ಪ್ರಾದೇಶಿಕತೆಗೆ ಮೆರುಗು | ಮನಗೆದ್ದ ಕರಾವಳಿಯ ಯುವ ನಿರ್ದೇಶಕನ 'ಬಾಯಿಲ್ಡ್‌ ರೈಸ್'

ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ನೀಡುವುದಾಗಿ ಘೋಷಿಸಿದೆ. ಇದು ಕರಾವಳಿಗರ ಬಹುಕಾಲದ ಬೇಡಿಕೆಯೂ ಕೂಡ. ಈ ಮಧ್ಯೆ ಜನರ ಆಹಾರ ಪದ್ಧತಿಯ ಮೇಲೆ ಸರ್ಕಾರ ಮಾಡುತ್ತಿರುವ ಹೇರಿಕೆಯನ್ನೇ ಎಳೆಯಾಗಿಟ್ಟುಕೊಂಡು ಕರಾವಳಿಯ ಯುವ ನಿರ್ದೇಶಕರೋರ್ವರು 'ಬಾಯಿಲ್ಡ್‌ ರೈಸ್' ಎಂಬ ತುಳು ಕಿರುಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಈ ಕಿರು ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
Boiled Rice Tulu Short Film

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರು ಅಲ್ಲಿನ ಅಧಿಕ ಉಷ್ಣಾಂಶಕ್ಕೆ ಅನುಗುಣವಾಗಿ 'ಬಾಯಿಲ್ಡ್‌ ರೈಸ್' ಅಂದರೆ ಕುಚ್ಚಲಕ್ಕಿ (ಕೆಂಪಕ್ಕಿ)ಯನ್ನು ಬಳಸುತ್ತಾರೆ. ಆದರೆ ಸರ್ಕಾರ ಪಡಿತರ ವಿತರಣೆಯಲ್ಲಿ ಪಾಲಿಷ್‌ ಮಾಡಿದ ಕಟ್ ಸಂಬರ್(ಬಿಳಿ ಅಕ್ಕಿ) ಎಂಬ ಅಧಿಕ ಉಷ್ಣಾಂಶವಿರುವ ಅಕ್ಕಿಯನ್ನು ವಿತರಿಸುತ್ತಿದೆ. ಇದು ಜನರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ.  ಅಂಗನವಾಡಿ, ಶಾಲೆ ಹಾಸ್ಟೆಲ್‌ಗಳಲ್ಲೂ ನೀಡಲಾಗುವ ಬಿಸಿಯೂಟಕ್ಕೂ ಇದೇ ಅಕ್ಕಿಯನ್ನು ವಿತರಿಸುವ ಮೂಲಕ ಸರ್ಕಾರ ಕರಾವಳಿ ಭಾಗದ ಜನರ ಆಹಾರ ಪದ್ಧತಿಯ ಮೇಲೆ ಹೇರಿಕೆ ಮಾಡುತ್ತಿದೆ ಎಂಬ ಆರೋಪವಿದೆ. ಹಾಗಾಗಿ ಜನರು ಈ ಅಕ್ಕಿಯನ್ನು ಬಳಕೆ ಮಾಡದೆ ಕಡಿಮೆ ದರದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅಥವಾ ಅದನ್ನು ಬಳಸುವವರಿಗೆ ಮಾರಾಟ ಮಾಡುತ್ತಾರೆ. ಇದು ಕರಾವಳಿಯಲ್ಲಿ ಕಾಣಸಿಗುವ ಸಾಮಾನ್ಯ ಸಂಗತಿ ಕೂಡ.

ಈ ಸಾಮಾನ್ಯ ಸಂಗತಿಯನ್ನೇ ಎಳೆಯಾಗಿಟ್ಟುಕೊಂಡು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜಯಂತ್ ನಿಟ್ಟಡೆ ಎಂಬ ಯುವ ನಿರ್ದೇಶಕ 'ಬಾಯಿಲ್ಡ್‌ ರೈಸ್' ಎಂಬ ತುಳು ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಇದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇರಳ ಹಾಗೂ ತಮಿಳುನಾಡಿನ ಸಿನಿಮಾ ಮಂದಿ ತಮ್ಮ ಪ್ರಾದೇಶಿಕ ಅಸ್ಮಿತೆಗಳನ್ನು ತೆರೆಯ ಮೇಲೆ ತರುತ್ತಾರೆ. ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ. ಅದೇ ರೀತಿ ಕರಾವಳಿಯ ತುಳು ಪ್ರಾಂತ್ಯದ ಬದುಕನ್ನು ಚಿತ್ರಿಸಲು ಜಯಂತ್ ಕಿರುಚಿತ್ರದಲ್ಲಿ ಚಿತ್ರಿಸಲು ಯತ್ನಿಸಿದ್ದಾರೆ. ಯಶಸ್ವಿಯೂ ಆಗಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣ, ಕಲಾವಿದರ ಅಭಿನಯ ಹದವಾಗಿ ಬೆರೆತಿದೆ. ಪ್ರಾದೇಶಿಕ ಸೂಕ್ಷ್ಮತೆಗಳನ್ನು ತೆರೆಗೆ ತರುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. 

ಕರಾವಳಿಯ ಬಡ ಮತ್ತು ಮದ್ಯಮ ವರ್ಗದ ಜನರಿಗೆ ಪಡಿತರ ಅಂಗಡಿಗಳಲ್ಲಿ ನೀಡಲಾಗುವ ಅಕ್ಕಿಯ ಗುಣಮಟ್ಟದ ಬಗ್ಗೆ ಮತ್ತು ಅದರಿಂದಾಗಿ ಪಡುತ್ತಿರುವ ಕಷ್ಟಗಳ ಬಗ್ಗೆ ಈ ಕಿರುಚಿತ್ರದ ಮೂಲಕ ತೋರಿಸಿದ್ದಾರೆ. ಹಸಿವು, ನೋವು, ಗಂಡ ಇಲ್ಲದ ಮಹಿಳೆಯೋರ್ವಳು ಬೀಡಿ ಕಟ್ಟಿ ಜೀವನ ಸಾಗಿಸುವ ಹಾಗೂ ಆ ತಾಯಿಯ ಅಸಹಾಯಕತೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಳೆದ ಆಗಸ್ಟ್ 27ರಂದು ಬಿಡುಗಡೆಗೊಂಡಿರುವ ಈ ಕಿರುಚಿತ್ರಕ್ಕೆ ದಿವ್ಯ ಎಲ್ ಮೂಡಿಗೆರೆ ಅವರು ನಿರ್ಮಾಪಕರಾಗಿ ಜಯಂತ್ ನಿಟ್ಟಡೆಯವರಿಗೆ ಸಹಕರಿಸಿದ್ದಾರೆ. 'ಸಾದಿ ಊರುನು ತೂನಗ' ಎಂಬ ಒಂದು ಹಾಡು ಕೂಡ ಇದರಲ್ಲಿದ್ದು, ಸಾಯಿರೂಪ ದಾಲಿಂಬ ಹಾಡಿದ್ದಾರೆ. ಆಂಟನಿ ಸಂಗೀತ ನೀಡಿದ್ದಾರೆ. ಮೇಘಾ ಕೆ, ಯೋಗಿನಿ ಮಚ್ಚಿನ, ಮನ್ವಿತ್ ಎಂಬ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ.

Image
boild rice

ಸಿನಿಮಾಕ್ಕೆ ಸಂಬಂಧಿಸಿ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪದವಿ ಮುಗಿಸಿರುವ ಯುವ ನಿರ್ದೇಶಕ ಜಯಂತ್ ನಿಟ್ಟಡೆ ಅವರನ್ನು ಈ ದಿನ.ಕಾಮ್ ಸಂದರ್ಶನ ನಡೆಸಿತು.

ಈ ವಿಷಯವನ್ನೇ ಆಯ್ಕೆ ಮಾಡಲು ಕಾರಣ ಏನು?
ಮನರಂಜನೆಯೊಂದಿಗೆ ಕಲಾತ್ಮಕ ಕಿರುಚಿತ್ರವನ್ನು ಮಾಡಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ನ್ಯಾಯಬೆಲೆ ಅಂಗಡಿಯಲ್ಲಿ ಕರಾವಳಿಯ ಜನರಿಗೆ ನೀಡಲಾಗುವ ಅಕ್ಕಿಯು ಒಂದು ಸಮಸ್ಯೆ ಅಂತ ತುಂಬಾ ಸಮಯದಿಂದ ನನಗೆ ಕಾಡುತ್ತಲೇ ಇತ್ತು. ಯಾರೂ ಕೂಡ ಇದನ್ನೊಂದು ಸಮಸ್ಯೆಯಾಗಿ ಕಂಡೇ ಇಲ್ಲ ಅನ್ನುವುದು ನನಗೆ ತಿಳಿಯಿತು. ಯಾಕೆಂದರೆ ಸರ್ಕಾರಗಳೇ ನಮ್ಮ ಮೇಲೆ ಆಹಾರದ ಹೇರಿಕೆಯನ್ನು ಮಾಡುತ್ತಿವೆ. ಇದು ನಿಜವಾಗಿಯೂ ಒಂದು ಸಮಸ್ಯೆ ಅಂತ ಜನರಿಗೆ ಅನ್ನಿಸಿಯೇ ಇಲ್ಲ. ಜನರಿಗೆ ಸಮಸ್ಯೆ ಎಂದು ತಿಳಿದಿದ್ದರೂ ಸರ್ಕಾರದ ನಿರ್ಧಾರಕ್ಕೆ ಜನ ಒಗ್ಗಿ ಬಿಟ್ಟಿದ್ದಾರೆ. ಕರಾವಳಿ ಭಾಗದ ಜನರು ಹೆಚ್ಚು ಕುಚ್ಚಲಕ್ಕಿ(BOILED RICE)ಯನ್ನೇ ತಮ್ಮ ಆಹಾರದ ಭಾಗವಾಗಿ ಬಳಸುತ್ತಾರೆ. ಯಾಕೆಂದರೆ ಇಲ್ಲಿನ ಹವಾಮಾನ, ಸಂಸ್ಕೃತಿ ಅದು. ಹಾಗಾಗಿ ಇದು ನಮ್ಮ ಮೇಲೆ ನಡೆಯುತ್ತಿರುವ ಹೇರಿಕೆ ಎಂಬುವುದು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ಮಾಡಿದೆ. ಇದೊಂದು ನಮ್ಮ ಕಲಿಕೆಯ ಭಾಗವಷ್ಟೇ.

ತಯಾರಿ ಹೇಗಿತ್ತು?
ಈ ಕಿರುಚಿತ್ರದಲ್ಲಿ ನಟಿಸಿದವರು ಯಾರೂ ಕಲಾವಿದರಲ್ಲ. ಅವರಿಗೆಲ್ಲ 11 ದಿನ ರಿಹರ್ಸಲ್ ಮಾಡಿಸಿದ್ದೆವು. ಎಲ್ಲವೂ ಓಕೆ ಆದ ಬಳಿಕ 13 ದಿನ ಶೂಟಿಂಗ್ ಮಾಡಿದ್ದೆವು. ಬೆಳ್ತಂಗಡಿ ತಾಲೂಕಿನ ಸೋಣಂದೂರು ಸಮೀಪದ ಹಳ್ಳಿಯೊಂದರಲ್ಲಿ ಶೂಟ್ ಮಾಡಿದ್ದೆವು. ಸ್ನೇಹಿತರ ಬಳಗ ಸಹಕಾರ ನೀಡಿದ್ದರು. ಕಿರುಚಿತ್ರಕ್ಕೆ ದಿವ್ಯ ಎಲ್ ಮೂಡಿಗೆರೆ ಅವರು ನಿರ್ಮಾಪಕರಾಗಿ ಸಹಕರಿಸಿದ್ದಾರೆ. ಹಲವರು ನೆರವು ನೀಡಿದ್ದರಿಂದ, ಒಂದು ಉತ್ತಮ ಕಿರು ಚಿತ್ರವನ್ನಾಗಿ ಮಾಡಲು ಸಾಧ್ಯವಾಯಿತು. ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ.

ಜನರ ಪ್ರೋತ್ಸಾಹ ಹೇಗಿದೆ?
ಸದ್ಯ ಯೂಟ್ಯೂಬ್‌ನಲ್ಲಿ ಹಾಕಿರುವ ಈ ಕಿರುಚಿತ್ರವನ್ನು ಹಲವರು ನೋಡಿ ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಉಜಿರೆಯ ಎಸ್‌ಡಿಎಂನಲ್ಲಿ ನಡೆದ ರಾಜ್ಯಮಟ್ಟದ BVOX APEX ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ. ನಮ್ಮ ಈ ಕಿರುಚಿತ್ರವನ್ನು ವೀಕ್ಷಿಸಿದ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕರಾದ ಮಂಸೋರೆ, ಬಿ ಸುರೇಶ್ ಅವರು ಮೆಚ್ಚಿಕೊಂಡು, ಹುರಿದುಂಬಿಸಿದ್ದಾರೆ. ಚಂಪಾ ಶೆಟ್ಟಿ ಅವರು ನಮಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

ಮಂಸೋರೆಯವರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ, ಚೆಂದ ಹಾಗೂ ಅಷ್ಟೇ ಗಂಭೀರ ವಿಷಯವನ್ನು ಒಳಗೊಂಡ ತುಳು ಕಿರುಚಿತ್ರ. ಎಲ್ಲರೂ ನೋಡಿ" ಎಂದು ಪ್ರೋತ್ಸಾಹಿಸಿದ್ದಾರೆ.

ಬಿ ಸುರೇಶ್ ಅವರು "ನಿಮ್ಮ ಈ ಕಿರುಚಿತ್ರದಲ್ಲಿ ಕಥನ ಜೋಡಿಸಿರುವ ಕ್ರಮ, ಇಮೇಜ್‌ ಗಳ ಬಳಕೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿವೆ. ನೀವು ಹೇಳಲು ಹೊರಟಿರುವ ವಿಷಯ ಸಹ ಸ್ಪಷ್ಟವಾಗಿ ದಾಟುತ್ತಿದೆ. ಮಗು ಮತ್ತು ತಾಯಿ ಇಬ್ಬರ ಪಾತ್ರ ಪೋಷಣೆ ಹಾಗೂ ನಟನೆ ಮರೆಯಲಾಗದ್ದು. ಛಾಯಾಗ್ರಾಹಕರ ಹಾಗೂ ಸಂಕಲನಕಾರರ ಕೆಲಸ ಸಹ ಮೆಚ್ಚುವಂತಿದೆ.  ನಿಮ್ಮಿಂದ ಮತ್ತಷ್ಟು ಈ ಬಗೆಯ ಕೃತಿಗಳು ಬರಲಿ ಎಂದು ಹಾರೈಸುತ್ತೇನೆ" ಎಂದು ಹೇಳಿರುವುದಾಗಿ ಜಯಂತ್ ನಿಟ್ಟಡೆ ಸಂತಸ ಹಂಚಿಕೊಂಡರು.

ಈ ಸುದ್ದಿ ಓದಿದ್ದೀರಾ? ಕರಾವಳಿ ಜಿಲ್ಲೆಯ ಪಡಿತರದಾರರಿಗೆ ಗುಣಮಟ್ಟದ ಕುಚಲಕ್ಕಿ ವಿತರಣೆ: ಒಪ್ಪಿಗೆ ನೀಡಿದ ಸಿಎಂ ಬೊಮ್ಮಾಯಿ

ನಿಮ್ಮ ಮುಂದಿನ ಯೋಜನೆ?
ಕನ್ನಡ ಸಿನಿಮಾದಲ್ಲಿ ಸ್ವತಂತ್ರ ನಿರ್ದೇಶಕನಾಗಬೇಕೆಂಬುದು ನನ್ನ ಕನಸು. ಈಗಾಗಲೇ ಕೆಲವೊಂದು ಯೋಜನೆಗಳಲ್ಲಿ ಕೆಲಸ ಮಾಡಿದ್ದೇನೆ. ಅವಕಾಶ ಸಿಕ್ಕರೆ ನೋಡುತ್ತೇನೆ.

ಸರ್ಕಾರ ಇತ್ತೀಚೆಗೆ ಕರಾವಳಿಗರಿಗೆ ಕುಚ್ಚಲಕ್ಕಿ ಕೊಡುವುದಾಗಿ ಹೇಳಿದೆ. ನಿಮ್ಮ ಅಭಿಪ್ರಾಯ?

ಕಳೆದ ಹಲವಾರು ವರ್ಷಗಳಿಂದ ಕರಾವಳಿಗೆ ಕುಚ್ಚಲಕ್ಕಿ ನೀಡುವುದಾಗಿ ಸರ್ಕಾರ ಹೇಳುತ್ತಲೇ ಬಂದಿದೆ. ಈ ಮಧ್ಯೆ ಇತ್ತೀಚೆಗೆ ಕೂಡ ಘೋಷಣೆ ಮಾಡಿ ಕರಾವಳಿಗರಿಗೆ ಉತ್ತಮ ಗುಣಮಟ್ಟದ ಕುಚ್ಚಲಕ್ಕಿಯನ್ನು ನೀಡುವುದಾಗಿ ಹೇಳಿದ್ದಾರೆ. ಅದು ಒಳ್ಳೆಯ ನಿರ್ಧಾರವೇ. ಆದರೆ ಅದು ಕೇವಲ ಘೋಷಣೆಯಾಗಿ ಅಥವಾ ರಾಜಕೀಯ ಗಿಮಿಕ್ ಆಗಿ ಉಳಿಯದೆ, ಸರಿಯಾಗಿ ಅನುಷ್ಠಾನಕ್ಕೆ ಬರಲೆಂಬುದು ನಮ್ಮ ಆಶಯ. ಅದೇ ರೀತಿ, ಇದು ಕೇವಲ ಕರಾವಳಿಗೆ ಮಾತ್ರವಲ್ಲ, ಎಲ್ಲ ಜಿಲ್ಲೆಯ ಜನರ ಧ್ವನಿ. ರಾಗಿ ಬಳಸುವ ಮಂಡ್ಯ ಮತ್ತಿತರ ಭಾಗದ ಜನರಿಗೆ ಸರ್ಕಾರ ರಾಗಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದವರು ಬಳಸುವ ಆಹಾರ ಪದಾರ್ಥವನ್ನು ನೀಡಲಿ. ಆಯಾಯ ಪ್ರದೇಶದ ಜನರ ಆಹಾರ ಪದ್ಧತಿ ಏನಿದೆಯೋ ಅದನ್ನೇ ಸರ್ಕಾರ ನೀಡಲಿ. 

ಕಿರುಚಿತ್ರ ವೀಕ್ಷಿಸಲು Maayilu Films Youtube Channelಗೆ ಭೇಟಿ ನೀಡಿ:

ನಿಮಗೆ ಏನು ಅನ್ನಿಸ್ತು?
1 ವೋಟ್