- ಬಾಲಿವುಡ್ ಪ್ರವೇಶಿಸಿದ ನಾಗಾಲ್ಯಾಂಡ್ ಮೂಲದ ನಟಿ
- 'ಅನೇಕ್' ಸಿನಿಮಾದಲ್ಲಿ ಬಾಕ್ಸಿಂಗ್ ಪಟುವಾಗಿ ಆಂಡ್ರಿಯಾ
ಅನುಭವ್ ಸಿನ್ಹಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನೈಜ ಘಟನಾಧಾರಿತ ʼಅನೇಕ್ʼ ಸಿನಿಮಾ ಟ್ರೈಲರ್ ಮೂಲಕವೇ ಎಲ್ಲರ ಗಮನ ಸೆಳೆದಿದೆ.
ಆಯುಷ್ಮಾನ್ ಖುರಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಾಗಾಲ್ಯಾಂಡ್ ಮೂಲದ ರೂಪದರ್ಶಿ, ನಟಿ ಆಂಡ್ರಿಯಾ ಕೆವಿಚುಸಾ ಬಾಕ್ಸಿಂಗ್ ಪಟುವಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಆಂಡ್ರಿಯಾ, ಐಡೋ ಪಾತ್ರ ನಿರ್ವಹಿಸಿರುವ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸದ್ಯ 'ಅನೇಕ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವ ಆಂಡ್ರಿಯಾ ಅವರಿಗೆ ಬಾಲಿವುಡ್ನ ಖ್ಯಾತ ತಾರೆಯರು ಆತ್ಮೀಯ ಸ್ವಾಗತ ಕೋರಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಂಡ್ರಿಯಾ ಅವರ ಭಾವಚಿತ್ರ ಹಂಚಿಕೊಂಡು ಸ್ವಾಗತ ಕೋರಿರುವ ನಟಿ ತಾಪ್ಸಿ ಪನ್ನು, "ನಮ್ಮ ದೇಶದಂತೆ ವೈವಿಧ್ಯತೆಯೇ ಸುಂದರ. ಹೊಸದಾಗಿ ನಮ್ಮ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡುತ್ತಿರುವ ನಾಗಾಲ್ಯಾಂಡ್ ಮೂಲದ ಉದಯೋನ್ಮುಖ ನಟಿ ಆಡ್ರಿಯಾ ಕೆವಿಚುಸಾ ಅವರನ್ನು ಎಲ್ಲರೂ ಆತ್ಮೀಯವಾಗಿ ಬರಮಾಡಿಕೊಳ್ಳೋಣ. 'ಅನೇಕ್' ಚಿತ್ರದಲ್ಲಿ ಆಂಡ್ರಿಯಾ ನಿರ್ವಹಿಸಿರುವ ಐಡೋ ಪಾತ್ರ ನೋಡಿ ಬೆಂಬಲಿಸಿ. ಮೇ 27ಕ್ಕೆ ಸಿನಿಮಾ ತೆರೆ ಕಾಣಲಿದೆ ಎಂದು ಬರೆದಿದ್ದಾರೆ.
ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ಕೂಡ ಆಂಡ್ರಿಯಾ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದು, "ಅನೇಕ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವ ನಮ್ಮ ನೆಚ್ಚಿನ ನಾಗಾಲ್ಯಾಂಡ್ನ ಆಂಡ್ರಿಯಾ ಅವರಿಗೆ ಭಾರತೀಯರೆಲ್ಲರೂ ಹೆಚ್ಚು ಪ್ರೀತಿ ನೀಡಿ" ಎಂದು ಮನವಿ ಮಾಡಿದ್ದಾರೆ.
ಭೂಮಿ ಪಡ್ನೇಕರ್, ಕ್ರಿತಿ ಸನೊನ್, ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಅನೇಕ್ ಚಿತ್ರದಲ್ಲಿನ ಆಂಡ್ರಿಯಾ ಅವರ ಪಾತ್ರ ನಿರ್ವಹಣೆ ಮೆಚ್ಚಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಜೊತೆಗೆ ಪಾತ್ರಗಳ ಆಯ್ಕೆಯಲ್ಲಿ ವೈವಿಧ್ಯತೆ ಕಾಯ್ದುಕೊಂಡಿದ್ದಕ್ಕಾಗಿ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
22 ವರ್ಷದ ಆಂಡ್ರಿಯಾ ನಾಗಾಲ್ಯಾಂಡ್ನ ಕೊಹಿಮಾ ಮೂಲದವರು. 15ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು ಹಲವು ಜಾಹಿರಾತುಗಳಲ್ಲಿ ಮಿಂಚಿದ್ದಾರೆ.