ಸಂದರ್ಶನ | ಹೋಪ್‌ನೊಂದಿಗೆ ಬೆಳ್ಳಿತೆರೆಗೆ ಮರಳಿದ ಶ್ವೇತಾ ಶ್ರೀವಾತ್ಸವ್‌

ನಟಿ ಶ್ವೇತಾ ಶ್ರೀವಾತ್ಸವ್‌ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಅವರ ವಿಶೇಷ ಸಂದರ್ಶನ ಇದು.
Shwetha shrivatsav

ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ, ಫೇರ್‌ ಆಂಡ್‌ ಲವ್ಲಿ, ಕಿರಗೂರಿನ ಗಯ್ಯಾಳಿಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಶ್ವೇತಾ ಶ್ರೀವಾತ್ಸವ್‌, ಮತ್ತೆ ಬೆಳ್ಳಿ ತೆರೆಯತ್ತ ಮುಖ ಮಾಡಿದ್ದಾರೆ. ʼಹೋಪ್‌ʼನೊಂದಿಗೆ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಶ್ವೇತಾ ಶ್ರೀವಾತ್ಸವ್‌, ಮಹಿಳಾ ಪ್ರಧಾನ ʼಹೋಪ್‌ʼ ಚಿತ್ರದಲ್ಲಿ ಐಎಎಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ 'ಹೋಪ್‌' ಚಿತ್ರದ ಟ್ರೈಲರ್‌ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು.

ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಎರಡನೇ ಬಾರಿಗೆ ತಾವು ಸಿನಿ ಪಯಣ ಶುರು ಮಾಡುತ್ತಿರುವ ಬಗ್ಗೆ ಶ್ವೇತಾ ಈದಿನ.ಕಾಮ್‌ ಜೊತೆಗೆ ಮಾತನಾಡಿದ್ದಾರೆ.

ಕಿರಗೂರಿನ ಗಯ್ಯಾಳಿಗಳು ಸಿನಿಮಾ ಬಳಿಕ ಬಹಳ ಗ್ಯಾಪ್‌ ತೆಗೆದುಕೊಂಡಿರಿ ಅನ್ನಿಸುವುದಿಲ್ಲವೇ? ಹೋಪ್‌ ಸಿನಿಮಾ ಒಪ್ಪಿಕೊಂಡಿದ್ದು ಹೇಗೆ?

"ಹೌದು, ಆರೇಳು ವರ್ಷಗಳಷ್ಟು ಗ್ಯಾಪ್‌ ಆಗಿದೆ. ನನ್ನ ಮಗಳು ಹುಟ್ಟಿದ ಬಳಿಕ ಅವಳ ಪ್ರಪಂಚದಲ್ಲೇ ಪೂರ್ತಿಯಾಗಿ ಮುಳುಗಿ ಹೋಗಿದ್ದೆ. ಅವಳಿಗಾಗಿ ಸಮಯ ನೀಡುವ ಅಗತ್ಯವಿತ್ತು. ಅದಕ್ಕಾಗಿಯೇ ನಟನೆಯಿಂದ ದೂರ ಉಳಿದುಕೊಂಡಿದ್ದೆ. ಮಗಳು ಎರಡು ವರ್ಷದವಳಾದ ನಂತರ ವೃತ್ತಿ ಬದುಕಿನ ಬಗ್ಗೆ ಯೋಚಿಸತೊಡಗಿದೆ. ಅದಾದ ಬಳಿಕ ದೇಹಸ್ಥಿತಿ ಕಾಪಾಡಿಕೊಳ್ಳುವ ಸಲುವಾಗಿ ಯೋಗಾಭ್ಯಾಸ ಶುರು ಮಾಡಿದೆ. ಹೀಗೆ ಒಂದಷ್ಟು ದಿನ ಕಳೆಯುವ ಹೊತ್ತಿಗೆ ಸಿನಿಮಾ ಆಫರ್‌ಗಳು ಬರಲು ಶುರುವಾದವು. ಹಿಂದೆ ನಾನು ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಅಂತಹದ್ದೇ ಪಾತ್ರಗಳು ಬರತೊಡಗಿದವು. ಆ ರೀತಿಯ ಪಾತ್ರವನ್ನು ನಾನು ಮಾಡಿ ಆಗಿರುವುದರಿಂದ ಮತ್ತದೇ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲ. ಹೀಗಾಗಿ ಒಂದಷ್ಟು ಅವಕಾಶಗಳನ್ನು ಕೈಬಿಟ್ಟೆ. ನಟನೆ ಬಿಟ್ಟು ಆರೇಳು ವರ್ಷ ಕಳೆದಿರುವಾಗ ನಮ್ಮನ್ನು ಹುಡುಕಿ ಬರುವ ಪಾತ್ರಗಳನ್ನು ಕೈ ಬಿಡುವುದು ಸುಲಭದ ಮಾತಲ್ಲ. ನನಗೆ ಸರಿ ಹೊಂದುವ ಪಾತ್ರಗಳ ಹುಡುಕಾಟದಲ್ಲಿದ್ದೆ. ಆ ಹೊತ್ತಿಗೆ ನಿರ್ದೇಶಕ ಅಂಬರೀಶ್‌ ಬಂದು 'ಹೋಪ್‌' ಸಿನಿಮಾದ ಕಥೆ ಹೇಳಿದರು. ಕತೆ ಕೇಳಿದಾಗ ನಾನು ಎಮೋಷನಲ್‌ ಆಗಿದ್ದೆ. ವೈಯಕ್ತಿಕವಾಗಿ ನನಗೆ ಈ ಪಾತ್ರ ಬಹಳ ಮುಖ್ಯ ಎನಿಸಿತ್ತು. ಜೊತೆಗೆ ಸಾಮಾಜಿಕವಾಗಿ ಈ ರೀತಿಯ ಪಾತ್ರ ಮತ್ತು ಕಥೆಯ ಅಗತ್ಯವಂತೂ ಖಂಡಿತವಾಗಿಯೂ ಇದೆ ಎಂಬುದು ನನ್ನ ಅನಿಸಿಕೆ. ಹೀಗಾಗಿ 'ಹೋಪ್‌' ಸಿನಿಮಾ ಮೂಲಕ ತೆರೆಗೆ ಮರಳುವುದು ಸೂಕ್ತ ಎಂದು ನಿರ್ಧರಿಸಿದೆ" ಎಂದರು.

ʼಹೋಪ್‌ʼ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳುವಾದದರೆ...

ʼಹೋಪ್‌ʼ ಸಿನಿಮಾದಲ್ಲಿ ನನ್ನದು ದಕ್ಷ ಸರ್ಕಾರಿ ಅಧಿಕಾರಿಯ ಪಾತ್ರ. ತುಂಬಾ ಶ್ರಮವಹಿಸಿ, ಶ್ರದ್ಧೆಯಿಂದ ʼಯುಪಿಎಸ್‌ಸಿʼ ಪರೀಕ್ಷೆ ಬರೆದು ಸಮಾಜ ಸುಧಾರಣೆಯ ಕನಸು ಹೊತ್ತು ಬರುವ ಹಲವು ಯುವಕ, ಯುವತಿಯರು ತಾವು ಕರ್ತವ್ಯಕ್ಕೆ ಸೇರಿದ ಬಳಿಕ ಅಂದುಕೊಂಡಂತೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ವ್ಯವಸ್ಥೆ ಬೇರೆಯದ್ದೇ ಹಿತಾಸಕ್ತಿಗಳಿಂದ ಕೂಡಿರುತ್ತದೆ. ಅಂತಹ ಹದಗೆಟ್ಟ ವ್ಯವಸ್ಥೆಯೊಳಗೆ ಕರ್ತವ್ಯ ನಿರ್ವಹಿಸುವಾಗ ಒಬ್ಬ ದಕ್ಷ ಅಧಿಕಾರಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಯಾವುದೇ ಹಿನ್ನೆಲೆ ಇರದ ಆಕೆ ಎದುರುಗೊಳ್ಳುವ ಸವಾಲುಗಳೇನು? ನ್ಯಾಯಕ್ಕಾಗಿ ಮಹಿಳಾ ಅಧಿಕಾರಿಯೊಬ್ಬಳು ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತಾಳೆ? ವೃತ್ತಿ ಬದುಕಿನ ಸಮಸ್ಯೆಗಳು ಆಕೆಯ ವೈಯಕ್ತಿಕ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ. ಸರ್ಕಾರಿ ವ್ಯವಸ್ಥೆ ಹದಗೆಟ್ಟಾದ ಜನಸಾಮಾನ್ಯರ ಬದುಕಿನಲ್ಲಾಗುವ ತಲ್ಲಣಗಳ ಸುತ್ತ 'ಹೋಪ್‌' ಕಥೆಯನ್ನು ಹೆಣೆಯಲಾಗಿದೆ. ಚಿತ್ರದಲ್ಲಿ ಈ ಎಲ್ಲಾ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ನನ್ನ ವೃತ್ತಿ ಬದುಕಿನಲ್ಲಿ ಇದು ವಿಭಿನ್ನ ಪಾತ್ರ. ಸಾಮಾಜಿಕ ದೃಷ್ಟಿಯಿಂದ ʼಹೋಪ್‌ʼ ಪ್ರತಿ ಯುವಕ, ಯುವತಿಯರು ನೋಡಲೇಬೇಕಾದ ಚಿತ್ರ ಎಂದು ಚಿತ್ರಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಮಗಳೇ ಪ್ರಪಂಚ ಎನ್ನುವ ನೀವು ಮತ್ತೆ ನಟನೆಗೆ ಮರಳಿದ್ದೀರಿ, ನಟನೆ ಮತ್ತು ತಾಯ್ತನದ ಹೊಣೆ ಎರಡನ್ನೂ ಹೇಗೆ ನಿಭಾಯಿಸುತ್ತಿದ್ದೀರಿ?

"ನಾನು ಮೊದಲೆಲ್ಲ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾಗ ಕುಟುಂಬದ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುತ್ತಿರಲಿಲ್ಲ. ಆದರೆ, ಈ ಬಾರಿ ಅಷ್ಟು ಸುಲಭವಾಗಿರಲಿಲ್ಲ. ನಾನು ಮತ್ತೆ ನಟನೆಗೆ ಮರಳಬೇಕು ಎಂದು ನಿರ್ಧರಿಸಿದಾಗ ಮಗಳಿಗೆ ಎರಡು ವರ್ಷವಾಗಿತ್ತು. ಆಗ ತಾನೆ ಲಾಕ್‌ಡೌನ್‌ ಮುಗಿದು ಶೂಟಿಂಗ್‌ ಶುರುವಾಗಿತ್ತು. ಮಗಳು ನನ್ನನ್ನು ಅತಿಯಾಗಿ ಹಚ್ಚಿಕೊಂಡ ಕಾರಣ ಮೊದ ಮೊದಲು ಅವಳನ್ನು ಬಿಟ್ಟಿರಲು ಬಹಳ ಕಷ್ಟವಾಗುತಿತ್ತು. ಮಗಳು ಏನ್‌ ಮಾಡ್ತಿದ್ದಾಳೆ... ಊಟ ಮಾಡಿದಳಾ? ನಿದ್ದೆ ಮಾಡಿದಳಾ... ಹೀಗೆ ಸಹಜವಾಗಿ ಒಬ್ಬ ತಾಯಿಯನ್ನು ಕಾಡುವ ಪ್ರಶ್ನೆಗಳೇ ನನ್ನನ್ನು ಕಾಡುತ್ತಿದ್ದವು. ಮನೆಯಲ್ಲಿ ಮಗಳನ್ನು ನೋಡಿಕೊಳ್ಳಲು ಅಪ್ಪ, ಅಮ್ಮ ಇದ್ದುದರಿಂದ ಸಮಾಧಾನ ಮಾಡಿಕೊಳ್ಳುತ್ತಿದೆ" ಎಂದು ತಮ್ಮ ತೊಳಲಾಟ ಹಂಚಿಕೊಂಡರು.

"ಒಂದು ಬಾರಿ ಶೂಟಿಂಗ್‌ ಸೆಟ್‌ನಲ್ಲಿದ್ದಾಗ ಮಗಳ ನೆನಪಾಗಿ ಮನೆಗೆ ವಿಡಿಯೋ ಕಾಲ್‌ ಮಾಡಿ ಬಿಟ್ಟಿದ್ದೆ. ನಾನು ಅವಳಿಗೆ ಹೇಳದೆ ಬಂದಿದ್ದೇನಲ್ಲ ಎಂಬ ಅರಿವು ಇರಲಿಲ್ಲ. ಅವಳು ವಿಡಿಯೋ ಕಾಲ್‌ನಲ್ಲಿ ನನ್ನನ್ನು ನೋಡುತ್ತಲೇ ಅಳಲು ಶುರು ಮಾಡಿದವಳು ಮೂರ್ನಾಲ್ಕು ಗಂಟೆ ಕಳೆದರೂ ಅಳು ನಿಲ್ಲಿಸಿರಲಿಲ್ಲವಂತೆ. ಅಪ್ಪ ಅಮ್ಮನಿಗೂ ಆ ದಿನ ಅವಳನ್ನು ಸಂಭಾಳಿಸಲು ಕಷ್ಟವಾಗಿತ್ತು. ಶೂಟಿಂಗ್‌ ಮುಗಿಸಿ ಮನೆಗೆ ಹೋದಾಗ ಸಂಕಟ ಎನಿಸಿತ್ತು. ಮಾರನೇ ದಿನ ಶೂಟಿಂಗ್‌ಗೆ ಬರೋಕು ಕಷ್ಟವಾಯ್ತು. ಆದರೆ, ಗಟ್ಟಿ ಮನಸ್ಸು ಮಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳತೊಡಗಿದೆ. ಹಾಗೆಯೇ ರೂಢಿಯಾಯ್ತು. 'ಹೋಪ್‌' ನಂತರ ರಾಘವೇಂದ್ರ ಸ್ಟೋರ್ಸ್‌ ಸಿನಿಮಾದಲ್ಲಿ ತೊಡಗಿಕೊಂಡೆ. ಆಗ ಮಗಳನ್ನು ನನ್ನ ಜೊತೆಯಲ್ಲೇ ಶೂಟಿಂಗ್‌ ಸೆಟ್‌ಗೆ ಕರೆದುಕೊಂಡು ಹೋಗುತ್ತಿದೆ. ಅವಳನ್ನು ನೋಡಿಕೊಳ್ಳುವ ಸಲುವಾಗಿ ನನ್ನ ತಾಯಿಯೂ ಜೊತೆಗೇ ಬರುತ್ತಿದ್ದರು. ಸುಮಾರು ಒಂದೂವರೆ ಎರಡು ತಿಂಗಳ ಕಾಲ ನನ್ನ ಜೊತೆಗೆ ಸುತ್ತಾಟದಲ್ಲೇ ಕಳೆದಳು. ಆಮೇಲೆ ನನಗೆ ಯಾಕೋ ಮಗುವಿಗೆ ಅಷ್ಟೊಂದು ಸುತ್ತಾಟ ಬೇಡ ಅನ್ನಿಸಿತು. ಅದಕ್ಕಾಗಿ ಮನೆಯಲ್ಲೇ ಉಳಿಸಿದೆ. ಆಗ ಬರೋಬ್ಬರಿ 11 ದಿನಗಳ ಕಾಲ ಮಗಳಿಂದ ದೂರ ಉಳಿದು ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೆ. ಆ ದಿನಗಳಲ್ಲಿ ಮಗಳನ್ನು ಬಿಟ್ಟಿರುವುದು ತೀರಾ ಕಷ್ಟ ಅನ್ನಿಸುತ್ತಿತ್ತು. ನಾನು ಮಗಳ ಕಣ್ತಪ್ಪಿಸಿ ಶೂಟಿಂಗ್‌ಗೆ ಬರಬೇಕಿತ್ತು. ಇವತ್ತು ಕೂಡ ಮೈಸೂರಿನಲ್ಲಿ ಶೂಟಿಂಗ್‌ನಲ್ಲಿದ್ದೇನೆ. ಮಗಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದೇನೆ. ಮಗಳ ಕಣ್ತಪ್ಪಿಸಿ ಶೂಟಿಂಗ್‌ಗೆ ಬರಲು ಆರಂಭಿಸಿದಾಗಲೇ ಹೆತ್ತವರು ಮಕ್ಕಳನ್ನು ಬಿಟ್ಟಿರೋದು ಎಷ್ಟು ಕಷ್ಟ ಅಂತ ತಿಳಿದಿದ್ದು. ಅದು ತಾಯಂದಿರಿಗೆ ಮಾತ್ರ ಅರ್ಥವಾಗುವ ಭಾವ" ಎಂದು ತಮ್ಮ ವೈಯಕ್ತಿಕ ಬುದುಕು ಮತ್ತು ವೃತ್ತಿ ಬದುಕಿನ ಅನುಭವವನ್ನು ಹಂಚಿಕೊಂಡರು.

Image
shwetha shrivatsav

ಯಾವ್ಯಾವ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೀರಿ?

'ಹೋಪ್‌' ಸಿನಿಮಾ ಬಳಿಕ ಜಗ್ಗೇಶ್‌ ಮುಖ್ಯಭೂಮಿಕೆಯ ರಾಘವೇಂದ್ರ ಸ್ಟೋರ್ಸ್‌ ಚಿತ್ರದಲ್ಲಿ ನಟಿಸಿದ್ದೇನೆ. ಸದ್ಯ ಚಿಕ್ಕಿಯ ಮುಕುತಿ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಕಡು ಬಡನತದ ಹಳ್ಳಿ ಹುಡುಗಿಯ ಪಾತ್ರ ನನ್ನದು. ನನ್ನ ವೃತ್ತಿ ಬದುಕಿನಲ್ಲಿ ಇದು ಅತ್ಯಂತ ಕಷ್ಟಕರವಾದ ಪಾತ್ರ ಎನ್ನಬಹುದು. 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿನ ಪಾತ್ರವನ್ನು ಮೀರಿಸುವಂತಿದೆ. ಸದ್ಯ ನಾಲ್ಕು ಸಿನಿಮಾಗಳು ಕೈಲಿವೆ. ಅವುಗಳನ್ನು ಹೊರತು ಪಡಿಸಿ ಇತ್ತೀಚೆಗೆ ಎರಡು ಕಥೆಗಳನ್ನು ಕೇಳಿ ಒಪ್ಪಿಕೊಂಡಿದ್ದೇನೆ. ಮಗಳು ಹುಟ್ಟುವುದಕ್ಕೂ ಮೊದಲು ಒಂದು ಸಿನಿಮಾದಲ್ಲಿ ನಟಿಸಲು ಎರಡು ವರ್ಷ ಸಮಯ ತೆಗೆದುಕೊಳ್ಳುತ್ತಿದ್ದೆ. ಈಗ ಎರಡು ವರ್ಷಕ್ಕೆ ಆರು ಸಿನಿಮಾ ಮಾಡ್ತಿದ್ದೀನಿ. ಈ ಬೆಳವಣಿಗೆ ನನಗೂ ಕೂಡ ವಿಚಿತ್ರ ಎನ್ನಿಸುತ್ತೆ ಎಂದು ನಗೆ ಬೀರಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್