
ಸ್ಯಾಂಡಲ್ವುಡ್ನ ಮಳೆ ಹುಡುಗ, ಗೋಲ್ಡನ್ ಸ್ಟಾರ್ ಗಣೇಶ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಗಣೇಶ್ 'ಮುಂಗಾರು ಮಳೆ', 'ಚೆಲುವಿನ ಚಿತ್ತಾರ', 'ಗಾಳಿಪಟ' ಸೇರಿದಂತೆ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡಿಗರ ಪಾಲಿಗೆ ಗೋಲ್ಡನ್ ಸ್ಟಾರ್ ಆಗಿ ಬೆಳೆದರು. ಗಣೇಶ್ ಹುಟ್ಟು ಹಬ್ಬದ ನೆಪದಲ್ಲಿ ಅವರ ಸಿನಿ ಪಯಣದ ಮೈಲಿಗಲ್ಲುಗಳ ಕಿರುನೋಟ ನಿಮಗಾಗಿ.
- ಗಣೇಶ್ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ. 1980ರ ಜುಲೈ 2ರಂದು ಕಿಶನ್ ಮತ್ತು ಸುಲೋಚನ ದಂಪತಿಗಳ ಮೂರನೇ ಪುತ್ರನಾಗಿ ಗಣೇಶ್ ಜನಿಸಿದರು.
- ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಓದಿಕೊಂಡಿರುವ ಶಾಲಾ ದಿನಗಳಿಂದಲೂ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.
- ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗಣೇಶ್, ರಂಗ ಸಂಪದ ಮತ್ತು ರಂಗ ಶಿಕ್ಷಣ ಕೇಂದ್ರದಂತಹ ರಂಗತಂಡಗಳನ್ನು ಸೇರುತ್ತಾರೆ.
- ರಂಗಭೂಮಿಯ ದಿನಗಳಲ್ಲಿ 'ಸದಾರಮೆ' ಮತ್ತು 'ಕದಡಿದ ನೀರು' ಸೇರಿದಂತೆ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸುವ ಮೂಲಕ ಗಣೇಶ್ ಗುರುತಿಸಿಕೊಳ್ಳುತ್ತಾರೆ.
- 2001ರಲ್ಲಿ ಕಿರುತೆರೆ ಪ್ರವೇಶಿಸುವ ಗಣೇಶ್ 'ಕಾಮಿಡಿ ಟೈಮ್' ಎಂಬ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ. ಈ ಕಾರ್ಯಕ್ರಮದ ಮೂಲಕ ಭಾರೀ ಜನಪ್ರಿಯತೆ ಗಳಿಸುವ ಅವರು 'ಕಾಮಿಡಿ ಟೈಮ್ ಗಣೇಶ್' ಎಂದೇ ಹೆಸರು ಮಾಡುತ್ತಾರೆ.
- 'ಕಾಮಿಡಿ ಟೈಮ್' ಗಣೇಶನಾಗಿ ಗುರುತಿಸಿಕೊಂಡ ಬಳಿಕ ಆಗಿನ ಜನಪ್ರಿಯ ಧಾರಾವಾಹಿಗಳಾದ 'ಅತ್ತಿಗೆ', 'ಯದ್ವಾ ತದ್ವಾ', 'ಸಾಧನೆ', 'ಸಮಾಗಮ', 'ಭಾಗ್ಯ', 'ಒಟಾರ', 'ಹದ್ದಿನಕಣ್ಣು', 'ಪ್ರೇಮ ಪಿಶಾಚಿಗಳು', 'ಪಾಪಾ ಪಾಂಡು', 'ಈಶ್ವರಿ' ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಿಂದ ಹಿಡಿದು ಪ್ರಮುಖ ಪಾತ್ರಗಳವರೆಗೆ ಗಣೇಶ್ ಎಲ್ಲಾ ಪಾತ್ರಗಳಲ್ಲೂ ನಟಿಸಿದ್ದರು.
- 2002ರಲ್ಲಿ ಬಿ ಸುರೇಶ್ ನಿರ್ದೇಶನದಲ್ಲಿ ಮೂಡಿಬಂದ 'ಟಪೋರಿ' ಚಿತ್ರದಲ್ಲಿ ಖಳನ ಪಾತ್ರದಲ್ಲಿ ನಟಿಸುವ ಮೂಲಕ ಗಣೇಶ್ ಬೆಳ್ಳಿ ತೆರೆ ಪ್ರವೇಶಿಸಿದರು. 'ಟಪೋರಿ' ಚಿತ್ರದ ನಂತರ 'ತುಂಟ', 'ಅಮೃತಧಾರೆ', 'ಕೌನ್ ಬನೇಗಾ ಕೋಟ್ಯಾಧಿಪತಿ', 'ಬಾ ಬಾರೋ ರಸಿಕ', 'ಮಸಾಲ', 'ಓ ಪ್ರಿಯತಮ', 'ಗೇಮ್' ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಸಿನಿ ಮಂದಿಯ ಗಮನ ಸೆಳೆಯುತ್ತಾರೆ.
- ನಾಲ್ಕೈದು ವರ್ಷಗಳ ಕಾಲ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಭಾರೀ ಜನಪ್ರಿಯತೆ ಗಳಿಸಿದ್ದ ಗಣೇಶ್, ಎಂಡಿ ಶ್ರೀಧರ್ ನಿರ್ದೇಶನದ 'ಚೆಲ್ಲಾಟ' ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುವ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಹೊರ ಹೊಮ್ಮಿದರು.
- 'ಚೆಲ್ಲಾಟ'ದ ಬಳಿಕ ಗಣೇಶ್ ಪ್ರಧಾನ ಪಾತ್ರದಲ್ಲಿ ನಟಿಸಿದ 'ಮುಂಗಾರು ಮಳೆ', 'ಹುಡುಗಾಟ', 'ಚೆಲುವಿನ ಚಿತ್ತಾರ' ಸಿನಿಮಾಗಳು ಒಂದರ ಹಿಂದೆ ಒಂದರಂತೆ ಯಶಸ್ವಿ ಪ್ರದರ್ಶನ ಕಂಡವು. ಸಾಲು ಸಾಲು ಸಿನಿಮಾಗಳ ಭರ್ಜರಿ ಗೆಲುವಿನ ಬೆನ್ನಲ್ಲೇ 'ಕಾಮಿಡಿ ಟೈಮ್ ಗಣೇಶ'ನಿಗೆ ಅಭಿಮಾನಿಗಳು 'ಗೋಲ್ಡನ್ ಸ್ಟಾರ್' ಬಿರುದು ನೀಡಿ ಸಂಭ್ರಮಿಸಿದರು.
- ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗಣೇಶ್ ಮತ್ತು ಪೂಜಾ ಗಾಂಧಿ ಮುಖ್ಯಭೂಮಿಕೆಯ 'ಮುಂಗಾರು ಮಳೆ' ಸಿನಿಮಾ ಪಿವಿಆರ್ ಚಿತ್ರಮಂದಿರಗಳಲ್ಲೂ 460 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದ್ದು ಇತಿಹಾಸ.
- ಕನ್ನಡ ಚಿತ್ರರಂಗದಲ್ಲಿ 21 ವರ್ಷಗಳನ್ನು ಪೂರೈಸಿರುವ ಗಣೇಶ್, ಈವರೆಗೆ 35ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯ ನಂಟನ್ನು ಕಾಪಾಡಿಕೊಂಡಿರುವ ಗಣೇಶ್ 'ಸೂಪರ್ ಮಿನಿಟ್', 'ಗೋಲ್ಡನ್ ಗ್ಯಾಂಗ್'ನಂತಹ ರಿಯಾಲಿಟಿ ಶೋಗಳ ಸಾರಥಿಯಾಗಿಯೂ ಸೈ ಎನ್ನಿಸಿಕೊಂಡಿದ್ದಾರೆ.
ನೀವು ನೋಡಲೇಬೇಕಾದ ಗಣೇಶ್ ಸಿನಿಮಾಗಳು
ಮುಂಗಾರು ಮಳೆ - 2006ರಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಗಣೇಶ್ಗೆ ನಟಿ ಪೂಜಾ ಗಾಂಧಿ ಜೊತೆಯಾಗಿದ್ದರು.
ಚೆಲುವಿನ ಚಿತ್ತಾರ - 2007ರಲ್ಲಿ ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದ 'ಚೆಲುವಿನ ಚಿತ್ತಾರ' ಸಿನಿಮಾಲ್ಲಿ ಗಣೇಶ್ ಮೆಕಾನಿಕ್ ಪಾತ್ರದಲ್ಲಿ ಮಿಂಚಿದ್ದರು. ಚಿತ್ರದಲ್ಲಿನ ಗಣೇಶ್ ಮತ್ತು ಅಮೂಲ್ಯ ಜೋಡಿ ಭಾರೀ ಜನಪ್ರಿಯತೆ ಗಳಿಸಿತ್ತು.
ಗಾಳಿಪಟ - 2008ರಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ 'ಗಾಳಿಪಟ' ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿತ್ತು. ಚಿತ್ರದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಅರಮನೆ - 2008ರಲ್ಲಿ ನಾಗಶೇಖರ್ ನಿರ್ದೇಶನದಲ್ಲಿ ತೆರೆಕಂಡ 'ಅರಮನೆ' ಚಿತ್ರದಲ್ಲಿ ಗಣೇಶ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿರಿಯ ನಟ ಅನಂತ್ ನಾಗ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಮಳೆಯಲಿ ಜೊತೆಯಲಿ - 2009ರಲ್ಲಿ ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ತೆರೆ ಬಿಡುಗಡೆಯಾಗಿದ್ದ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಗಣೇಶ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ನಟಿಯರಾದ ಯುವಿಕಾ ಚೌಧರಿ ಮತ್ತು ಅಂಜನಾ ಸುಖಾನಿ ಚಿತ್ರದಲ್ಲಿ ಗಣೇಶ್ಗೆ ನಾಯಕಿಯರಾಗಿ ಕಾಣಿಸಿಕೊಂಡಿದ್ದರು.
ಆಟೋರಾಜ - 2013ರಲ್ಲಿ ಉದಯ್ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ 'ಆಟೋರಾಜ' ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿ ಗಣೇಶ್ ಆಟೋಚಾಲಕನ ಪಾತ್ರದಲ್ಲಿ ಮಿಂಚಿದ್ದರು.