ಹಾಸನದಿಂದ ಬಾಲಿವುಡ್‌ಗೆ ಯುಟರ್ನ್ ತೆಗೆದುಕೊಂಡ ಕನ್ನಡ ಕಲಾವಿದ ಕೃಷ್ಣ ಹೆಬ್ಬಾಲೆ ಸಿನಿ ಪಯಣ

ಹಾಸನದಿಂದ ಬಾಲಿವುಡ್‌ಗೆ ಯುಟರ್ನ್ ತೆಗೆದುಕೊಂಡಿರುವ ಕನ್ನಡ ಕಲಾವಿದ ಕೃಷ್ಣ ಹೆಬ್ಬಾಲೆ ಅವರು ‘ಔರೊದ್ 2’ ಎಂಬ ಹಿಂದಿ ವೆಬ್ ಸರಣಿಯಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಿಂದ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈದಿನ.ಕಾಮ್‌ ಜೊತೆಗೆ ಮಾತನಾಡಿದ ಕೃಷ್ಣ ಹೆಬ್ಬಾಲೆ ಅವರು ತಮ್ಮ ಸಿನಿ ಪಯಣದ ಬಗ್ಗೆ ವಿವರಿಸಿದ್ದಾರೆ.

ಕೃಷ್ಣ ಹೆಬ್ಬಾಲೆ ಅವರು 'ಲೂಸಿಯಾ' (2013) ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ನಾಟಕದ ವೇದಿಕೆಯಲ್ಲಿ ಕೃಷ್ಣ ಹೆಬ್ಬಾಲೆಯವರ ಅಭಿನಯವನ್ನು ನೋಡಿದ ನಿರ್ದೇಶಕ ಪವನ್ ಕುಮಾರ್ ಅವರು ಮೊದಲಿಗೆ 'ಲೂಸಿಯಾ' ಚಲನಚಿತ್ರದಲ್ಲಿ ಅಭಿನಯಿಸುವಂತೆ ಕೇಳಿದ್ದರು. 'ಲೂಸಿಯಾ' ಮೂಲಕ ಚಿತ್ರರಂಗದಲ್ಲಿ ಅವರು ತಮ್ಮ ವೃತ್ತಿ ಆರಂಭಿಸಿದರು.

“ನನಗೆ 'ಲೂಸಿಯಾ' ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ಚಿತ್ರರಂಗದ ಬಗ್ಗೆ ಏನೂ ತಿಳಿದಿರಲಿಲ್ಲ” ಎಂದು ಕೃಷ್ಣ ಅವರು ನೆನಪಿಸಿಕೊಳ್ಳುತ್ತಾರೆ. ನಂತರ ರಜತ್ ಮಯಿ ಅವರ ನಿರ್ದೇಶನದ ‘ಸೀಪಾಯಿ’ (2016) ಚಿತ್ರದಲ್ಲಿ ಅಭಿನಯಿಸಿದರು. ಈ ಚಿತ್ರ ಬಿಡುಗಡೆಯಾದ ವರ್ಷದಲ್ಲೆ ಬಹಳಷ್ಟು ಹೆಸರು ಮಾಡಿದ ‘ಯು ಟರ್ನ್’ (2016) ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. 'ಲೂಸಿಯಾ' ಮತ್ತು 'ಯು ಟರ್ನ್' ಎಂಬ ಎರಡು ಚಿತ್ರಗಳು ಕೃಷ್ಣ ಅವರಿಗೆ ಬಹಳಷ್ಟು ಹೆಸರು ತಂದುಕೊಟ್ಟವು. ಈ ಚಿತ್ರಗಳ ನಂತರ ಕೃಷ್ಣ ಅವರು ಅನೇಕ ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡರು.

Eedina App

'ಯು ಟರ್ನ್' ಸಿನಿಮಾ ನೋಡಿದ ನಿರ್ದೇಶಕ ರಾಜ್ ಆಚಾರ್ಯ ಅವರು ‘ಔರೊದ್ 2’ ಎಂಬ ಹಿಂದಿ ವೆಬ್ ಸರಣಿಯಲ್ಲಿ ಅಭಿನಯಿಸುವಂತೆ ಕೇಳಿದರು. ಹೀಗೆ 'ಔರೊದ್ 2' ಸರಣಿಯಲ್ಲಿ ಸೇನಾಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಸದ್ಯ ‘ಔರೊದ್ 2’ ವೆಬ್ ಸರಣಿಯು 'ಸೋನಿ ಲಿವ್'ನಲ್ಲಿ ಪ್ರಸಾರವಾಗುತ್ತಿದ್ದು, ವೀಕ್ಷಕರಿಂದ ಪ್ರಶಂಸೆ ಮತ್ತು ಮೆಚ್ಚುಗೆ ಪಡೆದಿದೆ.

ಕೃಷ್ಣ ಹೆಬ್ಬಾಲೆ ಅವರ ಬಾಲ್ಯ, ಶಿಕ್ಷಣ ಹಾಗೂ ರಂಗಭೂಮಿ

AV Eye Hospital ad

ಕೃಷ್ಣ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೆ ಆದರೂ, ಮೂಲತಃ ಇವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೆಬ್ಬಾಲೆ ಗ್ರಾಮದವರು. ಅಜ್ಜ ಕೃಷಿಕರಾಗಿದ್ದರು. ಆದರೆ ತಂದೆ ಮಂಜುನಾಥ್ ರಾವ್ ಅವರು ಶಿಕ್ಷಣವನ್ನು ಮುಗಿಸಿ ಉದ್ಯೋಗ ಅರಸಿ, ತಾಯಿ ಶಾರದ ಮಣಿ ಅವರ ಜೊತೆ ಬೆಂಗಳೂರಿಗೆ ಬಂದರು. 47 ವರ್ಷದ ಕೃಷ್ಣ ಅವರು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಮಂಜುನಾಥ್ ರಾವ್ ಅವರು ಸಹ ಕಲಾವಿದರಾಗಿದ್ದು, ಮೈಸೂರಿನಲ್ಲಿ ‘ಮೈಸೂರು ಪಪ್ಪೆಟರ್ಸ್’ (ಬೊಂಬೆಯಾಟಗಾರರು) ಎಂಬ ತಂಡದ ಜೊತೆಗೆ ಅವರು ಬೊಂಬೆ ಪ್ರದರ್ಶನ (Puppet show) ಮತ್ತು ನಾಟಕಗಳನ್ನು ಮಾಡುತ್ತಿದ್ದರು.

ಸಾಹಿತಿ ಮತ್ತು ಕಲಾವಿದರಾದ ದಾರ್ಶಿತಿ ದಿಕ್ಷಿತ್ ಅವರ ಜೊತೆಗೆ ಒಡನಾಟವಿದ್ದ ಅವರ ತಂದೆ ದೇಶವಿಡೀ ಬೊಂಬೆ ಪ್ರದರ್ಶನ ನೀಡುತ್ತಿದ್ದರು. ಹಾಗಾಗಿ “ಚಿಕ್ಕ ವಯಸ್ಸಿನಿಂದಲೇ ತಂದೆಯ ಸ್ಫೂರ್ತಿಯಿಂದ ಕಲೆಯ ನಂಟು ಬೆಳೆದಿರಬಹುದು” ಎಂದು ಕೃಷ್ಣ ಅವ್ರು ಅಭಿಪ್ರಾಯಪಡುತ್ತಾರೆ.

ಎಂಇಎಸ್ ಪ್ರೌಢಶಾಲೆಯಲ್ಲಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ನಂತರ ಪಿಎಚ್ಎಸ್ ಕಾಲೇಜಿನಲ್ಲಿ ಓದಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು)ನಲ್ಲಿ ವಾಣಿಜ್ಯ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು. 

‘ಸಂಚಯ’ ಎಂಬ ನಾಟಕ ತಂಡದ ಜೊತೆಗೆ ಒಡನಾಟವನ್ನು ಶಾಲಾ ದಿನಗಳಿಂದಲೇ ಹೊಂದಿದ್ದ ಕೃಷ್ಣ ಅವರು, ಆ ತಂಡದ ಜೊತೆಗೆ ಸೇರಿಕೊಂಡಿದ್ದರು. ಜಿ ಎಸ್ ರಾಮ್‌ರಾವ್‌ ಎಂಬ ಗಣಿತ ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಶುರು ಮಾಡಿದ ರಂಗತಂಡ ಸಂಚಯ. ಬಹುತೇಕ ಸಂಚಯ ಪ್ರಾರಂಭವಾದಾಗಿನಿಂದ ಆ ತಂಡದ ಭಾಗವಾಗಿರುವ ಕೃಷ್ಣ  ಅವರು, “ಆ ತಂಡದಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೀನಿ. ಜೊತೆಗೆ ತಂಡದಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಿದ್ದೀನಿ” ಎಂದು ಹೇಳುತ್ತಾರೆ. 

ಕಾಲೇಜು ದಿನಗಳಲ್ಲೇ ರಂಗಭೂಮಿ ಮೇಲೆ ಆಸಕ್ತಿ ಹೊಂದಿದ್ದರು. ಸ್ನೇಹಿತರ ಜೊತೆ ಸೇರಿ ಅಂತರ ಕಾಲೇಜುಗಳ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಬೆಂಗಳೂರಿನ ‘ಪ್ರಯೋಗ ರಂಗ’ ಎಂಬ ನಾಟಕದ ತಂಡದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. “ತುಂಬಾ ವರ್ಷಗಳಿಂದ ಕರ್ನಾಟಕದಲ್ಲಿ ಈ ತಂಡವು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ತಂಡದಿಂದ ನೂರಾರು ಕಲಾವಿದರು ರಂಗಭೂಮಿಗೆ ಮತ್ತು ನಾನಾ ಕಲಾ ಮಾಧ್ಯಮಗಳಿಗೆ ಪರಿಚಯ ಆಗಿದ್ದಾರೆ. ಅವರಲ್ಲಿ ನಾನೂ ಒಬ್ಬ” ಎಂದು ಕೃಷ್ಣ ಹೇಳುತ್ತಾರೆ. ಜೊತೆಗೆ ಅಲ್ಲಿಂದ ಕೃಷ್ಣ ಹೆಬ್ಬಾಲೆ ಅವರ ರಂಗಭೂಮಿ ಪಯಣ ಶುರುವಾಯಿತು. 

ಬಾಲಿವುಡ್ ಅಂಗಳದಲ್ಲಿ ಕೃಷ್ಣ ಅವರು

'ಯು ಟರ್ನ್' ಸಿನಿಮಾ ನೋಡಿದ ನಿರ್ದೇಶಕ ರಾಜ್ ಆಚಾರ್ಯ ಅವರು ‘ಔರೊದ್ 2’ ವೆಬ್ ಸರಣಿಯಲ್ಲಿ ಅಭಿನಯಿಸಲು ಹೇಳಿದರು. ನಾಟಕದ ಸಲುವಾಗಿ ಅವರು ಈಗಾಗಲೇ ಎರಡು ಹಿಂದಿ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಅಷ್ಟರ ಮಟ್ಟಿಗೆ ಕೃಷ್ಣ ಅವರಿಗೆ ಹಿಂದಿ ಭಾಷೆಯ ಪರಿಚಯವಿತ್ತು. ಹಾಗಾಗಿ ಬಾಲಿವುಡ್‌ಗೆ ಹೋದಾಗ ಭಾಷೆಯ ಕಾರಣಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಕೃಷ್ಣ ಅವರು ಹೇಳುತ್ತಾರೆ. 

ದಕ್ಷಿಣ ಭಾರತದವರಿಗೆ ಅಲ್ಲಿನ ಭಾಷೆಯ ದಾಟಿಯಲ್ಲಿ ಮಾತನಾಡಲು ಸಮಸ್ಯೆಯಾಗಬಹದು. ಆ ಕಾರಣಕ್ಕೆ ಕೃಷ್ಣ ಅವರು ಕೆಲವು ಸಿದ್ಧತೆಗಳನ್ನು ಮಾಡಿಕೊಂಡು ಬಾಲಿವುಡ್‌ಗೆ ಹೋದರು. ಸಿದ್ಧತೆಗಾಗಿ ಹಿಂದಿ ಭಾಷೆಯ ನಿಘಂಟುಗಳ ಆಡಿಯೋಗಳನ್ನು ಕೇಳುತ್ತಿದ್ದರು. ಜೊತೆಗೆ ಚಿತ್ರ ತಂಡದವರು ಭಾಷೆಯ ತರಬೇತಿಯನ್ನು ಸಹ ನೀಡುತ್ತಿದ್ದರು. 

“ನನಗೆ ಭಾಷೆಯ ಕಾರಣಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ನನ್ನ ಸಹ ಕಲಾವಿದರೊಬ್ಬರು ಪ್ರತೀ ದಿನ ಚಿತ್ರೀಕರಣಕ್ಕೂ ಮುನ್ನ ಸಂಭಾಷಣೆಯ ಬಗ್ಗೆ ನನಗೆ ಮರು ಪರಿಚಯ ಮಾಡಿಕೊಡುತ್ತಿದ್ದರು. ಉಚ್ಛಾರಣೆ ತಪ್ಪಾಗಿದೆಯಾ ಎಂದು ಪರೀಕ್ಷಿಸುತ್ತಿದ್ದರು. ತುಂಬಾ ಸಹಕಾರ ನೀಡುತ್ತಿದ್ದರು. ಚಿತ್ರ ತಂಡದವರು ನಮ್ಮನ್ನು ತುಂಬಾ ಮುದ್ದಾಗಿಯೇ ನೋಡಿಕೊಳ್ಳುತ್ತಿದ್ದರು. ಸ್ಯಾಂಡಲ್‌ವುಡ್‌ನಿಂದ ಅಥವಾ ಬೇರೆಕಡೆಯಿಂದ ಬಂದವರು ಎಂದು ತಾರತಮ್ಯ ಮಾಡುತ್ತಿರಲಿಲ್ಲ. ತಾರತಮ್ಯಕ್ಕೆ ಅವಕಾಶವೇ ಇರಲಿಲ್ಲ. ಚಿತ್ರೀಕರಣ ವೇಳೆಯಲ್ಲಿ ಮನೆಯ ವಾತಾವರಣವಿತ್ತು” ಎಂದು ಕೃಷ್ಣ ತಮ್ಮ ಅನುಭವ ಹಂಚಿಕೊಂಡರು.

ಕೃಷ್ಣ ಅವರು ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ್ದು, “ಸ್ವತಂತ್ರವಾಗಿ ಮಾಡುವ ಕನ್ನಡದ ಸಿನಿಮಾಗಳಲ್ಲಿ ಕನಿಷ್ಠ ಬಜೆಟ್ ಅನ್ನು ಪರಿಗಣಿಸಲಾಗುತ್ತದೆ. ಬಾಲಿವುಡ್‌ನಲ್ಲಿ ಎಲ್ಲವನ್ನು ಚೆನ್ನಾಗಿ ಯೋಜನೆ ಮಾಡುತ್ತಾರೆ. ಪ್ರತಿ ದಿನ ಚಿತ್ರೀಕರಣದ ಮೊದಲೆ ಸಂಪೂರ್ಣ ವಿವರ ಕಲಾವಿದರಿಗೆ ತಿಳಿದಿರುತ್ತದೆ. ಜೊತೆಗೆ ಚಿತ್ರೀಕರಣದಲ್ಲಿನ ವ್ಯವಸ್ಥೆ ವಿವರವಾಗಿ ಮತ್ತು ವಿಸ್ತಾರವಾಗಿರುತ್ತದೆ. ಕನ್ನಡದಲ್ಲಿ ಸಹ ಹಾಗೇ ಕೆಲವು ಚಿತ್ರಗಳಲ್ಲಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ನನಗೆ ಇಲ್ಲಿಗೂ ಅಲ್ಲಿಗೂ ಅಂತಹ ವ್ಯತ್ಯಾಸ ಏನು ಕಾಣುವುದಿಲ್ಲ” ಎಂದು ಬಾಲಿವುಡ್ ಮತ್ತು ಕನ್ನಡ ಚಿತ್ರರಂಗದ ಬಗೆಗಿನ ಅಭಿಪ್ರಾಯ ತಿಳಿಸಿದರು. 

“ಚಲನಚಿತ್ರ ತಯಾರಿಕೆಯ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಬಾಲಿವುಡ್‌ನಲ್ಲಿ ತಾಂತ್ರಿಕವಾಗಿ ಹೆಚ್ಚು ಸಿಬ್ಬಂದಿಗಳು ಇರುತ್ತಾರೆ. ನನಗೆ ಅಲ್ಲಿ ಯಾವುದೇ ಕೆಟ್ಟ ಅನುಭವ ಆಗಿಲ್ಲ” ಎಂದು ಹೇಳಿದರು. 

“ಕಲಾವಿದನೊಬ್ಬನಿಗೆ ಅಭಿನಯ ಚೆನ್ನಾಗಿ ಬಂದರೆ ಅದೇ ಅವರಿಗೆ ಸಿಗುವ ಯಶಸ್ಸು. ಕೆಲವು ಸಿನಿಮಾಗಳಲ್ಲಿ ಅಭಿನಯ ಉತ್ತಮವಾಗಿದೆ ಎಂದರೆ ಅಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿರುತ್ತದೆ ಎಂಬ ಅರ್ಥ. ಕೆಲವೊಮ್ಮೆ ಕಲಾವಿದರು ಎಷ್ಟೇ ಪ್ರಯತ್ನ ಪಟ್ಟರೂ ಸಿನಿಮಾ ಚೆನ್ನಾಗಿ ಆಗಿರುವುದಿಲ್ಲ. ಕಲಾವಿದರಿಗೆ ಏಳು ಬೀಳು ಇದ್ದೇ ಇರುತ್ತದೆ. 'ಔರೊದ್ 2'ನಲ್ಲಿ ನನ್ನ ಅಭಿನಯ ಚೆನ್ನಾಗಿದೆ ಎಂದು ಎಲ್ಲರು ಹೇಳುತ್ತಿದ್ದಾರೆ. ಅಭಿನಯ ಎನ್ನುವುದು ಒಬ್ಬ ನಟನಿಂದ ಮಾತ್ರ ಆಗುವುದಲ್ಲ, ಎಲ್ಲ ಕಲಾವಿದರ ಸಹಯೋಗದಿಂದ ಹೊರಹೊಮ್ಮುವಂತಹದ್ದು. ಆದರೆ, ಕೊನೆಗೆ ಒಬ್ಬ ನಟ ಮಾತ್ರ ಕಾಣುತ್ತಾನೆ. ಈ ಚಿತ್ರದಲ್ಲಿ ನನ್ನ ಅಭಿನಯ ಚೆನ್ನಾಗಿ ಆಗಿದೆ. ಆ ಬಗ್ಗೆ ನನಗೆ ಸಂತೋಷವಿದೆ” ಎಂದು 'ಔರೊದ್ 2' ವೆಬ್ ಸರಣಿಯ ಬಗ್ಗೆ ತಿಳಿಸಿದರು.

“ಚಿತ್ರರಂಗದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಭೇದ-ಭಾವ ನನಗೆ ಕಾಣಿಸಿಲ್ಲ. ಯಾಕೆಂದರೆ, 'ಔರೊದ್'ನಲ್ಲಿ ಮುಖ್ಯಪಾತ್ರದಾರಿ ಒಬ್ಬರು ಬೆಂಗಾಲಿ ಭಾಷಿಕರು. ಅವರಿಗೂ ಹಿಂದಿ ಭಾಷೆಯ ಸಮಸ್ಯೆ ಇತ್ತು. ಅವರದ್ದು ಬೆಂಗಾಲಿ ಮಾತೃ ಭಾಷೆ. ಇಲ್ಲಿನ ಭಾಷೆಯ ಅಭಿನಯಕ್ಕೆ ಒಗ್ಗೂಡಿಕೊಂಡಿದ್ದೀವಿ. ಆದರೆ, ನಮ್ಮ ನಟನಾ ಸಾಮರ್ಥ್ಯಕ್ಕೆ ಬೆಲೆ ಸಿಗುತ್ತದೆ. ನಾವು ಚೆನ್ನಾಗಿ ಅಭಿನಯಿಸಿದರೆ ನಮ್ಮನ್ನು ಕರೆಯುತ್ತಾರೆ. ಇಲ್ಲದಿದ್ದರೆ ಕರೆಯುವುದಿಲ್ಲ. ಜೊತೆಗೆ ಭೇದ-ಭಾವದ ಬಗ್ಗೆ ಮಾತನಾಡುವುದಕ್ಕೆ ನನ್ನ ಅನುಭವ ಕಡಿಮೆ” ಎಂದು ತಿಳಿಸಿದರು.

“ಔರೊದ್ 2 ಸರಣಿಯಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಕಲಾವಿದರು ಮತ್ತು ವಿಜಯ್‌ ಕೃಷ್ಣ ಅವರು ಸಹ ಚೆನ್ನಾಗಿ ಅಭಿನಯಿಸಿದ್ದಾರೆ. 'ಔರೊದ್' ಸರಣಿಯಲ್ಲಿ ನಟಿಸಲು ತಂಡವೇ ನನ್ನನು ಕರೆಯಿತು. ನನಗೆ ಅಲ್ಲಿ ಅಭಿನಯಿಸಬೇಕು ಎಂಬ ನಿರೀಕ್ಷೆ ಇರಲಿಲ್ಲ” ಎಂದು ಹೇಳಿದರು. 

ಪಾತ್ರಗಳ ಬಗ್ಗೆ ಕೃಷ್ಣ ಅವರ ಮಾತು

“ಯಾವ ಪಾತ್ರ ಚೆನ್ನಾಗಿ ಮಾಡುತ್ತೀವಿ, ಮುಂದಿನ ಚಿತ್ರಗಳಲ್ಲಿ ಅಂತಹದೇ ಪಾತ್ರಕ್ಕೆ ಕರೆಯುತ್ತಾರೆ. 'ಸಕುಟುಂಬ ಸಮೇತ’ ಚಿತ್ರದಲ್ಲಿ ಒಬ್ಬ ತಂದೆಯ ಪಾತ್ರ ಮಾಡಿದ್ದೀನಿ. ಆ ಪಾತ್ರ ತುಂಬಾ ಚೆನ್ನಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಒಂದೇ ತರಹದ ಪಾತ್ರಕ್ಕೆ ಕರೆದಾಗ ಬೇಸರವಾಗುತ್ತದೆ” ಎಂದರು.

“ಮನಸ್ಥಿತಿಯ ಬಗ್ಗೆ, ಮನಸ್ಸಿನ ತೋಳಲಾಟದ ಬಗ್ಗೆ ಚಿತ್ರ ಮಾಡುವ ಆಸೆಯಿದೆ. ಮಧ್ಯವಯಸ್ಸಿನ (Midlife) ಸಮಸ್ಯೆಯ ಬಗ್ಗೆ, ಮುಖ್ಯವಾಗಿ ಮಧ್ಯವಯಸ್ಸಿನಲ್ಲಿ ಪುರುಷರಿಗೆ ಆಗುವ ತೋಳಲಾಟದ ಜೊತೆಗೆ ಕಾಡುವ ಯೋಚನೆಗಳು, ಆಸೆಗಳ ಬಗ್ಗೆ ತೋರಿಸುವಂತಹ ಕಥೆಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿದೆ. ಈ ಬಗ್ಗೆ ಚರ್ಚೆಯಾಗಿರುವುದು ಕಡಿಮೆ. ಅಂತಹ ವಿಷಯಗಳ ಮೇಲೆ ಚರ್ಚೆಯಾಗುವಂತ ಚಿತ್ರಗಳನ್ನು ಮಾಡಬೇಕು” ಎಂದು ಪಾತ್ರದ ಆಯ್ಕೆಯ ಬಗ್ಗೆ ತಿಳಿಸಿದರು. 

“ನಟನಾ ಮನಸ್ಸಿಗೆ ಖುಷಿಯಾಗುವುದು ಅಭಿನಯದ ಬಗ್ಗೆ ಯಾರಾದರೂ ಒಳ್ಳೆಯ ಮಾತುಗಳನ್ನು ಹೇಳಿದಾಗ. ನನ್ನ ಅಭಿನಯದ ಬಗ್ಗೆ ಮಾತನಾಡಿದಾಗ ಸಂತೋಷ ಕೊಡುತ್ತದೆ. ಯಾರೇ ಆಗಲಿ ನನ್ನ ನಟನೆಯ ಬಗ್ಗೆ ಚೆನ್ನಾಗಿ ಮಾಡಿಲ್ಲ ಎಂದು ಹೇಳಿದರೆ ಅದನ್ನ ಕೇಳಿಸಿಕೊಳ್ಳುವ ಕಿವಿ ನನ್ನಲ್ಲಿದೆ” ಎಂದು ಅವರು ಹೇಳಿದರು.

ಮನ್ಸೋರೆ ಅವರ ನಿರ್ದೇಶನದಲ್ಲಿ ಅಭಿನಯ

'ಹರಿವು', 'ನಾತಿಚರಾಮಿ'ಯಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ, ರಾಷ್ಟ್ರ ಪ್ರಶಸ್ತಿ ವಿಜೇತರಾದ ಮನ್ಸೋರೆ ಅವರ ನಿರ್ದೇಶನದ ‘19-20-21’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಕೃಷ್ಣ ಅವರ ಅಭಿನಯದ ಕಿರುಚಿತ್ರ ಮತ್ತು ಚಲನಚಿತ್ರಗಳ ಪಟ್ಟಿ

 1. ಶಿವರಾಜ್‌ಕುಮಾರ್ ಅಭಿನಯದ 'ಕವಚ' ಚಿತ್ರ (2019)
 2. ಪ್ರಪೋಸಲ್ ಕನ್ನಡದ ಕಿರುಚಿತ್ರ (2020)
 3. ಸಿಪಾಯಿ (2016)
 4. ದೃಶ್ಯ 2 (2021)
 5. ತ್ರಯಾ (2019)
 6. ಸಿದ್ದು ಕಿರುಚಿತ್ರ (2013)
 7. ಆಶಿಕ್ ಫಿರ್ ಏಕ್ ಬಾರ್ ಹಿಂದಿ ಕಿರುಚಿತ್ರ (2019)
 8. ಲಾ (2020)
 9. ಬೀರಬಲ್ (2019)
 10. ಆಕ್ಟ್ 1978 (2020)
 11. ಲೂಸಿಯಾ (2013)
 12. ಸಕುಟುಂಬ ಸಮೇತ (2022)
 13. ಗರುಡ (2022)
 14. ಲವ್ ಲೈಫ್ & ಪಕೋಡಿ ತೆಲುಗು (2021)
 15. ತಾಯಿಗೆ ತಕ್ಕ ಮಗ (2018)
 16. ದಿ ಟೆರರಿಸ್ಟ್ (2018)
 17. ಯುಟರ್ನ್ (2016)
 18. ಆರನೇ ಮೈಲಿ (2018)
 19. ಔರೊದ್ 2 ವೆಬ್‌ ಸರಣಿ (2022)
ನಿಮಗೆ ಏನು ಅನ್ನಿಸ್ತು?
4 ವೋಟ್
eedina app