಡಿಯಾ ಎಂಬ ಪಟ್ಟ ಕಟ್ಟಿದ್ದು ನನ್ನ ಬೇಸರಕ್ಕೆ ಕಾರಣಾಗಿತ್ತು. ಆ ಹಿನ್ನೆಲೆಯಲ್ಲಿ ನಾನು ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿದ್ದೆ. ಅದನ್ನು ಅಜಯ್‌ ದೇವಗನ್‌ ಅವರು ತಪ್ಪಾಗಿ ಅರ್ಥೈಸಿಕೊಂಡರು" ಎಂದು ಸ್ಪಷ್ಟನೆ ನೀಡಿದ್ದಾರೆ.

 

"ಎಲ್ಲರೂ ಪರಸ್ಪರರ ಭಾಷೆಯನ್ನು ಗೌರವಿಸುವುದು ಬಹಳ ಮುಖ್ಯ. ಅಜಯ್‌ ದೇವಗನ್‌ ಅವರ ಜೊತೆಗೆ ವೈಯಕ್ತಿಕವಾಗಿ ನನಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಭಾಷೆಯ ವಿಚಾರಕ್ಕೆ ಬಂದಾಗ ನನ್ನ ಅಭಿಪ್ರಾಯ ಮುಂದಿಡುವುದು ಅಗತ್ಯ ಎನಿಸಿತ್ತು. ನನಗೆ ಹಿಂದಿ ಬರುವ ಕಾರಣಕ್ಕೆ ಅಜಯ್‌ ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದನ್ನು ಓದಲು ಸಾಧ್ಯವಾಯಿತು. ಒಂದು ವೇಳೆ ನಾನು ಕೂಡ ಅವರಂತೆ ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರೆ ಅವರ ಸ್ಥಿತಿ ಹೇಗಿರುತ್ತಿತ್ತು ಎಂದು ಒಂದು ಕ್ಷಣ ಯೋಚಿಸಿದ್ದೆ. ಅದೇ ಪ್ರಶ್ನೆಯನ್ನು ಅವರಿಗೂ ಕೇಳಿದೆ. ನನ್ನ ನಡೆ ಯಾರನ್ನೂ ನೋಯಿಸುವುದಾಗಿರಲಿಲ್ಲ. ನನ್ನ ಅಭಿಪ್ರಾಯ ಳಿಸುವುದಾಗಿತ್ತು" ಎಂದಿದ್ದಾರೆ. 

ದೇಶದಲ್ಲಿ ಹಿಂದಿ ಹೇರಿಕೆ ಮತ್ತು ಪ್ರಾದೇಶಿಕ ಭಾಷೆಗಳ ಬಗೆಗಿರುವ ತಾರತಮ್ಯದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸುದೀಪ್‌, "ಭಾಷಾ ತಾರತಮ್ಯ ದೊಡ್ಡ ವಿದ್ವಾಂಸರಿಂದ ನಡೆಯುತ್ತಿರುವುದಲ್ಲ. ಜನಸಾಮಾನ್ಯರ ನಡುವೆಯೂ ಈ ರೀತಿಯ ತಾರತಮ್ಯಗಳಿಲ್ಲ. ದಕ್ಷಿಣದ ಚಿತ್ರಗಳನ್ನು ಉತ್ತರ ಭಾರತದ ಮಂದಿಯೂ ನೋಡುತ್ತಾರೆ. ಮೆಚ್ಚಿ ಗೌರವಿಸುತ್ತಾರೆ ಎಂಬುದೇ ಇದಕ್ಕೆ ಉದಾಹರಣೆ. ತಾರತಮ್ಯ ಮಾಡುವವರು ಏನಿದ್ದರೂ ಮೂರನೇ ದರ್ಜೆಯ ವ್ಯಕ್ತಿಗಳು" ಎಂದು ಹಿಂದಿ ಹೇರಿಕೆಗೆ ಯತ್ನಿಸುವವರಿಗೆ ಚಾಟಿ ಬೀಸಿದ್ದಾರೆ.

ದಕ್ಷಿಣದ ಚಿತ್ರಗಳು ಹಿಂದಿ ನೆಲದಲ್ಲಿ ಉತ್ತಮ ಗಳಿಕೆ ಮಾಡುತ್ತಿರುವುದರಿಂದ ಬಾಲಿವುಡ್‌ ಮಂದಿಗೆ ಆತಂಕ ಎದುರಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಿಚ್ಚ, "ದಕ್ಷಿಣದ ಒಂದೆರೆಡು ಸಿನಿಮಾಗಳು ಅತಿ ಹೆಚ್ಚು ಗಳಿಕೆ ಮಾಡಿದವು ಎಂಬ ಕಾರಣಕ್ಕೆ ಬಾಲಿವುಡ್‌ನ ಖ್ಯಾತ ಕಲಾವಿದರೆಲ್ಲ ಆತಂಕದಲ್ಲಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ದಶಕಗಳ ಕಾಲ ಶ್ರಮಪಟ್ಟು ಅವರು ಸಾಧಕರ ಸ್ಥಾನಕ್ಕೇರಿದ್ದಾರೆ. ಹಿಂದಿ ಸಿನಿಮಾಗಳೇ ದಕ್ಷಿಣದಲ್ಲಿ ಹೆಚ್ಚು ಗಳಿಸಿದರು ಅಥವಾ ದಕ್ಷಿಣದ ಸಿನಿಮಾಗಳು ಹಿಂದಿ ನೆಲದಲ್ಲಿ ಅತಿಯಾಗಿ ಗಳಿಕೆ ಮಾಡಿದರೂ ಯಾವ ಸೀಮೆಯ ಕಲಾವಿದರಿಗೂ ಆಘಾತವಾಗುವುದಿಲ್ಲ. ಒಬ್ಬ ಕಲಾವಿದನಾಗಿ ಇದು ನನ್ನ ಅಭಿಪ್ರಾಯ" ಎಂದಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ? ಸುದ್ದಿಯಾದವರು | ಮತ್ತೊಮ್ಮೆ ಕನ್ನಡದ ಕಿಚ್ಚು ಹೊತ್ತಿಸಿದ ಸುದೀಪ

ಭಾಷಾ ವಿವಾದದ ಕುರಿತು ಒಂದು ಸುತ್ತಿನ ಚರ್ಚೆಯ ನಂತರ ಸುಮ್ಮನೆ ಉಳಿದಿದ್ದ ನೀವು ಈಗೇಕೆ ಮಾತನಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಿಚ್ಚ, "ಆವತ್ತು ನಾನು ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯ ಬಗ್ಗೆ ಆಡಿದ್ದ ಮಾತುಗಳನ್ನೇ ಇಂದು ಪ್ರಧಾನಮಂತ್ರಿಗಳು ಪುನಃರುಚ್ಚರಿಸಿದ್ದಾರೆ. ಅವರು ನರೇಂದ್ರ ಮೋದಿ ಎಂಬ ಕಾರಣಕ್ಕೊ ಅಥವಾ ಯಾವುದೋ ಒಂದು ಪಕ್ಷಕ್ಕೆ ಸೇರಿದ ರಾಜಕಾರಣಿ ಎಂಬದಕ್ಕೊ ಪ್ರಾದೇಶಿಕ ಭಾಷೆಗಳ ಬಗ್ಗೆ ಅವರಾಡಿದ ಮಾತುಗಳನ್ನು ನಾನು ಮೆಚ್ಚಿಕೊಳ್ಳುತ್ತಿಲ್ಲ. ನಮ್ಮ ದೇಶದ ಪ್ರಧಾನಿ ಇಲ್ಲಿನ ಪ್ರಾದೇಶಿಕ ಭಾಷೆಗಳು ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ಎಂದಿದ್ದು ನನಗೆ ಖುಷಿ ನೀಡಿದೆ" ಎಂದು ಪ್ರಧಾನಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ಶುಕ್ರವಾರ ರಾಜಸ್ಥಾನದ ಜೈಪುರದಲ್ಲಿ (ಭಾರತೀಯ ಜನತಾ ಪಾರ್ಟಿ) ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, "ಭಾಷೆಗಳ ಆಧಾರದ ಮೇಲೆ ದೇಶ ಒಡೆಯುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಪ್ರತಿ ಪ್ರಾದೇಶಿಕ ಭಾಷೆಗಳಲ್ಲೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ಕಾಣುತ್ತದೆ ಮತ್ತು ಗೌರವಿಸುತ್ತದೆ" ಎಂದು ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದರು.  

ನಿಮಗೆ ಏನು ಅನ್ನಿಸ್ತು?
0 ವೋಟ್