ಯುಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡ್ತಿದೆ ಭಟ್ಟರ 'ಬೇವರ್ಸಿ ಮನ್ಸಾ' ಹಾಡು

ಬಹು ನಿರೀಕ್ಷಿತ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾದ ಬೇವರ್ಸಿ ಮನ್ಸಾ 'ಲಿರಿಕಲ್‌' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಹಾಡಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಹಾಡು ಹುಟ್ಟಿದ ಬಗ್ಗೆ ಕನ್ನಡ ಹಿರಿಯ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿದ್ದಾರೆ.
Harikate alla girikate

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ʼಹರಿಕಥೆ ಅಲ್ಲ ಗಿರಿಕಥೆʼ ಸಿನಿಮಾ ತೆರೆಗೆ ಬರಲು ದಿನಗಣನೆ ಶುರುವಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಹೊಸ ಲಿರಿಕಲ್‌ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಯೋಗರಾಜ್‌ ಭಟ್ಟರ ಸಾಹಿತ್ಯವಿರುವ ʼಬೇವರ್ಸಿ ಮನ್ಸಾ...ʼ ಹಾಡು ಸದ್ಯ ಯುಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. 

ಈ ಹಿಂದೆ "ಹುಟ್ಟಿದ ಊರನು ಬಿಟ್ಟು ಬಂದಮೇಲೆ ಇನ್ನೇನೂ ಬಿಡುವುದು ಬಾಕಿ ಇದೆ..." ಎಂಬ ಹಾಡಿನ ಮೂಲಕ ಕನ್ನಡದ ಸಿನಿ ಪ್ರೇಕ್ಷಕರ ಕೈ ಹಿಡಿದು ಹಳೆಯ ನೆನಪುಗಳತ್ತ ಕರೆದೊಯ್ದಿದ್ದ ಯೋಗರಾಜ್‌ ಭಟ್ಟರು, ಮತ್ತೆ ಅಂತಹದ್ದೇ ಅರ್ಥಗರ್ಭಿತ ಸಾಲುಗಳ ಮೂಲಕ ಕನ್ನಡದ ಕೇಳುಗರಿಗೆ ಇನ್ನಷ್ಟು ಹತ್ತಿರಾಗುವ ಪ್ರಯತ್ನ ಮಾಡಿದ್ದಾರೆ. ಭಟ್ಟರ ಸಾಹಿತ್ಯವಿರುವ ಮೂರು ನಿಮಿಷಗಳ ʼಬೇವರ್ಸಿ ಮನ್ಸಾ...ʼ ಹಾಡು ಮನುಷ್ಯನ ಕಪಟ, ದುರಾಸೆಯ ಬುದ್ಧಿಯನ್ನು ಮನ ಮುಟ್ಟುವಂತೆ ಹೇಳುತ್ತದೆ. ಹಾಡಿನ ಮಧ್ಯೆ ಬಂದು ಹೋಗುವ ʼಕಾಲು ಇಟ್ಟ ಕಡೆಯಲ್ಲಾ ಮನ್ಸಾ ಏನು ಉಳ್ಸಲ್ಲಾʼ ಎಂಬ ಸಾಲು ಕೇಳುಗರನ್ನು ಯೋಚನೆಗೆ ಹಚ್ಚುವುದರಲ್ಲಿ ಸಂದೇಹವಿಲ್ಲ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಸುಮಧುರ ಕಂಠದಲ್ಲಿ ಈ ಹಾಡು ಮೂಡಿಬಂದಿದ್ದು, ಹಾಡಿಗೆ ವಾಸುಕಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ʼಬೇವರ್ಸಿ ಮನ್ಸಾʼ ಹಾಡು ಹುಟ್ಟಿದ್ದು ಹೇಗೆ ಎಂಬ ಕುರಿತು ಈದಿನ.ಕಾಮ್‌ನೊಂದಿಗೆ ಮಾತನಾಡಿದ ನಿರ್ದೆಶಕ, ಸಾಹಿತಿ ಯೋಗರಾಜ್‌ ಭಟ್‌, "ರಿಷಬ್‌ ಶೆಟ್ಟಿ ಮತ್ತೆ ನಿರ್ದೇಶಕರು ನನಗೆ ಚಿತ್ರದಲ್ಲಿ ಬರುವ ಸನ್ನಿವೇಶವೊಂದನ್ನು ವಿವರಿಸಿದ್ದರು. ಚಿತ್ರದ ಕಥೆಯಲ್ಲಿ ಸಿನಿಮಾದ ಕಾರಣಕ್ಕೆ ಪಾತ್ರದಾರಿಗಳು ತಪ್ಪುದಾರಿ ಹಿಡಿಯುತ್ತಾರೆ. ಅವರು ಸಾಗುವ ಹಾದಿಯ ಕುರಿತು ಹಾಡು ಬೇಕಿದೆ ಎಂದು ತುಂಬಾ ಹಿಂದೆಯೇ ಕೇಳಿದ್ದರು. ಆದರೆ, ನಾನು 'ಗಾಳಿಪಟ-2' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೆ. ವಾಸುಕಿ ವೈಭವ್‌ ಅದಾಗಲೇ ಹಾಡಿನ ಟ್ಯೂನ್‌ ಸಿದ್ಧಪಡಿಸಿದ್ದರು. ಕಳೆದ ತಿಂಗಳು ಶೂಟಿಂಗ್‌ ಬಳಿಕ ಬಿಡುವು ಮಾಡಿಕೊಂಡು ಈ ಹಾಡನ್ನು ಬರೆದೆ. ಒಂದೆರೆಡು ಪೋನ್‌ ಕಾಲ್‌ಗಳಲ್ಲಿ ಹುಟ್ಟಿದ ಹಾಡಿದು" ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ದಿಗಂತ್‌ ಆರೋಗ್ಯ ಸ್ಥಿರ | ವದಂತಿ ಹಬ್ಬಿಸಬೇಡಿ ಎಂದ ನಟನ ತಂದೆ

ನಿಮ್ಮ ಹಾಡುಗಳ ಸಾಹಿತ್ಯ ವಿಭಿನ್ನವಾಗಿರುತ್ತದೆ. ಕೇಳುಗರ ಬದುಕಿಗೆ ತೀರ ಹತ್ತಿರ ಎನ್ನಿಸುವ ಭಾವನೆ ಹುಟ್ಟಿಸುತ್ತೆ. ಇಂತಹ ಹಾಡುಗಳನ್ನು ಬರೆಯಲು ನಿಮಗೆ ಪ್ರೇರಣೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಹಾಡು ಬರೆಯುವಾಗ ನಾನು ಕೇಳುಗನ ಮನಸ್ಥಿತಿಯನ್ನೇ ಹೊಂದಿರುತ್ತೇನೆ. ಒಬ್ಬ ಸಾಮಾನ್ಯ ಬದುಕನ್ನು ನೋಡುವ ಪರಿ ಹೇಗಿರುತ್ತದೆ ಎಂಬ ಅಂಶಗಳನ್ನೇ ಹಾಡುಗಳ ಮೂಲಕ ಹೇಳುವ ಪ್ರಯತ್ನ ಮಾಡುತ್ತೇನೆ. ನಮ್ಮ ದೇಶದ ಸಾಮಾನ್ಯ ವರ್ಗದಲ್ಲಿ ಬಹುದೊಡ್ಡ ವೇದಾಂತ ಅಡಗಿದೆ. ಅದನ್ನು ಸಾಮಾನ್ಯವಾಗಿ ಗ್ರಹಿಸುವ ಪ್ರಯತ್ನ ಮಾಡಿದರೆ ಇಂತಹ ಹಾಡು, ಕತೆಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ ಎಂದು ತಮ್ಮ ಹಾಡಿಗೆ ಪ್ರೇರಣೆಯಾಗುವ ಅಂಶಗಳ ಬಗ್ಗೆ ವಿವರಿಸಿದರು.

ಕರಣ್‌ ಅನಂತ್‌ ಮತ್ತು ಅನಿರುಧ್ ಮಹೇಶ್‌ ಜಂಟಿಯಾಗಿ ನಿರ್ದೇಶಿಸಿರುವ, ರಿಷಬ್‌ ಶೆಟ್ಟಿ ಮುಖ್ಯಭೂಮಿಕೆಯ ʼಹರಿಕಥೆ ಅಲ್ಲ ಗಿರಿಕಥೆʼ ಸಿನಿಮಾ ಜೂನ್‌ 24ರಂದು ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app