ಲಾಲ್‌ಬಾಗ್‌ನಲ್ಲಿ ಅರಳಿದ ಬೆಟ್ಟದ ಹೂವು | ಅಪ್ಪುಗೆ 212ನೇ ಫಲಪುಷ್ಪ ಪ್ರದರ್ಶನ ಸಮರ್ಪಣೆ

ಬೆಂಗಳೂರಿನ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಪ್ರತಿವರ್ಷ ನಡೆಯುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಈ ವರ್ಷ ಇತ್ತೀಚೆಗೆ ಅಭಿಮಾನಿಗಳನ್ನಗಲಿದ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಮರ್ಪಣೆ ಮಾಡಲಾಗಿದೆ.

75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನಡೆದ 212ನೇ ಫಲಪುಷ್ಪ ಪ್ರದರ್ಶನವನ್ನು ಡಾ. ರಾಜ್‌ಕುಮಾರ್ ಅವರ ಕುಟುಂಬದ ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 5ರಂದು ಉದ್ಘಾಟನೆ ಮಾಡಿದ್ದಾರೆ. 

ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನವನ್ನು ಪುನೀತ್ ರಾಜ್‌ಕುಮಾರ್ ಅವರ ಸಮಾದಿಯ ಬಳಿಯಿಂದ ತರಲಾದ ಜ್ಯೋತಿಯಿಂದ ದೀಪಾ ಬೆಳಗಿಸಿ ಉದ್ಘಾಟಿಸಲಾಗಿದೆ.

ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಕಣ್ಣು ಹಾಯಿಸಿದ ಕಡೆಯಲೆಲ್ಲ, ರಾಜ್ ಮತ್ತು ಅಪ್ಪು ಪುತ್ಥಳಿಕೆಗಳು ಮನಸೋರೆ ಗೊಳಿಸುತ್ತಿವೆ. ವಿದೇಶಿಯ ಸುಮಾರು 50 ಬಗೆಯ ಹೂವುಗಳಿಂದ ಅಲಂಕಾರಗೊಂಡ ಫಲಪುಷ್ಟ ಪ್ರದರ್ಶನಕ್ಕೆ ಮೆರುಗು ತಂದಿರುವುದು ಡಾ. ರಾಜ್‌ಕುಮಾರ್ ಅವರು ಹುಟ್ಟಿದ ಗಾಜುನೂರು ಮನೆಯ ಪ್ರತಿಕೃತಿ. ಇಡೀ ಪ್ರತಿಕೃತಿಯನ್ನು ಕೆಂಪು ಮತ್ತು ಬಿಳಿ ಬಣ್ಣದ ಗುಲಾಬಿ ಹೂವುಗಳಿಂದ ನಿರ್ಮಿಸಲಾಗಿದ್ದು, ಫಲಪುಷ್ಪ ಪ್ರದರ್ಶನದ ಆಕರ್ಷಕ ಕೇಂದ್ರಬಿಂದುವಾಗಿದೆ.  

ಬೆಟ್ಟದ ಹೂವಾಗಿ ಬಂದ ಪುನೀತ್ ರಾಜ್‌ಕುಮಾರ್

ಗಾಜನೂರು ಮನೆಯ ಎದುರುಗಡೆ ಉದ್ಯಾನವನದಲ್ಲಿ ನಿಂತು ನಮ್ಮನ್ನು ಸ್ವಾಗತಿಸುವುದು ಡಾ. ರಾಜ್ ಮತ್ತು ಅಪ್ಪು ಅವರ ಪುತ್ಥಳಿಕೆಗಳು. ಉದ್ಯಾನದಲ್ಲಿರುವ ಕೃಷ್ಣದೇವರಾಯ, ಬೇಡರ ಕಣ್ಣಪ್ಪ ಪ್ರತಿಮೆಗಳು, ಶಕ್ತಿಧಾಮ ಸೇರಿದಂತೆ ವಿವಿಧ ರೀತಿಯ ಹೂವಿನ ಅಲಂಕಾರ ನಡುವೆ ರಾಜ್ ಮತ್ತು ಅಪ್ಪು ಪ್ರತಿಮೆಗಳು ವಿಶೇಷವಾಗಿ ಕಂಗೊಳಿಸುತ್ತಿವೆ. ಜೊತೆಗೆ ಭಾವಚಿತ್ರಗಳ ಮೂಲಕ ಅಪ್ಪು ಮತ್ತು ರಾಜ್‌ಕುಮಾರ್ ಅವರ ಜೀವನ ಚರಿತ್ರೆಯನ್ನು ಅನಾವರಣಗೊಳಿಸಲಾಗಿದೆ. 'ಬೆಟ್ಟದ ಹೂವು' ಚಿತ್ರದಲ್ಲಿ ಬಾಲ ಕಲಾವಿದರಾಗಿ ನಟಿಸಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ಪುನೀತ್ ಅವರ ಬಾಲ್ಯದ ಕಲಾಕೃತಿ ಪ್ರದರ್ಶನಕ್ಕೆ ಬರುವ ಪುಟಾಣಿಗಳಿಗೆ ಸ್ಫೂರ್ತಿ. 

Image

1922ರಲ್ಲಿ ಲಾಲ್‌ಬಾಗ್‌ನಲ್ಲಿ ಮೊದಲ ಫಲಪುಷ್ಪ ಪ್ರದರ್ಶನ ನಡೆದಿತ್ತು. ಅದಿಂನಿಂದ ಇಂದಿನವರೆಗೆ 212ನೇ ಫಲಪುಷ್ಪ ಪ್ರದರ್ಶನಗಳು ನಡೆದಿವೆ. ಪ್ರಸ್ತುತ ನಡೆಯುತ್ತಿರುವ ಪ್ರದರ್ಶನವು ಹತ್ತು ದಿನಗಳ ಕಾಲ ನಡೆಯಲಿದ್ದು, ಆಗಸ್ಟ್ 15ರವರಗೆ ಪ್ರವಾಸಿಗರ ಕಣ್ಮನ ಸೆಳೆಯಲಿದೆ. 

ಗಂಧದಗುಡಿಯಲ್ಲಿ ಅಪ್ಪು ಆಗಮಾನದ 'ಥೀಮ್' ಅಪ್ಪು ಅವರನ್ನು ಜೀವಂತವಾಗಿರಿಸಿದೆ. 'ಆಡಿಸಿ ನೋಡು ಬೀಳಿಸಿ ನೋಡು ಉರಳಿ ಹೋಗದು', 'ಗೊಂಬೆ ಹೇಳುತೈತೆ ಮತ್ತೆ ಹೇಳತೈತೆ ನೀನೆ ರಾಜಕುಮಾರ' ಎಂದು ಬೆಂಗಳೂರಿನ ಬಿಎಸ್ಎಫ್ ಸೈನಿಕರು ವಾದ್ಯಗೋಷ್ಠಿ ನಡೆಸಿ, ದೇಶಭಕ್ತಿ ಜೊತೆಗೆ ಅಪ್ಪು ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಪುನೀತ್ ಅವರಿಗೆ ಸಮರ್ಪಿಸಲಾಗಿರುವ ಫಲಪುಷ್ಪ ಪ್ರದರ್ಶನ ನೋಡಲು ಬಿಜಾಪುರ, ಯಾದಗಿರಿ ಜಿಲ್ಲೆಗಳಿಂದ ಅಪ್ಪು ಅಭಿಮಾನಿಗಳು ಬೆಂಗಳೂರಿಗೆ ಬಂದಿರುವುದು ಮತ್ತೊಂದು ವಿಶೇಷ. 

ಲಾಲ್‌ಬಾಗ್‌ ತೋಟಗಾರಿಕೆ ಉಪ ನಿರ್ದೇಶಕಿ ಕುಸುಮಾ ಜಿ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ತುಂಬಾ ದಿನಗಳಿಂದ ಫಲಪುಷ್ಪ ಪ್ರದರ್ಶನ ಸಿದ್ಧತೆ ನಡೆಯುತ್ತಿದೆ. ಹೊರ ರಾಷ್ಟ್ರಗಳಿಂದ ಸುಮಾರು 45ರಿಂದ 50 ಬಗೆಯ ವಿವಿಧ ಹೂವಗಳಿಂದ ಅಲಂಕಾರ ಮಾಡಲಾಗಿದೆ. ಹಾಲೆಂಡ್‌ನಿಂದ ‘ಡಚ್’ ಜಾತಿ ಹೂವುಗಳು, ಪ್ರೋಟಿಯಸ್ ಟುಲಿಪ್ಸ್ ಹಾಗೂ ನಾಲ್ಕು ಬಣ್ಣದ ಹೈಡ್ರೇಂಜಿಯಾ ಹೂವುಗಳು ಒಂದೇ ಕಡೆ ನೋಡಲು ಲಭ್ಯವಿದೆ. ಸುಮಾರು ಒಂದು ಲಕ್ಷ ಹೂಕುಂಡಗಳಿಂದ ಅಲಂಕಾರ ಮಾಡಲಾಗಿದೆ. ಇಂಪೆಟಿಎನ್ಸ್ ಎಂಬ ಊಟಿ ಮತ್ತು ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಹೂವುಗಳು, ವಿಶಿಷ್ಟ ರೀತಿಯ ಸೇವಂತಿಗೆ ಹೂವುಗಳು ಕಣ್ಣಿಗೆ ಹಬ್ಬ ನೀಡಲಿದೆ. ಊಟಿಯಿಂದ ಫಕ್ಷಿಯಾ ಮತ್ತು ಲಿಲ್ಲಿಸ್ ಹೂವುಗಳನ್ನು ತರಿಸಲಾಗಿದೆ” ಎಂದು ತಿಳಿಸಿದರು.

Image

“ಹೂವಿನ ಮಧ್ಯ ರಾರಾಜಿಸುತ್ತಿರುವ ಒಂದು ರತ್ನ ಪುನೀತ್. ಅಪ್ಪು ಇದ್ದಾರೆ ಎಂಬ ಭಾವನೆಯಲ್ಲೇ ಪ್ರದರ್ಶನ ನೋಡಲು ಬಂದಿದ್ದೇವೆ. ಪ್ರತಿ ವರ್ಷ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಆದರೆ, ಈ ವರ್ಷ ವಿಭಿನ್ನವಾಗಿ ‘ಯುತ್ ಐಕಾನ್’ ಪುನೀತ್ ಅವರ ನೆನಪಿಗಾಗಿ ನಡೆಸುತ್ತಿರುವ ಫುಷ್ಪ ಪ್ರದರ್ಶನ ವಿಭಿನ್ನವಾಗಿದೆ. ಪುನೀತ್ ಅವರು ನಮ್ಮೊಂದಿಗಿಲ್ಲ ಎಂಬುದು ಬೇಸರವಾಗುತ್ತಿದೆ” ಎಂದು ಅಪ್ಪು ಅಭಿಮಾನಿ ಕಾವ್ಯ ಈದಿನ.ಕಾಮ್ ಜೊತೆ ಮಾತನಾಡಿದರು.

“ಪುನೀತ್ ಅವರು ಇಲ್ಲ ಎಂಬುದು ಬೇಸರವಾಗುತ್ತಿದೆ. ಪುನೀತ್ ಅವರ ಪ್ರತಿಮೆಗಳನ್ನು ನೋಡಿದಾಗ ದುಃಖವಾಗುತ್ತದೆ. ಅಪ್ಪು ಜೊತೆಗೆ ಅವರ ಅಪ್ಪ-ಅಮ್ಮನ ಪ್ರತಿಮೆ ನನಗೆ ಇಷ್ಟವಾಯಿತು” ಎಂದು ಪ್ರದರ್ಶನ ನೋಡಲು ಬಂದಿದ್ದ ಲೋಕೇಶ್‌ ತಮ್ಮ ದುಃಖ ವ್ಯಕ್ತಪಡಿಸಿದರು.

“ಅಪ್ಪು ಸರ್ ತುಂಬಾ ಒಳ್ಳೆಯವರು. ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಶಕ್ತಿಧಾಮ ಕಟ್ಟಿಸಿದ್ದಾರೆ. ಅವರ ಕಲಾಕೃತಿ ನೋಡಿ ಖುಷಿ ಆಯ್ತು” ಎಂದು ಪುನೀತ್ ಅವರ ಪುಟ್ಟ ಅಭಿಮಾನಿ ರಾಮ್ ಸ್ವರೂಪ್ ಜೈಕಾರ ಹಾಕಿದರು.

ನಿಮಗೆ ಏನು ಅನ್ನಿಸ್ತು?
16 ವೋಟ್