ಕೆಜಿಎಫ್‌ 2 ವರ್ಸಸ್ ಬೀಸ್ಟ್‌ | ಗಲ್ಲಾ ಪಟ್ಟಿಗೆಯಲ್ಲಿ ಗೆಲ್ಲುವವರು ಯಾರು?

  • ಯಶ್, ಪ್ರಶಾಂತ್ ನೀಲ್ ಸೇರಿ ಚಿತ್ರತಂಡದ ಅಬ್ಬರದ ಪ್ರಚಾರ
  • ವಿವಾದಗಳಿಂದಲೂ ಸುದ್ದಿಯಲ್ಲಿರುವ ವಿಜಯ್‌ ನಟನೆಯ ಬೀಸ್ಟ್‌

'ಕೆಜಿಎಫ್-2' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಯಶ್, ಪ್ರಶಾಂತ್ ನೀಲ್ ಸೇರಿದಂತೆ ಇಡೀ ಚಿತ್ರತಂಡ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಆದರೆ, ಈ ಬಹುನಿರೀಕ್ಷಿತ ಚಿತ್ರಕ್ಕೆ ಇದೀಗ ಹೊಸ ಸವಾಲು ಎದುರಾಗಿದೆ.

'ಕೆಜಿಎಫ್-2' ಬಿಡುಗಡೆಗೂ ಮೊದಲು ತಮಿಳಿನ ಖ್ಯಾತ ನಟ ದಳಪತಿ ವಿಜಯ್ ನಟನೆಯ 'ಬೀಸ್ಟ್' ಚಿತ್ರ ತೆರೆ ಕಾಣುತ್ತಿದೆ. 'ಬೀಸ್ಟ್' ಕೂಡ 'ಕೆಜಿಎಫ್‌'ನಂತೆ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಜೊತೆಗೆ ಕೆಲವು ವಿವಾದಗಳಿಂದಲೂ ಈ ಸಿನಿಮಾ ಸುದ್ದಿಯಾಗಿದೆ. ತಮಿಳು, ಕನ್ನಡ, ತೆಲುಗು ಸೇರಿ 5 ಭಾಷೆಗಳಲ್ಲಿ ಸಿದ್ಧಗೊಂಡಿರುವ ಈ ಸಿನಿಮಾ ಏಪ್ರಿಲ್ 13ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.

ಬೀಸ್ಟ್ ಬಿಡುಗಡೆಯಾದ ಮರುದಿನ, ಅಂದರೆ ಏಪ್ರಿಲ್ 14ರಂದು 'ಕೆಜಿಎಫ್-2' ತೆರೆಗೆ ಬರುತ್ತಿದೆ. 'ಕೆಜಿಎಫ್-2' ಕೂಡ ಬೀಸ್ಟ್ ಚಿತ್ರದಂತೆ 5 ಭಾಷೆಗಳಲ್ಲಿ ಸಿದ್ಧಗೊಂಡಿದೆ. ಈ ಎರಡೂ ಚಿತ್ರಗಳು ಬಹುಭಾಷೆಯಲ್ಲಿ ಒಂದೇ ದಿನದ ಅಂತರದಲ್ಲಿ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿರುವುದರಿಂದ ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಪೈಪೋಟಿ ಏರ್ಪಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಆದರೆ, 'ಕೆಜಿಎಫ್-2' ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಡುಗಡೆಗೂ ಮೊದಲೇ 'ಕೆಜಿಎಫ್-2' ಟಿಕೆಟ್ ದಾಖಲೆ ಮಟ್ಟದಲ್ಲಿ ಬಿಕರಿಯಾಗಿವೆ. ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾವೊಂದು ಗ್ರೀಸ್‌ ದೇಶದಲ್ಲಿ ತೆರೆ ಕಾಣುತ್ತಿದೆ. ಐಮ್ಯಾಕ್ಸ್ ಗುಣಮಟ್ಟದಲ್ಲಿ ತೆರೆ ಕಾಣುತ್ತಿರುವ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ 'ಕೆಜಿಎಫ್-2' ಪಾತ್ರವಾಗಿದೆ. ಗ್ರೀಸ್ ಮಾತ್ರವಲ್ಲ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ಯುರೋಪ್, ಆಫ್ರಿಕನ್ ಮತ್ತು ಗಲ್ಫ್ ರಾಷ್ಟ್ರಗಳಲ್ಲೂ 'ಕೆಜಿಎಫ್-2' ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಒಟ್ಟು 9,500 ಪರದೆಗಳ ಪೈಕಿ 6,000 ಪರದೆಗಳಲ್ಲಿ 'ಕೆಜಿಎಫ್-2' ಪ್ರದರ್ಶನ ಕಾಣಲಿದೆ. ರಾಜ್ಯದ 925 ಪರದೆಗಳ ಪೈಕಿ 500 ಪರದೆಗಳಲ್ಲಿ ಚಿತ್ರ ಕನ್ನಡದಲ್ಲೇ ತೆರೆ ಕಾಣುತ್ತಿದ್ದು, 50 ಪರದೆಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಕೂಡ ಶುರುವಾಗಿದೆ. ಇಂಗ್ಲೆಂಡ್‌ನಲ್ಲಿ ಮುಂಗಡ ಟಿಕೆಟ್ ಖರೀದಿ ಪ್ರಕ್ರಿಯೆ ಶುರುವಾದ ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ 5,000 ಟಿಕೆಟ್‌ಗಳು ಮಾರಾಟವಾಗಿವೆ. 

'ಬೀಸ್ಟ್' ಚಿತ್ರದ ವಿಷಯಕ್ಕೆ ಬರುವುದಾದರೆ ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಚಿತ್ರ ಕೂಡ 'ಕೆಜಿಎಫ್-2'ನಂತೆ ಭಾರತದಲ್ಲೇ ಅಂದಾಜು 6,000 ಪರದೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ತಮಿಳುನಾಡಿನಲ್ಲಿ ಒಟ್ಟು 1,200 ಪರದೆಗಳಿದ್ದರೆ, ಅದರಲ್ಲಿ 800- 850 ಪರದೆಗಳನ್ನು 'ಬೀಸ್ಟ್' ಚಿತ್ರದ ಪ್ರದರ್ಶನಕ್ಕೆ ನೀಡಲಾಗುವುದು ಎಂದು ಅಲ್ಲಿನ ಥಿಯೆಟರ್ ಮತ್ತು ಮ್ಲಟಿಫ್ಲೆಕ್ಸ್ ಮಾಲೀಕರ ಸಂಘ ತಿಳಿಸಿದೆ. ಅಷ್ಟೇ ಅಲ್ಲ ಅಮೆರಿಕದಲ್ಲೂ 1,000ಕ್ಕಿಂತ ಹೆಚ್ಚು ಪರದೆಗಳಲ್ಲಿ 'ಬೀಸ್ಟ್' ತೆರೆಕಾಣುತ್ತಿದೆ. ಆದರೆ, ಹಿಂಸೆ ಮತ್ತು ಭಯೋತ್ಪಾದನೆಯ ದೃಶ್ಯಗಳನ್ನು ವಿಜೃಂಭಿಸಲಾಗಿದೆ ಎಂಬ ಕಾರಣಕ್ಕೆ 'ಬೀಸ್ಟ್' ಚಿತ್ರವನ್ನು ಗಲ್ಫ್ ರಾಷ್ಟ್ರಗಳಾದ ಕುವೈತ್ ಮತ್ತು ಕತಾರ್‌ನಲ್ಲಿ ನಿಷೇಧಿಸಲಾಗಿದೆ. ನಿಷೇಧವೇ ವಿವಾದವಾಗಿಯೂ ಚಿತ್ರಕ್ಕೆ ಹೆಚ್ಚುವರಿ ಪ್ರಚಾರವೂ ಸಿಕ್ಕಿದೆ.

ಕರ್ನಾಟಕದಲ್ಲಿ 'ಕೆಜಿಎಫ್-2' ಚಿತ್ರಕ್ಕೆ ಮೀಸಲಿಟ್ಟಿರುವ ಪರದೆಗಳನ್ನು ಹೊಲಿಸಿಕೊಂಡರೆ ತಮಿಳುನಾಡಿನಲ್ಲಿ 'ಬೀಸ್ಟ್' ಚಿತ್ರಕ್ಕೆ ಹೆಚ್ಚು ಪರದೆಗಳನ್ನು ನೀಡಲಾಗಿದೆ. ಗಲ್ಫ್‌ ರಾಷ್ಟ್ರಗಳಲ್ಲಿ 'ಬೀಸ್ಟ್‌' ಚಿತ್ರವನ್ನು ನಿಷೇಧಿಸಿರುವುದರಿಂದ ಚಿತ್ರತಂಡಕ್ಕೆ ಕೊಂಚ ಮಟ್ಟಿಗೆ ಹಿನ್ನೆಡೆಯಾಗಬಹುದು.

ಇದೆಲ್ಲವನ್ನೂ ಹೊರತುಪಡಿಸಿ ದೇಶದಾದ್ಯಂತ 'ಕೆಜಿಎಫ್-2' ಮತ್ತು 'ಬೀಸ್ಟ್' ಎರಡೂ ಚಿತ್ರಗಳು ಸರಿಸಾಟಿ ಎಂಬಂತೆ ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. ಪರದೆ ಹಂಚಿಕೆಯಲ್ಲೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಹೀಗಾಗಿ ಈ ಬಹು ನಿರೀಕ್ಷಿತ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಪೈಪೋಟಿಗೆ ಬೀಳುವುದು ಖಚಿತ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಜಿಎಫ್-2 ನಾಯಕ ಯಶ್, “ನಮ್ಮಿಬ್ಬರ ಚಿತ್ರಗಳ ನಡುವೆ ಯಾವುದೇ ಘರ್ಷಣೆ ಆಗುವುದಿಲ್ಲ. ಹೆಚ್ಚು ಮತ ಪಡೆದು ಗೆಲ್ಲುವುದಕ್ಕೆ ಇದು ರಾಜಕೀಯವೂ ಅಲ್ಲ. ಜನರು ಇಬ್ಬರ ಚಿತ್ರವನ್ನು ನೋಡಬಹುದು” ಎಂದಿದ್ದಾರೆ. ಆದರೆ, ಪ್ರೇಕ್ಷಕರು ಇಬ್ಬರಲ್ಲಿ ಯಾರ ಚಿತ್ರವನ್ನು ಮೆಚ್ಚಿಕೊಳ್ಳಲಿದ್ದಾರೆ ಎಂಬುದು ಬಿಡುಗಡೆಯ ನಂತರವೇ ತಿಳಿಯಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್